ಹಿರಿಯ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ವಿಶ್ಲೇಷಿಸುವ ವಿಭಿನ್ನ ಅಂಕಣ ‘ನೀರು ನೆರಳು’. ಈ ಬಾರಿ ನವ್ಯ ಕಾವ್ಯದ ಕುರಿತು ಉದಾಹರಣೆಯೊಂದಿಗೆ ಸವಿವರವಾಗಿ ವಿಶ್ಲೇಷಿಸಿದ್ದನ್ನು ಹಾಗೂ ಕಮ್ಮಟಾರ್ಥಿಗಳು ಬರೆದು ಕಳಿಸಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದನ್ನು ಇಲ್ಲಿ ನೀಡಲಾಗಿದೆ.
(ಮುಂದುವರೆದ ಭಾಗ)
ಭಾಗ ಎರಡು-ಪ್ರಶ್ನೋತ್ತರ ಚರ್ಚೆ
ಕಮ್ಮಟಾರ್ಥಿಗಳು ಬರೆದು ಕಳಿಸಿರುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕೊಡಲಾಗಿದೆ. ಯಾವ ಪ್ರಶ್ನೆಗಳಲ್ಲೂ ಬರೆದವರ ಹೆಸರಿಲ್ಲ.
ಕವಿತೆ ಯಾಕೆ ಬರೀಬೇಕು? ಯಾರಿಗೋಸ್ಕರ ಬರೀಬೇಕು?
ಇದನ್ನು ಯಾರು ಬರೆದು ಕಳಿಸಿದರೋ! ಇರಲಿ; ಕವಿತೆ ಯಾಕೆ ಬರೀಬೇಕು ಅನ್ನೋದು ಬಹಳ ದೊಡ್ಡ ಪ್ರಶ್ನೆ. (ಇದನ್ನು ಆರಂಭದ ನನ್ನ ಪೀಠಿಕೆಯ ಮಾತುಗಳಲ್ಲೆ ಹೇಳಿದ್ದೀನಿ) ಇದನ್ನೆ ಬದಲಾಯಿಸಿ ಕೇಳೋದಾದರೆ ನಾನು ಬರೆಯದಿದ್ದರೆ ಏನು? ಎಂಬುದೂ ಅಷ್ಟೇ ಗಂಭೀರವಾದ ಪ್ರಶ್ನೆ. ಇವನ್ನ ತುಂಬಾ ಜನ ಕವಿಗಳು ಕೇಳಿಕೊಳ್ಳೋದೇ ಇಲ್ಲ. ಸುಮ್ನೆ ಬರೀತಾ ಇರತಾರೆ. ರೆಕಗ್ನಿಶನ್‌ಗಾಗಿ ಬರೆಯೋದು, ಕೀರ್ತಿಗಾಗಿ, ಮನ್ನಣೆಗಾಗಿ, ಹಣಕ್ಕಾಗಿ, ತನ್ನ ಆನಂದಕ್ಕಾಗಿ, ಇತರರ ರಂಜನೆಗಾಗಿ, ಕೆಲವು ಸಾಂದರ್ಭಿಕ ಒತ್ತಡಗಳಿಗಾಗಿ, ವೈಯಕ್ತಿಕವಾದ ಮಾನಸಿಕ ಒತ್ತಡಗಳ ಬಿಡುಗಡೆಗಾಗಿ, ಸ್ನೇಹಿತರ ಆಸೆ, ಆಕಾಂಕ್ಷೆಗಳನ್ನು ಪೂರೈಸಲಿಕ್ಕಾಗಿ, ಕೆಲವು ನಿರ್ದಿಷ್ಟ ಗುರಿಗಳಿಗಾಗಿ ಅಂದರೆ ಯಾವುದೋ ಕವಿಗೋಷ್ಠಿಯಲ್ಲಿ ಓದಲು, ಯಾರಿಗೋ ಪೈಪೋಟಿ ನೀಡಲು, ಯಾವುದೋ ನಾಟಕಕ್ಕೊ, ಚಿತ್ರಕ್ಕೊ ಬರೆಯುವುದು ಹೀಗೆ ನಾನಾ ಕಾರಣಕ್ಕಾಗಿ ಪದ್ಯ ಬರೀಬಹುದು. ಆದರೆ;...
ಇವಕ್ಕಿಂತ ಭಿನ್ನವಾಗಿ ನಾನು ಈ ಲೋಕವನ್ನು ಭಿನ್ನವಾಗಿ ನೋಡಬಹುದಾದ ದೃಷ್ಟಿಗಳನ್ನು ಪಡೆಯಲು, ಇತರರು ಈ ಲೋಕವನ್ನು ಬೇರೆ ರೀತಿಯಲ್ಲಿ ನೋಡಬೇಕಾಗಿರುವುದನ್ನು ಹೇಳಲು, ಸಾಮಾಜಿಕ ನ್ಯಾಯವನ್ನು ಮಂಡಿಸಲಿಕ್ಕಾಗಿ, ನನ್ನದೇ ದೃಷ್ಟಿ ಧೋರಣೆಗಳನ್ನು ಮಂಡಿಸಲಿಕ್ಕಾಗಿ, ಸಾಮಾಜಿಕ ಬದಲಾವಣೆಯ ಒಂದು ಹತಾರವಾಗಿ, ಬರವಣಿಗೆ ಜಡವಾಗಿದೆ, ನಿಷ್ಕ್ರಿಯವಾಗಿದೆ ಅದನ್ನು ಬದಲಿಸಲು ಬರೆಯುತ್ತೇನೆ, ಟೈಮ್‌ಲೆಸ್ ಆದ ಸ್ಪೇಸ್‌ಲೆಸ್ ಆದ ಸೋಶಿಯಲ್ ಚೇಂಜ್ ಏಜೆನ್ಸಿ ಮತ್ತು ಸಮೂಹ ಸಂವಹನ ಮಾಧ್ಯಮವಾದ ಕವಿತೆಯನ್ನು ನಾನು ಸಮಾಜಕ್ಕಾಗಿ ಬರೀತೀನಿ ಅಂತ ಬರೆಯೋದಾದರೆ ಆಗ ಸರಿ. ಸಮಾಜದ ಬಗ್ಗೆ ಅದರ ಬದಲಾವಣೆ ಬಗ್ಗೆ, ಕಾಳಜಿ ಇಲ್ಲದೆ ಇರೋದು, ಸಾಮಾಜಿಕ ನ್ಯಾಯದ ಬಗೆಗಿನ ಕನ್ಸರ್ನ್ ಇಲ್ಲದೆ ಇರೋದು, ಫಿಲಾಫಿಕಲ್ ವಿಶನ್ ಇಲ್ಲವದನು ಒಳ್ಳೆ ಕವಿಯಾಗಲು ಸಾಧ್ಯ ಇಲ್ಲ ಕಣ್ರಿ.
ಕವಿತೆ ಬರೆಯಲು ಒಂದು ನಿರ್ದಿಷ್ಟ ಮನಸ್ಥಿತಿ, ಸ್ಥಳ ಇರಬೇಕಾ? ಸ್ಪೂರ್ತಿ ಅಂತಾರಲ್ಲ ಅದು ಹೇಗಿರುತ್ತೆ?
ಸ್ಪೂರ್ತಿ ಅನ್ನೋದು ಒಂದು ಮನಸ್ಥಿತಿ ಅಷ್ಟೆ. ಕವಿತೆ ಹುಟ್ಟುವುದಕ್ಕೆ ಕೆಲವೊಮ್ಮೆ ನಮ್ಮ ಅಥವಾ ಬಾಹ್ಯ ಕೆಲವು ಘಟನೆ ಪ್ರೇರಣೆ ನೀಡಬಹುದು. ಅಲ್ಲದೆ ನಮ್ಮಲ್ಲಿ ಪದ್ಯ ಬರೆಯೋಕೆ ಏಕಾಂತ ಬೇಕು, ಒಂದು ನಿರ್ದಿಷ್ಟವಾದ ಮನಸ್ಥಿತಿ ಬೇಕು ಅಂತಾರೆ. ಸಂತೇಲೆಲ್ಲ ಬರೆಯೋಕೆ ಆಗಲ್ಲ ಅಂತಾರೆ. ಸ್ಪೂರ್ತಿತತ್ವ ಇರುವಂತೆಯೆ ನಮ್ಮಲ್ಲಿ ಶಿಲ್ಪ ತತ್ವ ಕೂಡ ಇದೆ. ಅಂದರೆ ಎಚ್ಚರದ ಸ್ಥಿತಿಯಲ್ಲಿ ಪದ್ಯ ಬರೆದು ತಿದ್ದಿ ತಿದ್ದಿ ಪ್ರಕಟಿಸಬೇಕು ಅಂತ. ಹೊನ್ನ ಕಾಯಿಸಿ ಬಡಿದು ಇಷ್ಟ ದೇವತಾ ವಿಗ್ರಹಕ್ಕೆ ಒಗ್ಗಿಸುವ ಅಸಲಿ ಕಸುಬು ಅಂತ ಅಡಿಗರು ಹೇಳ್ತಾರೆ. ಅಂದರೆ ಪದ್ಯವನ್ನು ಕವಿ ತನ್ನ ಕಾಣ್ಕೆಯ ಆಕಾರಕ್ಕೆ ಬರುವವರೆಗೆ ಮತ್ತೆ ಮತ್ತೆ ತಿದ್ದಿ ತೀಡಿ ಬರೀಬೇಕು ಅಂತ. ಪದ್ಯ ಬರೆಯುವುದನ್ನು ಹೆರಿಗೆಗೂ ಹೋಲಿಸ್ತಾರೆ. ಅಂದರೆ ತಾಯಿ ಒಂಬತ್ತು ತಿಂಗಳು ಕಾಯುವಂತೆ ಕವಿ ಪದ್ಯ ತನ್ನ ಮನಸ್ಸಿನಲ್ಲಿ ಹರಳುಗಟ್ಟಿಕೊಳ್ಳಲು ಕಾಯಬೇಕು, ಧ್ಯಾನಿಸಬೇಕು ಅಂತ. ಅವಸರಕ್ಕೆ ಹೆರಬಾರದು ಅಂತ. ಅದು ನಮ್ಮ ಮನಸ್ಸಿನ ಗರ್ಭದಲ್ಲಿ ಆಕಾರ ಪಡೆಯಲು ಕಾಲ ನೀಡಬೇಕು ಅಂತ.
ಶರ್ಮ ಅವರು ’ಒಂದೊಂದು ಕವಿತೆಯೂ ಭರವಸೆಯ ವ್ಯವಸಾಯ, ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ’ ಅಂತಾರೆ. ಅಂದರೆ ಕಾವ್ಯ ಕಟ್ಟುವುದು ರೈತ ಬೇಸಾಯ ಮಾಡಿದ ಹಾಗೂ ಹೌದು. ಫಸಲು ಬರುವುದು ಅದು ಭಾಗ್ಯವೂ ಹೌದು ಅಂತಾರೆ. ಆಮೇಲೆ ನಾನೃಷಿ ಕೃತೇ ಕಾವ್ಯಂ ಅಂದರೆ ಋಷಿಯಲ್ಲದವನು ಕವಿಯಾಗಲಾರ ಅಂತ ಒಂದು ಮಾತಿದೆ. ನೋಡಿ ಕುವೆಂಪುಗೆ ನಾವು ರಸಋಷಿ ಅಂತೀವಿ. ಬೇಂದ್ರೆಗೆ ವರಕವಿ ಅಂತೀವಿ. ಈ ವರಕವಿ ಅನ್ನೋ ಕಲ್ಪನೇನ ನಾನು ಒಪ್ಪಲ್ಲ. ಕವಿಪ್ರತಿಭೆ ಅನ್ನೋದು ದೈವದತ್ತವಾಗಿ ಬರುತ್ತೆ, ರಕ್ತದಲ್ಲಿ ಬರುತ್ತೆ ಅನ್ನೋದೆಲ್ಲ ಅಪ್ಪಟ ಸುಳ್ಳು. ಜೀನ್ ಎಡಿಟಿಂಗ್ ಕಾಲದಲ್ಲಿ ಇವತ್ತು ನಾವಿದ್ದೀವಿ. ಹೀಗಿರುವಾಗ ಕೆಲವು ಜಾತಿಗಳಲ್ಲಿ ಮಾತ್ರ ಪ್ರತಿಭೆ ಹುಟ್ಟುತ್ತೆ, ಕೆಲವು ಗಾಡ್ ಗಿಫ್ಟ್ ಆಗಿ ಬರುತ್ತೆ ಅನ್ನೋದನ್ನೆಲ್ಲ ಒಪ್ಪೋಕಾಗಲ್ಲ. ಇದೆಲ್ಲ ಸೋಶಿಯಲ್ ಎಂಜಿನಿಯರಿಂಗ್ ಅಷ್ಟೆ.
ಕವಿತೆ ಬರೆಯೋದನ್ನು ಕಲಿತು ಬರೆಯೋಕೆ ಆಗುತ್ತಾ ಅಂದರೆ ಆಗಬಹುದು ಅನ್ನುವವನು ನಾನು. ಸ್ಪೂರ್ತಿ ಇರಬೇಕಾ ಅಂದರೆ ಹೌದು ಇರಬೇಕು. ಅದೊಂದು ಬಗೆಯ ಮನಸ್ಥಿತಿ. ಕವಿತೆ ಬರೆಯೋಕೆ ಏಕಾಂತ ಬೇಕಾ ಅಂದರೆ, ಏಕಾಕಿಯಾಗಿ ಕವಿತೆ ಬರೆಯಲು ಕೂರುವವನಿಗೆ ಏಕಾಂತ ಬೇಕು. ಅವನು ಗದ್ದಲದಲ್ಲಿ ಬರೆಯಲಾರ. ಒಂದು ಮೌನ, ಧ್ಯಾನ ಕೂಡ ಬೇಕಾಗುತ್ತೆ. ಆದರೆ ನಮ್ಮಲ್ಲಿ ಯಾವುದೋ ಜಾತ್ರೆಯಲ್ಲಿ, ಮೇಳದಲ್ಲಿ ಮೆರವಣಿಗೆಯಲ್ಲಿ ಹಾಡ್ತಾ ಹಾಡ್ತಾ ಕವಿತೆ ಕಟ್ಟುವುದೂ ಇದೆ. ಏಕಾಂತದಲ್ಲಿ ಮಾತ್ರವಲ್ಲ ಲೋಕಾಂತದಲ್ಲೂ ಕವಿತೆ ಹುಟ್ಟುತ್ತೆ. ಬಾರಲ್ಲಿ, ಗುಡಿಯಲ್ಲಿ, ಒಂಟಿ ರೂಮಲ್ಲಿ, ಬಸ್ಸಲ್ಲಿ, ಪಾರ್ಕಲ್ಲಿ ಕವಿತೆ ಎಲ್ಲಿ ಬೇಕಾದರೂ ಹುಟ್ಟಬಹುದು. ಸಂತೆಯಲ್ಲೂ ಏಕಾಂತ ಸಾಧಿಸುವುದಕ್ಕೂ ಕೆಲವರಿಗೆ ಸಾಧ್ಯ ಇದೆ. ಅಂಥವರಿಗೆ ಏಕಾಂತ ಲೋಕಾಂತಗಳ ಭೇದವಿಲ್ಲ.
