"ಕುವೆಂಪು, ತೇಜಸ್ವಿಯವರಂಥ ಮೇರು ಪ್ರತಿಭೆಗಳು, ವ್ಯಕ್ತಿತ್ವಗಳು ಕೆಲವೇ ಕುಟುಂಬಗಳಲ್ಲಿ ಜನಿಸುತ್ತಾರೆ. ಆ ಕುಟುಂಬಗಳು ಅವರನ್ನು ರಕ್ಷಿಸಿ ಪೋಷಿಸಿ ಅವರಿಗಾಗಿ ಕೆಲವೊಂದು ತ್ಯಾಗ ಮಾಡಿ ಅವರನ್ನು ಈ ಜಗತ್ತಿಗೆ ಸಮರ್ಪಿಸುತ್ತಾರೆ,” ಎನ್ನುತ್ತಾರೆ ಈಶಾನ್ಯೆ ತೇಜಸ್ವಿ. ಅವರು ನರೇಂದ್ರ ರೈ ದೇರ್ಲ ಅವರ “ಪೂರ್ಣಚಂದ್ರ ತೇಜಸ್ವಿ” ಕೃತಿ ಕುರಿತು ಬರೆದ ಮುನ್ನುಡಿ.
ನನ್ನ ತಂದೆಯವರ ಕುರಿತು ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಅವಕಾಶ ಮಾಡಿಕೊಟ್ಟದ್ದಕ್ಕೆ ನರೇಂದ್ರ ರೈ ದೇರ್ಲ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಬರೀ ಬರೆಯಲು ಕೊಟ್ಟದ್ದಕ್ಕಷ್ಟೇ ಅಲ್ಲ ಈ ನೆಪದಲ್ಲಿ ತಂದೆಯ ಬಗ್ಗೆ ಓದಲು. ನೆನಪಿಸಿಕೊಳ್ಳಲು, ಮೆಲುಕು ಹಾಕಲು ಒಂದು ಅವಕಾಶ ಮಾಡಿಕೊಟ್ಟದ್ದಕ್ಕೂ ದೇರ್ಲರಿಗೆ ಕೃತಜ್ಞತೆಗಳು. ಇಡೀ ಕೃತಿಯಲ್ಲಿ ತಂದೆಯವರು ಒಬ್ಬ ಗುರುವಿನಂತೆ, ಗೌರವಾನ್ವಿತ ವ್ಯಕ್ತಿಯಂತೆ ನನಗರಿವಿಲ್ಲದಿರುವ ಮಾಯಾಲೋಕದ ವಿಶಿಷ್ಟ ಅನುಭವ ಪಡೆದಿರುವ ಮನುಷ್ಯನಂತೆ ಕಂಡುಬಂದರು. ಕೆಲವೆಡೆ ಯಾವುದು ಸರಿ ಯಾವುದು ತಪ್ಪು ಎಂದು ಆಪ್ತವಾಗಿ ತಿಳಿಸಿಕೊಡಬಲ್ಲ ಶಿಕ್ಷಕನಂತೆ ಗೋಚರಿಸಿದರು. ಬಹಳಷ್ಟು ಕಡೆ ಆಗಾಗ ತಂದೆಯವರು ತಮ್ಮ ಅನಿಸಿಕೆಗಳನ್ನು ಮತ್ತು ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದನ್ನೂ ನಾನು ಗಮನಿಸಿದ್ದೇನೆ. ನಮಗೂ ಸಹ ಈ ಜೀವನದಲ್ಲಿ ಯಾವುದು ಮುಖ್ಯ? ಯಾರು ಮುಖ್ಯ? ಯಾವುದು ಅಮುಖ್ಯ ಎಂಬುವುದರ ಸಂದರ್ಭೋಚಿತ ಅರಿವುಂಟಾಗಲು ತಂದೆಯವರ ಈ ಚಿಂತನಾಕ್ರಮ ನೆರವಿಗೆ ಬರುತ್ತದೆ. ಎಷ್ಟೋ ಕಾರಣಗಳಿಂದಾಗಿ ನಾವು ತಪ್ಪು ತಿಳಿದಿರಲೂಬಹುದು ಅಥವಾ ಅದನ್ನು ಸರಿ ಮಾಡಿಕೊಳ್ಳಲೂಬಹುದು ಎಂಬುವುದರ ಅರಿವಾಗುತ್ತದೆ.
