“ಟೆಂಟಿನಲ್ಲಿ ಕದ್ದು ನೋಡಿದ ಸಿನಿಮಾ, ಗಣಿತ ಮೇಸ್ಟ್ರ ಕೈಯಲ್ಲಿ ತಿಂದ ಒದೆ, ಅವರಿಗಿಟ್ಟಿದ್ದ ಅಡ್ಡೆಸರು, ಮನೆಯಲ್ಲಿ ಹಾಕಿಸಿಕೊಂಡ ಮೆಣಸಿನ ಕಾಯಿ ಹೊಗೆ, ವಿದ್ಯಾರ್ಥಿಗಳಿಗಷ್ಟೇ ಏಕೆ, ಮೇಷ್ಟ್ರುಗಳ ಪಾಲಿಗೂ ಬೈಬಲ್ ಆಗಿದ್ದ MCC ಗೈಡು, ಗಣಪತಿ ಕೂರಿಸಲು ಎತ್ತಿದ ಚಂದ, ಮನೆಯಲ್ಲಿ ಸಾಕಿದ ಕಂತ್ರಿನಾಯಿ, ಊಟ-ತಿಂಡಿ ಮರೆತು ಆಡುತ್ತಿದ್ದ ಗಲ್ಲಿ ಕ್ರಿಕೆಟ್ಟು..,” ಎನ್ನುತ್ತಾರೆ ನಟರಾಜ್ ಎಸ್ ಮೈಸೂರು. ಅವರು ಮಂಜುನಾಥ್ ಕುಣಿಗಲ್ ಅವರ ‘ಶಿವಾಜಿ ಟೆಂಟ್’ ಕುರಿತು ಬರೆದ ವಿಮರ್ಶೆ.
ಆತ್ಮೀಯರಾದ ಮಂಜುನಾಥ್ ಕುಣಿಗಲ್ ಅವರ ಎರಡನೆಯ ಕೃತಿ ಮತ್ತು ಚೊಚ್ಚಲ ಕತಾಸಂಕಲನ ತನ್ನ ಸಹಜ ನಿರೂಪಣೆಯ ಕಾರಣಕ್ಕೆ ಹಾಗು ವಿಪರೀತ ಅಲಂಕಾರಿಕತೆಯ ಆಡಂಬರಕ್ಕಿಳಿಯದೆ, ಇದ್ದದ್ದನ್ನು ಇದ್ದ ಹಾಗೆಯೇ ದಾಖಲಿಸಿರುವ ಕಾರಣಕ್ಕೆ ಆಪ್ತವಾಗುವ ಪುಸ್ತಕ. ಇಲ್ಲಿನ ಹತ್ತೂ ಕತೆಗಳನ್ನು ಒಂದರ ನಂತರ ಒಂದರಂತೆ ಓದಿದರೆ ಗಣಪನೆಂಬ ಹುಡುಗ ರೂಪುಗೊಳ್ಳುತ್ತಾ ಹೋದ ಜಾಡು ಸಿಗುತ್ತದಾದರೂ ಬಿಡಿಬಿಡಿಯಾಗಿ ಓದಹೊರಟರೆ ಒಮ್ಮೆ ನಕ್ಕು ಹಗುರಾಗುವ, ಮತ್ತೊಮ್ಮೆ ಕಣ್ಣಾಲಿ ತುಂಬಿಬಂದು ಮ್ಲಾನರಾಗುವ, ಮಗದೊಮ್ಮೆ ಚಿಂತಿತರಾಗುವ, ಅದೊಮ್ಮೆ ಕ್ರೋಧಗೊಳ್ಳುವ, ಹೀಗೆ ಒಂದಿಲ್ಲೊಂದು ಭಾವ ಜಾಗೃತಗೊಂಡು ಒಂದಷ್ಟು ಹೊತ್ತು ಅದೇ ಗುಂಗಿನಲ್ಲಿ ಕಳೆದುಹೋಗುವಂತೆ ಮಾಡಬಲ್ಲ ಕತೆಗಳಿವು. ಇದೆಲ್ಲವನ್ನೂ ಮೀರಿ ‘ಶಿವಾಜಿ ಟೆಂಟಿ’ನ ನಿಜವಾದ ಸಾಮರ್ಥ್ಯವಿರುವುದು ಓದುತ್ತಾ ಇರುವಾಗಲೇ “ಅರೇ, ಇದು ನನ್ನದೇ ಕತೆಯಲ್ಲವೇ!” ಅನ್ನಿಸುವಂತೆ ಮಾಡುವುದರಲ್ಲಿ. ಈ ಕತೆಗಳು ನಡೆಯುವುದು ಯಾವುದೋ ಕಾಣದ ಲೋಕದಲ್ಲಲ್ಲ, ನಾವು ಬೆಳೆದ ಪಡಸಾಲೆ, ಓಣಿ, ಗಲ್ಲಿ, ಬೀದಿಗಳಲ್ಲಿ. ಇವು ನಮ್ಮನಿಮ್ಮ ಕತೆಗಳು. ನಮ್ಮ ಪರವಾಗಿ ಮಂಜುನಾಥರವರು ಬರೆದಿದ್ದಾರೆ!
