ಭಾವನೆ ಅಭಿವ್ಯಕ್ತಿಸುತ್ತಾ ಓದುಗ ಕೂಡ ವಿಮರ್ಶಕನಾಗುವ ಕೃತಿ : ಗೀತಾ


" ಕನ್ನಡ ಭಾಷೆ, ಕನ್ನಡ ನುಡಿಗಟ್ಟುಗಳು, ಕನ್ನಡ ಪುಸ್ತಕಗಳು ಇವುಗಳ ಬಗ್ಗೆ ಲೇಖಕ ತನ್ನ ಭಾವನೆ ಅಭಿವ್ಯಕ್ತಿಸುತ್ತಾ ಹೋದಂತೆ ಓದುಗನಲ್ಲಿಯೂ ವಿಮರ್ಶಾತ್ಮಕತೆ ಗುಣ ಹುಟ್ಟುಹಾಕುತ್ತದೆ" ಎನ್ನುತ್ತಾರೆ ಗೀತಾ. ಅವರು ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ' ತಂದೆ ತಾಯಿ ದೇವರಲ್ಲ' ಎಂಬ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ತಂದೆ ತಾಯಿ ದೇವರಲ್ಲ ! ಪೂಜಿಸಬೇಡಿ, ಪ್ರೀತಿಸಿ '. ಒಂದು ಬಗೆ ಕುತೂಹಲ ಕೆರಳಿತು. ಈವರೆಗೂ ತಂದೆ ತಾಯಿಯನ್ನು ಪೂಜಿಸಬೇಡಿ ಎಂದು ಯಾರೂ ಹೇಳಿದ್ದನ್ನು ಕಾಣೆ. ಓದುವ ಕುತೂಹಲದಿಂದ ಲೇಖಕ ಯಾರೆಂಬುದನ್ನು ಗಮನಿಸದೆ ಕೊಂಡು ತಂದೆ.

ಮುನ್ನುಡಿ ಓದದೇ ನಾನೆಂದೂ ಪುಸ್ತಕ ಓದಿದವಳಲ್ಲ. ಈ ಪುಸ್ತಕದ ಮುನ್ನುಡಿಯೇ ಲೇಖಕನನ್ನು ಪರಿಚಯಿಸಿತು. ' ಜೋಗಿ ' ಅವರ ಪುಸ್ತಕಕ್ಕೆ ಅವರೇ ಬರೆದ ಮುನ್ನುಡಿ. ಮುನ್ನುಡಿಯೇ ಒಂದು ಬಗೆ ಆಕರ್ಷಕ ಎಂದರೆ ಹೆಚ್ಚಲ್ಲ. ಕಾರಣ ಕನ್ನಡ ಭಾಷೆ, ಕನ್ನಡ ನುಡಿಗಟ್ಟುಗಳು, ಕನ್ನಡ ಪುಸ್ತಕಗಳು ಇವುಗಳ ಬಗ್ಗೆ ಲೇಖಕ ತನ್ನ ಭಾವನೆ ಅಭಿವ್ಯಕ್ತಿಸುತ್ತಾ ಹೋದಂತೆ ಓದುಗನಲ್ಲಿಯೂ ವಿಮರ್ಶಾತ್ಮಕತೆ ಗುಣ ಹುಟ್ಟುಹಾಕುತ್ತದೆ. ಮುನ್ನುಡಿಯೇ ಹೀಗಿರಲು ಇನ್ನು ಒಳಗಿನ ತಿರುಳು ಎಷ್ಟು ರಸಾತ್ಮಕ ಇರಬಹುದೆನಿಸಿತು.

ಜೋಗಿಯವರು ನನಗೆ ಹೊಸ ಲೇಖಕ. ಹೆಸರು ಒಂದೆರಡು ಬಾರಿ ಕಿವಿಗೆ ಬಿದ್ದಿದ್ದರೂ ಅವರ ಬಗ್ಗೆ ಏನೂ ತಿಳಿಯದು. ಹೀಗಾಗಿ ಅವರ ಈ ಪುಸ್ತಕ ಪರಿಚಯಿಸುವಾಗ ಲೇಖಕರನ್ನು ನಾನು ಪರಿಚಯಿಸಲಾರೆ. ವ್ಯಕ್ತಿ ಜೋಗಿಗಿಂತ, ಲೇಖಕ ಜೋಗಿಯನ್ನು ಅವರ ಕೃತಿಯ ಮೂಲಕ ಪರಿಚಯಿಸುವ ಆಸೆ ಹುಟ್ಟಿತು.