ಬರೆಯಲು ವಸ್ತು ಹೇಗೆ ಆಯ್ಕೆ ಮಾಡಿಕೊಳ್ಳುವುದು?
ಅದಕ್ಕೊಂದು ನಿರ್ದಿಷ್ಟವಾದ ರೂಲ್ಸು ಅಂತ ಇಲ್ಲ. ನಿಮ್ಮನ್ನು ಕಾಡಿದ ಕಾಡುತ್ತಿರುವ ಯಾವುದೇ ನಿಮ್ಮ ವಯಕ್ತಿಕ, ಕೌಟುಂಬಿಕ, ಸಾಮಾಜಿಕ ವಸ್ತುಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಬಾಲ್ಯದ ಅನುಭವಗಳನ್ನು ಆಧರಿಸಿ ಬರೆಯಬಹುದು. ನಿಮ್ಮ ಸುತ್ತ ನಡೆಯುತ್ತಿರುವ ಅನ್ಯಾಯದ ಬಗ್ಗೆ ನಿಮಗೆ ನಿಮ್ಮದೇ ನಿಲುವು ಇದ್ದರೆ ಅದನ್ನು ಹೇಳಲು ಅದನ್ನೆ ವಸ್ತು ಆಗಿ ನೀವು ಆಯ್ಕೆ ಮಾಡಿಕೊಳ್ಳಬಹುದು... ಹೀಗೇ...
ಕವಿತೆಗೆ ರೆಡಿ ಚೌಕಟ್ಟುಗಳು, ಸ್ಕೆಲೆಟನ್ ಗಳು ಇವೆಯಾ? ಅವುಗಳನ್ನು ನಾವು ಅಳವಡಿಸಿಕೊಳ್ಳಬಹುದಾ?
ಕವಿತೆಗೆ ರೆಡಿ ಚೌಕಟ್ಟುಗಳು ಇವೆ. ಈಗ ನೋಡಿ ಕತ್ತೆ ಮತ್ತು ಧರ್‍ಮ ಒಂದು ಕಥನಕವಿತೆ, ಆದರೆ ಅದು ಬರೆಯಲ್ಪಟ್ಟಿರುವುದು ತ್ರಿಪದಿ ಛಂದಸ್ಸಿನಲ್ಲಿ. ಇದೊಂದು ಚೌಕಟ್ಟು. ದ್ವಿಪದಿ, ಚೌಪದಿ, ಅಷ್ಟಷಟ್ಪದಿ ಇವೆಲ್ಲ ಅಂತಹ ಚೌಕಟ್ಟುಗಳು. ಆಧುನಿಕ ಗಪದ್ಯಗಳು ಹಲವಾರು ಚೌಕಟ್ಟುಗಳನ್ನು ಪ್ರಯೋಗಿಸಿವೆ. ಎಷ್ಟೋ ಚೌಕಟ್ಟುಗಳು ಪ್ರಯೋಗ ಆಗಿರುವುವನ್ನು ನಾವಿನ್ನೂ ನಿರ್ವಚನವೇ ಮಾಡಿಕೊಂಡಿಲ್ಲ. ನೋಡಿ ನಮ್ಮಲ್ಲಿ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಅಷ್ಟಷಟ್ಪದಿ, ರಗಳೆ, ಮಹಾಕಾವ್ಯ ಮಾತ್ರವಲ್ಲ ನಮ್ಮಲ್ಲಿ ಭಾವಗೀತೆ, ಶೋಕಗೀತೆ, ರುಬಾಯತ್, ಸವಾಲ್ ಜವಾಬ್, ಲಾವಣಿ, ಪ್ರಾರ್ಥನೆ, ಸ್ವಗತ ಮಾದರಿಯ ಪದ್ಯಗಳೂ ಇವೆ. ಹಾಯ್ಕು, ಶಾಯಿರಿ, ಗಜಲ್, ಚುಟುಕ ಇತ್ಯಾದಿ ಚೌಕಟ್ಟು, ಸ್ಕೆಲೆಟನ್ನುಗಳೂ ಇವೆ. ಇವು ಮತ್ತೆ ಮತ್ತೆ ನಮ್ಮಲ್ಲಿ ಪ್ರಯೋಗ ಆಗ್ತಾ ಇವೆ. ಹೊಸವು ಕೂಡ ಪ್ರಯೋಗ ಆಗ್ತಾ ಇವೆ.
ಕವಿಗೆ ಬರೆಯಲು ಹೊರಟಾಗ ನಾವು ಯಾವ ಛಂದಸ್ಸುಗಳನ್ನು ಬಳಸಬೇಕು ಎನ್ನುವುದೂ ಮುಖ್ಯವೇ. ಆದರೆ ಕವಿಯಾದವನು ತನ್ನದೇ ಚೌಕಟ್ಟುಗಳನ್ನು, ಛಂದಸ್ಸುಗಳನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಹೊಸತನ ಬರಿ ಕಂಟೆಂಟಲ್ಲಿ ಮಾತ್ರ ಇರಲ್ಲ. ಅದು ಚೌಕಟ್ಟಿಗೂ ಸಂಬಂಧಿಸಿದ ವಿಚಾರ ಅಂತ ನಾನು ಈಗಾಗಲೇ ಹೇಳಿದ್ದೀನಿ. ಬೇರೆಯವರು ಬಳಸಿರುವ ಚೌಕಟ್ಟುಗಳನ್ನು ನಾವು ಅಳವಡಿಸಿಕೊಳ್ಳಬಹುದಾ ಅಂದರೆ ಅದಕ್ಕೆ ಹಾಗೆ ಪೇಟೆಂಟ್ ಇಲ್ಲ. ಆದರೆ ಬೇರೆಯವರ ಚೌಕಟ್ಟುಗಳನ್ನು ನಾವು ನೋಡಬೇಕು, ಅವುಗಳಿಗಿಂತ ಭಿನ್ನವಾದ ಹೊಸ ಚೌಕಟ್ಟುಗಳನ್ನು ಕಟ್ಟಿಕೊಳ್ಳಬೇಕು. ಅನುಕರಿಸಿದರೆ ಜಡತ್ವ, ಏಕತಾನತೆ ಉಂಟಾಗುತ್ತದೆ.
ಇನ್ನೊಂದು ಮಾತು: ನೋಡಿ ಜನಪ್ರಿಯ ಚಿತ್ರಗೀತೆಗಳು ಇದಾವಲ್ಲ, ಅವುಗಳ ರಾಗ, ತಾಳ, ಲಯ, ಮಟ್ಟಿಗೆ ಅನುಗುಣವಾಗಿ ನಮ್ಮದೇ ಸಾಹಿತ್ಯ ತೊಡಿಸುವ ಕೆಲಸ ಕೂಡ ನಮ್ಮಲ್ಲಿ ಸಾಕಷ್ಟು ನಡೀತಾಯಿದೆ. ಉದಾಹರಣೆಗೆ ’ಬೆಳ್ಳಿರಥದಲೀ ಮೂಡಿ ಬಂದ ಕಿರಣಾ’ ಅಂತ ಒಂದು ಸಾಲಿದೆ ಅಂದರೆ ಅದನ್ನೆ ಅನುಸರಿಸಿ ಯಾರೋ ಒಬ್ಬರು ’ನನ್ನ ಎದೆಯಲೀ ನಿನ್ನ ನೆನಪ ತನನಾ’ ಅಂತ ಒಂದು ಸಾಲು ಕಟ್ಟಬಹುದು. ನಾನೊಂದು ತೀರಾ ನೀನೊಂದು ತೀರಾ’ ಅನ್ನೋ ಸಾಲನ್ನ ಯಾರೋ ಒಬ್ಬಾಕೆ ತಗೊಂಡು ’ನಾ ನೊಂದು ಲೋಕಾ ನೀ ನೊಂದು ಲೋಕಾ, ಮನಸು ಮನಸು ಧೋಕಾ’ ಅಂತ ಬರೀಬಹುದು. ಇಂಥ ರಚನೆಗಳಿಗೆ ನಮ್ಮಲ್ಲಿ ಲೆಕ್ಕವಿಲ್ಲ. ಆಧುನಿಕ ಕವಿತೆಗಳಲ್ಲೂ ಬಳಕೆ ಆಗಿರುವ ಮಟ್ಟು, ಲಯಗಳನ್ನ ಅನುಸರಿಸಿ ತಮ್ಮದೇ ಮಾತು ತುಂಬಿ ಬರೆಯುವುದು ಸಾಕಷ್ಟು ನಡೆದಿದೆ. ಕೆಲವು ನಮಗೆ ಗೊತ್ತಾಗ್ತವೆ. ಕೆಲವು ಗೊತ್ತಾಗಲ್ಲ. ಆದರೂ ಅದೆಲ್ಲ ಅನುಕರಣೆ ಅಷ್ಟೆ. ನಾವೆಲ್ಲ ಯೋಚನೆ ಮಾಡಬೇಕಾಗಿರೋದು ಅನುಕರಣೆ ಹೇಗೆ ಮಾಡಬೇಕು ಅಂತ ಅಲ್ಲ; ಸ್ವತಂತ್ರ ರಚನೆ ಹೇಗೆ ಮಾಡಬೇಕು ಅಂತ. ಸ್ವರಚಿತ ಅಂದರೆ ಅದು ಬರಿ ಅನುಭವ ಅಥವಾ ಕಂಟೆಂಟಿಗೆ ಸಂಬಂಧಿಸಿದ ಮಾತು ಅಲ್ಲ. ಅದು ಛಂದಸ್ಸು, ಚೌಕಟ್ಟು, ಧಾಟಿ, ಭಾಷೆ, ಲಯಗಳಿಗೆ ಸಂಬಂಧಿಸಿದ್ದು ಕೂಡ.
ಕವಿತೆಗೆ ರಾಗ ಇರಬೇಕಾ? ತಾಳ ಇರಬೇಕಾ? ಗದ್ಯದ ಥರ ಬರೆದರೂ ಅದು ಕವಿತೆ ಆಗುತ್ತದಾ? ಗದ್ಯ ಮತ್ತು ಪದ್ಯದ ವ್ಯತ್ಯಾಸಗಳನ್ನು ಸರಿಯಾಗಿ ಹೇಳಿ.
ನಮ್ಮಲ್ಲಿ ಗದ್ಯ ಪದ್ಯ ಗಪದ್ಯ ಹೀಗೆಲ್ಲ ಇವೆ. ಈವಾಗ ನಾವು ಮಾತಾಡಿದ್ದನ್ನೆ ಹಾಗೇ ಬರೆದರೆ ಅದು ಗದ್ಯ, ಅದನ್ನ ಮುರಿದು ಕೆಲವು ನಿರ್ದಿಷ್ಟವಾದ ಲಯಗಳಲ್ಲಿ ಹಿಡಿದಿಟ್ಟರೆ ಅದೇ ಪದ್ಯ. ರಾಗ ತಾಳ ಬದ್ಧವಾಗಿ ನಮ್ಮಲ್ಲಿ ಹಾಡುಗಳನ್ನು ಬರೆದಿರುವುದು ಉಂಟು. ಹಾಗಂತ ರಾಗ ತಾಳ ಇದ್ದರೆ ಮಾತ್ರ ಅದು ಕವಿತೆ ಅಂತಲ್ಲ. ನಮ್ಮಲ್ಲಿ ಚಿತ್ರಗೀತೆ, ಭಾವಗೀತೆ, ಹೋರಾಟದ ಹಾಡು, ದೇವರನಾಮ, ಆಚರಣೆಯ ಹಾಡುಗಳು ಹೀಗೆ ಹಾಡುಗಳಲ್ಲೆ ಹತ್ತು ಹಲವು ವಿಧಗಳು ಇದಾವೆ. ಹಾಗೆಯೆ ಗಪದ್ಯಗಳಲ್ಲೂ ಹತ್ತು ಹಲವು ರೀತಿಯ ಪ್ರಯೋಗಗಳು ಆಗಿದಾವೆ. ಅವನ್ನೆಲ್ಲ ನೋಡಿ, ನಿಮ್ಮ ರೀತಿಯನ್ನು ನೀವು ರೂಢಿಸಿಕೊಳ್ಳಿ.
ಗದ್ಯದ ಥರ ಬರೆದರೆ ಕವಿತೆ ಆಗಲ್ಲ. ಕೆಲವರು ಉದ್ದಕ್ಕೆ ಬರೆದರೆ ಗದ್ಯ, ಆ ಗದ್ಯವನ್ನೆ ಚಿಕ್ಕ ಚಿಕ್ಕ ಸಾಲಾಗಿ ಮುರಿದು ಬರೆದರೆ ಅದೆ ಕವಿತೆ ಆಗ್ತದೆ ಅಂತ ಭಾವಿಸಿದ್ದಾರೆ. ಅದು ತಪ್ಪು. ನಾನು ಸಂತೆಗೆ ಹೋಗುತ್ತೇನೆ ಅನ್ನುವುದು ಗದ್ಯದ ಕ್ರಮ. ಹೋಗುತ್ತೇನೆ ನಾನು ಸಂತೆಗೆ ಅನ್ನುವುದು ಪದ್ಯದ ಕ್ರಮ. ಕಾವ್ಯದಲ್ಲಿ ಗತಿ, ಲಯ ಮುಖ್ಯ. ಗದ್ಯಕ್ಕೆ ಪದ್ಯಕ್ಕೆ ಬೇರೆ ಬೇರೆ ಥರ ಗತಿ, ಲಯ ಇರ್‍ತವೆ. ಕತೆ, ಕಾದಂಬರಿ, ವಿಚಾರಪ್ರಬಂಧ ಇಂಥವು ಗದ್ಯದ ಮಾದರಿಗಳು. ಮೇಲೆ ಹೇಳಿದ ಕಾವ್ಯದ ಮಾದರಿಗಳು ಹಲವಾರು ಇವೆ. ಇಂತಹ ಹಲವಾರು ವ್ಯತ್ಯಾಸಗಳು ಗದ್ಯಪದ್ಯಗಳ ನಡುವೆ ಇವೆ. ಹಾಗೆ ನೋಡಿದರೆ ಒಂದು ಅತ್ಯುತ್ತಮ ಕಾವ್ಯದ ಕ್ರಮ ಅನ್ನುವುದು ಇಲ್ಲ.
