“ಸಿನಿಮಾ ಹುಚ್ಚು ನಮ್ಮನ್ನು ಪುಸ್ತಕ ಬರೆಯುವ ಹರಸಾಹಸಕ್ಕೆ ನೂಕಿತ್ತು. ಪ್ರತೀ ಪುಸ್ತಕ ಓದಿದಾಗಲೂ ಪುಸ್ತಕ ಬರೆಯುವ ಆಸೆ ಮನದಾಳದಲ್ಲಿ ಮೊಳಕೆ ಒಡೆದಿತ್ತಾದರೂ ಸದ್ಯಕ್ಕೆ ಬರೆಯುವ ಜ್ಞಾನವಾಗಲಿ, ಧೈರ್ಯವಾಗಲಿ ಇರಲಿಲ್ಲ”, ಎನ್ನುತ್ತಾರೆ ಕೌಶಿಕ್ ರತ್ನ ಅವರು ತಮ್ಮ “ನಿಧಿ” ಪುಸ್ತಕಕ್ಕೆ ಬರೆದ ಲೇಖಕರ ಮಾತು.
ಖಾಲಿ ಜೇಬಲ್ಲಿ ಕೋಟಿಗಟ್ಟಲೆ ದೊಡ್ಡ ಕನಸುಗಳನ್ನು ತುಂಬಿಕೊಂಡು ಊರು, ಮನೆ, ಪ್ರೀತಿ, ಓದು, ಕೆಲಸ ಎಲ್ಲವನ್ನೂ ಬಿಟ್ಟು ರಂಗಭೂಮಿಯ ಮಡಿಲು ಸೇರಿ ನಾಟಕಗಳನ್ನು ಮಾಡುತ್ತಾ, ಧಾರಾವಾಹಿ- ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅನುಭವಿಸುತ್ತಾ, ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಕಿರು ಚಿತ್ರಗಳನ್ನು ಮಾಡುತ್ತಾ, ನಟರಾಗುವ, ನಿರ್ದೇಶಕರಾಗುವ ಕನಸು ಹೊತ್ತು ಆಡಿಷನ್‌ಗಳಿಗಾಗಿ, ಅವಕಾಶಗಳಿಗಾಗಿ ಅಲೆದಾಡಿದಾಗಲೇ ಗೊತ್ತಾಗಿದ್ದು, ಸಿನಿಮಾ ಮಾಡಲು ಬೇಕಾಗಿರುವುದು ಕೇವಲ ಕಲೆಯಲ್ಲ ಕೈತುಂಬಾ ಕಾಸು.
ಬಣ್ಣದ ಲೋಕದಲ್ಲಿ ನಟರಾಗುವ, ನಿರ್ದೇಶಕರಾಗುವ, ತಂತ್ರಜ್ಞರಾಗುವ ಹುಚ್ಚು ಒಮ್ಮೆ ಹಿಡಿದರೆ ಸಾಕು, ಸಾಯುವವರೆಗೂ ಬಿಡುವುದಿಲ್ಲ. ಇದು ಮದ್ದಿಲ್ಲದ ಖಾಯಿಲೆ. ಈ ಸಿನಿಮಾ ಹುಚ್ಚು ಹಿಡಿದಿರುವವರಿಗೆ ಏಕಮಾತ್ರ ಆಸ್ಪತ್ರೆಯೇ 'ಸಿನಿಮಾ'
