ಓದುಗರನ್ನು ಬೆಚ್ಚಿ ಬೀಳಿಸುವ ಈ ಕೃತಿ ಮಂಜುನಾಥರ ಸಾಹಸಗಾಥೆ


"ಓದುಗರನ್ನು ಬೆಚ್ಚಿ ಬೀಳಿಸುವ ಈ ಕೃತಿ ಮಂಜುನಾಥರ ಸಾಹಸಗಾಥೆ. ಇದು ಇತರ ಭಾಷೆಗಳಿಗೂ ಅನುವಾದಗೊಂಡರೆ ಯುದ್ಧ ಭೂಮಿಯಲ್ಲಿ ಈ ತೆರನಾದ ವೃತ್ತಿ ಕಟ್ಟಿಕೊಂಡ ಅನೇಕರ ವೃತ್ತಿಜೀವನದ ಸಾಹಸಗಳು ಸಾಮಾನ್ಯರಿಗೆ ದೊರಕಲು ಸಾಧ್ಯವೆಂದೇ ನನ್ನ ಅನಿಸಿಕೆ," ಎನ್ನುತ್ತಾರೆ ಕೆ.ಎನ್.ಲಾವಣ್ಯ ಪ್ರಭಾ. ಅವರು ಮಂಜುನಾಥ್ ಕುಣಿಗಲ್ ಅವರ ‘ಕುಣಿಗಲ್ to ಕಂದಹಾರ್’ ಕೃತಿ ಕುರಿತು ಬರೆದ ವಿಮರ್ಶೆ.

"ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಆ ಯುದ್ಧಗಳಲ್ಲಿ ಭಾಗಿಯಾಗಿದ್ದ ನ್ಯಾಟೋ ಸದಸ್ಯ ರಾಷ್ಟ್ರಗಳು ಮತ್ತು ಅಮೆರಿಕೆಯ ಸೈನಿಕರಿಗೆ ಅಲ್ಲಿನ ಯುದ್ಧಭೂಮಿಗಳಲ್ಲಿ ಎಲ್ಲಾ ತೆರನಾದ ಸೌಕರ್ಯ ಒದಗಿಸುವ ಅತೀವ ಕುತೂಹಲಕಾರಿ ಹಾಗೂ ಅಷ್ಟೇ ಅಪಾಯಕಾರಿ ಕೆಲಸ ನಾನು ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯದು" -- ಹೀಗೆ ತಮ್ಮ ಪುಸ್ತಕದ ಆರಂಭದಲ್ಲಿ ಬರೆದಿರುವ ಲೇಖಕರು ಅಮೆರಿಕಾದ ಸೈನಿಕರಿಗೆ ವಸತಿ ಕ್ಯಾಂಪ್ , ಡಿಫ್ಯಾಕ್ ( ಆಹಾರ ಉಗ್ರಾಣ) , ಕೆಲ ಏರ್ ಬೇಸ್ ಗಳನ್ನು ನಿರ್ಮಾಣ ಮಾಡುವ ಕಾಂಟ್ರಾಕ್ಟ್ ಪಡೆದಿದ್ದ ಅವರ ಕಂಪನಿಯಿಂದ ದುಬೈನಿಂದ ಆಫ್ಘಾನಿಸ್ತಾನದ ಕಂದಹಾರ್ ಏರ್ ಬೇಸ್ ನ ಪ್ರಾಜೆಕ್ಟ್ ಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಅಲ್ಲಿಯ ಕೆಲಸದ ಜೊತೆಗೆ ಕಾಬೂಲ್ ಮೆಸಿಡೋನಿಯಾ ಇರಾಕ್ ಮೊದಲಾದ ಅಪಾಯಕಾರಿ ಯುದ್ಧಭೂಮಿಗಳಲ್ಲಿ ಮಿಲಿಟರಿಯವರ ಜೊತೆಗಿದ್ದು ಕೆಲಸ ಮಾಡಿ ಪಡೆದ ರೋಚಕ ಅನುಭವಗಳ ಈ ಕೃತಿಯ ಮಂಜುನಾಥ್ ಕುಣಿಗಲ್ ಅವರ ಸಾಹಸ ವೀರ ಕನ್ನಡಿಗನೊಬ್ಬನ ಕೆಚ್ಚು ಧೈರ್ಯ ಸ್ಥೈರ್ಯ ಯಾವುದೇ ಸೈನಿಕನಿಗೆ ಕಡಿಮೆಯಿಲ್ಲ ಎನಿಸುತ್ತದೆ. ದಿನದ 24 ಗಂಟೆಯೂ ಬಂದೂಕು ಶಸ್ರ್ತಧಾರಿಗಳಾಗಿಯೇ ಇರುತ್ತಿದ್ದ ಯೋಧರ ನಡುವೆ ನಿರಾಯುಧರಾಗಿ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮುಗಿಸಿ ಸುರಕ್ಷಿತವಾಗಿ ಬರುವ ಲೇಖಕರು ನನಗಂತೂ ನಿಜವಾದ "ವೀರ ಕನ್ನಡಿಗ" ಎಂದೇ ಅನಿಸುತ್ತದೆ. ಓದುಗರನ್ನು ಬೆಚ್ಚಿ ಬೀಳಿಸುವ ಈ ಕೃತಿ ಮಂಜುನಾಥರ ಸಾಹಸಗಾಥೆ. ಇದು ಇತರ ಭಾಷೆಗಳಿಗೂ ಅನುವಾದಗೊಂಡರೆ ಯುದ್ಧ ಭೂಮಿಯಲ್ಲಿ ಈ ತೆರನಾದ ವೃತ್ತಿ ಕಟ್ಟಿಕೊಂಡ ಅನೇಕರ ವೃತ್ತಿಜೀವನದ ಸಾಹಸಗಳು ಸಾಮಾನ್ಯರಿಗೆ ದೊರಕಲು ಸಾಧ್ಯವೆಂದೇ ನನ್ನ ಅನಿಸಿಕೆ.

