’ವಡ್ಡಾರಾಧನೆ’ - ಕನ್ನಡ ಕಥನದ ಹಿರಿಮೆ


ಕನ್ನಡದ ಮೊದಲ ಗದ್ಯಕೃತಿ ಎಂಬ ಹೆಗ್ಗಳಿಕೆ ಇರುವ 'ವಡ್ಡಾರಾಧನೆ' ಕನ್ನಡದ ಮೊದಲ ಕತೆಗಳ ಗುಚ್ಚವೂ ಹೌದು ಎನ್ನಲಡ್ಡಿಯಿಲ್ಲ. ವಡ್ಡಾರಾಧನೆ ಬಗ್ಗೆ ಅದನ್ನು ಅನುವಾದಿಸಿದವರಾದ ಟಿ.ಕೇಶವಭಟ್ಟ ಅವರು ಬರೆದಿರುವ ಮಾತುಗಳು ಇಲ್ಲಿವೆ. ಇದು 2015ರಲ್ಲಿ ಪ್ರಕಟವಾದ ಆವೃತ್ತಿಗೆ ಬರೆದಿರುವ ಬರಹ.

ಕನ್ನಡ ಸಾಹಿತ್ಯದಲ್ಲಿ `ವಡ್ಡಾರಾಧನೆ’ ಒಂದು ಅಪೂರ್ವ ಗದ್ಯಕೃತಿ. ಇದು ಹತ್ತೊಂಬತ್ತು ಕಥೆಗಳ ಗುಚ್ಚ. ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿ ಪ್ರಾಕೃತನಿಬದ್ಧವಾದ ಒಂದು ಗಾಹೆ (ಗಾಥೆ)ಯಿರುತ್ತದೆ. ಅದು ಕಥೆಯ ಸಾರಸೂಚಿಯಾಗಿರುತ್ತದೆ. ಕಥೆಯ ನಡುವೆಯೂ ಪ್ರಾಕೃತ - ಸಂಸ್ಕೃತ- ಕನ್ನಡ ಭಾಷೆಯ ಪದ್ಯಗಳು ಬರುವುದೂ ಉಂಟು. ಒಟ್ಟಿನಲ್ಲಿ ಪದ್ಯ ಸಂಖ್ಯೆ ಕಡಮೆ, ಗದ್ಯವೇ ಉದ್ದಕ್ಕೂ ಹಾಸುಹೊಕ್ಕಾಗಿದೆ. ಗದ್ಯದ ಭಾಷೆ ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಮಿಶ್ರವಾಗಿ ಸಂಸ್ಕೃತವನ್ನೂ ಸಾಕಷ್ಟು ಬಳಸಿಕೊಂಡು ಕನ್ನಡದ ದೇಶೀಶಬ್ದಗಳ ಸೊಗಸಾದ ಬೆರಕೆಯಿಂದ ಚೆಲುವಾಗಿದೆ. ನಿರೂಪಣೆ ಮನಮುಟ್ಟುವಂತಿದೆ. ಅಡಕವಾದ ನೀತಿ-ತತ್ವವಿಚಾರವಂತೂ ಬಹಳ ಹಿರಿದು.

ಕಾಲದಲ್ಲಿ ವಡ್ಡಾರಾಧನೆಗಿಂತಲೂ ಹಿಂದಿನದಾಗಿ ಕನ್ನಡದ ಮೊತ್ತಮೊದಲ ಉಪಲಬ್ದ ಲಕ್ಷಣಕೃತಿಯಾಗಿರುವ ಕವಿರಾಜಮಾರ್ಗವು (ಕಾಲ ೮೬೦) ಕನ್ನಡದಲ್ಲಿ 'ಗದ್ಯಾಶ್ರಮ ಗುರುತಾಪ್ರತೀತಿಯಂ ಕೆಯೊಂಡ' ಗದ್ಯಕವಿಗಳ ನಾಮೋಲ್ಲೇಖವನ್ನು ಮಾಡಿದೆ. ಅಂಥವರ ಗದ್ಯಕೃತಿ ದೊರೆಯದಿರುವುದರಿಂದ ವಡ್ಡಾರಾಧನೆಗೆ ಈಗ ಪ್ರಥಮ ಗದ್ಯಕೃತಿ ಪಟ್ಟಿ ಸಲ್ಲುವಂತಾಗಿದೆ. ಮೊತ್ತ ಮೊದಲಾಗಿ ಈ ಗದ್ಯಕೃತಿಯನ್ನು ಕಂಡ ಕೆ. ಬಿ. ಪಾಠಕರು ೧೮೮೩ರಲ್ಲಿ ಇಂಡಿಯನ್ ಆಂಟಿಕ್ವೆರಿಯಲ್ಲಿ ಇದರ ಕರ್ತೃ ರೇವಕೋಟ್ಯಾಚಾರ್ಯನೆಂದು ಉಲ್ಲೇಖ ಮಾಡಿದ್ದಾರೆ.

