"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್ಟಲ್ಲ. ಅದಾವುದನ್ನು ಲೆಕ್ಕಿಸದೇ ಹಂತ ಹಂತವಾಗಿ, ಇತರರೊಂದಿಗೆ ಆರೋಗ್ಯಪೂರ್ಣ ಪೈಪೋಟಿಗಿಳಿದ ರೋಚಕ ಹೋರಾಟದ ಪ್ರತಿಫಲವೇ 'ದಣಿವರಿಯದ ದಾರಿ'," ಎನ್ನುತ್ತಾರೆ ಸಿದ್ದು ಯಾಪಲಪರವಿ ಕಾರಟಗಿ ಅವರು ‘ದಣಿವರಿಯದ ದಾರಿ’ ಕೃತಿ ಕುರಿತು ಬರೆದಿರುವ ಒಂದೆರಡು ಲೇಖಕರ ಮಾತು.
ಅರವತ್ತರ ದಶಕದಲ್ಲಿ ಹಿಂದುಳಿದ ಜನಾಂಗದ ಯುವಕರು ನೌಕರಿ ಮಾಡುವುದು ಕಷ್ಟಕರವಾಗಿತ್ತು. ಉನ್ನತ ಶಿಕ್ಷಣ ಪಡೆಯುವುದು ದುರ್ಲಭವೆನಿಸಿದ ಕಾಲವದು. ಧಾರವಾಡ ಜಿಲ್ಲೆಯ ಅತ್ಯಂತ ಹಿಂದುಳಿದ ಊರಿನ ಯುವಕನೊಬ್ಬ ಓದುವ ಹಟ ತೊಟ್ಟು ಉನ್ನತ ವ್ಯಾಸಂಗ ಪಡೆದದ್ದೇ ವಿಸ್ಮಯ ಆದರೆ ಅದರಾಚೆಗೆ ಮಾಡಿದ ಸಾಧನೆ ಅದ್ಭುತ ದಾಖಲೆ. ಕೇವಲ ಮಠಾಧೀಶರು ಮತ್ತು ಬೆರಳೆಣಿಕೆಯ ಮುಂದುವರಿದ ಜನಾಂಗದವರು ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡುವ ಧೈರ್ಯ ಮಾಡುತ್ತಿದ್ದರು. ಅಂತಹ ಹೊತ್ತಿನಲ್ಲಿ, ಸ್ವಾಭಿಮಾನದ ಸಂಕೇತದಂತಿದ್ದ, ಹಿಂದುಳಿದ ಕುರುಬ ಜನಾಂಗದ ಐಕಾನ್ ಪ್ರೊ.ಬಿ.ಎಫ್.ದಂಡಿನ ಅವರು ಅಪರೂಪದ ಸಾಹಸಕ್ಕೆ ಕೈ ಹಾಕಿದ ಮೊಟ್ಟಮೊದಲ ಧೀಶಕ್ತಿ. ಕೇವಲ ತಮ್ಮ ಆತ್ಮಬಲದ ಆಧಾರದ ಮೇಲೆ ಇಂತಹ ಬಹುದೊಡ್ಡ ರಿಸ್ಕ್ ತೆಗೆದುಕೊಂಡದ್ದು ಯಾರೂ ಅರಿಯದ ಇತಿಹಾಸ.
ಈಗ ಕಾಲ ತುಂಬಾ ಬದಲಾಗಿದೆ, ಹಿಂದುಳಿದ ವರ್ಗದಿಂದ ಬಂದವರಿಗೆ ಉನ್ನತ ಶಿಕ್ಷಣ, ಆರ್ಥಿಕ ಚೈತನ್ಯ ಮತ್ತು ರಾಜಕೀಯ ಅಧಿಕಾರ ಲಭಿಸಿದೆ. ಆದರೆ ಆಗ ಯಾವುದೂ ಇರದ ದಿನಗಳವು.
ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್ಟಲ್ಲ. ಅದಾವುದನ್ನು ಲೆಕ್ಕಿಸದೇ ಹಂತ ಹಂತವಾಗಿ, ಇತರರೊಂದಿಗೆ ಆರೋಗ್ಯಪೂರ್ಣ ಪೈಪೋಟಿಗಿಳಿದ ರೋಚಕ ಹೋರಾಟದ ಪ್ರತಿಫಲವೇ 'ದಣಿವರಿಯದ ದಾರಿ.'
ನಿರ್ಭಯ, ನಿರ್ಲಿಪ್ತ, ನಿರ್ವಿಕಾರ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು. ಯಾರನ್ನು, ಯಾವುದನ್ನೂ ಲೆಕ್ಕಿಸದೇ ತಮಗೆ ಸರಿ ಕಂಡಂತೆ ಸಾಗಿದ ನದಿಯ ಚಲನಶೀಲ, ದಣಿವರಿಯದ ದಾರಿಯ ಸಂಕ್ಷಿಪ್ತ ರೂಪವಿದು.
