"ಹನಿಯೂರು ಚಂದ್ರೇಗೌಡ ಅವರು ಹೇಳುವಂತೆ, ವೃದ್ಧಾಪ್ಯವು ಆರ್ಥಿಕ ಮೌಲ್ಯವನ್ನು ಕುಗ್ಗಿಸುತ್ತದೆ, ಸಾಮಾಜಿಕ ಮೌಲ್ಯವನ್ನು ಹೆಚ್ಚಿಸುತ್ತದೆ. ಇಂಥವು ನಾಗರಿಕ ಸಮಾಜಕ್ಕೆ ಪಾಠವಾಗಬೇಕು. ಸಮೃದ್ಧ ಶ್ರೀಮಂತಿಕೆ ಇದ್ದೂ ತಂದೆ-ತಾಯಿಯರನ್ನು ವೃದ್ಧಾಶ್ರಮಗಳಿಗೆ ತಳ್ಳುವ ಕ್ರೂರ ಮನಸ್ಸುಗಳು ಸೋಲಿಗರಿಂದ ನೀತಿಪಾಠ ಕಲಿಯಬೇಕಿದೆ,” ಎನ್ನುತ್ತಾರೆ ಕೆ. ಮಧುಸೂದನ ಜೋಷಿ. ಅವರು ಹನಿಯೂರು ಚಂದ್ರೇಗೌಡ ಅವರ ʻಸೋಲಿಗರು: ಬದುಕು ಮತ್ತು ಸಂಸ್ಕೃತಿʼ ಪುಸ್ತಕದ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
ಬಹುಮುಖಿಯಾಗಿ ಬಹುರೂಪಿಯಾಗಿ ಬೆಳೆದು ಬಂದ ಕನ್ನಡ ಸಾಹಿತ್ಯ ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಪ್ರಸ್ತುತಗೊಳ್ಳುತ್ತ ಬಂದಿದ್ದರಿಂದಲೇ ಅದು ಜೀವಂತಿಕೆಯನ್ನು ಕಾಯ್ದುಕೊಂಡು 8 ಜ್ಞಾನಪೀಠಗಳನ್ನು ಪಡೆದು ಭಾರತೀಯ ಸಾಹಿತ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿ ಮೆರೆದಿದೆ, ಮೆರೆಯುತ್ತಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತನಾಟಕ, ಕಥನಕವನ, ಪ್ರವಾಸಕಥನ, ಜನಾಂಗೀಯ ಅಧ್ಯಯನ…ಹೀಗೆ ಹತ್ತು ಹಲವು ಮುಖಗಳಲ್ಲಿ ಹೊಮ್ಮಿಬಂದ ಕನ್ನಡ ಸಾಹಿತ್ಯವಾಹಿನಿ ಮೈದುಂಬಿಕೊಳ್ಳುತ್ತ, ಮನಗಳನ್ನು ತುಂಬುತ್ತ ಸಾಗಿದೆ. ಆದರೆ ಈ ಎಲ್ಲಾ ಸಾಹಿತ್ಯದ ಪ್ರಕಾರಗಳಲ್ಲಿಯೇ ಅಪರೂಪ ಎನ್ನಿಸುವಷ್ಟು ಕೃಷಿ ನಡೆದದ್ದು, ಪ್ರವಾಸಕಥನ ಮತ್ತು ಜನಾಂಗೀಯ ಅಧ್ಯಯನಗಳಲ್ಲಿ. ಈ ಕೊರತೆಯನ್ನು ಸಮರ್ಥವಾಗಿ ತುಂಬಿಕೊಡುವ ನಿಟ್ಟಿನಲ್ಲಿ ಸಂಶೋಧಕ ಹನಿಯೂರು ಚಂದ್ರೇಗೌಡರು ಇಟ್ಟಿರುವ ಮೊದಲ ಹೆಜ್ಜೆಯೇ ಅವರ ʻಸೋಲಿಗರು: ಬದುಕು ಮತ್ತು ಸಂಸ್ಕೃತಿʼ ಎಂಬ ಕ್ಷೇತ್ರಕಾರ್ಯಾಧಾರಿತ ಜನಾಂಗೀಯ ಅಧ್ಯಯನ ಕೃತಿ.
