ರಂಗ ಪ್ರಪಂಚದಲ್ಲಿ ಬಯಲಾಟಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಅದರಲ್ಲಿ ಶ್ರೀ ಕೃಷ್ಣ ಪಾರಿಜಾತ ದ ಆಟವು ಶತಮಾನಗಳಿಂದಲೂ ಬಹುಸ್ತರದ ಜನರನ್ನು ಮೆಚ್ಚಿಸಿದ ಜನಪ್ರಿಯ ಆಟವಾಗಿದೆ. ಬೆಳಗಾವಿ ಭಾಗದಲ್ಲಿ ಪಾರಿಜಾತ ಆಟದಲ್ಲಿ ಸತ್ಯಭಾಮೆಯ ಪಾತ್ರ ಮಾಡುತ್ತಿದ್ದ ಚಾಂದಬಿ ಎಂಬ ಯುವ ಅಭಿಜಾತ ಕಲಾವಿದೆಯ ಬದುಕಿನ ಸುತ್ತ ಹೆಣೆದುಕೊಂಡ ಈ ಕಾದಂಬರಿ ಸಾಮಾಜಿಕ ಪರಿವರ್ತನೆಯ ಸದಾಶಯ ಹಾಗೂ ಕಾಳಜಿಯನ್ನು ಹೊಂದಿದೆ ಎನ್ನುತ್ತಾರೆ ಲೇಖಕ ಮನು ಪತ್ತಾರ ಕಲಕೇರಿ. ಅವರು ಚಂದ್ರಶೇಖರ ಕಂಬಾರರ ‘ಚಾಂದಬೀ ಸರಕಾರ’ ಕೃತಿಯ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ..
ಕೃತಿ: ಚಾಂದಬೀ ಸರಕಾರ
ಲೇಖಕರು: ಚಂದ್ರಶೇಖರ ಕಂಬಾರ
ಬೆಲೆ: 150
ಮುದ್ರಣ: 2021
ಪ್ರಕಾಶಕರು: ಅಂಕಿತ ಪುಸ್ತಕ
ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ಸಾಹಿತ್ಯ ಪ್ರಕಾರಗಳಾದ ಕಾವ್ಯ, ನಾಟಕ, ಕಾದಂಬರಿ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಅನನ್ಯತೆಯನ್ನು ಸಾಧಿಸಿದ ಬಹುಮುಖ್ಯ ಲೇಖಕರು. ಇವರನ್ನು 'ಭಾರತೀಯರ ಕಾವ್ಯ ಗುರು' ಎಂದರೆ ಅತಿಶಯೋಕ್ತಿ ಆಗಲಾರದು. ಕಾವ್ಯದಿಂದ ಆರಂಭವಾದ ಇವರ ಸಾಹಿತ್ಯದ ಯಾನ ನಾಟಕ ಹಾಗೂ ಕಾದಂಬರಿಗಳಲ್ಲಿ ಶಿಖರವನು ಮುಟ್ಟಿ ತಲೆಮಾರುಗಳ ಬರಹಗಾರರಿಗೆ ಸ್ಫೂರ್ತಿ ಹಾಗೂ ಮಾರ್ಗವಾಗಿದೆ. ಡಾ. ಕಂಬಾರ ಅವರ ಚಿಂತನೆಯ ಸೆಲೆ ಜಾನಪದದ ಒಡಲಿಂದ ಜಿನುಗುತ್ತಾ ತತ್ಕಾಲಕ್ಕೆ ಎದುರಾಗುವ ಎಲ್ಲ ಸಮಸ್ಯೆಗಳಿಗೆ ಅಲ್ಲಿಂದಲೆ ಉತ್ತರ ಸಿದ್ಧಪಡಿಸಿಕೊಳ್ಳುವುದು ಮತ್ತು ಅದನ್ನು ಕಥಾ ರೂಪದಲ್ಲಿ ಪ್ರಸ್ತುತ ಪಡಿಸುವ ಇವರ ಕ್ರಮ ಮತ್ತು ಜಾಣ್ಮೆ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಯ ಹಾಗೂ ಬರಹಗಾರರಿಗೂ ಹೊಸ ಬೆಳಕಾಗಿ ಮತ್ತು ಬೆರಗಾಗಿ ಕಾಣುವುದು ಈ ಬೆರಗಿನಲ್ಲಿ ಬೆಳೆದ ಲೇಖಕರ ಪಟ್ಟಿಯೂ ಕೂಡಾ ಬಹು ಉದ್ದವಾಗಿದೆ.
ಕನ್ನಡವನ್ನು ಓದುವ, ಬರೆಯುವ ಹಾಗೂ ಮಾತನಾಡುವ ಎಲ್ಲ ಸಮುದಾಯದವರ ಹೃದಯವನು ಮುಟ್ಟಿದ ಮತ್ತು ತಟ್ಟಿದ ಕವಿ ಕಂಬಾರರು ಎಂದು ಗಟ್ಟಿ ದನಿಯಲ್ಲಿಯೇ ಹೇಳಬಹುದಾಗಿದೆ. ಕನ್ನಡಿಗರ ಉಸಿರಲ್ಲಿ ಬೆರೆತ ಇವರ ಬರಹಕ್ಕೆ, ಮಾತಿನ ಮೋಡಿಗೆ, ಹಾಡುವ ಹಾಡಿಗೆ, ಜನಪದ ಕಥೆಗಳನ್ನು ಹೇಳುವ ಶೈಲಿಗೆ ಬರಹಗಾರರು ಹಾಗೂ ಜನಸಾಮಾನ್ಯರು ಕಾಯುತ್ತಾ ಕುಳಿತುಕೊಳ್ಳುತ್ತಾರೆ. 'ಹೇಳತೇನ ಕೇಳ' ಕಾವ್ಯದಿಂದ ಆರಂಭವಾದ ಅವರ ಸಾಹಿತ್ಯ ಯಾನ 'ಚಾಂದಬೀ ಸರಕಾರ' ದವರೆಗೆ ವಿಶಿಷ್ಟವಾಗಿ ವ್ಯಾಪಿಸಿಕೊಂಡ ಸಂಗತಿ ಎಲ್ಲರಿಗೆ ತಿಳಿದದ್ದಾಗಿದೆ. ಈ ನೆಲದ ಸತ್ವವನು ಹೀರಿಕೊಂಡೆ ಮೈದಾಳಿದ ಅವರ ಕೃತಿಗಳು ಓದುಗನಲ್ಲಿ ವಿಶಿಷ್ಟ ಬಗೆಯ ದೇಸಿ ಸೌಧವನ್ನು ಕಟ್ಟಿ ಕಟ್ಟಿವೆ. ಇವರ ಕಾವ್ಯ, ನಾಟಕಗಳು ಮತ್ತು ಕಾದಂಬರಿಗಳು ಕನ್ನಡಿಗನ ಮನೆ ಮನ ಸೇರಿರುವುದಷ್ಟೆ ಅಲ್ಲ ಹಾಡಾಗಿಯೂ ಬಾಯಿಂದ ಬಾಯಿಗೆ ವರ್ಗಗೊಂಡು ಸಮೂಹದಲ್ಲಿ ಸೇರಿ ಜಾನಪದವಾಗಿ ಜಾತ್ರೆ ಮಾಡುತ್ತಲೇ ಎಲ್ಲರನ್ನೂ ತಣಿಸಿ ಕುಣಿಸುತ್ತಿವೆ.
"ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೊ ಹಾಂಗ
ಹಾಡಬೇಕೊ ತಮ್ಮ ಹಾಡಬೇಕು ಕಲ್ಲಿನೆದೆಯಲ್ಲಿ ಜೀವಜಲ ಚಿಲ್ಲೆಂದು ಚಿಮ್ಮುವಂತೆ ಹಾಡು ಹಾಡಬೇಕು ಆಕಾಶದಂಗಳದ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡು ಹಾಡಬೇಕು" --- ಎನ್ನುವ ಅವರ ಕವಿತೆಯ ಸಾಲುಗಳು ಕಂಬಾರರ ಪ್ರತಿಭೆಗೆ ಕನ್ನಡಿ ಹಿಡಿಯುವವು.
ಪದ್ಮಭೂಷಣ ಚಂದ್ರಶೇಖರ ಕಂಬಾರರವರ ನಾಟಕಗಳು ರಂಗಪ್ರಪಂಚದಲ್ಲಿ ಸಾಧಿಸಿದ ಎತ್ತರವನ್ನು ಅಳೆಯುವ ಮಾಪನಗಳು ಕನ್ನಡದಲ್ಲಿ ಉಂಟೇನು ? ಬಹುತೇಕ ಉತ್ತರ ಇಲ್ಲವಾಗಿದೆ ಹಾಗೇಯೇ ಇವರ 'ಸಿಂಗಾರವ್ವ ಮತ್ತು ಅರಮನೆ' ,'ಕರಿಮಾಯಿ' ,'ಜೆ ಕೆ ಮಾಸ್ತರ ಮತ್ತು ಪ್ರಣಯ ಪ್ರಸಂಗ', ' ಶಿವನ ಡಂಗುರ' ,'ಶಿಖರಸೂರ್ಯ' ಕಾದಂಬರಿಗಳು ಕನ್ನಡ ನೆಲದ ಫಲವತ್ತತೆಯನ್ನು ಹಾಗೂ ಮನುಷ್ಯ ಸ್ವಭಾವದ ಬಿಂಬ ಮತ್ತು ದಂದುಗವನ್ನು ತಮ್ಮದೇ ಆದ ವಿಶಿಷ್ಟ ನೆಲೆಯಲ್ಲಿ ಓದುಗರಿಗೆ ತೆರೆದಿಟ್ಟು ಹೊಸ ಚಿಂತನೆಯತ್ತ ಕರೆದುಕೊಂಡು ಹೋಗಿವೆ ಮತ್ತೆ ಮತ್ತೆ ಓದಿದಾಗ ನವೀನ ಮಾದರಿಯ ಬೀಜಗಳನ್ನು ಎದೆಗೂಡಲ್ಲಿ ಬೆತ್ತಲೆ ಇರುವವು. ಈ ಮೂಲಕ ಕಂಬಾರ ಅವರ ಬರಹದ ಲವಲವಿಕೆಯನು ಮತ್ತು ಶಕ್ತಿಯನ್ನು ನಮಗೆ ತೋರ್ಪಡಿಸುವ ತೋರು ದೀಪಗಳಾಗಿ ಬೆಳಕನ್ನು ನೀಡುತ್ತಲೇ ಕಣ್ಮುದಿವೆ.
ಭಾರತೀಯರ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರ ಅವರ ತುಡಿತ, ಕಾಲಮಾನದ ಬಿಕ್ಕಟ್ಟುಗಳನ್ನು , ಸಮಸ್ಯೆಗಳನ್ನು ವಿಭಿನ್ನವಾಗಿಯೇ ಗ್ರಹಿಸಿ ಅವುಗಳಿಗೆ ಜಾನಪದದ ಲೋಕದ ಕಥೆಗಳ ಮೂಲಕ ಪರಿಹಾರ ಶೋಧಿಸಿಕೊಡುವರು ಈ ನಿಟ್ಟಿನಲ್ಲಿ ಇತ್ತೀಚಿಗೆ ಬಿಡುಗಡೆಯಾದ ಅವರ ಆರನೇಯ ಕಾದಂಬರಿಯ ' ಚಾಂದಬೀ ಸರಕಾರ ' ವು ಕೂಡಾ ಸಾಕ್ಷಿ ನುಡಿಯುವುದು. 'ಚಾಂದಬೀ ಸರಕಾರ' ತನ್ನ ಭಾಷಾ ಸಮೃದ್ಧಿಯ ಕಾರಣ ಓದುಗನ ಆಸಕ್ತಿಯನು ಹಿಗ್ಗಿಸುತ್ತಾ ಒಳಿತು ಕೆಡುಕುಗಳ ಮೂಲ ಶೋಧಿಸುವುದು ಒಳ್ಳೆಯನಕ್ಕೆ ಬರುವ ಕಂಟಗಳ ಪರಿಹಾರ, ಮಹಿಳೆಯರ ಸಭಲ ಚಿಂತನೆ, ಭೂಮಿ ಕಳಕೊಂಡವರ ಸಂಕಟ, ಆಧುನಿಕತೆಯ ಕಡು ಮೋಹದ ಅಪಾಯ, ರಾಜಕೀಯ ಕುಟಿಲ ನೀತಿ, ಮನುಷ್ಯನೊಳಗೆ ಸುರುಳಿ ಸುತ್ತಿಕೊಂಡ ಹಸಿ ಕಾಮ, ಹೊಸ ಕನಸಿನ ಹಂಬಲ...ಹೀಗೆ ಬಹುತರ ನೆಲೆಯಲ್ಲಿ ಕೃಷ್ಣ ಪಾರಿಜಾತ ದ ನಾಯಕಿಯ ಜೀವನವನ್ನು ಸಮೀಕರಿಸಿ ನೋಡಲಾಗಿದೆ.
ಕಂಬಾರರವರ ಹುಟ್ಟಿದ ಊರು 'ಶಿವಾಪುರ'. ಇದು ಬಹುತೇಕ ಭಾರತದ ಎಲ್ಲ ಹಳ್ಳಿಗಳ ಪ್ರತೀಕವಾಗಿದೆ. ಇಲ್ಲಿ ಸಂಭವಿಸಿದ ಘಟನೆಗಳು ಕವಿ ಕಂಬಾರ ಅವರನ್ನು ಬಿಟ್ಟು ಬಿಡದೆ ಕಾಡುತ್ತಲೇ ಸಾಗಿವೆ ಮತ್ತು ಸೃಜನಶೀಲ ಮುಸೆಯಲ್ಲಿ ಹಾಕಿ ಕರಗಿಸಿ ಆಕಾರ ನೀಡುವಂತೆ ಪೀಡಿಸುತ್ತಲಿರುತ್ತವೆ ಆದರೆ ಕವಿ ಕಂಬಾರರು ಮಾತ್ರ ಅವುಗಳ ತುಡಿತವನು ಗಮನದಲ್ಲಿಟ್ಟುಕೊಂಡು ಸಮಯ ಸಂದರ್ಭಗಳನ್ನು ನೋಡಿಕೊಂಡು ಅಳೆದು ತೂಗಿ ಭಾಷೆಯ ಮೂಲಕ ದಿಕ್ಷೆ ನೀಡಿ ಜೀವಕಳೆ ತುಂಬಿ ಹೊರ ಬಿಡುವುದನು ನೋಡುತ್ತಾ ಬರಲಾಗುತ್ತಿದೆ.
