ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ..


“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತುಗಳನ್ನು ಪ್ರಕಟಿಸಲು ಪ್ರಯತ್ನಿಸಿದ್ದೇನೆ,” ಎನ್ನುತ್ತಾರೆ ಬಿ ಚಂದ್ರೇಗೌಡ ಅವರು ತಮ್ಮ "ಬೆಸ್ಟ್ ಆಫ್ ಕಟ್ಟೆ ಪುರಾಣ" ಪುಸ್ತಕಕ್ಕೆ ಬರೆದ ಲೇಖಕರ ಮಾತು.

ಲಂಕೇಶ್ ಪತ್ರಿಕೆಗೆ ಸತತವಾಗಿ ಒಂದು ದಶಕ ಹುಬ್ಬಳ್ಳಿಯಾಂವ ಕಾಲಂ ಬರೆದ ಪುಂಡಲೀಕ್ ಶೇಟ್, ಬಸ್ ಅಪಘಾತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಇದರಿಂದ ಆಘಾತಗೊಂಡ ಲಂಕೇಶರು, ಈ ಅತಾರ್ಕಿಕ ಸಾವಿಗೆ ನನ್ನ ಉತ್ತರವೆಂದರೆ, ಪುಂಡಲೀಕ್ ಬದುಕಿದ್ದಾನೆ. ಆತ ತೀರಿಕೊಂಡಿಲ್ಲ ಎಂಬ ಸವಾಲು ಎಸೆಯುತ್ತೇನೆ ಎಂದು ಬರೆದರು. ಇದಾದ ಕೆಲವು ದಿನಗಳ ನಂತರ ಅವರ ಎದುರು ಕುಳಿತಿದ್ದಾಗ, 'ನೀನು ಆ ಥರ ಕಾಲಂ ಟ್ರೈ ಮಾಡಯ್ಯ ಎಂದರು' ಇದಕ್ಕೆ ಕಾರಣ, ನಾನು ಅದಾಗಲೇ ಪತ್ರಿಕೆಗೆ ನಮ್ಮೋರಿಂದ ನಮಿಗೇನೂ ಆಗಕುಲ್ಲ, ಹೆಣ್ಣು ಅಂದ್ರೆ ಯದಿಗಾರೆಣ್ಣು ಕಣಯ್ಯ ಎಂದು ನಮ್ಮವರು ಮಾತನಾಡುವ ವೈಖರಿಯಲ್ಲಿ ಎರಡು ಲೇಖನ ಬರೆದಿದ್ದೆ. ಇದನ್ನು ಗ್ರಹಿಸಿದ್ದ ಲಂಕೇಶರು ನನಗೆ ಅಂತಹ ಸಲಹೆ ಕೊಟ್ಟರು. ಆಗ ಹೆದರಿದ ನಾನು, "ಏ ನನ್ನ ಕೈಲಾಗಲ್ಲ ಸಾರ್, ಪುಂಡಲೀಕ್ ಶೇಟೆಲ್ಲಿ ನಾನೆಲ್ಲಿ ಆಗಲ್ಲ' ಎಂದೆ. ಆಗ ಲಂಕೇಶ್ 'ನೋಡಯ್ಯ, ಪುಂಡಲೀಕ್ ತರ ನಾನು ಬರಿಬಲ್ಲೆ. ನೀನು ನಿಮ್ಮ ಜನಗಳು ಮಾತಾಡೋ ತರ ಬರಿ ಎರಡು ವಾರಕ್ಕೊಂದು ಬರದ್ರು ಸಾಕು. ಟ್ರೈ ಮಾಡು' ಎಂದರು. ನಾನು ಆಗದಿಲ್ಲ ಸಾರ್ ಎಂದೆ. ಅವರ ಮುಖದ ಮೇಲೆ ಸಿಟ್ಟು ಅಡರಿತು. ಅಲ್ಲಿಂದ ಎದ್ದು ಬಂದೆ, ನನ್ನ ಹಿಂದೆಯೇ ಅವರ ಪತ್ರವೂ ಬಂತು. ಅದನ್ನು ಓದಿದರೆ ಯಾರಾದರೂ ಬರೆಯಬಹುದು ಲೇಖಕರಾಗಬಹುದು ಎನ್ನುವ ಸ್ಫೂರ್ತಿ ಕೊಡುವಂತಿತ್ತು. ಕಾಲಂನ ಪಾತ್ರಗಳು ವಸ್ತುವೆಲ್ಲಾ ಗೋಚರಿಸತೊಡಗಿದವು.