ಲೇಖಕರು ಆಫ್ಘಾನಿಸ್ತಾನದ ಕಂದಹಾರ್ ಏರ್ ಬೇಸ್ ಗೆ ಕಾಲಿಟ್ಟ ತಕ್ಷಣವೇ "ಎಷ್ಟು ಸುರಕ್ಷಿತವಿಲ್ಲಿ? " ಎಂಬ ಪ್ರಶ್ನೆಗೆ ಏರ್ ಬೇಸ್ ನ ಮುಖ್ಯದ್ವಾರದ ದಾಳಿಯಿಂದ ಹಿಡಿದು ದಿನನಿತ್ಯ ಬಂದು ಮೇಲೆರಗುವ ರಾಕೆಟ್ ದಾಳಿಯವರೆಗೆ ಆಗಾಗ ಸಣ್ಣ ಪುಟ್ಟ ಶೆಲ್ ದಾಳಿ ರಾಕೆಟ್ ದಾಳಿ ಎದುರಿಸಬೇಕಾಗುವುದು ಮತ್ತು ಅಂತಹ ಹೊತ್ತಿನಲ್ಲಿ ಎಲ್ಲರೂ ಬಂಕರಿನೊಳಗೆ ಓಡಿ ಹೋಗಿ ಅವಿತುಕೊಳ್ಳುವುದು , ನೆಲದ ಮೇಲೆ ಬೋರಲಾಗಿ ಮಲಗಿ ತಲೆಯ ಮೇಲೆ ಎರಡೂ ಹಸ್ತಗಳನ್ನಿಟ್ಟುಕೊಂಡು ತಮ್ಮನ್ನು ತಾವು ಕಾಪಾಡಿಕೊಳ್ಳುವ ತಕ್ಷಣದ ಪ್ರತಿಕ್ರಿಯೆಗಳು. ಇವನ್ನೆಲ್ಲಾ ಅಲ್ಲಿಗೆ ಹೋಗಿ ಮೊದಲ ದಿನದಿಂದಲೇ ಸ್ವಲ್ಪ ಕಣ್ಣಾರೆ ಕಂಡು ಅನುಭವಿಸಿದ್ದನ್ನು ಬರೆಯುವಾಗ ಓದುಗರೂ ಕುತೂಹಲ ಭಯದಿಂದ ರೋಚಕ ಅನುಭವಗಳನ್ನು ಪಡೆಯುವುದಂತೂ ನಿಜ.

ಇಂತಹ ಅಪಾಯಕಾರಿ ಮಿಲಿಟರಿ ಯುದ್ಧ ಕ್ಯಾಂಪ್ ಗಳಲ್ಲಿ ಆಹಾರ ಉಗ್ರಾಣ, ಅಡುಗೆ ಮನೆ ಮತ್ತು ಡೈನಿಂಗ್ ಹಾಲ್ , ಲಾಂಡ್ರಿ , ಮೊದಲಾದೆಡೆ ತಮ್ಮ ಸಂಸಾರದ ನಿರ್ವಹಣೆಗಾಗಿ ಮಂಗಳೂರು ಉಡುಪಿಯ ಕನ್ನಡಿಗರು ಮತ್ತು ಅನೇಕ ನೇಪಾಳಿಗಳು ,ರಾಜಸ್ಥಾನಿಯರು , ಪಂಜಾಬಿಗಳು , ಕೇರಳ, ಶ್ರೀಲಂಕಾದವರೂ ಸಹಾ ಲೇಖಕರು ಭೇಟಿಯಾಗುವುದೂ ಅಚ್ಚರಿ ಮತ್ತು ಆನಂದದ ಸಂಗತಿ. ಮದ್ಯದ ನಿರ್ಬಂಧನೆ ಇಲ್ಲಿ ಶಿಸ್ತಿನಿಂದ ಪಾಲಿಸಲಾಗುವುದು ಮೆಚ್ಚಲೇಬೇಕಾದ ವಿಚಾರ.