ದಿ. ಆರ್. ನರಸಿಂಹಾಚಾರ್ಯರು ಕರ್ನಾಟಕ ಕವಿಚರಿತೆಯ ಪ್ರಥಮ ಸಂಪುಟದಲ್ಲಿ (೧೯೨೪) ವಡ್ಡಾರಾಧನೆಯ ಕರ್ತ ರೇವಕೋಟ್ಯಾಚಾರ್ಯನೆಂತಲೇ ಬರೆದರು. ೧೯೬೧ರಲ್ಲಿ ಹೊರಬಂದ ಇದೇ ಗ್ರಂಥದ ಪರಿಷ್ಕೃತ ದ್ವಿತೀಯ ಮುದ್ರಣದಲ್ಲಿಕರ್ತೃನಾಮವನ್ನು ಶಿವಕೋಟ್ಯಾಚಾರ್ಯ ಎಂದು ತಿದ್ದುಪಡಿ ಮಾಡಲಾಗಿದೆ. ಹರಿಷೇಣನ ಬೃಹತ್ಕಥಾಕೋಶದ ಸಂಪಾದಕರಾದ ಡಾ. ಆ.ನೇ. ಉಪಾಧ್ಯ ಅವರು ಅದರ ಪ್ರಸ್ತಾವನೆಯಲ್ಲಿ ವಡ್ಡಾರಾಧನೆ' ಎಂಬ ಕನ್ನಡ ಗದ್ಯಕೃತಿಯ ಹೆಸರಿನ ಬಗೆಗೆ ಚರ್ಚಿಸಿ, ಉಪಸರ್ಗ ಕೇವಲಿಗಳ ಕಥೆ' ಎಂಬುದನ್ನೇ ಪುರಸ್ಕರಿಸಿದ್ದಾರೆ. ಅಡಕವಾದ ಕಥೆಗಳ ವಿಷಯದ ದೃಷ್ಟಿಯಿಂದ ಈ ಹೆಸರನ್ನು ಒಪ್ಪಿರುವ ಡಿ.ಎಲ್. ನರಸಿಂಹಾಚಾರ್ಯರು ಈ ಕೃತಿಯನ್ನು ಐದು ಮೂಲಪ್ರತಿಗಳಿಂದ ಸಂಪಾದಿಸಿ, ಕವಿಕೃತಿನಾಮಗಳ ಒಂದು ಇತ್ಯರ್ಥಕ್ಕೆ ಬಂದು, ವಡ್ಡಾರಾಧನೆ ಎಂಬುದು ಕೃತಿನಾಮವೆಂದೂ ಶಿವಕೋಟ್ಯಾಚಾರ್ಯ ಎಂಬುದು ಕರ್ತನಾಮವೆಂದೂ ತೀರ್ಮಾನ ಮಾಡಿದ್ದಾರೆ.

ಕನ್ನಡ ವಡ್ಡಾರಾಧನೆಯ ಕರ್ತೃವಿನ ಕಾಲದ ಕುರಿತೂ ಬಹಳ ಚರ್ಚೆ ನಡೆದಿದೆ. ಮಂಜೇಶ್ವರ ಗೋವಿಂದ ಪೈಯವರು ಈ ಕೃತಿಯನ್ನು ಭಾಷಾದೃಷ್ಟಿಯಿಂದ ವಿವೇಚಿಸಿ “ನನಗಾದರೂ ಕನ್ನಡ ವೊಡ್ಡಾರಾಧಣವು ಕ್ರಿ.ಶ. ಆರನೆಯ ಶತಮಾನಕ್ಕಿಂತ ಈಚೆಯದಲ್ಲವೆಂದು ತೋರುತ್ತದೆ' ಎಂದಿದ್ದಾರೆ. ಎಸ್. ಶ್ರೀಕಂಠಶಾಸ್ತ್ರಿಗಳು ಇದನ್ನು ಏಳನೆಯ ಶತಮಾನದ ರಚನೆ ಎಂದಿದ್ದಾರೆ. ಗುಣಭದ್ರಾಚಾರ್ಯರ ಗ್ರಂಥದ ಪದ್ಯಗಳು ಇದರಲ್ಲಿ ಬರುವುದರಿಂದ ಇದು ಕ್ರಿ.ಶ. ೮೫೦ಕ್ಕೆ ಹಿಂದಿನದಲ್ಲವೆಂದು ಕೆ.ಜಿ. ಕುಂದಣಗಾರರು ಅಭಿಪ್ರಾಯಪಟ್ಟರು. ಡಿ.ಎಲ್.ಎನ್. ಅವರು ಇವೆಲ್ಲ ಕಾಲವಿಚಾರ ಸೂಚಿಗಳನ್ನೂ ಲಕ್ಷಿಸಿ, ಇದು ಪಂಪಭಾರತ (೯೪೧)ಕ್ಕಿಂತ ಹಿಂದಿನ ರಚನೆಯೆಂದೂ ಇದರ ರಚನಾಶಾಲಾವಧಿ ೮೯೮ - ೯೪೧ ಎಂದೂ ಆದುದರಿಂದಲೇ, ಈ ಗ್ರಂಥಕ್ಕೆ ೯೨೦ ಎಂಬ ಕಾಲವನ್ನು ಕೊಡಬಹುದೆಂದೂ ಹೇಳಿದ್ದಾರೆ.

“ವಡ್ಡಾರಾಧನೆ' ಎಂಬ ಶಬ್ದದ ಮೂಲ ವೃದ್ಧಾರಾಧನೆ' ಅಥವಾ 'ಬೃಹದಾರಾಧನೆ” ಎಂದು ಅದರ ನಿಷ್ಪತ್ತಿಯಿಂದ ತಿಳಿಯಬಹುದು. ಗೋವಿಂದ ಪೈಗಳು 'ಬೃಹದಾರಾಧನ ಎಂಬುದರ ಪ್ರಾಕೃತ ರೂಪವೆಂದು ವೊಡ್ಡಾರಾಧಣ' ಎಂಬ ಶಬ್ದರೂಪವನ್ನು ಮಾನ್ಯಮಾಡಿಕೊಂಡಿದ್ದಾರೆ. ವೃದ್ಧ+ಆರಾಧನೆ ಎನ್ನುವಾಗ ಆದರ ಶಬ್ದಾರ್ಥವನ್ನು ಲಕ್ಷಿಸಬೇಕು. 'ವೃದ್ಧ’ ಎಂಬುದಕ್ಕೆ ವಯಸ್ಸಾದವನು (ಮುದುಕ), ಪೂರ್ಣವಾಗಿ ಬೆಳೆದವನು, ಪೂರ್ವಕಾಲದವನು, ಗೌರವಾರ್ಹ, ಶ್ರೇಷ್ಠ, ಜ್ಞಾನಿ, ಯತಿ, ಮಹಾಪುರುಷ ಎಂಬ ಅರ್ಥಗಳಿವೆ. ಹಾಗೆಯೇ 'ಆರಾಧನೆ' ಎಂಬುದಕ್ಕೆ ಸೇವೆ, ಪೂಜೆ, ಆದರಣೆ ಎಂಬಿವು ಸಾಮಾನ್ಯಾರ್ಥಗಳು, ಜೈನ ಸಿದ್ಧಾಂತದ ದೃಷ್ಟಿಯಿಂದ ಸಮ್ಯಗ್ಧರ್ಶನ, ಸಮ್ಯಗ್ ಜ್ಞಾನ, ಸಮ್ಯಕ್ ಚಾರಿತ್ರ, ಸಮ್ಯಕ್ ತಪಸ್ಸು – ಈ ನಾಲನ್ನು ಸಾಧಿಸುವುದೇ 'ಆರಾಧನೆ'. ವೃದ್ಧರು (ಜೈನಯತಿಗಳು, ಜ್ಞಾನಿಗಳು ಅಥವಾ ಮಹಾಪುರುಷರು) ಮಾಡಿದ ಸಫಲವಾದ ಆರಾಧನೆಗಳೇ ಈ ಗ್ರಂಥದ ಎಲ್ಲ ಕಥೆಗಳ ಸಾರವಾದುದರಿಂದ 'ವಡ್ಡಾರಾಧನೆ' ಈ ಗ್ರಂಥಕ್ಕೆ ಒಪ್ಪುವ ಹೆಸರಾಗಿದೆ,

