"ತಂತ್ರಜ್ಞಾನಗಳು ಹೇಗೆಲ್ಲ ಬಳಕೆಯಾಗುತ್ತದೆ, ಅದರ ಒಳಿತು ಕೆಡುಕುಗಳು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲಿದೆ ಎನ್ನುವ ಪಾಠವಿದೆ. ಕೇವಲ ರಾಜಕಾರಣ, ಮೋಸ, ಕುತಂತ್ರ ಗಳಷ್ಟೇ ಅಲ್ಲ ಇಲ್ಲಿರುವುದು. ಗಂಭೀರತೆಯನ್ನು ಬಿಟ್ಟುಕೊಡದ ಸುಧನ್ವ- ಚಾರ್ವಿಯರ ಮುದ್ದಾದ ಪ್ರೀತಿ ಇಷ್ಟವಾಗುತ್ತದೆ" ಎನ್ನುತ್ತಾರೆ ವಿಮರ್ಶಕಿ ಅಶ್ವಿನಿ ಸುನೀಲ್. ಅವರು ಲೇಖಕ ಧೀರಜ್ ಪೊಯ್ಯೆಕಂಡ ಅವರ 2035 ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಶನಿವಾರವಷ್ಟೇ ಮನೆಗೆ ಬಂದ ಪುಸ್ತಕವನ್ನು ಭಾನುವಾರವೇ ಓದಿ ಮುಗಿಸಲು ಕಾರಣ ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿರಿಸಿಕೊಂಡದ್ದು ಈ ಕೃತಿ. ತನ್ನ ಸಂಶೋದನೆಯನ್ನು ಅನ್ಯಾಯದ ಹಾದಿಯಲ್ಲಿ ಬಳಸಲು ಒಪ್ಪದ ವಿಜ್ಞಾನಿ ರಾಜಕಾರಣಿಯ ಕುತಂತ್ರಕ್ಕೆ ಬಲಿಯಾದರೆ, ಮಗನ ಸಾವಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡಲು ಹೊರಟ ವಿಜ್ಞಾನಿಯ ತಂದೆ, ಹ್ಯಾಕಿಂಗ್ ನಲ್ಲಿ ಪರಿಣಿತ ಮಗ ತನ್ನ ಈ ವಿದ್ಯೆಯಿಂದಲೇ ಸತ್ಯದ ಅನಾವರಣಗೊಳಿಸಲು ಹೊರಟವ, ಇದೆಲ್ಲದರ ಮಧ್ಯೆ ರಾಜಕೀಯ ಜೀವನ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ತಯಾರಾದ ರಾಜಕಾರಣಿಗಳು. ರಾಜಕಾರಣಿಗಳು ಮಾಡುವ ಅನಾಚಾರಗಳನೆಲ್ಲಾ ತಿಳಿದೂ ಅವರ ಕೃಪೆಗೆ ಪಾತ್ರರಾಗಲು ಸುಳ್ಳನ್ನೆ ಸತ್ಯವೆಂದು ಬಿಂಬಿಸುವ ಮಾಧ್ಯಮಗಳು, ವ್ಯವಸ್ಥಿತ ಕೊಲೆಯನ್ನೇ ಹೊಸ ವೈರಸ್ ಎಂದು ಬಿಂಬಿಸುತ್ತಾ ಜನರಲ್ಲಿ ಭಯ ಹುಟ್ಟಿಸಲು ಯತ್ನಿಸುವ ಸಮಯ ಸಾಧಕರ ಕಥೆಯನ್ನು ಹೊಂದಿರುವ ಧೀರಜ್ ಪೊಯ್ಯೆಕಂಡ ಅವರ ಈ ಕಾದಂಬರಿಯಲ್ಲಿ ರಾಜಕೀಯ, ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್ ಎಲ್ಲವೂ ಇದೆ.
ನಮ್ಮ ದೇಶದ ರಾಜಕೀಯದಲ್ಲಿ ಹಣದ, ಅಧಿಕಾರದ ಬಲದಿಂದ ರಾಜಕಾರಣಿಗಳು ಜನರನ್ನು ಕೈವಶ ಮಾಡಿಕೊಂಡು ಕುಣಿಸುತ್ತಾರೆ. ತಮ್ಮ ಹಣದ ಬಲದಿಂದ ತಪ್ಪುಗಳನ್ನು ಮುಚ್ಚುತ್ತಾರೆ. ಜನರೂ ಕೂಡಾ ತಮ್ಮ ನಾಗರಿಕ ಪ್ರಜ್ಞೆಯನ್ನು ಮರೆತು, ಸರಿ ತಪ್ಪಿನ ವಿವೇಚನೆಯನ್ನು ಬಿಟ್ಟು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಂದದ್ದೆಲ್ಲ ಸತ್ಯವೆಂದು ಭಾವಿಸಿ ಅದನ್ನೇ ನಂಬುತ್ತಾ, ಹಂಚುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾರೆ. ದೇಶ ,ಭಾಷೆ ನೆಲ ಜಲಕ್ಕಾಗಿ ಹೋರಾಡುವವರು ತಾವು ಎಂದು ಬಿಂಬಿಸುತ್ತಾ ಜನರೊಳಗೆ ವೈಮನಸ್ಸು ಬಿತ್ತುತ್ತಾರೆ.
