ನಟರಾಗಲು ಆಸೆ ಪಡುವವರು ಏನು ಮಾಡಬೇಕೆಂಬ ಕಿವಿಮಾತು ಇಲ್ಲಿದೆ…


“ಭೈರಪ್ಪನವರ ಊರಿನವರಾದ ಇವರ ತಂದೆ ಶಿಕ್ಷಕರು. ಅವರಿಗೆ ಮೂರು ಜನ ಮಕ್ಕಳಲ್ಲಿ ಇವರೇ ಕೊನೆಯವರು. ತಾಯಿ ಗಟ್ಟಿ ಹಾಗೂ ಹೃದಯವಂತರು. ತಂದೆಗೆ ಪಾರ್ಕಿನ್ಸನ್ ಕಾಯಿಲೆ ಆದಾಗ, ಯಾರಿಗೂ ತೊಂದರೆ ಕೊಡದೆ, ಅವರೇ ಅವರನ್ನು ನೋಡಿಕೊಳ್ಳುವಲ್ಲಿ ಇದು ವ್ಯಕ್ತವಾಗಿದೆ,” ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್. ಅವರು ಪಿ. ಶೇಷಾದ್ರಿ ಅವರ ‘ದಕ್ಕಿದ್ದು-ಮಿಕ್ಕಿದ್ದು’ ಕೃತಿ ಕುರಿತು ಬರೆದಿರುವ ವಿಮರ್ಶೆ.

ದಕ್ಕಿದ್ದು- ಮಿಕ್ಕಿದ್ದು: ಪಿ.ಶೇಷಾದ್ರಿ. ಈಚೆಗೆ ಅವರ ಸಿನಿಮಾ ಲೋಕದ ಪಯಣದ ಸಂದರ್ಭದಲ್ಲಿ, ಬಿಡುಗಡೆಯಾದ ಈ ಪುಸ್ತಕ, ಅವರ ಸಿನಿಪಯಣ ಮತ್ತು ಚಿಂತನೆಗಳ ಅನಾವರಣವಾಗಿದೆ. ಇದರಲ್ಲಿ 4 ಭಾಗಗಳಿವೆ.ಒಂದು ಅವರ 1. ಕೌಟುಂಬಿಕ ಹಿನ್ನೆಲೆ, 2.:ಶಿಕ್ಷಣ, 3.ವೃತ್ತಿ, 4.ಮತ್ತು ಮಿಕ್ಕಿದ್ದು.

1: ಭೈರಪ್ಪನವರ ಊರಿನವರಾದ ಇವರ ತಂದೆ ಶಿಕ್ಷಕರು. ಅವರಿಗೆ ಮೂರು ಜನ ಮಕ್ಕಳಲ್ಲಿ ಇವರೇ ಕೊನೆಯವರು. ತಾಯಿ ಗಟ್ಟಿ ಹಾಗೂ ಹೃದಯವಂತರು. ತಂದೆಗೆ ಪಾರ್ಕಿನ್ಸನ್ ಕಾಯಿಲೆ ಆದಾಗ, ಯಾರಿಗೂ ತೊಂದರೆ ಕೊಡದೆ, ಅವರೇ ಅವರನ್ನು ನೋಡಿಕೊಳ್ಳುವಲ್ಲಿ ಇದು ವ್ಯಕ್ತವಾಗಿದೆ. ಇವರು ಬೆಂಗಳೂರಿಗೆ ಬಂದು ದುಡಿದು, ಅದರಲ್ಲಿ ಐವತ್ತು ರೂಪಾಯಿಗಳನ್ನು ಅವರ ಹೆಸರಿಗೆ ಎಂ.ಒ ಮಾಡಿದಾಗ, ಅದರಲ್ಲಿ ಹತ್ತು ರೂಪಾಯಿ ಖರ್ಚುಮಾಡಿ, ದೇವರಿಗೆ ಹಣ್ಣು ಕಾಯಿ ಮಾಡಿಸಿ, ಮರಳಿ ಬರುವಾಗ ಇವರ ಕೈಯಲ್ಲಿ ಉಳಿದ ನಲವತ್ತು ರೂಪಾಯಿಗಳನ್ನು ತುರುಕಿ" ನಿನ್ನ ಖರ್ಚಿಗೆ ಬೇಕಾಗುತ್ತದೆ ಇಟ್ಟುಕೊ" ಎನ್ನವಲ್ಲಿ ಅವರ ಹೃದಯ ವಂತಿಕೆ ವ್ಯಕ್ತವಾಗಿದೆ. ಇದನ್ನು ತೊಂಬತ್ತಮೂರರ ಅವರಿಗೆ ಇವರು ಬರೆದ ಪತ್ರದಲ್ಲಿ ನಿರೂಪಿಸಿದ್ದಾರೆ . ಇವರು ನಿರ್ದೇಶಿಸಿದ ಸಿನಿಮಾಗಳಿಗೆ ಪ್ರಶಸ್ತಿಗಳು ಬಂದಾಗ, ತಮಗೆ ಬದಲಿಗೆ ತಮ್ಮ ತಂದೆತಾಯಿಗಳಿಗೆ, ಸನ್ಮಾನ ಮಾಡಿಸುವ ಮೂಲಕ ಇವರು ಅವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