ಆದಿಮಾನವ-ಬುಡಕಟ್ಟುಮಾನವ ಮತ್ತು ಆಧುನಿಕ ಮಾನವ. ಇವು ಮಾನವ ಬೆಳೆದುಬಂದ ದಾರಿಯ 3 ಅವಸ್ಥೆಗಳು. ಈ ಹಂತಗಳೊಂದಿಗೆ ಸಹಜವಾಗಿಯೇ ಭಾಷೆ ಕೂಡಾ ಆಂಗಿಕ, ವಾಚಿಕ, ಆಹಾರ್ಯ ಅಂದರೆ ದೇಹಭಾಷೆ, ಆಡುವ ಭಾಷೆ ಮತ್ತು ವೇಷ-ಭೂಷಣಗಳ ಪ್ರತಿಮಾತ್ಮಕ ಭಾಷೆಯಾಗಿ ಬೆಳೆದುಬಂತು.
ʻಬುಡಕಟ್ಟುʼ ಹೆಸರೇ ಸೂಚಿಸುವಂತೆ ನೆಲೆಯನ್ನು-ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುವ ಹಂತ. ಇದರ ಮುಂದಿನ ಹಂತವೇ ಗ್ರಾಮಗಳು ಮತ್ತು ನಗರಗಳ ರಚನೆ. ಗಿರಿಜನರು ಅಂದರೆ, ಬೆಟ್ಟಗುಡ್ಡಗಳಲ್ಲಿ ವಾಸಿಸುವವರು ಎಂಬರ್ಥ ಕೊಡುವ ಜನಾಂಗಗಳಲ್ಲಿ ಸೋಲಿಗರು ಮುಖ್ಯರಾಗುತ್ತಾರೆ. ನ್ಯಾಯಮೂರ್ತಿ ವೆಂಕಟಾಚಲಯ್ಯನವರ ಲೋಕಾಯುಕ್ತ ತಂಡದ ಸದಸ್ಯರಾಗಿದ್ದ ಎಚ್. ಸುದರ್ಶನ್, ಸೋಲಿಗರ ಅಭಿವೃದ್ಧಿಗಾಗಿ ಶ್ರಮಿಸಿಯೇ ʻಮ್ಯಾಗ್ಸೆಸೆʼ ಪ್ರಶಸ್ತಿ ಪಡೆದರು.
ಆಧುನಿಕ ಯುಗದ ನಾಗಾಲೋಟದ ನಡುವೆಯೂ ಇಂಥ ಬುಡಕಟ್ಟು ಜನಾಂಗದವರು ನಮ್ಮ ನಡುವೆ ಅಂದಿನಂತೆಯೇ ಬದುಕುತ್ತಿದ್ದಾರೆ. ಬದಲಾವಣೆಯನ್ನು ಒಪ್ಪದ, ನಾಗರಿಕರನ್ನು ಕಂಡರೆ ಭೀತಿಯಿಂದ ದೂರಹೋಗುವ ಜನಾಂಗ ಸೋಲಿಗರು. ಇಂಥ ಸೋಲಿಗರ ಬಗ್ಗೆ ಪಾಶ್ಚಾತ್ಯರೂ ಸಂಶೋಧನಾಧ್ಯಯನ ಕೈಗೊಂಡಿದ್ದಾರೆ.
10 ಅಧ್ಯಾಯಗಳಲ್ಲಿ ಸೋಲಿಗರನ್ನು ಅನಾವರಣಗೊಳಿಸಿರುವ ಸಂಶೋಧಕ ಹನಿಯೂರು ಚಂದ್ರೇಗೌಡರು ಸಾಮಾಜಿಕ, ಭೌಗೋಳಿಕ, ನೈಸರ್ಗಿಕ, ಪಾರಂಪರಿಕ, ಧಾರ್ಮಿಕ… ಹೀಗೆ ವಿಭಿನ್ನ ನೆಲೆಗಳಲ್ಲಿ ಅವರ ಬದುಕನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ. ಬುಡಕಟ್ಟು ಜನಾಂಗಗಳಲ್ಲಿ ಸ್ಥಾವರ(ನೆಲೆನಿಂತ) ಮತ್ತು ಜಂಗಮ(ಅಲೆಮಾರಿ) ಎಂಬ 2 ವಿಧಗಳಿದ್ದು, ಹಸಲರು, ಸಿದ್ಧಿಗಳು, ಕೊರಗರು, ಹಾಲಕ್ಕಿ, ಸೋಲಿಗರು ಪ್ರಮುಖರಾಗಿದ್ದಾರೆ. ನಮ್ಮ ನಾಡಿನಲ್ಲಿ ಅಂಥ 35 ಬುಡಕಟ್ಟು ಜನಾಂಗಗಳಿದ್ದು, ಅವರಲ್ಲಿ ಸೋಲಿಗರ ಬದುಕಿನ ಮೇಲೆ ವಿಭಿನ್ನವಾಗಿ ಬೆಳಕನ್ನು ಚೆಲ್ಲಲು ಇಲ್ಲಿ ಹನಿಯೂರು ಚಂದ್ರೇಗೌಡ ಯತ್ನಿಸಿದ್ದಾರೆ.
