“ಆಕಾಶವೇನೊ ಬಲು ವಿಸ್ತಾರವಾದುದು. ಆದರೆ, ಅದನ್ನು ನೋಡುವ ನಮ್ಮ ಬಾಹ್ಯಚಕ್ಷು ಕಿರಿದಲ್ಲವೆ? ಆದರೆ, ಇದರಿಂದ ನೋಡುವ ಕಣ್ಣಿಗೆ ಬಾಧೆ ಏನೂ ಇಲ್ಲ,” ಎನ್ನುತ್ತಾರೆ ಶ್ರೀಮಲ್ಲೇಪುರಂ ಜಿ. ವೆಂಕಟೇಶ ಅವರು ಜಗದೀಶಶರ್ಮಾ ಸಂಪ ಅವರ “ಭಗವತ್ಪಾದ ಶ್ರೀ ಶಂಕರಾಚಾರ್ಯರು” ಕೃತಿ ಕುರಿತು ಬರೆದ ಮುನ್ನುಡಿ.
ವಿದ್ವಾನ್ ಶ್ರೀ ಜಗದೀಶಶರ್ಮಾ ಅವರು ಆಚಾರ್ಯ ಶಂಕರರನ್ನು ಕುರಿತು ಕಿರುಕೃತಿಯೊಂದನ್ನು ಬರೆದು ಲೋಕಕ್ಕೆ ಅರ್ಪಿಸುತ್ತಿದ್ದಾರೆ. ಶ್ರೀ ಶಂಕರರ ಬಗೆಗೆ ಕನ್ನಡದಲ್ಲಿ ಹಲವಾರು ಉದ್ಗ್ರಂಥಗಳು ಪ್ರಕಟವಾಗಿವೆ. ಅದ್ವೈತ ವೇದಾಂತಕ್ಕೆ ಸಂಬಂಧಿಸಿದಂತೆ ನೂರಾರು ಕೃತಿಗಳಿವೆ. ಆಚಾರ್ಯರ ಭಾಷ್ಯತ್ರಯಗಳು ಅನುವಾದ ರೂಪವಾಗಿ ಕನ್ನಡದಲ್ಲಿ ಬಂದಿವೆ. ಅವರದೆಂದು ಹೇಳುವ ಸ್ತೋತ್ರಗ್ರಂಥಗಳೆಲ್ಲಾ ಕನ್ನಡದಲ್ಲಿ ಪ್ರಕಟಗೊಂಡಿವೆ. ಶಂಕರರ ಜೀವನವನ್ನು ಕಥಿಸುವ `ಶಂಕರ ದಿಗ್ವಿಜಯ' ಪ್ರೊ. ಎನ್. ರಂಗನಾಥಶರ್ಮಾ ಅವರಿಂದ ಸೊಗಸಾಗಿ ಪ್ರಕಟವಾಗಿದೆ. ಇದಿಷ್ಟು ಶಾಂಕರ ಗ್ರಂಥದ ಪೂರ್ವೇತಿಹಾಸ.
ವಿದ್ವಾನ್ ಜಗದೀಶಶರ್ಮಾ ಅವರ `ಭಗವತ್ಪಾದ ಶ್ರೀ ಶಂಕರಾಚಾರ್ಯರು' ಕಿರುಕೃತಿ ನಿಮ್ಮ ಮುಂದಿದೆ. ಇದು ಸಿಂಧುವನ್ನು ಬಿಂದುವಾಗಿಸುವ ಕ್ರಮ. ಆಕಾಶವೇನೊ ಬಲು ವಿಸ್ತಾರವಾದುದು. ಆದರೆ, ಅದನ್ನು ನೋಡುವ ನಮ್ಮ ಬಾಹ್ಯಚಕ್ಷು ಕಿರಿದಲ್ಲವೆ? ಆದರೆ, ಇದರಿಂದ ನೋಡುವ ಕಣ್ಣಿಗೆ ಬಾಧೆ ಏನೂ ಇಲ್ಲ. ಶ್ರೀ ಜಗದೀಶಶರ್ಮಾರ ಬರೆಹಕ್ಕೆ ಕಣ್ಣಿನ ಕಿರು ಆಕೃತಿಯೂ ಉಂಟು; ಆಕಾಶದಷ್ಟು ವಿಸ್ತಾರತೆಯೂ ಉಂಟು. ನನಗೆ ಸೋಜಿಗಗೊಳಿಸಿದ್ದು ಅವರ ಬರೆಹದಲ್ಲಿ ಅಡಗಿರುವ ವಿಸ್ತರದ ಕ್ರಮಕ್ಕೆ. ಒಂದು ಪುಟದಲ್ಲಿ ವಿಸ್ತರಿಸಬಹುದಾದುದನ್ನು ಒಂದು ವಾಕ್ಯಬೃಂದದಲ್ಲೇ ಪಡಿನುಡಿಸಬಲ್ಲರು. ಶ್ರೀ ಶಂಕರರ ತಂದೆ-ತಾಯಿ, ಬಾಲ್ಯ, ವಿದ್ಯಾಭ್ಯಾಸ, ಯತಿಸ್ಥಾನ, ಗ್ರಂಥರಚನೆ, ಅನೇಕ ಶಾಸ್ತ್ರಜ್ಞರ ಜೊತೆ ವಾದ, ಶ್ರೀಕ್ಷೇತ್ರಗಳ ಸ್ಥಾಪನೆ, ತಿರೋಧಾನ-ಇದಿಷ್ಟು ವಿಷಯಗಳನ್ನು ಬಾಲಶಂಕರ, ಯತಿಶಂಕರ, ಗುರುಶಂಕರ ಎಂಬ ಶೀರ್ಷಿಕೆಯಲ್ಲಿ ಅಡಕಗೊಳಿಸಿ ನಮಗೆ ಉಣಬಡಿಸಿದ್ದಾರೆ!
