ವರ್ತಮಾನದ ಕನ್ನಡಿಯಲ್ಲಿ ಕನ್ನಡ ರಂಗ ಸಂಸ್ಕೃತಿ


"ಮೂರನೆಯದಾಗಿ ಕನ್ನಡ ವೃತ್ತಿರಂಗಭೂಮಿಯ ಒಳ-ಹೊರಗುಗಳ ಸಮೀಕ್ಷೆ ಮತ್ತು ವೃತ್ತಿರಂಗಭೂಮಿಯ ಚರಿತ್ರೆಯನ್ನು ನಿರ್ಮಾಣ ಮಾಡಿ ಮರೆಯಾಗಿ ನಿಂತ ಸಾಧಕರನ್ನು ಪರಿಚಯಿಸುವ ಲೇಖನಗಳು ಸೇರಿವೆ. ಈ ಬರಹಗಳು ಒಟ್ಟಾರೆ ನಮ್ಮ ವರ್ತಮಾನದ ಸಾಂಸ್ಕೃತಿಕ ಚರಿತ್ರೆಯ ಪರೋಕ್ಷ ದಾಖಲೆಯಾಗಿರುವಂತೆ ಓದುಗರ ಅರಿವನ್ನು ಜಾಗ್ರತಗೊಳಿಸುವ ಸಾಕ್ಷಿಪ್ರಜ್ಞೆಯಾಗಿಯೂ ಕೆಲಸ ಮಾಡುವುದೇ ಇವುಗಳ ಹೆಗ್ಗಳಿಕೆಯಾಗಿದೆ," ಎನ್ನುತ್ತಾರೆ ಕೆ.ವೈ.ನಾರಾಯಣಸ್ವಾಮಿ. ಅವರು ಮಲ್ಲಿಕಾರ್ಜುನ ಕಡಕೋಳ ಅವರ ‘ನಾಟಕ ಕರ್ನಾಟಕ’ ಕೃತಿಗೆ ಬರೆದ ಮುನ್ನುಡಿ.

ಸೂಕ್ಷ್ಮಗ್ರಾಹಿ ಮನಸುಳ್ಳ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯುಳ್ಳ ಹಿರಿಯ ಮಿತ್ರರಾದ ಮಲ್ಲಿಕಾರ್ಜುನ ಕಡಕೋಳ ಅವರು ಬರೆದ ಸುಮಾರು 25 ಲೇಖನಗಳ ಕಟ್ಟು ಇದು. ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನಗಳ ಕುರಿತ ವಿಶ್ಲೇಷಣಾತ್ಮಕವಾದ ಬರಹಗಳ ಜೊತೆಗೆ ಕನ್ನಡ ರಂಗಭೂಮಿಯ ಕುರಿತ ಸಂಶೋಧನಾತ್ಮಕ ಬರಹಗಳನ್ನು ಕಡಕೋಳ ಈ ಹೊತ್ತಿಗೆಯಲ್ಲಿ ಸಂಕಲಿಸಿಕೊಟ್ಟಿದ್ದಾರೆ. ಈ ಬರಹಗಳ ಓದಿಗೆ ಪ್ರವೇಶಿಕೆಯ ಮಾತುಗಳನ್ನು ಬರೆಯಲು ನನಗೆ ಕೇಳಿ, ನನ್ನ ತಿಳುವಳಿಕೆಯನ್ನು ವಿಸ್ತಿರಿಸಿಕೊಳ್ಳಲು ಅವಕಾಶವಿತ್ತ ಹಿರಿಯ ಮಿತ್ರರಿಗೆ ಮೊದಲು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ ಈ ಪುಸ್ತಕವನ್ನು ಕನ್ನಡ ಓದುಗರ ಪರವಾಗಿ ಸ್ವಾಗತಿಸುತ್ತೇನೆ.