'ತಂದೆ ತಾಯಿ ದೇವರಲ್ಲ ! ' ಒಂದು ವಿಚಾರಾತ್ಮಕ ಲೇಖನ. ಕಥೆಯಿರುವ ಕಾದಂಬರಿಯಷ್ಟೇ ಲೀಲಾಜಾಲವಾಗಿ ಓದಿಸಿಕೊಂಡು ಹೋಗಬಲ್ಲದು. ಸುಮಾರು 180 ಪುಟಗಳಲ್ಲಿ ಹರಿಯುವ ಜೋಗಿಯವರ ವಿಚಾರಧಾರೆ ಎಲ್ಲರನ್ನೂ ತನ್ನಲ್ಲೇ ಮುಳುಗಿಸಬಲ್ಲದು. ತಂದೆ ತಾಯಿಯರ ಗುಣಾವಗುಣಗಳನ್ನು ವಿಮರ್ಶಿಸಿ ಕೊನೆಗೆ ಇವರೂ ನಮ್ಮಂತೆ ಮನುಷ್ಯರು, ಅವರನ್ನು ದೇವರ ಮಟ್ಟಕ್ಕೆ ಕೊಂಡೊಯ್ದು ಪೂಜಿಸದೆ ಪ್ರೀತಿಯಿಂದ ಸಲಹ ಬೇಕೆಂಬುದು ಓದುಗರಿಗೆ ಕೊಡುವ ಸಲಹೆ.

ಮೊದಲನೇ ಲೇಖನವೇ, ಭಗವಂತನ ಅನೇಕ ವಿಗ್ರಹಗಳನ್ನು ಸುಂದರವಾಗಿ ಕೆತ್ತಿದ್ದರೂ ತನ್ನ ತಂದೆ - ತಾಯಿಯರ ಮೂರ್ತಿ ನಿರ್ಮಿಸಿದಾಗ ಅದರಲ್ಲಿ ಏನೋ ಅಭಾವತೆ ಕಂಡು ಅತೃಪ್ತನಾದ ವಿದ್ಯಾಧರ ಎಂಬ ಶಿಲ್ಪಿಯ ಪ್ರಸಂಗ. ಅಚ್ಚರಿಯೆಂದರೆ ಈ ಪ್ರಸಂಗದ ಪ್ರಸ್ತಾಪ ಮತ್ತೆ ಅಂತ್ಯದಲ್ಲಿ ಮಾಡಿ ತನ್ನ ಕೊರತೆಗೆ ವಿದ್ಯಾಧರ ಉತ್ತರ ಕಂಡುಕೊಳ್ಳುವಿಕೆಯಲ್ಲಿ ಪುಸ್ತಕ ಕೊನೆಗೊಳ್ಳುತ್ತದೆ. ಈ ಆರಂಭ ಮತ್ತು ಅಂತ್ಯದ ಲೇಖನಗಳ ನಡುವೆ ನಡೆಯುವುದೇ ಇತರ ವಿಚಾರ ವಿಮರ್ಶೆಗಳು.