ಶ್ರೀ ಶಂಕರರ ಬಗೆಗೆ ಹಲವು ವಾದಗ್ರಸ್ತ ವಿಷಯಗಳಿವೆ. ಅವರ ಜೀವನ ರೇಖೆಯನ್ನು `ಇದಮಿತ್ಥಂ' ಎಂದು ಹೇಳುವ ಯಾವ ಐತಿಹಾಸಿಕ ವಿವರಗಳಿಲ್ಲ. ಇನ್ನು ಅವರ ಕಾಲದಲ್ಲಿ ಹೀಗೇ ನಡೆಯಿತೆಂಬ ಅನ್ಯಾನ್ಯ ವಿವರಗಳೂ ನಮಗೆ ದೊರಕಿಲ್ಲ. ಅವರನ್ನು ಕುರಿತ ಪ್ರಾಚೀನ ಶ್ಲೋಕವೊಂದು ಮಾತ್ರ ಈವರೆಗೂ ಹೇಗೊ ಉಳಿದುಕೊಂಡು ಬಂದಿದೆ. ಭಗವತ್ಪಾದರು ಬದುಕಿದ್ದು ಮೂವತ್ತೆರಡು ವರ್ಷ ಮಾತ್ರ! ಕಾಲಗತಿ ಕಡಿಮೆ. ಆದರೆ, ಚಕ್ಷುರ್ಗತಿ ಅಖಂಡವಾದುದು. ಜಗದೀಶರು ಶ್ರೀ ಮಾಧವಾಚಾರ್ಯ ಕೃತ `ಶಂಕರ ದಿಗ್ವಿಜಯ' ಮತ್ತು ಚಿದ್ವಿಲಾಸ ಯತೀಂದ್ರರ `ಶಂಕರ ವಿಜಯ' ಇವೆರಡನ್ನು ಅವಲಂಬಿಸಿ ಈ ಕಿರುಕೃತಿಯನ್ನು ರಚಿಸಿದ್ದಾರೆ. ಶ್ರೀ ದೇವುಡು ಅವರು ಎಂಬತ್ತು ವರ್ಷಗಳ ಹಿಂದೆ `ಶಂಕರವಿಜಯ' ಎಂಬ ಕಿರುಕೃತಿಯೊಂದನ್ನು ರಚಿಸಿದ್ದರು. ಅದೂ ಕೂಡ ಮಾಧವಾಚಾರ್ಯ ಮತ್ತು ಚಿದ್ವಿಲಾಸ ಯತೀಂದ್ರರ ಕೃತಿಗಳನ್ನು ಅವಲಂಬಿಸಿಯೇ ಬರೆದದ್ದು. ಕನ್ನಡದಲ್ಲಿ ಶ್ರೀ ಶಂಕರರ ಬಗೆಗೆ ಹತ್ತಾರು ಕೃತಿಗಳು ಬಂದಿದ್ದರೂ ಶ್ರೀ ದೇವುಡು ಅವರು ಬರೆದಿರುವ ಶ್ರೀ ಶಂಕರ ವಿಜಯ, ಶ್ರೀ ಶಂಕರ ವೇದಾಂತ, ಶ್ರೀ ಶಂಕರ ಸಿದ್ಧಾಂತಗಳೆಂಬ ಮೂರು ಕಿರುಕೃತಿಗಳು, ಆಚಾರ್ಯ ಶಂಕರ ಭಗವತ್ಪಾದರ ಸಾಮಯಿಕ ಚಿತ್ರಣವನ್ನು ನಮಗೆ ನಿಚ್ಚಳವಾಗಿ ನೀಡುತ್ತವೆ!