ಸಂಪೂರ್ಣ ದೇಸೀಯವಾದ ಬದುಕನ್ನು ನಡೆಸುವ ಸೋಲಿಗರು ನಿಜವಾದ ʻಮಣ್ಣಿನ ಮಕ್ಕಳುʼ. ಅರಣ್ಯದ ಉತ್ಪನ್ನಗಳ ಮಾರಾಟ ಇವರ ಪ್ರಮುಖ ಆರ್ಥಿಕ ಸಂಪನ್ಮೂಲ. ಕರ್ನಾಟಕದಲ್ಲಿ ಸೋಲಿಗರು ಹೆಚ್ಚಾಗಿ ವಾಸಿಸುವುದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ. ಇವರ ನೆಲೆಗಳನ್ನು ʻಪೋಡುʼ ಎನ್ನುತ್ತಾರೆ. ಕಾಡಿನ ಅಂಚು ಮತ್ತು ನಡುವೆ ಈ ಪೋಡುಗಳು ನಿರ್ಮಾಣವಾಗುತ್ತವೆ.
ಬಿದಿರಿನ ಸೋಲೆಯಲ್ಲಿ ಜನಿಸಿದವರು ಸೋಲಿಗರು. ಬಿದಿರಿನ ಸೋಲೆಯನ್ನು ಬಟ್ಟೆಯಂತೆ ಬಳಸುತ್ತಿದ್ದವರು ಸೋಲಿಗರು. ʻಸೋಲಿಗʼ ಪದದ ನಿಷ್ಪತ್ತಿಯನ್ನು ಸೂಚಿಸುವ ಸಂಶೋಧಕ ಹನಿಯೂರು ಚಂದ್ರೇಗೌಡರು, "ಈ ಜನಾಂಗದವರು ವಾಸಿಸುವ ಮನೆಗಳ ಮುಂದೆ ಬೆಳೆಸುವ ಹೂಗಿಡಗಳನ್ನು ಆಧರಿಸಿ ಸೋಲಿಗರ ಕುಲಗಳು ಭಿನ್ನಗೊಳ್ಳುತ್ತಾ ಗುರ್ತಿಸಲ್ಪಡುತ್ತವೆ" ಎನ್ನುತ್ತಾರೆ. ಇಂಥ ಅನೇಕ ವಿಸ್ಮಯಕಾರಿ ಅಂಶಗಳ ಸಂಸ್ಕೃತಿ ಸೋಲಿಗರದ್ದು.
ಸೆಳುಕ, ತೆನೆಯ, ಸೂರ, ಹಾಲ ಮುಂತಾಗಿ ಸೋಲಿಗರಲ್ಲಿ ಉಪಪಂಗಡಗಳಿವೆ. ಈ 6 ಕುಲಗಳಲ್ಲಿ ಸೆಳುಕರು ಯಜಮಾನ ಸ್ಥಾನದಲ್ಲಿದ್ದಾರೆ. ಒಂದು ಪೊಡಿನ ಸಮಸ್ಯೆ ಅಲ್ಲೇ ಇತ್ಯರ್ಥವಾಗುತ್ತದೆ. ರಾಗಿಮುದ್ದೆ, ರೊಟ್ಟಿ, ಅನ್ನ, ಗಂಜಿಯೊಂದಿಗೆ ಹಣ್ಣುಗಳು (ಹಲಸು, ಬಾಳೆ) ಗೆಡ್ಡೆ-ಗೆಣಸುಗಳು ಪ್ರಮುಖ ಆಹಾರವಾಗಿವೆ. 50ಕ್ಕೂ ಹೆಚ್ಚು ವಿಧದ ಸೊಪ್ಪುಗಳು ಇವರ ಆಹಾರದ ವೈಶಿಷ್ಟ್ಯ.