ವಿಚಾರ ಸಾಹಿತ್ಯ ಇಪ್ಪತ್ತೊಂದನೆಯ ಶತಮಾನದ ಬರವಣಿಗೆಯ ಮುಖ್ಯ ಪ್ರಕಾರವಾಗಿರುವುದನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಪತ್ರಿಕೆ ಅಥವಾ ಪುಸ್ತಕಗಳ ಮೂಲಕ ತಮ್ಮ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳುವ ಕಾಲ ಈಗ ಮುಗಿದಿದೆ. ಮಾಹಿತಿ ತಂತ್ರಜ್ಞಾನದ ಪ್ರಗತಿಯಿಂದಾಗಿ ಪ್ರತಿಯೊಂದು ಸ್ಮಾರ್ಟ್‌ ಪೋನು ಒಂದು ಸಾರ್ವಜನಿಕ ಪ್ರಕಟಣಾ ವೇದಿಕೆಯಾಗಿ ರೂಪಾಂತರಗೊಂಡಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಇದರಿಂದ ಅಭಿವ್ಯಕ್ತಿಸುವ ಸ್ವಾತಂತ್ರ್ಯ ಸುಲಭವಾಗಿದೆ. ಪ್ರತಿಯೊಬ್ಬರಿಗೂ ಇಂದು ಹೇಳುವ ಆತುರ ಇರುವ ಹಾಗೆ ಕೇಳುವ ವ್ಯವಧಾನವಿಲ್ಲದೆ ಇರುವುದೇ ಇಂದಿನ ಸಂವಹನದ ಲಕ್ಷಣವಾಗಿರುವಂತೆ ತೋರುತ್ತದೆ. ಹೇಳದಿರೆ ತಾಳಲಾರನು ಕವಿಯು ಎನ್ನುವ ಕವಿವಾಣಿಯಂತೆ ವಿಚಾರಗಳನ್ನು ಹಿಂದುಮುಂದು ಯೋಚಿಸದೆ ಮಂಡಿಸುವ ಬರಹಗಾರರ ನಡುವೆ ಮಲ್ಲಿಕಾರ್ಜುನ ಕಡಕೋಳ ಅವರು ತಾವು ಹೇಳಬೇಕಿರುವ ಸಂಗತಿಯ ಎಲ್ಲಾ ಮೊಗ್ಗಲುಗಳನ್ನು ಶೋಧಿಸಿ ಮಂಥನ ಮಾಡಿ ತಮ್ಮ ಅಭಿಪ್ರಾಯವನ್ನು ಮಂಡಿಸಿರುವುದರಿಂದ ಇಲ್ಲಿನ ಬರಹಗಳಿಗೆ ಆಂತರಿಕ ಕಾಂತಿ ಹಾಗೂ ಓದಿಸಿಕೊಳ್ಳುವ ಮೌಲ್ಯ ಬಂದಿದೆ ಎಂದು ತಿಳಿದಿದ್ದೇನೆ. ಈ ಕಟ್ಟಿನಲ್ಲಿ ಮೂರು ಬಗೆಯ ಲೇಖಲನಗಳು ಒಟ್ಟುಗೂಡಿವೆ. ಒಂದು ವರ್ತಮಾನದ ಕನ್ನಡನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ರಾಜಕಾರಣಕ್ಕೆ ಪ್ರತಿಕ್ರಿಯಿಸುವ ಹಲವು ಲೇಖನಗಳಿವೆ. ಎರಡು ಕನ್ನಡ ರಂಗಭೂಮಿ ವರ್ತಮಾನದ ಸ್ಥಿತ್ಯಂತರಗಳು ಹಾಗೂ ಕರ್ನಾಟಕದ ವಿವಿಧ ರಂಗಾಯಣಗಳ ಸ್ಥಿತಿಗತಿಗಳನ್ನು ಕುರಿತ ಲೇಖನಗಳು ಇವೆ. ಮೂರನೆಯದಾಗಿ ಕನ್ನಡ ವೃತ್ತಿರಂಗಭೂಮಿಯ ಒಳ-ಹೊರಗುಗಳ ಸಮೀಕ್ಷೆ ಮತ್ತು ವೃತ್ತಿರಂಗಭೂಮಿಯ ಚರಿತ್ರೆಯನ್ನು ನಿರ್ಮಾಣ ಮಾಡಿ ಮರೆಯಾಗಿ ನಿಂತ ಸಾಧಕರನ್ನು ಪರಿಚಯಿಸುವ ಲೇಖನಗಳು ಸೇರಿವೆ. ಈ ಬರಹಗಳು ಒಟ್ಟಾರೆ ನಮ್ಮ ವರ್ತಮಾನದ ಸಾಂಸ್ಕೃತಿಕ ಚರಿತ್ರೆಯ ಪರೋಕ್ಷ ದಾಖಲೆಯಾಗಿರುವಂತೆ ಓದುಗರ ಅರಿವನ್ನು ಜಾಗ್ರತಗೊಳಿಸುವ ಸಾಕ್ಷಿಪ್ರಜ್ಞೆಯಾಗಿಯೂ ಕೆಲಸ ಮಾಡುವುದೇ ಇವುಗಳ ಹೆಗ್ಗಳಿಕೆಯಾಗಿದೆ.

