ನಮ್ಮ ನೆಲದ ಶ್ರೇಷ್ಠ ದಾರ್ಶನಿಕ ಕವಿ - ಕನಕದಾಸರು


"ಈಗ ಕನಕದಾಸರ ಜನ್ಮಭೂಮಿ ಮತ್ತು ಕರ್ಮಭೂಮಿ ಇವೆರಡು ಪುಣ್ಯಸ್ಥಳಗಳಾಗಿ, ಆಧ್ಯಾತ್ಮದ ಕ್ಷೇತ್ರಗಳಾಗಿ ಉಳಿಯುವುದರ ಜೊತೆಗೆ ಪ್ರವಾಸಿ ತಾಣಗಳಾಗಿಯೂ ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕನಕದಾಸರ ತತ್ವಗಳನ್ನು ಅವರು ಬಿತ್ತಿರುವ ಆದರ್ಶಗಳನ್ನು, ಅವರ ಜೀವನ ಶೈಲಿ, ಅವರ ವಿಚಾರ-ಚಿಂತನೆಗಳ ಹೆಜ್ಜೆಗುರುತುಗಳನ್ನು ಸಂರಕ್ಷಿಸುವ ಹಾಗೂ ಜಗತ್ತಿಗೆ ಸಾರುವ ಕೆಲಸವನ್ನು ಕರ್ನಾಟಕ ಸರ್ಕಾರವು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಮಾಡುತ್ತಿದೆ," ಎನ್ನುತ್ತಾರೆ ಸಿ.ಎಸ್. ಆನಂದ. ಅವರು ಕನಕದಾಸ ಜಯಂತಿಯ ಪ್ರಯುಕ್ತ ಬರೆದ ವಿಶೇಷ ಲೇಖನ...

"ತಲ್ಲಣಿಸದಿರು ಕಂಡ್ಯ ತಾಳು ಮನವೇ

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎನ್ನುವ ಭರವಸೆಯ ನುಡಿಗಳನ್ನು ಆಡಿದ ಕನಕದಾಸರು ಮನುಷ್ಯ ಬದುಕಿನಲ್ಲಿ ಸಮಸ್ಯೆಗಳು ಬರುವುದು ಸಹಜ. ಯಾವುದಕ್ಕೂ ಆತಂಕಪಡುವ ಅಗತ್ಯವಿಲ್ಲ. ಪ್ರತಿ ಸಮಸ್ಯೆಗೂ ಉತ್ತರ ಇದ್ದೇ ಇರುತ್ತದೆ. ಸಂರ್ಕೀಣಮಯ ಬದುಕಿನಲ್ಲಿ ತಾಳ್ಮೆ ತುಂಬಾ ಮುಖ್ಯ . ಪ್ರತಿ ಕ್ಷಣದ ಸಂತಸವನ್ನು ಮನುಷ್ಯಜೀವಿ ಅನುಭವಿಸಬೇಕು. ಜಗತ್ತಿನ ಚರಾಚರಗಳ ಬದುಕು ಇದಕ್ಕೆ ಹೊರತಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.