ಈ ಪ್ರಪಂಚವೇ ಬದಲಾಗುತ್ತಿರುವಾಗ ನಾವು ಬದಲಾಗದೇ ಇರಲು ಸಾಧ್ಯವೇ ಇಲ್ಲ. ಅದು ನಾವು ಬಯಸಿ ಮಾಡಿಕೊಳ್ಳುವುದಿರಬಹುದು ಅಥವಾ ನಮಗೆ ಗೊತ್ತಿಲ್ಲದೆ ಆಗುವ ಪ್ರಜ್ಞಾಹೀನ ಅನಿವಾರ್ಯತೆಯೂ ಇರಬಹುದು. ಇದು ನನಗೆ ಅರಿವಾದಾಗ, ತಂದೆ ತೇಜಸ್ವಿ ಕೂಡ ಇದಕ್ಕೆ ಒಳಪಟ್ಟಿರುವ ಅವರದೇ ಒಂದು ಪಾತ್ರದಂತೆ ಕಾಣಲು ಶುರುವಾಯಿತು. ಅವರೂ ಸಹ ಚರಿತ್ರೆಯಲ್ಲಿ ಹಿಂದೆ ಸರಿದು ಅಂಥದ್ದೇ ಒಂದು ಸಂದರ್ಭ ಸನ್ನಿವೇಶಕ್ಕೆ ಸೇರಿ ಹೋದರು. ಹೀಗಾಗಿ ಈಗ ನಾವು ಅವರ ಪುಸ್ತಕವನ್ನು ಓದುವಾಗ, ದೇರ್ಲರು ಮಾಡಿದ ಅವರ ಸಂದರ್ಶನಗಳನ್ನು ಓದುವಾಗ ಯಾವ ಕಣ್ಣಿನ ಮನಸ್ಸಿನ ಮೂಲಕ ಅವರನ್ನು ಗ್ರಹಿಸಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ನಾವೀಗ ಮತ್ತೆ ಅವರ ಸಂದರ್ಭಕ್ಕೆ ಪ್ರವೇಶಿಸುವುದು ನುಗ್ಗುವುದು ಅಸಾಧ್ಯ. ಏಕೆಂದರೆ ಒಂದು ಸಲ, ನಾವು ಸಮಯದ ಬದಲಾವಣೆಗೆ ಒಳಪಟ್ಟ ಮೇಲೆ ಅದಕ್ಕೆ ಹೊರತಾಗಿ ಬದುಕುವುದು. ಯೋಚಿಸುವುದು ಸಾಧ್ಯವೇ ಇಲ್ಲ. ಒಂದು ಸಲ ನೀವು ಸೈಕಲ್ ಕಲಿತ ಮೇಲೆ ಕಲಿಯದೇ ಇರುವ ತರಹ ಸೈಕಲ್ ಬಿಡುವುದು ಸಾಧ್ಯವೇ ಇಲ್ಲದ ಮಾತು. ಒಂದು ಸಲ ನಮಗೆ ಒಂದು ಭಾಷೆ ಅರ್ಥವಾಗಲು ಶುರುವಾದ ಮೇಲೆ ಅದನ್ನು ಅರ್ಥವಾಗದಂತೆ ಕೇಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮ ಮೆದುಳು ಎಲ್ಲಾ ಅರ್ಥಗಳನ್ನು ಹಾಗೂ ನಾವು ನಮ್ಮ ಜಗತ್ತನ್ನು ನೋಡುವ ಕ್ರಮವನ್ನೂ ಸಹ ಈ ಪ್ರಜ್ಞೆ ಮತ್ತು ನಮ್ಮ ಕಲಿಕೆಯಿಂದ ಬದಲಾಯಿಸಿಬಿಡುತ್ತದೆ.