ಕರ್ನಾಟಕದ ಸಂಸ್ಕೃತಿಯನ್ನು ಕಾಪಿಟ್ಟು ಬೆಳೆಸಬೇಕಾದ ಸರ್ಕಾರ ಮತ್ತು ಆಡಳಿತಶಾಹಿಯ ಅಸೂಕ್ಷ್ಮತೆಗಳನ್ನು ದಿಟ್ಟವಾಗಿ ಪ್ರಶ್ನಿಸುವ ಮಲ್ಲಿಕಾರ್ಜುನ ಅವರು ವ್ಯವಸ್ಥೆಯ ಲೋಪಗಳನ್ನು ಕಟುವಾಗಿ ವಿಮರ್ಶಿಸುವುದಲ್ಲದೆ ಪರ್ಯಾಯಗಳನ್ನು ಸೂಚಿಸುತ್ತಾರೆ. ಆದ ಕಾರಣ ಈ ಲೇಖನಗಳು ಕೇವಲ ಸಮಸ್ಯೆಗಳನ್ನು ಗುರುತಿಸುವ ಪತ್ರಿಕಾ ವರದಿಗಳ ನಿರೂಪಣಾ ಶೈಲಿಯಿಂದ ಪಾರಾಗಿವೆ. ಅಲ್ಲದೆ ಸಾಧ್ಯವಾದಷ್ಟು ಪ್ರಜ್ಞಾಪೂರ್ವಕವಾಗಿ ಪೂರ್ವಗ್ರಹಗಳಿಂದ ದೂರವಿರುವ ಎಚ್ಚರವು ಈ ಬರಹಗಳಿಗೆ ಭಾವತೀವ್ರತೆಯನ್ನು ತಂದುಕೊಟ್ಟಿದೆ. ಸಂವಿಧಾನದ ಕೊಡಮಾಡಿರುವ ಸಾಂಸ್ಕೃತಿಕ ಹಕ್ಕುಗಳನ್ನು ಅಧಿಕಾರಶಾಹಿ ಮತ್ತು ಊಳಿಗಮಾನ್ಯ ಮನಸ್ಥಿತಿಯ ರಾಜಕಾರಣವು ವಿರೂಪಗೊಳಿಸುತ್ತಿರುವ ಪ್ರಚಲಿತ ಪ್ರಕ್ರಿಯೆಗಳನ್ನು ಮಲ್ಲಿಕಾರ್ಜುನ ಅವರು ಎತ್ತಿ ತೋರಿಸುತ್ತಾರೆ. ಕಲೆ ಮತ್ತು ಸಾಹಿತ್ಯದಲ್ಲಿ ನಿರ್ಲಜ್ಜೆಯಿಂದ ತಲೆ ಎತ್ತುತ್ತಿರುವ ಕೋಮುವಾದ ಮತ್ತು ಹುಸಿರಾಷ್ಟ್ರಭಕ್ತಿಗಳು ಸೃಷ್ಟಿಸುತ್ತಿರುವ ವಿಕೃತಿಗಳನ್ನು ಕೆಲವು ಲೇಖನಗಳು ಬೊಟ್ಟುಮಾಡಿ ತೋರಿಸುತ್ತಿವೆ. ಯಾವುದೇ ನಾಡು ಮತ್ತು ಸಮುದಾಯಗಳು ಕೇವಲ ತಾಂತ್ರಿಕ ಪ್ರಗತಿಗಳಿಂದ ಅಭಿವೃದ್ದಿಯನ್ನು ಸಾಧಿಸಬಹುದೇ ಹೊರತು ಜನಕಲ್ಯಾಣವನ್ನು ಅಲ್ಲ ಎಂಬ ತಿಳಿವಳಿಕೆ ಈ ಲೇಖನಗಳ ಹಿಂದೆ ಕ್ರಿಯಾತ್ಮಕವಾಗಿರುವ ತಾತ್ವಿಕ ತಳಹದಿಯಾಗಿದೆ.