ಕನಕದಾಸರು ಕನ್ನಡ ನಾಡಿನ ಪ್ರಸಿದ್ಧ ಅನುಭಾವ ಕವಿ, ಆಧ್ಯಾತ್ಮ ಕವಿ, ತತ್ವಜ್ಞಾನಿ, ದಾರ್ಶನಿಕ ಮತ್ತು ಸಮಾಜ ಸುಧಾರಕರಾಗಿದ್ದಾರೆ. ಇಷ್ಟೇ ಅಲ್ಲ, ಅವರು ಕರುನಾಡಿನಹರಿದಾಸರಲ್ಲಿ, ಕೀರ್ತನಕಾರರಲ್ಲಿ ಮತ್ತು ಭಕ್ತಿಕವಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಕ್ರಿ.ಶ೧೫೦೯ ರಲ್ಲಿ ಕುರುಬ ಸಮುದಾಯದ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಬಹಳ ದಿನಗಳವರೆಗೆ ಮಕ್ಕಳಿಲ್ಲದ ಈ ದಂಪತಿಗಳು ತಿರುಪತಿ ತಿಮ್ಮಪ್ಪನ ಸೇವೆ ಮಾಡುತ್ತಾರೆ. ಅದರ ಫಲವಾಗಿ ಮುಂದೆ ಗಂಡು ಮಗುವೊಂದು ಜನಿಸುತ್ತದೆ. ದೇವರ ವರಪ್ರಸಾದದಿಂದ ಜನಿಸಿದ ಆ ಮಗುವಿಗೆ ತಿಮ್ಮಪ್ಪನೆಂದೇ ನಾಮಕರಣ ಮಾಡುತ್ತಾರೆ. ವಿಜಯನಗರಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತ್ಯಕ್ಕೆ ಪಾಳೆಯಗಾರರಾಗಿದ್ದ ಬೀರಪ್ಪನವರು ಅಕಾಲಿಕ ಮರಣ ಹೊಂದಿದ್ದರಿಂದ ತಿಮ್ಮಪ್ಪಪಾಳೆಯಗಾರರಾಗಿ ನೇಮಕಗೊಂಡು ಶೌರ್ಯ, ಸಾಹಸಹಾಗೂ ಬುದ್ಧಿಮತ್ತೆಯಿಂದ ಜನನಾಯಕನಾಗಿ ಹೊರಹೊಮ್ಮುತ್ತಾರೆ. ಒಮ್ಮೆ ತಿಮ್ಮಪ್ಪನಾಯಕ ಭೂಮಿ ಅಗಿಯುತ್ತಿರುವಾಗ ಬಂಗಾರ ದೊರೆತು ಅದನ್ನೆಲ್ಲ ಸತ್ಕಾರ್ಯಗಳಿಗೆ ಬಳಸಿದ್ದರಿಂದ ಪ್ರಜೆಗಳ ಮನಸ್ಸಿನಲ್ಲಿ ಕನಕನಾಯಕನಾಗಿ ಸ್ಥಾನ ಪಡೆದರು ಎಂಬ ಐತಿಹ್ಯವಿದೆ. ಪಾಳೆಯಗಾರರಾಗಿದ್ದ ತಿಮ್ಮಪ್ಪನಾಯಕ ಯುದ್ಧದಲ್ಲಿನ ಹಿಂಸೆಯನ್ನು ಕಂಡು ವೈರಾಗ್ಯದಿಂದ ಅಧಿಕಾರವನ್ನು ತ್ಯಜಿಸುತ್ತಾರೆ. ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತೆಗೆದುಕೊಂಡು ಕಾಗಿನೆಲೆಯಲ್ಲಿ ಪ್ರತಿಷ್ಠಾಪನೆ ಮಾಡಿ ದೇವಾಲಯ ಕಟ್ಟಿಸುತ್ತಾರೆ. ತಿಮ್ಮಪ್ಪನಾಯಕರಾಗಿದ್ದ ಅವರು ಶ್ರೀವ್ಯಾಸರಾಯರಿಂದ ದೀಕ್ಷೆ ಪಡೆದು, ಮಧ್ವತತ್ವಶಾಸ್ತçವನ್ನು ಕಲಿತು ಕನಕದಾಸರಾಗಿ ಅವರ ನೆಚ್ಚಿನ ಶಿಷ್ಯರಾಗುತ್ತಾರೆ; ಉಡುಪಿ ಶ್ರೀಕೃಷ್ಣನ ಅನನ್ಯ ಭಕ್ತರಾಗುತ್ತಾರೆ. ಕಾಗಿನೆಲೆ ಆದಿಕೇಶವ ಅವರ ಆರಾಧ್ಯ ದೇವರಾಗಿದ್ದಾರೆ.