ಯಾವ ಸಣ್ಣವಿಷಯವನ್ನೂ ಅಲಕ್ಷಿಸದೆ, ಯಾವುದನ್ನೂ ಪುನರಾವರ್ತಿಸದೆ ನಿರೂಪಿಸಿರುವುದು ಈ ಕೃತಿಯ ವಿಶಿಷ್ಟ ಅಂಶ. ಕಾಡಿನ ನಡುವೆ ಕಾಡುಪ್ರಾಣಿಗಳ ನಡುವೆ, ಎದೆಗುಂದದೆ ಬದುಕುವ ಈ ಜನಾಂಗ ಸೋಲನ್ನೇ ಅರಿಯದ ಜನಾಂಗ. ಬದುಕನ್ನು ಎದುರಿಸುವುದು ಹೇಗೆ ಎಂಬುದನ್ನು ಕಲಿಸುವುದೇ ಸೋಲಿಗರ ಶಿಕ್ಷಣಪದ್ಧತಿಯಾಗಿರುವುದು ವಿಶೇಷ.
50 ಕ್ಕೂ ಹೆಚ್ಚು ವಿಧದ ಸೊಪ್ಪುಗಳಂತೆಯೇ 36ಕ್ಕೂ ಹೆಚ್ಚು ಜಾತಿಯ ಮರಗಳನ್ನೂ ಸೋಲಿಗರು ಗುರುತಿಸಬಲ್ಲರು. ಮದುವೆ ಇವರಲ್ಲಿ ʻಆಯ್ಕೆಯೇʼ ಹೊರತು ʻಹೇರಿಕೆಯಲ್ಲʼ ಎನ್ನುವುದು ತುಂಬ ಮುಖ್ಯವಾದ ಅಂಶ. ಹುಡುಗ-ಹುಡುಗಿ ಪರಸ್ಪರ ಆಯ್ಕೆಮಾಡಿಕೊಂಡು ಎಲ್ಲೋ ಓಡಿಹೋಗುತ್ತಾರೆ. ಅಂತರ್ಜಾತಿ ವಿವಾಹ ಇವರಲ್ಲಿ ನಿಷಿದ್ಧ. ಒಪ್ಪಂದದ ಮದುವೆ ಮತ್ತು ಕೂಡಾವಳಿ ಮದುವೆ ಎಂದು 2 ವಿಧಗಳಿದ್ದು, ಉಡುಗೊರೆಯ ಪದ್ಧತಿ ಇರಲಿಲ್ಲ. ಇತ್ತೀಚೆಗೆ ನಾಗರಿಕ ಸಮಾಜದ ಪ್ರಭಾವದಿಂದಲೋ ಏನೋ ಅಲ್ಲಿಯೂ ಉಡುಗೊರೆ ಪದ್ಧತಿ ಪ್ರಾರಂಭವಾಗಿದೆ. ಇತ್ತೀಚೆಗೆ ದೂರದರ್ಶನದ ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾದ ʻಹಳ್ಳಿಹೈದ ಪ್ಯಾಟೆಗ್ ಬಂದʼ ಕಾರ್ಯಕ್ರಮಕ್ಕೆ ಬಲವಂತವಾಗಿ ಸೋಲಿಗರ ಹುಡುಗನನ್ನು ಕರೆತರಲಾಗಿತ್ತು. ಕೊನೆಗೆ ಅವನು ನಾಡಲ್ಲೂ ಇರಲಾಗದೆ, ಪೋಡಿಗೂ ಹೋಗಲಾಗದೆ ಒದ್ದಾಡಿ ದುರಂತ ಅಂತ್ಯವನ್ನು ಕಂಡ. ಮುಗ್ದ ಜನಾಂಗಗಳ ದುರ್ಬಳಕೆ ನಾಗರಿಕ ಸಮಾಜದಲ್ಲಿ ನಿರಂತರ. ಅದಕ್ಕೆಂದೇ ಅವರು ಕಾಡುಪ್ರಾಣಿಗಳಿಗಿಂತ ನಗರದವರಿಗೆ ಹೆಚ್ಚು ಹೆದರಿ ಅವರಿಂದ ದೂರವಿರಲು ಬಯಸುತ್ತಾರೆ. ಕಾಡುಪ್ರಾಣಿಗಳಿಗಿಂತ ನಾಗರಿಕನೇ ಅತ್ಯಂತ ಅಪಾಯಕಾರಿಯಾಗುತ್ತಿದ್ದಾನೆ.