ಎರಡನೆಯದಾಗಿ, ಕಡಕೋಳರು ಬರೆದಿರುವ ಕರ್ನಾಟಕ ರಂಗಾಯಣಗಳ ಕುರಿತ ಲೇಖನಗಳು ಅಧ್ಯಯನ ಯೋಗ್ಯವಾದ ಬರಹಗಳಾಗಿವೆ. ತೊಂಬತ್ತರ ದಶಕದಲ್ಲಿ ಬಿ.ವಿ. ಕಾರಂತರ ಕಂಡ ಕರ್ನಾಟಕ ರಂಗಾಯಣದ ಕನಸು “ ಹವ್ಯಾಸಿ ನಾಟಕಗಳ ಪ್ರಯೋಗಶೀಲತೆ ಮತ್ತು ವೃತ್ತಿರಂಗಭೂಮಿಯ ದೃಶ್ಯವೈಭವಗಳ ಸಮ್ಮಿಲವಾಗಿ ನಾಟಕಪ್ರಕ್ರಿಯೆಯು ವೃತ್ತಿಪರತೆಯಿಂದ ಬೆಳಗಬೇಕು-ಶ್ರೇಷ್ಠನಟ-ನಟಿ-ತಂತ್ರಜ್ಞರು ಉದಯಿಸಬೇಕು” ಎನ್ನುವ ಮಹದ್‌ ಉದ್ದೇಶವನ್ನು ಹೊಂದಿತ್ತು. ಈ ಗುರಿ ಸಾಧನೆಗಾಗಿ ಕರ್ನಾಟಕ ಸರ್ಕಾರವು ರಂಗಾಯಣವನ್ನು ಅಂದು ಆರಂಭಮಾಡಿತ್ತು. ಕರ್ನಾಟಕ ಭೌಗೋಳಿಕವಾಗಿ ಹಲವು ಭಿನ್ನ ಕಲೆ ಮತ್ತು ಸಂಸ್ಕೃತಿಗಳಿಗೆ ತಾಯನೆಲೆವಾಗಿರುವುದರಿಂದ ಪಾರಂಪರಿಕ ಜನಪದೀಯ ರಂಗ ಪರಂಪರೆಗಳನ್ನು ವರ್ತಮಾನಗೊಳಿಸುವ ಮಾದರಿಯಲ್ಲಿ ಇನ್ನೂ ಐದು ರಂಗಾಯಣಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಪ್ರಾರಂಭಿಸಲಾಯಿತು. ಇದು ಭಾರತದ ಬೇರಾವ ರಾಜ್ಯದಲ್ಲೂ ನಡೆಯದಿರುವ ವಿಶಿಷ್ಟ ರಂಗಪ್ರಯೋಗವಾಗಿದೆ. ಆದರೆ ಇಂತಹ ಮಹತ್‌ ಗುರಿಯ ಈಡೇರಿಕೆಗಾಗಿ ಹುಟ್ಟಿಕೊಂಡ ರಂಗಾಯಣಗಳು, ಇಂದು ಸರ್ಕಾರ ನಿರ್ಲಕ್ಷಕ್ಕೆ ತುತ್ತಾಗಿರುವ ರೀತಿಯನ್ನು ಕಡಕೋಳ ಅವರು ದಾವಣಗೆರೆ-ಕಲಬರ್ಗಿ-ಮೈಸೂರು ರಂಗಾಯಣಗಳ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ಈ ರಂಗಾಯಣಗಳು ಸಾಂಸ್ಕೃತಿಕವಾಗಿ ಹಿಂನಡೆಯುತ್ತಿರುವ ಸಂಗತಿಗಳನ್ನು ಓದುಗರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದ್ದಾರೆ. ರಂಗಾಯಣಗಳಲ್ಲದೆ ಕನ್ನಡರಂಗಭೂಮಿಯು ಎದುರಿಸುತ್ತಿರುವ ಸವಾಲುಗಳನ್ನು ಕಡಕೊಳರು ತಮ್ಮ ಲೇಖನಗಳಲ್ಲಿ ವಿವರಿಸಿದ್ದಾರೆ. ಕನ್ನಡ ರಂಗಚಳುವಳಿಯನ್ನು ಅಭ್ಯಾಸಮಾಡುವವರಿಗೆ ಈ ಪುಸ್ತಕ ಒಂದು ಉತ್ತಮವಾದ ಆಕರಗ್ರಂಥವಾಗಿದೆ. ಕಲಾವಿದನಾಗುವುದೆಂದರೆ ವಿನಯವಂತ ಮನುಷ್ಯನಾಗುವುದು ಎಂಬ ವ್ಯಾಖ್ಯೆಯನ್ನು ಮಲ್ಲಿಕಾರ್ಜುನ ಅವರು ರೂಪಿಸಿಕೊಂಡಿರುವುದು ಅವರ ಬರವಣಿಗೆಯ ಆರೋಗ್ಯಪೂರ್ಣ ದೃಷ್ಟಿಕೋನವನ್ನು ಸಾಬೀತು ಪಡಿಸುತ್ತದೆ .

ಈ ಹೊತ್ತಿಗೆಯ ಅತ್ಯಂತ ಮಹತ್ವದ ಲೇಖನಗಳು ವೃತ್ತಿರಂಗಭೂಮಿಯ ಕುರಿತಾದ ಬರಹಗಳಾಗಿವೆ. ಬನಶಂಕರಿ ಜಾತ್ರೆಯಲ್ಲಿ ನಡೆಯುವ ವೃತ್ತಿರಂಗ ಭೂಮಿಯ ನಾಟಕಗಳ ಇತಿಹಾಸದಿಂದ ಹಿಡಿದು ಇಂದಿನವರೆಗೆ ರಂಗ ಪ್ರಯೋಗಗಳು ನಡೆದು ಬಂದ ದಾರಿಯ ಸಮೀಕ್ಷೆಯು ರಂಗಾಸಕ್ತರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ. ಜೊತೆಗೆ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳನ್ನು ಜಾತ್ರೆಯ ವ್ಯವಸ್ಥಾಪನ ಸಾಂಸ್ಕೃತಿಕ ದಳ್ಳಾಳಿಗಳು ಹೇಗೆ ಶೋಷಿಸುತ್ತಾರೆ ಎನ್ನುವ ಕಹಿಸಂಗತಿಗಳನ್ನು ಈ ಬರಹ ಅನಾವರಣಗೊಳಿಸುತ್ತದೆ.ಬನಶಂಕರಿಯ ಜಾತ್ರೆಗೆ ಸುತ್ತಲ ನೂರಾರು ಹಳ್ಳಿಗಳಿಂದ ಬರುವ ರಂಗ ರಸಿಕರಿಗೆ ನಾಟಕಗಳ ಮೂಲಕ ಮನರಂಜನೆ ನೀಡುವ ಕಂಪನಿಗಳು ನೇಪಥ್ಯದಲ್ಲಿ ಹೇಗೆ ಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ ಎನ್ನುವುದನ್ನು ಈ ಲೇಖನ ಸಾತ್ವಿಕ ಸಿಟ್ಟಿನ ಮೂಲಕ ನಿರೂಪಿಸಿದೆ.