***
ಟೆಂಟಿನಲ್ಲಿ ಕದ್ದು ನೋಡಿದ ಸಿನಿಮಾ, ಗಣಿತ ಮೇಸ್ಟ್ರ ಕೈಯಲ್ಲಿ ತಿಂದ ಒದೆ, ಅವರಿಗಿಟ್ಟಿದ್ದ ಅಡ್ಡೆಸರು, ಮನೆಯಲ್ಲಿ ಹಾಕಿಸಿಕೊಂಡ ಮೆಣಸಿನ ಕಾಯಿ ಹೊಗೆ, ವಿದ್ಯಾರ್ಥಿಗಳಿಗಷ್ಟೇ ಏಕೆ, ಮೇಷ್ಟ್ರುಗಳ ಪಾಲಿಗೂ ಬೈಬಲ್ ಆಗಿದ್ದ MCC ಗೈಡು, ಗಣಪತಿ ಕೂರಿಸಲು ಎತ್ತಿದ ಚಂದ, ಮನೆಯಲ್ಲಿ ಸಾಕಿದ ಕಂತ್ರಿನಾಯಿ, ಊಟ-ತಿಂಡಿ ಮರೆತು ಆಡುತ್ತಿದ್ದ ಗಲ್ಲಿ ಕ್ರಿಕೆಟ್ಟು……….…………………70, 80, 90 ರ ದಶಕದಲ್ಲಿ, ಬಡ ಅಥವಾ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವರ ಬಾಲ್ಯದ ಅವಿಭಾಜ್ಯ ನೆನಪುಗಳಿವು. ಶಿವಾಜಿ ಟೆಂಟಿನ ಒಳಹೊಕ್ಕು ಅಲ್ಲಿನ ಒಂದೊಂದೇ ಕತೆಯ ರೀಲು ಓಡತೊಡಗಿದಂತೆ ಮತ್ತೆ ಹಳೆಯದೆಲ್ಲ ಮೇಳೈಸಿ, ನೆನಪಿನ ಓಣಿಯಲ್ಲಿ ಓಡುವ ಸರದಿ ಓದುಗರದ್ದು. ಈಗಿನ ನಮ್ಮ ಮಕ್ಕಳು, ಅದರಲ್ಲೂ ಪಟ್ಟಣದಲ್ಲಿ ಓದುತ್ತಿರುವವರು ಇದೇ ಕತೆಗಳನ್ನು ಓದಿದರೆ “ಆಗ ಹೀಗೆಲ್ಲಾ ಇತ್ತಾ!” ಎಂದು ಸಕೇದಾಶ್ಚರ್ಯಗೊಳ್ಳದೇ ಇರರು. ಒಟ್ಟಿನಲ್ಲಿ ಓದುಗರು ಇಲ್ಲಿನ ಒಂದಿಲ್ಲೊಂದು ಕತೆಯೊಂದಿಗೆ ಸಮೀಕರಿಸಿಕೊಳ್ಳುವಂತೆ ಮಾಡುವ, ತಾವು ಓಡಾಡಿ ಬೆಳದ ಓಣಿ, ಕಲಿತು ಬಲಿತ ಶಾಲೆ, ಮಾಡಿಕೊಂಡ ಹೇಳಲಾಗದ ಎಡವಟ್ಟು, ಯಾವುದೋ ಹಂತದಲ್ಲಿ ಜೀವನ ಪಡೆದ ತಿರುವು, ಹೀಗೆ ಏನೇನನ್ನೋ ನೆನಪಿಗೆ ಬರುವಂತೆ ಮಾಡುವ, ಒಂದು ಕ್ಷಣವಾದರೂ ನಮ್ಮ ಬಾಲ್ಯವನ್ನು ಹಿಂತಿರುಗಿ ನೋಡುವಂತೆ ಮಾಡುವ nostalgic ಕತೆಗಳಿವು.