ದುಡಿದೇ ಬದುಕಬೇಕಾದ, ದುಡಿಮೆಯೇ ಬದುಕಾದ ಸೋಲಿಗರಲ್ಲಿ ವೃದ್ಧಾಪ್ಯ ಒಂದು ಹೊರೆ, ಶಾಪ. ಆದರೂ ವೃದ್ಧರನ್ನು ನಿರ್ಲಕ್ಷಿಸದೆ ಆದರಿಸುತ್ತಾರೆ. ಇದನ್ನು ಲೇಖಕ ಹನಿಯೂರು ಚಂದ್ರೇಗೌಡ ಅವರು ಹೇಳುವಂತೆ, “ವೃದ್ಧಾಪ್ಯವು ಆರ್ಥಿಕ ಮಾಲ್ಯವನ್ನು ಕುಗ್ಗಿಸುತ್ತದೆ, ಸಾಮಾಜಿಕ ಮೌಲ್ಯವನ್ನು ಹೆಚ್ಚಿಸುತ್ತದೆ”. ಇಂಥವು ನಾಗರಿಕ ಸಮಾಜಕ್ಕೆ ಪಾಠವಾಗಬೇಕು. ಸಮೃದ್ಧ ಶ್ರೀಮಂತಿಕೆ ಇದ್ದೂ ತಂದೆ-ತಾಯಿಯರನ್ನು ವೃದ್ಧಾಶ್ರಮಗಳಿಗೆ ತಳ್ಳುವ ಕ್ರೂರಮನಸ್ಸುಗಳು ಸೋಲಿಗರಿಂದ ನೀತಿಪಾಠ ಕಲಿಯಬೇಕಿದೆ.
ಸಮಾಧಿಗಳ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಸೋಲಿಗರ ಪರಿಸರ ಪ್ರೀತಿ ಮಾದರಿ ಮತ್ತು ಆದರ್ಶವಾದುದು. ಭಾರತ ಗಿಡಮೂಲಿಕೆಗಳ ಔಷಧೀಯ ಸಸ್ಯಗಳಿಗೆ ಹೆಸರಾದ ದೇಶ. ಇದಕ್ಕೆ ರಾಮಾಯಣದಲ್ಲಿನ ʻಸಂಜೀವಿನಿ ಪರ್ವತʼ ಪ್ರಸಂಗವೇ ಒಂದು ಸಾಕ್ಷಿ. ಬಹುತೇಕ ಸೋಲಿಗರು ತಮ್ಮ ಆರೋಗ್ಯದ ರಕ್ಷಣೆಗಾಗಿ, ರೋಗಗಳಿಂದ ಮುಕ್ತರಾಗಲು ಈ ಗಿಡಮೂಲಿಕೆಗಳನ್ನೇ ಆಧರಿಸಿದ್ದಾರೆ. ಪೌಷ್ಟಿಕ ಆಹಾರದ ಕೊರತೆ ಈ ಜನಾಂಗದ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ.