ಪ್ರಥಮ ಬಾರಿಗೆ ಕವಿತೆ ಬರೆಯುವವರು ಹೇಗೆ ಬರೆಯಬೇಕು? ಯಾವ ವಿಚಾರಗಳಿಗೆ ಹೆಚ್ಚು ಗಮನ ಕೊಡಬೇಕು? ನಮ್ಮ ಕವಿತೆಯ ಮಾದರಿಯನ್ನಾಗಿ ಯಾರನ್ನು, ಯಾವನ್ನು ಇಟ್ಟುಕೊಳ್ಳಬೇಕು?
ಫಸ್ಟ್ ಟೈಮ್ ಕವಿತೆ ಬರೆಯಲು ಹೊರಡುವವರು ಮೊದಲು ತಮ್ಮ ಮನಸ್ಸಿನಲ್ಲೆ ಕವಿತೆ ಬರೆಯಬೇಕು. ಆಮೇಲೆ ಅದನ್ನು ಅಕ್ಷರಕ್ಕೆ ಇಳಿಸಲು ಚಿಂತಿಸಬೇಕು. ಬರೆದದ್ದೆಲ್ಲ ಕವಿತೆ ಆಗದೆ ಇರಬಹುದು. ಹೇಗೆ ಬರೀಬೇಕು ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಲ್ಲದಿರಬಹುದು. ಹೇಗೆ ಬರೀಬೇಕು ಅಂದರೆ ತನ್ನ ಕವಿತೆಯ ವಿಚಾರ, ಅಂದಾಜು ಗಾತ್ರ ಮತ್ತು ಮಂಡನಾಕ್ರಮ ಈ ಬಗ್ಗೆ ಯೋಚಿಸಿ ಮನಸ್ಸಿನಲ್ಲೆ ಒಂದು ತಿಳಿವಳಿಕೆಗೆ ಮೊದಲು ಕವಿ ಬರಬೇಕು. ಆಮೇಲೆ ಬರೀಬೇಕು. ಬರೆಯೋಕೆ ಆಗದೆ ಇದ್ದರೆ ಓರಲ್ಲಾಗಿಯೂ ಕಟ್ಟಿ ಹೇಳಬಹುದು. ನಮ್ಮ ಎಷ್ಟೋ ಜನ ಹಾಗೆ ಓರಲ್ಲಾಗೆ ಕಟ್ತಾರೆ. ಬರೆಯದೆ ಗೆಳೆಯರಿಗೆ ಹಾಗೆ ಹಾಗೇ ಬಾಯಲ್ಲೇ ಕವಿತೆ ಹೇಳಿ ಶಹಬ್ಬಾಸಗಿರಿ ಪಡೆಯವುದೂ ಉಂಟು. ಫಸ್ಟ್ ಟೈಮ್ ಕವಿತೆ ಬರೆಯುವವರು ಹೀಗೆ ಮೊದಲು ಮೌಖಿಕವಾಗಿ ಕಟ್ಟಿ ಆನಂತರ ಬರಹಕ್ಕೆ ಇಳಿಸುವುದು ಒಳ್ಳೆಯದು. ಹಾಗೆ ಮಾಡುವಾಗ ಸಾಕಷ್ಟು ಏನು ಕಟ್ಟಬೇಕು; ಹೇಗೆ ಕಟ್ಟಬೇಕು; ಯಾಕೆ ಕಟ್ಟಬೇಕು ಇತ್ಯಾದಿಗಳನ್ನು ಯೋಚಿಸುವುದು ಒಳ್ಳೆಯದು.
ಬಿಗಿನ್ನರ್‍ಸ್ ಸಾಮನ್ಯವಾಗಿ ಏನು ಮಾಡ್ತಾರೆ ಅಂದ್ರೆ ಅಣಕುವಾಡು ಬರೀತಾರೆ. ಹಕ್ಕಿ ಹಾರುತಿದೆ ನೋಡಿದಿರಾ ಅಂತ ಬೇಂದ್ರೆ ಬರೆದರೆ ಇನ್ನೊಬ್ಬರು ಕಾಗೆ ಹಾರುತಿದೆ ನೋಡಿದಿರಾ ಅಂತ ಬರೆಯಬಹುದು. ದೇವರು ರುಜು ಮಾಡಿದನು ಅಂತ ಕುವೆಂಪು ಬರೆದರೆ ಇನ್ನೊಬ್ಬರು ಜಾಫರು ರಜೆ ಹಾಕಿದನು ಅಂತಲೊ; ಖೈದಿಗೆ ಸಜೆ ಮಾಡಿದನು ಅಂತಲೊ ಬರೀಬಹುದು. ಆಮೇಲೆ ನಿಮ್ಮದೇ ಧಾಟಿ ನೀವು ಕಂಡುಕೊಳ್ಳಬೇಕಾಗ್ತದೆ. ಬೇರೆಯವರನ್ನು ನೋಡಿ ಬರೆಯೋದು ಯಾಕೆ ಅಂದರೆ ಅವರನ್ನ ಮೀರಿ ನಿಮ್ಮ ಥರ ನೀವು ಬರಿಯೋಕೆ. ಬರೀ ಇನ್ನೊಬ್ಬರನ್ನ ನೋಡಿ ಅವರ ಥರಾನೆ ಬರೀತಾ ಇದ್ರೆ ನೀವು ಎವರ್‌ಗ್ರೀನ್ ಬಿಗಿನರ್ ಆಗಿಯೇ ಇರ್‍ತೀರ ಅಷ್ಟೆ.
ಬಿಗಿನ್ನರ್‍ಸ್ ಯಾವಾಗಲೂ ಸಾಮಾನ್ಯವಾಗಿ ಪ್ರೀತಿ ಪ್ರೇಮ ಇತ್ಯಾದಿಗಳ ಬಗ್ಗೆ ಬರೀತಾರೆ. ಅವುಗಳ ಬಗ್ಗೆ ಬರೀಬಾರದು ಅಂತಲ್ಲ. ಅದೇ ಕಾವ್ಯದ ವಸ್ತುಲೋಕ ಅಲ್ಲ. ನಿಮ್ಮ ಮನೆ, ಕುಟುಂಬ ಪರಿವಾರ, ಊರು, ರಾಜ್ಯ, ದೇಶ, ಲೋಕ ಹೀಗೆ ನಿಮ್ಮ ದೃಷ್ಟಿ ಎಲ್ಲ ಕಡೆಗೂ ನಡೆಯುವ ವಿದ್ಯಮಾನಗಳನ್ನು ಗಮನಿಸಬೇಕು. ಅವುಗಳಲ್ಲಿ ಲೋಪ ಇವೆಯಾ ನೋಡಬೇಕು. ಉತ್ತಮ ಮಾದರಿ ನಡೆ ಇದೆಯಾ ನೋಡಬೇಕು. ಅವುಗಳನ್ನು ಆಯ್ದು ಬರೀಬೇಕು. ನೀವು ಯಾವ ಪ್ರಕಾರ, ರೀತಿ, ಧಾಟಿ ಬಳಸಬೇಕು ಎನ್ನುವುದನ್ನೂ ಚಿಂತಿಸಬೇಕು. ನಿರ್ಧರಿಸಬೇಕು.
ಇನ್ನು ನಿಮ್ಮ ಮಾದರಿಯನ್ನಾಗಿ ಯಾರನ್ನೂ ಇಟ್ಟುಕೊಳ್ಳಬಾರದು. ನಾವೆಲ್ಲ ಗೆಳೆಯರು ಪಿ.ಯು., ಬಿ.ಎ. ಮಾಡುವ ಕಾಲಕ್ಕೆ ಕ್ರೈಸ್ಟ್ ಕಾಲೇಜಿನ ಸ್ಪರ್ಧೆಗಳಿಗೆ ಕವಿತೆ ಕಳಿಸಿ ಆಯ್ಕೆ ಆಗಿದ್ವಿ. ಆಗೆಲ್ಲ ನಮಗೆ ಹೇಗೆ ಬರೆಯಬೇಕು; ಯಾರನ್ನು ಮಾದರಿಯಾಗಿ ಇರಿಸಿಕೊಳ್ಳಬೇಕು ಎಂಬ ಬಗ್ಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ. ನಮಗೆ ನಮ್ಮ ನಮ್ಮ ಜನಪದ ಮಟ್ಟುಗಳು, ಚಿತ್ರಗೀತೆಗಳು, ಶಿಕ್ಷಣ ಪಠ್ಯಗಳಲ್ಲಿದ್ದ ಕವಿತೆಗಳೇ ಮಾದರಿ ಆಗಿದ್ದುವು. ಆದರೆ ಅವೆಲ್ಲ ಅನುಕರಿಸಬಾರದ ಮಾದರಿಗಳು ಅಂತ ಆವಾಗ ನಮಗೆ ಗೊತ್ತಿರಲಿಲ್ಲ. ಹಾಗಾಗಿ ನಮಗೆ ನಮ್ಮದೇ ಸ್ವಂತಿಕೆ ರೂಪಿಸಿಕೊಳ್ಳುವುದು ಬಹಳವೇ ತಡವಾಯಿತು.
ಕಾವ್ಯ ರಚನೆಯ ಸಿದ್ಧತೆ ಹೇಗೆ ಮಾಡಿಕೊಳ್ಳುವುದು? ಏನೂ ಗೊತ್ತಿಲ್ಲದೆ ಕವಿತೆ ಬರೆಯುವುದು ಹೇಗೆ?
ಮೊದಲಿಗೆ ಕವಿ ಮನಸ್ಥಿತಿ ನಿಮ್ಮಲ್ಲಿ ಇರಬೇಕು. ಭಾಷಾ ಜ್ಞಾನ ಇರಬೇಕು. ಯಾವುದಾದರೂ ಕಾವ್ಯವನ್ನು ಹೇಗೆ ಬರೆಯಬಹುದು ಎಂಬ ಬಗ್ಗೆ ಸ್ವಲ್ಪ ಚಿಂತಿಸಿ ಒಂದು ಐಡಿಯಾ ಪಡಕೊಂಡಿರಬೇಕು. ಅನುಭವವನ್ನು, ತಿಳಿವಳಿಕೆಯನ್ನು ಕವಿತೆ ಮಾಡುವ ತಂತ್ರಗಳ ಬಗ್ಗೆ ಸ್ವಲ್ಪ ಯೋಚಿಸಿರಬೇಕು. ಹಾಡು ಬರೆಯಬೇಕಾ, ಗದ್ಯಾತ್ಮಕ ಕವಿತೆ ಬರೆಯಬೇಕಾ, ಚಿಕ್ಕ ಚಿಕ್ಕ ರಚನೆಯಾ, ಸುದೀರ್ಘ ರಚನೆಯಾ ಎಂಬ ಬಗ್ಗೆ ಯೋಚಿಸಿರಬೇಕು, ಇತ್ಯಾದಿ ಇತ್ಯಾದಿ...
ನೋಡ್ರೀ, ಏನ್ರೀ ಇದು! ಏನೂ ಗೊತ್ತಿಲ್ಲದ ಸ್ಥಿತಿ ಅನ್ನೋದು ಇರಲ್ಲ ಕಣ್ರಿ. ಎಲ್ಲರೂ ತಾಯಿ ಮಕ್ಕಳಾಗಿ ತೊಟ್ಟಿಲಲ್ಲಿ ಇರುವಾಗಲೇ ಶಿಶುಪ್ರಾಸಗಳನ್ನು ಕೇಳಿ ಬೆಳೆದಿರ್‍ತಾರೆ. ನೀವೆಲ್ಲ ಇಪ್ಪತ್ತಕ್ಕು ಹೆಚ್ಚು ವಯಸ್ಸಿನವರು ನಲವತ್ತಾಗಿರೋರೂ ಇದೀರ. ಇದುವರೆಗೆ ನೀವು ಒಂದಲ್ಲ ಒಂದು ಬಗೆಯ ಜನಪದ ಗೀತೆಗೊ, ಆಚರಣೆಯ ಹಾಡುಗಳಿಗೊ, ಚಿತ್ರಗೀತೆಗಳಿಗೊ, ಹರಿಕಥಾ ಹಾಡುಗಳಿಗೊ, ಪ್ರಾರ್ಥನೆಗೊ, ಶೈಕ್ಷಣಿಕ ಓದಿನಲ್ಲಿ ಹಲವಾರು ಬಗೆಯ ಆಧುನಿಕ ಕವಿತೆಗಳಿಗೊ ತೆರೆದುಕೊಂಡೇ ಇರ್‍ತೀರ. ಹಾಗಾಗಿ ನಿಮಗೆಲ್ಲ ಒಂದಲ್ಲ ಒಂದು ಕಾವ್ಯಕೋಶ ನಿಮ್ಮ ಮನಸ್ಸಿನಲ್ಲಿ ನಿರ್ಮಾಣ ಆಗಿರ್‍ತದೆ. ಒಂದಲ್ಲ ಒಂದು ಕಾವ್ಯಾನುಭವ ನಿಮಗೆ ಆಗಿರ್‍ತದೆ. ನಿಮಗೆ ನಿಮ್ಮದೇ ಮನೆ, ಊರು, ಓದು ಇವುಗಳಿಂದ ಬಂದಿರೋ ಭಾಷೆ ಇರ್‍ತವೆ. ಹಾಗಾಗಿ ಅವನ್ನೆ ಬಳಸಿ ಬರೆಯೋಕೆ ಯತ್ನಿಸಿ. ಆನಂತರ ನಿಮ್ಮದೇ ಶೈಲಿ ನೀವು ಕಂಡುಕೊಳ್ಳಬಹುದು.
ಈಗಾಗಲೇ ಇರುವ ಕನ್ನಡದ ಕವಿಗಳು ನಮ್ಮನ್ನು ಒಪ್ಪುವಂತೆ ಕವಿತೆ ಬರೆಯಲು ಏನು ಮಾಡಬೇಕು?
