‘ಬೆಳ್ಳಿ ಮೂಡಿತು’ ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ


"ಬೆಳ್ಳಿ ಮೂಡಿತು" ಇದು ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ. ನಾಗರಿಕತೆಯ ಜಂಜಡಕ್ಕೆ ಒಳಗಾಗದೆ, ತುಂಬು ಜೀವನ ಸಾಗಿಸಿದ ಕೊಡಗಿನ ನೆಲದ ಮಕ್ಕಳ ಕುಟುಂಬ ಜೀವನ ಇಲ್ಲಿ ಚಿತ್ರಿತವಾಗಿದೆ" ಎನ್ನುತ್ತಾರೆ ಕಾರ್ತಿಕೇಯ ಭಟ್‌. ಅವರು ಲೇಖಕ ಭಾರತೀಸುತ ಅವರ ‘ಬೆಳ್ಳಿ ಮೂಡಿತು’ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

'ಬೆಳ್ಳಿ ಮೂಡಿತು' ಇದು ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ. ನಾಗರಿಕತೆಯ ಜಂಜಡಕ್ಕೆ ಒಳಗಾಗದೆ, ತುಂಬು ಜೀವನ ಸಾಗಿಸಿದ ಕೊಡಗಿನ ನೆಲದ ಮಕ್ಕಳ ಕುಟುಂಬ ಜೀವನ ಇಲ್ಲಿ ಚಿತ್ರಿತವಾಗಿದೆ. ಇಲ್ಲಿ ಬರುವ ಕೈಲ್ ಮೂಹೂರ್ತದಂದು ಕೋಲುಮಂದುವಿನಲ್ಲಿ ನಡೆಯುವ ಜಾತ್ರೆಯ ವರ್ಣನೆ, ತಿಮ್ಮುಡುವಿನ ಹುಲಿಬೇಟಿ, ಇನ್ನು ಕೆಲವು ಪ್ರಸಂಗಗಳನ್ನು ಭಾರತೀಸುತರವರು ಸೊಗಸಾಗಿ ವರ್ಣಿಸಿದ್ದಾರೆ.

ಪೊನ್ನಿಯ ತವರ್ಮನೆ ಕಗ್ಗೋಡು ಗ್ರಾಮದಲ್ಲಿತ್ತು, ಆಕೆಗೆ ಇಬ್ಬರು ಅಣ್ಣಂದಿರು, ತಂದೆ ಚಂಗಪ್ಪನಿಗೆ ಪೊನ್ನಿಯಂದರೆ ತುಂಬಾ ಪ್ರೀತಿ, ಓದು ಬರಹ ಕಲಿತು ಜಾಣೆಯಾಗಬೇಕೆಂಬುದು ಚಂಗಪ್ಪನ ಆಸೆ, ಆ ಆಸೆಯಂತೆಯೆ ಪೊನ್ನಿಯೂ ಚೆನ್ನಾಗಿ ಓದುತ್ತಿದ್ದಳು. ಇದರಿಂದ ಅಣ್ಣಂದರಿಗೆ ಆಕೆಯನ್ನು ಕಂಡರೆ ಅಸೂಯೆಯಾಗುತ್ತಿತ್ತು. ತಂದೆ ಮಡಿದುದೇ ತಡ ಮನೆಯ ಆಡಳಿತ ಕರಿಯಪ್ಪನ ಕೈ ಸೇರಿತು, ಕರಿಯಪ್ಪನ ಪತ್ನಿ ಬೊಳ್ಳವ್ವ ಮನೆಯ ಯಜಮಾನಿಯಾದಳು, ಇದರಿಂದ ಪೊನ್ನಿಯ ಓದೂ ನಿಂತಿತು. ಬೊಳ್ಳವ್ವನಿಗೆ ಪೊನ್ನಿಯನ್ನು ಕಂಡರೆ ಆಗುತ್ತಿರಲಿಲ್ಲ. ಕೂಸನ್ನು ತೊಟ್ಟಿಲಲ್ಲಿ ಹಾಕುವುದು, ಮುಸುರೆ ಪಾತ್ರೆಗಳನ್ನು ತಿಕ್ಕುವುದು, ಹಂದಿಗಳಿಗೆ ತೆಳಿ ಅಕ್ಕಚ್ಚುಗಳನ್ನು ಸುರಿಯುವುದು, ದನಕರುಗಳನ್ನು ಮೇಯಲು ಅಟ್ಟುವುದು, ಗದ್ದೆಯಲ್ಲಿ ಉಳುತ್ತಿರುವ ಅಣ್ಣನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುವುದು ಇನ್ನೂ ಹಲವಾರು ಕೆಲಸಗಳನ್ನು ಬೊಳ್ಳವ್ವ ಆಜ್ಞಾಪಿಸುತ್ತಿದ್ದಳು. ಆಕೆಯ ಚುಚ್ಚು ನುಡಿಗಳನ್ನು ಸಹಿಸಿಕೊಂಡು ಹೇಗೋ ಜೀವನವನ್ನು ಸಾಗಿಸುತ್ತಿದ್ದಳು.

