ಸಾಮಾನ್ಯ ವ್ಯಕ್ತಿಗಳ ಬದುಕಿನ ಕತೆ : ರಾಜೇಂದ್ರ ಚೆನ್ನಿ


" ಆಧುನಿಕ ಕನ್ನಡ ಕಥನದ ಬಹುಮುಖ್ಯ ಭಾಗವಾಗಿರುವ ಉತ್ತರ ಕನ್ನಡದ ಗ್ರಾಮೀಣ ಸಮಾಜದಲ್ಲಿ ಕತೆಯ ಘಟನೆಗಳು ನಡೆಯುತ್ತವೆ. ಸ್ಥಳೀಯವೂ ಸ್ಥಿರವೂ ಆಗಿ ಕಾಣುವ ಈ ಸಮಾಜದ ಸಾಮಾನ್ಯ ವ್ಯಕ್ತಿಗಳ ಬದುಕಿನ ಕತೆಯಿದಾಗಿದೆ" ಎನ್ನುತ್ತಾರೆ ಲೇಖಕ ರಾಜೇಂದ್ರ ಚೆನ್ನಿ. ಅವರು ಲೇಖಕ ಶ್ರೀಧರ ಬಳಗಾರ ಅವರ ವಿಸರ್ಗಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಶ್ರೀಧರ ಬಳಗಾರ ಅವರ ‘ವಿಸರ್ಗ’ ಇತ್ತೀಚೆಗೆ ನಾನು ಓದಿದ ಪ್ರಭಾವಿ ಕಾದಂಬರಿಗಳಲ್ಲಿ ಒಂದು. ಓದಿದ ಮೇಲೆ ಬಹುಕಾಲ ತನ್ನ ವಸ್ತುವಿನ ಗಾಂಭೀರ್ಯ ಮತ್ತು ಹರಹು, ಆ ವಸ್ತುವಿನ ನಿರ್ವಹಣೆಯಲ್ಲಿ ಕಂಡುಬರುವ ಆಳ, ತೀವ್ರತೆ ಹಾಗೂ ವಸ್ತುನಿಷ್ಠತೆಯಿಂದಾಗಿ ಮನಸ್ಸಿನಲ್ಲಿ ನೆಲೆ ಮಾಡುವ ಕೃತಿ ಇದಾಗಿದೆ. ಹಾಗೆ ನೋಡಿದರೆ ಇದು ಪ್ರಯೋಗಶೀಲವಾದ ಹೊಸಬಗೆಯ ನಿರೂಪಣಾ ತಂತ್ರಗಳನ್ನಾಗಲಿ, ಕಥನದ ವಿನ್ಯಾಸವನ್ನಾಗಲೀ ಬಳಸಿಕೊಳ್ಳುವುದಿಲ್ಲ. ಮೇಲುನೋಟಕ್ಕೆ ವಸ್ತುವೂ ಕೂಡ ಹೊಸದಲ್ಲ ಅನ್ನಿಸಬಹುದು. ಆಧುನಿಕ ಕನ್ನಡ ಕಥನದ ಬಹುಮುಖ್ಯ ಭಾಗವಾಗಿರುವ ಉತ್ತರ ಕನ್ನಡದ ಗ್ರಾಮೀಣ ಸಮಾಜದಲ್ಲಿ ಕತೆಯ ಘಟನೆಗಳು ನಡೆಯುತ್ತವೆ. ಸ್ಥಳೀಯವೂ ಸ್ಥಿರವೂ ಆಗಿ ಕಾಣುವ ಈ ಸಮಾಜದ ಸಾಮಾನ್ಯ ವ್ಯಕ್ತಿಗಳ ಬದುಕಿನ ಕತೆಯಿದಾಗಿದೆ. ಕೆಲವು ಕುಟುಂಬಗಳು, ಕೆಲವು ಪಾತ್ರಗಳು ಕಾದಂಬರಿಯ ಕ್ಯಾನ್‌ವಾಸ್ ಅನ್ನು ತುಂಬಿಕೊಳ್ಳುತ್ತವೆ.