ಕಂದಹಾರ್ ಏರ್ ಬೇಸ್ ಕೇವಲ 25 ಚದರ ಕಿ.ಮೀ. ವಾಪ್ತಿಯಲ್ಲಿ ಪ್ರಪಂಚದ 54 ಕ್ಕೂ ಹೆಚ್ಚು ರಾಷ್ಟ್ರದ 40.000 ಮಂದಿ ಬದುಕುವುದನ್ನು ಲೇಖಕರು "ಗ್ಲೋಬಲ್ ವಿಲೇಜ್ " ಎನ್ನುತ್ತಾರೆ. ಇಲ್ಲಿನ ಮನೆಗಳು, ಆಸ್ಪತ್ರೆ, ರೆಸ್ಟೋರೆಂಟ್, ಕಾಫಿಶಾಪ್ಸ್, ಪಿಜ್ಜಾ ಬರ್ಗರ್ ಶಾಪ್, ಪೋಸ್ಟ್ ಆಫೀಸ್ , ಅಂಗಡಿಗಳು, ಪೊಲೀಸ್ , ಜೈಲು , ಲಾಂಡ್ರಿ ಜಿಮ್ , ಕ್ರೀಡಾಂಗಣ ವಿಮಾನ ನಿಲ್ದಾಣ, ರಸ್ತೆ ಸಂಪರ್ಕ , ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ...ಅಬ್ಬಾ ಜರ್ಮನ್ ಮೂಲದ ಕಂಪನಿ ಕ್ಯಾಟರಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು ಊಟದಮನೆ "ಡಿಫ್ಯಾಕ್" ನಲ್ಲಿ ಸಾವಿರಾರು ಮಂದಿ ಒಮ್ಮೆಗೆ ಕೂರುವ ಡೈನಿಂಗ್ ಹಾಲ್ ನ ಹಲವಾರು ದೇಶಗಳ ವೈವಿಧ್ಯಮಯ ಖಾದ್ಯಗಳನ್ನು ವಿವರಿಸುವಾಗ ಯಾವ ತಿನಿಸಲ್ಲಿ ನಮಗೆ ವರ್ಜ್ಯವಾದ ಮಾಂಸವಿದೆ ಎಂದು ಯಾರಿಂದಲೋ ತಿಳಿಯುವಷ್ಟರಲ್ಲಿ ನಾವದನ್ನು ಚಪ್ಪರಿಸಲಾಗುತ್ತಿತ್ತು ಎನ್ನುತ್ತಾ ಈ ಡಿಫ್ಯಾಕ್ ಬಗ್ಗೆಯೇ ಒಂದು ಪುಸ್ತಕ ಬರೆಯಬಹುದು ಎನ್ನುತ್ತಾರೆ. ಆಹಾರ ಸಾಮಗ್ರಿಗಳ ಉಗ್ರಾಣ ಮತ್ತು ಅಡುಗೆಮನೆಯ ಡಿಫ್ಯಾಕ್ ಮೇಲೆ ಸಾಮಾನ್ಯವಾಗಿ ಉಗ್ರರ ಧಾಳಿಯಾಗುತ್ತಿತ್ತಂತೆ. ಸೈನಿಕರನ್ನು ಗಟ್ಟಿಮುಟ್ಟಾಗಿ ಇಡಬಲ್ಲ ಈ ವ್ಯವಸ್ಥೆಯನ್ನು ಉಡಾಯಿಸಿಬಿಟ್ಟರೆ ಮಿಲಿಟರಿ ಪಡೆಯ ಜಂಘಾಬಲವೇ ಉಡುಗಿಹೋಗುತ್ತದೆ ಎಂಬ ಜಾಣತನ ಉಗ್ರರದ್ದು.