ನಮ್ಮ ಭಾರತದ ಅದರಲ್ಲೂ ಕನ್ನಡ ನಾಡಿನ ನೆಲಮೂಲ ಸಂಸ್ಕೃತಿಯ ತವನಿಧಿಯಾದ ಜನಪದರು, ಯಾವುದೇ ಆಂಗ್ಲವೈದ್ಯಕೀಯ ಪರಿಹಾರೋಪಾಯಗಳನ್ನು ಅರಿತವರಲ್ಲ. ದೇಸಿ ಔಷಧಿಗಳನ್ನು ಗಿಡಮೂಲಿಕೆಗಳನ್ನು ಆಧರಿಸಿಯೇ ಅವರು ಶತಾಯುಷಿಗಳಾಗಿ ಬಾಳಿದರು. ಆದರೆ ಆಂಗ್ಲವೈದ್ಯ ಪದ್ಧತಿಯ ಮೊರಹೋಗಿರುವ ನಾವು…..? ಅರಿಶಿಣ, ತುಳಸಿ, ಬೇವು ಮುಂತಾದವನ್ನು ಪರಿಚಯಿಸಿದ ದೇಶ ಭಾರತ. ಚರ್ಮಕ್ಕೆ ಕಾಂತಿ ಅರಿಶಿಣದಿಂದಾದರೆ, ನೆಗಡಿ, ಕೆಮ್ಮಿಗೆ ರಾಮಬಾಣ ತುಳಸಿಯಿಂದ. ಹಲ್ಲಿನ ಆರೋಗ್ಯಕ್ಕೆ ಬೇವಿನಕಡ್ಡಿ. ಹೀಗೆ, ಅವುಗಳಿಂದಾಗುವ ಲಾಭಗಳನ್ನು ನಮ್ಮವರು ಆಗಲೇ ಅರಿತುಕೊಂಡದ್ದು ಅಗಾಧವಾದ ಅಂಶವಲ್ಲವೇ? ಅದರಲ್ಲೂ ತುಳಸಿ, ಓಝೋನ್ ಪದರದ ಪ್ರಬಲ ರಕ್ಷಕವಾಗಿದೆ.
ಸೊಪ್ಪು, ಜೇನು ಮುಂತಾದವನ್ನು ವಿಂಗಡಿಸಿದಂತೆ ಸೋಲಿಗರು ಕಾಡನ್ನೂ ವಿಂಗಡಿಸಿ, ಹೆಸರಿಸಿರುವುದುಂಟು. ದೊಡ್ಡಕಾನು, ಬೆಗ್ಗಾಡು, ತೋಪುಕಾಡು, ಬೋಳುಕಾಡು ಇತ್ಯಾದಿಯಾಗಿ ಅವುಗಳ ನೆಲೆ-ಹಿನ್ನೆಲೆ-ಸ್ವರೂಪಗಳನ್ನಾಧರಿಸಿ ವಿಂಗಡಿಸುತ್ತಾರೆ. ಈ ವಿಂಗಡಣೆಯಲ್ಲಿ ಸೋಲಿಗರ ಗ್ರಹಿಕೆ, ಸೂಕ್ಷ್ಮತೆಗಳ ಜಾಣ್ಮೆ ಎದ್ದುಕಾಣುತ್ತದೆ.
ಇತ್ತೀಚೆಗೆ ಸೋಲಿಗರಲ್ಲಿ ಸಹಕಾರ ಸಂಘಗಳು ಹುಟ್ಟಿಕೊಳ್ಳುತ್ತಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗಾಗಿಯೇ ʻಲ್ಯಾಂಪ್ ಸೊಸೈಟಿʼ ಶ್ರಮಿಸುತ್ತಿದೆ. ಇದು ಅವರಿಂದ ಅರಣ್ಯೋತ್ಪನ್ನಗಳನ್ನು ಖರೀದಿಸಿ, ಮಾರಿ ಲಾಭವನ್ನು ಅವರ ಪ್ರಗತಿಗೇ ಬಳಸುತ್ತಿರುವ ಅಂಶವನ್ನು ಈ ಕೃತಿಯಲ್ಲಿ ಕಾಣಬಹುದು. ಸೋಲಿಗರು ಅಲೆಮಾರಿತನವನ್ನು ಕೈಬಿಟ್ಟು, ಸ್ಥಿರವಾದ ಪೋಡುಗಳಲ್ಲಿ ನೆಲೆನಿಂತು ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಾಗಿ, ನವಣೆ, ಕಡಲೆಕಾಯಿ ಬೆಳೆಗಳನ್ನು ಮುಖ್ಯವಾಗಿ ಬೆಳೆಯುತ್ತಿದ್ದಾರೆ. ಮೊದಲು ಬೇಟೆ, ಆಮೇಲೆ ಕೃಷಿ ಸೋಲಿಗರ ಜೀವನೋಪಾಯದ ದಾರಿಯಾಗಿದ್ದವು.