ಅದು ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿದ್ದ ಕಾಲ. ಒಂದು ಬರಗಾಲ ಬಂದಿತ್ತು. ನಮ್ಮಪ್ಪ ಒಂದು ಕಾಫಿ ಟೀ ಹೋಟೆಲು ಮಡಗಿದ್ದ. ನಮ್ಮಪ್ಪನ ಹೆಸರು ಬಸವಣ್ಣ. ನಾಟಕ ಆಡುವ ಗೀಳಿನಿಂದ ಜಮೀನು ಮಾರಿಕೊಂಡು ಬಡವನಾಗಿದ್ದ. ಹೊಟೆಲ್ ಮಡಗಿದ ಕಾರಣಕ್ಕೆ ಅವನದ್ದೇ ಆದ ಅನುಭವ ಮಂಟಪ ರೆಡಿಯಾಯ್ತು. ಜನಾನುರಾಗಿಯಾಗಿದ್ದ ಅವನು ಮಡಗಿದ ಹೋಟೆಲಿಗೆ ಊರಿನ ಉತ್ತರಕ್ಕಿದ್ದ ಬಲ್ಲಾವಳ್ಳಿಯಿಂದ ಬೋರೆಗೌಡ, ಬೋಜಣ್ಣ, ಪೂರ್ವಕ್ಕಿದ್ದ ಚನ್ನಾಪುರದಿಂದ ತಮ್ಮಣ್ಣ, ಪಾಪಣ್ಣ, ದಕ್ಷಿಣಕ್ಕಿದ್ದ ತುರುಬನಹಳ್ಳಿಯಿಂದ ಪುಡಸಾಮಿ, ಗುಂಡಣ್ಣ ಬೋರೇಗೌಡ, ಪಶ್ಚಿಮಕ್ಕಿರುವ ಚಟ್ಟೇನಹಳ್ಳಿಯಿಂದ ಪಟೇಲರು, ಮರೀಗೌಡ ಇತ್ಯಾದಿ ಕೆಲಸ ಮಾಡದೆ ಮಾತಿನ ಮಲ್ಲರಾಗಿದ್ದ ಎಲ್ಲರೂ ಬಂದು ನಮ್ಮಪ್ಪನ ಹೋಟೆಲಿನಲ್ಲಿ ಕುಳಿತು ಯಾವುದಾದರೂ ವಿಷಯ ತೆಗೆದುಕೊಂಡು ಅಗಿದು ಬಿಸಾಡಿ ಹೋಗತೊಡಗಿದ್ದರು. ನಾನಾಗ ಅವರ ಬಾಯಿ ನೋಡುತ್ತ, ಲೋಟ ತೊಳೆಯುತ್ತಿದ್ದೆ ಮತ್ತು ಒಂದು ನೋಟು ಬುಕ್ಕಿನಲ್ಲಿ ಅವರ ಹೆಸರು ಬರೆದುಕೊಂಡು ಕಾಫಿ ಕುಡಿದ ಸಾಲ ಬರೆದುಕೊಳ್ಳುತ್ತಿದ್ದೆ. ಈ ಬಾಕಿ ಶನಿವಾರ ಅಥವಾ ಸೋಮವಾರದ ಸಂತೆಯಲ್ಲಿ ವಸೂಲಾಗುತ್ತಿತ್ತು. ಈ ಪೈಕಿ ಸೀರ ಎನ್ನುವವನು ಕಡೆಯವರೆಗೂ ಕಾಸುಕೊಡಲೇ ಇಲ್ಲ. ಈತ ಕಟ್ಟೆ ಪುರಾಣದ ಪಾತ್ರಧಾರಿಯಾದ, ಇವನು ತುಂಬ ಗೌರವ ಕೊಡುತ್ತಿದ್ದ ಊರ ಪಟೇಲರು ಕಾಳಮಾವನಾದರು. ಒಳ್ಳೆಯ ತೆಂಗಿನ ತೋಟ ಮತ್ತು ಜಮೀನಿದ್ದರೂ ಬಡತನದಲ್ಲಿ ಬದುಕಿದ್ದರು. ಜೀವಮಾನದಲ್ಲಿ ಒಂದು ಮಸಾಲದೋಸೆ ತಿನ್ನದೆ ಒಳ್ಳೆಯ ಬಟ್ಟೆಯನ್ನೂ ಹಾಕದೆ ಕಾಲ ಹಾಕಿದ ಇವರು, ದೇವೇಗೌಡರ ಅಭಿಮಾನಿಯಾಗಿದ್ದರು. ಸ್ತ್ರೀ ದ್ವೇಶಿಯಾದ ಕಾರಣಕ್ಕೆ ಇಂದಿರಾಗಾಂಧಿ ವಿರೋಧಿಯಾಗಿದ್ದರು. ಈ ಎರಡು ಪಾತ್ರ ಮೇಟಿಯಂತೆ ಹೊಳೆದ ಮೇಲೆ, ಹೋಟೆಲ್ ಪಕ್ಕದಲ್ಲೇ ಇದ್ದ ದಲಿತರ ಹುಡುಗ ಉಗ್ರಿ ಬಂದು ಸೇರಿಕೊಂಡ. ಇನ್ನ ಜುಮ್ಮಿ ಆಗತಾನೆ ಪ್ರಾರಂಭಗೊಂಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದು ಬಂದ ಮಹಿಳೆಯರ ಪ್ರತಿನಿಧಿಯಾದಳು. ಇನ್ನ ವಾಟಿಸ್ಸೆ ಕೂಡ ನಮ್ಮ ಹೋಟೆಲಿನ ಪಕ್ಕದ ಮನೆಯವನು. ಅವನ ಹೆಸರಿನ ಬದಲಿಗೆ ವಾಟಿಸ್ಸೆ ಎಂದು ಕರೆದಿದ್ದರಿಂದ, ಅವನೇನು ತಕರಾರು ತೆಗೆಯಲಿಲ್ಲ. ಇನ್ನ ನಮ್ಮಪ್ಪನ ಬದಲಿಗೆ ನಮ್ಮಣ್ಣ ಹೋಟೆಲ್ ಚಿಕ್ಕಣ್ಣನಾದ. ಆಗಿನ ಬೆಳಗೇ ಸಂಭ್ರಮವುಂಟು ಮಾಡುತ್ತಿತ್ತು. ಊರಿಗೆ ಯಾರೇ ಬಂದರೂ ಹೋಟೆಲಿಗೆ ಬಂದು ಹೋಗುತ್ತಿದ್ದರು. ತಮಿಳುನಾಡಿನಿಂದ ಬಂದ ಕೂಲಿ ಕಾರ್ಮಿಕರೂ, ಆಂದ್ರದಿಂದ ಬರುವ ಕಲ್ಲು