ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...


ನಾವು ನತದೃಷ್ಟರು, ದುರಾದೃಷ್ಟವಂತರು ಎಂಬುದು ಹಲವರ ನೋವಿನ ನುಡಿ. ಆದರೆ, ನಮಗಿಂತ ಹೆಚ್ಚು ನೋವುಂಡವರು, ಅಸಹಾಯಕ ರು ನಮ್ಮ ಸುತ್ತಲೂ ಇರುತ್ತಾರೆ, ಮತ್ತು ಅಂಥವರ ಪೈಕಿ ಕೆಲವರು ಅನನ್ಯ ಸಾಧನೆಯ ಮೂಲಕ, ಕರುಣಾರ್ದ್ರ ಸೇವೆಯ ಮೂಲಕ, ನಿಷ್ಕಲ್ಮಶ ಪ್ರೀತಿಯ ಮೂಲಕ ಜಗವ ಗೆದ್ದಿರುತ್ತಾರೆ. ಅಂಥವರನ್ನು ಕಂಡಾಗ ಮತ್ತೆ ನೆನಪಾಗುವುದು ಅದೇ ಹಾಡು: ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...ಎನ್ನುತ್ತಾರೆ ಪತ್ರಕರ್ತ, ಲೇಖಕ ಎ. ಆರ್‌. ಮಣಿಕಾಂತ್. ಅವರು ತಮ್ಮ ಹೊಸ ಕೃತಿ ಮತ್ತೆ ಹಾಡಿತು ಕೋಗಿಲೆಯಲ್ಲಿ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ..

ಹೌದಲ್ಲವಾ? ಒಂದು ಯಶಸ್ಸಿಗಾಗಿ, ಗೆಲುವಿಗಾಗಿ, ಸಂಭ್ರಮಕ್ಕಾಗಿ, ಸಂತಸದ ಕ್ಷಣಕ್ಕಾಗಿ ಹಗಲಿರುಳು ದುಡಿದಿರುತ್ತೇವೆ. ದಣಿದಿರುತ್ತೇವೆ. ನಾವು ಅಂದುಕೊಂಡಂತೆಯೇ ಆಗಿಬಿಟ್ಟರೆ, ಆನಂತರದಲ್ಲಿ ಹೇಗೆಲ್ಲ ಬದುಕಬಹುದು ಎಂದು ಕನಸು ಕಂಡಿರುತ್ತೇವೆ. ಗೆಲುವೆಂಬ ಆ ಗಂಧದ ಹಾರ ನಮ್ಮ ಕೊರಳಿಗೆ ಬೀಳಲಿ ಎಂದು ಬಯಸುತ್ತೇನೆ. ಅದಕ್ಕಾಗಿ ಪ್ರಾರ್ಥಿಸಿರುತ್ತೇವೆ. ಪೂಜೆ ಮಾಡಿಸುತ್ತೇವೆ. ಹರಕೆ ಕಟ್ಟಿರುತ್ತೇವೆ. ಹಾರೈಕೆಗೆ ತಲೆಯೊಡ್ಡಿರುತ್ತೇವೆ. ನಮ್ಮ ಪ್ರಯತ್ನ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಪಣಕ್ಕಿಟ್ಟು ಕಾದಿರುತ್ತೇವೆ. ಅಂಥ ಸಂದರ್ಭದಲ್ಲಿ, ಗೆಲುವು ಕೈ ಜಾರಿ, ಸೋಲೆಂಬುದು ಹೆಗಲೇರಿ ಕೂತುಬಿಡುತ್ತದೆ. 

