ಪೋತೆಯವರು ಸಮಕಾಲೀನ ಸಂದರ್ಭದಲ್ಲಿ ದಲಿತಾನುಭವವನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತಿದ್ದಾರೆ; ಶರಣಬಸಪ್ಪ


“ಪೋತೆಯವರ ವಾಚಿಕೆಯನ್ನು ಓದುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯ ಅಂಶವೆಂದರೆ ಅವರ ಚಿಂತನೆಯ ಮಾದರಿಯನ್ನು. ಅವರ ಚಿಂತನೆಯ ಮಾದರಿ ಆಕರ ಪಡೆಯುವುದೇ ಸ್ಮೃತಿ ಶೋಧದಿಂದ. ಅವರ ಕೃತಿ ಶೋಧದ ವಿಧಾನವೇ ವಿಶಿಷ್ಟ” ಎನ್ನುತ್ತಾರೆ ಡಾ. ಶರಣಬಸಪ್ಪ ವಡ್ಡನಕೇರಿ. ಅವರು ಗವಿಸಿದ್ದಪ್ಪ ಎಚ್. ಪಾಟೀಲ ಅವರ `ಎಚ್.ಟಿ.ಪೋತೆ' ವಾಚಿಕೆ 20ರ ಕುರಿತು ಬರೆದ ಅನಿಸಿಕೆ.

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಗವಿಸಿದ್ದಪ್ಪ ಪಾಟೀಲ ಅವರು ಡಾ.ಎಚ್. ಟಿ.ಪೋತೆಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆರೂಪದಲ್ಲಿ ಸಂಪಾದಿಸಿದ್ದಾರೆ. ಡಾ.ಪೋತೆ ಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಸೃಜನಾತ್ಮಕ ಸಾಹಿತ್ಯ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಈ ವಾಚಿಕೆಯು ಎರಡು ಮುಖ್ಯ ಕಾರಣಗಳಿಗಾಗಿ ಮಹತ್ವದ್ದಾಗಿದೆ. ಒಂದು ಹೊಸತನಗಳನ್ನು ಒಳಗೊಳ್ಳುವಿಕೆ, ಮತ್ತೊಂದು ಗ್ರಹಿಕೆ. ಹೊರನೋಟಕ್ಕೆ ಒಳಗೊಳ್ಳುವಿಕೆ ಮತ್ತು ಗ್ರಹಿಕೆಗಳು ಒಂದೇ ಎಂಬಂತೆ ಭಾಸವಾದರೂ ಆಳಕ್ಕಿಳಿದು ಪರಿಶೀಲಿಸಿದರೆ ಅವು ಭಿನ್ನವಾಗಿರುವುದು ಸುಸ್ಪಷ್ಟ. ಒಬ್ಬ ಬರಹಗಾರ ಒಳಗುಮಾಡಿಕೊಳ್ಳುವ ಚಿಂತನೆಗಳು ಆತನ ಗ್ರಹಿಕೆಯನ್ನು ವಿಶಿಷ್ಟವಾಗಿ ರೂಪಿಸುತ್ತವೆ. ಒಳಗು ಮಾಡಿಕೊಳ್ಳುವ ಪ್ರಕ್ರಿಯೆಗೆ ಆತನಿಗೆ ಹಲ ಬಗೆಯ ಅಂಶಗಳು ಪ್ರಭಾವ ಬೀರಿ ಪ್ರೇರಣೆಯನ್ನು ನೀಡಿರುತ್ತವೆ. ಹೀಗಾಗಿ ಒಂದು ಸಾಹಿತ್ಯಾಕೃತಿಯು ಹಲವು ಭಾವನೆಗಳ ದ್ಯೋತಕವಾಗಿ ರೂಪುಗೊಳ್ಳುತ್ತದೆ. ಹೀಗೆ ರೂಪುಗೊಂಡ ಪೋತೆಯವರ ಬರವಣಿಗೆಗಳು ಈ ವಾಚಿಕೆಯಲ್ಲಿವೆ. ಇಲ್ಲಿ ಆಯ್ದುಕೊಂಡಿರುವ ಬರಹಗಳು ಅಸಂಖ್ಯಾ ವಾಕ್ಯವೃಂದಗಳ ಏಕ ಧ್ವನಿಯಂತಿವೆ. ಹಾಗಂತ ಆ ಬರಹಗಳೆಲ್ಲವೂ ಒಂದೇ ಅರ್ಥವನ್ನು ಒಂದಿವೆ ಎಂತಲ್ಲ. ಭಿನ್ನಾರ್ಥಗಳನ್ನು ಹೊರಹಾಕುವ ಧ್ವನಿ ಮಾತ್ರ ಒಂದೇ ಆಗಿದೆಯೆನ್ನುವುದು. ಸಾಹಿತ್ಯವನ್ನು ಸಾಹಿತ್ಯವನ್ನಾಗಿಯೇ ನೋಡದೆ ಅದನ್ನು ಬದುಕಿನ ಭಾಗವಾಗಿ, ಸಂಸ್ಕೃತಿಯ ಭಾಗವಾಗಿ ನೋಡುವುದರಲ್ಲಿಯೇ ಅನೇಕರ್ಥಾಗಳನ್ನು ಒಳಗೊಂಡ ಒಂದೇ ಧ್ವನಿ ಅಲ್ಲಿ ಸ್ಪುಟಗೊಂಡಿದೆ. ಇಂತಹ ಏಕ ಧ್ವನಿಯಲ್ಲಿಯೇ ಅಸಂಖ್ಯಾ ಸಂಕಟಗಳನ್ನು, ನೋವುಗಳನ್ನು, ಕ್ರೌರ್ಯಗಳನ್ನು, ದಬ್ಬಾಳಿಕೆಯನ್ನು, ಸಾಂಸ್ಕೃತಿಕ ರಾಜಕಾರಣದ ವಿಭಿನ್ನ ಚಹರೆಗಳನ್ನು ಹೊರಹಾಕುವ ಕ್ರಮ ಇಲ್ಲಿನ ಬರಹಗಳಲ್ಲಿದೆ. ಆ ಕಾರಣಕ್ಕಾಗಿಯೇ ಸಾಹಿತ್ಯವನ್ನು ಸಾಂಸ್ಕೃತಿಕ ಚಟುವಟಿಕೆ ಎಂದು ಬಿಂಬಿಸುವ ಡಾ.ಪೋತೆಯವರ ಬರಹಗಳನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ. ಇವುಗಳು ಅವರ ಒಟ್ಟೂ ತಾತ್ವಿಕತೆಯ ಪ್ರಾತಿನಿಧಿಕಗಳಾಗಿವೆ.