ಒಡ್ಡರು, ಗೊಂಬೆರಾಮರು, ಹೆಳವರು, ಹಕ್ಕಿಪಿಕ್ಕರು, ಬುಡು ಬುಡುಕೆಯವರು, ಹೀಗೆ ಯಾರೇ ಬಂದರು ತಮ್ಮ ಬದುಕಿನ ಬವಣೆಯನ್ನು ಅಳೆದು ಸುರಿದು ಹಂಚಿಕೊಂಡು ಹೋಗುತ್ತಿದ್ದರು. ಅದು ಮಾತಿನಿಂದಲೇ ಸುಖಪಡುವ ಕಾಲವಾಗಿತ್ತು. ಅಲ್ಲಿಗೆ ಬರುವ ಊರ ಜನ ಕೃಷಿಕರಾದ್ದರಿಂದ ಬೇಸಾಯ, ದನಕರು, ಆಡು ಕುರಿ ಜಾತ್ರೆ ವಿಷಯಗಳು ಪ್ರಧಾನವಾಗಿರುತ್ತಿದ್ದವು. ರಾಜಕಾರಣವೂ ಬಂದು ಹೋಗುತ್ತಿತ್ತು. ಆದರೆ ಅವೆಲ್ಲಾ ಅಂದಾಜಿನ ಸುಳ್ಳು ಮಾತುಗಳಿಂದ ಕೂಡಿರುತ್ತಿದ್ದವು ಎಂಬುದು ನನಗೆ ಹೊಳೆಯಲು ಬಹುದಿನಗಳಾದವು. ಆಗ ನಮ್ಮ ಪಟೇಲರು ಆಡಿದ ಮಾತೊಂದು ಇನ್ನು ನಗು ತರಿಸುತ್ತೆ. ಆಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗುವುದರಲ್ಲಿತ್ತು. ನಮ್ಮೂರ ಪಟೇಲರು 'ಆ ಇಂದ್ರಾಗಾಂಧಿ, ಇಲ್ಲಿಂಗಂಟ ಎಲ್ಲೋ ಕೂತಿದ್ದು. ಈಗ ಬಂದವುಳೆ ಪಾಕಿಸ್ತಾನದ ಸಾಬರು ನಂತರ ಕಲಾವಿದ ಹಾದಿಮನಿ ಅದ್ಭುತವಾದ ಚಿತ್ರ ಬರೆಯತೊಡಗಿದರು. ಇದಕ್ಕೆ 'ಬಯಲುಸೀಮೆ ಕಟ್ಟೆ ಪುರಾಣ' ಎಂದು ಹೆಸರು ಮಡಗಿದ ಮೇಗಲಕೇರಿ ಬಸುರಾಜು. ವಿಶೇಷ ಕಾಳಜಿಯಿಂದ ವಿನ್ಯಾಸಗೊಳಿಸಿದರು ಕಟ್ಟೆ ಪುರಾಣವನ್ನು ತುಂಬಾ ಮೆಚ್ಚಿಕೊಂಡ ಎಂ.ಪಿ. ಪ್ರಕಾಶ್ ಫೋನು ಮಾಡಿ 'ಕಾಳಮಾವ ಜುಮ್ಮಿ ಏನಂತರೆ ಗೌಡ್ರೆ' ಎಂದು ಕೇಳುತ್ತಿದ್ದರು. ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲರು ಯಾರಿಂದಲೋ ಓದಿಸಿ ಕೇಳುತ್ತಿದ್ದರೆಂದು ಮಹಿಮಾ ಪಟೇಲ್ ಸಿಕ್ಕಿದಾಗ ಹೇಳಿದರು. ಪಟೇಲರು ಶಿವಮೊಗ್ಗಕ್ಕೆ ಬಂದಾಗ ಅವರ ಬಳಿ ಕರೆದುಕೊಂಡು ಹೋದ ಪ್ರಕಾಶ್, 'ಈತನೆ ನೋಡಿ ಸಾರ್, ಕಟ್ಟೆ ಪುರಾಣ ಬರಿಯುವವನು' ಎಂದರು. ಕುರ್ಚಿ ಮೇಲೆ ಕುಳಿತಿದ್ದ ಪಟೇಲರು ಕೈ ಚಾಚಿ 'ಅಲಲೆ ಚನ್ನಾಗಿ ಬರಿತಿ ಕಣಯ್ಯ' ಎಂದು ಮೆಚ್ಚುಗೆ ಸೂಚಿಸಿದರು. ಈಚಿನ ಘಟನೆಯೊಂದನ್ನು ಇಲ್ಲಿ ದಾಖಲಿಸಬೇಕಿದೆ. ಭಾರತ್ ಜೋಡೋ ಯಾತ್ರೆ ಮಾಡುತ್ತ ನಾಗಮಂಗಲ ತಾಲೂಕಿಗೆ ಬಂದ ರಾಹುಲಗಾಂಧಿಗೆ ಚಲುವರಾಯಸ್ವಾಮಿ ಪರಿಚಯಿಸುತ್ತ ಇವರು ಲಂಕೇಶ್ ಪತ್ರಿಕೆಗೆ ಬಯಲುಸೀಮೆ ಕಟ್ಟೆ ಪುರಾಣ ಕಾಲಂ ಬರೆದವರು ಎಂದರು. ಆಗ ವಕೀಲ ರಮೇಶ್‌ ಗೌಡ ಇಪ್ಪತ್ತು ವರ್ಷ ಬರೆದರು ಸಾರ್. ಗೌರಿ ಲಂಕೇಶ್ ಪತ್ರಿಕೆಗೆ ಎಂದರು. ಕುತೂಹಲಗೊಂಡ ರಾಹುಲಗಾಂಧಿ ನನ್ನ ಕೈಗೆ ಎಳನೀರುಕೊಟ್ಟು ನಿಮ್ಮ ಬೆಸ್ಟ್ ಮೂರು ಎಪಿಸೋಡನ್ನು ಟ್ರಾನ್ಸ್‌ಲೇಟ್ ಮಾಡಿ ಸಾಯಂಕಾಲ ಕೊಡಿ ಎಂದರು. ಸುದೈವಕ್ಕೆ ಇಂಗ್ಲಿಷ್ ಉಪನ್ಯಾಸಕ ಬಿ.ಎಲ್. ರಾಜು ರಾಹುಲಗಾಂಧಿ ನೋಡಲು ಬಂದಿದ್ದರು. ಅವರು ಸಂಜೆಯವರೆಗೂ ತರ್ಜುಮೆ ಮಾಡಿದರು. ಸಂಜೆ ತಲುಪಿಸಿದೆವು.

ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತುಗಳನ್ನು ಪ್ರಕಟಿಸಲು ಪ್ರಯತ್ನಿಸಿದ್ದೇನೆ. ಈ ಪ್ರಯತ್ನವನ್ನು ಪುಸಲಾಯಿಸಿದವರು, ಪ್ರಕಟಣೆಗೆ ಒತ್ತಾಸೆಯಾದ ಗೆಳೆಯರಾದ ಪ್ರಸನ್ನ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಇನ್ನುಳಿದಂತೆ ಇದಕ್ಕೆ ಬೆನ್ನುಡಿ ಬರೆದು ಕಟ್ಟೆ ಪುರಾಣದ ಮೌಲ್ಯ ಹೆಚ್ಚುವಂತೆ ಮಾಡಿದ ಮೆಚ್ಚಿನ ಲೇಖಕ ಡಾ. ನಟರಾಜ್ ಹುಳಿಯಾರ್‌ಗೆ ಮತ್ತು ಅದ್ಭುತ ವ್ಯಂಗ್ಯ ಚಿತ್ರ ಕಲಾವಿದ ಹಾದಿಮನಿಯವರಿಗೆ, ಒಳಪುಟ ವಿನ್ಯಾಸ ಮಾಡಿದ ಬ್ರಾಹ್ಮ ಕ್ರಿಯೇಷನ್ಸ್‌ನ ಸಚಿನ್‌ ಕೃಷ್ಣಗೆ, ಮುಖಪುಟ ವಿನ್ಯಾಸ ಮಾಡಿದ ಅರುಣ್ ಕುಮಾರ್‌ಗೆ, ಮುದ್ರಕರಿಗೆ, ಪುಸ್ತಕವನ್ನು ಪ್ರಕಟಿಸುತ್ತಿರುವ ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿಯವರಿಗೆ ನನ್ನ ವಂದನೆಗಳು.