ಮನಸ್ಸು ಕದಡಿ ಹೋಗುವುದು, ಆತ್ಮವಿಶ್ವಾಸದ ಬಲೂನು ಒಡೆದುಹೋಗುವುದೇ ಆಗ. ನಮಗೆ ದೈವಬಲವಿಲ್ಲ. ಅದೃಷ್ಟವೂ ಇಲ್ಲ. ಬಯಸಿದ್ದು ಸಿಗುವುದಿಲ್ಲ. ಸೋಲುಗಳಿಂದ ಮುಕ್ತಿಯಿಲ್ಲ. ಎಸ್, ನಮ್ಮ ಪಾಲಿಗೆ ಒಳ್ಳೆಯ ದಿನಗಳೇ ಇಲ್ಲ. ಪರಿಶ್ರಮ, ತಪನೆ, ಶ್ರದ್ಧೆ- ಯಾವುದಕ್ಕೂ ಅರ್ಥವಿಲ್ಲ ಅನ್ನಿಸಿಬಿಡುತ್ತದೆ. ಸಂಕಟ- ಹತಾಶೆ ಜೊತೆಯಾಗುತ್ತದೆ. ಅಂಥ ಸಂದರ್ಭದಲ್ಲಿ ದುಡುಕಬಾರದು, ಹೆದರಬಾರದು, ತಾಳ್ಮೆ ಕಳೆದುಕೊಳ್ಳಬಾರದು. ತಾಳು ಮನವೇ ತಾಳು ಎಂದು ತನುವ ಸಂತೈಸಿಕೊಂಡು ಹೆಜ್ಜೆ ಮುಂದಿಡಬೇಕು. ನೆನಪಿರಲಿ: ಬೆಟ್ಟ ಹತ್ತುವಾಗ ಆಯಾಸವಾಗುತ್ತದೆ. ಕಾಲು ನೋಯುತ್ತದೆ. ನೆತ್ತಿ ಸುಡುತ್ತದೆ. ಹೇಗೋ ಸಾವರಿಸಿಕೊಂಡು 620 ನೇ ಮೆಟ್ಟಿಲು ದಾಟಿದ ನಂತರವಷ್ಟೇ- ಶ್ರವಣಬೆಳಗೊಳದಲ್ಲಿ ಬಾಹುಬಲಿಯ ದರ್ಶನವಾಗುತ್ತದೆ! ಒಂದೊಂದು ಮೆಟ್ಟಿಲು ಹತ್ತಿದಾಗಲೂ ಸೋಲನ್ನು ಸೋಲಿಸಿದ್ದೇವೆ ಅಂದುಕೊಳ್ಳುವುದು ಜಾಣತನ.

****

ನಾವು ನತದೃಷ್ಟರು, ದುರಾದೃಷ್ಟವಂತರು ಎಂಬುದು ಹಲವರ ನೋವಿನ ನುಡಿ. ಆದರೆ, ನಮಗಿಂತ ಹೆಚ್ಚು ನೋವುಂಡವರು, ಅಸಹಾಯಕ ರು ನಮ್ಮ ಸುತ್ತಲೂ ಇರುತ್ತಾರೆ, ಮತ್ತು ಅಂಥವರ ಪೈಕಿ ಕೆಲವರು ಅನನ್ಯ ಸಾಧನೆಯ ಮೂಲಕ, ಕರುಣಾರ್ದ್ರ ಸೇವೆಯ ಮೂಲಕ, ನಿಷ್ಕಲ್ಮಶ ಪ್ರೀತಿಯ ಮೂಲಕ ಜಗವ ಗೆದ್ದಿರುತ್ತಾರೆ. ಅಂಥವರನ್ನು ಕಂಡಾಗ ಮತ್ತೆ ನೆನಪಾಗುವುದು ಅದೇ ಹಾಡು: ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...

ಅಂದಹಾಗೆ, ಇದು ನನ್ನ ಹತ್ತನೇ ಪುಸ್ತಕ. ಪ್ರತಿಯೊಂದು ಪುಟವನ್ನೂ ತುಂಬ ಶ್ರದ್ಧೆಯಿಂದ ರೂಪಿಸಿದ್ದೇವೆ. ಇಲ್ಲಿನ ಬರಹಗಳು ಕೃಷ್ಣನ ಕೊಳಲ ನಾದದಂತೆ ಎಲ್ಲರಿಗೂ ಇಷ್ಟವಾಗಲಿ. ಮುದ್ದುಕಂದನ ನಗೆಯಂತೆ ಎಲ್ಲರ ಮನ ಗೆಲ್ಲಲಿ, ಎಂದು ಪ್ರಾರ್ಥನೆ.