ತೇಜಸ್ವಿ ಹಾಗೂ ಅವರ ಬರಹಗಳು ಸಹ ಇದಕ್ಕೆ ಹೊರತಾಗಿಲ್ಲ. ಆದುದರಿಂದ ಯಾವ ಸಮಸ್ಯೆಗಳು ಇನ್ನೂ ಅದೇ ರೀತಿಯಲ್ಲಿ ಇದ್ದಾವೆಯೋ (ಇನ್ನೂ ಹದಗೆಟ್ಟಿದ್ದರೂಸಹ ಅದು ಒಂದು ಬದಲಾವಣೆ) ಅವುಗಳನ್ನು ಮಾತ್ರ ನಾವು ಅವರ ಸಮಕಾಲೀನ ಸಂದರ್ಭದಲ್ಲಿ ನಿಂತು ನಮ್ಮ ಅನುಭವಗಳೊಂದಿಗೆ ಮಿಶ್ರ ಮಾಡಿಕೊಂಡು ನಮ್ಮ ಅಭಿಪ್ರಾಯಗಳನ್ನು ಕಟ್ಟಿಕೊಳ್ಳಬಹುದು. ಇದನ್ನು ನಾವು ಒಪ್ಪಿಕೊಂಡರೆ, ತೇಜಸ್ವಿ ಅವರ ಕಥೆಗಳು ಅವರ ಅನಿಸಿಕೆಗಳು ನಮಗೆ ಹ್ಯಾರಿ ಪಾಟರ್ ಕಥೆಗಳಂತೆ ಮಾಂತ್ರಿಕವಾಗಿ ತೋರಲು ಶುರುವಾಗುತ್ತವೆ ಅಥವಾ ಮುಂದೆ ಬರುವ (ಈಗಾಗಲೇ ಬಂದಿರುವ) ನಮ್ಮ ದಯಾಹೀನ ಪರಿಸ್ಥಿತಿಯನ್ನು ನುಡಿದ ಭವಿಷ್ಯವಾದಿಯಂತೆ ಕಾಣುತ್ತಾರೆ.
ಈ ಕಾರಣದಿಂದಾಗಿಯೇ ಈಗಿನ ಕಾಲದವರಿಗೆ ಕೆಲವು ಸಲ ನಮ್ಮ ಈ ಪ್ರಪಂಚದ ಮೇಲಿನ ಅವರ ಅಭಿಪ್ರಾಯಗಳು ಸ್ವಲ್ಪ ಭರವಸೆ ಕಳೆದುಕೊಳ್ಳುವಂತೆ ಮಾಡುತ್ತವೆ. ಯಾವುದೂ ಅರ್ಥವಾಗದವರಿಗೆ, ಕನಿಷ್ಠ ಅವರ ಪದ ವಾಕ್ಯ ಸಂಯೋಜನೆಗಳು ಅವರ ಹಾಸ್ಯ, ಸತ್ಯಕ್ಕೆ ಹತ್ತಿರದ ಸೃಜನಾತ್ಮಕ ಸನ್ನಿವೇಶಗಳು ಮನರಂಜಿಸುತ್ತವೆ. ತೇಜಸ್ವಿ ನಮಗೆ ಯಾವಾಗಲೂ ಹೇಳುತ್ತಿದ್ದುದ್ದೇನೆಂದರೆ ತನ್ನ ಪುಸ್ತಕದಲ್ಲಿ ತಾನು ಯಾವತ್ತೂ ಪ್ರತ್ಯಕ್ಷ ಪಾತ್ರಧಾರಿ ಅಲ್ಲವೆಂದು. ಅವರು ಪರೋಕ್ಷವಾಗಿ ದೂರನಿಂತು ಬರೀ ಕ್ಯಾಮರ ಹಿಂದೆ ನಿಂತ ಕಥೆಗಾರ. ಎಲ್ಲಾ ಪಾತ್ರಗಳು ಇಲ್ಲಿ ಈ ಕ್ಯಾಮೆರಾ ಹಿಂದಿನ ಕಥೆಗಾರನೊಡನೇ ಸಂವಹನ ಮಾಡುತ್ತವೆ.