ಕನಕದಾಸರು ಕೀರ್ತನೆ, ಉಗಾಭೋಗ, ಸುಳಾದಿ, ಮುಂಡಿಗೆಗಳನ್ನು ರಚಿಸಿದ್ದಾರೆ. ಇವುಗಳ ಜೊತೆಗೆ ಮೋಹನ ತರಂಗಿಣಿ, ಹರಿಭಕ್ತಿಸಾರ, ನಳಚರಿತ್ರೆ, ರಾಮಧ್ಯಾನ ಚರಿತೆ, ತಿರುಕನ ಕನಸು ...ಮೊದಲಾದ ಮಹತ್ವದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೌಲಿಕ ಕೊಡುಗೆಯಾಗಿ ಕೊಟ್ಟಿದ್ದಾರೆ. ಕಾಗಿನೆಲೆ ಆದಿಕೇಶವ ಅವರಅಂಕಿತನಾಮವಾಗಿದ್ದು, ಅವರು ಕೀರ್ತನೆಗಳ ಜೊತೆಗೆ ಕೀರ್ತನೇತರ ಸಾಹಿತ್ಯ ಕೃತಿಗಳಿಂದಲ್ಲೂ ವಿದ್ವಾಂಸರ ಮತ್ತು ಚಿಂತಕರ ಗಮನ ಸೆಳೆಯುತ್ತಾರೆ. ಅವರ ಸಾಹಿತ್ಯಾಸಕ್ತಿ ಕೇವಲ ಬರೆಯಬೇಕು ಎಂಬುದಷ್ಟೇ ಆಗಿರಲಿಲ್ಲ; ತಾವು ಬರೆದ ಸಾಹಿತ್ಯದಿಂದ ಜನಸಮುದಾಯ ಜಾಗೃತಗೊಳ್ಳಬೇಕು ಎಂಬ ಹಿರಿದಾದ ಗುರಿ ಮತ್ತು ಉದ್ದೇಶ ಇಟ್ಟುಕೊಂಡು ಸಾಹಿತ್ಯ ರಚಿಸಿದರು. ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಬೇಕಾದ ಮಾರ್ಗಗಳು ಅವರ ಸಾಹಿತ್ಯದಲ್ಲಿ ತುಂಬ ವೈಚಾರಿಕ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತವೆ. ಅವರ ಪ್ರತಿಯೊಂದು ಕೃತಿಯಲ್ಲಿಯೂ ಕವಿತ್ವ-ಕಲ್ಪನೆಗಳ ಜೊತೆಗೆ ವಾಸ್ತವಿಕ ನಿಲುವುಗಳನ್ನು ಪ್ರಕಟಿಸಿರುವುದು ಕಂಡು ಬರುತ್ತದೆ. ಕನಕದಾಸರು ಭಕ್ತಿಯನ್ನು ವ್ಯಾಪಾರ, ವ್ಯವಹಾರ, ಸ್ವಾರ್ಥದ ನೆಲೆಯಲ್ಲಿ ನೋಡದೆ ಮನುಷ್ಯ ಸಂಬಂಧದ, ಮಾನವೀಯ ಪಂಥದ ಮೌಲ್ಯಗಳನ್ನು ಇಟ್ಟುಕೊಂಡು ಸಾಹಿತ್ಯ ರಚಿಸಿದ್ದಾರೆ. ಅವರ ಕಾವ್ಯಗಳಲ್ಲಿ ಪ್ರಕೃತಿ ಮತ್ತು ಭಕ್ತಿಯ ಪರಿಮಳ ಎದ್ದು ಕಾಣುತ್ತದೆ. ಪುರಂದರದಾಸರ ಸಮಕಾಲೀನರಾದ ಅವರ ಕೀರ್ತನೆಗಳಲ್ಲಿ, ಕಾವ್ಯಗಳಲ್ಲಿ ಬಂಡಾಯದ ಧ್ವನಿ ಇದೆ, ಸಾಮಾಜಿಕ ಕಾಳಜಿ ಇದೆ. ಸಮಾಜದ ಅಂಕುಡೊಂಕುಗಳ ಮತ್ತು ಜನರ ಮೌಢ್ಯಗಳ ಕುರಿತು ವಿಡಂಭನೆ ಇದೆ. ಮನಷ್ಯ ಸಂಬಂಧಗಳು ಕೂಡಿ ಬಾಳುವ, ಕೂಡಿ ಉನ್ನುವ, ಕೂಡಿ ಸಂಭ್ರಮಿಸುವ ನೀತಿಗಳಿವೆ. ಕುಲ ಕುಲವೆಂದು ಹೊಡೆದಾಡುವವರ ಬಗ್ಗೆ ಕನಕದಾಸರು ಎತ್ತುವ ಜಾತಿ ಪದ್ಧತಿ ವಿರುದ್ಧದ ಪ್ರಶ್ನೆಯು ಜಾತಿ ಸಮತೆಯ ಸಂದೇಶವನ್ನು ಸಾರುತ್ತದೆ. ಇಂತಹ ಕಾರಣಕ್ಕಾಗಿಯೇ ಕನಕದಾಸರು ನಿಜವಾಗಿಯೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದಾರೆ. ಆಮೂಲಕ ಅವರ ಹೆಸರು ಸೀಮಾತೀತವಾಗಿ ಹರಡಿ ಕಾಲಾತೀತವಾಗಿ ಉಳಿದು ಕನ್ನಡ ಸಾರಸ್ವತ ಲೋಕದಲ್ಲಿ ಅಮರತ್ವ ಪಡೆದುಕೊಂಡಿದೆ. ಬದುಕು-ಬರಹ ಒಂದಾಗಿಸಿಕೊಂಡು ಆದರ್ಶಮಯ ವ್ಯಕ್ತಿತ್ವ ಹೊಂದಿ, ಸಮಾಜದ ಪ್ರಗತಿಗಾಗಿ ಶ್ರಮಿಸಿ ಮತ್ತು ನಾಡಿಗೆ ಬಹುದೊಡ್ಡ ಕೊಡುಗೆ ಕೊಟ್ಟ ಕನಕದಾಸರು ಕ್ರಿ.ಶ1607 ರಲ್ಲಿ ಕಾಗಿನೆಲೆಯಲ್ಲಿ ದೈವಾಧೀನರಾದರು.