2: ಶಿಕ್ಷಣ: ಓದಿನಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದ ಇವರು, ಇಂಗ್ಲಿಷ್ ಮಾಧ್ಯಮದ ಭ್ರಮೆ ಹತ್ತಿ ಹಟ ಹಿಡಿದು ಸೇರಿ, ಎಸ್ ಎಸ್ ಎಲ್ ಸಿ ನಲ್ಲಿ ಫೇಲ್ ಆದರು ಬಿಡದೆ ನನ್ನ ಹಾಗೆ ಕನ್ನಡ ಎಂ ಎ ಮಾಡಿದ್ದು ಓದಿ ಖುಷಿಯಾಯಿತು.

3: ವೃತ್ತಿ: ನಂತರ ಬೆಂಗಳೂರಿಗೆ ಬಂದು ಸಿನಿಪತ್ರಕರ್ತರಾಗಿ ಪಡೆದ ಅನುಭವ ರೋಚಕವಾಗಿದೆ. ಅದರಲ್ಲೂ ಪ್ರಕಾಶ್ ರೈ ಅವರಿಂದ ಬೈಸಿಕೊಂಡರು, ಮುಂದೆ ಇವರ ಸಿನಿಮಾಕ್ಕೆ ಅವರನ್ನು ನಟಿಸಲು ಕೇಳಿದಾಗ ಎಲ್ಲಿ ನಿರಾಕರಿಸುತ್ತಾರೆ ಎಂದು ಭಯಗೊಂಡರೂ, ಅವರು ಹಿಂದಿನದನ್ನು ಮರೆತು, ಬಂದು ಹತ್ತು ದಿನಗಳ ಕಾಲ ಇವರ ಜೊತೆ ನಟಿಸಿ ಇವರು ಕೊಟ್ಟ ಒಂದು ರೂಪಾಯಿ ಪಡೆದು ಹೋದದ್ದನ್ನು, ವಿಸ್ಮಯದಿಂದ ಇವರು ಸಿನಿಮಾ ಕುರಿತ ಬರಹದಲ್ಲಿ ದಾಖಲಿಸಿದ್ದಾರೆ. ನಟರಾಗಲು ಆಸೆ ಪಡುವವರು ಏನು ಮಾಡಬೇಕು ಎಂಬುದನ್ನು ಕುರಿತು ಕೆಲವು ಕಿವಿಮಾತುಗಳನ್ನು ಬರೆದಿದ್ದಾರೆ. ಅದನ್ನು ಆಸಕ್ತರು ಗಮನಿಸಬೇಕು.

4 ಸಿನಿಮಾ ಲೋಕ:: ಅವರ ಮುನ್ನುಡಿಯಿಂದ ಪ್ರಾರಂಭವಾಗುವ ಅವರ ಸಿನಿಮಾ ಪಯಣವನ್ನು ಮೂರು ಭಾಗಗಳಲ್ಲಿ ನೋಡಬಹುದು:

ಅ) ವ್ಯಕ್ತಿ ಕೇಂದ್ರಿತ: ಲೇಖಕರ ಕೃತಿಗಳನ್ನು ಆಧರಿಸಿದ ಸಿನಿಮಾಗಳನ್ನು ಇಲ್ಲಿ ವ್ಯಕ್ತಿ ಕೇಂದ್ರಿತ ಎಂದಿದ್ದೇನೆ. ಮಾಸ್ತಿಯವರ ಸುಬ್ಬಣ್ಣ, ಶಿವರಾಮ ಕಾರಂತರ ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಬೊಳುವಾರು ಮಹಮದ್ ಅವರ ಮುತ್ತುಚ್ಚೇರ ಆಧಾರಿತ ಮುನ್ನುಡಿ, ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಪುಸ್ತಕ ಕುರಿತು ಮಾತನಾಡಿದ ಗಿರೀಶ್ ಕಾಸರವಳ್ಳಿ ಅವರು" ಸಿನಿಮಾ ಸಾಹಿತ್ಯದ ಮುಂದುವರಿಕೆ ಅಲ್ಲ. ಅದು ಒಂದು ರೂಪಕ, ಸಾಧನ ಎಂದು ಹೇಳಿದರು." ಇವರ ಪ್ರಕಾರ ಬೆಟ್ಟದ ಜೀವ ಪ್ರಾದೇಶಿಕ, ಮೂಕಜ್ಜಿಯ ಕನಸುಗಳಲ್ಲಿ ಮೂಕಜ್ಜಿ ಕೇಂದ್ರವಲ್ಲ ಸುಬ್ರಾಯನ ಪ್ರಜ್ಞೆ. ಅದನ್ನು ಕುರಿತು ಬಂದಿರುವ ವಿಮರ್ಶೆಗಳ ಪಟ್ಟಿ ಮಾಡಲಾಗಿದೆ. ಮೋಹನದಾಸ ಗಾಂಧಿಯ ಬಾಲ್ಯವನ್ನು ಕುರಿತದ್ದು. ಅಲ್ಲಿ ಮಕ್ಕಳ ಜೊತೆಗೆ ದೊಡ್ಡವರು ಕಲಿಯಬೇಕಾದ ಪಾಠ ಇದೆ, ಎಂದು ಅದರ ಮಹತ್ವವನ್ನು ವೈಯಕ್ತಿಕ ಅನುಭವದ ಜೊತೆಗೆ ಸಮೀಕರಿಸಿದ್ದಾರೆ. ಇದು ಬೊಳುವಾರು ಅವರ ಬಾಪು ಪುಸ್ತಕವನ್ನು ಆಧರಿಸಿದ್ದು. ಹಂಸಲೇಖ ರಚಿಸಿದ ಹುಟ್ಟಿದರೆ' ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಹುಟ್ಟಿದ ಸಂನಿವೇಶ, ಹಾಗೂ ಅದನ್ನು ರಾಜಕುಮಾರ್ ಹುಬ್ಬಳ್ಳಿಯಲ್ಲಿ ಹಾಡಿನ ಚಿತ್ರೀಕರಣದಲ್ಲಿ, ಅವರ ಅಭಿಮಾನಿದೇವತೆ ಒಬ್ಬರು ಬಂದು ,ಅವರ ಕೈಯಲ್ಲಿ ಹತ್ತು ರೂಪಾಯಿ ತುರುಕಿದಾಗ, ಅವರ ಕಣ್ಣಲ್ಲಿ ನೀರು ಬಂದದ್ದನ್ನು ಕಣ್ಣಿಗೆ ಕಟ್ಟಿದಂತೆ ನಿರೂಪಿಸಿದ್ದಾರೆ.

ಇದಕ್ಕೆ ವೈರುಧ್ಯವೋ ಎನ್ನುವಂತೆ, ಇದೇ ಕನ್ನಡ ನಾಡಿನಲ್ಲಿ ಹುಟ್ಟಿದ ಹೆಣ್ಣು ಮಗಳು, ಅರುಣ್ ಶಾನುಭಾಗ್ ,ದೂರದ ಮುಂಬೈ ನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಸೇವೆ ಸಲ್ಲಿಸುವಾಗ, ಅಲ್ಲಿನ ಸಿಬ್ಬಂದಿಯೊಬ್ಬ ಅವರ ಮೇಲೆ ಎಸಗಿದ ಪೈಶಾಚಿಕ ಅತ್ಯಾಚಾರ, ಅದರ ಪರಿಣಾಮವಾಗಿ, ಉಳಿದ ಕಾಲವನ್ನು ಜೀವಂತ ಶವವಾಗಿ ಬದುಕಬೇಕಾದ ದುರಂತವನ್ನು, ಹೃದಯ ಸ್ಪರ್ಶಿಯಾಗಿ ದಾಖಲಿಸಿದ್ದಾರೆ.

ಬ) ಪ್ರದೇಶ ಕೇಂದ್ರಿತ: ಕಾಶಿಯನ್ನು ಕುರಿತ ಇವರ ಸಿನಿಮಾ ಕಾಶಿಯ ಪ್ರಸಿದ್ಧವಾದ ಕಾಶಿನಾಥನ ಬದಲಿಗೆ ಅಲ್ಲಿಗೆ ಮುಕ್ತಿ ಪಡೆಯಲು ಹೋಗುವವರನ್ನು ಕೇಂದ್ರವಾಗಿಸಿಕೊಂಡಿದೆ.

ಕ) ಮಕ್ಕಳ ಕೇಂದ್ರಿತ: ತುತ್ತೂರಿ ಅವರ ಮಗನ ಸವಾಲಿಗೆ ಬದಲಿಗೆ ನಿರ್ಮಾಣ ಮಾಡಿದ ಸಿನಿಮಾ.