ಈಗ ನಾವು ಇದನ್ನು ಓದುವಾಗ ನಾವೆಲ್ಲಿ ನಿಲ್ಲುತ್ತೇವೆ. ಇರುತ್ತೇವೆ ಎಂಬ ಪ್ರಶ್ನೆ. ಹೆಚ್ಚಾಗಿ, ನಾವು ನಾಯಕರ ಜೊತೆ ಅನುರಣಿಸುತ್ತೇವೆ. ಬೇರೆ ಕಥೆ ಕಾದಂಬರಿಗಳಲ್ಲಿ ಇದೇ ಆಗುತ್ತದೆ. ಆದರೆ ತೇಜಸ್ವಿ ಅವರ ಕಥೆಗಳಲ್ಲಿ ಬರಹಗಳಲ್ಲಿ ಭಾಗಶಃ ನಾಯಕ ಇರುವುದಿಲ್ಲ. ಹಾಗಾದರೆ ಅದನ್ನು ಓದುವ ನಮ್ಮ ಸ್ಥಾನ ಎಲ್ಲಿ? ನಾವಿಲ್ಲಿ ಕೇವಲ ಒಬ್ಬ ವೀಕ್ಷಕರಷ್ಟೇ, ಬರೀ ಒಬ್ಬ ವೀಕ್ಷಕರಾದರೂ ಇಲ್ಲಿ ಗಮನಿಸಿದ ವೀಕ್ಷಿಸಿದ ನಂಬಿಕೆಗಳು, ಧೋರಣೆಗಳು, ಜೀವನದ ಅನುಭವಗಳು, ಸಾಹಸಗಳು, ಉತ್ಸಾಹಗಳು ಎಲ್ಲವೂ ನಮ್ಮದಾಗುತ್ತವೆ. ನಾವೇ ನಮಗೆ ಗೊತ್ತಿಲ್ಲದೆಯೆ ನಮ್ಮದೇ ರೀತಿಯಲ್ಲಿ ತೇಜಸ್ವಿಯಾಗಿ ಬಿಡುತ್ತೇವೆ. ನಾವೇ ಆ ಕ್ಯಾಮರ ಹಿಂದೆ ನಿಂತು ಅವರು ಹಾಕಿಕೊಟ್ಟ ಚೌಕಟ್ಟಿನೊಳಗೆ ಸಿಕ್ಕಿಹಾಕಿಕೊಳ್ಳುತ್ತೇವೆ. ಒಂದು ಸಲ ಸಿಕ್ಕಿಹಾಕಿಕೊಂಡ ಮೇಲೆ ನಾವು ಮೀನುಗಾರನ ಬಲೆಯೊಳಗೆ ಸಿಕ್ಕಿಹಾಕಿಕೊಂಡ ಮೀನಿನ ಹಾಗೆಯೆ. ಮೀನುಗಾರ ನಮ್ಮ ಅನುಭವಗಳನ್ನು ನಿರ್ಣಯಿಸುತ್ತಾನೆ, ನಾವು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಬಹಳ ವಿನೀತವಾಗಿ ಆದರೊಳಗಾಗಲು ಇಚ್ಚಿಸುತ್ತೇವೆ. ಏಕೆಂದರೆ ನಾವಾಗಲೇ ಅದರ ರಸಾನುಭವದ ಒಳಗೆ ಈಜುತ್ತ ಅದು ಒಂದು ಬಲೆ ಎಂಬುದನ್ನೇ ಮರೆತಿರುತ್ತೇವೆ. ಆದುದರಿಂದಲೇ ಅವರು ಒಂದು ಮಾಂತ್ರಿಕ .ಆ ಮಾಂತ್ರಿಕ, ನಮ್ಮ ಪ್ರಕೃತಿ, ಅದರೊಳಗಿರುವ ಜೀವರಾಶಿ, ಮತ್ತವುಗಳ ಜೀವನವನ್ನು ಈ ಚೌಕಟ್ಟು ಒಳಗೆಯೆ ನಿರೂಪಿಸುವುದರಲ್ಲಿ ನಿಸ್ಸಿಮರು. ನಮ್ಮೊಳಗೆ ಹುಟ್ಟುವ ಎಲ್ಲಾ ದ್ವಂದ್ವ ಪ್ರಶ್ನೆ ಅನುಮಾನಗಳಿಗೆ ಎಲ್ಲೋ ಒಂದು ಕಡೆ ಉತ್ತರವಿರುತ್ತದೆ. ಅವುಗಳನ್ನು ನಾವು ಸಮುದ್ರದಲ್ಲಿ ಮುತ್ತು ಹುಡುಕುವಂತೆ ಆಳಕ್ಕಿಳಿದು ಹುಡುಕಬೇಕು.