ಇದೇ ಸಮಯದಲ್ಲಿ ಕೋಲುಮಂದುವನ್ನು ನೋಡಲು ಪೊನ್ನಿ ಹೋದಾಗ, ಗಂಡಸರು ಕೋವಿಗಳನ್ನು ಹೆಗಲಮೇಲಿರಿಸಿಕೊಂಡು ಈಡು ಹೊಡೆಯುತ್ತಿರುವುದನ್ನು ನೋಡುತ್ತಿದ್ದಳು, ಅದರಲ್ಲಿ ತಿಮ್ಮುಡು ಗುರಿಯಿಟ್ಟು ಹೊಡೆದು ಪಣವನ್ನು ಗೆದ್ದಿದ್ದನು, ಆತನ ಸಾಹಸವನ್ನು ಮನಸ್ಸಿನಲ್ಲಿಯೇ ಪೊನ್ನಿಯು ಮೆಚ್ಚಿಕೊಂಡಳು, ಆತನೇ ತನ್ನ ಗಂಡನಾಗಿ ಬರುವನೆಂದು ಕನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಆತನನ್ನು ಮದುವೆಯಾಗಿ ಬೊಳ್ಳವ್ವನಿಂದ ಹೇಗೋ ಪಾರದಳು ಆದರೆ ಆಕೆಯ ಜೀವನ ಅಲ್ಲೋಲಕಲ್ಲೋಲವಾಯಿತು. ತಿಮ್ಮುಡುವಿಗೆ ಗದ್ದೆಗೆ ಹೋಗಿ ಕೆಲಸ ಮಾಡುವುದಂದರೆ ಸೋಂಬೇರಿತನ, ಜೊತೆಗೆ ಗೆಳೆಯ ಮೇದುವಿನಿಂದ ಕಲಿತ ವಿದ್ಯೆಗಳು ಸಾಕಷ್ಟು, ಕಳ್ಳು ಹೀರುವುದು, ಇತರರ ಗದ್ದೆಯೊಳಗಿ ನುಗ್ಗಿ ಕಳ್ಳನ್ನು ಕದ್ದು ಹೀರಿ ಅವಮಾನಿತನಾಗುವುದು, ಇದು ತಪ್ಪೆಂದು ಪೊನ್ನಿಯು ಹೇಳಿದರೆ ಆಕೆಗೆ ಬಯ್ಯುವುದು, ಹೊಡೆಯುವುದು, ಇದು ಪೊನ್ನಿಗೆ ಅಭ್ಯಾಸವಾಗಿಹೋಯಿತು. ಇಗ್ಗುತ್ತಪ್ಪನ ಮೇಲೆ ಆಣೆ ಹಾಕಿದರೂ ಸಹ ವ್ಯರ್ಥವಾಯಿತು, ಆದರೆ ತಿಮ್ಮುಡುವಿನ ತಮ್ಮ ನಂಜಪ್ಪ ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಕಷ್ಟ ಪಟ್ಟು ದುಡಿಯುತ್ತಿದ್ದ, ಪೊನ್ನಿಗೆ ಏನು ಬೇಕು ಏನು ಬೇಡ ಎಂದು ಗಂಡನಲ್ಲದವನಿಗೆ ಅರ್ಥವಾಗುತ್ತಿರಲಿಲ್ಲ ಆದರೆ ನಂಜಪ್ಪನಿಗೆ ಅರ್ಥವಾಗುತ್ತಿತ್ತು, ಅಣ್ಣ ತಮ್ಮಂದಿರಲ್ಲಿ ಎಷ್ಟು ವ್ಯತ್ಯಾಸ ಎಂಬುದು ಕಂಡುಕೊಂಡಳು. ನಂಜಪ್ಪ ವಿದ್ಯಾವಂತನಾಗಿ ಉದ್ಯೋಗ ಪಡೆದು ಮನೆಗೆ ಹಣವನ್ನು ಕಳುಹಿಸುತ್ತಿದ್ದನು ಆದರೆ ಆ ಹಣವೆಲ್ಲವೂ ಕಳ್ಳಿನ ಪಾಲಾಗುತ್ತಿತ್ತು.

ಹೀಗೆ ತನ್ನನ್ನು ಅರ್ಥ ಮಾಡಿಕೊಳ್ಳದೆ ಬೈಗಳನ್ನು, ಹೊಡೆತಗಳನ್ನು ತಿನ್ನುತ್ತಾ ತಿಮ್ಮುಡುವಿನ ಜೊತೆ ಹಾಗು ಸದಾ ತನ್ನನ್ನು ಅರ್ಥ ಮಾಡಿಕೊಂಡು ತನಗೆ ಸದಾ ನೆರವಾಗುತ್ತಿದ್ದ ನಂಜಪ್ಪನ ಜೊತೆ ಜೀವನವನ್ನು ಸಾಗಿಸುತ್ತಿದ್ದಳು, ಕಾವೇರಿ ಸಂಕ್ರಮಣ ಜಾತ್ರೆಯಲ್ಲಿ ನವದಂಪತಿಗಳು ತೀರ್ಥಸ್ನಾನ ಮಾಡಲು ಹೊರಟಾಗ ತಿಮ್ಮುಡು ಮಡದಿಯನ್ನು ತಲಕಾವೇರಿಗೆ ಕರೆದುಕೊಂಡು ಹೋಗಿ ಮಧ್ಯದಲ್ಲೇ ಬಿಟ್ಟು ಮೇದುವಿನ ಜೊತೆ ಕಳ್ಳು ಹೀರಲು ಹೋದಾಗ ನಂಜಪ್ಪನೆ ನೆರವಾಗಿ ಕಾವೇರಿಯ ದರ್ಶನ ಮಾಡಿಸಿದನು. ದೂಮ ಪೂಜಾರಿಯ ಕಳ್ಳನ್ನು ಕದ್ದು ಸಿಕ್ಕುಬಿದ್ದಾಗ ತಿಮ್ಮುಡುವನ್ನು ಪೊಲೀಸ್ ಬಂಧನದಲ್ಲಿರಿಸಿದಾಗ ನಂಜಪ್ಪನೇ ಊರಿನ ಪ್ರಮುಖರೆಲ್ಲರನ್ನೂ ಒಟ್ಟುಗೂಡಿಸಿ ಪಂಚಾಯಿತಿಯಲ್ಲಿ ಇತ್ಯರ್ಥ ಮಾಡಿಸಿ ತನ್ನ ಅಣ್ಣನನ್ನು ಪಾರು ಮಾಡಿದ್ದನು, ಹುಲಿ ಭೇಟೆಗೆ ಹೋದ ತಿಮ್ಮುಡುವನ್ನು ನಂಜಪ್ಪನು ಕಾಪಾಡಿದ್ದನು, ಹುಲಿ ಹೊಡೆದುದಕ್ಕೆ ಹುಲಿ ಹಬ್ಬ ಆಚರಣೆ ಮಾಡಿ ಹಣವನ್ನು ವ್ಯರ್ಥ ಮಾಡಿದಾಗ ನಂಜಪ್ಪನು ತಿಮ್ಮುಡುವಿಗೆ ಹಿತವಚನ ಹೇಳಿ ಸೋತಿದ್ದನು. ಪೊನ್ನಿಗೆ ಮಗು ಪಡೆಯಬೇಕೆಂಬ ಆಸೆ ಆದರೆ ತಿಮ್ಮುಡುವಿಗೆ ಅವು ಯಾವುದೂ ಅರ್ಥವಾಗುತ್ತಿರಲಿಲ್ಲ, ಆತನು ಪೊನ್ನಿಯ ಯಾವ ಆಸೆ ಆಕಾಂಕ್ಷೆಗಳನ್ನೂ ಈಡೇರಿಸುತ್ತಿರಲಿಲ್ಲ.

ಆದರೆ ದಿನೆ ದಿನೆ ನಂಜಪ್ಪನ ಮೇಲೆ ಪೊನ್ನಿಗೆ ಆಸೆಯಾಗುತ್ತದೆ, ತನ್ನ ತೃಷೆಯನ್ನು ಈಡೇರಿಸುವವನು ಈತನೆ ಎಂದು ಬಯಕೆಪಟ್ಟು ನಂಜಪ್ಪನನ್ನು ವರಿಸಲು ಹೋದಾಗ ನಂಜಪ್ಪನು ತಿರಸ್ಕರಿಸುತ್ತಾನೆ. ಅತ್ತಿಗೆ ಪಡುತ್ತಿರುವ ಬವಣೆಯನ್ನು ಹಾಗು ಅಣ್ಣನು ಆಕೆಯನ್ನು ಸರಿಯಾಗಿ ನೇಡಿಕೊಳ್ಳದೆ ಸದಾ ಹಿಂಸಿಸುತ್ತಿರುವುದನ್ನು ಬಲ್ಲ ನಂಜಪ್ಪ ಆಕೆಯ ತಪ್ಪನ್ನು ಮನ್ನಿಸಿ ಸಮಾಧಾನಗೊಳಿಸುತ್ತಾನೆ. ನಂಜಪ್ಪನ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅತ್ತು ತನ್ನ ದುಃಖವನ್ನೆಲ್ಲಾ ತೋಡಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಇದನ್ನು ಒಂದು ಸ್ವಪ್ನವೆಂದು ತಿಳಿದು ಇಬ್ಬರೂ ಮರೆತು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ.