ಈ ಸಾಮಾನ್ಯತೆಯೊಳಗೆ ದೈನಂದಿಕತೆಯ ಒಳಗೆ ಅಸಾಮಾನ್ಯವಾದ ಅನುಭವ ಲೋಕಗಳು ಬಿಚ್ಚಿಕೊಳ್ಳುವುದು ಈ ಕಾದಂಬರಿಯ ವಿಶೇಷವಾಗಿದೆ. ಈ ಅನಾವರಣದ ಕಥನಕ್ಕೆ ಬರಹಗಾರರು ಬಳಸುವ ಭಾಷೆ, ಶೈಲಿಗಳು ಸಾಂದ್ರವಾದ ವಾಸ್ತವಿಕ ವಿವರಗಳನ್ನು ಕಾವ್ಯಕ್ಕೆ ಹತ್ತಿರವಾದ ರೀತಿಯಲ್ಲಿ ಕಟ್ಟಿಕೊಡುತ್ತವೆ. ಇದು ಕೇವಲ ‘‘ಸ್ಥಳೀಯ, ಶ್ರೀಮಂತ’’ ವಿವರಗಳನ್ನು ವರದಿ ಮಾಡುವ ಬರಹವಲ್ಲ, ಕಬ್ಬಳ್ಳಿ, ನರಿಸರ, ತಾರಗಾರ ಇವುಗಳ ಪುಟ್ಟ ಜಗತ್ತಿನಲ್ಲಿ ಏಕೆ ಅನಿವಾರ್ಯ ವೆನಿಸುತ್ತದೆಯೆಂದರೆ ಈ ಕತೆಯ ಪಾತ್ರಗಳ ಕ್ರಿಯೆಗಳು, ನಿಶ್ಚಯಗಳು, ದೈವ ಈ ಜಗತ್ತಿನಿಂದ ಬೇರ್ಪಡಿಸಲಾಗದಂತಿವೆ. ಒಂದು ರೀತಿಯಲ್ಲಿ ಇದು ಕಾದಂಬರಿಯ ಮುಖ್ಯ ತಾತ್ವಿಕ ಕಾಳಜಿಯೂ ಆಗಿದೆ. ಮನುಷ್ಯ ಜೀವಿಗಳು ಸ್ವತಂತ್ರರೆ? ಪೂರ್ವಲಿಖಿತ ದೈವದಂತೆ ನಮ್ಮ ಪರಿಸರ, ಕುಟುಂಬದ ನೆನಪುಗಳು, ಚರಿತ್ರೆ ಉಸಿರುಕಟ್ಟಿಸುವ ಸಮಾಜ ಇವೆಲ್ಲವು ನಮ್ಮ ಪ್ರಜ್ಞೆಯನ್ನೇ ನಿಯಂತ್ರಿಸುತ್ತವೆಯೆ? ಹಾಗಿದ್ದರೆ ನಮ್ಮ ಕ್ರಿಯಾ ಸ್ವಾತಂತ್ಯ್ರದ ಅರ್ಥವೇನು? ಅಲ್ಲದೆ ಈ ಪರಿಸರವು ಅಂದುಕೊಂಡಷ್ಟು ಪಾರದರ್ಶಕವಲ್ಲ. ಹೆಜ್ಜೆ ಇಟ್ಟಲ್ಲಿ ಸೆಳೆದುಕೊಳ್ಳುವಂಥ ಒಳಸುಳಿಗಳಿವೆ. ಕೊನೆಗೂ ಅರ್ಥವಾಗದ ಸಂದಿಗ್ಧಗಳಿವೆ. ಹೀಗೆ ಕ್ರಮೇಣವಾಗಿ ಈ ಪುಟ್ಟ ಜಗತ್ತು ಮನುಷ್ಯನ ಅಸ್ತಿತ್ವ ಓದುಗನ ಮನಸ್ಸಿನಲ್ಲಿ ವಿಸ್ತರಿಸಿಕೊಳ್ಳುತ್ತದೆ.

ಇದಾವುದೋ ಬರಹಗಾರರ ಅಮೂರ್ತವಾದ ತಾತ್ವಿಕತೆಯಲ್ಲ, ಇಂಥ ಆಳವಾದ ತಾತ್ವಿಕತೆಯು ವಾಸ್ತವವಾದಿ ಶೈಲಿಯ ಕತೆಗಾರಿಕೆಯ ಸಹಜ ಲಯಗಳಲ್ಲಿ ಸದ್ದಿಲ್ಲದೆ ಬೆರೆತುಕೊಂಡಿದೆ.