ನಂತರ ಅವರು ವಿಮರ್ಶಿಸುತ್ತಾ ಹೋಗುವುದು ಪೋಷಕರ ಮತ್ತು ಮಕ್ಕಳ ಸಂಬಂಧದ ಬಗ್ಗೆ. ತಂದೆ - ತಾಯಿಯರು ತಮ್ಮ ಮಕ್ಕಳನ್ನು ರೂಪಿಸುವಲ್ಲಿ ತಳೆಯುವ ಪಾತ್ರ, ಆದು ಮಾರಕವೋ ಪ್ರೋತ್ಸಾಹದಾಯಕವೋ ಎಂಬ ಬಗ್ಗೆ. ತಮಗೆ ತಿಳಿಯದೇ ತಂದೆ ತಾಯಿಯರು ಹೇಗೆ ಹಿರಣ್ಯಕಶಿಪುಗಳಾಗಿ ಮಕ್ಕಳ ಬೆಳವಣಿಗೆಗೆ ಮಾರಕವಾಗುತ್ತಾರೆ ಎಂಬ ಚಿಂತನೆ ಕೂಡ ಇಲ್ಲಿದೆ. ' ಕಲಿಕೆಗೂ - ಪ್ರತಿಭೆಗೂ ಇರುವ ಅಂತರ ತಿಳಿಯದಾದಾಗ ಅಪ್ಪ ಅಮ್ಮಂದಿರು ಎಡಹುವುದೆ ಹೆಚ್ಚು.' ಅಂತೆಯೇ ಮಕ್ಕಳ ಓದು ಮತ್ತು ಮುಂದೆ ಅವರು ಆರಿಸಿಕೊಳ್ಳಬೇಕಾದ ಕಸುಬಿನ ಬಗ್ಗೆಯೂ ಮೂಗು ತೂರಿಸಿದರೆ ಮಕ್ಕಳು ಹೇಗೆ ನಿಷ್ಪ್ರಯೋಜಕರಾಗಬಹುದೆಂದು ಚರ್ಚಿಸಿದ್ದಾರೆ. ' ರೈತನೊಬ್ಬ ತನ್ನ ಮಗನನ್ನು ರೈತನಾಗಿಸದೆ ಪಕ್ಕದ ಮನೆಯವನಂತೆ ಗುಮಾಸ್ತನಾಗಿ ಮಾಡಲು ಪ್ರಯತ್ನಿಸಿದರೆ ' ಮಗ ರೈತನೂ ಆಗಲಾರದೆ , ಗುಮಾಸ್ತನೂ ಆಗಲಾರದೆ ತೊಳಲಾಡ ಬೇಕಾದೀತೆಂಬ ಎಚ್ಚರಿಕೆಯೂ ಕೊಟ್ಟಿದ್ದಾರೆ. ಹೀಗೇ ನಾಲ್ಕೈದು ಲೇಖನಗಳು ಅಪ್ಪ - ಮಕ್ಕಳ ಹೊಣೆಯ ವಿಚಾರತೆ ಒಳಗೊಂಡಿವೆ.

ಶಿಕ್ಷಣದ ವಿಚಾರದ ಬಗ್ಗೆ ಬರೆಯುತ್ತಾ ನಾವು ನಮ್ಮದಲ್ಲದ ವಿಷಯಗಳನ್ನು ಇಂದಿಗೂ ಕಲಿಯುತ್ತಿರುವ ವಿಚಾರಗಳನ್ನು ಹೇಳುತ್ತಾ ' ರಾಮನ ನಾಡಿನಲ್ಲಿ ರೋಮನ್ ಅಂಕಿ ಏಕೆ? ' ಎಂದು ತಮಾಷೆ ಮಾಡುತ್ತಾ, ಚಾಲ್ತಿಯಲ್ಲಿ ಇಲ್ಲದ, ಜೀವನಕ್ಕೆ ಬೇಡದ ಎಷ್ಟೋ ವಿಷಯಗಳನ್ನು ಕಲಿಯುವ ನಾವು ಶಿಕ್ಷಣ ಕ್ಷೇತ್ರದಲ್ಲಿ , ಪಠ್ಯ ಪುಸ್ತಕಗಳಲ್ಲಿ ದೊಡ್ಡ ಬದಲಾವಣೆ ಕೈಗೊಳ್ಳಬೇಕು ಎಂದು ಹೇಳುವುದು ಹದಿನಾರಾಣೆ ಸತ್ಯದ ಮಾತು.

ಕಾಯಕವೇ ಕೈಲಾಸ ವೆಂದು ಕರ್ತವ್ಯ ನಿಷ್ಠರಾಗಿದ್ದ ವಿಶ್ವೇಶ್ವರಯ್ಯ ನವರ ಉದಾಹರಣೆ ಕೊಟ್ಟು ಅಂಥ ನಿಷ್ಠಾವಂತ ವ್ಯಕ್ತಿಗಳು ಹೇಗೆ ತಮ್ಮ ಮನೆಯವರಿಗೆ ಶತ್ರುಗಳಾಗಿ ಕಾಡಬಹುದು ಎಂಬ ವಿಷಯ ಚರ್ಚಿಸುವಾಗ ಆಹುದೆನ್ನದೆ ಇಲ್ಲ ವೆನ್ನಲಾಗದು. ಹಾಗಿದ್ದರೆ ಸಮಾಜ ಮುಖಿ ನಿಷ್ಠೆಗೆ ಬೆಲೆಯೇನು? ಆ ಬೆಲೆ ಅವರ ಮಕ್ಕಳು ತೆರಬೇಕಾಗುತ್ತದೆ ಎಂದಾಗ ಇದೇ ಸಮಾಜ ಅಂಥವರ ಮಕ್ಕಳನ್ನು ತಪ್ಪು ದಾರಿಗೆ ಎಳೆಯಬಹುದು ಎಂಬುದೂ ಸತ್ಯವೇ ಆದೀತು.

