ಸಂಧ್ಯಾ ಯಾವುದೇ ಸಂದೇಶ, ಉಪದೇಶ ಕೊಡಬೇಕೆನ್ನುವ ಕಟ್ಟುಪಾಡಿಗೆ ಬೀಳದೆ, ಆಗಾಗ ಈ ಕೃತಿಯ ರಚನೆಯ ತಮ್ಮ ಪಯಣದ ತುಣುಕುಗಳನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಾ ಎಂಗೇಜ್ ಮಾಡಿರುವುದು ಮುದ ನೀಡುತ್ತದೆ ಎನ್ನುತ್ತಾರೆ ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿ. ಲೇಖಕಿ ಸಂಧ್ಯಾ ರಾಣಿ ಅವರ ಇಷ್ಟುಕಾಲ ಒಟ್ಟಿಗಿದ್ದು ಕೃತಿಯ ಬಗ್ಗೆ ಅವರು ಬರೆದಿರುವ ಟಿಪ್ಪಣಿ ನಿಮ್ಮ ಓದಿಗಾಗಿ...
ಇಷ್ಟುಕಾಲ ಒಟ್ಟಿಗಿದ್ದು...
ಸಂಧ್ಯಾ ರಾಣಿ ಅಂದರೆ ನನಗೆ ನೆನಪಾಗುವುದು ಕಾಡುವ ಗಝಲ್ ಸಾಲುಗಳು, ವಿಶೇಷವಾದ ಸಿನಿಮಾ ವಿಮರ್ಶೆಗಳು, ಅಪರೂಪಕ್ಕೆ ಬರೆವ ಅದ್ಭುತವಾದ ಅವರ ಕವಿತೆಗಳು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಒಂದು ಹೊಸ ಅಲೆಯೆಬ್ಬಿಸಿದ ಅವರ ಚಿತ್ರಕಥೆ ಇರುವ ವಿಶಿಷ್ಟವಾದ ಸಿನಿಮಾ ನಾತಿಚರಾಮಿ! ಅವರ ಯಾವುದೇ ಸೃಜನಶೀಲ ಬರಹದಲ್ಲಿ ಕಲೆ ಎನ್ನುವುದು ಅದೆಷ್ಟು ಚೆಂದವಾಗಿ ಮಿಳಿತವಾಗಿರುತ್ತದೆ ಅಂದ್ರೆ ನಿರಾಭರಣ ಸುಂದರಿಯರಂತೆ.
ಜಮೀಲ್ ಸಾವಣ್ಣ ಸರ್ ಬಹಳ ದಿನಗಳಿಂದ ಹೇಳುತ್ತಲೇ ಇದ್ದ ಅವರ ಕಾದಂಬರಿಯನ್ನು ಕನ್ನಡಲೋಕ ಅವರಿಂದ ತರಿಸಿಕೊಂಡು ಓದಿದೆ. ಮೊದಲನೆಯದಾಗಿ ಇದರ ಸುಂದರ ಮುಖಪುಟವೇ ಶೀರ್ಷಿಕೆಗೆ ಬಹಳ ಸೂಕ್ತ ಮತ್ತು ಸಿಂಬಾಲಿಕ್ ಆಗಿದೆ.
ಈ ಕಾದಂಬರಿಯ ವಸ್ತು ಅಗತ್ಯಕ್ಕಿಂತ ಹೆಚ್ಚೇ ಪ್ರಾಕ್ಟಿಕಲ್ ಆಗಿಬಿಟ್ಟಿರುವ ಗಂಡು ಹೆಣ್ಣುಗಳ ಸಂಬಂಧಗಳ ಸಂಕೀರ್ಣತೆಯಾಗಿದೆ. ಒಂದು ಮದುವೆಗೆ ಎರಡು ಲಕ್ಷ ಫೀಸ್ ಪಡೆದು ಪ್ರಿ ವೆಡ್ಡಿಂಗ್ ಶೂಟ್ ಮಾಡುವ ಫೋಟೋಗ್ರಾಫರ್ ಕೂಡ ಒಂದು ನಾಲ್ಕು ಬಾರಿಯಾದರೂ ನಾನು ತೆಗೆದ ಫೋಟೋಗಳನ್ನು ಇವರು ಖುಷಿಯಿಂದ ನೋಡುವಷ್ಟು ದಿನಗಳಾದರೂ ಜೊತೆಗಿರಲಿ ಎಂದು ಬೇಡಿಕೊಳ್ಳುತ್ತಾನೇನೋ!
ಅಷ್ಟು ದುರ್ಬಲವಾಗಿವೆ ಇಂದಿನ ಬೆಸುಗೆಗಳು.
“There’s something wrong with your character if opportunity controls your loyalty.” – Trent Shelton ಎನ್ನುತ್ತಾ ತಪ್ಪುಗಳನ್ನು justify ಮಾಡಿಕೊಳ್ಳುವುದು,
“Most people cheat because they’re paying more attention to what they’re missing rather than what they have.” ಎಂದು ನೆಪ ಹೇಳುವುದು ಈಗೀಗ ಸಾಮಾನ್ಯವಾಗಿದೆ.