ಈ ಕಥಾನಾಯಕರು ಮಹಾಪುರುಷರು. ನಾಲ್ಕು ಬಗೆಯ ಉಪಸರ್ಗ(ತಪೋವಿಘ್ನ)ಗಳನ್ನು ಸಹಿಸಿದವರು. ಹಸಿವು, ಬಾಯಾರಿಕೆ ಮೊದಲಾದ ಇಪ್ಪತ್ತೆರಡು ಬಗೆಯಾಗಿರುವ ಪರೀಷಹ(ತೊಂದರೆ)ಗಳನ್ನು ಸೈರಿಸಿ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಬಾಹ್ಯ ಮತ್ತು ಆಂತರಿಕ ಪರಿಗ್ರಹಗಳನ್ನು ತ್ಯಜಿಸಿದವರು. ಆರು ವಿಧದ ಬಾಹ್ಯತಪಸ್ಸನ್ನೂ ಆರು ಬಗೆಯ ಅಭ್ಯಂತರ ತಪಸ್ಸನ್ನೂ ಆಚರಿಸಿದವರು. ಇಂತಹ ತಪಸ್ಸಾಧನೆಯೇ ತಪಸ್ಸಿನ ಆರಾಧನೆ. ಜೈನಸಿದ್ಧಾಂತಗಳಲ್ಲಿ ದೃಢವಾದ ವಿಶ್ವಾಸ-ಅಭಿರುಚಿಗಳನ್ನಿಡುವುದು ದರ್ಶನಾರಾಧನೆ. ಸಮ್ಯಗ್ ಜ್ಞಾನವನ್ನು ಪಡೆಯಲು ಮಾಡುವ ಸಾಧನೆ ಜ್ಞಾನಾರಾಧನೆ. ಪಂಚಮಹಾವ್ರತ, ಪಂಚಸಮಿತಿ, ತ್ರಿಗುಪ್ತಿಗಳನ್ನು ಭಾವಶುದ್ಧಿಯಿಂದ ನಡೆಸುವುದು ಚಾರಿತಾರಾಧನೆ. ಈ ನಾಲ್ಕು ಬಗೆಯ ಆರಾಧನೆಗಳನ್ನೆಸಗಿದ ಮಹಾಪುರುಷರ ಕಥೆಗಳು ಇರುವುದರಿಂದ 'ವಡ್ಡಾರಾಧನೆ' ಎಂಬುದು ಸಾರ್ಥಕವಾದ ಹೆಸರಾಗಿದೆ.

ಈ ಕನ್ನಡ ವಡ್ಡಾರಾಧನೆಯ ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿ ಬರುವ ಕಲಾಸಾರ ಸೂಚಿಯಾಗಿರುವ ಗಾಹೆಗಳು ಪ್ರಾಕೃತದಲ್ಲಿ 'ಭಗವತಿ ಆರಾಧನಾ' ಅಥವಾ 'ಮೂಲಾರಾಧನಾ' ಎಂಬ ಗ್ರಂಥದಲ್ಲಿ ಬರುವ ’ಕವಚ' ಎಂಬ ಭಾಗದ ೧೫೯ರಿಂದ ೧೫೫೭ರವರೆಗಿನ ಹತ್ತೊಂಬತ್ತು ಗಾಹೆಗಳು ಆಗಿವೆಯೆಂದು ತಿಳಿದುಬಂದಿದೆ.