ಎಲ್ಲಾ ಆಚರಣೆಗಳಂತೆ ಧಾರ್ಮಿಕವಾದ ಸೋಲಿಗರ ಆಚರಣೆಗಳೂ ತೀರಾ ವಿಭಿನ್ನವಾಗಿವೆ. ರೊಟ್ಟಿ ಹಬ್ಬದಲ್ಲಿ ಸಾವಿರಾರು ರೊಟ್ಟಿಗಳನ್ನು ತಯಾರಿಸಿ, ಸಾಮೂಹಿಕ ಭೋಜನ ಮಾಡುತ್ತಾರೆ. ಇದು ನಮ್ಮ ಸಂಸ್ಕೃತಿಯ ಧ್ಯೇಯವಾಕ್ಯವಾದ ʻಸಹನಾ ಭವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈʼ ಅನ್ನು ಸಮರ್ಥಿಸುತ್ತ ಪ್ರತಿನಿಧಿಸುತ್ತದೆ.
ತಾರೆಮರ, ನೇರಳೆಮರ, ನೆಲ್ಲಿಮರಗಳನ್ನು ಹೆಚ್ಚಾಗಿ ಪೂಜಿಸುವ ಸೋಲಿಗರು, ಹುಲಿಯ ಹೆಜ್ಜೆ ಕಂಡರೆ ನಮಸ್ಕರಿಸುತ್ತಾರೆ(ಮಾದೇಶ್ವರನ ವಾಹನ ಹುಲಿಯಾದುದರಿಂದ!). ಗಿಣಿಯನ್ನೂ ಸಹ ಪೂಜಿಸುತ್ತಾರೆ.
ಇಂತಹ ಜನಾಂಗೀಯ ಅಧ್ಯಯನದ ಕ್ಷೇತ್ರಕಾರ್ಯಗಳು ನಮ್ಮಲ್ಲಿನ ವೈವಿಧ್ಯಮಯ ಸಂಪತ್ತನ್ನು ನಮಗೆ ಪರಿಚಯಿಸಿಕೊಡುತ್ತವೆ. ಮಾದೇಶ್ವರಬೆಟ್ಟ, ಬಿಳಿಗಿರಿರಂಗಸ್ವಾಮಿ ಬೆಟ್ಟ ಮತ್ತು ನಂಜನಗೂಡು ಸೋಲಿಗರ ಪ್ರಮುಖ ಆಕರ್ಷಣೆ ಮತ್ತು ಆಚರಣೆಗಳ ನೆಲೆವೀಡುಗಳಾಗಿವೆ. ಈ ಜಾತ್ರೆಗಳಲ್ಲಿ ತಮಟೆ, ಹಾಡು, ಕುಣಿತಗಳಲ್ಲಿ ಜನ ಮೈಮರೆಯುತ್ತಾರೆ. ರಂಗಪ್ಪ, ಮಾದಪ್ಪ, ಜಡೆಯಪ್ಪ ಈ ಮೂರೂ ಸೋಲಿಗರ ದೈವಗಳು. ಕೋಟೆಮಾರಮ್ಮ, ಕೊಟ್ಟದಮಾಸ್ತಮ್ಮ, ಮಾರಮ್ಮ, ಚಿಕ್ಕದೇವಮ್ಮ ಸೋಲಿಗರ ಪ್ರಮುಖ ದೇವತೆಗಳಾಗಿದ್ದಾರೆ.
ಹಿಂದೂಧರ್ಮದ ಭಾಗವಾಗಿ, ಪರಿಶಿಷ್ಟ ಪಂಗಡ(ಎಸ್.ಟಿ)ವಾಗಿ ಗುರುತಿಸಿಕೊಂಡಿರುವ ಸೋಲಿಗರು, ನರ-ಸುರ-ಚಂದ್ರ-ಸೂರ್ಯ-ದೇವ…. ಹೀಗೆ 5 ಲೋಕಗಳಿವೆ ಎಂದು ನಂಬುತ್ತಾರೆ. ಇವು ಒಂದಾಗಿ ನರಲೋಕವಾಗಿ ಸೃಷ್ಟಿಕರ್ತನಿಂದ ಸೃಷ್ಟಿಯಾಗುತ್ತವೆ ಎಂಬ ವಿಚಿತ್ರ ನಂಬಿಕೆ ಇವರಲ್ಲಿದೆ. ಭೂಮಿ ಅಲ್ಲದೆ ಬೇರೆ ಗ್ರಹಗಳು, ನಕ್ಷತ್ರಗಳು ಇರುವ ಬಗ್ಗೆ ಇವರಲ್ಲಿನ ಆಲೋಚನೆಗಳು ಗಮನಾರ್ಹ.