ರಂಗ ಪ್ರಪಂಚದಲ್ಲಿ ಬಯಲಾಟಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಅದರಲ್ಲಿ ಶ್ರೀ ಕೃಷ್ಣ ಪಾರಿಜಾತ ದ ಆಟವು ಶತಮಾನಗಳಿಂದಲೂ ಬಹುಸ್ತರದ ಜನರನ್ನು ಮೆಚ್ಚಿಸಿದ ಜನಪ್ರಿಯ ಆಟವಾಗಿದೆ. ಬೆಳಗಾವಿ ಭಾಗದಲ್ಲಿ ಪಾರಿಜಾತ ಆಟದಲ್ಲಿ ಸತ್ಯಭಾಮೆಯ ಪಾತ್ರ ಮಾಡುತ್ತಿದ್ದ ಚಾಂದಬಿ ಎಂಬ ಯುವ ಅಭಿಜಾತ ಕಲಾವಿದೆಯ ಬದುಕಿನ ಸುತ್ತ ಹೆಣೆದುಕೊಂಡ ಈ ಕಾದಂಬರಿ ಸಾಮಾಜಿಕ ಪರಿವರ್ತನೆಯ ಸದಾಶಯ ಹಾಗೂ ಕಾಳಜಿಯನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ನಡೆಯುವ ಈ ಕಥೆ ಆಧುನಿಕತೆ ತಂದು ಬಿಸಾಕುತ್ತಿರುವ ಅಪಾಯಗಳ ಕುರಿತೆ ಹೆಚ್ಚಾಗಿ ಮಾತನಾಡುವುದು. ಅಂದು ಊರಾಳಿಕೆಯನ್ನು ವಹಿಸಿಕೊಂಡ ದೇಸಾಯಿ, ದೇಶಗತಿ ,ದೇಶಪಾಂಡೆ, ಗೌಡ, ಪಟೇಲ ಮನೆತನಗಳ ಕೆಲವು ವ್ಯಕ್ತಿಗಳು ಅರಮನೆಯಂತಹ ಮನೆಗಳನ್ನು ಕಟ್ಟಿಕೊಂಡು ಊರಿನ ಉಸ್ತುವಾರಿಕೆ ಯನ್ನು ಮಾಡಿಕೊಂಡು ರೈತರಿಂದ, ವ್ಯಾಪಾರಿಗಳಿಂದ, ದಲ್ಲಾಳಿಗಳಿಂದ ಕರ ವಸೂಲಿ ಮಾಡಿ ಸರ್ಕಾರಕ್ಕೆ ಕಂದಾಯ ಅಧಿಕಾರಿಗಳ ಮೂಲಕ ಒಪ್ಪಿಸುವ ಕಾಲ. ಇಂತಹ ಸಂದರ್ಭದಲ್ಲಿ ಕೆಲವು ಶ್ರೀಮಂತ ಪುಂಡರು ಅಟ್ಟಹಾಸ ದರ್ಪ ದೌರ್ಜನ್ಯಗಳನ್ನು ಬಡವರ ಮೇಲೆ ಎಸೆಯುತ್ತ ಮೆರೆಯುವ ಕಾಲದೊಳಗೆ ಶಿವಪುರ ಹಾಗೂ ಮನೋಳ್ಳಿ ಸುತ್ತಮುತ್ತ ನಡೆಯುವ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ವಾದ ಕೆಲವು ಘಟನೆಗಳು ಕಂಬಾರ ಅವರು ಈ ಕಾದಂಬರಿಯ ಆಗಿಸಲು ಕಾರಣವಾಗಿದೆ.
ಘಟಪ್ರಭಾ ನದಿಯ ದಂಡೆಯ ಮೇಲಿರುವ ಶಿವಪುರ ಕಂಬಾರ ಅವರ ಬರಹಕ್ಕೆ ಸ್ಪೂರ್ತಿ ಹಾಗೂ ಉತ್ಸಾಹದ ಬುಗ್ಗೆಯ ಶಕ್ತಿಕೇಂದ್ರವಾಗಿದೆ. ಶಿವಾಪುರದ ಬಲದೇವ ನಾಯಕ ಪರಂಪರಾಗತವಾಗಿ ಬಂದ ಊರಾಳಿಕೆಯನ್ನು ಹೊಂದಿದವನು ಆದರೆ ಅವನಿಗೆ ದೊರೆತನಕೆ ಇರಬಹುದಾದ ಜಾಡ್ಯಗಳ ಸೋಂಕು ಮೆತ್ತಿರಲಿಲ್ಲ ಮೈಮುರಿದು ದುಡಿಯುವ ಚಾಳಿ ಹೊಂದಿದ ಇವನಿಗೆ ಕೂಲಿ ಮಾಡುವ ಹೆಣ್ಣುಮಗಳೊಬ್ಬಳಾಡುವ 'ಇಷ್ಟೆಲ್ಲಾ ಗಳಿಸಿ ಯಾರಿಗೆ ಬಿಟ್ಟು ಹೋಗುತ್ತಾನೆ ಪುಣ್ಯಾತ್ಮ' ಎನ್ನುವ ಮಾತು ನಾಯಕನ ಬದುಕಿನ ದಿಕ್ಕನ್ನೇ ಬದಲಿಸುವುದು . ನಾಯಕನಿಗೆ ನಾನು ಮದುವೆ ಮಾಡಿಕೊಂಡು ಕುಟುಂಬ ಕಟ್ಟಿಕೊಳ್ಳುಬೇಕಂಬ ಆಲೋಚನೆ ಮಾಡುತ್ತಾನೆ. ಈಗಾಗಲೆ ಮೂವತ್ತರ ಪ್ರಾಯಕ್ಕೆ ಬಂದಿದ್ದರೂ ನೆಲಕ್ಕೆ ಗುದ್ದಿ ನೀರು ತೆಗೆಯುವ ಕಸುವನ್ನು ಕಾಪಿಟ್ಟು ಕೊಂಡಿರುವನು ಇಂತಹ ಕಸುವಿನ ಬಲದೇವ ನಾಯಕನಿಗೆ ಶಿವಾಪುರದ ಪಕ್ಕದ ಮನೋಳ್ಳಿಯ ಅಯ್ಯಾ ಸರಕಾರ ತನ್ನ ಹಿರಿಯ ಮಗಳಾದ ಕಾವೇರಿಯನ್ನು ಧಾರೆಯೆರೆದು ಕೊಡುವನು. ಕಾವೇರಿ ಶ್ರೀಮಂತಿಕೆಯ ಪೌಡರನ್ನು ಮೆತ್ತಿಕೊಂಡೆ ಶಿವಾಪುರದ ವಾಡೆಯನ್ನು ಸೇರುವಳು, ಬಲದೇವನ ಕಬ್ಬಿಣದಂತಹ ತೋಳಿನಲ್ಲಿ ಬಂಧಿ ಆಗಿ ಸುಖದ ಎಲ್ಲ ಮೆಟ್ಟಿಲುಗಳನ್ನು ಏರಿ ಇಳಿದು ಮಕ್ಕಳ ಫಲ ದಕ್ಕದೇ ಒದ್ದಾಡಿದಳು. ಕೊರವಂಜಿಯ ಭವಿಷ್ಯದ ವಾಣಿಯಂತೆ ಹೆಜ್ಜೆಹಾಕಿ ತವರುಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ಆ ಮಗುವಿಗೆ 'ಕೃಷ್ಣ ' ಎಂದು ನಾಮಕರಣ ಮಾಡಿ ಈ ಲೋಕದ ಜಾತ್ರೆ ಮುಗಿಸುವಳು. ಹತ್ತು ವರ್ಷಗಳ ಕಾಲ ಮಗನ ಮುಖ ನೋಡಬಾರದೆಂದು ಮಾತಿಗೆ ಮತ್ತು ಹೆಂಡತಿಯನ್ನು ಕಳೆದುಕೊಂಡ ಬಲದೇವ ಹೈರಾಣಾಗಿ ಹೋಗುವನು. ಏಕಾಂತವನು ಮರೆಯಲು ಸೇಂದಿಯ ಸಹವಾಸವನ್ನು ಕೂಡಾ ಮಾಡುವನು. ವಿಜಯಪುರದ ಸುಲ್ತಾನರಿಗೆ ಮಸಾಲಾ ಸಾಮಗ್ರಿಗಳನ್ನು ಮಾರಲು ಹೋದ ಸಂದರ್ಭದಲ್ಲಿ ಪಾರಿಜಾತದ ಆಟವನ್ನು ನೋಡಿ, ಅಲ್ಲಿನ ಚಾಂದಬಿ ಯ ನಟನೆಗೆ ಅವಳ ಸ್ನಿಗ್ಧ ಸೌಂದರ್ಯಕ್ಕೆ ಭಾಗಿ ಬೆಂಡಾಗಿ ಕರಗಿ ನೀರಾಗಿ, ಕಣ್ಣಲ್ಲಿ ಎದೆಯಲ್ಲಿ ಅವಳನ್ನೆ ಪ್ರತಿಷ್ಠಾಪಿಸಿ ಕೊಂಡು ಕೈ ಹಿಡಿಯಲು ಮುಂದಾಗುವನು.