ಬೇರೆಯವರು ಒಪ್ತಾರೋ ಬಿಡ್ತಾರೋ ಆ ಬಗ್ಗೆ ಹೆಚ್ಚು ತಲೆ ಕೆಡಿಸ್ಕೋಬೇಡಿ, ನಿಮಗೆ ಪ್ರಾಮಾಣಿಕವಾಗಿ ಅನ್ನಿಸಿದ್ದನ್ನು ಬರೀತಾ ಹೋಗಿ ಅಷ್ಟೆ. ಮೊದಮೊದಲಿಗೆ ಬೇರೆಯವರು ಏನನ್ತಾರೊ ಅನ್ನೋ ಶಂಕೆ, ಗೊಂದಲ ಕಾಡುವುದು ಸಹಜ. ಬೇರೆಯವರು ಮೆಚ್ಚಲಿ ಅನ್ನಿಸುವುದು ಸಹಜ. ಆ ಬಗ್ಗೆ ಹೆಚ್ಚು ಚಿಂತಿಸಬೇಡಿ. ನೀವು ಅಂದುಕೊಂಡದ್ದನ್ನು ಹೇಳಲು ಆಗಿದೆಯಾ ಅನ್ನುವ ಬಗ್ಗೆ ಮೊದಲು ಹೆಚ್ಚು ಯೋಚಿಸಿ. ಮೊದಲಿಗೆ ವಿದ್ಯಾರ್ಥಿಗಳು ಕೆಲವರು ಇಲ್ಲಿ ಇದ್ದೀರ. ನಿಮ್ಮ ನಿಮ್ಮ ಮೇಷ್ಟ್ರುಗಳು ನಿಮ್ಮ ಪದ್ಯ ಮೆಚ್ಚಿಕೊಳ್ಳುವಂತೆ ಬರೀಬೇಕು ಅಂತ ತಲೆ ಕೆಡಿಸ್ಕೋಬೇಡಿ. ಅವರೆಲ್ಲ ಬಹುಪಾಲು ವಿಫಲ ಕವಿಗಳೆ ಆಗಿರ್‍ತಾರೆ. ಕೆಲವರಿಗಂತೂ ಮೀಮಾಂಸೆ ಗೊತ್ತಿರ್‍ತದೆ, ನಿಮ್ಮನ್ನ ರುಬ್ಬಿಹಾಕ್ತಾರೆ.
ಕವಿತೆ ಓಪನ್ ಎಂಡೆಡ್ ಆಗಿ ಇರಬೇಕಾ, ಕ್ಲೋಸಡ್ ಎಂಡೆಡ್ ಆಗಿ ಇರಬೇಕಾ?
ಯಾವ ಕವಿತೆಯೂ ಅಷ್ಟೆ ಯಾಕೆ ಯಾವ ಸಾಹಿತ್ಯ ಪ್ರಕಾರವೂ ಕ್ಲೋಸ್‌ಡ್ ಅಥವಾ ಡೆಡ್ ಎಂಡ್ ಆಗಿ ಇರಲು ಸಾಧ್ಯವಿಲ್ಲ. ಯಾವುದೇ ನುಡಿರಚನೆ ಸದಾ ಓಪನ್ ಎಂಡೆಡ್ ಆಗಿಯೆ ಇರುತ್ತದೆ. ನೀವು ಏನು ಬರೆದರೂ ಹೇಗೆ ಬರೆದರೂ ಅದು ಓಪನ್ ಎಂಡೆಡ್ಡೇ. ಕವಿತೆಯನ್ನು ಹೇಗೆ ಆರಂಭಿಸಬೇಕು, ಹೇಗೆ ಮುಗಿಸಬೇಕು ಅನ್ನುವುದೂ ಒಂದು ಕಾಮನ್‌ಸೆನ್ಸ್. ರೊಟ್ಟಿ ಎಲ್ಲಿಂದ ತಿನ್ನಲು ಆರಂಭಿಸಬೇಕು ಎಂಬಷ್ಟೆ ವಿಲಕ್ಷಣವಾದ ಪ್ರಶ್ನೆ ಇದು. ಅಸಂಖ್ಯ ಅನುಭವ ಮತ್ತು ಅಸಂಖ್ಯ ಆಲೋಚನಾಕ್ರಮಗಳು ಇರುವ ಹಾಗೆ ಅಸಂಖ್ಯ ಆದಿ ಅಂತ್ಯಗಳೂ ಇರುತ್ತವೆ. ಒಂದೊಂದು ರೆಡಿ ಚೌಕಟ್ಟಿಗೂ ಅದರದೇ ಆದ ಶರೀರಗಳು ಇರ್‍ತವೆ. ನಿಮ್ಮದೇ ಹೊಸ ಚೌಕಟ್ಟು ನೀವು ಸೃಷ್ಟಿಸಿದಾಗ ಅದರ ಶರೀರವನ್ನೂ ನೀವೇ ಸಿದ್ಧಪಡಿಸಬೇಕು.
ಯಾರೋ ಹೇಳಿದ ಘಟನೆಯನ್ನು ಬರೆಯಬಹುದೇ? ಸ್ವಾನುಭವವನ್ನೆ ಬರೆಯಬೇಕೇ?
ಕವಿ ಯಾರೋ ಹೇಳಿದ ಘಟನೆಯನ್ನು ಕೇಳಿ ತಿಳಿಯುವುದೂ ಅನುಭವವೆ. ನೋಡಿ ತಿಳಿಯುವುದೂ ಅನುಭವವೆ, ತಾನೇ ಜೀವನದಲ್ಲಿ ಅನುಭವಿಸಿದ್ದೂ ಅನುಭವವೆ. ಎಲ್ಲವನ್ನೂ ತಾನೆ ಅನುಭವಿಸಿರಬೇಕು ಅಂತಲ್ಲ. ಅನುಭವ ಅನ್ನೋದು ಎಲ್ಲ ಇಂದ್ರಿಯಾನುಭವಗಳನ್ನೂ ಮತ್ತು ಜ್ಞಾನ, ಅರಿವುಗಳನ್ನೂ ಒಳಗೊಂಡದ್ದು. ಅದನ್ನೆಲ್ಲ ಬಳಸಿಯೆ ಕವಿ ಕವಿತೆ ಕಟ್ಟಬೇಕು. ಅನುಭವ ಅಥವಾ ಸಾಮಾಜಿಕ ವಾಸ್ತವ ಮಾತ್ರ ಬಳಸಿದರೆ ಸಾಲದು; ಕವಿಯಾದವರು ಕಲ್ಪನೆಯನ್ನೂ ಯಥೇಚ್ಚವಾಗಿ ಮಾಡಿಕೊಳ್ಳಬೇಕಾಗುತ್ತದೆ. ಕಲ್ಪನೆಯನ್ನೆ ವಾಸ್ತವವಾಗಿ, ಮಾಂತ್ರಿಕ ವಾಸ್ತವ ಆಗಿ, ಮಾನವಾತೀತ ಆಗಿ ಹೀಗೆ ಹಲವಾರು ರೀತಿಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿದೆ. ಕವಿಗಳು ಸಾಮಾನ್ಯವಾಗಿ ಏನು ಮಾಡ್ತಾರೆ ಅಂದರೆ ಕೆಲವೊಮ್ಮೆ ತಮ್ಮ ತಮ್ಮ ಬಾಲ್ಯಕಾಲದ ಮೆಮರಿಗಳಿಗೆ ಹೋಗ್ತಾರೆ. ಅಲ್ಲಿಂದ ತಂದು ಬರೀತಾರೆ. ಕೆಲವರು ತಮ್ಮ ವರ್ತಮಾನದ ಬಿಕ್ಕಟ್ಟುಗಳನ್ನು ಕುರಿತು ಬರೀತಾರೆ. ಕೆಲವೊಮ್ಮೆ ತಮ್ಮ ತಂದೆ ತಾತ ಮುತ್ತಾತನ ಕಾಲಗಳ ಅನುಭವಗಳನ್ನೂ ಇಂದಿನ ವರ್ತಮಾನದ ಸಂಗತಿಗಳನ್ನೂ ಹೋಲಿಸಿ ಬರೀತಾರೆ. ಹಾಗೆ ಬರೆಯುವಾಗ ಓಹೋ ಆ ಹಳೆ ಕಾಲ ಚೆನ್ನಾಗಿತ್ತು; ಈ ಕಾಲ ಕೆಟ್ಟುಹೋಗಿದೆ ಅಂತಾನೂ ಬರೆಯಬಹುದು. ಸ್ವಾನುಭವ ಮಾತ್ರ ಬರೀಬೇಕು ಅಂತೇನಿಲ್ಲ. ಅಲ್ಲದೆ ವ್ಯಕ್ತಿಯ ಅನುಭವ ಸಮುದಾಯದ ಅನುಭವ ಆಗಿ ಜಿಗಿತ ಪಡೆಯುವದೂ ಆಗಬೇಕು.
ಪ್ರಾಸಗಳನ್ನು ಬಳಸಬೇಕಾ? ಅವುಗಳಿಗೆ ಎಷ್ಟು ಮಾನ್ಯತೆ ಕೊಡಬೇಕು?
ಅಯ್ಯೋ ನೋಡ್ರೀ ಪ್ರಾಸಗಳನ್ನು ಬಳಸಬೇಕಾ, ಬಳಸಿ. ಬಿಡಬೇಕಾ, ಬಿಡಿ. ಅದು ನಿಮ್ಮ ಮತ್ತು ನಿಮ್ಮ ಕವಿತೆಯ ಆಯ್ಕೆ. ಆದರೆ ಪ್ರಾಸಕ್ಕಾಗಿ ಪ್ರಾಸ, ಅನಗತ್ಯವಾಗಿ ಪ್ರಾಸ ಕವಿತೆಯಲ್ಲಿ ತರಬಾರದು. ಪ್ರಾಸವೇ ಪದ್ಯದ ಅರ್ಥ, ಭಾವ, ವಿಚಾರ ನಿರ್ಧರಿಸಬಾರದು. ಹಾಗಾದಾಗ ಅದು ಒಳ್ಳೆಯ ಕವಿತೆ ಆಗಲು ಸಾಧ್ಯವಿಲ್ಲ. ಪ್ರಾಸಗಳಿಗೆ ಅತಿಯಾದ ಮಾನ್ಯತೆ ಕೊಡುವ ಅಗತ್ಯವಿಲ್ಲ. ಪ್ರಾಸವಿಲ್ಲದೆ ಕವಿತೆ ಬರೆಯಬಹುದು. ಹಾಡು ಬರೆಯುವಾಗ ಪ್ರಾಸ ಇದ್ದರೆ ಚೆನ್ನ. ಪ್ರಾಸ ಇಲ್ಲದ ಹಾಡು ಬರೀತೀವಿ ಅಂದರೂ ಬರೀರಿ. ಅದೂ ಒಂದು ಹೊಸ ಪ್ರಯೋಗ ಆದೀತು.
ಮಾತ್ರೆ, ಗಣ, ಛಂದಸ್ಸು ಇವೆಲ್ಲ ಪದ್ಯದಲ್ಲಿ ಇರಬೇಕೇ? ಹೇಗಿರಬೇಕು? ಅವು ಗೊತ್ತಿಲ್ಲದೆ ಪದ್ಯ ಬರೆಯಬಾರದಂತೆ ಹೌದೇ? ಕವಿತೆಗೆ ಉತ್ತಮವಾದ ಛಂದಸ್ಸು ಯಾವುದು? ಮುಕ್ತಛಂದಸ್ಸು ಅಂತಾರಲ್ಲ ಹಾಗಂದರೆ ಏನು?
ಮಾತ್ರೆ, ಗಣ, ಛಂದಸ್ಸು ಇವೆಲ್ಲ ಪದ್ಯದಲ್ಲಿ ಇರಬೇಕು ಅಂತೇನಿಲ್ಲ. ಆದರೆ ನೀವು ಬರೆಯಲು ಭಾಷೆ ಬಳಸಿದ ಕೂಡಲೆ ಅಲ್ಲಿ ಮಾತ್ರೆ, ಗಣ, ಛಂದಸ್ಸು ಇದ್ದೇ ಇರ್‍ತವೆ. ಅವೆಲ್ಲ ಇಲ್ಲದ ಪದಗಳೆ ಇಲ್ಲ. ಆಧುನಿಕ ಕವಿತೆಗೆ ನಾವು ಶಾಸ್ತ್ರೀಯವಾಗಿ ನಿರ್ವಚಿಸಿಕೊಂಡ ಇಂಥದ್ದೇ ಛಂದಸ್ಸು ಅಂತ ಬಳಸಿಲ್ಲ. ಹತ್ತೆಂಟು ಛಂದಸ್ಸುಗಳನ್ನು ಸೃಷ್ಟಿಸಿ ಬಳಸಿದ್ದೇವೆ. ಅವನ್ನೆಲ್ಲ ಅಧ್ಯಯನ ಮಾಡಿ ಗುರ್ತಿಸಿಕೊಳ್ಳಬೇಕಿದೆ. ಅದರಿಂದ ಕವಿಗಳಿಗೆ ಹೆಚ್ಚೇನೂ ಪ್ರಯೋಜನ ಆಗಲಾರದು. ಅದೆಲ್ಲ ವಿದ್ವಾಂಸರ ಹೊಟ್ಟೆಪಾಡು ಬಿಡಿ. ಕವಿತೆಗೆ ಉತ್ತಮವಾದ ಛಂದಸ್ಸು ಇಂಥದ್ದು ಅಂತ ಇಲ್ಲ. ಛಂದಸ್ಸು ಇಲ್ಲದೆ ಕವಿತೆ ಬರೆಯಬಾರದು ಅಂತೇನಿಲ್ಲ. ಈಗಾಗಲೇ ಬಳಸಿರುವ ಛಂದಸ್ಸನ್ನೆ ಕಲಿತು; ಅದರಲ್ಲೆ ಬರೆಯಬೇಕು ಎಂಬ ನಿಯಮ ಏನೂ ಇಲ್ಲ. ನಾವು ಏನು ಬರೆದರೂ ಅಲ್ಲಿ ಯಾವುದೋ ಒಂದು ಛಂದಸ್ಸು ಇರ್‍ತದೆ. ಮುಕ್ತ ಛಂದಸ್ಸು ಅಂದರೆ ಕಟ್ಟುನಿಟ್ಟಾದ ನಿಯಮಗಳು ಇಲ್ಲದ ಛಂದಸ್ಸು. ಮುಕ್ತಛಂದಸ್ಸು ಅನ್ನುವುದು ಒಂದಲ್ಲ ಹತ್ತೆಂಟು. ನಾನು ಆಗಲೆ ಹೇಳಿದೆನಲ್ಲ ಅವುಗಳನ್ನು ಇನ್ನೂ ನಾವು ನಿರ್ವಚಿಸಿಕೊಂಡಿಲ್ಲ.