ಯಾರಾದ್ರೂ ಕಣ್ ಹಾಕ್ಬಿಟ್ರೆ ಎನ್ನುವಷ್ಟು ಚೆನ್ನಾಗಿದ್ದ ಸಂಬಂಧ ಅಚಾನಕ್ ಆಗಿ ಮುರಿದುಬೀಳುವುದು, ಓಪನ್ ಮ್ಯಾರೇಜ್, ಲಿವ್ ಇನ್, ವ್ಯಕ್ತಿ ಸ್ವಾತಂತ್ರ, ಪ್ರೇಮ ಕಾಮದ ಬಯಕೆಗಳು ಕಂಗೆಡಿಸುವಾಗ ಕೈ ಕಟ್ಟುವ ಜವಾಬ್ದಾರಿಗಳು, ಉಸಿರುಗಟ್ಟಿಸುವ ಬಂಧನ, ಟಿಂಡರ್ ಎನ್ನುವ ಡೇಟಿಂಗ್ ಸೈಟ ನಲ್ಲಿ ಹುಡುಕಿಕೊಂಡ ಸಂಬಂಧಗಳಲ್ಲಿ ನಿಷ್ಟೆ ಬಯಸುವುದು ಹಾಸ್ಯಾಸ್ಪದ ಎನಿಸುವುದು, ರೂಪವತಿಯಲ್ಲ ಎನ್ನುವ ಕೀಳರಿಮೆಯಿಂದ ಅಪ್ಪ ಅಮ್ಮ ಮತ್ತು ಆಪ್ತರಿಂದ ದೂರವಿದ್ದು ಇನ್ಸುಲೇಟೆಡ್ ಆದಂತೆ ತನ್ನದೇ ಬದುಕು ಕಟ್ಟಿಕೊಳ್ಳುವ ಬುದ್ಧಿವಂತೆಯ ಭಾವುಕ ಕಥೆಗಳು ಎಲ್ಲವೂ ಇಲ್ಲಿ ಗೋಳೆನಿಸದೆ ಸಾಗುತ್ತವೆ.
ಮುಖ್ಯ ಪಾತ್ರಗಳಾದ ಸರೋಜಿನಿ, ಗೌರಿ, ಇನಾಯ, ರಾಘವ, ಅರುಂಧತಿ ಎಲ್ಲರೂ ಜೀವಮಾನವೆಲ್ಲಾ ಪ್ರೀತಿಗಾಗಿ ಹಾತೊರೆಯುತ್ತಲೇ ಇರುವ ತಮ್ಮದೇ ಅನನ್ಯವಾದ ಲೋಕಗಳಿಗೆ ಕರೆದೊಯ್ಯುತ್ತಾರೆ. ಇಲ್ಲಿ ಒಂದು ಆದಿ ಮತ್ತು ಅಂತ್ಯ ಅಂತಿಲ್ಲ. ಹಲವು ಚಿತ್ರಗಳನ್ನು ರಂಗೋಲಿ ಚುಕ್ಕಿಗಳಂತೆ ಚೆದುರಿ ಓದುಗರೆದುರು ಇಟ್ಟಿದ್ದಾರೆ. ಒಂದಿಷ್ಟು ನೋವು, ಒಂದಿಷ್ಟು ಸಂಭ್ರಮ, ಭ್ರಮನಿರಸನ, ವಿಷಾದ ಎಲ್ಲವನ್ನೂ ಓದುಗರಿಗೆ ಕೊಟ್ಟು ಕೊನೆಗೂ ಜೊತೆಗಿದ್ದು ಹೋದವರು ಕೊಟ್ಟಿದ್ದೇನು, ಬಿಟ್ಟಿದ್ದೇನು ಎನ್ನುವುದನ್ನು ಓದುಗರೇ ಅರಿತುಕೊಳ್ಳಲು ಬಿಟ್ಟಿದ್ದಾರೆ.
ಸಂಧ್ಯಾ ಯಾವುದೇ ಸಂದೇಶ, ಉಪದೇಶ ಕೊಡಬೇಕೆನ್ನುವ ಕಟ್ಟುಪಾಡಿಗೆ ಬೀಳದೆ, ಆಗಾಗ ಈ ಕೃತಿಯ ರಚನೆಯ ತಮ್ಮ ಪಯಣದ ತುಣುಕುಗಳನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಾ ಎಂಗೇಜ್ ಮಾಡಿರುವುದು ಮುದ ನೀಡುತ್ತದೆ. ಈ ವಸ್ತುವಿಗೆ ಬೇಕಾದ ಒಂದು ಬಿಡು ಬೀಸಾದ ಶೈಲಿಯಿಂದ ನಿಭಾಯಿಸಿರುವುದು ಇಷ್ಟವಾಯ್ತು. ಕೊನೆಯಲ್ಲಿ ಇನ್ನೂ ಏನೋ ನಡೆಯುತ್ತದೆ ಅಂದುಕೊಳ್ಳುವಾಗಲೇ ಮುಗಿಯುತ್ತದೆ.
ಒಂದು ಪ್ರಸ್ತುತ ಅನಿಸುವ ಅರ್ಬನ್ ಕಥೆಯನ್ನು ಕೊಟ್ಟಿರುವ ಸಂಧ್ಯಾ ರಾಣಿ ಅವರಿಗೆ ಮತ್ತು ಇದನ್ನು ಪ್ರಕಟಿಸಿರುವ ಸಾವಣ್ಣ ಬುಕ್ಸ್ ಅವರಿಗೆ ಅಭಿನಂದನೆಗಳು!
-ಪೂರ್ಣಿಮಾ ಮಾಳಗಿಮನಿ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...
©2024 Book Brahma Private Limited.