'ಗುಣಮಟ್ಟದ ಶಿಕ್ಷಕರ ತಂಡವಿದ್ದರೆ ಸಾಕು' ಎಂಬ ಸಂಕಲ್ಪದಿಂದಾಗಿ ಕನಕದಾಸ ಶಿಕ್ಷಣ ಸಮಿತಿ ಹೆಮ್ಮರವಾಗಿ ಬೆಳೆಯಿತು. ರಾಜ್ಯದಲ್ಲಿ ಮೊದಲ ಬಾರಿಗೆ ಕನಕದಾಸರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ತೆಗೆದ ಹೆಗ್ಗಳಿಕೆ ಬೇರೆ.
ಅಂದಿನ ಹೈದ್ರಾಬಾದ ಕರ್ನಾಟಕದ ರಾಯಚೂರು, ಬಳ್ಳಾರಿ ಪ್ರದೇಶದ ಬಡವರ ಪಾಲಿನ ಸಂಜೀವಿನಿಯಾದ ಹಾಸ್ಟೆಲ್, ಸಾವಿರಾರು ವಿದ್ಯಾರ್ಥಿಗಳ ಬಾಳ ಬೆಳಗಿತು. ಎಂಬತ್ತರ ದಶಕದಲ್ಲಿ ಕುಳಿತು ಪಾಠ ಕೇಳಲು ಅಸಾಧ್ಯವಾದ ದಿನಗಳಲ್ಲಿ, ನೂರಾರು ವಿದ್ಯಾರ್ಥಿಗಳು ಹೊರಗೆ ನಿಂತು ಪಾಠ ಕೇಳಿದ ದಾಖಲೆ ಕನಕದಾಸ ಶಿಕ್ಷಣ ಸಮಿತಿಯ ಕೆ.ವಿ.ಎಸ್.ಆರ್. ಕಾಲೇಜಿಗಿದೆ.
ಸ್ವತಃ ಪ್ರಾಧ್ಯಾಪಕರಾಗಿದ್ದ ಪ್ರೊ. ಬಿ.ಎಫ್.ದಂಡಿನ ಅವರಿಗೆ ನಿಜವಾದ ಶಿಕ್ಷಕರ ತಾಕತ್ತು ಮತ್ತು ಸಾಮರ್ಥ್ಯ ಗೊತ್ತಿತ್ತು. ಅದೇ ಜಾಡು ಹಿಡಿದು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ಸಂಸ್ಥೆಯನ್ನು ಬೆಳೆಸಿದರು.
ಇಂತಹ ಅನೇಕ ರೋಚಕ ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನದ ಪ್ರತಿಬಿಂಬವೇ ಈ ಜೀವನ ಚರಿತ್ರೆ,
ಮೂರು ದಶಕಗಳ ಕಾಲ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾದ ಪುಣ್ಯ ನನ್ನದು. ಅದಕ್ಕೆ ಕಾರಣರಾದ ಡಾ. ಬಿ.ಎಫ್. ದಂಡಿನ ಅವರ ವ್ಯಕ್ತಿತ್ವ ನನ್ನ ಮೇಲೆ ಗಾಢ ಪ್ರಭಾವ ಬೀರಿತು. ಅವರನ್ನು ಬೇರೆ ಬೇರೆ ಕಾರಣಗಳಿಂದ ಭೇಟಿಯಾದಾಗ ಕೊಂಚ ಧೈರ್ಯದಿಂದ ಮಾತನಾಡುವ ಹುಂಬತನ ನನ್ನಲ್ಲಿತ್ತು.
ನನ್ನ ಗುರುಗಳಾದ ತೋಂಟದಾರ್ಯ ಮಠದ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದದ ಶ್ರೀರಕ್ಷೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ನನಗೆ ಪ್ರೇರಕ ಶಕ್ತಿಯಾದವರು ಡಾ.ದಂಡಿನ ಸರ್.