***
ಸಾಮಾನ್ಯ ಹುಡುಗನೊಬ್ಬನ ಸಹಜ ಬದುಕಿನ ನಿರೂಪಣೆಯೇನೋ ಎಂದೆನಿಸಿದರೂ ಇಲ್ಲಿನ ಪ್ರತೀ ಕತೆಯೂ ಯಾವುದೋ ಒಂದು ತಿರುವಿನಲ್ಲಿ ನಮ್ಮನ್ನು ಗಕ್ಕನೆ ಎಳೆದು ನಿಲ್ಲಿಸಿಕೊಂಡು ‘ಮನುಷ್ಯ ವರ್ತನೆಯ ಈ ಸೂಕ್ಷವನ್ನು ಗಮನಿಸಿ' ಎಂದು ಜಗ್ಗತೊಡಗುತ್ತದೆ. ಹಾಗಾಗಿಯೇ, ಮೊದಲ ಕತೆ 'ಶಿವಾಜಿ ಟೆಂಟ್' ನಲ್ಲಿ ಪ್ರೀತಿಯ ಮಗ ಗಣಪನ ಮೇಲೆ ಇನ್ನಿಲ್ಲದಷ್ಟು ಭರವಸೆ ಇಟ್ಟುಕೊಂಡಿದ್ದ ತಂದೆ ಅವನು ಸಿನಿಮಾ ಗೀಳಿಗೆ ಬಿದ್ದು, ಅದಕ್ಕಾಗಿ ಕಳ್ಳತನಕ್ಕೂ ಇಳಿದಾಗ ಮೆಣಸಿನಕಾಯಿ ಹೊಗೆ ಶಿಕ್ಷೆ ನೀಡುತ್ತಾನಾದರೂ ನಂತರದಲ್ಲಿ ತಾನೇ ಪಶ್ಚಾತ್ತಾಪದ ಕೂಪದಲ್ಲಿ ನರಳುತ್ತಾನೆ. ಇತ್ತ ಮಗನದೂ ಅದೇ ಪಾಡು. ಆ ಪಶ್ಚಾತ್ತಾಪದ ಕ್ಷಣವೇ ಇಬ್ಬರಿಗೂ crucial juncture. ಅಲ್ಲಿ ಬದುಕು ಸರಿಯಾದ ದಿಕ್ಕು ಹಿಡಿದ ಕುರುಹು ಇದೆ. “ಕದ್ದ ದುಡ್ಡಿನಲ್ಲಿ ಗಣಪ ನೋಡಿದ ಕಡೆಯ ಸಿನಿಮಾ ‘ಗೆದ್ದ ಮಗ' ಎಂಬುದು ವಿಪರ್ಯಾಸವಷ್ಟೇ” ಎಂದಿದ್ದಾರೆ ಲೇಖಕರು. ಆದರೆ ಇದು ಖಂಡಿತ ವಿಪರ್ಯಾಸವಲ್ಲ, ತಾನು ಹಿಡಿಯಬೇಕಾದ ದಾರಿ ಬೇರೆಯೇ ಇದೆ ಎಂದು ಅರಿವಾಗಿ ನಾನೇ ಸ್ವತಃ ಗೆದ್ದ ಮಗನಾದ ಸಂದರ್ಭ.