ಕೃತಿಸ್ವರೂಪ ದೃಷ್ಟಿಯಿಂದಲೂ ಕನ್ನಡದ ವಡ್ಡಾರಾಧನೆಗೆ ಮಹತ್ವವಿದೆ. ಕನ್ನಡದಲ್ಲಿ ಗದ್ಯ ಪದ್ಯ ಮಿಶ್ರವಾದ ಚಂಪೂಕಾವ್ಯ ರಚನೆ ಪಂಪನಿಗಿಂತ (೯೪೧) ಹಿಂದೆಯೇ ಇದ್ದಿತೆಂದು ವಿದ್ವಾಂಸರು ಊಹಿಸುತ್ತಾರೆ, ಆದರೆ ಕವಿರಾಜ ಮಾರ್ಗದಲ್ಲಿ (೮೬೦) ಚಂಪು ಎಂಬ ಶಬ್ದದ ಉಲ್ಲೇಖವೇ ಇಲ್ಲ, ಚಂಪೂಕವಿಗಳನ್ನು ಹೇಳಿಲ್ಲ. ಆದರೆ 'ಗದ್ಯಕಥೆ' ಎಂಬ ಕೃತಿರೂಪವನ್ನು ಹೇಳಿದೆ, ಅದು ಗದ್ಯ ಪದ್ಯ ಸಮ್ಮಿಶ್ರವಾದುವೆಂದೂ ತಿಳಿಸಿದೆ (೧-೨೭), ಮುಂದೆ 'ಉದಯಾದಿತ್ಯಾಲಂಕಾರ'ದಲ್ಲಿ (೧೧೫೦) ಗದ್ಯ ಪದ್ಯ ಮಿಶ್ರಕಾವ್ಯವನ್ನು ಚಂಪೂವೆಂದು ಹೇಳಿ "ಕನ್ನಡದೊಳ್ ಸಂಪಕ್ಕ
ಸನ್ನುತ ತರ ವಚನಕಾವ್ಯಮೆನಿತುಂ' ಎಂದು ಹೇಳಿದೆ.

ಇಲ್ಲಿ ಹೇಳಿದ 'ವಚನಕಾವ್ಯ' ಎಂಬುದು ಗದ್ಯಕಥೆಯನ್ನೇ ಲಕ್ಷಿಸಿ ಹೇಳಿದಂತಿದೆ. 'ಗದ್ಯಕಥೆ' ಎಂಬ ರಚನಾ ಸಂಪ್ರದಾಯವು ಕವಿರಾಜ ಮಾರ್ಗಕ್ಕಿಂತ ಹಿಂದೆಯೇ ಕನ್ನಡದಲ್ಲಿ ಪ್ರಚಲಿತವಿತ್ತೆಂದು ತೋರುತ್ತದೆ. ಅದರಲ್ಲಿ ಗದ್ಯವೇ ಅಧಿಕವಾಗಿದ್ದು ಪದ್ಯ ಸಂಖ್ಯೆ ಅತ್ಯಂತವಾಗಿ ಕಡಿಮೆಯಿದ್ದು ಕಥೆಯೇ ಪ್ರಧಾನವೆಂದು ತೀರ್ಮಾನಿಸಬಹುದು. ವಡ್ಡಾರಾಧನೆ ಅಂತಹ 'ಗದ್ಯಕಥೆ'ಗಳಲ್ಲಿ ಒಂದೆಂದು ಭಾವಿಸುವುದು ತಪ್ಪಲ್ಲ.