ಕಾದಂಬರಿಯ ಅದ್ಭುತವಾದ ಆರಂಭವು ಕಾದಂಬರಿಯ ಉದ್ದಕ್ಕೂ ಎದ್ದುಕಾಣುವ ಎಚ್ಚರದ ಕಲೆಗಾರಿಕೆಯ ದ್ಯೋತಕವಾಗಿದೆ. ಜನರು ಜನ್ಮಾಂತರದ್ದು ಎಂದು ನಂಬುವ ಗೆಳೆತನದ ಭಟ್ಟಣ್ಣ ಮತ್ತು ಮಾವಯ್ಯ, ಕಡಿದಾದ ಕಾಡಿನ ದಾರಿಯಲ್ಲಿ ನರಿಸರದತ್ತ ಹೊರಟಿದ್ದಾರೆ. ಭಟ್ಟಣ್ಣ ಏನೋ ಸಂಕಲ್ಪ ಮಾಡಿಕೊಂಡು ಇಲ್ಲಿ ಮಾವಯ್ಯನನ್ನು ಕರೆತಂದಿದ್ದಾನೆ, ಆದರೆ ಅದನ್ನು ಹೇಳಿಲ್ಲ. ಅಷ್ಟರಲ್ಲಿ ಆಗಸದಲ್ಲಿ ಗರುಡ ಜೋಡಿಯೊಂದು ಅತಿಮಾನುಷ ಲೋಕದಿಂದ ಇಳಿದು ಬಂದಂತೆ ಹಾರುವುದು ಕಾಣುತ್ತಿದೆ. ಅವುಗಳ ರೆಕ್ಕೆಗಳು ಬೀಸುವ ಸದ್ದು ಅಲೌಕಿಕ ಸಂಗೀತದಂತೆ ಕೇಳುತ್ತದೆ. ಕಾದಂಬರಿಯ ಕೊನೆಯ ಪುಟದಲ್ಲಿ ಮತ್ತೆ ಒಂಟಿ ಗರುಡ ಪ್ರತ್ಯಕ್ಷವಾಗುತ್ತದೆ. ಇಬ್ಬರೂ ಗೆಳೆಯರಿಗೆ ವಿಷ್ಣುವಿನ ವಾಹನ ಕಂಡದ್ದು ಶುಭ ಶಕುನ, ದೇವರ ಕೃಪೆ ಎನಿಸುತ್ತದೆ. ಆದರೆ ಒಳಿತು, ಶುಭದ ಈ ಮುಹೂರ್ತದ ನಂತರ ಅವರು ಬಂದು ತಲುಪುವುದು ಭೀಕರವಾದ ದಂಪತಿ ಹತ್ಯೆಯ ತಾಣವಾಗಿದ್ದ ಹಳೆಯ, ಪಾಳುಬಿದ್ದ ಮನೆಗೆ. ಕುಡುಗೋಲಿನಿಂದ ಅಟ್ಟಾಡಿಸಿ ಕೊಂದಿದ್ದನ್ನು ಕಲ್ಪಿಸಿಕೊಂಡು ಅಧೀರರಾಗುವಂತಿದೆ. ಇದರ ಹಿಂದಿನ ಶ್ರೀಮಂತಿಕೆ, ದ್ವೇಷ, ದಾಯಾದಿ ಮತ್ಸರ ಇವುಗಳ ಕರಾಳವಾದ ಚಿತ್ರಣ ಶುರುವಾಗುತ್ತದೆ. ಇದು ಕೃತಿಯ ಮೂಲಸತ್ವವೂ ಆಗಿದೆ. ಬೋಳೆತನದ ಒಳಿತಿನಲ್ಲಿ ನಂಬಿಕೆ, ಸಿನಿಕತನದ ವಿಷಾದದ ಕೆಡುಕಿನ ದುರಂತ ಪ್ರಜ್ಞೆ. ಇವುಗಳು ಕಥನದಲ್ಲಿ ಹಾಸುಹೊಕ್ಕಾಗಿ ಒಂದು ಇನ್ನೊಂದನ್ನು ಮುಗಿಯದ ಕರ್ಷಣದಲ್ಲಿ ಇಡುತ್ತವೆ. ಒಂಟಿ ಗರುಡನ ದರ್ಶನದೊಂದಿಗೆ ಕಾದಂಬರಿ ಮುಗಿಯುತ್ತದೆಯೆ ಹೊರತು ಈ ಕರ್ಷಣ ಪರಿಹಾರ ವಿಲ್ಲದೆ ಉಳಿದುಕೊಳ್ಳುತ್ತದೆ.