ಶ್ರೀ ಜಗದೀಶಶರ್ಮಾ ಅವರು, ಶ್ರೀ ದೇವುಡು ಅವರು ನಡೆದಿರುವ ಹಾದಿಯಲ್ಲಿಯೇ ನಡೆದಿದ್ದಾರೆ. ಅವರು ಇಟ್ಟ ಹೆಜ್ಜೆಯಲ್ಲಿ ಇವರೂ ಹೆಜ್ಜೆಯನ್ನು ಇಟ್ಟಿದ್ದಾರೆ. ಶ್ರೀ ಶಂಕರರ ಜೀವನವನ್ನು ಕೃತಿಯೊಳಗಿಂದಲೇ ನೋಡಿದ್ದಾರೆ. ಹಾಗೆ ನೋಡದಿದ್ದರೆ ಭಗವತ್ಪಾದರು ನಮಗೆ ಕಾಣುವುದಾದರೂ ಹೇಗೆ? ಒಳಗಣ್ಣು ತೆರೆದುಕೊಳ್ಳದಿದ್ದರೆ, ಹೊರಗಣ್ಣು ಎಷ್ಟು ನೋಡಬಲ್ಲುದು? ಹೀಗಾಗಿ, ಜಗದೀಶರ ಒಳಗಣ್ಣಿನಲ್ಲಿ ಆಚಾರ್ಯ ಶಂಕರ ಭಗವತ್ಪಾದರು ಕಾಣಿಸಿಕೊಂಡಿದ್ದಾರೆ. ಕೇರಳದ ಕಾಲಟಿಯಿಂದ ಉತ್ತರದ ಬದರಿಯ ವರೆಗೂ ಅವರು ಸಂಚರಿಸಿದರಷ್ಟೆ. ಅದು ಯೌಗಿಕ ನಡೆ. ಇಂಥ ಸಂಗತಿ ಮಾನುಷ ಬುದ್ಧಿಗೆ ಕಾಣಿಸದು. ಮಂತ್ರಶಾಸ್ತ್ರ ಮತ್ತು ತಂತ್ರಶಾಸ್ತ್ರ ಬಲ್ಲವರು ಇದನ್ನು ತಿಳಿಯಬಲ್ಲರು. ಭಗವತ್ಪಾದರ ಜೀವನರೇಖೆ ಏನುಂಟೋ ಅದು ರಸರೇಖೆಯೇ ಹೌದು. ಜಗದೀಶರು, ಶಂಕರರ ಒಂದೊಂದು ಬದುಕಿನ ಹೆಜ್ಜೆಯನ್ನು ನಮ್ಮ ಮುಂದೆ ಕಂಡರಿಸಿ ನಿಲ್ಲಿಸಿಬಿಟ್ಟಿದ್ದಾರೆ! ಶಂಕರರ ಭೂಮವ್ಯಕ್ತಿತ್ವವನ್ನು ಚಿತ್ರಿಸುವಾಗ ಭಾಷೆಯೂ ಎತ್ತರದ ಸ್ತರದಲ್ಲಿಯೇ ಇರಬೇಕಷ್ಟೆ. ಅದು ಶರ್ಮಾರಲ್ಲಿ ಅಶ್ರಮವಾಗಿ ಸಾಧಿತವಾಗಿಬಿಟ್ಟಿದೆ!