ಮೂರನೆಯದು ಮತ್ತು ಈ ಸಂಕಲನದ ಮಹತ್ವದ ಬರವಣಿಗೆಯೆಂದರೆ ಕುಂದಗಲ್‌ ಹಣುಮಂತರಾಯರನ್ನು ಕುರಿತ ಎರಡು ಲೇಖನಗಳಾಗಿವೆ.. ಈ ಬರವಣಿಗೆಯ ಔನತ್ಯವು ಕಡಕೋಳರು ಸಾಧಿಸಿಕೊಂಡಿರುವ ನಿರೂಪಣಾ ಕೌಶಲ್ಯಕ್ಕೆ ಉದಾಹರಣೆಯಾಗಿವೆ. ಕನ್ನಡ ರಂಗಭೂಮಿಯ ಶೇಕ್ಸಪಿಯರ್‌ ಎಂದೇ ಖ್ಯಾತರಾಗಿದ್ದ ಕಂದಗಲ್ಲ ಹಣುಮಂತರಾಯರು ಬರೆದ ರಕ್ತರಾತ್ರಿ -ಕುರುಕ್ಷೇತ್ರ-ಅಕ್ಷಯಾಂಬರ-ಚಿತ್ರಾಂಗದ ಮುಂತಾದ ೩೬ ನಾಟಕಗಳ ಮೂಲಕ ಕನ್ನಡ ವೃತ್ತಿನಾಟಕಗಳ ಗುಣಮಟ್ಟವನ್ನು ಎತ್ತರಿಸಿದ ಪ್ರತಿಭಾಶಾಲಿಗಳು. ಕಡು ಬಡತನವನ್ನು ಲೆಕ್ಕಿಸದೆ ರಂಗಭೂಮಿಗೆ ತಮ್ಮ ಜೀವನವನ್ನು ದೀಪದಂತೆ ಉರಿಸಿದವರು ಕಂದಗಲ್ಲರು. ಇಂತಹ ಮೇರು ವ್ಯೆಕ್ತಿತ್ವವೂ ಕೂಡ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನಪಡೆಯುವುದಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯ ರಚನೆಕಾರರು ಯಾವೊತ್ತಿಂದಲೂ ವೃತ್ತಿ ರಂಗಭೂಮಿಯನ್ನು ಅಸಡ್ಡೆಯಿಂದಲೇ ಕಂಡಿದ್ದಾರೆ ಎನ್ನುವ ವಾಸ್ತವವನ್ನು ಕಡಕೋಳರು ಓದುಗರ ಹೃದಯ ಕರಗುವಂತೆ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಿರೂಪಣೆಗಳು ಕಂದಗಲ್ಲರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವಲ್ಲಿ ಯಶ್ವಸಿಯಾಗಿವೆ. ಈ ಎರಡು ಲೇಖನಗಳಲ್ಲಿ ಕಡಕೋಳರ ಭಾಷೆ ರಸಗಂಧಿಯಾಗಿ ಬಳಕೆಯಾಗಿರುವುದು ವೃತ್ತಿರಂಗಭೂಮಿ ಮತ್ತು ಗ್ರಾಮಿಣ ರಂಗಭೂಮಿಗಳ ಬಗ್ಗೆ ಮಲ್ಲಿಕಾರ್ಜುನ ಅವರಿಗೆ ಇರುವ ಪ್ರೀತಿಗೆ ದ್ಯೋತಕವಾಗಿವೆ. ಶಾಂತಕವಿಗಳು-ಏಣಗಿ ಬಾಳಪ್ಪ -ಕೆ.ನಾಗರತ್ನಮ್ಮ-ಜೋಳದರಾಶಿ ದೊಡ್ಡನಗೌಡ-ಮನ್ಸೂರ ಸುಭದ್ರಮ್ಮ -ಎಲಿವಾಳ ಸಿದ್ಧಯ್ಯ ಮುಂತಾದ ಮೇರು ನಟ-ನಟಿಯರ ಪ್ರಸ್ತಾಪ ಬಂದಾಗಲೆಲ್ಲ ಕಡಕೋಳರು ಮನದುಂಬಿ ಹಾಡುವ ಗಾಯಕರಂತೆ ತನ್ಮಯತೆಯಿಂದ ಬರೆಯುತ್ತಾರೆ.