****

ಕೋಗಿಲೆ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದಿಲ್ಲ. ಕಾಗೆ ಇಲ್ಲದ ಸಂದರ್ಭ ನೋಡಿಕೊಂಡು ಅದರ ಗೂಡಲ್ಲಿ ಮೊಟ್ಟೆಯಿಟ್ಟು ಬಂದುಬಿಡುತ್ತದೆ. ಈ ಕಪಟ ಗೊತ್ತಿಲ್ಲದ ಕಾಗೆ, ಕೋಗಿಲೆಯ ಮೊಟ್ಟೆಗೂ ಕಾವು ಕೊಟ್ಟು ಮರಿ ಮಾಡಿ ಅದನ್ನು ಸಾಕುತ್ತದೆ. ಮುಂದೆ ಸತ್ಯ ಗೊತ್ತಾದಾಗ, ಕೋಗಿಲೆಯ ಮರಿಯನ್ನು ಗೂಡಿಂದ ಆಚೆ ತಳ್ಳುತ್ತದೆ. ಇದು ನಮಗೆಲ್ಲಾ ಗೊತ್ತಿರುವ ಪ್ರಕೃತಿ ರಹಸ್ಯ, ಕಣ್ಣೆದುರಿನ ವಾಸ್ತವ. ಹೀಗೆ ದಿಢೀರನೆ ಬೀದಿಗೆ ಬೀಳುತ್ತದಲ್ಲ; ಅದು ಕೋಗಿಲೆಯ ಬದುಕಿನ ಮೊದಲ ಸೋಲು. ನಂತರದ ಅದೆಷ್ಟೋ ದಿನಗಳನ್ನು ತಬ್ಬಲಿತನ, ಅಸಹಾಯಕತೆ, ಅನಾಥಭಾವ, ಕಷ್ಟ, ಕಣ್ಣೀರು, ನೋವು, ನಿಟ್ಟುಸಿರಿನ ಜೊತೆಗೇ ಕಳೆಯುವ ಕೋಗಿಲೆಯ ಬದುಕಲ್ಲಿ ಕಡೆಗೂ ' ಬಂಗಾರದ ಕ್ಷಣವೊಂದು' ಬಂದುಬಿಡುತ್ತದೆ. ಮಾಮರದಲ್ಲಿ ಚಿಗುರು ಕಾಣಿಸಿದ ಕ್ಷಣದಿಂದಲೇ ಕೋಗಿಲೆಯ ಕೊರಳು ಸಂಗೀತದ ಆಲಯವಾಗುತ್ತದೆ. ಕುಹೂ...ಕುಹೂ ದನಿಯಲ್ಲಿ ಸಪ್ತಸ್ವರ ಕೇಳಿಸುತ್ತದೆ. ಆ ಸುಮದುರ ದನಿಗೆ ಜಗತ್ತು ತಲೆದೂಗುತ್ತದೆ. ಕುಣಿದು, ನಲಿದು, ಮಣಿದು ಕೃತಜ್ಞತೆ ಸಲ್ಲಿಸುತ್ತದೆ. ನಿರಂತರ ಪರಿಶ್ರಮ ಮತ್ತು ಹೋರಾಟಕ್ಕೆ ಬಳುವಳಿಯಾಗಿ ದೊರೆಯುವ ಗೆಲುವು ಎಂಬ ಅಮೃತ ಸಿಂಚನಕ್ಕೆ ಸಿಗುವ ಗೌರವ ಇದು.

ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಲೇ ಅಂಥದೊಂದು ಅಮೃತ ಘಳಿಗೆಗೆ ಹಂಬಲಿಸಿದ, ಸೋಲುಗಳ ಸರಪಳಿಯನ್ನು ತುಂಡರಿಸಿ ಗೆಲುವಿನ ಗಾಳಿಪಟವನ್ನು ಮುಗಿಲಿಗೆ ಹಾರಿಬಿಟ್ಟ, ಅಂತಃಕರಣವನ್ನೇ ಉಸಿರಾಗಿಸಿಕೊಂಡ ಹೃದಯವಂತರ ಕಥೆಗಳು ಈ ಪುಸ್ತಕದ ಪುಟಗಳನ್ನೂ ತುಂಬಿಕೊಂಡಿವೆ. ಆ ಕೋಗಿಲೆಗಳ ಬದುಕಿನ ಹಾಡು ನಮ್ಮೊಳಗೂ ಉಳಿಯಲಿ.

ಎ. ಆರ್. ಮಣಿಕಾಂತ್,ಬೆಂಗಳೂರು
ಎ. ಆರ್‌. ಮಣಿಕಾಂತ್ ಅವರ ಲೇಖಕ ಪರಿಚಯ...

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...