ಸ್ತ್ರೀ ಜಗತ್ತಿನ ಬಗೆಗೆ ತೇಜಸ್ವಿವರ ನಿಲುವು ಸಂದರ್ಭೋಚಿತ. ಅಮ್ಮನಿಗೆ ಯಾವತ್ತೂ ಅವರು ತೋಟ ನೋಡಿಕೊಳ್ಳಲು ಬಿಡುತ್ತಿರಲಿಲ್ಲ. ನೀನಿಲ್ಲಿ ತಲೆ ಹಾಕಬೇಡ ಎಂದೇ ಎಚ್ಚರಿಸುತ್ತಿದ್ದರು. ಯಾಕಿರಬಹುದು ಎಂದು ನಾನು ಎಂದೂ ಕೇಳಿರಲಿಲ್ಲ. ಹೀಗೆ ಹೇಳುವ ಅಣ್ಣನನ್ನು ಮತ್ತು ಅದನ್ನು ಒಪ್ಪಿಕೊಂಡ ಅಮ್ಮ ಇಬ್ಬರನ್ನು ಇನ್ನು ಬೇರೆ ಯಾವ ರೀತಿಯಿಂದಲೂ ಇರಲು ಸಾಧ್ಯವಿಲ್ಲವೆಂದೇ ನಂಬಿದ್ದೆ. ಅಮ್ಮ ಸಹ ಇದನ್ನೇನಂಬಿದ್ದರೆಂದು ಕಾಣುತ್ತದೆ. ಅಣ್ಣ ತೀರಿಹೋದ ಮೇಲೆ ಅಮ್ಮ ತಮಗಿದ್ದ ತೋಟ ನೋಡಿಕೊಳ್ಳುವ ಸಾಮರ್ಥ್ಯ ಆಸಕ್ತಿ ಎರಡನ್ನೂ ಸವಿಯಲು ಶುರು ಮಾಡಿದರು . ಕೆಲವೊಂದು ಬಾರಿ ತಾನೇಕೆ ನಲವತ್ತು ವರ್ಷಗಳ ಹಿಂದೆ ಇದನ್ನು ಮಾಡಲಿಲ್ಲ ಎಂದು ಅಚ್ಚರಿ ಪಡುತ್ತಿದ್ದರು. ಅಮ್ಮನ ಬರವಣಿಗೆ ಸಹ ಇದೇ ಗುಂಪಿಗೆ, ಪರಿಮಿತಿಗೆ ಸೇರುತ್ತದೆ.
ಅಮ್ಮನಷ್ಟು ಕರಾರುವಕ್ಕಾಗಿ ಲೆಕ್ಕ ಬರಿಯುವವರು, ಎಲ್ಲವನ್ನು ವ್ಯವಸ್ಥಿತವಾಗಿ ಮಾಡುವವರನ್ನು ನಾನು ಮತ್ತೆಲ್ಲೂ ಕಂಡಿಲ್ಲ. ನಮ್ಮ ತಂದೆ ಇಂಥ ಶ್ರಮಕ್ಕೆ ಒಳಪಡುತ್ತಿರಲಿಲ್ಲ. ಬಹುಶಃ ಅವರೂ ಮಾನಸಿಕವಾಗಿ ಬೇರೆ ಯಾವುದೋ ಬದಲಾದ ಭ್ರಮಾಲೋಕದಲ್ಲಿ ಇರುತ್ತಿದ್ದರೇನೋ ಮತ್ತು ಆ ಅನುಭವಗಳನ್ನು ಬೇರೆಯವರ ಅನುಭವಕ್ಕೆ ತರಲು ತಮ್ಮ ಕಥೆಗಳನ್ನು ಬರೆದರೇನೋ. ಈ ಕಾರಣಕ್ಕೇ ಅವರಿಗೆ ಪುನರಾವರ್ತಿತ ಭೌತಿಕ ಬದುಕು ಬಹುಬೇಗ ನಿರಸವಾಗುತ್ತಿತ್ತು. ಅವರು ಯಾವಾಗಲೂ, ನಾನು ಈ ತೋಟ ಮಾರಿ ಮೈಸೂರಿಗೆ ಹೋಗುತ್ತೇನೆ (ಹೋಗೋಣ ಎಂದು ಹೇಳಿದವರಲ್ಲ) ಎಂದು ಹೇಳುತ್ತಿದ್ದರು. ಆಗೆಲ್ಲ ಅಮ್ಮ 'ನಾನು ಮಾತ್ರ ಬರುವುದಿಲ್ಲ. ಬೇಕಿದ್ರೆ ನೀವು ಹೋಗಿ' ಎಂದು ಉತ್ತರಿಸುತ್ತಿದ್ದರು. ಆನಂತರ ಅಣ್ಣ ಸುಮ್ಮನಾಗುವರು. ಹೀಗೆ ಅಣ್ಣ ತೇಜಸ್ವಿಯಾಗಿ ಇರಲು ಸುಸ್ಥಿರವಾಗಿ ಒಂದು ಕಡೆ ತಳ ಊರಲು ಅಮ್ಮನೇ ಕಾರಣ. ಕುವೆಂಪು ಅವರಿಗೆ ಬಹುಶ: ಇದು ಗೊತ್ತಿತ್ತೆನಿಸುತ್ತದೆ. ಆಗಾಗ ಅವರ ದುರ್ಬಲವಾದ ಮುಖ ಸಹ ನನ್ನ ಅನುಭವಕ್ಕೆ ಬಂದಿದೆ. ಲಂಕೇಶ್ ಅವರಿಂದ ಕಹಿ ಅನುಭವವಾದ ಮೇಲೆ ಕೆಲವು ಸಮಯ ತೇಜಸ್ವಿ ಏನನ್ನೂ ಬರೆಯಲಿಲ್ಲ. ಆಗ ಜನ ಇದನ್ನು ಗಮನಿಸಿದ್ದೂ ಉಂಟು. ಆಗ ಅವರು ಸೃಜನಶೀಲತೆಯಲ್ಲಿ ಸ್ವಾತಂತ್ರ್ಯ ಎಂದರೆ ಏನೂ ಮಾಡದಿರುವುದು ಕೂಡ ಎಂದು ನಮಗೆ ಹೇಳುತ್ತಿದ್ದರು.