ಹೀಗೆ ನಮ್ಮಲ್ಲಿಯ ಅನೇಕ ಬಗೆಯ ಸಮಸ್ಯೆಗಳನ್ನು ಚರ್ಚಿಸುವ ಲೇಖನಗಳನ್ನು ಒಳಗೊಂಡ ಪುಸ್ತಕ ಇದು. ಭಾಷೆ ಆಡು ಭಾಷೆಯಂತೆಯೇ ಅತೀ ಸರಳ. ವಿಚಾರ ವಿಮರ್ಶೆಗಳು ಬಹಳ ಆತ್ಮೀಯವಾಗಿ ನಡೆಯುತ್ತಿರುವಂತೆ ಲೇಖನಗಳು ಓದಿಸಿಕೊಂಡು ಹೋಗುತ್ತವೆ. ಪ್ರತಿಯೊಬ್ಬರೂ ಓದಲೇ ಬೇಕಾದಂಥ ಬರಹಗಳು. ಅಪ್ಪ - ಅಮ್ಮ, ಮಕ್ಕಳು - ಶಿಕ್ಷಕರು , ಅಧಿಕಾರಿಗಳು, ನಿಷ್ಠಾವಂತರು - ಅಲ್ಲದಿರುವವರು , ಭ್ರಷ್ಟರು - ಅಲ್ಲದಿರುವವರು, ಸಾಹಿತಿಗಳು - ಸಾಮಾನ್ಯರು ಹೀಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವಂತ ಲೇಖನಗಳು, ' ಹೀಗಿರಬೇಕು ಎಂಬ ನಿರ್ದೇಶನವಿಲ್ಲ. ಹೀಗಿದ್ದರೆ ಹೇಗೆಂಬ ತಿಳುವಳಿಕೆ ಮೂಡಿಸುವಂಥ ಲೇಖನಗಳು.

ಮುನ್ನುಡಿಯಲ್ಲಿ ಲೇಖಕರ ಕೆಲವು ಮಾತುಗಳು ಖಂಡಿತಾ ವಿಚಾರ ಮಾಡುವಂತೆ ಮಾಡಿತು. ' ಹಳ್ಳಿಗಳಿಂದ ಕನ್ನಡ ಓದುಗರು ಬರುತ್ತಾರೆ ಎನ್ನುವಂತಿಲ್ಲ, ಹಳ್ಳಿಗಳಲ್ಲೇ ಹತ್ತಾರು ಇಂಗ್ಲೀಷ್ ಶಾಲೆಗಳು ತಲೆಯೆತ್ತಿವೆ '. ʻಶಾಲೆಗಳಲ್ಲಿ ಸಾಹಿತ್ಯ ಓದಿ ಎನ್ನುವ ಮೇಷ್ಟರೂ ಕಡಿಮೆ ಆಗುತ್ತಿದ್ದಾರೆ '. ' ವರುಷಕ್ಕೆ ಎಂಟು ಹತ್ತು ಸಾವಿರ ಪುಸ್ತಕಗಳು ಹೊರಬರುತ್ತವೆ. ಅವುಗಳಲ್ಲಿ ಯಾವುದನ್ನು ಓದಬೇಕೆಂಬ ಗೊಂದಲ ಓದುಗರಿಗೆ. '

- ಗೀತಾ

MORE FEATURES

ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’; ಸು. ರುದ್ರಮೂರ್ತಿ ಶಾಸ್ತ್ರಿ

14-11-2024 ಬೆಂಗಳೂರು

"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ...

ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ     

14-11-2024 ಬೆಂಗಳೂರು

"ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ...

ನಿರ್ಲಿಪ್ತ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು

13-11-2024 ಬೆಂಗಳೂರು

"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...