ಕಂದಹಾರ್ ಏರ್ ಬೇಸಿನ ಯೋಧರೂ ಹೋಗಲು ಹೆದರುವ ಪಾಕಿಸ್ತಾನದ ಗಡಿಯ ಅತಿ ಅಪಾಯಕಾರಿ ಪ್ರಾಂತ್ಯ " ಕ್ಯಾಂಪ್ ಡ್ವಯರ್" ಗೆ ಹೋಗುವ ಹಾದಿಯಲ್ಲೇ ಬಾಂಬ್ ದಾಳಿ ಎದುರಿಸಿಕೊಂಡು ಮಿಲಿಟರಿ ಸುರಕ್ಷತೆಯಿಲ್ಲದ ತೆರೆದ ಬಯಲು ಪ್ರದೇಶದಲ್ಲಿ ಸೈನಿಕರಿಗೆ ಟೆಂಟ್ ಜೋಡಿಸಿ ಅಡುಗೆ ಮನೆ , ಲಾಂಡ್ರಿ , ವಿದ್ಯುತ್ ಮತ್ತು ನೀರಿನ ಸಂಪರ್ಕ ಮೊದಲಾದ ವ್ಯವಸ್ಥೆಯನ್ನು ಹೆದರಿಕೆಯ ನಡುವೆಯೇ ಧೈರ್ಯವನ್ನು ತಾಳುತ್ತಾ ಕೆಲಸ ಮುಗಿಸಿ ವಾಪಸ್ ಬರುವ ಈ ಅಧ್ಯಾಯವು ಅವರ ಜೀವನದ ಗೆಲುವು ಎನಿಸಿತು. ಇಂತಹುದೇ ಸಾಹಸ ಅಥವಾ ಇದಕ್ಕಿಂತ ಕಷ್ಟಕರ 99 ದಿನಗಳನ್ನು ಜಗತ್ತಿನ ಅತೀ ಶಿಸ್ತು ಮತ್ತು ಶ್ರೇಷ್ಠ ಅಮೆರಿಕಾದ ಮರೀನ್ಸ್ ಮಿಲಿಟರಿ ಸೈನ್ಯದ " ಕ್ಯಾಂಪ್ ಲೆದರ್ನೆಕ್ " ಕ್ಯಾಂಪ್ ಬ್ಯಾಷನ್" ಎಂಬ ಯುದ್ಧ ಶಸ್ತ್ರಾಭ್ಯಾಸ ನಗರಿಗಳಲ್ಲೂ ಸಹಾ ಎದುರಿಸುವ ಸಾಹಸಿ ಲೇಖಕರು ಈ ಕ್ಯಾಂಪ್ ನ ಮೇಲುಸ್ತುವಾರಿ ಗರೀಪ್ ನ ಕಳ್ಳತನ ಕಂಡುಹಿಡಿದು ಅಲ್ಲಿನ ಆಲ್ಬೇನಿಯನ್ ಕಾರ್ಮಿಕರ ವಿರೋಧ ಎದುರಿಸುತ್ತಾ ಅನೇಕ ಅಪಾಯಗಳಿಗೆ ತಮ್ಮನ್ನು ಒಡ್ಡಿಕೊಂಡೇ ಕೆಲಸ ಸಾಧಿಸುವುದು ತುಂಬಾ ಚಾಲೆಂಜಿಂಗ್ ಎನಿಸಿ ಓದುಗರು ಇವನ್ನು ಓದುವಾಗ ಉಸಿರು ಬಿಗಿಹಿಡಿದೇ ಇರಬೇಕಾಗುವುದಂತೂ ಸತ್ಯ.

ಒಮ್ಮೆ ಜನ ತುಂಬಿದ್ದ ಚಾರ್ಟರ್ ಚಾಪರ್ ಒಂದು ಇವರ ಕಣ್ಣೆದುರೇ ನೆಲಕ್ಕೆ ಬಿದ್ದು ಸುಟ್ಟು ಕರಕಲಾದದ್ದನ್ನು ಕಣ್ಣೆದುರೇ ಕಂಡೂ ಕಡಲಸ ಮುಂದುವರೆಸುವ ಲೇಖಕರು ನಮಗೆ ಸಿನಿಮಾ ಹೀರೋ ಅಲ್ಲ ನಿಜಜೀವನದ ಹೀರೋ ಆಗಿ ಕಾಣುವುದು ಸುಳ್ಳಲ್ಲ. ಇಂತಹ ಸ್ಥಳಗಳಲ್ಲೂ ಪ್ರೇಮ ಕಾಮ ಪ್ರಣಯದ ಸನ್ನಿವೇಶಗಳು ಅಚ್ಚರಿಯೆನಿಸಲಿಲ್ಲ. ಹೆಣ್ಣುಗಂಡುಗಳಿರುವೆಡೆ ಇವು ಸಹಜವೇ. ಎಷ್ಟೇ ಬಂದೋಬಸ್ತು ಇದ್ದರೂ ಪ್ರೇಮ ಮತ್ತು ಕಾಮವನ್ನು ಬಂಧಿಸಲಾದೀತೇ?

ಸಮುದ್ರದಿಂದ ಸುಮಾರು 5000 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ಶಿಮ್ಲಾ ನಗರದಂತೆ ಕಾಣುವ ಕಾಬೂಲ್ ನ ಪ್ರಕೃತಿ ವರ್ಣನೆ ಮನ ಸೆಳೆಯುತ್ತದೆ. ಬಾಬರ್ ಹಿಂದೂಗಳನ್ನು ಸಾಮೂಹಿಕವಾಗಿ ಹತ್ಯೆಗೈದ ಹಿಮಚ್ಛಾದಿತ ಕಾಬೂಲ್ ನ ಬೆಟ್ಟ " ಹಿಂದು ಕುಶ್ " ಬಗ್ಗೆ ಓದಿ ವಿಷಾದ ಆವರಿಸಿತು. ಅಲ್ಲಿ ಈಗಲೂ ಕೆಲ ಹಿಂದೂಗಳಿದ್ದು ಬುರ್ಖಾ ಧರಿಸಿ ಅಲ್ಲಿನವರ ರೀತಿ ರಿವಾಜಿನಲ್ಲೇ ಬದುಕಿರುವರಂತೆ. ಹೊಸ ಟೆಕ್ನಾಲಜಿಗಳನ್ನು ತಿಳಿದುಕೊಂಡಿರುವ ವಿದ್ಯಾವಂತರು ತಾಲಿಬಾನ್ ಗಳಲ್ಲಿರುವುದರಿಂದಲೇ ಮಿಲಿಟರಿಯವರಿಗೆ ಸವಾಲು ಹಾಕುತ್ತಿದ್ದರೇನೋ. ಈಗ ತಾಲಿಬಾನಿಗಳಿಲ್ಲದಿದ್ದರೂ ಅವರ ಹೆಸರಿನಲ್ಲಿ ಅಲ್ಲಿಯ ಕೆಲವರು ಲೇಖಕರಂತೆ ಅಲ್ಲಿ ಹೋಗಿ ಕೆಲಸ ಮಾಡುವ ಕೆಲಸಗಾರರನ್ನು ಅಪಹರಿಸಿ ಹಣ ಕೀಳುವ ದಂಧೆಯೂ ಅಲ್ಲಿದೆಯಂತೆ! ಗಂಡಸರು ಹೆಂಗಸರು ಭೇದವಿಲ್ಲದೆ ಪ್ರತಿಯೊಬ್ಬರೂ 'ಹಿಜಬ್ ' ನಲ್ಲಿ ಇರಬೇಕೆಂಬ ಅಲಿಖಿತ ಫರ್ನೀಮಾನಿಗೆ ತಲೆಬಾಗಿ ಈಗಲೂ ಅಲ್ಲಿಯ ಜನ ಪಾಲಿಸುವರಂತೆ. ನೀರಿಗೂ ಭಿಕ್ಷೆ ಕೇಳುವ ಪರಿಸ್ಥಿತಿಯೂ ಅಲ್ಲಿದೆ. ಧೂಳು ಕಸದ ರಾಶಿಯ ನಡುವಿರುವ ಮಾರ್ಕೆಟ್ಟಿನ ಅಂಗಡಿಗಳು ರಸ್ತೆಗಳು ಕಾಬೂಲ್ ನಂತಹ ಸುಂದರ ಸ್ಥಳವನ್ನು ಹಾಳುಗೆಡವಿದ ದೃಶ್ಯ ತೆರೆದಿಡುತ್ತಾರೆ. ಪ್ರಾಜೆಕ್ಟಿನ ಕೆಲಸಕ್ಕೆ ಕೆಲವು ಬಿಡಿ ಸರಕುಗಳನ್ನು ತರಲು ಹೋದ ಲೇಖಕರು ಅನೇಕ ಬಾರಿ ಇಂತಹ ಅಪಾಯಕಾರಿ ಸ್ಥಳಗಳಿಂದ ಕೆಲಸ ಮುಗಿಸಿ ಹೊರಹೋಗುವಾಗೆಲ್ಲಾ ಓದುಗರು ಒಂದು ದೀರ್ಘ ನಿಟ್ಟುಸಿರು ಬಿಡುವುದಂತೂ ನಿಜ.

ಆಸ್ಟ್ರೇಲಿಯಾದ ಯೋಧ " ಮಾರ್ಕ್ ಹಿಲ್ಮನ್" ನ ಬಾಲಿವುಡ್ ಮೋಹದಿಂದ ಇವರನ್ನು "ಆರ್ ಯು ಇಂಡಿಯನ್?" ಅಂತ ಗುರುತಿಸಿ ಆಪ್ತನೆನಿಸಿದ ಮಾರ್ಕ್ ಹಿಲ್ಮನ್ ಅಲ್ಲಿಯ ದೇಸೀ ಚಾನಲ್ ನಲ್ಲಿ ಬರುವ ಬಾಲಿವುಡ್ ಹಾಡಿಗೆ ಕತ್ತು ತಲೆ ಕುಣಿಸಿ ವಿಚಿತ್ರವಾಗಿ ನರ್ತಿಸುವಂತೆ ಕೈಕಾಲಾಡಿಸಿ ಕುಣಿದು ಮನತಣಿಯೇ ಆನಂದಿಸುತ್ತಿದ್ದ ದೃಶ್ಯ ಕಣ್ಮುಂದೆ ಬಂದು ನಕ್ಕೆ. ಮನೆ ಮತ್ತು ಮನೆಯವರಿಂದ ದೂರ ಬಂದು ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಬಹುಶಃ ಇಂತಹ ಕ್ಷಣಗಳೇ ಮನಸ್ಸಿಗೆ ಸುಖವನ್ನುಂಟು ಮಾಡಬಹುದು.