ಶ್ರೀಕೃಷ್ಣ ಪಾರಿಜಾತದ ಆಟದಲ್ಲಿ ಸತ್ಯಭಾಮೆಯ ಪಾತ್ರವನ್ನು ಮಾಡುತ್ತಿದ್ದ ಚಾಂದಬೀ ಹುಕ್ಕೇರಿಯ ಕೊಟಬಾಗಿ ಊರಿನ ದೇವದಾಸಿ ನಿಂಬೆವ್ವಳ ಒಬ್ಬಳೆ ಮಗಳು ಇವಳ ಮೊದಲ ಹೆಸರು ಶೀಲವಂತೆ ಎಂದಾಗಿದ್ದು ಅತ್ಯದ್ಭುತವಾಗಿ ಹಾಡುತ್ತಿದ್ದ ಶೀಲವಂತೆ ನೋಡುಗನ ಕಣ್ಣಲ್ಲಿ ತಕ್ಷಣವೆ ಶಿಲ್ಪವಾಗಿ ಪ್ರತಿಷ್ಠಾಪಿತವಾಗಿ ಬಿಡುವ ಹಾಗಿದ್ದಳು ಈ ಅನುಪಮ ಚೆಲುವೆ ಪಾರಿಜಾತದಲ್ಲಿ ಕೃಷ್ಣನ ಪಾತ್ರಧಾರಿಯಾದ ಉಸ್ತಾದ ಅಗಾ ಆಲಿಖಾನ ನ ಕಲೆಯ ಗರಡಿಯಲಿ ಪಳಗಿದ ತಾರೆ, ಗುರುವಿಗೂ ಗುಂಗು ಹಿಡಿಸಿದ ಈ ಚೆಲುವ ಚಂದ್ರಿಕೆ ಗುರುವಿಗೆ ಗುರುದಕ್ಷಿಣೆಯಾಗಿ ತನ್ನನ್ನೇ ತಾನು ಸಮರ್ಪಿಸಿಕೊಂಡವಳು ಆವಾಗ್ಗೆ ಚಾಂದಬೀ ಆಗಿ ಮರುನಾಮಕರಣ ಗೊಂಡು ಆಗಾಖಾನ ಎರಡನೆಯ ಹೆಂಡತಿಯಾಗಿ ಪಾರಿಜಾತದ ಆಟದಲ್ಲಿ ಕೃಷ್ಣನಾಗುವ ಅವನಿಗೆ ಸತ್ಯಭಾಮೆಯಾಗಿ ಆಟದ ಸೊಗಸನ್ನು ಇಬ್ಬರು ಹೆಚ್ಚಿಸಿ ಪ್ರಖ್ಯಾತರಾದರು.ಹಳ್ಳಿ ಹಳ್ಳಿಗಳನು ಸುತ್ತಿ ಆಟವನು ಮತ್ತಷ್ಟು ಜನಪ್ರಿಯಮಾಡಿ ಎಲ್ಲರಿಂದ ಶಬ್ಬಾಶಗಿರಿ ಪಡೆದುಕೊಂಡು ಬಹುಜನರ ಕಣ್ಣಿಗೆ ಎಸರಾದರು ಮುಂಬೈಗೂ ಹೋಗಿ ಅಲ್ಲಿಯ ಸಿನಿಮಾದ ಎದುರು ಸ್ಪರ್ಧ ನೀಡಿದರು ಇಂತಹ ಸಂದರ್ಭದಲ್ಲಿಯೇ ಆಗ ಕಾನನ ಮೊದಲ ಹೆಂಡತಿಯ ಹೊಟ್ಟೆಕಿಚ್ಚಿಗೂ ಇಡಾಗಿ ಆಗಾಖಾನ ನನ್ನು ಚಾಂದಬೀ ತೊರೆದು ಕಲ್ಲಹಳ್ಳಿಯ ಶಾಸ್ತ್ರೀಯ ಪಂಡಿತ ಪಾರಿಜಾತ ಆಟದ ಶಾಸ್ತ್ರೀಯ ಚಿಂತಕರಾದ ದೇಶಪಾಂಡೆ ಹಾಗೂ ಅಂಬಾಬಾಯಿಯವರ ಮಮತೆಯ ಮಡಿಲಿಗೆ ಸೇರಿ ತಾಯಿ-ತಂದೆಯರ ಪ್ರೀತಿಯ ಸವಿಯನ್ನು ಮತ್ತೆ ಸವಿಯುವಳು ಮತ್ತೆ ಪಾರಿಜಾತದ ಆಟದಲ್ಲಿ ಮಿಂಚುತ್ತಿರುವ ಗಳಿಗೆಯಲ್ಲಿಯೇ ಶಿವಾಪುರದ ಗಟ್ಟಿಗ ಬಲದೇವನ ತೆಕ್ಕೆಗೆ ಬಂದು ಶಿವಾಪುರದ 'ವಿಲಾಸ ಖಾನೆ ' ಸೇರಿ ಜನತೆಯ ಪಾಲಿಗೆ ಅರಿವು ಹಾಗೂ ಅಕ್ಷರವನ್ನು ನೀಡಿ ಸರಕಾರ ಆಗಿ ಹೊರಹೊಮ್ಮುವಳು.
ಕಲಾ ಚತುರೆಯಾದ ಚಾಂದಬಿ ಶಿವಾಪುರ ಸೇರಿ ಆದ ನಂತರ ಅಲ್ಲಿಯತನಕ್ಕೆ ಹೊಸ ಭಾಷೆಯನ್ನು ಬರೆಯುವಳು ಬಲದೇವನ ವಾಡಿಯಲ್ಲಿ ಮನೋಳ್ಳಿ ಯ ಅಯ್ಯಾ ಸರ್ಕಾರ್ ತನ್ನ ಕಾರಬಾರಿಗಳಾದ ನೀಲಕಂಠ ಹಾಗೂ ಬಂಗಾರಮ್ಮ ನವರ ನೇತೃತ್ವದಲ್ಲಿ ಭಾರ್ ಗಳನ್ನು ಸ್ಥಾಪಿಸಿ ಊರಿನ ವಾತಾವರಣ ಹದೆಗೆಡಲು ಮುಗ್ಧ ರೈತಾಪಿ ಜನರ ಬಾಳು ಬೀದಿಗೆ ಬರಲು ಕಾರಣರಾಗುತ್ತಾರೆ. ವ್ಯಾಘ್ರ ರೂಪಿಯಾದ ಅಯ್ಯಾಸರಕಾರ ನ ಕಟೀಲತನವನು ಶಾಂತಿ ಸಹನೆಯಿಂದಲೆ ಸೀಳಿ ಹಾಕುವ ಚಾಂದಬೀ ಕಥೆ ರೋಚಕವಾಗಿಯೇ ಸಾಗುವುದು.