ಇದೇ ತರಹದ ಮತ್ತೊಂದು ಪ್ರಸಂಗ 'ಮಿಲಿಟರಿ ಮೇಷ್ಟ್ರು ಮತ್ತು ಗಣಿತ ಭೂತ' ಕತೆಯಲ್ಲಿದೆ. ಡಿಪ್ಲೊಮೋದಲ್ಲಿ ತನಗಿಷ್ಟವಿಲ್ಲದ ಸಿವಿಲ್ ಬ್ರ್ಯಾಂಚ್ ಓದಬೇಕಾದ ಅನಿವಾರ್ಯತೆಗೆ ಸಿಕ್ಕಿಬೀಳುವ ಗಣಪ, ಅಂಕಗಣಿತದ ಅಪಭ್ರಂಶದಂತಿರುವ ಸರ್ವೇ ವಿಷಯದಿಂದ ತಲೆ ರೋಸಿ ಹೋಗಿ ‘ಯಾವನಿಗ್ ಬೇಕು ನಿಮ್ಮ ಸಬ್ಜೆಕ್ಟೂ'' ಎಂದು ಮೇಷ್ಟ್ರ ಮುಖಕ್ಕೆ ಪುಸ್ತಕ ಏಸೆದು ತರಗತಿಯಿಂದ ಹೊರಟುಬಿಡುತ್ತಾನೆ. ಇದು ಬಲಿಯದ ಹುಡುಗನೊಬ್ಬನ ಅವಿಧೇಯತೆಯಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಅದು ಗಣಪನ ಜೀವನ ತಿರುವು ಪಡೆದುಕೊಂಡ ಕ್ಷಣ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕ್ಣಷದಲ್ಲಿ ಹೀಗೆ ಯಾವುದೋ ವಿಷಯದ ಪುಸ್ತಕ ಎಸೆದು ಹೊರ ನಡೆದು ಬಿಡಬೇಕು ಎನ್ನಿಸಿರುತ್ತದೆ.
ಪುಸ್ತಕದ ಹತ್ತೂ ಕತೆಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು ‘ಪಾಳ್ಮನೆ ರಾಣಿ' ಕತೆ. ಸಮಾಜ ಹುಚ್ಚಿ ಎಂದು ಪರಿಗಣಿಸಿದ ಗೌರಿ ಅದೇ ಸಮಾಜದ ಕೆಲ ಕ್ರೂರಮೃಗಗಳ ಕೈಯಲ್ಲಿ ನರಳುತ್ತಾಳೆ. ತನ್ನ ಹಸುಗೂಸನ್ನೂ ಕಳೆದುಕೊಳ್ಳುತ್ತಾಳೆ. ಎದೆಯ ನೋವು ತಾಳಲಾರದೆ ಹಾಲು ಹಿಂಡಬೇಕಾದ ಪ್ರಸಂಗ ಒದಗಿದಾದ ಹಿಂಡಿದ ಹಾಲನ್ನು ಚೆಲ್ಲಿ ಸುಮ್ಮನಾಗದೆ ತನ್ನ ಅನಾಥ ಬದುಕಿಗೆ ಜೊತೆಯಾದ ನಾಯಿಗೆ ಹಾಕುತ್ತಿರುತ್ತಾಳೆ. ಇವಳು ಹುಚ್ಚಿಯೋ? ಅಥವಾ ಇಂತಹ ನೋವಿನಲ್ಲೂ ಇವಳನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡ ನೀಚರು ಹುಚ್ಚರೋ? ಅಥವಾ ಇದನ್ನು ಬಹಿರಂಗಗೊಳಿಸಿದ್ದಕ್ಕೆ ದನಕ್ಕೆ ಬಡಿದಂತೆ ಬಡಿದ ಕಾಮಾಂಧರ ತಾಯಂದಿರು ಹುಚ್ಚಿಯರೋ? ಯೋಚನೆಗೆ ಹಚ್ಚುತ್ತದೆ ಕತೆ. ಹೀಗೆಯೇ ಮಾನಸಿಕ ಅಸ್ವಸ್ಥಳೊಬ್ಬಳು ಬಸಿರು ಹೊತ್ತು ಬೀದಿಬೀದಿ ಅಲೆಯುತ್ತಾ ಒಮ್ಮೊಮ್ಮೆ ನೋವಿನಲ್ಲಿ ನರಳಿ ವಿಕಾರವಾಗಿ ಅರಚುತ್ತಾ ರಸ್ತೆಗಳಲ್ಲಿಯೇ ಬಿದ್ದು ಒದ್ದಾಡುತ್ತಿದ್ದುದನ್ನು ನಾನು ಹುಡುಗನಾಗಿದ್ದಾಗ ಶಾಲೆಗೆ ಹೋಗುತ್ತಿದ್ದ ಬೇಲೂರು ಪಟ್ಟಣದಲ್ಲಿ ನೋಡಿದ್ದೆ.