ಮೇದು ಹಾಗು ತಿಮ್ಮುಡು ಪ್ರತಿಸಲವೂ ದೂಮ ಪೂಜಾರಿಯ ಕಳ್ಳನ್ನು ಕದ್ದು ಹೀರುತ್ತಿದ್ದರು, ಎಷ್ಟು ಎಚ್ಚರಿಸಿದರೂ ಈ ಕಳ್ಳತನ ಮುಂದುವರೆಯುತ್ತಿತ್ತು, ಇವರಿಬ್ಬರ ಮೇಲೆ ಸೇಡನ್ನು ತೀರಿಸಿಕೊಳ್ಳವುದಕ್ಕೆ ಕಗ್ಗೋಡು ಜಾತ್ರೆಯ ಸಮಯದಲ್ಲಿ ದೂಮ ಪೂಜಾರಿಯು ಇವರು ಬಂದೇ ಬರುವರೆಂದು ಅರಿತು ಭಂಗಿ ಸೊಪ್ಪನ್ನು ಕಳ್ಳುಕಟ್ಟುವ ಗಡಿಗೆಗಳಲ್ಲಿ ಹಚ್ಚಿಬಿಟ್ಟ, ಕಗ್ಗೋಡು ಜಾತ್ರೆಗೆ ಹೋದ ತಿಮ್ಮುಡು ಹಾಗು ಮೇದು ಬಗಿನಿ ಮರದಲ್ಲಿದ್ದ ಕಳ್ಳನ್ನು ಕುಡಿದು ಬರಿದಾದ ಗಡಿಗೆಯನ್ನು ಬಗಿನಿ ಗೊನೆಗೇರಿಸಲು ತಿಮ್ಮುಡು ಏಣಿ ಹತ್ತಿದಾಗ ತಲೆ ಸುತ್ತು ಬಂದು ಕೆಳಗುರುಳಿ ನೆತ್ತಿಗೆ ಪೆಟ್ಟಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ, ಮಿತ್ರನಾದ ಮೇದು ಪರಾರಿಯಾಗುತ್ತಾನೆ, ಪತಿಯ ಸಾವನ್ನು ಕಂಡ ಪೊನ್ನಿಯು ಆತನು ಎಂಥವನೆ ಆಗಿದ್ದರೂ ಆತನಿಂದ ಕಷ್ಟಗಳೇ ಅನುಭವಿಸಿದ್ದರೂ ತನ್ನ ತೋಳುಗಳನ್ನು ಚಾಚಿ ಪತಿಯ ಮೈಯನ್ನು ಅಪ್ಪಿಕೊಂಡು ದುಃಖಪಡುತ್ತಾಳೆ. ಹೀಗೆ ಪೊನ್ನಿಯ ಜೀವನವನ್ನು ನೆನೆದರೆ ದುಃಖವಾಗುತ್ತದೆ, ಪೊನ್ನಿಯ ಹಾಗೆ ಹಲವರ ಜೀವನವೂ ಹೀಗೆಯೇ. ಪೊನ್ನಿಯ ಆಸೆ ಆಕಾಂಕ್ಷೆಗಳೇನು, ಮದುವೆಯಾಗಿ ಆಕೆಯು ಸುಖಾವಾಗಿದ್ದಾಳೋ ಇಲ್ಲವೋ ಎಂಬುದು ತಿಮ್ಮುಡುವಿಗೆ ಅರ್ಥವಾಗುತ್ತಿರಲಿಲ್ಲ, ಮೇದುವಿನ ಸಹವಾಸ ಒಳ್ಳೆಯದಲ್ಲಾ ಎಂದು ಪೊನ್ನಿ ಎಷ್ಟು ಸಲ ಹೇಳಿದರೂ ತಿಮ್ಮಡು ಲೆಕ್ಕಿಸುತ್ತಿರಲಿಲ್ಲ. ಹೀಗೆ ಎಲ್ಲವನ್ನೂ ತಿರಸ್ಕರಿಸಿ, ಹೆಣ್ಣಾದ ಪೊನ್ನಿಯ ಮಾತನ್ನು ಲೆಕ್ಕಿಸದ ತಿಮ್ಮುಡುವು ಕಡೆಗೆ ಸಾವಿಗೀಡಾದುದಲ್ಲದೆ ಪೊನ್ನಿಯ ಜೀವನವನ್ನೂ ಹಾಳುಮಾಡುತ್ತಾನೆ. ನಂತರ ಸಂಸಾರದ ಹೊರೆಯನ್ನು ನಂಜಪ್ಪನೆ ಹೊತ್ತು ಪೊನ್ನಿಗೆ ನೆರವಾಗುತ್ತಾನೆ, 2ವರ್ಷಗಳ ಹಿಂದೆ ಕಾರಿರುಳು ಮುಸುಕಿದ್ದಾಗ ಆಕೆಯ ಬಾಳ್ವೆಯ ಬಾಂದಳದಲ್ಲಿ ಬೆಳ್ಳಿ ಮೂಡಿ ಬಂದಿತು, ಅಂದು ಮೂಡಿ ಬಂದ ಬೆಳ್ಳಿ ಅಸ್ತಮಿಸಲಿಲ್ಲ.

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ

06-10-2024 ಬೆಂಗಳೂರು

"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದ...

ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌

06-10-2024 ಬೆಂಗಳೂರು

"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ...