‘ಬಣಮಿ’ ಹಿಡಿದು ಕೂತರೆ ಹೊತ್ತಿನ ಪರಿವೆಯೇ ಇಲ್ಲ


‘‘ಬಣಮಿ’ಯಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಬದುಕಿನ ಸಂಘರ್ಷವನ್ನು ತೋರಿಸುವ ಲೇಖಕ ‘ಗೆದ್ದಲು’ ಕಥೆಯಲ್ಲಿ ಒಳಗೊಳಗೇ ನೊಂದ ಪಶ್ಚಾತಾಪದ ಭಾವನೆಯ ಪಾತ್ರವನ್ನು ಬಹು ಜಾಗರೂಕವಾಗಿ ಪರಿಚಯಿಸಿದನ್ನು ಕಾಣುತ್ತೇವೆ,” ಎನ್ನುತ್ತಾರೆ ಸ್ನೇಹಲತಾ ಗೌನಳ್ಳಿ ಅವರು ಕಪಿಲ ಪಿ ಹುಮನಾಬಾದೆ ಅವರ "ಬಣಮಿ" ಕೃತಿ ಕುರಿತು ಬರೆದ ವಿಮರ್ಶೆ.

ಬಣಮಿ ಹಿಡಿದು ಕೂತರೆ ಹೊತ್ತಿನ ಪರಿವೆಯೇ ಇಲ್ಲ. ಓದುಗನನ್ನ ಹೀಗೆ ಹಿಡಿದಿಟ್ಟು ಕೊಂಡು ಓದಿಸುವ ಪುಸ್ತಕಗಳ ಸಾಲಿಗೆ ‘ಬಣಮಿ’ ಯೂ ಸೇರುತ್ತದೆ ಎಂದರೆ ತಪ್ಪಾಗಲಾರದು. ಇಲ್ಲಿನ ಒಂದೊಂದು ಕಥೆಯೂ ನಮ್ಮ ನಿತ್ಯ ಬದುಕಿನ ಸಹಜತೆಯನ್ನು ಹೊಂದಿದೆ. ಪರಿಸ್ಥಿತಿಗಳ ಬಲೆಯೊಳಗೆ ಒದ್ದಾಡುವ ಮನುಷ್ಯನ ಅಂತರಂಗದ ಅಲೆಗಳನ್ನ ಬಿಚ್ಚಿ ತೋರಿಸುವ ಕೆಲಸ ಕಥೆಗಾರ ಬಹು ಜಾಣ್ಮೆಯಿಂದ ಮಾಡಿರುವುದು ಕಾಣಿಸುತ್ತದೆ. ಈ ರೀತಿ ಕಥೆ ಹೇಳ ಬೇಕೆಂದರೆ ಪಕ್ವತೆಯ ಹಂತವನ್ನು ತಲುಪಿರಲೇ ಬೇಕು.

‘ತುದಿ ಇಲ್ಲದ ಹಳ್ಳ’ ಇದೊಂದು ಅಪೂರ್ಣತೆಯೊಂದಿಗೆ ಪೂರ್ಣತೆಯನ್ನು ಕಾಣಿಸುವ ಬದುಕಿನ ಭ್ರಮೆಗಳು,

ತಂಕಗಳು, ಸಂಶಯಗಳು, ಅವಮಾನ ಮತ್ತು ಅನುಮಾನಗಳನ್ನು ಕುರಿತು ಹೇಳುವ ಕಥೆಯಾಗಿದೆ. ಎಲ್ಲವನ್ನೂ ಓದಿದ ಬಳಿಕವೂ ನನ್ನನ್ನು ಅತಿ ಹೆಚ್ಚು ಕಾಡಿದ ಮತ್ತು ಬಹುಶಃ ಕಾಡುತ್ತಲೇ ಇರುವ ಕಥೆಯೆಂದರೆ ‘ಒಳಕಲ್ಲು’. ಆ ಟೋಪಿ ಮಂಜನ ಪರಿವಾರ ಏನಾಯಿತು, ಅವರೆಲ್ಲ ಬದುಕಿ ಉಳಿದರೋ ಇಲ್ಲವೋ..??! ಅವನ ಮುಂದಿನ ಬದುಕು ಹೇಗೆ? ಹೀಗೆ ಮೊದಲಾದ ಪ್ರಶ್ನೆಗಳು ಓದುಗನಿಗೆ ಕಾಡದೇ ಇರಲಾರವು.