ಮಿಲಿಟರಿ ವಿಮಾನದ ಪ್ರಯಾಣವನ್ನು ರೋಲರ್ ಕೋಸ್ಟರಿನಲ್ಲಿ ಭರ್ರನೆ ತಿರುಗುವಂಥಾ ಭಯಾನಕ ಅನುಭವಕ್ಕೆ ಹೋಲಿಸುತ್ತಾ ಒಂದೇ ಬಾರಿಗೆ ರಾಕೆಟ್ ಉಡಾಯಿಸುವಂತೆ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ನಿಗದಿತ ಮಟ್ಟಕ್ಕೇರಿದ ಮೇಲೂ ವಿಮಾನ ಹೊಯ್ದಾಡಿ ಹೃದಯ ಬಾಯಿಗೆ ಬಂದಂತಾಗುತ್ತದೆ ಎನ್ನುವ ಲೇಖಕರು ಇದು ಆಫ್ಘಾನಿಸ್ತಾನದ ಅಗಾಧ ಪರ್ವತ ಶ್ರೇಣಿ ಮತ್ತು ವಾಯುಭಾರದೊಂದಿಗೆ ಸಮನ್ವಯ ಕಾಯ್ದುಕೊಳ್ಳಲಿಕ್ಕಷ್ಟೇ ಅಲ್ಲ ತಾಲಿಬಾನಿಗಳ ರಾಕೆಟ್ ಧಾಳಿಯಿಂದ ಮಿಲಿಟರಿ ವಿಮಾನಗಳನ್ನು ರಕ್ಷಿಸಿಕೊಳ್ಳುವ ಒಂದು ವಿಧಾನವೆನ್ನುತ್ತಾ ಆಫ್ಘಾನಿಸ್ತಾನದಲ್ಲಿ ನಾವು ಭೂಮಿಯ ಮೇಲಾಗಲೀ ಅಥವಾ ಆಕಾಶದಲ್ಲಾಗಲೀ ಸುರಕ್ಷಿತವಲ್ಲ ಎನ್ನುವ ಲೇಖಕರನ್ನು ತ್ರಿಶಂಕು ಸ್ವರ್ಗದಲ್ಲಿ ನೇತಾಡುವ ಹಾಗೆ ಚಿತ್ರಿಸಿಕೊಂಡು ನೋಡುವಾಗ ನಗುವಿನ ಬದಲು ಆತಂಕವೇ ಮೂಡಿ ಬೆಚ್ಚುವಂತಾಗುತ್ತದೆ. ಇಂತಹ ಪ್ರಯಾಣದಲ್ಲಿ" ಪೆಟಾನ್ ಸೆಫ" ಎಂಬ ಯೋಧ ಎಷ್ಟೇ ವಿನಂತಿಸಿದರೂ ಎದ್ದು ಹೋಗಿ ವಾಂತಿ ಮಾಡಲೂ ಅನುಮತಿಯಿಲ್ಲದಾಗ ಅತಿಭಾರದ ತನ್ನ ಶಿರಸ್ತ್ರಾಣವನ್ನೇ ಪಾತ್ರೆಯಾಗಿಸಿ ಹೊಟ್ಟೆಯಲ್ಲಿರುವುದನ್ನೆಲ್ಲಾ ವಾಂತಿ ಮಾಡಿಕೊಂಡ ದೃಶ್ಯ...ನಗು ಉಕ್ಕಿಸುತ್ತದೆ.

ಮೆಸಿಡೋನಿಯಾ ದೇಶದ ಕೇರಳದ ಅರ್ಧದಷ್ಟೂ ವಿಸ್ತೀರ್ಣವಲ್ಲದ ಆಲ್ಬೇನಿಯನ್ನರ ದೇಶದಲ್ಲಿ ಇಂಗ್ಲಿಷೇ ಬಾರದ ಗ್ರೀಕ್ ಮಾತಾಡುವ , ತೀರಾ ಕೆಲವರ ಹೊರತು ಬಹುಪಾಲು ಸದಾ ಧೂಮಪಾನಿಗಳಾದ ಕೊಳಕು ಆಲ್ಬೇನಿಯನ್ನರ ನಡುವೆ ನೋ ಮ್ಯಾನ್ ಲ್ಯಾಂಡ್ ಪ್ರಕರಣಗಳಲ್ಲಿ ಸಿಕ್ಕಿಕೊಂಡ ಲೇಖಕರು ಪಟ್ಟ ಫಜೀತಿ...ಓಹ್! ನಾನಂತೂ ಓದಿ ನಿಶ್ಚೇಶ್ಚಿತಳಾದೆ. ಲೇಖಕರ ತಾಳ್ಮೆ ಧೈರ್ಯ ಮೆಚ್ಚಲೇಬೇಕು.