ಕವಿತೆಯನ್ನು ಬರೆಯುವಾಗ ಇನ್ನೊಬ್ಬರ ಕವಿತೆಯನ್ನು ನೋಡಿ ಇನ್ಸ್‌ಪೈರ್ ಆಗಿ ಅವರ ಕವಿತೆಯ ಒಂದಿಷ್ಟು ಭಾಗ ಬಳಸಿಕೊಂಡು ಕವಿತೆ ಬರೆಯಬಹುದಾ? ನನಗೆ ಬೇರೆ ಕವಿಗಳ ಪದ್ಯ ಓದಿದಾಗ, ಅವು ಇಷ್ಟ ಆದರೆ ಅಲ್ಲಿನ ಕೆಲವು ಪದಗಳನ್ನು, ರೀತಿಯನ್ನು ಕದಿಯಬೇಕು, ಅನುಕರಣೆ ಮಾಡಬೇಕು ಅನ್ನಿಸುತ್ತೆ. ಇದು ತಪ್ಪಾ? ಇನ್ನೊಬ್ಬರ ಥರನೆ ನಾನೂ ನನಗನ್ನಿಸಿದ್ದು ಬರೆದರೆ ತಪ್ಪಾ?
ಬರೆಯಬಹುದು. ಇನ್ನೊಬ್ಬರ ಕವಿತೆ ನೋಡಿ ಇನ್ಸ್‌ಪೈರ್ ಆಗಿ ಬರೆಯುವುದು ತಪ್ಪೇನೂ ಅಲ್ಲ. ಆದರೆ ಅದು ಕೇವಲ ಸ್ಪೂರ್ತಿ ಅಷ್ಟೇ ಆಗಬೇಕು. ಯಾರದ್ದೋ ಸಾಲುಗಳನ್ನು ನಮ್ಮದು ಎಂಬಂತೆ ಬರೆಯುವುದು ತರವಲ್ಲ. ಹಾಗೆ ಇನ್ನೊಬ್ಬರ ಸಾಲುಗಳನ್ನು ಬಳಸಿದಾಗ ಅವಕ್ಕೆ ಕೋಟ್ ಹಾಕುವುದು ಒಳ್ಳೆಯದು. ಕೋಟ್ ಹಾಕದೆ ಅವರಿವರ ಕವಿತೆಯ ತುಣುಕುಗಳನ್ನೆ ಕದ್ದು ಕತ್ತರಿಸಿ ಅಂಟಿಸಿ ಪದ್ಯ ಮಾಡುವುದು ಕೃತಿಚೌರ್‍ಯ. ಇನ್ನೊಬ್ಬರ ಥರನೆ ನೀವೂ ನಿಮಗೆ ಅನ್ನಿಸಿದ್ದು ಬರೆದರೆ ತಪ್ಪಲ್ಲ. ಇನ್ನೊಬ್ಬರ ಥರಾನೇ ಬರೆದರೆ ನಿಮ್ಮ ಸ್ವಂತಿಕೆ ಏನು ಉಳಿಯುತ್ತದೆ? ಇನ್ನೊಬ್ಬರದು ನಿಮ್ಮದಾಗಲು ಹೇಗೆ ಸಾಧ್ಯ? ಆದರೆ ಯಾವುದೋ ಒಂದು ಕವಿತೆಯಿಂದ ನೀವು ಪ್ರೇರಣೆ ಪಡೆದು ಇಲ್ಲವೆ ಸ್ಪೂರ್ತಿ ಪಡೆದು ನೀವು ಬೇರೊಂದು ಕವಿತೆ ಬರೆದರೆ ಅದೆಲ್ಲ ಒಳ್ಳೆಯದೇ. ಅಲ್ಲೂ ಅನುಕರಣೆ ಸಲ್ಲದು. ನಿಮ್ಮದೇ ಅನುಭವ, ನಿಮ್ಮದೇ ಕಟ್ಟಾಣಿಕೆ ಇದ್ದರೆ ನೀವೂ ಒಬ್ಬ ಕವಿ ಅಂತ ಕರೆಸಿಕೊಳ್ಳುತ್ತೀರಿ; ಇಲ್ಲದಿದ್ದರೆ ಹನ್ನೊಂದರಲ್ಲಿ ಇನ್ನೊಂದಾಗುತ್ತೀರಿ. ನೀವು ಯಾರನ್ನು ಅನುಕರಿಸುತ್ತೀರೋ ಅವರು ದೊಡ್ಡವರೆನಿಸುತ್ತಾರೆ.
ಕನ್ನಡದಲ್ಲಿ ನವೋದಯ ನವ್ಯ ದಲಿತ ಬಂಡಾಯ ಸ್ತ್ರೀವಾದಿ ಹೀಗೆ ಕಾವ್ಯದ ಕಾಲಘಟ್ಟಗಳು ಇವೆ. ಈಗ ಯಾವುದು ಇದೆ? ನಾವು ಇವುಗಳಲ್ಲಿ ಯಾವ ರೀತಿ ಬರೀಬೇಕು? ಈಗೇನಾದರೂ ಹೊಸ ರೀತಿ ಬರೆಯುವ ಧಾಟಿ ಬಂದಿದೆಯಾ?
ನವೋದಯ, ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ ಇವೆಲ್ಲ ಕಾವ್ಯದ ಕಾಲಘಟ್ಟಗಳಲ್ಲ. ಇವೆಲ್ಲ ಕಾವ್ಯ ಬರೆವಣಿಗೆಯ ಸಂವೇದನೆಗಳು. ಅಂದರೆ ಭಿನ್ನ ಕಾವ್ಯ ಬರೆವಣಿಗೆಯ ಕ್ರಮಗಳು. ಇವಾದ ಮೇಲೆ ಈಗ ಒಂದು ನಿರ್ದಿಷ್ಟ ಬರೆಯುವ ಧಾಟಿ ಅನ್ನುವುದು ಇಲ್ಲ. ಹಲವಾರು ಜನ ಹಲವಾರು ರೀತಿಗಳಲ್ಲಿ ಬರೆಯುತ್ತಿದ್ದಾರೆ. ಒಬ್ಬೊಬ್ಬರೆ ಹಲವು ಧಾಟಿ ಸಂವೇದನೆಗಳಲ್ಲೂ ಬರೆಯುತ್ತಿದ್ದಾರೆ. ಕಂಬಾರ, ಶಿವಪ್ರಕಾಶ್, ಸಿದ್ಧಲಿಂಗ ಪಟ್ಟಣಶೆಟ್ಟಿ, ಎಸ್.ಜಿ.ಸಿದ್ಧರಾಮಯ್ಯ ಅವರ ಕಾವ್ಯ ನೋಡಿದರೆ ಇದು ನಿಮಗೆ ತಿಳಿಯುತ್ತದೆ. ಅಂದರೆ ನವೋದಯ, ನವ್ಯ, ಬಂಡಾಯ ಎಲ್ಲ ಧಾಟಿಗಳಲ್ಲೂ ಇವರು ಬರೆದಿದ್ದಾರೆ. ಕೆ.ವಿ. ತಿರುಮಲೇಶ್, ಕೆ.ಎಸ್. ನರಸಿಂಹಸ್ವಾಮಿ, ಕಣವಿ, ಸ.ಉಷಾ, ಲಕ್ಷ್ಮೀಪತಿ ಕೋಲಾರ ಇವರನ್ನೆಲ್ಲ ನವೋದಯ ನವ್ಯ ಬಂಡಾಯ ಅಂತ ಒಂದೊಂದೆ ಚೀಲಕ್ಕೆ ಹಾಕೋಕೆ ಆಗಲ್ಲ. ಆದಾಗ್ಯೂ ಆಧುನಿಕ ಕನ್ನಡ ಕಾವ್ಯ ಜಡ ಆಗಿದೆ. ಅದನ್ನ ಬದಲಿಸಬೇಕು. ನೀವು ಇವುಗಳಲ್ಲಿ ಯಾವುದನ್ನೂ ಅನುಕರಿಸಬಾರದು. ಹೊಸತಾಗಿ ಬರೆಯಬೇಕು. ಹೊಸ ಚೌಕಟ್ಟುಗಳನ್ನು ಹುಡುಕಬೇಕು.
ಪ್ರಸ್ತುತ ದಿನಮಾನಗಳಲ್ಲಿ ಲೇಖಕರ, ಕವಿತೆಗಾರರ ಬಂಧನ ಆಗುತ್ತಿದೆಯಲ್ಲ! ಕೊಲೆ ಆಗುತ್ತಿದೆಯಲ್ಲ! ಹಾಗಾದರೆ ನಮ್ಮ ಭಾಷೆ ಮತ್ತು ವಸ್ತು ಹೇಗಿರಬೇಕು?
ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಪ್ರಶ್ನಿಸುವುದಕ್ಕೆ ಸಾಹಿತ್ಯ ಇರುವುದು. ಯಾರೋ ನಮ್ಮನ್ನು ಬಂಧಿಸ್ತಾರೆ, ಕೊಲ್ತಾರೆ ಅಂತ ಹೆದರಿಕೊಂಡು ಕೂತರೆ ಏನೂ ಬರೆಯೋಕೆ ಆಗಲ್ಲ. ಯಂಗ್ ಮೈಂಡ್ಸ್ ಇದಕ್ಕೆಲ್ಲ ಹೆದರಬಾರದು. ನಮ್ಮ ಕವಿತೆಯ ಟಾರ್ಗೆಟ್ ಆಡಿಯೆನ್ಸ್ ಯಾವಾಗಲೂ ಯಂಗ್ ಮೈಂಡ್ಸ್ ಆಗಿರಬೇಕು. ಗೌರಿ, ಕಲಬುರ್‍ಗಿ ಕೊಲೆ ಆಯಿತು. ಹಾಗಂತ ನಮ್ಮ ಕಾವ್ಯದ ಭಾಷೆ ಮತ್ತು ವಸ್ತುಗಳನ್ನ ಕೊಲೆಗಡುಕರನ್ನ ಮೆಚ್ಚಿಸುವುದಕ್ಕಾಗಿ ರೂಪಿಸಿಕೊಳ್ಳೋಕೆ ಆಗಲ್ಲ. ನಮ್ಮ ಕಾವ್ಯ ಮತ್ತಷ್ಟು ಚೈತನ್ಯ ತುಂಬಿಕೊಳ್ಳಬೇಕು. ಕೊಲೆಯೆ ನಮ್ಮೆದುರಿನ ವಾಸ್ತವ ಆಗಿರುವಾಗ ಅದನ್ನು ಬರೆಯದೆ ರಂಜನೆಗೆ, ಭಜನೆಗೆ ಮಾತ್ರ ಬರೆಯುತ್ತ ಕೂರಲು ಸಾಧ್ಯವೇ? ನಮ್ಮ ಕಣ್ಣೆದುರು ಆಗುವ ಅನ್ಯಾಯ, ಅನಾಚಾರ, ದಬ್ಬಾಳಿಕೆ, ವಂಚನೆಗಳನ್ನು ಪ್ರತಿರೋಧಿಸುವ ವಸ್ತು ಭಾಷೆ ನಮ್ಮ ಕಾವ್ಯದ್ದಾಗಬೇಕು. ವರ್‍ತಮಾನದ ಅನರ್‍ಥಗಳಿಗೆ ಸ್ಪಂದಿಸದೆ ಇರುವ ಕವಿ ಕವಿಯೇ ಅಲ್ಲ. ಸದಾ ವರ್‍ತಮಾನವನ್ನು ಗುಣಾತ್ಮಕವಾಗಿ ಬದಲಿಸುವ ಹೊಣೆ ಕವಿ, ಬರಹಗಾರರದ್ದು. ಹಾಗೆ ಭಾವಿಸದೆ ಕೇವಲ ರಂಜನೆಗೆ ಬರೆಯುವುದು, ಕೌಟುಂಬಿಕ ಗೋಡೆಗಳ ನಡುವೆ ಬರೆಯುವುದು, ಪ್ರೀತಿ ಪ್ರೇಮ ಮಾತ್ರ ಬರೆಯುವುದು, ಸಾಮಾಜಿಕ ನ್ಯಾಯದ ಹೊಣೆಯೇ ಅರಿಯದೆ ತೌಡು ಮಾತ್ರ ಕುಟ್ಟುವುದು ಕಾವ್ಯವೇ ಅಲ್ಲ. ಕಾವ್ಯದ ಭಾಷೆ ಜನಭಾಷೆ ಆಗಬೇಕು; ವಸ್ತು ವರ್‍ತಮಾನದ ತಲ್ಲಣಗಳನ್ನು, ಭವಿಷ್ಯತ್ತಿನ ಕನಸುಗಳನ್ನು ಒಳಗೊಳ್ಳಬೇಕು.
ಇವತ್ತಿನ ಸಂದರ್ಭದ, ಸನ್ನಿವೇಶಗಳ ಪ್ರೇರಣೆಗಳ ಹಿನ್ನೆಲೆಯಲ್ಲಿ ಕವಿತೆ ಬರೆಯುವುದು ಎಷ್ಟು ಸರಿ?