ಹೀಗೆ ಸಿನಿಮಾ ಹುಚ್ಚು ಹಿಡಿದು ಅಲೆದಾಡುತ್ತಿದ್ದ ಹುಚ್ಚರ ಸಂಘದಿಂದ ಶುರುವಾಗಿದ್ದೇ ಈ 'ಇಲ್ಲೀಗಲ್' ಸಿನಿಮಾ. ನಾವೇ ಬರೆದ ಕಥೆಯನ್ನು ನಮ್ಮದೇ ಶೈಲಿಯಲ್ಲಿ ಬೆಳ್ಳಿತೆರೆಯ ಮೇಲೆ ಪ್ರೇಕ್ಷಕ ಪ್ರಭುಗಳಿಗೆ ಉಣಬಡಿಸುವ ಹಂಬಲದಲ್ಲಿ ಹಣ ಹೂಡುವವರಿಗಾಗಿ ಹುಡುಕಾಡಿ ಸಿಕ್ಕಸಿಕ್ಕವರಿಗೆಲ್ಲ ಆಸೆಯಿಂದ ಕಥೆ ಹೇಳಿದಾಗ, "ಕಥೆ ಚೆನ್ನಾಗಿದೆ ರೀ, ಆದ್ರೆ ನೀವೇ ಹೀರೋ ಆದ್ರೆ ಯಾರ್ ನೋಡ್ತರೆ? ಒಂದ್ ಕೆಲಸಮಾಡಿ ನನ್ ಮಗನ್ನೇ ಹೀರೋ ಮಾಡಿ" "ಐಟಂ ಸಾಂಗೇ ಇಲ್ಲ, ಥಿಯೇಟರ್ಗೆ ಯಾರ್ ಬರ್ತರೆ?” “ಕಥೆ ಸೂಪರ್ ಸರ್, ಇನ್ಯಾರಿಗು ಹೇಳೋಡಿ ಕದ್ದಿಡ್ತರೆ. ಇನ್ನೊಂದ್ ಎರಡ್ ತಿಂಗಳಲ್ಲಿ ನಾವೇ ಶುರುಮಾಡಣ” “ಹೀರೋಯಿನ್ ಯಾರು, ಕಮಿಟೆಂಟ್ ಮಾಡುಸ್ಕೊಡ್ತಿರಾ?” ಎನ್ನುವವರು ಹಲವರಾದರೆ ಇನ್ನೂ ಕೆಲವರಿಗೆ ಡ್ರಿಂಕ್ಸ್ ಮಾಡುವಾಗ ಟೈಮ್ ಪಾಸ್ ನಮ್ಮ ಕಥೆ. ಹೀಗೆ ಅವಕಾಶಗಳಿಗಾಗಿ, ನಿರ್ಮಾಪಕರಿಗಾಗಿ ಹುಡುಕಾಡುತ್ತಾ ಅಲೆದಾಡುತ್ತಾ ಸವೆದಿದ್ದು ಕೇವಲ ನಮ್ಮ ಚಪ್ಪಲಿಗಳಲ್ಲ, ನಮ್ಮ ಐದು ವರ್ಷ ಆಯಸ್ಸು.
ವಯಸ್ಸು ಗಡಿದಾಟಿ ಅವಶ್ಯಕತೆ, ಜವಾಬ್ದಾರಿಗಳ ಸೈನ್ಯವೇ ಎದುರು ನಿಂತರೂ ನಮ್ಮೊಳಗಿದ್ದ ಕಲಾವಿದನ ಆಸೆ, ಕನಸು, ಹಠ, ಹುಚ್ಚು ಮಾತ್ರ ಕುರುಡುನಂಬಿಕೆಯಲ್ಲಿ ಹೋರಾಡುತ್ತಲೇ ಇತ್ತು. ಮುಂದೇನು ಮಾಡುವುದೆಂದು ತೋಚದೆ ಕಂಗಾಲಾಗಿ ನಿಂತಾಗ ನೆನಪಾಗಿದ್ದು, ಅಂದು ನನ್ನ ಅಜ್ಜಿ ಹೇಳುತ್ತಿದ್ದ “ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ” ಎಂಬ ಗಾದೆ ಮಾತು. ಇಡೀ ತಂಡ ಈ ಮಾತನ್ನು ಬಲವಾಗಿ ನಂಬಿ ನಮ್ಮ ಬಳಿ, ನಮ್ಮ ಸ್ನೇಹಿತರ ಬಳಿ ಇದ್ದ ಅಷ್ಟು ಇಷ್ಟು ಹಣವನ್ನೆಲ್ಲ ಗುಡ್ಡೆ ಹಾಕಿ, ಬಾಕಿ ಬೃಹತ್ ಮೊತ್ತಕ್ಕೆ ಏನು ಮಾಡುವುದು? ಯಾರನ್ನು ಕೇಳುವುದು? ಎಂಬ ಮತ್ತದೇ ಚಿಂತೆ ಎದುರಾದಾಗ "ನಾವ್ಯಾಕೆ ಪುಸ್ತಕ ಒಂದನ್ನು ಬರೆದು, ರಸ್ತೆಗಿಳಿದು ಮಾರಿ ಅದರಿಂದ ಬರುವ ಹನಿ ಹನಿ ಹಣವನ್ನು ಒಟ್ಟುಗೂಡಿಸಿ ಸಿನಿಮಾ ಮಾಡಬಾರದು” ಎಂಬ ಉಪಾಯ ಹೊಳೆಯಿತು. ಇದು ಹೊಸದೆನಿಸಿ, ಇಡೀ ತಂಡಕ್ಕೆ ಇಂದಲ್ಲಾ ನಾಳೆ ಗೆದ್ದೇಗೆಲ್ಲುವ ಭರವಸೆಯ ಹೊಸ ಚೈತನ್ಯ ತುಂಬಿತು.
ಸಿನಿಮಾ ಹುಚ್ಚು ನಮ್ಮನ್ನು ಪುಸ್ತಕ ಬರೆಯುವ ಹರಸಾಹಸಕ್ಕೆ ನೂಕಿತ್ತು. ಪ್ರತೀ ಪುಸ್ತಕ ಓದಿದಾಗಲೂ ಪುಸ್ತಕ ಬರೆಯುವ ಆಸೆ ಮನದಾಳದಲ್ಲಿ ಮೊಳಕೆ ಒಡೆದಿತ್ತಾದರೂ ಸದ್ಯಕ್ಕೆ ಬರೆಯುವ ಜ್ಞಾನವಾಗಲಿ, ಧೈರ್ಯವಾಗಲಿ ಇರಲಿಲ್ಲ. ಆದರೆ ನಮ್ಮ ಬಳಿ ಮಾರಲು ಕಲೆಯನ್ನು ಬಿಟ್ಟು ಬೇರೆ ಏನೂ ಇರಲಿಲ್ಲ. ಹಾಗಾಗಿ ಪುಸ್ತಕ ಬರೆಯುವುದು ಅನಿವಾರ್ಯ ಮಾರ್ಗವಾಯಿತು.
ಪುಸ್ತಕದ ವಿಷಯದ ಬಗ್ಗೆ ಚರ್ಚೆ ಬಂದಾಗ ನನಗೆ ಮತ್ತೆ ನೆನಪಾಗಿದ್ದು ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಪ್ರತೀ ರಾತ್ರಿ ನನ್ನನ್ನೇ ಕಥೆಯ ನಾಯಕನನ್ನಾಗಿ ಮಾಡಿ ಹೇಳುತ್ತಿದ್ದ ಕಥೆಗಳು. ಬಹುಶಃ ಇಂದು ನಾನು ಕಥೆಗಾರನಾಗಬಯಸಲು ಇದೇ ಕಾರಣವಿರಬಹುದು. ನನ್ನಜ್ಜಿ ಒಬ್ಬಳೇ ನನ್ನನ್ನು ಹಣ ಕೇಳದೆ ತನ್ನ ಬಳಿ ಇದ್ದ ಹಣವನ್ನೂ ಕೊಟ್ಟು ನಾಯಕನನ್ನಾಗಿ ಮಾಡಿದ್ದು. ಇಂತಹ ಕಥೆಗಳು ಕೇವಲ ಕಥೆಗಳಾಗಿರದೆ ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯದ ಬೆಸುಗೆಯಾಗಿದ್ದವು. ಈ ಬಾಂಧವ್ಯವನ್ನು, ಇಂತಹ ಕಥೆಗಳನ್ನು ಕಳೆದುಕೊಂಡಿರುವ ದುರ್ದೈವಿಗಳು ಇದರ ಸ್ವಾದವನ್ನು ಆಸ್ವಾದಿಸಬೇಕೆಂಬ ಬಯಕೆಯಲ್ಲಿ, ಅಜ್ಜ-ಅಜ್ಜಿಯರು ಕಥೆಗಳ ಮೂಲಕ ಬದುಕಿಗೆ ಬೇಕಾದ ನೀತಿಗಳನ್ನು ಕುತೂಹಲಕಾರಿಯಾಗಿ, ಹಾಸ್ಯಭರಿತವಾಗಿ 2 ತಿಳಿಸುತ್ತಿದ್ದ ರೀತಿಯನ್ನಾಧರಿಸಿ ಬರೆದಿರುವ ಕಥೆಗಳ ಕುಡಿಕೆಯೇ “ನಿಧಿ”
ಇವು ಕೇವಲ ಕಥೆಗಳಲ್ಲ, ತಲೆತಲಾಂತರಗಳಿಂದ ಅಜ್ಜ-ಅಜ್ಜಿಯರು ಅವರ ಬದುಕಿನ ಅನುಭವದ ಪಾಠವನ್ನು ತಮ್ಮ ಮುಂದಿನ ಪೀಳಿಗೆಗೆ ಕೊಟ್ಟು ಹೋಗುತ್ತಿದ್ದ ಬೆಲೆ ಕಟ್ಟಲಾಗದ ಅತ್ಯಮೂಲ್ಯ ನಿಧಿಗಳು. ಹಾಗಾಗಿ ಈ ಪುಸ್ತಕಕ್ಕೆ ನಾವು 'ನಿಧಿ' ಎಂದೇ ನಾಮಕರಣ ಮಾಡಿದ್ದೇವೆ. ಇಂದಿನ ಮೊಬೈಲ್ ಯುಗದಲ್ಲಿ ಇಂತಹ ಅಮೂಲ್ಯ ನಿಧಿಗಳು ಅವರೊಂದಿಗೆ ಮಣ್ಣಲ್ಲಿ ಹುದುಗಿ ಹೋಗುತ್ತಿರುವುದಕ್ಕೆ ಅಪಾರ ಬೇಸರವಿದೆ. ಅವರ ಒಂದಿಷ್ಟು ಕಥೆಗಳಾದರೂ ಚಿರಕಾಲ ಉಳಿಯಲಿ ಎಂಬ ಕಾರಣಕ್ಕೆ ನಮ್ಮ 'ಇಲ್ಲೀಗಲ್' ಚಿತ್ರತಂಡ ಕರ್ನಾಟಕದ ವಿವಿಧ ಭಾಗಗಳ ಒಂದಿಷ್ಟು ಹಳ್ಳಿಗಳಿಗೆ ಹೋಗಿ ಕಥೆ ಹೇಳುವ ಅಜ್ಜ-ಅಜ್ಜಿಯರನ್ನು ಹುಡುಕಿ ಅವರು ಹೇಳುವ ಕಥೆಗಳನ್ನು ಸಾಕ್ಷ್ಯ ಚಿತ್ರವಾಗಿ ಚಿತ್ರಿಸಿ ತಂದಿದ್ದೇವೆ. ಇವುಗಳನ್ನು ಮುಂದಿನ ದಿನಗಳಲ್ಲಿ ನಮ್ಮ 'ರತ್ನ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡುತ್ತೇವೆ.