ವೃತ್ತಿರಂಗಭೂಮಿಯ ಕುರಿತು ತೀವ್ರ ಕಾಳಜಿಯಿಂದ ಕಡಕೋಳರು ಬರೆಯುವಾಗಲೂ, ಪ್ರಚಲಿತವಾಗಿ ವೃತಿ ರಂಗದ ಒಳಗೆ ಕುಸಿಯುತ್ತಿರುವ ಆಯಾಮಗಳನ್ನು ದಾಖಲಿಸದೆ ಬಿಡುವುದಿಲ್ಲ. ಬದಲಾಗುತ್ತಿರವ ಸಮಾಜ ವ್ಯವಸ್ಥೆ ಅಂತರಾಷ್ಟ್ರೀಯ ಮಾರುಕಟ್ಟೆಯ ಹಿತಾಸಕ್ತಿಗಳು ಹಿಂಬಾಗಿಲಿನಿಂದ ಪ್ರಜಾರ್ಕಾರಗಳನ್ನು ನಿಯಂತ್ರಿಸುವ ಕಾರ್ಪೋರೇಟ್‌ ಸಂಸ್ಥೆಗಳು ಇವು ಹೇಗೆ ಪ್ರಾದೇಶಿಕ ಭಾಷೆಗಳಿಗೆ ಕುತ್ತಾಗಿ ಪರಿಣಮಿಸಿವೆ ಎಂಬ ಆತಂಕವನ್ನು ಕಡಕೋಳರು ತಮ್ಮ ಬರಹಗಳಲ್ಲಿ ಚಿಂತಿಸಿದ್ದಾರೆ. ʼಕಾವ್ಯಮೀಮಾಂಸೆಗಿಂತ ದೊಡ್ಡದು ಲೋಕಮೀಮಾಂಸೆʼ ಎಂದು ಗುರುತಿಸುವ ಇಲ್ಲಿನ ಬರಹಗಳು ಗ್ರಾಮೀಣ ರಂಗಭೂಮಿ ಹಾಗೂ ವೃತ್ತಿ ಕಂಪನಿಗಳು ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ರಂಗ ಪ್ರೇಕ್ಷಕರು ಮತ್ತು ನಾಟಕದ ನಡುವಣ ಪಾರಂಪರಿಕವಾಗಿದ್ದ ಸಂಬಂಧದ ಪಲ್ಲಟಗಳು ಕಾರಣವಾಗಿರುವುದನ್ನು ಸಂಶೋಧನಾ ಧಾಟಿಯಲ್ಲಿ ವಿವರಿಸುತ್ತಾರೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳಲ್ಲಿ ೨೦ನೆಯ ಶತಮಾನದಲ್ಲಿ ರೂಪಗೊಂಡ ರಂಗಚಟುವಟಿಕೆಗಳನ್ನು ಚಾರಿತ್ರಿಕವಾಗಿ ಪರಿಚಯಿಸುವ ಕಾರ್ಯವನ್ನು ಇಲ್ಲಿನ ಲೇಖನಗಳು ಯಶಸ್ವಿಯಾಗಿ ಮಾಡಿವೆ. ಈ ಎಲ್ಲಾ ಕಾರಣಗಳಿಂದ ೀ ಕಟ್ಟು ಕನ್ನಡರಂಗಭೂಮಿ ಚರಿತ್ರೆ-ವರ್ತಮಾನ -ಮುಂದಿನ ಭವಿಷ್ಯದ ಕುರಿತಾಗಿ ಚಿಂತಿಸಲು ನೆರೆವು ನೀಡುವ ಕೃತಿಯಾಗಿದೆ. ಆಧುನಿಕ ರಂಗಭೂಮಿ ನಗರಕೇಂದ್ರಿತವಾಗಿರುವಂತೆ ವೃತ್ತಿ ರಂಗಭೂಮಿಯಿಂದ ಗ್ರಾಮೀಣ ಯುವಜನರು ದೂರ ಸರಿಯುತ್ತಿರುವ ಕಾರಣಗಳನ್ನು ವಿಶ್ಲೇಷಣೆಗೆ ಒಡ್ಡಿದೆ. ಕನ್ನಡ ರಂಭೂಮಿಯ ಸಾಧನೆಗಳ ಬಗ್ಗೆ ಅಪಾರ ಅಭಿಮಾನವನ್ನು ಪ್ರಕಟಿಸುತ್ತಲೇ ವರ್ತಮಾನದಲ್ಲಿ ರಂಗ ಸಂಸ್ಕೃತಿ ಎದುರಿಸುತ್ತಿರುವ ಆತಂಕಗಳನ್ನು ಇಲ್ಲಿ ಮಂಡಿಸಿರುವುದು ಮಲ್ಲಿಕಾರ್ಜುನ ಅವರ ಬರಹಗಳಿಗೆ ಆಳ ಮತ್ತು ವಿಸ್ತಾರವನ್ನು ನೀಡಿದೆ.