ಆ ಸಮಯದಲ್ಲಿ ತೇಜಸ್ವಿಯೇನು ಮಾಡುತ್ತಿದ್ದರು? ಬಹುಶಃ ಅವರ ಕಲ್ಪನೆಯ ಪ್ರಪಂಚದಲ್ಲಿ ಸ್ವಚ್ಛಂದವಾಗಿ ಬದುಕುತ್ತಾ ಕಳೆದು ಹೋಗುತ್ತಾ ಇದ್ದರೇನೋ? ಹುಟ್ಟಿಕೊಂಡ ಪ್ರಶ್ನೆ ಅನುಮಾನಗಳ ಆ ನೋವನ್ನು ಅಪನಂಬಿಕೆಗಳನ್ನು ಸರಿ ಮಾಡಿಕೊಂಡು ಮತ್ತೆ ಹೊಸದೊಂದನ್ನು ಹುಟ್ಟು ಹಾಕಲು ತಮ್ಮನ್ನು ತಾವೇ ಬದಲಾಯಿಸಿಕೊಳ್ಳುತ್ತಿದ್ದರೇನೋ. ಅವರೇ ಹೇಳುವಂತೆ ಮಹಾಯುದ್ಧಗಳು ಈಗ ಒಂದು ಕಾಲ್ಪನಿಕ ಸಿನಿಮಾದಂತೆ, ಚರಿತ್ರೆಯ ಭಾವನಾತ್ಮಕ ವಿವರಗಳು ಮರೆತು ಹೋದ ಘಟನೆಗಳಾಗಿರುವಂತೆ ತೇಜಸ್ವಿ ಮತ್ತು ಲಂಕೇಶ್ ಅವರ ನಡುವಿನ ಭಾವೋದ್ವೇಗಗಳು ನಮಗೆ ಈಗ ಅರಿವಾಗುವುದಿಲ್ಲ. ಬದಲಾಗಿ ತೇಜಸ್ವಿಯವರು ಕಷ್ಟಪಟ್ಟ ಕೆಲಸದ ಫಲ ಮಾತ್ರ ನಮ್ಮೆದುರಿಗೆ ನಿಂತಿದೆ. ಇದನ್ನು ಕಂಡು ನನಗೆ ಭವಿಷ್ಯದಲ್ಲಿ ಅವರ ಅಭಿಮಾನಿಗಳು ಹೇಗೆ ಅವರನ್ನೂ ಅವರ ಕೆಲಸವನ್ನೂ ಇಷ್ಟಪಟ್ಟು ಹುಚ್ಚರಾಗಿದ್ದಾರೆ ಎಂದು ಅವರಿಗೆ ಹೇಳಲು ಏನಾದರೂ ಮಾರ್ಗಗಳಿವೆಯೇ ಎಂದು ಯೋಚಿಸುವಂಥಾಗುತ್ತದೆ.
ನನ್ನಲ್ಲಿರುವ ದ್ವಂದ್ವವೆಂದರೆ ನಾನು ಅವರನ್ನು ತಂದೆಯ ತರ ನೋಡುತ್ತೇನೆಯೋ ಅಥವಾ ಅಭಿಮಾನಿ ತರ ನೋಡುತ್ತೇನೆಯೋ ಎಂಬುದು. ನಾನು ನನ್ನ ಜೀವನದ ಗಮನಾರ್ಹವಾದ ಬಾಲ್ಯದ ವರ್ಷಗಳನ್ನು ಕುವೆಂಪು ಅವರೊಡನೆ ಕಳೆದಿದ್ದರಿಂದ ನಾನು ಪ್ರಜ್ಞಾಪೂರ್ವಕವಾಗಿ ಅವರ ಅಭಿಮಾನಿ ಆಗಿಯೂ ಅರಿವಿಲ್ಲದೆ ಅವರ ಮಗಳಾಗಿಯೂ ಅವರನ್ನು ನೋಡುತ್ತೇನೆ ಎಂದರೆ ತಪ್ಪಾಗಲಾರದು. ಅಥವಾ ಈಅಭಿಮಾನಿ ಎಂಬುದು ಭಾಗಶ: ಮಗಳನ್ನು ಹಿನ್ನೆಲೆಗೆ ಕಳಿಸಿಬಿಡುತ್ತದೆ. ಅಣ್ಣ ಸಾರ್ವಜನಿಕ ವ್ಯಕ್ತಿ ಆಗಿದ್ದುದರಿಂದ ನಾವು ಅದರೊಟ್ಟಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅಮ್ಮನಿಗೂ ಅದೇ ಆಗಿರಬೇಕು. ಕೆಲವು ಸಲ ಇದು ಗೊಂದಲ ಹಾಗೂ ಹತಾಶಗೊಳಿಸಿಬಿಡುತ್ತದೆ. ಆದರೆ ಇದನ್ನು ಒಪ್ಪಿಕೊಂಡು ಸಿಕ್ಕಿದ್ದನ್ನು ಪರಮಾನ್ನ ಎಂದು ತಿಳಿಯುವುದು ನಮ್ಮ ಕುಟುಂಬಕ್ಕೇನು ಹೊಸದಲ್ಲ.
ಕುವೆಂಪು ತೇಜಸ್ವಿಯವರಂಥ ಮೇರು ಪ್ರತಿಭೆಗಳು, ವ್ಯಕ್ತಿತ್ವಗಳು ಕೆಲವೇ ಕುಟುಂಬಗಳಲ್ಲಿ ಜನಿಸುತ್ತಾರೆ. ಆ ಕುಟುಂಬಗಳು ಅವರನ್ನು ರಕ್ಷಿಸಿ ಪೋಷಿಸಿ ಅವರಿಗಾಗಿ ಕೆಲವೊಂದು ತ್ಯಾಗ ಮಾಡಿ ಅವರನ್ನು ಈ ಜಗತ್ತಿಗೆ ಸಮರ್ಪಿಸುತ್ತಾರೆ. ಅದನ್ನು ನಮ್ಮ ಕುಟುಂಬದವರೆಲ್ಲ ಮಾಡಿದ್ದೇವೆ. ಹಾಗೂ ಅಂಥ ಒಂದು ಕುಟುಂಬಕ್ಕೆ ನಾನು ಸೇರಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ಸಂಗತಿ.
ತೇಜಸ್ವಿವರು ತೀರಿ ಹೋದ ಮೇಲೆ ಅನೇಕ ಜನ ಅವರ ಅಭಿಮಾನಿಗಳು, ಓದುಗರು ಶಾಲಾ-ಕಾಲೇಜು ಉದ್ಘಾಟನೆಗಳಿಗೆ. ಇನ್ನಿತರ ಸಾಮಾಜಿಕ ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಮ್ಮ ತಂದೆ ತೇಜಸ್ವಿ, ತಾಯಿ ರಾಜೇಶ್ವರಿಯವರನ್ನು ಕರೆಯಲಾಗಲಿಲ್ಲ ನೀವಾದರೂ ಬನ್ನಿ ಎಂದು ವಿನಂತಿಸುವಾಗ ಅದು ಶುದ್ಧ ಅಸಂಬದ್ಧ ಅನಿಸುತ್ತಿತ್ತು. ಆದರೂ ಹೋಗಲಾಗಲಿಲ್ಲ ಎಂಬ ಕಾರಣಕ್ಕಾಗಿ ನನಗೆ ಸ್ವಲ್ಪ ತಪ್ಪಿತಸ್ಥ ಭಾವನೆಯೂ ಬರುತ್ತಿತ್ತು ಇದರ ಬಗ್ಗೆ ನಾನು ನಮ್ಮ ಚಿಕ್ಕಪ್ಪ ಚೈತ್ರ ಅವರಲ್ಲಿ ಒಮ್ಮೆ ಹೇಳಿದ್ದೆ. ಅವರಿಗೂ ಹೀಗೆ ಆಗುತ್ತಿತ್ತಾ ಎಂದು ಕೇಳಿಯೂ ಇದ್ದೆ. ಆಗ ಅವರು ನೀನು ತೇಜಸ್ವಿ ಅಲ್ಲ, ಈಶಾನ್ಯ. ತಂದೆ ಮಾಡಿದ್ದನ್ನು ನೀನು ಮಾಡಬೇಕಾಗಿಲ್ಲ, ಅವರ ಜಾಗದಲ್ಲಿ ನಿಲ್ಲಲು ಬಯಸದೆ ಪಕ್ಕಕ್ಕೆ ಸರಿದು ನಿಲ್ಲು. ತೇಜಸ್ವಿ ಸಹ ಇದನ್ನೇ ಮಾಡುತ್ತಿದ್ದ ಎಂದು ಹೇಳಿದಾಗ ನನ್ನೊಳಗೆ ನೆಮ್ಮದಿ ಬಂತು. ಹಾಗಾಗಿ ನನಗೆ ಪೂರ್ಣಚಂದ್ರ ತೇಜಸ್ವಿ ಈ ಪ್ರಪಂಚದಲ್ಲಿ ಒಬ್ಬರೇ. ಬೇರೆ ಯಾರು ಆ ಸ್ಥಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ.
