ನಾಲ್ಕು ತಿಂಗಳುಗಳು ಸಸ್ಯಾಹಾರಿ ಆಗಿ ಲಂಡನ್ನಿನಲ್ಲಿದ್ದು ಅಡುಗೆ ಮಾಡಿಕೊಂಡು, ಎಲ್ಲೆಡೆಗೂ ನಡೆದುಕೊಂಡೇ ಓಡಾಡಬೇಕಾದ ಅನಿವಾರ್ಯತೆ, ವಾರಾಂತ್ಯಗಳಲ್ಲಿ ಎಲ್ಲಾ ಪ್ರವಾಸೀ ತಾಣಗಳನ್ನು ನೋಡಿ (ಬ್ರಿಟನ್ ನಲ್ಲಿ ಪ್ರತಿಯೊಂದೂ ಪ್ರಖ್ಯಾತವೇ!) ಕಣ್ಣು ತುಂಬಾ, ಮನದ ತುಂಬಾ, ಡೈರಿ ಪುಟಗಳ ತುಂಬಾ ತುಂಬಿ ಕೊಳ್ಳುವ ಧಾವಂತದ ದಿನಚರಿ ವರ್ಣನೆ ಅತ್ಯಂತ ಸಹಜವಾಗಿ ಈ ಕೃತಿಯಲ್ಲಿ ಮೂಡಿ ಬಂದಿದೆ ಎನ್ನುತ್ತಾರೆ ಲೇಖಕಿ ಪೂರ್ಣಿಮಾ ಮಾಳಗಿಮನಿ. ಅವರು ಹಿರಿಯ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರ 'ಥೇಮ್ಸ್ ತಟದ ತವಕ ತಲ್ಲಣ' ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...
ಕೃತಿ: ಥೇಮ್ಸ್ ತಟದ ತವಕ ತಲ್ಲಣ
ಲೇಖಕರು: ಸತೀಶ್ ಚಪ್ಪರಿಕೆ
ಪುಟ ಸಂಖ್ಯೆ: 192
ಬೆಲೆ: 190
ಮುದ್ರಣ: 2021
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಕರೋನ ಕಂಗೆಡಿಸಿದ ಕಾಲದಲ್ಲಿ ನಮಗೆಲ್ಲಾ ಕನ್ನಡ ಸಾಹಿತ್ಯಲೋಕದ ಕಾರ್ಯಕ್ರಮಗಳನ್ನು ನೇರವಾಗಿ ಬಿತ್ತರಿಸಿ, ಆನ್ಲೈನ್ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಓದುಗರನ್ನು ತಲುಪುವ ಸತತ ಪ್ರಯತ್ನದಿಂದ ಹುಟ್ಟು ಹಾಕಿದ ಕನ್ನಡ ಪುಸ್ತಕಗಳ ಮಾಹಿತಿ ಭಂಡಾರದ ಬುಕ್ ಬ್ರಹ್ಮನೆಂದೇ ಪರಿಚಿತರಾಗಿರುವ ಸತೀಶ್ ಚಪ್ಪರಿಕೆ ಸರ್ ಅವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪುರಸ್ಕೃತ ಕೃತಿ, ಪ್ರವಾಸ ಕಥನವೇ 'ಥೇಮ್ಸ್ ತಟದ ತವಕ ತಲ್ಲಣ'.
2009 ರಲ್ಲಿ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ಈ ಪುಸ್ತಕ 2021 ರಲ್ಲಿ ಎರಡನೇ ಮುದ್ರಣ ಕಂಡಿದೆ. ವೀರೇಶ್ ಹೊಗೆಸೊಪ್ಪಿನವರ್ ಮಾಡಿದ 'ಲಂಡನ್ ಐ' ತೋರುವ ಸುಂದರ ಮುಖಪುಟವಿದೆ. 192 ಪುಟಗಳಿರುವ ಈ ಪುಸ್ತಕದ ಬೆಲೆ 190/- ರೂಪಾಯಿಗಳಾಗಿವೆ.
ಈ ಪುಸ್ತಕವನ್ನು ಸತೀಶ್ ಸರ್ 'ಸಮುದಾಯ ಪ್ರಜ್ಞೆಯ ಸಂಕೇತವಾಗಿ ಬದುಕಿದ ಕೆ ವಿ ಸುಬ್ಬಣ್ಣ ಅವರ ನೆನಪಿಗೆ' ಎಂದು ಅರ್ಪಣೆ ಮಾಡಿದ್ದಾರೆ.
ಪತ್ರಿಕೋದ್ಯಮದ ಕುರಿತಾದ ಒಂದು ಅದ್ಭುತವಾದ ಮಾತಿನ ಉಲ್ಲೇಖವಿದೆ:
'Truth is factual and unalterable. Unravelling of truth which always sides with society and is subsumed in community consciousness is Journalism’
ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದ ಪತ್ರಕರ್ತನೊಬ್ಬ 'ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್ಶಿಪ್' ಪಡೆದು ಲಂಡನ್ನಿನ ವೆಸ್ಟ್ ಮಿನಿಸ್ಟರ್ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದುದರ ಅನುಭವ ಕಥನವೇ ಈ ಪುಸ್ತಕ ಎನ್ನಬಹುದು.
ಬಹುಶಃ ಬೇರೆಲ್ಲಾ ವಿದೇಶಗಳ ಪಯಣಕ್ಕಿಂತ ಬ್ರಿಟನ್ (ಲಂಡನ್) ಪಯಣ ಭಾರತೀಯರಿಗೆ ಯಾವತ್ತಿಗೂ ಒಂದು ಸೋಜಿಗವೇ ಎನ್ನುವುದು ಇದನ್ನು ಓದಿದಾಗ ಅನುಭವಕ್ಕೆ ಬರುತ್ತದೆ.
ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಬರಹದ ಸೆಳೆತ, ಪರಿಶ್ರಮ, ಪ್ರತಿಭೆಗಳ ಮೂಲಕ ಪ್ರಜಾವಾಣಿಯಲ್ಲಿ ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಸತೀಶ್ ಸರ್ ಅವರಿಗೆ ಕ್ರಿಕೆಟ್ ಕುರಿತು ವಿಶೇಷ ಆಸಕ್ತಿ ಇದ್ದುದು ಈ ಪುಸ್ತಕದಲ್ಲಿ ಹಲವಾರು ಕಡೆ ವ್ಯಕ್ತವಾಗಿದೆ.
ಅರವತ್ತು -ಎಪ್ಪತ್ತರ ದಶಕಗಳಲ್ಲಿ ಭಾರತದ ಕ್ರಿಕೆಟ್ ಕಣ್ಮಣಿಗಳಾಗಿ (ಪ್ರತಿಸ್ಪರ್ಧಿಗಳೂ ಆಗಿದ್ದ) ಮಿಂಚಿದ ಫಾರೂಕ್ ಮಾಣಿಕ್ ಶಾ ಮತ್ತು ಬುಧಿ ಕುಂದರನ್ ಅವರಿಬ್ಬರನ್ನು ಭೇಟಿ ಮಾಡಿ ಸಂದರ್ಶನ ಮಾಡಿದ ಅನುಭವ ಕ್ರಿಕೆಟ್ ಪ್ರೇಮಿಗಳನ್ನು ಆರ್ದ್ರರನ್ನಾಗಿಸುತ್ತದೆ.
ನಾಲ್ಕು ತಿಂಗಳುಗಳು ಸಸ್ಯಾಹಾರಿ ಆಗಿ ಲಂಡನ್ನಿನಲ್ಲಿದ್ದು ಅಡುಗೆ ಮಾಡಿಕೊಂಡು, ಎಲ್ಲೆಡೆಗೂ ನಡೆದುಕೊಂಡೇ ಓಡಾಡಬೇಕಾದ ಅನಿವಾರ್ಯತೆ, ವಾರಾಂತ್ಯಗಳಲ್ಲಿ ಎಲ್ಲಾ ಪ್ರವಾಸೀ ತಾಣಗಳನ್ನು ನೋಡಿ (ಬ್ರಿಟನ್ ನಲ್ಲಿ ಪ್ರತಿಯೊಂದೂ ಪ್ರಖ್ಯಾತವೇ!) ಕಣ್ಣು ತುಂಬಾ, ಮನದ ತುಂಬಾ, ಡೈರಿ ಪುಟಗಳ ತುಂಬಾ ತುಂಬಿ ಕೊಳ್ಳುವ ಧಾವಂತದ ದಿನಚರಿ ವರ್ಣನೆ ಅತ್ಯಂತ ಸಹಜವಾಗಿ ಮೂಡಿ ಬಂದಿದೆ.
ಪ್ರಸಿದ್ಧ ಬ್ರಿಟಿಷ್ ಮ್ಯೂಸಿಯಂ, ಲೈಬ್ರರಿ, ಶೇಕ್ಸ್ ಸ್ಪೆಯರ್ ಊರು, ಮ್ಯೂಸಿಯಂ, ನಿಲ್ಲದೇ ಚಲಿಸುತ್ತಲೇ ಇರುವ ಲಂಡನ್ ಐ ಗಾಜಿನ ತೊಟ್ಟಿಲಿನ gaint wheel ಎಲ್ಲದರ ವಿಶಿಷ್ಟ ಅನುಭವಗಳನ್ನು ಸ್ವಾರಸ್ಯಕರವಾಗಿ ಹೇಳಿದ್ದಾರೆ.
ಅವರೇ ಹೇಳಿರುವಂತೆ ಒಬ್ಬ ಪತ್ರಕರ್ತ ಗ್ರೇಟ್ ಬ್ರಿಟನ್ನಿನಲ್ಲಿ ವೃತ್ತಿಪರ ನೆಲೆಯೊಳಗೆ ನಡೆಸಿದ ಸುತ್ತಾಟ ಮತ್ತು ಆ ವೇಳೆ ಆತ ಜಾಗತಿಕ ಮಾಧ್ಯಮ ಲೋಕದಲ್ಲಿ ನಡೆಸಿದ ಪ್ರವಾಸದ ಪರಿಣಾಮವಾಗಿದೆ ಈ ಪುಸ್ತಕ.
ಈ ಪುಸ್ತಕ ನವಕರ್ನಾಟಕ ಮಳಿಗೆ ಮತ್ತು ಆನ್ಲೈನ್ ನಲ್ಲಿ ಸಿಗುತ್ತದೆ. ಪತ್ರಿಕೋದ್ಯಮದ ವಾಸ್ತವಕ್ಕೆ ಹತ್ತಿರವಾದ ಈ ಪುಸ್ತಕ ಬಹಳಷ್ಟು ಹೊಸ ವಿಚಾರಗಳನ್ನು ತಿಳಿಸಿತು.
ಸತೀಶ್ ಚಪ್ಪರಿಕೆ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಥೇಮ್ಸ್ ತಟದ ತವಕ ತಲ್ಲಣ ಕೃತಿ ಪರಿಚಯ
ಪೂರ್ಣಿಮಾ ಮಾಳಗಿಮನಿ ಅವರ ಲೇಖಕ ಪರಿಚಯ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.