ಕಾದಂಬರಿಯಲ್ಲಿ ಪ್ರಸ್ತುತ ಸಮಾಜದ ಇಂತಹ ಹಲವಾರು ಗಂಭೀರ ಸಮಸ್ಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್- ನಮ್ಮಲ್ಲೇ ಮೊದಲು ಎನ್ನುವ ಭರದಲ್ಲಿ ಗುಡ್ಡವನ್ನು ಬೆಟ್ಟ ಮಾಡುವ ನ್ಯೂಸ್ ಚಾನೆಲ್ ಗಳು ಒಂದೆಡೆಯಾದರೆ, ಯುನಿವರ್ಸಿಟಿಗಳಲ್ಲಿ ಬೇರು ಬಿಟ್ಟಿರುವ, ಜಾತಿ ರಾಜಕೀಯ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾಂತರಾಜುನಂತಹ ಪ್ರೊಫೆಸರ್ ಗಳು, ಅಪಘಾತವನ್ನು ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸಿ ದೇಶ, ಭಾಷೆ, ಜಾತಿಗಳಲ್ಲಿ ವೈಶಮ್ಯ ಬಿತ್ತುತ್ತಾ ಹೋರಾಟವನ್ನೇ ಜೀವನ ಮಾಡಿಕೊಂಡು ಲಾಭ ಪಡೆಯುವ ನಾಗೇಂದ್ರನಂತವರು, ಅಧಿಕಾರ ಹಿಡಿಯಲು ಎಂಥಾ ಕೆಲಸಕ್ಕೂ ಕೈ ಹಾಕಬಲ್ಲ ಹರ್ಷದ್ ಬೇನೀವಾಲ, ವಿಷಯಗಳ ಸತ್ಯಾಸತ್ಯತೆ ಪರಿಶೀಲಿಸದೆ ಅದಕ್ಕೆ ಸ್ವಾರಸ್ಯಕರ ರೂಪ ಕೊಟ್ಟು ಸುದ್ದಿ ಪ್ರಕಟಿಸುವ ನೌಫಾಲ್, ಪಕ್ಷದ ಕಾರ್ಯಕರ್ತರು ಏನಾದರೂ ಮಾಡಿಕೊಳ್ಳಿ ನನಗೆ ಅಧಿಕಾರ ಮುಖ್ಯ ಎನ್ನುವ ಪ್ರಭುದೇವನಂತವರನ್ನು ನಮ್ಮ ಸುತ್ತಮುತ್ತ ಕಾಣುತ್ತೇವೆ.
ತಂತ್ರಜ್ಞಾನಗಳು ಹೇಗೆಲ್ಲ ಬಳಕೆಯಾಗುತ್ತದೆ, ಅದರ ಒಳಿತು ಕೆಡುಕುಗಳು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲಿದೆ ಎನ್ನುವ ಪಾಠವಿದೆ. ಕೇವಲ ರಾಜಕಾರಣ, ಮೋಸ, ಕುತಂತ್ರ ಗಳಷ್ಟೇ ಅಲ್ಲ ಇಲ್ಲಿರುವುದು. ಗಂಭೀರತೆಯನ್ನು ಬಿಟ್ಟುಕೊಡದ ಸುಧನ್ವ- ಚಾರ್ವಿಯರ ಮುದ್ದಾದ ಪ್ರೀತಿ ಇಷ್ಟವಾಗುತ್ತದೆ.
ಕಾದಂಬರಿಯ ಕಥಾ ಕಾಲಮಾನ 2035ನೇ ಇಸವಿಯದ್ದಾದರೂ, ಪ್ರಸ್ತುತ ಸಮಾಜದ ಆಗು ಹೋಗುಗಳ ಸೂಕ್ಷ್ಮಗಳ ಬಗ್ಗೆ ಬೆಳಕು ಚೆಲ್ಲುವಂತದ್ದು. ರಾಜಕಾರಣಿಗಳ ಅಧಿಕಾರ ದಾಹ, ಸೋಶಿಯಲ್ ಮೀಡಿಯಾಗಳಲ್ಲಿ ಜನರ ವಿಕೃತಿ , ಜನಸಾಮಾನ್ಯರನ್ನು ಯಾಮಾರಿಸುವ ಪುಡಾರಿಗಳಿಗೆ ಕಡಿವಾಣ ಹಾಕುವವರು ಯಾರು ಎಂದು ಚಿಂತನೆಗೆ ಹಚ್ಚುತ್ತದೆ ಕಾದಂಬರಿ
- ಅಶ್ವಿನಿ ಸುನೀಲ್
“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...
“ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನ...
"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...
©2024 Book Brahma Private Limited.