ಇದಲ್ಲದೆ ಬಂಡವಾಳಶಾಹಿಯ ಪ್ರಭಾವದಿಂದಾಗಿ ಊರಿನ ಕೇಂದ್ರವಾಗಿದ್ದ ಗೂಡಂಗಡಿಗಳು, ನಾಶವಾಗಿ ಆ ಜಾಗದಲ್ಲಿ ಮಾಲ್ ಗಳು ನಿರ್ಮಾಣವಾಗುತ್ತಿರುವ ,ಪಲ್ಲಟಗಳ ಅನಾವರಣ ಅವರ ಭಾರತ್ ಸ್ಟೋರ್ಸ್ ಸಿನಿಮಾದ ವಸ್ತು. ಅಭಿನಯವೆಂದರೆ ಸದರವಲ್ಲ, ಅದೊಂದು ಪರಕಾಯ ಪ್ರವೇಶ, ಎಂಬುದನ್ನು ನಿರೂಪಿಸುವ ಇಬ್ಬರು ಅಭಿನೇತ್ರಿಗಳ ಚಿತ್ರಗಳು ಕೂಡ ಇಲ್ಲಿ ಇವೆ. ಆಟವಾಡುವ ವಯಸ್ಸಿನ ,ಚೆಂದದ ಕೂದಲಿನ ಹೆಣ್ಣು ಮಗಳು, ಚಿತ್ರದಲ್ಲಿ ಅಭಿಯಿಸಲು ಅದನ್ನು ಕಳೆದುಕೊಂಡು ಬೋಳು ತಲೆಯಲ್ಲಿ, ಸೀರೆ ಉಟ್ಟು ಕೊಂಡು ನಟಿಸುವುದು, ಬೆಂಗಳೂರಿನಲ್ಲಿ ಬೆಳೆದ ಆಧುನಿಕ ಹೆಣ್ಣೊಬ್ಬಳು ಹೊಲದಲ್ಲಿ ಬಿರು ಬೇಸಿಗೆಯಲ್ಲಿ, ಬರಿಗಾಲಿನಲ್ಲಿ ತಲೆಯ ಮೇಲೆ ಭಾರದ( ಕಲ್ಲು) ಬುತ್ತಿಯನ್ನು, ಕಂಕುಳಲ್ಲಿ ಮಗುವನ್ನು ಹೊತ್ತು ನಡೆಯುವ ಚಿತ್ರ, ಅಭಿನಯಕ್ಕಾಗಿ ತಾತ್ಕಾಲಿಕವಾಗಿ ಮಾಡಬೇಕಾದ ತ್ಯಾಗಗಳನ್ನು ದೃಢಪಡಿಸುತ್ತದೆ.

ಮೇಲೆ ಉಲ್ಲೇಖಿಸಿದ ಎಲ್ಲಾ ಸಿನಿಮಾಗಳು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾಗಿವೆ. ಈ ಮೂಲಕ ಇವರನ್ನು ಕನ್ನಡದ ಮುಖ್ಯ ನಿರ್ದೇಶಕರಲ್ಲಿ ಒಬ್ಬರನ್ನಾಗಿಸಿದೆ. ಸಾಮಾನ್ಯವಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವ ನಿರ್ದೇಶಕರು ಬರೆಯುವುದು ಕಡಿಮೆ. ಅದರಲ್ಲಿ ನನ್ನ ಮೆಚ್ಚಿನ ಮೇಷ್ಟ್ರು ಬರಗೂರು, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಇವರು ಅಪವಾದಗಳು.

ಮಿಕ್ಕಿದ್ದು ಭಾಗದಲ್ಲಿ, ಅವರ ಮುಂದಿನ ಕನಸಿನ ಚಿತ್ರದ ಕುರಿತು ಬರೆದ ಲೇಖನ ಇದೆ. ಇದು ಊರಿನ ಟೂರಿಂಗ್ ಟಾಕೀಸ್ ನ ನೆನಪುಗಳಿಂದ ಪ್ರಾರಂಭವಾದ ಅವರ ಸಿನಿಪಯಣ, ಜಗತ್ತಿನ ಅತ್ಯುತ್ತಮ ಚಿತ್ರಗಳ ವೀಕ್ಷಣೆಯೊಂದಿಗೆ, ಅವರು ಅದರ ಭಾಗವಾಗಿ ಹೋದ ಅನನ್ಯ ಬರಹಗಳ ಸಂಕಲನ ಆಗಿದೆ.

- ರಘುನಾಥ್ ಕೃಷ್ಣಮಾಚಾರ್

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...