ಈ ದಂಪತಿಗಳ ಭೀಕರ ಕೊಲೆಯ ರಹಸ್ಯ ಬಗೆಹರಿಯುವುದೇ ಇಲ್ಲ. ಆದರೆ ಸಾಕ್ಷಿಯಾದ ಚಿಕ್ಕಮಗು ಉಮ್ಮಣ್ಣನ ಬದುಕು ಕೊನೆವರೆಗೂ ಅಸ್ಥಿರವಾಗುತ್ತದೆ. ಅಪಾರವಾದ ಕ್ರಿಯಾಶೀಲತೆ, ಛಲ ಮತ್ತು ಒಳಿತಿನ ಹಂಬಲವಿರುವ ಭಟ್ಟಣ್ಣನ ಸಂಕಲ್ಪವೆಂದರೆ ಮಾವಯ್ಯನ ಮಗಳು ಪದುಮಳನ್ನು ಉಮ್ಮಣ್ಣನಿಗೆ ಮದುವೆ ಮಾಡಿಸಿ, ಅನಾಥವಾಗಿ ಬಿದ್ದಿರುವ ಈ ಮನೆ, ಆಸ್ತಿಗಳನ್ನು ಉದ್ಧಾರಗೊಳಿಸಿ, ಭೀಕರ ಕೊಲೆಯ ನೆನಪನ್ನು ಅಳಿಸಿ ಮತ್ತೆ ಜೀವ ಸ್ಪರ್ಶ ಮಾಡುವುದಾಗಿದೆ. ಇಲ್ಲಿಂದ ಕಾದಂಬರಿಯ ಪ್ರಧಾನ ಕ್ರಿಯೆ ಆರಂಭವಾಗುತ್ತದೆ. ಆದರೆ ಕಾದಂಬರಿಯ ಹಿಂದಿರುವ ಲೋಕದೃಷ್ಟಿಯಲ್ಲಿ ಇದು ಸುಲಭ ಸಾಧ್ಯವಲ್ಲ. ಉದ್ದೇಶ, ಸಂಕಲ್ಪಗಳು ಏನೇ ಇರಲಿ ಎಲ್ಲಾ ಕ್ರಿಯೆಗಳು ಅಪನಂಬಿಕೆ, ಆರೋಪಗಳಿಗೆ ಬದ್ಧವಾಗಿವೆ. ಅಷ್ಟಕ್ಕೂ ಕ್ರಿಯೆ ಮಾಡುವವರ ಮನಸ್ಸಿನಲ್ಲಿ ಇರುವ ಉದ್ದೇಶಗಳು (motive) ಏನೆಂದು ಯಾರಿಗೆ ಗೊತ್ತು? ಅವರಿಗೂ ಗೊತ್ತಿಲ್ಲ, ದೇವರಿಗೂ ಗೊತ್ತಿಲ್ಲ. ಹೀಗಾಗಿ ಕಾದಂಬರಿಯ ಉದ್ದಕ್ಕೂ ದಟ್ಟವಾದ ದ್ವಂದ್ವದಿಂದಾಗಿ ಕ್ರಿಯೆಗಳ ವ್ಯಾಖ್ಯಾನಗಳು ಒಂದು ದಡದಿಂದ ಇನ್ನೊಂದು ದಡಕ್ಕೆ ಹೊಯ್ದಾಡುತ್ತವೆ. ಹಾಗೆ ಇದು ಮನುಷ್ಯರ ಬದುಕಿನ ಅಪರಿಹಾರ್ಯವಾದ ಸಂದಿಗ್ಧ ಸ್ಥಿತಿಯಾಗಿದೆ. ಬಾವಂತಿ ಕುಟುಂಬದ ಭಟ್ಟಣ್ಣ, ಉಪ್ಪರಿಗೆ ಕುಟುಂಬದ ದೈವದಲ್ಲಿ ಹಸ್ತಕ್ಷೇಪ ಮಾಡಿ ತನ್ನ ಮೇಲುಗೈ ಸಾಧಿಸುತ್ತಿದ್ದಾನೆಯೆ? ಅಥವಾ ಮಾವಯ್ಯ ಮಾಡಿದ ಸಹಾಯದ ಋಣ ತೀರಿಸುತ್ತಿದ್ದಾನೆಯೆ? ಅಥವಾ ಅವನ ಒಳಿತಿನ ಅಪೇಕ್ಷೆ ಸಾಚಾ ಆಗಿದೆಯೆ? ಯಾರು ಹೇಳಬಲ್ಲರು?