ಯಾಕೆ ಬರೀಬಾರದು? ಇವತ್ತು ನಮ್ಮ ಕಣ್ಣೆದುರು ಕಾಣುವ ಅನ್ಯಾಯಗಳನ್ನು ಕುರಿತು ಬರೆಯಲೇಬೇಕಲ್ಲವೆ? ಈಗ ಉದಾಹರಣೆಗೆ ಕೇಂದ್ರದಲ್ಲಿ ಮೇಲ್ಜಾತಿ ಬಡವರಿಗೆ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗೆ ಹತ್ತು ಪರ್ಸೆಂಟ್ ಮೀಸಲಾತಿ ಕಾನೂನು ಜಾರಿಗೆ ತಂದರು. ಆರ್ಥಿಕ ಹಿಂದುಳಿದಿರುವಿಕೆ ಅಂದರೆ ಅವರ ಪ್ರಕಾರ ಎಂಟು ಲಕ್ಷ ಇನ್ಕಮ್ ಸೀಲಿಂಗು. ಈ ಬಗ್ಗೆ ನೀವು ಏನೂ ಪದ್ಯ ಲೇಖನ ಬರೀಬಾರದು ಅಂದರೆ ಹೇಗೆ! ಹಾಗಾದರೆ ಬರಹಗಾರ ಏತಕ್ಕೆ ಬರೀಬೇಕು? ಸರ್‍ಕಾರ ರೈತರನ್ನು ಶೋಷಿಸುವ ಕಾನೂನು ತಂದರೆ, ಜನರನ್ನು ಪೀಡಿಸುವ ಕಾನೂನು ತಂದರೆ, ಸಮಾಜದಲ್ಲಿ ಕೆಲವರು ದಬ್ಬಾಳಿಕೆ ಮಾಡ್ತಾ ಇದ್ದರೆ, ರಸ್ತೆಯಲ್ಲಿ ರಕ್ತದ ಕೋಡಿ ಹರೀತಾ ಇದ್ದರೆ, ಒಬ್ಬರು ಇನ್ನೊಬ್ಬರನ್ನು ನುಂಗುತಾ ಇದ್ದರೆ, ಅತ್ಯಾಚಾರ-ಅನಾಚಾರ ನಡೀತಾ ಇದ್ದರೆ ಅದನ್ನೆಲ್ಲ ಕಂಡೂ ಕಾಣದ ಹಾಗೆ ಯಾರಾದರೂ ಬರೆಯಲು ಸಾಧ್ಯವೇ? ಪೊಲಿಟಿಕಲ್ ಪವರ್ ಸೆಂಟರ್, ರಿಲಿಜಿಯಸ್ ಪವರ್ ಸೆಂಟರ್, ಜಾತಿಗುಂಪುಗಳನ್ನು ಓಲೈಸೋಕೆ ಬರೀಬೇಕಾ? ನಮ್ಮಲ್ಲಿ ಸಾಹಿತ್ಯವನ್ನು ಈ ಎಲ್ಲ ಶಕ್ತಿಕೇಂದ್ರಗಳು ತಮ್ಮ ಯಥಾಸ್ಥಿತಿ ರಕ್ಷಣೆಯ ಟೂಲ್‌ಗಳಾಗಿ ಬಳಸ್ತಾ ಬಂದಿದಾವೆ. ಇವತ್ತೂ ಹಾಗೇ ಆಗ್ಬೇಕಾ? ಲೇಖಕರ ಬಂಧನದ ಪ್ರಶ್ನೆ, ಕೊಲೆಯ ಪ್ರಶ್ನೆ ಬಂತಲ್ಲ ಆವಾಗಲೆ. ಏನು ನಮ್ಮನ್ನ ಹೆದರಿಸ್ತೀರಾ? ನಮಗೆ ಯಾರೋ ಅವರ ತಾಳಕ್ಕೆ ತಕ್ಕ ಸಾಹಿತ್ಯ ಬರಿಯೋಕೆ ಹೇಳ್ತಾರಂದರೆ, ಹಾಗೆ ಮಾಡಿದರೆ ನಾವು ಮಠದ ಸಾಹಿತಿ, ಸರ್ಕಾರಿ ಕವಿ ಆಗಬೇಕಾಗುತ್ತೆ ಅಷ್ಟೆ.
ಪದ ಪ್ರಯೋಗ ಹೇಗಿರಬೇಕು, ಪುನರಾವರ್ತನೆ, ಮತ್ತೆ ಮತ್ತೆ ಅದದೇ ಪದಗಳನ್ನು ಬಳಸುವುದು ಇರಬಾರದೇ?
ಪದ ಪ್ರಯೋಗ ಹೇಗಿರಬೇಕು ಅನ್ನೋ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಆದರೆ ನೀವು ಪಂಪ, ಕುಮಾರವ್ಯಾಸ, ಒಬ್ಬ ಜಾನಪದ ಲಾವಣಿಕವಿ, ಆಧುನಿಕ ಮೇಜರ್ ಕವಿಗಳು ಇವರ ಪ್ರಯೋಗಗಳನ್ನು ನೋಡಿದ್ರೆ ಅವರೆಲ್ಲ ಹೇಗೆ ಭಿನ್ನ ಭಿನ್ನವಾಗಿ ಪದಪ್ರಯೋಗಗಳನ್ನ ಮಾಡಿದಾರೆ ಅನ್ನೋದು ತಿಳಿಯುತ್ತೆ. ಸಾಮಾನ್ಯವಾದ ಜನಬಳಕೆಯನ್ನೆ ಕವಿ ವಿಭಿನ್ನವಾಗಿ ಬಳಸಬೇಕು. ಭಿನ್ನ ಸಂದರ್ಭಗಳಲ್ಲಿ ಪದಗಳು ಭಿನ್ನ ಅರ್ಥಗಳಿಗೆ ಗುರಿಯಾಗ್ತವೆ. ಕೆಲವೊಮ್ಮೆ ಹೊಸ ಪದಗಳನ್ನು ಕವಿಯಾದವನು ಟಂಕಿಸಿಕೊಳ್ಳಬೇಕಾಗ್ತದೆ; ಹಳೆ ಪದಗಳನ್ನು ಸಂಯೋಜಿಸಿ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಬೇಕಾಗ್ತದೆ. ಅನ್ಯಭಾಷಾ ಪದಗಳನ್ನು ಕನ್ನಡೀಕರಿಸಿ ತಗೋಬೇಕಾಗ್ತದೆ. ನಿಮ್ಮ ನಿಮ್ಮ ಪ್ರಯೋಗದ ಕೋಶದಿಂದ ಪದಗಳನ್ನು ಹೆಕ್ಕಿ ಕೂಟ ಮಾಡಿಕೊಂಡು ಬಳಸಬೇಕಾಗ್ತದೆ. ಇಂದ್ರಿಯಗಳ ಅನುಭವಗಳನ್ನು ಅದಲಿ ಬದಲಿ ಮಾಡಿಯೂ ಬಳಸಬೇಕಾಗ್ತದೆ. ಇದನ್ನೆಲ್ಲ ಪದ್ಯಗಳನ್ನು ಓದುವಾಗ ನಾವು ಕಂಡಿದ್ದೇವೆ. ಚರ್ಚಿಸಿದ್ದೇವೆ. ಅಡಿಗರ ಪದಕೂಟ ನೋಡಿ, ಕುವೆಂಪು ಪದಕೂಟಗಳನ್ನು ನೋಡಿ, ಬೇಂದ್ರೆ ಆಡುಭಾಷೆಯ ಪದಗಳನ್ನು ಬಳಸೋದು ನೋಡಿ, ಕಂಬಾರರು ಜನಪದ ನುಡಿಗಟ್ಟು ಬಳಸೋದು ನೋಡಿ, ಶಿವಪ್ರಕಾಶ್ ಮಾನಕ ಭಾಷೆ ಬಳಸೋದು ನೋಡಿ, ನಿಮ್ಮ ನಿಮ್ಮ ಊರಿನ ಗಡಂಗಿನ ಭಾಷೆ, ಜಾತ್ರೆ, ಹಬ್ಬ ಇತ್ಯಾದಿಗಳಲ್ಲಿ ಬಳಸುವ ಸಾಂದರ್ಭಿಕ ಭಾಷೆ ನೋಡಿ, ನೋಡ್ರಿ ಇದೆಲ್ಲ ಕಲಿಸೋಕಾಗಲ್ಲ. ಆದರೆ ನಮ್ಮದೇ ಕಣ್ಣು, ಮನಸ್ಸು, ಓದು ಇದ್ದರೆ ಸುಲಭವಾಗಿ ತಿಳಿಯುತ್ತೆ. ಇನ್ನು ಮತ್ತೆ ಮತ್ತೆ ಅದದೆ ಪದಗಳನ್ನು ಬಳಸಬಾರದಾ ಅಂದ್ರೆ ಪುನರುಕ್ತಿ ಕೂಡ ಒಂದು ಕಾವ್ಯ ತಂತ್ರ. ಬಳಸಬಹುದು. ಅದಕ್ಕೆಲ್ಲ ಪದ್ಯದ ಕಂಟೆಂಟಿನ ಮತ್ತು ಶೈಲಿಯ ಅಗತ್ಯ ನೋಡಿಕೋಬೇಕು.
ರೂಪಕಗಳನ್ನು ಕಟ್ಟಿಕೊಳ್ಳುವುದು ಹೇಗೆ? ರೂಪಕಗಳಲ್ಲಿ ಬರೆದರೆ ಮಾತ್ರ ಒಳ್ಳೆ ಕವಿತೇನಾ? ಬೇಗ, ಸರಳವಾಗಿ ಅರ್ಥ ಆಗುವಂತೆ ಬರೆದರೆ ಅದು ಒಳ್ಳೆ ಕವಿತೆ ಅಲ್ಲವಾ? ಒಳ್ಳೆ ಕವಿತೆ ಅಂದರೆ, ಉತ್ತಮ ಕವಿತೆ ಅಂದರೆ ಹೇಗಿರಬೇಕು?
ರೂಪಕ ಕಟ್ಟಿಕೊಳ್ಳುವುದು ಹೇಗೆ ಅಂತ ಒಬ್ಬ ಕವಿ ಕೇಳಿದರೆ, ಅವನಿಗೆ ಹೇಗೆ ಪಾಠ ಮಾಡೋದು? ಒಂದು ಇನ್ನೊಂದೆ ಆಗಿದೆ ಅಂತ ಬರೆದರೆ ಅದೇ ರೂಪಕ. ಕೆಂಡಗಣ್ಣು, ನಾಲಿಗೆಚಡಾವು ಅಂತ ಬರೆದರೆ ಅದು ರೂಪಕ. ರೂಪಕಗಳಲ್ಲಿ ಮಾತ್ರ ಕವಿತೆ ಬರೆದರೆ ಇಡೀ ಕವಿತೆಯೆ ಒಂದು ರೂಪಕ ಆಗಿ ಕಂಡರೆ ಅದು ಒಳ್ಳೆ ಕವಿತೆ ಹೌದು. ಆದರೆ ಕವಿತೆ ಹಾಗೆ ಮಾತ್ರ ಬರೀಬೇಕು ಅಂತೇನಿಲ್ಲ. ಹಾಗೆ ಬರೆದರೆ ಮಾತ್ರ ಒಳ್ಳೆ ಕವಿತೆ ಇಲ್ಲದಿದ್ದರೆ ಅದು ಒಳ್ಳೆ ಕವಿತೆ ಅಲ್ಲ ಅಂತೇನೂ ಅಲ್ಲ. ಸರಳವಾಗಿ ಅರ್ಥ ಆಗುವ ಹಾಗೆ ಬರೆದರೂ ಅದು ಒಳ್ಳೆ ಕವಿತೆ ಆಗಿರಲು ಸಾಧ್ಯ. ನರಸಿಂಹಸ್ವಾಮಿ, ಕಣವಿ, ಪ್ರತಿಭಾ, ಶಶಿಕಲಾ ಎಲ್ಲರೂ ಸರಳವಾಗಿ ಬರೆದೂ ಒಳ್ಳೆಯ ಕವಿತೆಗಳನ್ನು ಬರೆದಿದ್ದಾರಲ್ಲಾ. ವಚನಕಾರರು, ದಾಸರು, ತತ್ವಪದಕಾರರು, ಸರ್‍ವಜ್ಞ ಇವರನ್ನೆಲ್ಲ ನೋಡಿ; ಅವರು ಸರಳವಾಗೂ ಬರೆದಿದ್ದಾರೆ; ಬೆಡಗಿನಲ್ಲೂ ಬರೆದಿದ್ದಾರೆ; ಹಾಡುಗಳನ್ನೂ ಬರೆದಿದ್ದಾರೆ. ಸರಳವಾಗಿ ಬರೆದರೆ, ವಾಚ್ಯವಾಗಿ ಇದ್ದರೆ ಅದು ಒಳ್ಳೆಯ ಕವಿತೆ ಯಾಕಾಗಬಾರದು? ಒಂದು ಉತ್ತಮ ಕವಿತೆ ನಿಮಗೆ ಓದಿದ ಕೂಡಲೆ ವಿಭಿನ್ನ, ವಿಶಿಷ್ಟ, ತಾಜಾ ಅನ್ನಿಸಬೇಕು. ಲೋಕದೃಷ್ಟಿಯನ್ನು ಬದಲಿಸುವಂತೆ ಇರಬೇಕು. ಲೋಕದ ಹುಳುಕು, ಹುಣ್ಣು, ಲೋಕದ ದುಃಖವನ್ನು ತೆಗೆದು ರಾಚುವಂತೆ ನಿರೂಪಿಸಬೇಕು. ಬರಿ ಡಿಂಗ್ ಡಾಂಗ್ ರಚನೆಗಳನ್ನು ಬರಕೊಂಡು ಕೂತರೆ ಸಾಕಾ? ಒಳ್ಳೆ ಕವಿತೆ ಎಂದರೆ ನಿಮ್ಮ ಕಣ್ಣಿಗಿಂತ ಭಿನ್ನವಾದ ದೃಷ್ಟಿ ಅಲ್ಲಿ ಕಾಣಬೇಕು. ಅಥವಾ ಜಗತ್ತನ್ನು ನಿಮ್ಮ ನಂಬಿಕೆಗಿಂತ ಭಿನ್ನವಾಗಿ ಕವಿತೆ ನಿಮಗೆ ಕಾಣಿಸಬೇಕು.
ಕಥೆ ಕಾದಂಬರಿಗಳಲ್ಲಿ ಕಾವ್ಯ ಮಿಕ್ಸ್ ಮಾಡಬಹುದಾ?
ಮಾಡಬಹುದು. ಮಾಡಬಾರದು ಅಂತಿಲ್ಲ. ಕಾವ್ಯಾತ್ಮಕ ಕಾದಂಬರಿ, ಕತೆ; ಗದ್ಯಾತ್ಮಕ ಕಾವ್ಯಗಳೂ ನಮ್ಮಲ್ಲಿ ಪ್ರಯೋಗ ಆಗಿದಾವೆ. ಕಾದಂಬರಿ ಗಾತ್ರದ ಕಾವ್ಯಗಳೂ, ಮಹಾಕಾವ್ಯಗಳೂ ನಮ್ಮಲ್ಲಿ ಪ್ರಯೋಗ ಆಗಿದಾವೆ. ಕತೆ ಕಾದಂಬರಿಗಳ ನಡುವೆ ಕೆಲವೊಂದು ಪದ್ಯಗಳನ್ನು ಬರೆದಿರುವದೂ ಉಂಟು. ಕವಿತೆ, ಕತೆ ಎಂಬುವು ಎರಡು ಪ್ರಕಾರಗಳು. ಅವನ್ನು ಒಟ್ಟಿಗೆ ಬೆರೆಸಿ ಬರೆದರೆ ತಪ್ಪೇನಿಲ್ಲ.