ಪುಸ್ತಕ ಬರೆಯುತ್ತಿರುವ ನಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ಖುಷಿಪಟ್ಟು ಕಥೆಗಳ ಬಗ್ಗೆ ಚರ್ಚಿಸಿ ಬರವಣಿಗೆಯಲ್ಲಿದ್ದ ತಪ್ಪುಗಳನ್ನು ತಿದ್ದಿ ಆಶೀರ್ವದಿಸಿದ ನಮ್ಮ 'ದೃಶ್ಯ' ರಂಗತಂಡದ ಗುರುಗಳಾದ 'ಡಾ. ದಾಕ್ಷಾಯಿಣಿ ಭಟ್' ಅವರಿಗೆ ನಮ್ಮ ಭಕ್ತಿಪೂರ್ವಕ ಪ್ರಣಾಮಗಳು. ನಮ್ಮ 'ನಿಧಿ'ಯನ್ನು ಖರೀದಿಸಿ 'ಇಲ್ಲೀಗಲ್' ಸಿನಿಮಾದ ಎಲ್ಲಾ ಕಲಾವಿದರ ಸಾಧನೆಯ ಶಿಖರಕ್ಕೆ ಮೆಟ್ಟಿಲಾಗಿರುವ ನಿಮಗೆ ನಾವು ಎಂದಿಗೂ ಕೃತಜ್ಞರು. ಈ ಹೊಸ ಪ್ರಾಮಾಣಿಕೆ ಪ್ರಯತ್ನದ ಬಗ್ಗೆ ನಿಮ್ಮವರೆಲ್ಲರಿಗೂ ತಿಳಿಸಿ "ನಿಧಿ"ಯನ್ನು ಖರೀದಿಸುವಂತೆ ಪ್ರೇರೇಪಿಸಿ, ನಮ್ಮ ಪ್ರಯತ್ನ ಯಶಸ್ವಿಯಾಗಲು ಕೈಜೋಡಿಸುತ್ತೀರಿ ಎಂಬ ನಿಸ್ಸಂಶಯ ನಂಬಿಕೆ ನಮಗಿದೆ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗದಂತೆ ನಮ್ಮ ಶಕ್ತಿ ಮೀರಿ ಶ್ರಮಿಸುತ್ತೇವೆ ಎಂಬ ಆಶ್ವಾಸನೆಯೊಂದಿಗೆ ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ 'ಇಲ್ಲೀಗಲ್' ಸಿನಿಮಾದ ಮೇಲೆ ಸದಾ ಇರಲಿ ಎಂದು ನಮ್ರತೆಯಿಂದ ವಿನಂತಿಸಿಕೊಳ್ಳುತ್ತೇವೆ.
ಸಾಧಿಸಿಯೇ ತೀರುತ್ತೇನೆಂಬ ಹುಚ್ಚು ಹಠ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ನಿಮ್ಮ ಕೈಯಲ್ಲಿರುವ ಈ 'ನಿಧಿ'ಯೇ ಸಾಕ್ಷಿ. ಏನೂ ಅರಿಯದ ನಾನು ಪ್ರತೀ ಅಕ್ಷರವನ್ನು ಅನಂತ ಭಯ, ಭಕ್ತಿ, ಶ್ರದ್ಧೆಯಿಂದಲೇ ಬರೆದಿದ್ದೇನೆ. ನಿಮ್ಮ ಅನಿಸಿಕೆ, ಅಭಿಪ್ರಾಯ ಕಲಾವಿದನ ಬೆಳವಣಿಗೆಗೆ ಸ್ಫೂರ್ತಿ. ಇದು ನನ್ನ ಚೊಚ್ಚಲ ಬರವಣಿಗೆ, ಏನಾದರೂ ತಪ್ಪಿದ್ದರೆ ಗುರುಗಳ ಸ್ಥಾನದಲ್ಲಿ ನಿಂತು ಕ್ಷಮಿಸಿ.
- ಕೌಶಿಕ್ ರತ್ನ
ಇಲ್ಲೀಗಲ್' ಸಿನಿಮಾದ ನಿರ್ದೇಶಕ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.