"ತಮ್ಮದೇ ಅನುಭವಗಳ ಪರಿಧಿಯಲ್ಲಿ ಬರುವ ಮೆಟ್ರೊ ನಿಲ್ದಾಣ ಮತ್ತದರ ಕಾರ್ಯಚಟುವಟಿಕೆ, ಬೆಂಗಳೂರು ನಗರ ಮತ್ತು ಕೋಲ್ಕತಾ ನಗರವನ್ನು ಜೀವಂತವಾಗಿ ಓದುಗರ ಕಣ್ಣಮುಂದೆ ಬರುವಂತೆ ಕಟ್ಟಿಕೊಡುವಲ್ಲಿ ಲೇಖಕ ಗೆದ್ದಿದ್ದಾನೆ," ಎನ್ನುತ್ತಾರೆ ಮಂಜುನಾಥ್ ಕುಣಿಗಲ್. ಅವರು ಜಯರಾಮಾಚಾರಿ ಅವರ ‘ಕಿಲಿಗ್’ ಕಾದಂಬರಿ ಕುರಿತು ಬರೆದ ವಿಮರ್ಶೆ.
‘ಕಿಲಿಗ್’ನಲ್ಲೂ ಒಂದು ಪುಟ್ಟ ಜಗತ್ತಿದೆ. ಇದು ‘ಮೆಟ್ರೋ’ ನಗರದ ಬಿಕ್ಕಟ್ಟಿನ ಬದುಕಿನ ಸುತ್ತಲೂ ಸುತ್ತುವ ಜಗತ್ತು; ಇದು ಸ್ವತಃ ಬದುಕೇ ಜಿದ್ದಿಗೆ ಬಿದ್ದಂತೆ ಓಡುತ್ತಿರುವ ನಮ್ಮ-ನಿಮ್ಮದೇ ಜಗತ್ತು; ಜೋರುಜವ್ವನ ಭಾವನೆಗಳು ದ್ವಂದ್ವಗಳ ಕೆದರುರೂಪ ಹೊದ್ದು ಎತ್ತೆತ್ತಲ್ಲೋ ಉಕ್ಕಿ ಹರಿಯುತ್ತಿರುವ ಚಂಚಲ ಜಗತ್ತು.
ತಮ್ಮದೇ ಅನುಭವಗಳ ಪರಿಧಿಯಲ್ಲಿ ಬರುವ ಮೆಟ್ರೊ ನಿಲ್ದಾಣ ಮತ್ತದರ ಕಾರ್ಯಚಟುವಟಿಕೆ, ಬೆಂಗಳೂರು ನಗರ ಮತ್ತು ಕೋಲ್ಕತಾ ನಗರವನ್ನು ಜೀವಂತವಾಗಿ ಓದುಗರ ಕಣ್ಣಮುಂದೆ ಬರುವಂತೆ ಕಟ್ಟಿಕೊಡುವಲ್ಲಿ ಲೇಖಕ ಗೆದ್ದಿದ್ದಾನೆ.
ಮದುವೆಯ ನಂತರ 'ಮಗು ಈಗ ಬೇಡ, ಆಗ ಬೇಕು’ ಎಂಬ ತಾಕಲಾಟಕ್ಕೆ ಬೀಳುವ ವಿವಾಹಿತರ ಸೀಮಿತ ಚೌಕಟ್ಟಿನೊಳಗಿನ ಬದುಕಿನ ಚಿತ್ರಣ, ಅವರ ‘ಪ್ರೀತಿ-ಕಾಮ-ಕ್ಷೇಮ’ ಎಲ್ಲವೂ ನಮ್ಮದೇನೋ ಎನ್ನುವಂತೆ ಚಿತ್ರಿಸುವಲ್ಲಿ ಲೇಖಕ ಗೆದ್ದಿದ್ದಾನೆ.
ಯೌವ್ವನ ಕಾಲಘಟ್ಟದ ಪ್ರೇಮ-ಕಾಮ ಸಂಘರ್ಷಣೆಯನ್ನು ಚೇತೋಹಾರಿಯಾಗಿಯೂ, ತೀವ್ರ ಮುಜುಗರ ಬರದಂತೆಯೂ ನಿರೂಪಿಸುವಲ್ಲಿ ಲೇಖಕ ಗೆದ್ದಿದ್ದಾನೆ.
ಕಥೆ ಹೇಳುವಲ್ಲಿ ಲೇಖಕ ಗೆದ್ದಿದ್ದಾನೆ.
ಒಟ್ಟಿನಲ್ಲಿ ಕಿಲಿಗ್ ಗೆದ್ದಿದೆ!
‘ಹಾಳು ನೆನಪುಗಳಿಗೂ ರೂಟ್ ಕ್ಯಾನಲ್ ಇರಬೇಕಿತ್ತು’ ಇದು ಕಾಡಿದ ಸಾಲು. ಇಂತಹ ಅನೇಕ ಹೊಸತನದ ಪ್ರಯೋಗಗಳಿವೆ.
‘ಗ್ರಾಚಾರ್ ಗಾಂಡ್ ಮಾರೆತೋ ಖುದಾ ಕ್ಯಾ ಕರೇ’ ಎಂಬ ಸೋಗಿಲ್ಲದ ಬದುಕಿನ ನಮ್ಮದೇ ಆಡುಮಾತು ಹೇರಳವಾಗಿ ಇಲ್ಲಿ ಬಳಕೆಯಾದದ್ದು ಕಥೆಯನ್ನು ನೈಜತೆಯ ಸಮೀಪ ತಂದೊಡ್ಡುತ್ತದೆ.
ಸತೀಶನ ಬೆನ್ನಮೇಲೆ ಹರಿವ ಸೋಪಿನ ನೊರೆಯನ್ನು ದಿಟ್ಟಿಸುತ್ತಾ ನಿಲ್ಲುವ ಬಾಲ್ಯದ ಗೆಳತಿ ವಿನುತಾ ನಮ್ಮ ಜೀವನದಲ್ಲೂ ಬಂದುಹೋಗಿಯೇ ಇರುತ್ತಾಳೆ. ಹುಡುಗು ವಯಸ್ಸಲ್ಲಿ ಮತ್ತು ಮದುವೆಯಾದ ಮೇಲೂ ಅಕಸ್ಮಾತ್ತಾಗಿ ಜೀವನದಲ್ಲಿ ಬಂದು ಕೆಲಕಾಲ ಕಾಡುವ ಕ್ರಶ್ ಅಕ್ಷತಾ ನಮ್ಮೆಲ್ಲರ ಜೀವನದಲ್ಲೂ ಬಂದು ಹೋಗಿರಲಿಕ್ಕೂ ಸಾಕು. ಅಕ್ಷತಾಳ ಫೋನ್ ನಂಬರ್ ಪುಸ್ತಕದಲ್ಲಿ ಯಥಾವತ್ ದಾಖಲಾಗಿದೆ. ಹಾಗಂತ ನೀವೇನಾದರೂ ಆ ಅಕ್ಷತಾಳಿಗೆ ಫೋನ್ ಕರೆ ಮಾಡಿದರೆ ಅತ್ತ ಕಡೆಯಿಂದ ಲೇಖಕರು ‘ಹಲೋ’ ಎನ್ನುವುದು ದಿಟ! ಏಕೆಂದು ತಿಳಿಯಲು, ನೀವೇ ಪುಸ್ತಕ ಓದಬೇಕು.
- ಮಂಜುನಾಥ್ ಕುಣಿಗಲ್
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.