ವಡ್ಡಾರಾಧನೆಯಲ್ಲಿ ಕವಿಯ ಕಥನಕೌಶಲ ಚೆನ್ನಾಗಿ ವ್ಯಕ್ತವಾಗಿದೆ. ಸಹಜತೆ ಸರಳತೆಗಳೆರಡೂ ಎದ್ದುಕಾಣುವ ಇದರ ರಚನೆಯಲ್ಲಿ ವರ್ಣನೆಗಳು ಹೆಚ್ಚಾಗಿಲ್ಲ. ನೀತಿ-ತತ್ವ-ತಪಸ್ಸಾಧನೆ-ಸಮ್ಯಕ್ಕೆಗಳನ್ನು ಪ್ರತಿಪಾದಿಸುವುದೇ ಕವಿಯ ಉದ್ದೇಶ. ಈ ಕಥಾ ರಚನೆಯ ಒಂದೆರಡು ವಾಕ್ಯಗಳನ್ನು ದಾಟುವಾಗಲೇ ನಾವು ಹಲವು ವ್ಯಕ್ತಿಗಳ ಘಟನೆಗಳ ಪರಿಚಯ ಮಾಡಿಕೊಂಡು ಬೇಗ ಬೇಗನೇ ಮುಂದೆ ಸಾಗುತ್ತೇವೆ. ಅಲ್ಲಲ್ಲಿ ಬರುವ ಪಾತ್ರ ಸಂವಾದಗಳನ್ನು ನೋಡಿದಾಗ ಅವರು ನಮ್ಮ ಮುಂದೆಯೇ ಮಾತಾಡುತ್ತಿರುವರೋ ಎಂಬಂತೆ ನಾವು ಆ ಮಾತುಗಳಿಗೆ ಹತ್ತಿರದವರಾಗುತ್ತೇವೆ. ಕಥೆ ದೊಡ್ಡದಿರಲಿ ಚಿಕ್ಕದಿರಲಿ, ಅದರ ತಳಪಾಯ ಒಂದೇ ವಿಧ, ಕಥಾನಾಯಕನು ತಪೋಮಗ್ನನಾಗಿ ಪೂರ್ವ ವೈರಿಯೊಡ್ಡಿದ ಅಸಹ್ಯವೇದನೆಗಳನ್ನು ಶಾಂತಚಿತ್ತತೆಯಿಂದಲೇ ಅನುಭವಿಸಿ, ಸದ್ಗತಿ ಪಡೆಯುವುದು. ದೊಡ್ಡ ಕಥೆಯಲ್ಲಿ ಹಲವು ಪೂರ್ವಜನ್ಮಗಳ ಸ್ವಾರಸ್ಯಪೂರ್ಣ ಕಥೆಗಳೂ ತೆಗೆದುಕೊಂಡಿರುತ್ತವೆ.

ಎಲ್ಲ ಕಥೆಗಳು ಆಯಾ ಸನ್ನಿವೇಶದಲ್ಲಿ ಅಂಟಿಕೊಂಡಿದ್ದರೂ ಅವು ಕಥೆಯ ಸ್ವಾರಸ್ಯಕ್ಕಾಗಲೀ ಗತಿಗಾಗಲೀ ಬಾಧಕವಾಗಿಲ್ಲ. ವಡ್ಡಾರಾಧನೆಯ ಕಥೆಗಳಲ್ಲಿ ಐತಿಹಾಸಿಕ ಮೌಲ್ಯವುಳ್ಳವೂ ಕೆಲವಿದೆ. ಭದ್ರಬಾಹು ಭಟಾರರಿಸಿಯ ಕಥೆ, ಚಿಲಾತಪುತ್ರನ ಕತೆ, ಗುರುದತ್ತ ಭಟಾರರ ಕಥೆ ಇವು ಅಂಥವು.

MORE FEATURES

ಹೊಸನೆಲೆಯಲ್ಲಿ ಕಂಡಿರಿಸಿದ ಕನ್ನಡದ ವಿವೇಕ

30-09-2024 ಬೆಂಗಳೂರು

"ಅಧ್ಯಯನದ ಉದ್ದೇಶ ಮತ್ತು ಮಹತ್ವ ಎಂಬುವ ಮೊದಲ ಅಧ್ಯಾಯದಲ್ಲಿ ಇರುವ ಭಾಷೆಯನ್ನು, ಭಾಷಾ ಸಂಸ್ಕೃತಿಯ ಸಾಂಸ್ಕೃತ...

ದೇಶದಲ್ಲಿ ವಿದ್ಯುತ್ ಇಲಾಖೆಯೊಂದನ್ನು ಹುಟ್ಟುಹಾಕಿದ ಮೊದಲ ಸಂಸ್ಥಾನ ಮೈಸೂರು

30-09-2024 ಬೆಂಗಳೂರು

“ವಿದ್ಯುತ್ ಎಂಬ ವಿಸ್ಮಯದ ಹಿನ್ನೆಲೆಯೇ ಗೊತ್ತಿಲ್ಲದ ಆ ಕಾಲಘಟ್ಟದಲ್ಲಿ ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾದ ಆ ತ...

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದುರ್ಗತಿಯ ಮೇಲೆ ಬೆಳಕು ಚೆಲ್ಲುವ ಕೃತಿಯಿದು

30-09-2024 ಬೆಂಗಳೂರು

"ಈ ಗ್ರಂಥವು ಮಾಧ್ಯಮದಲ್ಲಿ ಮಹಿಳೆ ಎಂಬ ವಿಷಯದ ನೆಪದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಲೈಂಗಿಕ, ಸಾಂಸ್ಕೃತಿಕ ಶೋಷ...