ಜಯಶ್ರೀ ಭಟ್ ಅವರ ಅನುವಾದ ಅದೆಷ್ಟು ಸೊಗಸೆಂದರೆ ಈಡಿತ್ ನಮ್ಮೊಳಗೆ ಒಬ್ಬಳಾಗಿ ಇಳಿಯುವಷ್ಟು ಎನ್ನುತ್ತಾರೆ ಲೇಖಕಿ ಸುಧಾ ಆಡುಕಳ. ಲೇಖಕಿ ಜಯಶ್ರೀ ಭಟ್ ಅವರ ಅನುವಾದಿತ ಕೃತಿ ದಿ ಚಾಯ್ಸ್ : ಈಡಿತ್ ಎಗರ್ ಅವರ ಆತ್ಮಕಥನ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..
ಓದಿದ ಪುಸ್ತಕಗಳ ಬಗೆಗೆಲ್ಲಾ ನಾಲ್ಕು ಸಾಲು ಬರೆಯುವುದು ವರ್ಷಗಳ ಹಿಂದಿನ ರೂಢಿಯಾಗಿತ್ತು. ಆದರೆ ಇತ್ತೀಚೆಗೆ ಓದಿದ ಪುಸ್ತಕಗಳ ಬಗ್ಗೆ ಬರೆಯುತ್ತಲೇ ಇರುವುದೂ ಒಂದು ರೀತಿಯ ಹೆಚ್ಚುಗಾರಿಕೆಯ ಪ್ರದರ್ಶನವೆನಿಸಿಬಿಟ್ಟಿತು. ಜತೆಯಲ್ಲಿ ಯಾಕೆ ಬರೆಯುವುದು? ಓದಿ ಖುಶಿಪಟ್ಟರಾಯಿತಲ್ಲ ಅನಿಸುತ್ತಿತ್ತು. ಆದರೆ ಈ ಪುಸ್ತಕ ಓದಿದ ಮೇಲೆ ಬರೆಯದಿರಲಾರೆ.
ಹಿಟ್ಲರನ ಬಗೆಗಿನ ಕತೆಗಳು ನಮ್ಮ ಮನೆಯಲ್ಲಿ ಮಕ್ಕಳ ಬಾಯಲ್ಲಿ ಆಗಾಗ ಕೇಳುತ್ತಲೇ ಇರುತ್ತವೆ. ಜನಾಂಗೀಯ ದ್ವೇಷದಿಂದ ಲಕ್ಷಾಂತರ ಜನರ ಸಾವಿಗೆ ಕಾರಣನಾದ ಅವನ ಜೀವನವೂ ರೋಚಕತೆಗಳಿಂದ ತುಂಬಿವೆ. ಅದೇನು ಆಕರ್ಷಣೆಯೋ? ಬೇಡವೆಂದರೂ ಅವನ ಹಿಂಸೆಯ ಕತೆಗಳ ಬಗ್ಗೆ ಮಕ್ಕಳು ಚರ್ಚಿಸುತ್ತಲೇ ಇರುತ್ತಾರೆ. ಅವನ ಕಾನಸ್ಂಟ್ರೇಶನ್ ಕ್ಯಾಂಪಿನಲ್ಲಿ ಬಂಧಿಯಾಗಿ ಅಲ್ಲಿಂದಲೇ ಡೈರಿಯ ಪುಟಗಳನ್ನು ತುಂಬಿಸಿ, ಅರಳುವ ಮೊದಲೇ ಅಸುನೀಗಿದ ಆ್ಯನೆ ಫ್ರಾಂಕ್ ಇಂದಿಗೂ ಕಣ್ಣನ್ನು ಹಸಿಯಾಗಿಸುತ್ತಾಳೆ. ಇದು ಅಂಥದ್ದೇ ಇನ್ನೊಬ್ಬ ಹೆಣ್ಣುಮಗಳ ಕಥೆ. ಅಶ್ವಿಟ್ ಎನ್ನುವ ಕರಾಳಕೂಪದಲ್ಲಿ ತನ್ನ ಕಿಶೋರಾವಸ್ಥೆಯನ್ನು ಕಳೆಯುವ ಈಡಿತ್ ಪವಾಡಸದೃಶವಾಗಿ ಬದುಕಿ ಬರುತ್ತಾಳೆ. ಜೀವವೇನೋ ಉಳಿಯುತ್ತದೆ, ಆದರೆ ಕಾಡುವ ಕರಾಳ ನೆನಪುಗಳಿಗೆ ಕೊನೆಯುಂಟೆ? ತಂದೆ ತಾಯಿಯರನ್ನು, ಪ್ರೇಮಿಯನ್ನು ಕಳಕೊಳ್ಳುವ ಈಡಿತ್ ನೋವಿನ ಮಹಾಪೂರವನ್ನೇ ಎದೆಯಲ್ಲಿ ಹುದುಗಿಟ್ಟುಕೊಂಡು ಗಂಡ, ಮಕ್ಕಳು ಎಲ್ಲರನ್ನೂ ಭೂಮಿಯಂತೆ ಪೊರೆಯುವ ಕಥೆಯಿದು. ನಲವತ್ತು ದಾಟಿದ ಮೇಲೆ ಮನಶ್ಶಾಸ್ತ್ರದಲ್ಲಿ ಪದವಿಯನ್ನು ಪಡೆದು ಸಮಾಲೋಚನೆಗಳಿಂದ ಅನೇಕ ಸಂತ್ರಸ್ತರಿಗೆ ಬೆಳಕಾಗುವ ಈಡಿತ್ ತನ್ನ ಜೀವನದ ವಿವರಗಳನ್ನು ದಾಖಲಿಸುತ್ತಲೇ ಬದುಕಿನ ಬಗೆಗೊಂದು ಭರವಸೆಯನ್ನು ಮೂಡಿಸುತ್ತಾರೆ.
ಹಿಟ್ಲರ್ ಹುಟ್ಟಿದ ಮನೆಯೆದುರು ಭಾಷಣ ಮಾಡುತ್ತಾ ಅವರು ಹೇಳುವ ಮಾತುಗಳು ನಮ್ಮೊಳಗನ್ನು ಬೆಳಗುತ್ತವೆ. " "ಪ್ರತೀಕಾರ ನಮ್ಮನ್ನು ಸ್ವತಂತ್ರರಾಗಲು ಬಿಡುವುದಿಲ್ಲ. ಹಾಗಾಗಿ ನಾನು ಹಿಟ್ಲರ್ ನನ್ನು ಕ್ಷಮಿಸಿಬಿಟ್ಟೆ. ಇದರಿಂದ ಅವನಿಗೇನೂ ಸಿಗುವುದಿಲ್ಲ.ಆದರೆ ಈ ಕ್ಷಮೆ ನನ್ನನ್ನು ಅವನ ಕರಾಳ ನೆನಪುಗಳಿಂದ ಬಿಡುಗಡೆಗೊಳಿಸಬಲ್ಲುದು. ಅವನು ದೋಷಮುಕ್ತ ಎಂದಲ್ಲ, ಆದರೆ ಕರಾಳ ಯಾತನೆಯಿಂದ ಹೊರಬಂದು ಕಷ್ಟಗಳನ್ನು ಹಿಮ್ಮೆಟ್ಟಿಸಿದ ಬದುಕು ತುಂಬಾ ಅಮೂಲ್ಯವಾದದ್ದು. ಅದನ್ನು ಅವನ ನೆನಪುಗಳು ಹಾಳುಮಾಡುವುದು ನನಗಿಷ್ಟವಿಲ್ಲ......"
ಇತಿಹಾಸ ನಮಗೆ ಕಲಿಸುವ ಅತಿದೊಡ್ಡ ಪಾಠವಿದು. ಇಲ್ಲವಾದರೆ ಇತಿಹಾಸವನ್ನು ಓದುವುದಕ್ಕೆ ಇರುವ ಅರ್ಥವೇನು?
ಜಯಶ್ರೀ ಭಟ್ ಅವರ ಅನುವಾದ ಅದೆಷ್ಟು ಸೊಗಸೆಂದರೆ ಈಡಿತ್ ನಮ್ಮೊಳಗೆ ಒಬ್ಬಳಾಗಿ ಇಳಿಯುವಷ್ಟು. ಸಾಧ್ಯವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೆ ಓದಿಸಿ. ದ್ವೇಷ ತಂದಿಡುವ ನರಕ ದರ್ಶನ ಮತ್ತು ಕ್ಷಮೆ ತರುವ ಸಮಾಧಾನ ಅರಿವಿಗೆ ಬರಲಿ.
- ಸುಧಾ ಆಡುಕಳ
ಸುಧಾ ಆಡುಕಳ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.