ಬಾಲ್ಯದ ಶಂಕರರ ಬಗೆಗಿನ ಬರೆಹವು ಮುಂದೆ `ಯತಿಶಂಕರ'ರಲ್ಲಿ ಮುಂದುವರೆಯುತ್ತದೆ. ಆಮೇಲೆ `ಗುರುಶಂಕರ'ದಲ್ಲಿ ವಿರಾಟ್‌ರೂಪವನ್ನು ಪಡೆಯುತ್ತದೆ. ಶರ‍್ಮರ ಭಾಷೆಗೆ ಒಂದು ಬಗೆಯ ಮಾಂತ್ರಿಕತೆ ಉಂಟೆಂದು ಹೇಳಿದೆನಷ್ಟೆ. ಒಂದೊಂದು ಸನ್ನಿವೇಶ ನಿರ‍್ಮಾಣ ಮಾಡುವಾಗೆಲ್ಲಾ ಭಾಷೆಯೆಂಬ ಹೂ ಅರಳುವ ಅನುಭವ ಓದುವಾಗೆಲ್ಲಾ ನಮಗಾಗುತ್ತದೆ. ಶಂಕರರು ಜನಿಸಿದಾಗ ಅವರ ದೇಹದಲ್ಲಿ ಕಾಣಿಸಿಕೊಂಡ `ದೈವಚಿಹ್ನೆ'ಗಳ ವಿವರವನ್ನು ಅವರ ಮಾತಿನಲ್ಲಿಯೇ ನಾವು ಅವಗತ ಮಾಡಿಕೊಳ್ಳಬೇಕು. ಶ್ರೀ ಶಂಕರರು ವೇದವ್ಯಾಸರನ್ನು ಕಂಡದ್ದು, ಮಾತನಾಡಿದ್ದು ಒಂದು ಅವಿಸ್ಮರಣೀಯ ಸನ್ನಿವೇಶವಾಗಿ ನಮಗೆ ಕಾಣುತ್ತದೆ. ಆ ಕಾಲದ ಕಾಪಾಲಿಕ, ಕಾಳಾಮುಖ ಮುಂತಾದ ದುರ್ಮತಗಳನ್ನು ಖಂಡಿಸುವಾಗಲೂ ಜಗದೀಶ ಶರ್ಮರ ಭಾಷೆ ಕಾಠಿಣ್ಯವಾಗುವುದಿಲ್ಲ. ನಿರ‍್ಮಲ ಜಲದಂತೆ, ಸ್ಫಟಿಕನಿರ‍್ಮಲದಂತೆ ಭಾಷೆ ನಮ್ಮ ಮುಂದೆ ನಲಿದಾಡುತ್ತದೆ! ವಿದ್ವಾನ್ ಜಗದೀಶ ಶರ್ಮಾ ಅವರ ಈ ಕಿರುಕೃತಿಯು ಬೆಟ್ಟವನ್ನು ಕನ್ನಡಿಯಲ್ಲಿ ತೋರಿಸಿದಂತಿದೆ.
ಶ್ರೀ ಶಂಕರರನ್ನು ತೋರಿಸಿರುವುದು ಕನ್ನಡಿಯಲ್ಲಿ ಕಾಣುವ ಬೆಟ್ಟವನ್ನು ಮಾತ್ರ. ಇದು ಬೆಟ್ಟವಲ್ಲ; ಬೆಟ್ಟದಂತೆ ಕಾಣುವ ಛಾಯಾಚಿತ್ರ ಮಾತ್ರ. ಆದರೂ ಮಕ್ಕಳನ್ನು ಫೋಟೋದಲ್ಲಿ ಕಂಡರೆ ವಾತ್ಸಲ್ಯವು ಉಕ್ಕೇರುತ್ತದೆಯಷ್ಟೆ. ಈ ಕೃತಿಯನ್ನು ಓದಿದವರಿಗೆ ಶ್ರೀ ಶಂಕರರ ಭಗವತ್ಪಾದರ ವಿಷಯದಲ್ಲಿ ಪ್ರೇಮವು ಹೆಚ್ಚಾಗುತ್ತದೆ. ಆ ಪ್ರೇಮವು ಅಂಥವರನ್ನು ವೇದಾಂತದ ಕಡೆಗೆ ದೂಡುತ್ತದೆ. ಶ್ರೀ ಶಂಕರರ ತತ್ತ್ವವು ಅರ್ಥವಾದವರಿಗೆಲ್ಲಾ `ಹಾಹಾ' ಎಂದು ಒದ್ದಾಡುತ್ತಿರುವವರಿಗೆಲ್ಲಾ ಅನರ್ಥ ತಪ್ಪುತ್ತದೆ; ಅವರ ಕಣ್ಣು ತೆರೆಯುತ್ತದೆ. ಅಂಥವರು ಜಗತ್ತಿನ ಉತ್ತಮ ನಾಗರಿಕರಾಗಿ, ಜಗತ್ತೆಲ್ಲಾ ಒಂದೇ ಎಂಬ ಭಾವನೆ ಬಲಿಯಲು ಸಾಧ್ಯವಾಗುತ್ತದೆ. ಈ ಲೋಕವನ್ನೆಲ್ಲಾ ತುಂಬಿರುವ `ನಾನು' ಎಂಬುದು ಮನಸ್ಸಿಗೆ ಅರಿವಾಗಿ ಮನಸಾರೆ ನಕ್ಕು ಹೊಸ ಬಾಳನ್ನು ಆರಂಭಿಸಲು ಸ್ಫೂರ್ತಿ ಈ ಬಗೆಯ ಕೃತಿಯಿಂದ ದೊರಕುತ್ತದೆ. ಇಂಥ ನಗುವಿನಿಂದ ಕೂಡಿದ ಹೊಸ ಬಾಳಿನಲ್ಲಿ ಜಗತ್ತಿನ ಉದ್ಧಾರದ ಮಾರ್ಗವಿದೆಯೆಂಬ ಅರಿವು ನಮಗೆ ಉಂಟಾಗುತ್ತದೆ. ಆ ಮಾರ್ಗವನ್ನು ಕಾಣಲು ಈ ಸಣ್ಣ ಪುಸ್ತಕ ಸಹಾಯವಾಗುವುದೆಂಬ ನಂಬುಗೆ ನನ್ನದು. ಭೋಗದ ಕಡೆ ತುಡಿಯುತ್ತಿರುವ ಮನಸ್ಸನ್ನು ಅಧ್ಯಾತ್ಮದ ಕಡೆಗೂ ಪ್ರಸನ್ನಜೀವನದ ಕಡೆಗೂ ತಿರುಗಲು ಈ ಕಿರುಕೃತಿ ಉದ್ದೀಪಿಸುತ್ತದೆಂಬ ನಂಬುಗೆ ನನ್ನದು. ಅದಕ್ಕಾಗಿ ಶರ್ಮರು ಅಭಿನಂದನೀಯರು.
ಶರ್ಮಾರ ಭಾಷೆ ಎಂತಹ ವಿವರಗಳನ್ನಾದರೂ ನಮ್ಮ ಒಳಗಣ್ಣಿಗೆ ಕಾಣಿಸಬಲ್ಲದು. ಅವರ ಪುಟ್ಟಪುಟ್ಟ ಕನ್ನಡ ವಾಕ್ಯಗಳಲ್ಲಿ ಅಮಿತವಾದ ಅರ್ಥಶಕ್ತಿ ಉಂಟು. ಈ ಕಿರುಕೃತಿಯಲ್ಲಿ ಮನಸ್ಸಿಗೆ ಥಟ್ಟನೆ ಹೊಳೆಯಿಸುವ ಸೂಕ್ಷ್ಮ ತತ್ತ್ವಗಳು ಅಲ್ಲಲ್ಲಿ ಮಿಂಚಿನಂತೆ ಬಂದು ಹೋಗುತ್ತವೆ. ಶ್ರೀ ಭಗವತ್ಪಾದರ ಜೀವನ ಮತ್ತು ತತ್ತ್ವದ ನಡೆ ನಮ್ಮ ಮನಸ್ಸನ್ನು ಆರ್ದ್ರಗೊಳಿಸುತ್ತದೆ! ಇದುವರೆಗೂ ಪ್ರಕಟವಾಗಿರುವ ಶ್ರೀ ಶಂಕರರ `ಜೀವನಕಥನ' ಕುರಿತ ಕಿರುಕೃತಿಗಳಲ್ಲಿ ಇದು ಮೇಲ್ಮಟ್ಟದ್ದು; ಮಾನ್ಯವಾದುದು. ನಮ್ಮ ವಿದ್ವಾನ್ ಜಗದೀಶಶರ್ಮ ಅವರು ಶ್ರೀ ಶಂಕರಾಚಾರ್ಯರನ್ನು ಕುರಿತು ಒಂದು ಅಮೋಘ ಕಾದಂಬರಿಯನ್ನು ಏಕೆ ಬರೆಯಬಾರದು? ಇಲ್ಲಿ ಕಾದಂಬರಿ ಬರೆಯುವುದಕ್ಕೆ ಬೇಕಾದ ಸಮಸ್ತ ಕಥನಾತ್ಮಕ ರೇಖೆಗಳಿವೆ! ಅಂಥದೊಂದು ಮಹತ್ಕೃತಿ ರಚನೆಗೆ ಈ ಕಿರುಕೃತಿ ನಾದಿಯಾಗಲೆಂದು ನಾನು ಆಶಿಸುವೆ! `ಭೂಮಾ ವೈ ತತ್ಸುಖಂ ನಾಲ್ಪೇ ಸುಖಮಸ್ತಿ' ಎಂದಲ್ಲವೆ ಉಪನಿಷತ್ತು ಹೇಳಿರುವುದು. ಓಂ ತತ್ಸತ್.
- ಶ್ರೀಮಲ್ಲೇಪುರಂ ಜಿ. ವೆಂಕಟೇಶ
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.