ತಂದೆಯಾಗಿ ಬರಹಗಾರರಾಗಿ ಸಾಹಿತಿಯಾಗಿ ಮನುಷ್ಯರಾಗಿ ಅವರ ಬೇರೆ ಬೇರೆ ಮುಖಗಳನ್ನು ನಾವು ಅವರ ಪುಸ್ತಕಗಳಲ್ಲಿ ಹುಡುಕಿದರೆ ನಮ್ಮೊಳಗೆ ಅವರು ಸಿಗುತ್ತಾರೆ. ನಮ್ಮ ಗೊಂದಲಗಳಿಗೆ ಹಾಸ್ಯ ಮಿಶ್ರಿತ ಗಂಭೀರ ಉತ್ತರವನ್ನು ಕೊಡುತ್ತಾರೆ. ನಮ್ಮನ್ನು ಅವರ ಪ್ರಪಂಚಕ್ಕೆ ಸೇರಿಸಿಕೊಂಡು ಕರೆದೊಯ್ಯುತ್ತಾರೆ. ಜನ ಅವರ ಅಭಿಮಾನಿಗಳಾಗಿ ಅವರಲ್ಲಿ ಸಿಕ್ಕಿಹಾಕಿಕೊಂಡ ನಂತರ ನಿಜ ಜೀವನದಲ್ಲೂ ಅದನ್ನು ಅನುಭವಿಸಲು ಈಗ ಮೂಡಿಗೆರೆಗೆ ಬರುತ್ತಾರೆ. ಆದರೆ ಮೂಡಿಗೆರೆಯಲ್ಲಿ ಅವರಿಗೆ ಸಿಗುವುದು ಈಗ ಕೇವಲ ನಿರುತ್ತರ!
ನರೇಂದ್ರ ರೈ ದೇರ್ಲ ಅವರು 'ತೇಜಸ್ವಿ ಪತ್ರ'ಗಳನ್ನು ಪ್ರಕಟಿಸಿದವರು. ಆ ಮುಂಚೆ ಅವರು 'ಸಾವಯವ ಕೃಷಿ' ಎಂಬ ಪುಸ್ತಕ ಬರೆದಾಗ ಅದನ್ನು ತಂದೆಯವರೇ ಪ್ರಕಟಿಸಿದ್ದರು. ಮುಂದೆ 'ತರಂಗ', 'ಸುಧಾ' ಮುಂತಾದ ಆ ಕಾಲದ ಜನಪ್ರಿಯ ಪತ್ರಿಕೆಗಳಲ್ಲಿ ತಂದೆಯವರ ಸಂದರ್ಶನ ಮಾಡಿದವರು. ತೇಜಸ್ವಿ ಪತ್ರಗಳು ಪುಸ್ತಕ ಬಿಡುಗಡೆಯಾದಾಗ ಅಮ್ಮನೊಂದಿಗೆ ನಮ್ಮ ಮಕ್ಕಳು ಕೂಡ ದೇರ್ಲರ ಮನೆಗೆ ಹೋಗಿ ಬಂದಿದ್ದರು. ಹೀಗೆ ಪರಿಚಯಗೊಂಡ ನಮ್ಮ ಕುಟುಂಬದ ಸ್ನೇಹಿತರಾದ ದೇರ್ಶ ಅವರು ಬರೆದಿರುವ ಈ ಪುಸ್ತಕ ಹೆಚ್ಚು ಜನರಿಗೆ ತಲುಪಲಿ ಎಂದು ಆಶಿಸುವೆ. ಧನ್ಯವಾದಗಳು.
- ಈಶಾನ್ಯೆ ತೇಜಸ್ವಿ
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.