‘ಬಿದಿರು’ ಒಂದು ಗತಿಸಿಹೋದ ಪ್ರೇಮ ಕಥೆಯಾದರೆ, ‘ನುಸಿ’ ಯಲ್ಲಿ ಏನನ್ನೋ ಹೇಳಲು ಹೋಗಿ ಇನ್ನೇನೋ ಕಾಣಿಸಿ ಕೊಟ್ಟ ಲೇಖಕನ ಸೂಕ್ಷ್ಮ ಗ್ರಹಿಕೆ ಅರ್ಥವಾಗಲು ಸ್ವಲ್ಪ ಸಮಯಬೇಕಾಗುವುದು. ‘ನಿರೋಷ’ ಮತ್ತು ‘ಆ ಕತ್ತಲ ಕಾಡಿನಲ್ಲಿ’ ಬದುಕಿನ ಒತ್ತಡದಿಂದ ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ಮಾನಸಿಕತೆಯ ಗೊಂದಲಗಳನ್ನು ಮತ್ತು ಅವುಗಳಿಗೆ ಪರಿಹಾರ ಹುಡುಕುವಲ್ಲಿ ಹಿರಿಯ ತಲೆಮಾರು ಬಹುಶಃ ಸೋಲುತ್ತಿರುವುದರ ಜೊತೆಗೆ ಜಡ್ಜಮೆಂಟಲ್ ಆಗಿರುವುದನ್ನು ಕಾಣಬಹುದು.

‘ಬಣಮಿ’ಯಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಬದುಕಿನ ಸಂಘರ್ಷವನ್ನು ತೋರಿಸುವ ಲೇಖಕ ‘ಗೆದ್ದಲು’ ಕಥೆಯಲ್ಲಿ ಒಳಗೊಳಗೇ ನೊಂದ ಪಶ್ಚಾತಾಪದ ಭಾವನೆಯ ಪಾತ್ರವನ್ನು ಬಹು ಜಾಗರೂಕವಾಗಿ ಪರಿಚಯಿಸಿದನ್ನು ಕಾಣುತ್ತೇವೆ.

“ಮೆಲ್ಲಗೆ ತೇಲಿ ಬರುವ ಒಣ ಎಲೆಗಳು ನೆಲದ ಮೇಲೆ ಬೀಳುವ ಮನಸ್ಸಿಲ್ಲದೆ ಗಾಳಿಯಲ್ಲಿ ಹಾರುತ್ತಾ ನೆಲಕ್ಕಿಳಿಯುತ್ತಿದ್ದವು. ತಂಪು ಭಯ ಹುಟ್ಟಿಸುವಂತೆ ಇನ್ನಷ್ಟು ಬಿಗಿಯಾಗಿ ಗಾಳಿಗೆ ಅಪಿಕೊಂಡಿತ್ತು”.’ಮುಗಿಲ ತುದಿ’ ಕಥೆಯ ಈ ಸಾಲುಗಳು ಇಡೀ ಈ ಪುಸ್ತಕದ ಕಥೆಗಳ ಮತ್ತವುಗಳ ನಿರೂಪಣೆಯ ಸುಂದರತೆಯನ್ನು ಬಿಂಬಿಸುತ್ತವೆ. ಇನ್ನು ‘ಬಿಸಿಲು’ ಕಥೆಯಲ್ಲಿ ಅಜ್ಜಿ, ಮೊಮ್ಮಗ, ಮತ್ತು ಮೋಡಗಳ ನಡುವಿನ ಸಾಮರಸ್ಯವನ್ನು ಹೇಳುತ್ತಾ, ಸತ್ತ ಅಜ್ಜಿಯನ್ನು ಬಿಸಿಲಿನ ಮೋಡಗಳಲ್ಲಿ ವಿದಾಯ ಹೇಳುವ ಪುಟ್ಟ ಮೊಮ್ಮಗನ ಮುಗ್ಧತೆ ತನ್ಮಯಗೋಳಿಸುತ್ತದೆ…

ಹಿಂಗ್ ‘ಹಣಾದಿ’ ದಾರಿಗುಂಟ ಕರಕೊಂಡ ಹೋದ ಲೇಖಕ ಇದೀಗ ‘ಬಣಮಿ’ ಮುಂದ ತಂದು ನಿಲ್ಸಿದಾನ. ನೆಕ್ಸ್ಟ್ ಮತ್ತೆಲ್ಲಿ ಅನ್ನೋದನ್ನ ಕಾಯುತ್ತಾ ಮುಂದಿನ ಪುಸಕ್ತಗಳ ನಿರೀಕ್ಷೆಯಲ್ಲಿ ಓದುಗರು...

- ಸ್ನೇಹಲತಾ ಗೌನಳ್ಳಿ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...