ಅವರು ಸದಾ ಬೈದು ಬುದ್ದಿ ಹೇಳಿ ನನ್ನ ಪ್ರತಿಭೆಯನ್ನು ಜಾಗೃತಗೊಳಿಸಿದರು. ಬರೀ ಭಾಷಣದಲ್ಲಿ ಕಳೆದು ಹೋದಾಗ, ಸಾಹಿತ್ಯ ರಚನೆಯಲ್ಲಿ ತೊಡಗಲು ಒತ್ತಾಯಿಸಿದರು. ತಮ್ಮ ಸ್ವಾಭಿಮಾನದ ಕತೆಯನ್ನು ವಿವರಿಸಿ ಚೈತನ್ಯ ತುಂಬಿದರು. ಏನೇ ತಕರಾರು ಇದ್ದರೂ ಅದು ಕೇವಲ ತಾತ್ವಿಕ ಮತ್ತು ತಾತ್ಕಾಲಿಕ. ನಂತರ ಮತ್ತೆ ಅದೇ ಪ್ರೀತಿ, ವಿಶ್ವಾಸ ಮತ್ತು ಎಚ್ಚರಿಕೆ ಇದ್ದೇ ಇರುತ್ತಿತ್ತು. ಕನಕದಾಸ ಶಿಕ್ಷಣ ಸಮಿತಿಯಲ್ಲಿ ನನ್ನಂತಹ ಉದ್ಯೋಗಿಗಳು ಅನೇಕರಿದ್ದಾರೆ ಆದರೆ ಅವರೊಂದಿಗೆ ಹೆಚ್ಚು ಚರ್ಚೆ ಮಾಡುವ ಅವಕಾಶ ಪಡೆದ ಸುದೈವಿ ನಾನು.
ಇತ್ತೀಚಿನ ದಿನಗಳಲ್ಲಿ ಸಮಿತಿಯ ಕೆಲಸಕ್ಕಾಗಿ ಅವರೊಂದಿಗೆ ಬೆಂಗಳೂರಿಗೆ ಪ್ರಯಾಣ ಮಾಡುವಾಗ ಅವರ ವ್ಯಕ್ತಿತ್ವದ ಹಲವಾರು ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಸರಳತೆ, ಕಾಳಜಿ ಮತ್ತು ಜೀವನೋತ್ಸಾಹದ ಅಂಶಗಳ ಗ್ರಹಿಕೆಯಾಯಿತು.
ಅವರು ಎದುರಿಸಿದ ಸವಾಲುಗಳು, ಬಿ.ಎಡ್. ಕಾಲೇಜು ಆರಂಭ ಮಾಡುವಾಗ ಆದ ತೊಡಕುಗಳು ಮತ್ತು ಅವುಗಳನ್ನು ನಿಭಾಯಿಸಿದ ರೀತಿ, ಸಾತ್ವಿಕ ಛಲ, ಗೆದ್ದು ಬಂದ ವಿಧಾನ ನಿಜವಾಗಿಯೂ ಅನುಕರಣೀಯ. 'ಒನ್ ಮ್ಯಾನ್ ಆರ್ಮಿ' ಎಂಬ ಪದ ಇವರಿಗೆ ಸಾರ್ಥಕ ಮತ್ತು ಅನ್ವರ್ಥಕ.
ಕಳೆದ ವರ್ಷ ಗದುಗಿನ ಪೂಜ್ಯರ ಕುರಿತು ಬರೆದ 'ಹಗಲಿನಲ್ಲಿಯೆ ಸಂಜೆಯಾಯಿತು' ಕೃತಿಯ ಯಶಸ್ಸು, ಸದರಿ ಪುಸ್ತಕ ಬರೆಯಲು ಕಾರಣವಾಯಿತು. ನಾನು ತುಂಬಾ ಗೌರವಿಸುವ ಡಾ.ಬಿ.ಎಫ್. ದಂಡಿನ ಅವರ ಕುರಿತು ಬರೆಯಲು ಅಭಿಮಾನ, ಹೆಮ್ಮೆ. ಈಗಾಗಲೇ ಸಂಸ್ಥೆಯ ರಜತ ಮತ್ತು ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅಭಿನಂದನಾ ಗ್ರಂಥಗಳು ಪ್ರಕಟಗೊಂಡಿವೆ ಆದರೆ ಅವರ ಕುರಿತು ಪೂರ್ಣ ಪ್ರಮಾಣದ ಜೀವನ ಚರಿತ್ರೆ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆಕರವಾಗಿ ಉಳಿಯುವ ಒಂದು ಪುಸ್ತಕ ಇದ್ದರೆ ಒಳ್ಳೆಯದು ಎನಿಸಿತು.
ಬರಹದ ಉದ್ದೇಶ ಇಟ್ಟುಕೊಂಡು ಅವರೊಂದಿಗೆ ನೂರಾರು ತಾಸು ನಿರಂತರ ಮಾತನಾಡಿದೆ. ಆದರೆ ಬರೆಯುವುದು ತುಂಬಾ ಶ್ರಮದಾಯಕ ಎನಿಸಿತು. ಸಾಧಕರ ಕುರಿತು ಬರೆಯುವಾಗ ಲೇಖನಿಯ ಜವಾಬ್ದಾರಿ ಹೆಚ್ಚುತ್ತದೆ. ಯಾವುದೇ ರೀತಿಯ ವೈಭವೀಕರಣ, ವಿವಾದ ಮತ್ತು ವಿಶಾದಗಳಿಲ್ಲದೇ ಬರೆಯಬೇಕಾಗುತ್ತದೆ. ಅಂತಹ ಒಂದು ಸಣ್ಣ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ ಎಂಬ ಸಮಾಧಾನ. 'ಆನೆಯನ್ನು ಕನ್ನಡಿಯಲ್ಲಿ ಕಂಡಂತೆ' ಎಂಬ ಭಾವ ಮೂಡಿದೆ.