- ಬಿ ಚಂದ್ರೇಗೌಡ

MORE FEATURES

ಕಡೆಗೂ ಸಾಮಾನ್ಯ ಮನುಷ್ಯರಿಗೆ ಉಳಿಯುವುದು ಬರಿಯ ವೇದನೆ ಮಾತ್ರ..

27-12-2024 ಬೆಂಗಳೂರು

"ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್...

ಸತಿ ಎನ್ನುವ ಪದ್ಧತಿ ಹಿಂದೂ ಧರ್ಮದ ನಿಜವಾದ ಆಚರಣೆಯೇ?

27-12-2024 ಬೆಂಗಳೂರು

“ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂ...

ಸಮಾಜೋ ಅನುಭಾವಿಕ ಅಗತ್ಯದ ಪೂರೈಕೆ

27-12-2024 ಬೆಂಗಳೂರು

"ದೇಹವನ್ನು ಕೇವಲ ಒಂದು ಮಾಧ್ಯಮವಾಗಿಸಿಕೊಳ್ಳುವ ಅಥವಾ ಮಾಧ್ಯಮವನ್ನಷ್ಟೇ ಆಗಿಸಿಕೊಳ್ಳಬೇಕಾಗುವ ಹಾಗೂ ಬುದ್ಧಿ ಮನಸ್ಸ...