ಪ್ರತಿ ಮೂರು ವರ್ಷಕ್ಕೊಮ್ಮೆ ನೆಲೆ ಬದಲಿಸುತ್ತ, ಅಲೆಮಾರಿಗಳಾಗಿದ್ದ ಸೋಲಿಗರು ಇತ್ತೀಚೆಗೆ ಸ್ಥಾವರ(ಒಂದೆಡೆ ನೆಲೆನಿಂತ) ಜೀವಿಗಳಾಗುತ್ತಿದ್ದಾರೆ. ಆಧುನಿಕತೆಗೆ ಕಾಲಕ್ರಮೇಣವಾಗಿ ಒಗ್ಗಿಕೊಳ್ಳುತ್ತಿರುವ ಇವರು ಹಿಂದುಳಿದ ಗುಂಪಿಗೆ ಸೇರಿದ್ದು, ಇವರ ಪೋಡುಗಳಿಗೆ ಸರ್ಕಾರಿ ಶಾಲೆಗಳು ಪ್ರವೇಶ ಪಡೆದಿವೆ. ಅಲ್ಲದೆ, ಆರೋಗ್ಯ ಕೇಂದ್ರ, ಸಾರಿಗೆ ಸಂಪರ್ಕ, ಮನರಂಜನಾ ಸಾಧನಗಳು, ಶಿಕ್ಷಣ ಸೌಲಭ್ಯಗಳನ್ನೂ ಪಡೆಯುತ್ತಿರುವ ಸೋಲಿಗರು, ಇನ್ನೂ ಅನೇಕ ಸಾಮಾಜಿಕ ಕಳಂಕಗಳಿಂದ ಮುಕ್ತರಾಗಿಲ್ಲದಿರುವುದು ಬೇಸರದ ಸಂಗತಿ. ಬಾಲ್ಯವಿವಾಹ, ಬಾಲಕಾರ್ಮಿಕ, ಜೀತ ಇತ್ಯಾದಿ ಸಾಮಾಜಿಕ ಅನಿಷ್ಟಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇನ್ನೂ ಪೂರ್ಣಪ್ರಮಾಣದಲ್ಲಿ ಸಾರಿಗೆ ಸಂಪರ್ಕ, ಶಿಕ್ಷಣ ಸೌಲಭ್ಯ, ವಿದ್ಯುತ್ ಸೌಲಭ್ಯ, ವಸತಿ ಸೌಲಭ್ಯಗಳು ಇವರನ್ನು ತಲುಪದೆ ಅತಂತ್ರಸ್ಥಿತಿಯಲ್ಲಿದ್ದಾರೆ.
ಹೀಗೆ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದ, ಸಾಂಸ್ಕೃತಿಕ ಸಂಪನ್ನತೆಯ ಆಗರವಾಗಿರುವ ಸೋಲಿಗರ ಬದುಕು-ಸಂಸ್ಕೃತಿಯ ಕುರಿತು ಸಮಗ್ರವಾದ ವಿಷಯ-ವಿಚಾರಗಳನ್ನು ಕಟ್ಟಿಕೊಡುವ ಮೂಲಕ ಸರ್ಕಾರ, ಸಮಾಜಗಳ ಲಕ್ಷ್ಯವನ್ನು ಸೆಳೆಯುವಲ್ಲಿ ಯುವ ಸಂಶೋಧಕ ಹನಿಯೂರು ಚಂದ್ರೇಗೌಡ ಸಫಲರಾಗಿದ್ದಾರೆ.
- ಕೆ. ಮಧುಸೂದನ ಜೋಷಿ
ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...
"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...
“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...
©2024 Book Brahma Private Limited.