ಈ ಸಂದರ್ಭದಲ್ಲಿ ನನಗೆ ಬರೆಯುವ ಹುಮ್ಮಸ್ಸು ಹೆಚ್ಚಿಸಿದ ಕಾರ್ಯದರ್ಶಿಗಳಾದ ಶ್ರೀ ರವಿ ದಂಡಿನ ಮತ್ತು ಸಹಕಾರ್ಯದರ್ಶಿಗಳಾದ ಡಾ. ಪುನೀತಕುಮಾರ ಬೆನಕನವಾರಿ ಅವರಿಗೆ ವಿಶೇಷ ಕೃತಜ್ಞತೆಗಳು.
ಮಾಹಿತಿ ಸಂಗ್ರಹ ಮತ್ತು ಬರಹಕ್ಕೆ ಪೂರಕ ರೀತಿಯಲ್ಲಿ ಸಹಕಾರ ನೀಡಿದ ನಮ್ಮ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿ, ಈಗ ಶಿರಹಟ್ಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಲೇಖಕಿ ಪ್ರೊ. ಸುಧಾ ಹುಚ್ಚಣ್ಣವರ ಅವರ ನೆರವು ಮರೆಯಲಾಗದು.
ಕನಕದಾಸ ಶಿಕ್ಷಣ ಸಮಿತಿಯ ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಪ್ರಾಧ್ಯಾಪಕರು ಈ ಕೃತಿಯನ್ನು ಅಭಿಮಾನದಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವೇ ನನಗೆ ಶ್ರೀರಕ್ಷೆ.
ಗುಣಮಟ್ಟದ ಕೃತಿಗಳನ್ನು ಪ್ರಕಟಿಸುವ ಉದ್ದೇಶ ಇಟ್ಟುಕೊಂಡು ಆರಂಭಿಸಿದ 'ಸಾಂಗತ್ಯ' ಪ್ರಕಾಶನದ ಮೂಲಕ 'ದಣಿವರಿಯದ ದಾರಿ' ಪ್ರಕಟಿಸಲು ಅನುಮತಿಸಿದಕನಕದಾಸ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಗೆ ಋಣಿಯಾಗಿದ್ದೇನೆ. ಸಾಂಗತ್ಯದ 'ಸಂಗಾತಿಗಳ' ನೆರವು, ಪ್ರೀತಿ, ವಿಶ್ವಾಸ ಅನನ್ಯ
ಅರ್ಥಪೂರ್ಣ ಮಾತುಗಳನ್ನು ಬರೆದು ಕೃತಿಯ ಮೌಲ್ಯ ಹೆಚ್ಚಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಶ್ರೀ ಸು. ರಾಮಣ್ಣ ಮತ್ತು ಶಿಕ್ಷಣ ತಜ್ಞರು, ನನ್ನ ಮಾರ್ಗದರ್ಶಕರೂ ಆದ ಡಾ. ಆರ್. ಎಂ. ರಂಗನಾಥ ಅವರ ಔದಾರ್ಯಕೆ ಸಾವಿರದ ಶರಣುಗಳು.
ಕನಕದಾಸ ಶಿಕ್ಷಣ ಸಮಿತಿಯ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ, ಅಚ್ಚುಕಟ್ಟಾಗಿ ಅಕ್ಷರಿಸಿದ ರಾಹುತ, ಸುಂದರವಾದ ಮುಖಪುಟ ವಿನ್ಯಾಸಗೊಳಿಸಿದ ಕಲಾವಿದ ಮುರಳೀಧರ ರಾಠೋಡ, ಅಷ್ಟೇ 'ತ್ವರಿತವಾಗಿ' ಮುದ್ರಿಸಿದ ಅಶೋಕ ಖಟವಟೆ ಹಾಗೂ ಸಿಬ್ಬಂದಿ ಅವರಿಗೆ ವಿಶೇಷ ನಮನಗಳು.
ನಿಮ್ಮ ಮುಕ್ತ ಹಿಮ್ಮಾಹಿತಿಗಾಗಿ ಕಾಯತ್ತೇನೆ.
- ಸಿದ್ದು ಯಾಪಲಪರವಿ ಕಾರಟಗಿ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.