ಮತ್ತೊಂದು ಕತೆಯಲ್ಲಿ ಮರಿಭಟ್ಟರೆಂಬ ಆದರ್ಶ ಶಿಕ್ಷಕರೊಬ್ಬರು ದಯನೀಯ ಅಂತ್ಯಕಾಣುವ ಕರುಣಾಜನಕ ಕತೆ ಇದೆ. ಪ್ರತೀ ಶಾಲೆಯಲ್ಲೂ ಇಂತಹ ಒಬ್ಬ ಶಿಕ್ಷಕರಿರುತ್ತಾರೆ. ಅವರ ನಿಸ್ವಾರ್ಥತೆ ಸಮಾಜಕ್ಕೆ ಕಾಣಿಸದೇ ಹೋಗುವುದು ದುರಂತ. ಶಾಲೆ, ಸಮಾಜದ ಕಡೆಗೆ ಅವರಿಗಿದ್ದ ಅತಿಯಾದ ವ್ಯಾಮೋಹವೇ ಅವರಿಗೆ ಮುಳುವಾಗುತ್ತದೆ.
ಈ ಎಲ್ಲಾ ಪ್ರಸಂಗಗಳನ್ನು ಓದಿದಾಗ ನನಗೆ ನೆನಪಾದದ್ದು ಡಿವಿಜಿಯವರ “ಕಾಲ ದೇಶದ ವಿಭಾಗ ಮನದ ರಾಜ್ಯದೊಳಿಲ್ಲ” ಎಂಬ ಮಾತು. ಎಲ್ಲಾ ಊರುಗಳಲ್ಲಿಯೂ persons and personalities ಒಂದೇ ರೀತಿ. ಹೆಸರುಗಳಷ್ಟೇ ಬೇರೆ ಬೇರೆ.
***
ಕತೆಯೊಂದು ಹೀಗೇ ಇರಬೇಕು ಎಂದು ಗೆರೆ ಎಳೆಯುವುದು ಅದರ ಕುತ್ತಿಗೆ ಬಿಗಿದಂತೆ ಎಂದೇ ನನ್ನ ಅಭಿಪ್ರಾಯ. ನಿಯಮಬದ್ಧತೆಗಿಂತಲೂ ಓದಿದಾಗ ಅದು ಕೊಡುವ ಫೀಲ್ ಮುಖ್ಯವಾಗುತ್ತದೆ. ನಾವು ಕತೆಯ ಪಾತ್ರಕ್ಕೋ, ಪ್ರಸಂಗಕ್ಕೋ connect ಆಗಬಹುದಾದರೆ ಅದು ನಮ್ಮದೇ ಕತೆಯಾಗುತ್ತದೆ. ಹಾಗಾಗಿ “ಶಿವಾಜಿ ಟೆಂಟಿನ ಕತೆಗಳು ಯಾವ ವರ್ಗಕ್ಕೆ ಸೇರುವ ಕತೆಗಳು?” ಎಂದೆಲ್ಲಾ ಯೋಚಿಸುವ ಅಗತ್ಯವಿಲ್ಲ. ಪೂರ್ಣಚಂದ್ರ ತೇಜಸ್ವಿಯವರ ‘ರಹಸ್ಯ ವಿಶ್ವ', ಆರ್ ಕೆ ನಾರಾಯಣ್ ಅವರ ‘SWAMY AND HIS FRIENDS' ಕತೆಗಳಂತೆಯೇ ಶಿವಾಜಿ ಟೆಂಟಿನ ನ ಕತೆಗಳೂ ಒಂದು ಆಪ್ತತೆಯನ್ನು ಉಳಿಸುತ್ತವೆ.
ನಟರಾಜ್ ಎಸ್
ಮೈಸೂರು.
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.