ಈಗ ಕನಕದಾಸರ ಜನ್ಮಭೂಮಿ ಮತ್ತು ಕರ್ಮಭೂಮಿ ಇವೆರಡು ಪುಣ್ಯಸ್ಥಳಗಳಾಗಿ, ಆಧ್ಯಾತ್ಮದ ಕ್ಷೇತ್ರಗಳಾಗಿ ಉಳಿಯುವುದರ ಜೊತೆಗೆ ಪ್ರವಾಸಿ ತಾಣಗಳಾಗಿಯೂ ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕನಕದಾಸರ ತತ್ವಗಳನ್ನು ಅವರು ಬಿತ್ತಿರುವ ಆದರ್ಶಗಳನ್ನು, ಅವರ ಜೀವನ ಶೈಲಿ, ಅವರ ವಿಚಾರ-ಚಿಂತನೆಗಳ ಹೆಜ್ಜೆಗುರುತುಗಳನ್ನು ಸಂರಕ್ಷಿಸುವ ಹಾಗೂ ಜಗತ್ತಿಗೆ ಸಾರುವ ಕೆಲಸವನ್ನು ಕರ್ನಾಟಕ ಸರ್ಕಾರವು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಮಾಡುತ್ತಿದೆ. ನಮ್ಮ ನೆಲದ ಸಂತಕವಿ ಕನಕದಾಸರು ಸಾರ್ಥಕ ಬದುಕಿನ ಸಂಕೇತವೇ ಆಗಿದ್ದಾರೆ. ಅವರ ಜಯಂತಿ ಆಚರಣೆಯ ಈ ಶುಭ ಸಂದರ್ಭದಲ್ಲಿ, ಆಧುನಿಕ ಸಮಾಜದಲ್ಲಿ ಬದುಕುತ್ತಿರುವ ಮನುಷ್ಯನಿಗೆ ಸಾಮರಸ್ಯ, ಮಾನವೀಯತೆಯ ಪ್ರಜ್ಞೆ ಮತ್ತು ಮನುಷ್ಯ ಸಂಬಂಧಗಳನ್ನು ಬೆಸೆಯುವಿಕೆ ಬಹುಮುಖ್ಯವಾಗಿದೆ. ಹೀಗಾಗಿ ಕನಕದಾಸರು ಬೋಧಿಸಿದ ಜೀವನ ಆದರ್ಶ, ಮಾನವೀಯ ಮೌಲ್ಯಗಳನ್ನು ಆಳವಾದ ಅಧ್ಯಯನದಿಂದ ಅರ್ಥೈಸಿಕೊಂಡು ನಮ್ಮ ಯುವಜನಾಂಗದಲ್ಲಿ, ವಿದ್ಯಾರ್ಥಿಗಳಲ್ಲಿ ಬಿತ್ತುತ್ತ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ವಿಚಾರಪ್ರಿಯರಾಗಿ ಅರ್ಥಪೂರ್ಣವಾದ ಬದುಕು ಸಾಗಿಸುವುದು ಅತ್ಯಗತ್ಯವಾಗಿದೆ.

- ಸಿ.ಎಸ್.ಆನಂದ
ಇಂಗ್ಲಿಷ್ ಪ್ರಾಧ್ಯಾಪಕರು ಮತ್ತು ಸಾಹಿತಿಗಳು
ಕಲಬುರಗಿ
ಮೊ: 9731826634

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...