ಇದು ಸಾಲದೆಂಬಂತೆ ಮಾವಯ್ಯನ ಹೆಂಡತಿ ಗೌರಕ್ಕನಿಗೆ ಭಟ್ಟಣ್ಣನ ಮೇಲೆ ಕಡು ಸಂಶಯ. ಬೋಳೆ ಸ್ವಭಾವದ ಗಂಡ ಮಾವಯ್ಯ ತನ್ನ ಆಭರಣಗಳನ್ನು ಭಟ್ಟಣ್ಣನಿಗಾಗಿ ಕಡ ಇಟ್ಟಿದ್ದು ಅವಳನ್ನು ನೋಯಿಸಿದೆ. ಇದು ದಾಂಪತ್ಯದಲ್ಲಿ ವಿರಸವನ್ನು ತಂದಿದೆ.

ಒಂದು ದಾಳ ಉರುಳಿಸಿದ ಮೇಲೆ ಆರಂಭವಾಗುವ ಆಟದಂತೆ ಕ್ರಿಯೆಗಳ ಸರಪಳಿ ಮುಂದುವರೆಯುತ್ತದೆ. ಶಿವರಾಮ ಕಾರಂತರ ಪಾತ್ರ ಚಿತ್ರಣದ ಕಲೆಗಾರಿಕೆ ನೆನಪು ತರುವಂತೆ ಇಲ್ಲಿ ಭಟ್ಟಣ್ಣ, ಮಾವಯ್ಯ, ಗೌರಮ್ಮ, ಪದುಮ, ಪುಟಿಯಣ್ಣ ಎಲ್ಲರೂ ವಿಶಿಷ್ಟರಾಗಿದ್ದಾರೆ. ತಮ್ಮ ತಿಳುವಳಿಕೆಯನ್ನು ಮೀರಿ ನಡೆಯುವ ಸಂಗತಿಗಳಿಗೆ ತಮ್ಮ ವ್ಯಕ್ತಿತ್ವಕ್ಕೆ, ಸ್ವಭಾವಕ್ಕೆ ಬದ್ಧರಾಗಿ ಸ್ಪಂದಿಸುತ್ತಾರೆ. ಹಿನ್ನೋಟದ ಕಥನದಲ್ಲಿ ವಿಷ ಹಾಕುವವರ ಮನೆತನ ಎನ್ನುವ ಕಳಂಕ, ಬಡತನದ ಅವಮಾನ ಇವೆಲ್ಲವುಗಳಿಂದ ರಕ್ಷಿಸಿದ ಭಟ್ಟಣ್ಣನ ಪೂರ್ವಚರಿತ್ರೆ ಕಾದಂಬರಿಯ ಗಟ್ಟಿಯಾದ ಭಾಗವಾಗಿದೆ. ಭಟ್ಟಣ್ಣ ಕನ್ನಡ ಕಥನದ ಅಪೂರ್ವ ಸೃಷ್ಟಿಯಾಗಿದ್ದಾನೆ. ಕೊನೆಯ ಭಾಗದಲ್ಲಿ ಅವನ ಸೋಲು, ಅನಾರೋಗ್ಯ, ತನ್ನವರ ಹಾಗೂ ಜನರ ವಿಶ್ವಾಸದ್ರೋಹದಿಂದ ಉಂಟಾದ ನೋವು ಗಳಿಂದ ಅವನು ಬಸವಳಿದು ಹೋದರೂ ದುರಂತ ನಾಯಕನಂತೆ ತನ್ನ ಘನತೆಯನ್ನು ಉಳಿಸಿಕೊಳ್ಳುತ್ತಾನೆ. ಆದರೆ ಒಂದು ಕ್ಷಣದ ತಪ್ಪು ನಡುವಳಿಕೆಯಿಂದಾಗಿ ಅವನು ಕಟ್ಟಿದ ಬದುಕುಗಳು ಛಿದ್ರವಾಗುತ್ತವೆ. ಒಳ್ಳೆಯತನ ಇತ್ಯಾದಿಗಳನ್ನು ಗಣನೆಗೆ ತಾರದ ಕ್ರಿಯಾಸರಣಿ ಕರುಣೆ, ಕ್ಷಮೆಗಳಂಥ ಮಾನವೀಯ ದೌರ್ಬಲ್ಯಗಳನ್ನು ಮೀರಿ ನಡೆಯುತ್ತದೆ. ಇಲ್ಲಿ ಎಲ್ಲರಿಗೂ ಶಿಕ್ಷೆ ನಿಶ್ಚಿತ. ಆದರೆ ಅಪರಾಧಗಳು ಶಿಕ್ಷೆಯ ನಂತರವೂ ಅನಿಶ್ಚಿತ! (ಕೃತಿ ಓದುವಾಗ ಮೃದು ಹಾಗೂ ಉದಾರ ಸ್ವಭಾವದ ಶ್ರೀಧರ ಬಳಗಾರರೊಳಗೆ ಇಂಥ ಕ್ರೂರ ಕತೆಗಾರ ಇದ್ದಾನೆಯೆ ಎಂದು ಅಚ್ಚರಿ ಪಟ್ಟಿದ್ದೇನೆ).