ಈ ಆಲ್ಬೇನಿಯನ್ ದೇಶದಲ್ಲಿ ಆಲ್ಬೇನಿಯನ್ನರೇ ಅಲ್ಪಸಂಖ್ಯಾತರು. ಮುಸ್ಲಿಮರು ಬಹುಸಂಖ್ಯಾತರು. ಕೆಲವು ಕ್ರಿಶ್ಚಿಯನ್ನರಿರುವರಂತೆ. ನೊಬೆಲ್ ಶಾಂತಿ ಪುರಸ್ಕಾರ ಪಡೆದ " ಮದರ್ ತೆರೆಸಾ" ಇದೇ ದೇಶದ ಆಲ್ಬೇನಿಯನ್ನರಂತೆ. ಅವರ ನೆನಪಿಗಿರುವ ವಸ್ತು ಸಂಗ್ರಹಾಲಯಕ್ಕೆ ಅನೇಕ ಸಲ ಹೋಗಿ ಬಂದದ್ದನ್ನು ಲೇಖಕರು ಬರೆಯುತ್ತಾರೆ.

ಇಲ್ಲಿಯೇ ಮಿಲಿಟರಿಯವರ ವ್ಯವಸ್ಥೆಗಳನ್ನು ಪೂರೈಸುವ ಕಂಪನಿಗಳಲ್ಲಿ ಮತ್ತು ಕ್ಯಾಂಪುಗಳಲ್ಲಿ ಭ್ರಷ್ಟಾಚಾರವಿರುವುದನ್ನು ತಿಳಿಸುತ್ತಾ ಅಮೆರಿಕದ ಪೂರ್ವಾಧ್ಯಕ್ಷ ಜಾರ್ಜ್ ಬುಷ್ ಒಡೆತನದ ಬೇನಾಮಿ ಕಂಪನಿಯೂ ಇದಕ್ಕೆ ಹೊರತಾಗಿರಲಿಲ್ಲ ಎನ್ನುತ್ತಾರೆ. ಆದರೆ ಬೇರೆ ದೇಶಗಳಂತೆ ಸಂಪೂರ್ಣ ವ್ಯವಸ್ಥೆ ಭ್ರಷ್ಟವಲ್ಲ , ಕೇವಲ ಎತ್ತರದ ವ್ಯಕ್ತಿಗಳು ಮತ್ತು ಅವರ ಮೇಲಿನ ವ್ಯವಸ್ಥೆ ಮಾತ್ರ ಭ್ರಷ್ಟ ಎನ್ನುತ್ತಾರೆ. ಇರಾಕಿ ಮಿಲಿಟರಿ ಪಡೆಯಲ್ಲಿ ಸಾಕಷ್ಟು ಭ್ರಷ್ಟತೆ ಕಣ್ಣಾರೆ ಕಂಡ ಲೇಖಕರು ಮಿಲಿಟರಿಯೇ ಇಷ್ಟೊಂದು ಭ್ರಷ್ಟರಾದರೆ ದೇಶದ ಗತಿ ಏನು ಎಂದು ಯೋಚಿಸುವಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಗಾದೆ ನೆನಪಾಯಿತು.

ಇರಾನ್ ದೇಶದ ಗಡಿಗೆ ಹತ್ತಿರವಿರುವ ರಷಿಯಾ ದೇಶ ಕಟ್ಟಿದ ಈಗ ನ್ಯಾಟೋ ಐಸಾಫ್ ಪಡೆ ಅಭಿವೃದ್ಧಿ ಪಡಿಸಿದ ಇನ್ನೊಂದು ಯುದ್ಧನಗರಿ ಶಿಂದಾದ್ ಕ್ಯಾಂಪ್ ನಲ್ಲಿ ಭೇಟಿಯಾದ ಎಮಿರ್ ಎಂಬುವವನ ಕತೆ ಕರುಣಾಜನಕವಾದದ್ದು. ಈ ಕ್ಯಾಂಪಿನಲ್ಲಿ ಕೆಲಸ ಮುಗಿಸಿ ಹೊರಡುವ ಹಿಂದಿನ ದಿನ ಆ ಸಮಯದಲ್ಲಿ ಹುಟ್ಟಿದ್ದ ನನ್ನ ಮೊದಲ ಮಗಳಿಗೆ ಉಡುಗೊರೆ ಕೊಡಲೆಂದು ಒಂದು ಪುಟ್ಟ ಟೆಡ್ಡಿ ಬೇರನ್ನು ಖರೀದಿಸಿದೆ ಎನ್ನುವ ಅವರ ಮಾತು ಯುದ್ಧದ ಸಾವು ನೋವಿನ ಭೀಕರ ಪ್ರಪಂಚದಲ್ಲಿ ಕೆಲಸ ಮಾಡುತ್ತಾ ಮುಗ್ಧ ಸ್ನಿಗ್ಧ ಹೊಸಜೀವದ ಹೊಸಹುಟ್ಟಿನ ಭವಿತವ್ಯದೆಡೆಗಿನ ಅವರ ಗಮನವು ಬದುಕನ್ನು ಕಟ್ಟಿಕೊಳ್ಳುವ ನೋಡುವ ಬದುಕುವ ರೀತಿಯಲ್ಲಿ ಹೊಸ ದೃಷ್ಟಿಕೋನವನ್ನೇ ಕಟ್ಟಿಕೊಡುತ್ತದೆ. ಬಂದೂಕಿನ ಗುರಿಯ ವಿರುದ್ಧದಲ್ಲಿರಬೇಕಾಗಿರುವುದು ಬಂದೂಕಿಗೆ ವಿರುದ್ಧವಾದುದೆಲ್ಲವೂ (ಹೂವು ಮಗು ಕನಸು ಬದುಕು...ಇತ್ಯಾದಿ) ಎಂಬ ಆನಂದ ಭಾವಿನಿ ನಾಟಕದಲ್ಲಿ ನಿರೂಪಕಿ ಹೇಳಿದ ಮಾತುಗಳು ನೆನಪಾಯಿತು. ಯುದ್ಧ ಮುಗಿಯುವುದೇ ಇಲ್ಲವೇ? ದೀರ್ಘ ಉಸಿರೆಳೆದುಕೊಂಡೆ...

ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್ ಮತ್ತೊಮ್ಮೆ ಓದುವ ಮನಸಾಯಿತು. ಹೊರಗಿನ ಶಾಂತಿ ಸ್ಥಾಪನೆಗೆ ಮೊದಲು ನಮ್ಮೊಳಗೆ ನಾವು ಶಾಂತತೆಯಿಂದಿರುವುದು ಸುತ್ತಲ ಪರಿಸರದ ಜೊತೆ ಶಾಂತತೆಯಿಂದ ವರ್ತಿಸುವುದು ಬಹುಮುಖ್ಯವೇನೋ...ಹೀಗೇ ಒಂದಷ್ಟು ವಿಚಾರಗಳು ಮೂಡುತ್ತಾ ಹೋಯಿತು.

ಯುದ್ಧಭೂಮಿಯಲ್ಲಿ ವೃತ್ತಿ ಕೈಗೊಂಡ ಕನ್ನಡಿಗನೊಬ್ಬನ ಮನಸ್ಥೈರ್ಯ ಧೀರತೆಯಿಂದ ಸಾಕ್ಷಿಯಾದ " ಕುಣಿಗಲ್ ಟು ಕಂದಹಾರ್ " ಒಂದು ಸಾಹಸ ಗಾಥೆ. ಕನ್ನಡಿಗರೆಲ್ಲರೂ ಓದಲೇಬೇಕಾದ ಈ ಕೃತಿಯ ಲೇಖಕರು ಮತ್ತೆ ಅವಕಾಶ ಬಂದರೆ ಮತ್ತೆ ಅಂತಹ ಸ್ಥಳಗಳಿಗೆ ಹೋಗುವೆ ಎಂದು ಸಿದ್ಧರಾಗಿರುವ ಸಾಹಸಿಗೆ "ನೀವು ಸಾಹಸಿಗರೇ. ಆದರೆ ನಿಮ್ಮನ್ನು ನಂಬಿಕೊಂಡ ನಿಮ್ಮ ಪತ್ನಿ ಮತ್ತು ಮಕ್ಕಳನ್ನು ಈ ನಡುವಯಸ್ಸಿನಲ್ಲಿ ಬಿಟ್ಟು ಹೋಗುವುದು ಬೇಡ " ಎನ್ನಬೇಕಿರುವೆ. ನೀವೂ ಸಹಾ ಪುಸ್ತಕ ಓದಿದ ಮೇಲೆ ಹೀಗೆಯೇ ಹೇಳುವಿರಿ ಎಂದು ನನ್ನ ಭಾವನೆ. ವೀರಲೋಕದ ಪಬ್ಲಿಕೇಷನ್ ನ ಈ ಕೃತಿ ಓದುವ ಅವಕಾಶವನ್ನು ಮಿಸ್ ಮಾಡಿಕೊಳ್ಳಲೇಬೇಡಿ.

ಮನೆಗೆ ಕರೆದು ಅತಿಥ್ಯದಾದರದಿಂದ ಸತ್ಕರಿಸಿ ಇಂತಹ ಸೊಗಸಾದ ಪುಸ್ತಕ ನೀಡಿದ ಮಂಜುನಾಥ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಧನ್ಯವಾದಗಳು.

-- ಕೆ.ಎನ್.ಲಾವಣ್ಯ ಪ್ರಭಾ
ಮೈಸೂರು

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...