ಸಾರ್ ಒಟ್ಟು ಕವಿತೆ ಹೆಂಗ್ ಬರೀಬೇಕು ಅಂತ ಒಂದು ಸ್ಯಾಂಪಲ್ ಮೂಲಕ ಸರಳವಾಗಿ ತಿಳಿಸಿಕೊಡಿ ಸಾ.
ಕವಿತೆ ಹೆಂಗ್ ಬರೀಬೇಕು... ಅಂತ ಒಂದು ಪದ್ಯ ನೋಡಿ, ನೋಡ್ರೀ ಇದೇ ಕಣ್ರಿ ಪದ್ಯ, ಹಿಂಗೇ ಬರೀರಿ ಅಂತ ಹೇಳೋಕಾಗಲ್ಲ. ಹೇಳಬಾರದು. ಹಂಗೆ ಅಂತಿಮವಾದ, ಅತ್ಯುತ್ತಮವಾದ ಮಾದರಿ ಇದೆ ಅಂತ ಇಲ್ಲ. ಹತ್ತಾರು ನೂರಾರು ಮಾದರಿಗಳು ಇದಾವೆ. ನೀವೂ ನಿಮ್ಮದೇ ಮಾದರಿಗಳ ಹುಡುಕಾಟ ನಡೆಸಬೇಕು. ಕನ್ನಡದ ಒಂದೊಂದು ಯಶಸ್ವಿ ಕವಿತೆಗಳೂ ಒಂದೊಂದು ಒಳ್ಳೆಯ ಕವಿತೆಯನ್ನು ಹೇಗೆ ಬರೆಯಬೇಕು ಎಂಬುದಕ್ಕೆ ಸ್ಯಾಂಪಲ್ಲುಗಳೇ. ಆದರೆ ಆ ಸ್ಯಾಂಪಲ್ಲೆ ಕನ್ನಡ ಕಾವ್ಯ ಅಲ್ಲ. ಈಗ ನಾವು ಓದಿದ ನವ್ಯವೇ ಕನ್ನಡ ಕಾವ್ಯ ಅಲ್ಲ. ಅದರಾಚೆಗೂ ಕನ್ನಡ ಕಾವ್ಯ ವೈವಿದ್ಯಮಯವಾಗಿ ಇದೆ. ಅದನ್ನೆಲ್ಲ ನೀವು ಕಲಿಯಲು ಓದಬಾರದು, ನಾನು ಪದೇ ಪದೆ ಹೇಳುತ್ತಿದ್ದೇನೆ; ದಾಟಲು, ಮೀರಲು, ನಿಮ್ಮದೇ ರೀತಿ ಬರೆಯುವುದನ್ನು ಕಲಿಯಲು ಓದಬೇಕು.
ಒಂದು ಸರಳವಾದ ವ್ಯತ್ಯಾಸ ರೂಪಿಸಿ ಮಾತು ಹೇಳುವುದಾದರೆ; ಆಡುಭಾಷೆಗಿಂತ ಭಿನ್ನವಾದುದು ಕಾವ್ಯ. ಅಲ್ಲಿ ನಾದ, ಲಯ, ಗೇಯತೆ, ಪದ್ಯಗಂಧಿ ಭಾಷೆ ಇರುತ್ತವೆ. ಅವುಗಳ ಪ್ರಮಾಣ ಒಮ್ಮೊಮ್ಮೆ ಹೆಚ್ಚು ಕಮ್ಮಿ ಆಗಬಹುದು. ಕುವೆಂಪು ಕಲ್ಕಿ ಪದ್ಯ ನೋಡಿದರೆ ಅಲ್ಲಿ ಸರಳವಾದ ಭಾಷೆಯಲ್ಲೆ ಕವಿತೆಯನ್ನು ಲಯಗಾರಿಕೆಯಲ್ಲಿ ಬರೆಯಲಾಗಿದೆ. ಬೇಂದ್ರೆಯವರ ಚಿಗರಿಗಂಗಳ ಚೆಲುವಿ ಕವಿತೆ ನೋಡಿದರೆ ಅದನ್ನು ಹಾಡಾಗಿ ಬರೆಯಲಾಗಿದೆ. ಕುವೆಂಪು ಅವರದು ಗಪದ್ಯ, ಬೇಂದ್ರೆ ಅವರದು ಹಾಡು. ನರಸಿಂಹಸ್ವಾಮಿ ಅವರ ಬಳೆಗಾರ ಚೆನ್ನಯ್ಯ, ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ ಎರಡೂ ಕವಿತೆ ನೋಡಿದರೆ ಎರಡೂ ಭಿನ್ನ ಕಟ್ಟಾಣಿಕೆ ಉಳ್ಳ ಕವಿತೆಗಳು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಕವಿತೆ ಬರೆಯುವುದಕ್ಕೆ ನಮ್ಮವರು ಒಂದು ನಿರ್ದಿಷ್ಟವಾದ ಅಂತಿಮ ಮಂತ್ರ, ಸೂತ್ರ ಅಂತ ಬಳಸಿಲ್ಲ. ನಾವೂ ಬಳಸೋಕೆ ಆಗಲ್ಲ. ನಾವು ಇದುವರೆಗೆ ಓದಿರುವ ನವ್ಯ ಕವಿತೆಗಳನ್ನೆ ಮತ್ತೆ ಮೆಲುಕು ಹಾಕಿದರೆ ಎಲ್ಲವೂ ನವ್ಯವೇ ಆದರೂ ಒಂದೊಂದೂ ಭಿನ್ನ ಅಲ್ಲವೆ?
ಕವಿತೆ ಸಹಜವಾಗಿ ಮಾತ್ರ ಹುಟ್ಟಬೇಕಾ? ಪ್ರಜ್ಞಾಪೂರ್ವಕವಾಗಿ ಕವಿತೆ ಬರೆಯುವುದು ತಪ್ಪಾ? ಸಾಧ್ಯವಿಲ್ಲವಾ? ಸಹಜವಾಗಿ ಹುಟ್ಟುವುದು ಎನ್ನುವುದು ಇಲ್ಲ. ಅದರ ಹಿಂದೆ ಅನೇಕ ರೀತಿಯ ಕ್ರಿಯೆ ಪ್ರತಿಕ್ರಿಯೆಗಳು ಇರ್‍ತಾವೆ. ಕೆಲವರು ಒಮ್ಮೆಗೇ ಕೂತು, ನಿಂತು ಕವಿತೆ ಕಟ್ತಾರೆ. ಕೆಲವರು ತಿದ್ದಿ ತೀಡಿ ಕಟ್ತಾರೆ. ಪ್ರಜ್ಞಾಪೂರ್ವಕ ಆಗಿ ಬರೆಯುವುದು ತಪ್ಪಲ್ಲ. ಸಾಧ್ಯ ಇದೆ.
ಉತ್ತಮ ಕವಿತೆಯ ವಾಚನ ಅಂದರೆ ಅದರ ಲಕ್ಷಣಗಳು ಯಾವುವು? ಹಾಡುಗಳನ್ನು ಓದುವುದು ಹಾಡಲ್ಲದ ಕವಿತೆಗಳನ್ನು ಓದುವುದರಲ್ಲಿ ವ್ಯತ್ಯಾಸ ಇದೆಯಾ?
ಒಂದೊಂದು ಕವಿತೆ ಓದೂ ಭಿನ್ನ. ನಾವು ಓದುವ ಕವಿತೆಯೆ ಕೆಲವು ನಿಲ್ದಾಣಗಳನ್ನು, ಧಾಟಿಗಳನ್ನು ಸೂಚಿಸುತ್ತದೆ. ಕೆಲವರು ಎಲ್ಲ ಕವಿತೆಗಳನ್ನೂ ಒಂದೇ ರೀತಿ ಮನಾಟನಸ್ಸಾಗಿ ಓದುವುದುಂಟು. ಹಾಡು ಮತ್ತು ಹಾಡಲ್ಲದ ಕವಿತೆಗಳನ್ನು ಓದುವುದರಲ್ಲಿ ವ್ಯತ್ಯಾಸ ಇದೆ. ಅದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿದೆ.
ಸಾಮಾನ್ಯವಾಗಿ ಯಾವುದೇ ಒಂದು ಕವಿತೆ ಓದುವಾಗ ಅದರ ಲಯ ಹಿಡಿದು ಓದಬೇಕು. ಹಾಗೆ ಓದುವಾಗ ಅದು ಕೇವಲ ಶಬ್ದಾಡಂಬರ ಆಗದ ಹಾಗೆ ಓದುಗ ಎಚ್ಚರ ವಹಿಸಬೇಕು. ಕೆಲವೊಮ್ಮೆ ಭಾವ, ಅರ್ಥ, ಅನುಭವಗಳು ಎಲ್ಲವೂ ಓದಿನಲ್ಲಿ ಬಿಚ್ಚಿಕೊಳ್ಳುವಂತೆ ಇರಬೇಕು. ಒಮ್ಮೊಮ್ಮೆ ಈ ಒಂದೊಂದರ ಮೇಲೆ ಒತ್ತು ಬೀಳಬಹುದು. ಕೆಲವೊಮ್ಮೆ ಪ್ರಾಸದ ಮೇಲೆ ಒತ್ತು ಬೀಳಬಹುದು. ಕೆಲವೊಮ್ಮೆ ಹನಿಗವಿತೆಗಳನ್ನು ಓದುವಾಗ ರಂಜನೆಯೇ, ಹಾಸ್ಯವೇ ಪ್ರಧಾನವಾಗಿ ಪಂಚಿಂಗ್ ಪಾಯಿಂಟುಗಳನ್ನು ಹಿಡಿದು ಓದು ನಡೆಯಬಹುದು. ನೋಡೀ, ಆಧುನಿಕ ಕವಿತೆಯಲ್ಲಿ ಹಾಗೆ ನಾವಿನ್ನೂ ಸಮುದಾಯಕ್ಕೆ ಪದ್ಯ ಓದುವ ಬಗೆಗಳನ್ನು ಹೆಚ್ಚು ಹೆಚ್ಚು ಪ್ರಯೋಗಗಳ ಮೂಲಕ ಎಕ್ಸ್‌ಪ್ಲೋರ್ ಮಾಡಿಲ್ಲ. ಹಾಡೋದು, ಓದೋದು ಎರಡೇ ಮಾದರಿ ಇರೋದು. ಕೆಲವೊಮ್ಮೆ ಚಿತ್ರ ಕುಂಚ ಕಾವ್ಯ ಅಂತ ಪ್ರಯೋಗ ಮಾಡಿದ್ದೀವಿ. ಅದು ಬಿಟ್ಟರೆ ಇನ್ನೇನೂ ಹೆಚ್ಚು ಪ್ರಯೋಗಗಳು ಆಗಿಲ್ಲ. ಹಿಂದೆ ನಮ್ಮಲ್ಲಿ ಹಳಗನ್ನಡ ಕಾವ್ಯಗಳನ್ನು ಗಮಕ, ವಾಚನ, ಪಠಣ, ಪಾರಾಯಣ, ಗಾಯನ, ವ್ಯಾಖ್ಯಾನ, ಹರಿಕಥಾಶ್ರವಣ, ಶಿವಕಥಾವಿನೋದ, ತಾಳಮದ್ದಲೆ, ತತ್ವಕ್ಕೆ ಹಾಕುವುದು ಹೀಗೆ ಹಲವು ಬಗೆಗಳ ಅನುಸಂಧಾನಗಳನ್ನು ರೂಢಿಸಿಕೊಂಡಿದ್ದೆವು. ಆದರೆ ಆಧುನಿಕ ಕನ್ನಡ ಕವಿತೆಗೆ ಅಂಥಹ ಸಾಧ್ಯತೆಗಳನ್ನು ನಾವಿನ್ನೂ ಎಕ್ಸ್‌ಪ್ಲೋರ್ ಮಾಡಿಕೊಂಡಿಲ್ಲ. ಚಿತ್ರಗೀತೆಗಳ ಭರಾಟೆಯೊಳಗೆ ಇನ್ನದು ಸಾಧ್ಯ ಆಗದೇನೂ ಇರಬಹುದು. ನೋಡೋಣ... ಹೋಪ್ಸ್ ಕಳಕೊಳ್ಳೋದು ಬೇಡ. ಅದರ ಬದಲು ಹೊಸ ಹೊಸ ರೀತಿಯ ಪ್ರಯೋಗಗಳಿಗೆ ನಾವೆ ಒಡ್ಡಿಕೊಳ್ಳಬೇಕು, ತೊಡಗಿಕೊಳ್ಳಬೇಕು. ಇವತ್ತಿನ ಚರ್ಚೆಯೂ ಅಂತಹ ಒಂದು ಪ್ರಯತ್ನ ಅಲ್ಲವೇ?
ಕತೆ, ಕವಿತೆ, ಕಾದಂಬರಿ ಇವುಗಳಲ್ಲಿ ನಾವು ಯಾವುದನ್ನು ಇಂದು ಆಯ್ಕೆ ಮಾಡಿಕೊಂಡರೆ ಒಳ್ಳೆಯದು? ಯಾವ ಪ್ರಕಾರ ಹೆಚ್ಚು ಉತ್ತಮವಾದದ್ದು? ಯಾವುದನ್ನು ಜನ ಹೆಚ್ಚು ಇಷ್ಟ ಪಡುತ್ತಾರೆ? ನಮಗೆ ಉತ್ತಮ ಸಾಹಿತಿ ಆಗುವುದು ಹೇಗೆ ಹೇಳಿ?