ಚಾಂದಿಬೀ ರಾಣಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸುವಳು, ಸಾಮಾನ್ಯರ ಕಷ್ಟಕ್ಕೆ ಆಸರೆಯಾಗಬೇಕಿದ್ದ ಸ್ಥಳೀಯ ಆಡಳಿತ ಅಯ್ಯಾ ಸರ್ಕಾರದ ಅಣತಿಯಂತೆ ನಡೆಯುತ್ತಾ ಆಡಳಿತದ ಶಕ್ತಿ ಕೇಂದ್ರವಾದ ವಾಡೆ ಜನರಿಗೆ ಮತ್ತು ಮತ್ತ್ ಬರಿಸುವ ಅಡ್ಡ ಆಗಿ ಜನರ ದಿಕ್ಕಿನ್ನೆ ಬದಲಿಸುವ ಸೂತ್ರವಾಗಿತ್ತು ದುಡಿಯುವ ರೈತರಿಗೆ ಕುಡಿಯಲು ಸೆರೆ ನೀಡುವುದು, ಹಣವಿಲ್ಲದಿದ್ದರೂ ಉದ್ರಿ ನೀಡಿ ಕುಡಿಯುವ ಚಟವನು ಹಚ್ಚಿಸಿ ಅವರ ದಿಕ್ಕನ್ನು ತಪ್ಪಿಸಿ ಹಣಕೊಡಲಾಗದ ರೈತರ ಮನೆಗೆ ಕಲ್ಕಿದಳ ವನು ಕಳುಹಿಸಿ ಹಿಂಸೆ ನೀಡುವ ಪ್ರವೃತ್ತಿಯನ್ನು ಹುಟ್ಟು ಹಾಕಲಾಗುತ್ತದೆ . ನೀಲಕಂಠ ಬಂಗಾರಮ್ಮರು ಮನೋಳ್ಳಿಯ ಅಯ್ಯಾ ಸರಕಾರನ ದುರಹಂಕಾರವನ್ನು ನಿತ್ಯವೂ ಅನುಷ್ಠಾನಗೊಳಿಸುವ ಕೈಗೊಂಬೆಗಳಾಗುತ್ತಾರೆ ಇದರಿಂದ ಹೊಲ ಮನೆಗಳನ್ನು ಕಳೆದುಕೊಂಡು ಹಸಿವಿನಿಂದ ಬಳಲುವ ಬಡವರು ವಿಧವೆಯರು, ಜೋಗತಿಯರು ಅಯ್ಯಾ ಸರಕಾರನಿಗೆ ಹಾಕುವ ಬೆಂಕಿಯ ಶಾಪವು ತುಸು ತಡವಾಗಿಯೇ ಬಂದು ತಾಗುವುದು.
ಚಾಂದಬೀ ಬಲದೇವನ ಮನೆಯಲ್ಲಿನ ಹೆಣ್ಣಾಳು ಗಜ ಲಿಂಗವ್ವಳಲ್ಲಿ ತಾಯಿ ಪ್ರೀತಿ ಪಡೆಯುವಳು ಅಲ್ಲದೆ ಮನೆಯ ನೇರಕ್ಕೆ ಕಾಣುವ ಸಂಪಿಗೆಯ ಮರದೊಂದಿಗೆ ಅನುಭೂತಿಯನ್ನು ಸಾಧಿಸಿ ಇಡೀ ಊರಿನ ಹುಡುಗಿಯರನ್ನು, ಹೆಂಗಸರನ್ನು ತನ್ನ ಇರುವಿಕೆಯಿಂದ ಆಕರ್ಷಿಸುವಳು ಅವರುಗಳ ಕಲ್ಪನೆಯಲ್ಲಿ, ಕನಸಲ್ಲಿ,ವಾಸ್ತವದಲ್ಲಿ. ನಾಯಕಿಯಾಗಿ ಹೊರಹೊಮ್ಮುವಳು. ಬಡವರ - ದಲಿತರ ನೋವಿಗೆ ಕಿವಿಗಳಾಗಿ ನೋವು-ನಲಿವುಗಳನ್ನು ಆಲಿಸುವಳು, ಸಹಾನುಭೂತಿ ಸಲಹೆಗಳನ್ನು ಹೇಳುವಳು ಸಣ್ಣ ತಪ್ಪುಗಳನ್ನು ತಿದ್ದುತ್ತಾ ನಂಬುಗೆಯ ಬೀಜಗಳನ್ನು ಬಿತ್ತಿ ವಿಶ್ವಾಸದ ಮರವನ್ನಾಗಿ ಮಾಡಿದಳು ಅಲ್ಲದೆ ಅಳುವ ಮಕ್ಕಳಿಗೆ ಬಟ್ಟಲ ಅಂಬಲಿ ನೀಡಿ ತಾಯಿ ಅಭಿಧಾನ ಪಡೆದುಕೊಂಡು ಜನರಿಂದ "ಸರಕಾರ "ಎಂದು ಕರೆಸಿಕೊಂಡಳು ಬಾರ್ ಗಳ ಸಂತೆಯಾದ ವಾಡೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆಯಲು ಮುಂದಾಗಿ ಅನಾಥ ಮಕ್ಕಳಿಗೆ 'ಅವ್ವ' ಆದಳು
ಹಾಳು ಹರಟೆ ಮತ್ತು ವ್ಯಸನದ ತಂಗುದಾಣವಾದ ವಾಡೆಯಲ್ಲಿ ತನ್ನ ಸವತಿಯಾಗಿದ್ದ ಕಾವೇರಿಯ ಹೆಸರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದ ಚಾಂದಬೀ ಈ ಮೂಲಕ ಶ್ರೀ ಸಬಲೀಕರಣಕ್ಕೆ ಮುನ್ನುಡಿ ಬರೆಯುವುವಳು ಬೆಳಗಾವಿಯಿಂದ ಡಿಸಿ ಹಾಗೂ ಅನುಭವಿ ಶಿಕ್ಷಕಿಯಾದ ಕುಸುಮ ವಾಡೆಕರ್ ಅವರುಗಳನ್ನು ಕರೆಯಿಸಿ ಶಾಲೆ ಆರಂಭಿಸುವ ಬಗ್ಗೆ ಸಿದ್ಧತೆ ಮಾಡಿಕೊಂಡು ಉದ್ಘಾಟನೆಗಾಗಿ ಮನೋಳ್ಳಿಯ ಅಯ್ಯಾ ಸರಕಾರನ ನ್ನು ಕರೆತರಲು ಬಲದೇವ ನಾಯಕರನ್ನು ಕರೆ ಕಳಿಸುವಳು ಆದರೆ ಅಯ್ಯಾ ಸರಕಾರ ಚಾಂದಬಿ ಹಾಗೂ ಬಲದೇವ ನಾಯಕರ ಏಳಿಗೆಯನ್ನು ಸಹಿಸದೆ ಬಲದೇವ ನು ಮಗಳ ಗಂಡ ಅಳಿಯನಾಗಿದ್ದು ತನ್ನ ಎರಡನೆಯ ಮಗಳು ಸೀತಾ ಲಕ್ಷ್ಮಿಯನ್ನು ಮದುವೆಗೆ ಒಪ್ಪದೇ ಪಾತರದವಳನ್ನು ಸರಕಾರ ಮಾಡಿದನೆಂಬ ದ್ವೇಷ ಸಾಧಿಸಲು ಊಟದಲ್ಲಿ ವಿಷ ಹಾಕುವನು.
ಈ ಮಧ್ಯೆ ಚಾಂದಬಿ ಸವತಿಯ ಮಗನಾಗಿದ್ದ ಕೃಷ್ಣನನ್ನು ಅವನು ಕಲಿಯುವ ಆಶ್ರಮಕ್ಕೆನೇ ಹೋಗಿ ಅವನಿಗೆ ತಾಯಿಯ ಕೈತುತ್ತನ್ನು ನೀಡಿ ಬರುವಳು ಕೃಷ್ಣ ಪ್ರಖ್ಯಾತ ಆಯುರ್ವೇದ ಪಂಡಿತನಾಗಿ ದುಷ್ಟಕೂಟದ ಸಂಗಮವಾಗಿದ್ದ ತಾತನನ್ನು ಸೇರಿದೆ ಅವರಿಂದ ಪಾರಾಗಿ ಶಿವಾಪುರವನ್ನು ಸೇರಿ ತಂದೆ ತಾಯಿಯರೊಂದಿಗೆ ಕೂಡಿಕೊಂಡು ಸಮುದಾಯದ ಒಳಿತಿಗಾಗಿ ತನ್ನನ್ನು ತಾನೇ ಮುಡುಪಾಗಿಟ್ಟು ಕೊಳ್ಳುವನು. ಮುಂದಿನ ಜನಾಂಗದ ನಾಯಕನಾಗುವ ಸಿದ್ಧತೆಯ ಲಕ್ಷಣಗಳು ಅವನಲ್ಲಿ ಕಂಡುಬರುವವು
ಅಯ್ಯಾ ಸರಕಾರನ ಎರಡನೆಯ ಮಗಳಾದ ಸೀತಾ ಲಕ್ಷ್ಮಿಯನ್ನು ಮರಾಠಿ ಚಾಂದಗಡದ ಜಗನ್ನಾಥ ಸರಕಾರ ಅವರ ಯುವರಾಜನಿಗೆ ಮದುವೆ ಮಾಡಿಕೊಡುವ ಸಂಬಂಧದ ಮಾತುಕತೆಗೆ ಹೋದ ಬಂಗಾರಮ್ಮ ಅಲ್ಲಿ ಯುವರಾಜನ "ರಾಣಿ ವಿಲಾಸದಲ್ಲಿ" ಅವನಿಗೆ ಮೈ ಒಪ್ಪಿಸಿ ಸೀತಾಲಕ್ಷ್ಮಿ ಮದುವೆಗೆ ಒಪ್ಪಿಗೆ ಪಡೆದುಕೊಂಡು ಬರುವಳು, ಇದೇ ಸಮಯದಲ್ಲಿಯೇ ಶಿವಾಪುರಕ್ಕೆ ಡಿಸಿ ಶ್ರೀ ಘಾಟಿ ಹಾಗೂ ಕುಸುಮ ವಾಡೆಕರ್ ಅವರು ಬಂದು ವಾಡೆಯನ್ನೆಲ್ಲಾ ಪರಿಶೀಲಿಸಿ ವಾಡೆಯಲ್ಲಿಯೇ ಶಾಲೆ ಆರಂಭಿಸುವ ಬಗ್ಗೆ ಚರ್ಚಿಸಿ ಅದಕ್ಕಿರುವ ಬೀಗದ ಕೈಯನ್ನು ಬಂಗಾರಮ್ಮನಿಂದ ಚಾಂದಬೀ ಸರಕಾರ ಅವರಿಗೆ ಕೊಡಿಸುತ್ತಾರೆ. ಈ ಸಂದರ್ಭದಲ್ಲಿ ಊರಿನಲ್ಲಿ ನೊಂದ ದೌರ್ಜನ್ಯಕ್ಕೆ ಒಳಗಾದ ಬಡವರು , ಜೋಗತಿಯರು ದೇವಸ್ಥಾನದ ಪೂಜಾರಿಗಳು ಡಿಸಿ ಅವರ ಮುಂದೆ ತಮ್ಮ ಅಹವಾಲುಗಳನ್ನು ಹೇಳುತ್ತಾ ಊರಲ್ಲಿ ನಡೆಯುವ ಎಲ್ಲ ಅನ್ಯಾಯ ಅತ್ಯಾಚಾರಗಳು ಹೆಚ್ಚಾಗಿರುವ ಬಗ್ಗೆ ಕಲ್ಕಿ ದಳಗಳ ಹಿಂಸೆಯ ಬಗ್ಗೆ ಹೇಳಿಕೆಯನ್ನು ನೀಡುವರು ಈ ಹೇಳಿಕೆಗಳು ಸುಳ್ಳೆಂದು ಅಯ್ಯಾ ಸರಕಾರ ನ ಕಾರಬಾರಿ ಆದ ಬಂಗಾರಮ್ಮ ಹೇಳುತ್ತಾ ಅಯ್ಯಾ ಸರಕಾರ ಹಾಗೂ ತಾವು ನಡೆಸುವ ಅನ್ಯಾಯಗಳನ್ನು ಮುಚ್ಚಿಡಲು ಪ್ರಯತ್ನಿಸುವಳು. ಅಯ್ಯಾ ಸರಕಾರ ನ ಚಾಕರಿ ಮಾಡುವ ಭರದಲ್ಲಿ ಬಂಗಾರಮ್ಮ ನಿಗೆ ತನ್ನ ಮಗಳ ಬದುಕಿನ ಬಗ್ಗೆ ಕಾಳಜಿ ಮಾಡುವುದು ಸಾಧ್ಯವಾಗುವುದಿಲ್ಲ ತನ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ನೀಲಕಂಟನೆ ತನ್ನ ಮಗಳೊಂದಿಗೆ ಮದುವೆಯಾಗಿರುವ ವಿಷಯ ತಿಳಿದು ಆತ್ಮಹತ್ಯೆಗೆ ಶರಣಾಗುವಳು.