ಕಾದಂಬರಿಯ ಕೊನೆಯ ಭಾಗವನ್ನು ಉಸಿರುಗಟ್ಟಿ ಓದಿದಂತಾಗುತ್ತದೆ. ಅಷ್ಟೊಂದು ಅನಿರೀಕ್ಷಿತ ತಿರುವುಗಳು, ಕೊಲೆಯ ಹಿಂದೆ ಇದ್ದಿರಬಹುದಾದ ಹಣದ ವಿಸರ್ಜನೆಯೊಂದಿಗೆ ಪಾಪದಂತೆ ಅಂಟಿಕೊಂಡ ಕೇಡು ಕೊನೆಗೊಳ್ಳುತ್ತದೆಯೆ? ಇಂಥ ವಿಮುಕ್ತಿ ಮನುಷ್ಯ ಜೀವಿಗಳ ಅಳವಿನಲ್ಲಿದೆಯೆ? ಯಾರಿಗೂ (ಕಾದಂಬರಿಕಾರರಿಗೂ) ಗೊತ್ತಿಲ್ಲ. ಆದರೆ ಜೀವಪರವಾದ ಕ್ರಿಯೆಗಳ ಮೂಲಕ ಮುಕ್ತಿ ಬಯಸುವುದು ಮನುಷ್ಯರ ಮೂಲ ಪ್ರವೃತ್ತಿಯೂ ಹೌದಲ್ಲವೆ? ಅಥವಾ ಅದು ಮನುಷ್ಯನ ಅಸ್ತಿತ್ವದ ಸೀಮಿತತೆ ಇರಬಹುದೆ?

ಹೀಗೆ ಗಾಢವಾದ ಅನುಭವವೊಂದನ್ನು ಕೊಡುವ ಈ ಕೃತಿ ಮಹತ್ವದ್ದಾಗಿದೆ. ಬದುಕಿನ ಅಚಿಂತ್ಯ ಸ್ವಭಾವವನ್ನು ಸಂಯಮದಿಂದ ಅಳೆದು ತೂಗಿ ಬರೆದಿರುವ ಶ್ರೀಧರ ಬಳಗಾರರು ನಮ್ಮ ಕೃತಜ್ಞತೆಗೆ ಅರ್ಹರಾಗಿದ್ದಾರೆ. ಲಯಗಾರಿಕೆ ಹಾಗೂ ಪ್ರತಿಮೆಗಳಿಂದ ನಿಬಿಡವಾದ ಕೃತಿಯ ಭಾಷೆ, ಒಂದು ಮಹತ್ವದ ಸಾಧನೆಯಾಗಿದೆ. ನಿಧಾನಗತಿಯ ಜೀವನ ಕ್ರಮವೊಂದರ ಕಥನವಾಗಿರುವುದರಿಂದ ಅದು ನಿಧಾನದ ಓದನ್ನು ಬಯಸುತ್ತದೆ. ಅಂಥ ಓದು ದಟ್ಟವಾದ ಅನುಭವವನ್ನು ತರುತ್ತದೆ.

-ರಾಜೇಂದ್ರ ಚೆನ್ನಿ

ರಾಜೇಂದ್ರ ಚೆನ್ನಿ ಅವರ ಲೇಖಕ ಪರಿಚಯಕ್ಕಾಗಿ

 

MORE FEATURES

Dara Shiko; ಕನ್ನಡ ಓದುಗರನ್ನು, ಪ್ರೇಕ್ಷಕರನ್ನೂ ದಾರಾ ಮುಟ್ಟಿದ್ದಾನೆ

10-01-2025 ಬೆಂಗಳೂರು

“ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ನನ್ನ ಈ ಪುಟ್ಟ ಕೃತಿ ದಾರಾಶಿಖೋನನ್ನು ಕುರಿತು ಕನ್ನಡದಲ್ಲಿ ಬಂದ ಮೊದಲ...

Gandasaagi kavithe bareyuvudu sulabha; ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ

10-01-2025 ಬೆಂಗಳೂರು

"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...

Nadavargal; ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು

10-01-2025 ಬೆಂಗಳೂರು

“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...