ಕೊನೆಯದಾಗಿ ಕನ್ನಡವೃತ್ತಿ ರಂಗಭೂಮಿಯ ಚರಿತ್ರೆಯ ನಿಕಟ ಪರಿಚಯ ಇರುವ, ಆಧುನಿಕ ಕನ್ನಡ ರಂಗಭೂಮಿಯ ಹಿರಿಮೆ-ಗರಿಮೆಗಳ ಅಪ್ಪಟ ಅಭಿಮಾನಿಯಾಗಿರುವ ಮಲ್ಲಿಕಾರ್ಜುನ ಕಡಕೋಳರು ಇಲ್ಲಿನ ಲೇಖನಗಳನ್ನು ಬರೆಯುವಾಗ ಸಾಂಸ್ಕೃತಿಕ ಪ್ರತಿಪಕ್ಷವಾಗಿ ವಿಮರ್ಶಾ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಮ್ಮೊಮ್ಮೆ ಪವಾಡ ಸದೃಶ್ಯವಾದ ಸಂಗತಿಗಳು ನಡೆಯುತ್ತವೆ. ಅಂತಹ ಈಚೀನ ವಿದ್ಯಮಾನವೆಂದರೆ ಧಾವಣಗೆರೆಯಲ್ಲಿ ಸ್ಥಾಪನೆಯಾಗಿರುವ ವೃತ್ತಿರಂಗಾಯಣದ ನಿರ್ದೇಶಕರಾಗಿ ಮಲ್ಲಿಕಾರ್ಜುನ ಅವರನ್ನೇ ಸರ್ಕಾರ ನೇಮಿಸಿರುವುದು ಕೂಡ ಒಂದು. ಕನ್ನಡ ರಂಗಭೂಮಿಯ ನಡೆ ಎನಾಗಬೇಕು ಎಂದು ಚಿಂತಿಸುತ್ತಿದ್ದ ಕಡಕೋಳರ ಕೈಯಲ್ಲಿಯೇ ಈಗ ಒಂದು ರಂಗಾಯಣವನ್ನು ಮುನ್ನಡೆಸುವ ಹೊಣೆಯನ್ನು ನೀಡಲಾಗಿದೆ. ವ್ಯವಸ್ಥೆಯನ್ನು ಹೊರಗಿಂದ ಸರಿಪಡಿಸಲು ಯತ್ನಿಸುತ್ತಿದ್ದ ಮಲ್ಲಿಕಾರ್ಜುನ ಅವರು ಈಗ ವ್ಯವಸ್ಥೆಯ ಭಾಗವಾಗಿ ತಮ್ಮ ಚಿಂತನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲ ಉತ್ತರಿಸಬೇಕಿದೆ. ದಾವಣಗೆರೆಯ ರಂಗಾಯಣವು ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ತನ್ನ ಬಾಲಗ್ರಹಪೀಡನೆಯಿಂದ ಪಾರಾಗಿ ವೃತಿರಂಗಭೂಮಿಯ ಬೆಳವಣಿಗೆಗೆ ಸಹಕರಿಸಲಿ ಹಾಗೂ ಬಿರುಕುಗೊಂಡಿರುವ ರಂಗಭೂಮಿ ಮತ್ತು ಪ್ರೇಕ್ಷಕರ ಸಂಬಂಧವನ್ನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಅವರಿಗೆ ಸರ್ಕಾರ ಮತ್ತು ರಂಗಭೂಮಿಯ ಸಹಕಾರ ಸಿಗಲಿ ಎಂದು ಹಾರೈಸುತ್ತೇನೆ.

- ಕೆ.ವೈ. ನಾರಾಯಣಸ್ವಾಮಿ

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...