ಶಿವಾಪುರದ ಒಳಿತಿಗಾಗಿ ಕಾವೇರಿಯ ಹೆಸರಿನಲ್ಲಿ ಹೆಣ್ಣು ಮಕ್ಕಳ ಶಾಲೆಯ ಉದ್ಘಾಟನೆಗಾಗಿ ಅಯ್ಯಾ ಸರಕಾರ ಅವರನ್ನು ಕರೆಯಲು ಹೋದ ನಾಯಕನಿಗೆ ಊಟದಲ್ಲಿ ವಿಷ ಹಾಕಿದ್ದು ಬಲವನಿಗೆ ತಿಳಿಯದೆ ಹೇಗುವುದು. ಊರಿಗೆ ಬಂದಾದ ನಂತರ ಮಗ ಕೃಷ್ಣ ತಂದೆಯನ್ನು ಆಯುರ್ವೇದ ಚಿಕಿತ್ಸೆಯ ಮೂಲಕ ವಿಷವನ್ನು ಹೊರ ಹಾಕಿಸಿ ತಂದೆಯ ಆರೋಗ್ಯ ಕಾಪಾಡುವ ಸಲುವಾಗಿ ತಾಯಿಗೂ ಗೊತ್ತಾಗದಂತೆ ಸ್ಥಳೀಯ ಶಾಸಕರಾದ ಶಂಕರೇಗೌಡ ಅವರ ಮನೆಗೆ ಗಜನಿಂಗವ್ವ ನನ್ನು ಕರೆದುಕೊಂಡು ಬಂದು ಆರೈಕೆ ಮಾಡುವನು. ಶಾಲಾ ಉದ್ಘಾಟನೆ ಸಾಂಗವಾಗಿ ನೆರವೇರಿಸುವ ಸಲುವಾಗಿ ಶಂಕರೇಗೌಡ ಅವರನ್ನು ಕಳುಹಿಸಿ ತಾಯಿಗೆ ಸಮಾಧಾನ ವಾಗಿರುವಂತೆ ಹೇಳಿ ಎಂದು ವಿನಂತಿಸುವನು.ಶಾಲಾ ಉದ್ಘಾಟನೆಗೆ ಅಯ್ಯಾ ಸರಕಾರನ ಆ ಭಾಗದ ಪ್ರಭಾವಿ ಸ್ವಾಮೀಜಿಗಳು ಆಗಮಿಸುವರು ಬಲದೇವ ನಾಯಕ ಇಲ್ಲದೆ ಶಾಲೆ ಹೇಗೆ ಉದ್ಘಾಟನೆ ಮಾಡುವುದು ಎಂಬದು ಚಾಂದಬಿ ಅವರ ಪ್ರಶ್ನೆಗೆ ಶಾಸಕರು ಅವರು ನಂತರ ಬಂದು ಸೇರುವರು ಎಂಬ ಮಾತಿಗೆ ಒಪ್ಪಿ ಶಾಲೆಯ ಉದ್ಘಾಟನೆಯನ್ನು ಎಲ್ಲರೂ ಸೇರಿ ನೆರವೇರಿಸುವರು. ಬೆಳಗಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ಡಿಸಿ ಅವರು ತುರ್ತು ಕಾರ್ಯದ ನಿಮಿತ್ತ ತೆರಳುವರು ಸಂಜೆ ಶಾಲೆಯ ಏಳಿಗೆಗಾಗಿ ಶ್ರಮಿಸಿದ ಕುಸುಮ ವಾಡೇಕರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದ ವೇದಿಕೆ ಮೇಲೆ ಜೋಗತಿಯರು ಅಯ್ಯಾ ಸರಕಾರ ನ ಎಲ್ಲ ದುಷ್ಕೃತ್ಯಗಳನ್ನು ಮುಖವಾಡಗಳನ್ನು ಹಾಡುಗಳ ಮೂಲಕ ಜಗಜಾಹಿರ್ ಮಾಡುತ್ತಾರೆ. ಸನ್ಮಾನ ನಡೆಯುವ ಸಂದರ್ಭದಲ್ಲಿ ಅಯ್ಯಾ ಸರಕಾರ ನ ಚೇಲಾಗಳು ಬಂದು ಚಾಂದಬೀ ಸರಕಾರ ಅವರನ್ನು ಅವಮಾನಿಸಿ ಅಯ್ಯಾನ ಅಣತಿಯಂತೆ ಅವರ ಸೀರೆಗೆ ಕೈ ಹಾಕುತ್ತಾರೆ , ಇಲ್ಲಿಯವರೆವಿಗೂ ಸುಮ್ಮನಿದ್ದು ಸಮುದಾಯದ ಜನ ರೊಚ್ಚಿಗೆಳುವರು ಇದೇ ಸಮಯಕ್ಕೆ ಪ್ರಕೃತಿಯಲ್ಲಿಯೂ ಕೂಡಾ ಅಲ್ಲೋಲಕಲ್ಲೋಲ ವಾಗುವುದು ಗುಡುಗು - ಸಿಡಿಲುಗಳ ಅರ್ಭಟವೂ ಹೆಚ್ಚಾಗುವುದು ಜನ ಸಮುದಾಯವು ಚಾಂದಬೀ ಹಾಗೂ ಕುಸುಮ ವಾಡೆಕರ್ ಅವರನ್ನು ರಕ್ಷಿಸುವರು ಇದು ಸಿನಿಮೀಯ ರೀತಿಯಲ್ಲಿ ನಡೆಯುವುದು ಅಯ್ಯಾ ಸರಕಾರ ನ ಅಂತ್ಯ ಆಗುವುದು.
ಹೀಗೆ ಡಾ.ಚಂದ್ರಶೇಖರ ಕಂಬಾರ ಅವರು "ಚಾಂದಬೀ ಸರಕಾರ " ಕಾದಂಬರಿಯಲ್ಲಿ ಪಾರಿಜಾತ ಆಟದ ಕಲಾವಿದೆಯೊಬ್ಬಳ ಕಥೆಯನ್ನು ಮುಂದಿಟ್ಟುಕೊಂಡು ಹೊಸ ಸಮಾಜದ ಹಂಬಲ ಹಾಗೂ ಸಮಾನತೆಯ ಆಸೆಗಳನ್ನು ಜಾರಿಯಾಗಬೇಕೆಂಬ ಉತ್ಕಟತೆಯಿಂದ ಇದನ್ನು ರೂಪಿಸಿರುವುದು ಕಂಡುಬರುವುದು. ಜಾನಪದ ಕಥೆಗಳ ಮೂಲಕ ಆಧುನಿಕತೆಯ ಪೊಳ್ಳುತನದ ಮುಖವಾಡಗಳನ್ನು ಕಳಚುವ ಇವರು ಮಖ್ಯವಾಗಿ ದೇಸಿತನದತ್ತ ವಾಲಿಕೊಂಡೆ ಬರೆಯುತ್ತಾರೆ. ಚಾಂದಬೀ ಸರಕಾರದ ಇದರ ಕೇಂದ್ರ ಪ್ರಜ್ಞೆ ಭೂಮಿಯನ್ನು ಕಳೆದುಕೊಂಡವರಿಗೆ ಭೂಮಿಯನ್ನು ಕೊಡಿಸುವುದಾಗಿದೆ, ಒಳ್ಳೆಯತನಕ್ಕೆ ಇರುವ ಆತಂಕಗಳಿಗೆ ಕೆಲವು ವಿಘ್ನಗಳಿರುತ್ತವೆ ತದನಂತರ ಹೋಗುತ್ತದೆ ಎನ್ನುವುದಾಗಿದೆ, ಮಹಿಳೆಯರ ಸಬಲೀಕರಣದ ಕುರಿತಾಗಿ ಈ ಕಾದಂಬರಿ ಹೆಚ್ಚಾಗಿ ಮಾತನಾಡುವುದು, ಮಹಿಳೆಯರು ಅಕ್ಷರ ಕಲಿಯುವುದರ ಮೂಲಕ ಸಬಲರಾಗಬೇಕು ಎಂಬ ಸದಾಶಯ ಹೊಂದಿದೆ, ಸರ್ಕಾರಗಳ ಗುರಿ ಮತ್ತು ಉದ್ದೇಶ ಹಸಿದ ಹೊಟ್ಟೆಗೆ ಅನ್ನ ನೀಡಿ ದುಡಿವ ಕೈಗಳಿಗೆ ಕೆಲಸ ನೀಡುವುದು ಆದರೆ ಇಲ್ಲಿ ಅಯ್ಯಾ ಸರಕಾರ ಈ ವಿಷಯದಲ್ಲಿ ವಿಫಲವಾಗಿದೆ. ಈ ರೀತಿಯ ವಿಫಲತೆಯು ಸರ್ಕಾರಗಳು ಮಾಡಬಾರದೆನ್ನುವ ಎಚ್ಚರಿಕೆಯನ್ನು ಕೂಡಾ ಕಾದಂಬರಿಯ ಮೂಲಕ ಡಾ. ಚಂದ್ರಶೇಖರ್ ಕಂಬಾರ ಅವರು ರವಾನೆ ಮಾಡಿದ್ದಾರೆ.