ಪೋತೆಯವರ ವಾಚಿಕೆಯನ್ನು ಓದುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯ ಅಂಶವೆಂದರೆ ಅವರ ಚಿಂತನೆಯ ಮಾದರಿಯನ್ನು. ಅವರ ಚಿಂತನೆಯ ಮಾದರಿ ಆಕರ ಪಡೆಯುವುದೇ ಸ್ಮೃತಿ ಶೋಧದಿಂದ. ಅವರ ಕೃತಿ ಶೋಧದ ವಿಧಾನವೇ ವಿಶಿಷ್ಟ. ಅಲ್ಲಿ ಒಂದು ಬಗೆಯ ಸ್ವಯಂ ಅನ್ವೇಷಣಾ ಗುಣವಿದೆ. ಅವರು ತಮ್ಮ ಅನುಭವಗಳನ್ನು ಪುನಃ ಪುನಃ ಮೆಲುಕು ಹಾಕುತ್ತಲೇ ಭಿನ್ನ ಚಿತ್ರ ರೂಪಕವೊಂದನ್ನು ನಿರ್ಮಿಸಿಕೊಳ್ಳುತ್ತಾರೆ. ಇಲ್ಲಿ ಅನುಭವವೆನ್ನುವುದನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಬೇಕು. ಅನುಭವವು ಎಷ್ಟೇ ವೈಯುಕ್ತಿವಾಗಿದ್ದಾಗಲೂ ಅದುರೂಪುಗೊಂಡದ್ದು ಸಾಮಾಜಿಕ ಸನ್ನಿವೇಶದಿಂದಲೇ ಎನ್ನುವುದನ್ನು ಮರೆಯಬಾರದು. ಇಲ್ಲಿಯೇ ನಾವು ಅಂಬೇಡ್ಕರ್ ಅವರ ಗ್ರಹಿಕೆಯ ಮಾದರಿಯು ಪೋತೆಯವರ ಮೇಲೆ ಪ್ರಭಾವ ಬೀರಿರುವುದನ್ನು ನಿಚ್ಚಳವಾಗಿ ಗುರುತಿಸಬಹುದಾಗಿದೆ. ಈ ನೆಲದ ಪಾರಂಪರಿಕ ಸಾಂಸ್ಕೃತಿಕ ಸನ್ನಿವೇಶಗಳೇ ಅಂಬೇಡ್ಕರ್ ಅವರ ಚಿಂತನೆಗಳು ಸಮಾಜಮುಖಿಯಾಗಿ, ಜೀವಪರವಾಗಿ ರೂಪುಗೊಳ್ಳುವುದಕ್ಕೆ ಕಾರಣವಾದವು. ಇದುವೇ ಪೋತೆಯವರ ಚಿಂತನೆಗಳನ್ನು ರೂಪಿಸಿದ್ದುಂಟು. ಜೊತೆಗೆ ಇಂತಹ ಚಿಂತನೆಯ ಮಾದರಿಯು ಪೋತೆಯವರಲ್ಲಿ ಹುಟ್ಟಿಕೊಳ್ಳಲಿಕ್ಕೆ ಕಾರಣವಾದುದು ಅಸ್ತಿತ್ವದ ಸಂಘರ್ಷ. ಬಹುಕಾಲದಿಂದಲೂ ಬದುಕಿನ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದ ಸಾಮಾಜಿಕ ಸನ್ನಿವೇಶದಿಂದ ಬಂದವರಾದದ್ದರಿಂದ, ಅದರ ಸ್ವ-ಅನುಭವ ದಟ್ಟವಾಗಿದ್ದುದರಿಂದ ಅದು ಅವರಲ್ಲಿ ಗ್ರಹಿಕೆಯ ಸಹಜ ಭಾಗವಾಗಿದೆ. ಅವರ ಸೃಜನ ಬರಹಗಳಲ್ಲಿ ಈ ಅಂಶವನ್ನು ಮುಖ್ಯವಾಗಿ ಗುರುತಿಸಬಹುದಾಗಿದೆ. ಅವರ ಕಥೆ-ಕಾದಂಬರಿ- ಪ್ರಬಂಧಗಳನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಇವುಗಳಿಗೆ ಅವರು ಆಯ್ದುಕೊಂಡಿರುವ ವಸ್ತುಗಳು ವಾಸ್ತವದ ಸಮಾಜದೊಂದಿಗೆ ಅವರು ಇಟ್ಟುಕೊಂಡಿರುವ ಸಂಬಂಧದ ಸೂಚಕಗಳಾಗಿವೆ. ಆ ಸಂಬಂಧವು ಕೇವಲ ಸಾಂದರ್ಭಿಕವಾದುದೂ ಅಲ್ಲ, ಅಲ್ಪಕಾಲಿಕವಾದುದೂ ಅಲ್ಲ, ಲಘುವಾದುದೂ ಅಲ್ಲ. ಬಹುಕಾಲದಿಂದ ಅವರ ಮನಸ್ಸಿನಲ್ಲಿ ಬೇರೂರಿರುವಂತಹದ್ದು, ಮನಸ್ಸಿನಲ್ಲಿ ಘನ ಸ್ವರೂಪವನ್ನು ಪಡೆದಿರುವಂತಹದ್ದು, ಸದಾಕಾಲ ಕ್ರಿಯಾತ್ಮಕ ನೆಲೆಯಲ್ಲಿಯೇ ಇರುವಂತಹದ್ದು, ಗಂಭೀರ ಸ್ವರೂಪದ್ದು. ಅಂದರೆ ಸುತ್ತಣ ಸಮಾಜದೊಂದಿಗಿನ ಅವರ ಸಂಬಂಧವು ಕಾರ್ಯ- ಕಾರಣ ಸಂಬಂಧದಿಂದ ವಿಕಾಸಗೊಂಡದ್ದು. ಒಟ್ಟಿನಲ್ಲಿ ಪೋತೆಯವರು ಸಮಕಾಲೀನ ಸಂದರ್ಭದಲ್ಲಿ ತಮ್ಮೆಲ್ಲ ಅನುಭವಗಳ ಮೂಲಕ ದಲಿತಾನುಭವವನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತಿದ್ದಾರೆ. ಕಥೆ, ಕಾದಂಬರಿ, ಪ್ರಬಂಧ, ವಿಚಾರ-ವಿಮರ್ಶೆ, ಅನುವಾದ, ಸಂಪಾದನೆ, ಜಾನಪದ, ಜೀವನ ಚರಿತ್ರೆ, ಸಂಶೋಧನೆಯಂತಹ ಮಹತ್ವದ ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿಯುತ್ತಿದ್ದಾರೆ. ಅವರ ಒಟ್ಟೂ ಚಿಂತನೆ ತಾತ್ವಿಕತೆಯನ್ನು ಇಲ್ಲಿ ಆಯ್ದ ಬರಹಗಳ ಹಿನ್ನೆಲೆಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ.

- ಡಾ. ಶರಣಬಸಪ್ಪ ವಡ್ಡನಕೇರಿ

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...