ನಿಮ್ಮ ಇಷ್ಟದ ಪ್ರಕಾರ ನೀವು ಆಯ್ಕೆ ಮಾಡಿಕೊಳ್ಳಿ. ಅಥವಾ ನಿಮಗೆ ಬೇಕಾದ್ದು ಬರೀತಾ ಹೋಗಿ ನಿಮ್ಮ ಪ್ರಕಾರವು ನಿಮ್ಮನ್ನೆ ಆಯ್ಕೆ ಮಾಡಿಕೊಳ್ಳುತ್ತದೆ. ಒಳ್ಳೆಯ ಪ್ರಕಾರ, ಒಳ್ಳೆಯದಲ್ಲದ್ದು ಅಂತ ಇಲ್ಲ. ಎಲ್ಲ ಪ್ರಕಾರಗಳನ್ನೂ ಇಷ್ಟ ಪಡುವ ಜನ ಇದ್ದಾರೆ. ಯಾವುದನ್ನು ಜನ ಇಷ್ಟ ಪಡ್ತಾರೆ ಅಂದರೆ ಈಗ ಸದ್ಯಕ್ಕೆ ಹೆಚ್ಚು ಓದುಗರು ಪರದೆ ಓದುಗರೆ ಆಗಿದ್ದಾರೆ. ಅವರು ನೋಡುಗರೂ ಕೇಳುಗರೂ ಆಗಿದ್ದಾರೆ. ಹಾಗಾಗಿ ಇವತ್ತು ಮಲ್ಟಿಮೀಡಿಯಾ ದೃಶ್ಯಪಠ್ಯಗಳು ಹೆಚ್ಚು ಹೆಚ್ಚು ಓದಿಗೆ ಗುರಿ ಆಗುತ್ತಿವೆ. ಲಿಖಿತ ಪಠ್ಯಗಳು ಆ ರೀತಿ ರೂಪಾಂತರ ಕೂಡ ಆಗುತ್ತಿವೆ. ಹಾಡು ಕೇಳುವುದು, ಕತೆ ಕೇಳುವುದು, ನೋಡುವುದು ಇವತ್ತು ಹೆಚ್ಚಾಗ್ತಾ ಇದೆ. ಹಾಗಾದರೆ ಕವಿತೆ ಬರೆಯಬಾರದಾ? ಕವನಸಂಕಲನ ಪ್ರಕಟಿಸಬಾರದಾ ಅಂದರೆ ಹಾಗೇನಿಲ್ಲ. ನಿಮ್ಮ ನಿಮ್ಮ ಓದುಗರನ್ನು ಕಟ್ಟಿಕೊಳ್ಳುವ ಹೊಣೆ ನಿಮ್ಮದೂ ಕೂಡ. ಬರೆಯುವವರು ಯಾರೋ, ಪುಸ್ತಕ ಪ್ರಕಟಿಸುವವರು ಯಾರೋ, ಪ್ರಚಾರ-ವ್ಯಾಪಾರ ಮಾಡುವವರು ಯಾರೋ ಆಗಿ ಲಿಂಕುಗಳು ತಪ್ಪಿಹೋಗಿವೆ. ಪುಸ್ತಕ ರಚನೆ ಮುದ್ರಣ ಮತ್ತು ಓದುಗಳೆಲ್ಲ ಉದ್ಯಮ ಆಗಿ ಬೆಳೆದಿವೆ. ಕಾವ್ಯದ ಬರವಣಿಗೆ ಮತ್ತು ಅದರ ಅನುಸಂಧಾನ ಒಂದು ಸಾಂಸ್ಕೃತಿಕ ವಿದ್ಯಮಾನ ಆಗುವುದಕ್ಕಿಂತ ಅದೊಂದು ಪುಸ್ತಕೋದ್ಯಮದ ಅಂಗ ಆಗಿದೆ. ಓದೆಂಬುದು ಶಿಕ್ಷಣವ್ಯವಸ್ಥೆಯ ಪಠ್ಯ ಆಗಿದೆ. ಸುಗಮ ಮತ್ತು ಚಲನಚಿತ್ರ ಗೀತೆಗಳ ಜಗತ್ತೇ ಬೇರೆಬೇರೆ ’ಗಂಭೀರ’ ಕಾವ್ಯಜಗತ್ತೆ ಬೇರೆ ಎಂಬಂತೆ ಒಡಕುಗಳು ನಿರ್‍ಮಾಣ ಆಗಿವೆ.
ಇನ್ನು ಉತ್ತಮ ಸಾಹಿತಿ ಆಗುವುದು ಹೇಗೆ ಎಂದು ಹೇಳಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ನನ್ನಲ್ಲಂತು ಪ್ಯಾಕೇಜ್ ಇಲ್ಲ. ಕ್ಷಮಿಸಿ.
ಪರಂಪರೆಯ ಕಾವ್ಯಗಳನ್ನು ನೋಡಿ ನಮ್ಮ ಈಗಿನ ಕಾವ್ಯಗಳನ್ನು ತಿಳಿಯಬೇಕೆ? ಹಿಂದಣ ಹೆಜ್ಜೆ ಅರಿಯದೆ ಇಂದಣ ಹೆಜ್ಜೆ ಅರಿಯಲಾಗದು ಅಂತಾರೆ! ಪರಂಪರೆಯ ಅರಿವು ಕಾವ್ಯ ಕಟ್ಟಲು ತೊಡಗುವುದಕ್ಕೆ ಅತ್ಯಗತ್ಯವೇ?
ಹಾಗೇನಿಲ್ಲ. ಈಗಿನ ಕಾವ್ಯವನ್ನು ಓದಲಿಕ್ಕೆ ತಿಳಿಯಲಿಕ್ಕೆ ಹಿಂದಿನ ಕಾವ್ಯ ಅಗತ್ಯವಾಗಿ ತಿಳಿದಿರಬೇಕು ಅಂತೇನು ಇಲ್ಲ. ಪರಂಪರೆಗಳ ಹಿನ್ನೆಲೆಯಲ್ಲೆ ಇಟ್ಟು ತೌಲನಿಕವಾಗಿ ಇಂದಿನ ನಮ್ಮ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ, ತೂಗಿ ನೋಡುವ ಅಗತ್ಯ ಕೂಡ ಇಲ್ಲ. ಆದರೆ ಹೇಗೆ ಬರೆಯಬಾರದು ಎಂದು ತಿಳಿಯಲಿಕ್ಕೆ ಪರಂಪರೆಯ ತಿಳಿವಳಿಕೆ ಅಗತ್ಯ. ಅಂದರೆ ಅದನ್ನು ನೋಡಿ ಅದಕ್ಕಿಂತ ಭಿನ್ನವಾಗಿ ಬರೆಯಲು ಮತ್ತು ಅದರ ಮೂಲಕ ಬರೆಯುವ ಏನೆಲ್ಲ ಹತಾರಗಳು, ತಂತ್ರಗಳು ಬಳಕೆಯಾಗಿವೆ ಎಂದು ತಿಳಿಯಲು ಮತ್ತು ಹೊಸ ತಂತ್ರ, ಭಾಷೆ, ಚೌಕಟ್ಟುಗಳನ್ನು ರೂಪಿಸಿಕೊಳ್ಳಲು ಪರಂಪರೆಯ ತಿಳಿವಳಿಕೆ ಅಗತ್ಯ.
ಲೋಕಾನುಭವ ಇರುವ ಯಾರು ಬೇಕಾದರೂ ಕಾವ್ಯ ಬರೆಯಬಹುದು. ಕವಿ ಆಗಬಹುದು. ನಿಮಗೆ ಇಲ್ಲೊಂದು ದೃಷ್ಟಾಂತ ಹೇಳಬೇಕು. ನೋಡಿ ಒಮ್ಮೆ ಒಬ್ಬ ಎಲ್ಲರೂ ಬೆಟ್ಟ ಹತ್ತುವ ಮೆಟ್ಟಿಲುಗಳನ್ನು ಬಿಟ್ಟು ತಾನೇ ಕೊರಕಲು ಇರುಕಲು ಇರುವ ಕಡೆ ಬೆಟ್ಟ ಹತ್ತೋಕೆ ಹೊರಟನಂತೆ. ಅದನ್ನ ನೋಡಿದ ಕೆಲವರು ಅವನಿಗೆ ಕೂಗಿಯೋ ಅಲ್ಲಿ ಹೋಗಬೇಡ ಇಲ್ಲಿ ಬಾ. ಮೆಟ್ಟಿಲಿವೆ. ಅಲ್ಯಾಕೆ ಪ್ರಯಾಸ ಅಂತ ಕರೆದರಂತೆ. ಅವನು ಸುಮ್ಮನೆ ತನ್ನ ಪಾಡಿಗೆ ತಾನು ಹತ್ತಿ ಜನ ನೋಡನೋಡುತ್ತಿರುವಾಗಲೇ ಬೆಟ್ಟದ ಶಿಖರ ತಲುಪಿದನಂತೆ. ಇಳಿದೂ ಬಂದನಂತೆ. ಅವನನ್ನು ಅಭಿನಂದಿಸಲು ಕೆಲವರು ಬಂದು ಮಾತಾಡಿಸಿದರಂತೆ. ಆಗ ಅವರಿಗೆ ಅವನು ಕಿವುಡ ಅನ್ನುವುದು ಗೊತ್ತಾಯಿತಂತೆ.
ಇಲ್ಲೆ ಇನ್ನೊಂದು ದೃಷ್ಟಾಂತ ಹೇಳಬೇಕು ನಿಮಗೆ. ಒಬ್ಬ ಸಿಟಿ ಹುಡುಗ ನಾಲ್ಕು ಗೋಡೆ ನಡುವೆ ಕೂತು ಈಜುವುದು ಹೇಗೆ ಅಂತ ಥಿಯರಿ ಕೇಳಿ ಕೇಳಿ ಈಜಲು ನೀರಿಗೆ ಇಳಿದನಂತೆ. ಈಜಲು ಸರಿಯಾದ ಸಿದ್ಧತೆ ಇಲ್ಲದೆ, ಬರಿ ಥಿಯರಿ ಕೇಳಿ ನೀರಿಗೆ ಈಜಲು ಇಳಿದ ಅವನ ಧೈರ್‍ಯವನ್ನೂ ನಾವು ಮೆಚ್ಚಬೇಕಾದದ್ದೆ. ಆದರೂ ಅವನಿಗೆ ಒಮ್ಮೆಲೆ ಈಜಲು ಆಗಲಿಲ್ಲವಂತೆ. ನೀರು ಕುಡಿದು ಮುಳುಗಿದನಂತೆ. ಯಾರೋ ಕಾಪಾಡಿದರಂತೆ.
ಈ ಎರಡೂ ದೃಷ್ಟಾಂತ ಯಾಕೆ ನಿಮಗೆ ಹೇಳಿದೆನೆಂದರೆ; ಹೊಸತನ, ಹೊಸದಾರಿ ಹುಡುಕುವ ಮನಸ್ಸು ಮತ್ತು ಲೋಕಜ್ಞಾನ ಇದ್ದರೆ ಕೆಲವೊಮ್ಮೆ ಸಕ್ಸಸ್ ಆಗಬಹುದು. ಆದರೆ ಅದೇ ಸಿದ್ಧತೆ ಇಲ್ಲದೆ, ಮೊಳಕಾಲುದ್ದ, ಸೊಂಟದುದ್ದ ನೀರಲ್ಲಿ ಕಾಲಾಡಿಸಿ ಅಭ್ಯಾಸವೂ ಇಲ್ಲದೆ ಒಮ್ಮೆಗೆ ಆಳದ ನೀರಿಗೆ ಬಿದ್ದರೆ ಕಳೆದುಹೋಗಲೂಬಹುದು.
ಅಂದರೆ ನೀವು ಇಲ್ಲಿ ಕೇಳಿದ ಪರಂಪರೆಯ ಅರಿವಿನ ಪ್ರಶ್ನೆಗೆ ಎರಡು ಮುಖಗಳಿವೆ. ನಿಮಗೆ ಶೂನ್ಯ ಸ್ಥಿತಿ ಅನ್ನುವುದು ಇರುವುದಿಲ್ಲ. ಏನೂ ಅರಿಯದ ಸ್ಥಿತಿ ಅನ್ನುವುದು ಇರುವುದಿಲ್ಲ. ನಿಮ್ಮದೇ ಲೋಕಜ್ಞಾನ ಇರುತ್ತೆ. ಅಂದರೆ ನಿಮಗೆಲ್ಲ ನಿಮ್ಮದೇ ಆದ ಪರಂಪರೆಗಳು ಇರುತ್ತವೆ. ನೀವು ಮಂಟೆ ಪರಂಪರೆಗೋ, ಎತ್ತಪ್ಪ, ಜುಂಜಪ್ಪ, ಮೈಲಾರಲಿಂಗ, ಕಡಕೋಳ ಮಡಿವಾಳ, ಶೈವ, ವೈಷ್ಣವ, ಜೈನ, ಆರೂಢ, ಅವಧೂತ ಹೀಗೆ ಯಾವುದೋ ಒಂದು ಪರಂಪರೆಗೆ ಸೇರಿರಬಹುದು. ಆಗ ನಿಮ್ಮನ್ನು ಮುಗಳಿ ರಚಿತ ಸಾಹಿತ್ಯ ಪರಂಪರೆ ಎಂಬ ಒಂದು ಪರಂಪರೆ ಮಾತ್ರ ಇದೆ. ಅದನ್ನು ಮಾತ್ರ ಕಲಿತು ಬರೆಯಿರಿ ಎಂದು ಹೇಗೆ ಹೇಳುವುದು. ಆಗ ನೀವು ಕಿವುಡನ ಥರ ನಿಮ್ಮ ದಾರಿಯಲ್ಲಿ ನೀವು ಸಾಗಬೇಕಾಗುತ್ತದೆ. ಇರುವ ದಾರಿ ನೋಡಬಾರದು ಎಂದು ಯಾರೂ ಹೇಳುವುದಿಲ್ಲ. ಹೊಸ ದಾರಿ ಹಿಡಿಯಬೇಕು ಎನ್ನುವುದು ನಮಗೆ ಗೊತ್ತಿರಬೇಕಷ್ಟೆ. ಇಲ್ಲ ನಾನು ಶೈಕ್ಷಣಿಕವಾಗಿ ಓದಿಕೊಂಡಿರೋ ಆಲದ ಮರಗಳಿಗೇ ಜೋತು ಬೀಳಬೇಕು ಅಂದರೆ ಆಯ್ತಪ್ಪ ಪ್ಯಾಡು, ಗೀಡು ಕಟ್ಕೊಂಡ್ ನೀರಿಗಿಳಿ ಅನ್ನಬೇಕಷ್ಟೆ...
(ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಕಾವ್ಯಕಮ್ಮಟದಲ್ಲಿ ಮಾಡಿದ ಭಾಷಣದ ಮತ್ತು ಚರ್ಚೆಯ ಲೇಖನ ರೂಪ)
ಈ ಅಂಕಣದ ಹಿಂದಿನ ಬರೆಹಗಳು
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.