ಪಾರಿಜಾತ ಆಟದ ನಟಿಯೊಬ್ಬಳು ಒಂದು "ಸರಕಾರ" ಆಗಬೇಕಾದಾಗ ಬಂದೊದಗುವ ಸಂಕಟಗಳು ಇಲ್ಲಿ ಸಶಕ್ತವಾಗಿ ಚಿತ್ರಿತವಾಗಿವೆ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳಹಂತದಲ್ಲಿರುವ ಮಹಿಳೆಯರು ಮೇಲುಸ್ತರಕ್ಕೆ ಬರುವಾಗ ಅವರು ಎದುರಿಸುವ ಅಗ್ನಿದಿವ್ಯವನ್ನು ಚಾಂದಬೀ ಮೂಲಕ ನುಡಿಸಿದ್ದಾರೆ .ಈ ಕಾದಂಬರಿಯ ಸತ್ವವನ್ನು ಹೆಚ್ಚಿಸಿದ ಜೋಗತಿಯರು , ಸಂಪಿಗೆಯ ಮರ, ಕೊರವಂಜಿಯರು, ಮಾಯಕಾರ್ತಿಯರು ಹೊಸ ಆಯಾಮ ನೀಡಿ ಸಂಕೇತವಾಗಿ ಮತ್ತೆ ಮತ್ತೇ ನೆನಪಾಗುವರು.
ಜೀವಪರ ನಿಲುವು ಮತ್ತು ಸಮಾನತೆಯ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವ ಕಂಬಾರ ಅವರು ಸರ್ಕಾರ ಎಂದರೆ ಮೆರೆಯುವುದು ಮತ್ತು ಉರಿಯುವುದಿಲ್ಲ ಜನರಿಗಾಗಿ ಬಾಗುವುದು ನುಡಿದಂತೆ ನಡೆಯುವುದು ಎಂಬುದನ್ನು ಈ ಕಾ ಮೂಲಕ ತಿಳಿಸಿದ್ದಾರೆ
ಡಾ.ಚಂದ್ರಶೇಖರ ಕಂಬಾರ ಅವರ ಬಹುತೇಕ ಕಾದಂಬರಿಗಳಲ್ಲಿ ಅಯ್ಯಾ ಸರ್ಕಾರ ನಂತಹ ಕ್ರಿಮಿಗಳು ಅಟ್ಟಹಾಸ ಗೈಯುತ್ತಲೆ ಇರುತ್ತವೆ ಇಂತಹ ದುಷ್ಟ ಕೂಟಗಳನ್ನು ಸದೆಬಡಿಯಲು ಸಮುದಾಯದ ದಿಂದಲೆ ಒಂದು ಪಾತ್ರ ಸಿದ್ದವಾಗುವುದು ಇಲ್ಲಿಯು ಕೂಡಾ ಚಾಂದಬೀ ಹೈರಾಣಾಗಿ ಸಮಾಜದ ಆತಂಕಗಳನ್ನು ದೂರ ಮಾಡುವಳು ಇಂತಹ ಪಾತ್ರಗಳು ಆಶಾಕಿರಣವಾಗಿ ಕಾಣುವವು ಇದರ ಅರ್ಥ ಒಳ್ಳೆತನಕ್ಕೆ ಬೆಲೆ ನಿಶ್ಚಿತ ಎಂದು ಗೊತ್ತಾಗುವುದು ಇಲ್ಲಿಯು ಮನೋಳ್ಳಿಯ ಸರಕಾರನನ್ನು ಚಾಂದಬೀ ನೇರವಾಗಿ ಶಿಕ್ಷಿಸುವುದಿಲ್ಲ ಪ್ರಕೃತಿಯೇ ಅವನನ್ನು ಇಲ್ಲವಾಗಿಸುವುದು. ದುಷ್ಟಕೂಟಕ್ಕೆ ಕೊನೆ ಹಾಡಲು ಮನುಷ್ಯ ಶಕ್ತಿಯ ಜೊತೆಗೆ ಪ್ರಕೃತಿಯೂ ಕೈ ಜೋಡಿಸಿದಾಗ ಅದು ಸಂಪೂರ್ಣ ಯಶಸ್ವಿಯಾಗುವುದು ಎಂಬುದು ಜಾನಪದರ ನಂಬಿಕೆ ಇಂತಹ ನಂಬಿಕೆಯಲ್ಲಿ ಬಾಳಿಬದುಕಿದ ಕಂಬಾರ ಅವರಿಗೆ ಈ ರೀತಿಯ ಕಥೆಗಳನ್ನು ಬರೆಯುವುದು, ಹೇಳುವುದು ಮತ್ತು ಹಾಡುವುದರಲ್ಲಿ ತುಂಬಾ ಆಸಕ್ತಿ.
ಜಾನಪದ ಕಥೆಗಳು, ಹಾಡುಗಳು, ಅಲ್ಲಿನ ಸಂಗತಿಗಳು ಹಾಗೂ ಶಿವಪುರ ಅವರ ಸೃಜನಶೀಲ ಬರಹಕ್ಕೆ ಸ್ಪೂರ್ತಿಯಾಗುತ್ತ ಸಾಗಿವೆ ಇವುಗಳನ್ನು ಕಾಲಕ್ಕೆ ತಕ್ಕ ಹಾಗೆ ಹೊಸರೂಪದಲ್ಲಿ ಕಟ್ಟುವ ಕಂಬಾರ ಅವರಿಗೆ ಶರಣು ಹೇಳಬೇಕಷ್ಟೆ. ಕಂಬಾರ ಅವರ ಕನಸುಗಳು ಲೆಕ್ಕಕ್ಕೆ ದಕ್ಕುವುದು ತುಸು ಕಷ್ಟ ಎಂಥಹ ಸಂದರ್ಭದಲ್ಲಿಯೂ ಕನಸು ಕಾಣುವುದನ್ನು ಹಾಗೂ ಆಶಾವಾದಿ ತನವನ್ನು ಬಿಡಬಾರದು ಎಂಬುದಕ್ಕೆ " ಚಾಂದಬೀ ಸರಕಾರ " ಕಾದಂಬರಿಯು ಸಾಕ್ಷಿಯಾಗಿದೆ. ಎಲ್ಲವನ್ನು ದಿಟ್ಟತನದಿಂದ ಎದುರಿಸಬೇಕು ಎನ್ನುವುದಕ್ಕೆ
ಬರಗಾಲ ಬಂತೆಂದು ಬರವೇನೋ ಹಾಡಿಗೆ
ಮನಸಿಗೆ ನಿನ್ನ ಕನಸಿಗೆ
ಹರಿಯುವ ಹಾಡನ್ನು ಕತ್ತಲ್ಲಿ ಅಮುಕದೆ
ಬಿಡಬೇಕು ತಮ್ಮ ಬಯಲಿಗೆ
ಆಕಾಶದಲ್ಲಿ ಕೊನೆ ನಕ್ಷತ್ರ ಇರುವ ತನಕ
ಕನಸು ಇರುತಾವಂತ ಹಾಡಬೇಕೋ -
ಎಂಬ ಅವರ ಈ ಕವಿತೆಯ ಸಾಲಗಳು ಸಾಕ್ಷಿಯಾಗಿದೆ. ಚಾಂದಬಿ ಸರಕಾರ ಕಾದಂಬರಿ ಓದುವುದೇ ಒಂದು ಸೊಗಸು. ಬದುಕನ್ನು ಅರ್ಥಮಾಡಿಕೊಳ್ಳಲು ಚಾಂದಬೀ ಸರ್ಕಾರ ಕಾದಂಬರಿ ಓದುವುದು ಅತಿ ಜರೂರಿ ಎಂದೆ ಕಂಡುಬರುವುದು.
ಚಂದ್ರಶೇಖರ ಕಂಬಾರ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಚಾಂದಬೀ ಸರಕಾರ ಕೃತಿ ಪರಿಚಯ ಇಲ್ಲಿದೆ..
ಮನು ಪತ್ತಾರ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.