ಈ ಕಾದಂಬರಿಯ ಆತ್ಮವೇ ಮೂರನೇ ಅಧ್ಯಾಯ ಎಂಬ ಅನಿಸಿಕೆ ನನ್ನದು. ಇದನ್ನು ಕೃತಿಕಾರರು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಅಧ್ಯಯನವನ್ನು ಮಾಡಿರುವುದು ಗಮನಕ್ಕೆ ಬರುತ್ತದೆ. ಜಡಕನದುರ್ಗದ ಮೇಲೆ ಹಿಡಿತ ಸಾಧಿಸಲು ಮೈಸೂರು ಸಂಸ್ಥಾನ ಮತ್ತು ಬಿಜಾಪುರದ ಸುಲ್ತಾನರು ನಡೆಸುವ ನಿರಂತರ ಯುದ್ಧಗಳ ಮಧ್ಯದಲ್ಲಿ ಸಿಲುಕುವ ಊರು ಕಾಡಳ್ಳಿ. ಅದು ಒಮ್ಮೆ ನಾಶವಾಗಿ, ಮತ್ತೊಮ್ಮೆ ಹೊಸಳ್ಳಿಯಾಗಿ ಆವಿರ್ಭವಿಸುತ್ತದೆ. ಇದರ ಮುಂದುವರೆದ ಭಾಗವೇ ಬನಗಿರಿ ಗೇಟೆಡ್ ಕಮ್ಯುನಿಟಿಯೇ ಎಂಬ ಆಲೋಚನೆ ಓದುಗರಿಗೆ ಒಮ್ಮೆ ಮಿಂಚಿ ಮರೆಯಾಗದಿರದು - ಡಾ. ಅಜಿತ್ ಹರೀಶಿ..ಅವರು ಡಾ. ಶ್ರೀಧರ ಕೆ. ಬಿ ಅವರ ಬನಗಿರಿ ಕಾದಂಬರಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ...
ಕೃತಿ: ಬನಗಿರಿ
ಲೇಖಕ: ಡಾ. ಶ್ರೀಧರ ಕೆ. ಬಿ (ಕಾದಂಬರಿ)
ಪ್ಗೋರಕಾಶನ: ಮಿನಿ ಪ್ರಕಾಶನ
ಬೆಲೆ- 280 ರೂ
ಪುಟಗಳು- 288
ಹತ್ತು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ಮನೋವೈದ್ಯರಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರೆಸಿರುವ ಡಾ. ಶ್ರೀಧರ ಕೆ. ಬಿ. ಅವರ ಮೂರನೆಯ ಕೃತಿಯಿದು. ಪಂಚಮುಖ, ಸುಪ್ತ- ಅವರ ಮೊದಲೆರಡು ಕಾದಂಬರಿಗಳು.
ಈ ಕಾದಂಬರಿಯು ಮೂರು ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಬನಗಿರಿ ಎಂಬ ಗೇಟೆಡ್ ಕಮ್ಯುನಿಟಿ ಮತ್ತು ಕಾಡಳ್ಳಿ (ಹೊಸಳ್ಳಿ) ಎಂಬ ಊರಿನ ಮೂಲಕ ಒಂದೇ ರೀತಿಯ ಮನುಷ್ಯ ವರ್ತನೆಯ, ನಾಲ್ಕು ಶತಮಾನಗಳ ಅಂತರದ ಎರಡು ವಿಭಿನ್ನ ಪರಿಸರದ ಕಥೆಗಳನ್ನು ಶ್ರೀಧರರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ, ಬೆಂಗಳೂರಿನಿಂದ ಹೊರಗೇ ಉಳಿದಿದ್ದ ಜಕ್ಕನಹಳ್ಳಿ ಮತ್ತು ಚಿಕ್ಕೇಗೌಡನಪಾಳ್ಯದ ಮಧ್ಯದಲ್ಲಿ ಬನಗಿರಿಯು ನಿರ್ಮಾಣವಾಗುತ್ತದೆ. ಇದರ ಸಂಸ್ಥಾಪಕ ಅಧ್ಯಕ್ಷ ಸುಧೀಂದ್ರ ರಾವ್, ಅವರು ಸುಮಾರು ಹನ್ನೆರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಮುಂದೆ ಬದಲಾದ ಕಾಲಘಟ್ಟದಲ್ಲಿ ಡಾ. ಉಜ್ವಲ ನಾಯಕರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಈ ಕಮ್ಯುನಿಟಿಯ ಒಳಗಿರುವ ತರುಣ್ ಗೌಡ, ನಾಯ್ಡು, ಥಾಮಸ್ ಅವರುಗಳ ಚಿಂತನೆ ಮತ್ತು ಹೊರಗಿರುವ ಅನಿರುದ್ಧ, ಪವನ್ ಮುಂತಾದವರ ಯೋಚನೆಗಳ ಮುಖಾಮುಖಿಯನ್ನು ಪರಿಣಾಮಕಾರಿಯಾಗಿ ಡಾಕ್ಟರರು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ಒಂದು ಕಾಲದಲ್ಲಿ ಶೋಷಣೆಗೆ ಒಳಗಾದವರೇ ಇಲ್ಲಿ ಶೋಷಕರಾಗುವುದು, ವಾಸ್ತವಕ್ಕೆ ಹಿಡಿದ ಕನ್ನಡಿ. ಆ ದಿನದ ಬದುಕನ್ನು ಮಾತ್ರ ಜೀವಿಸುವ, ಕನಸುಗಳಿರದ, ಬೇಲಿಯ ಒಳಗೆ ಇರುವವರನ್ನು ನಂಬಿ ಬದುಕುವ, ಬೇಲಿಯ ಹೊರಗಿನವರ ಆತಂಕವನ್ನು ಅಳೆಯಲಾಗದ ಕಾವೇರಮ್ಮ, ನೇತ್ರಾವತಿ, ಸೆಲ್ವಿ, ಸಿದ್ಧು, ಸುರೇಶ- ಇವರೆಲ್ಲ ಗೊತ್ತಿಲ್ಲದೆಯೇ ಈ ಶೀತಲ ಸಮರದ ಭಾಗವಾಗುತ್ತಾರೆ. ಇನ್ನು ಬೇಲಿಯ ಹೊರಗೆ ಇರುವ, ಆದರೆ ತಮ್ಮ ವ್ಯಾಪಾರಕ್ಕೆ ಒಳಗಿನ ಜನರನ್ನು ನೆಚ್ಚಿಕೊಂಡಿರುವ ಸಾಯಿನಾಥ, ಸೃಜನ್, ನಟೇಶ, ಉಸ್ಮಾನ್ - ಪರಿಸ್ಥಿತಿಯನ್ನು ವೀಕ್ಷಿಸುತ್ತಾ, ಅದರ ಭಾಗವೇ ಆಗುತ್ತಾರೆ. ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಬದುಕುವ ಸಾಕ್ಷಿ ಮತ್ತು ಈ ಕಾದಂಬರಿಯನ್ನು ಮತ್ತೊಂದು ಮಗ್ಗುಲಿಗೆ ಒಯ್ಯುವ ಪ್ರೊ. ವಿಶ್ವನಾಥರಂತಹವರು ಸಹ ಈ ಗೇಟೆಡ್ ಕಮ್ಯುನಿಟಿ ಒಳಗಿದ್ದಾರೆ. ಓಟಿನ ರಾಜಕಾರಣ ಮಾಡುವ ಶ್ರೀಕಂಠಯ್ಯ, ಮುನಿರಾಜು, ಬಾರ್ ಮಾಲಿಕ ಶಂಕರಪ್ಪ- ನಮ್ಮೆದುರಿಗೆ ಇರುವ ಪಾತ್ರಗಳಂತೆಯೇ ಅನ್ನಿಸುತ್ತವೆ.
ಈ ಕಾದಂಬರಿಯ ಆತ್ಮವೇ ಮೂರನೇ ಅಧ್ಯಾಯ ಎಂಬ ಅನಿಸಿಕೆ ನನ್ನದು. ಇದನ್ನು ಕೃತಿಕಾರರು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಅಧ್ಯಯನವನ್ನು ಮಾಡಿರುವುದು ಗಮನಕ್ಕೆ ಬರುತ್ತದೆ. ಜಡಕನದುರ್ಗದ ಮೇಲೆ ಹಿಡಿತ ಸಾಧಿಸಲು ಮೈಸೂರು ಸಂಸ್ಥಾನ ಮತ್ತು ಬಿಜಾಪುರದ ಸುಲ್ತಾನರು ನಡೆಸುವ ನಿರಂತರ ಯುದ್ಧಗಳ ಮಧ್ಯದಲ್ಲಿ ಸಿಲುಕುವ ಊರು ಕಾಡಳ್ಳಿ. ಅದು ಒಮ್ಮೆ ನಾಶವಾಗಿ, ಮತ್ತೊಮ್ಮೆ ಹೊಸಳ್ಳಿಯಾಗಿ ಆವಿರ್ಭವಿಸುತ್ತದೆ. ಇದರ ಮುಂದುವರೆದ ಭಾಗವೇ ಬನಗಿರಿ ಗೇಟೆಡ್ ಕಮ್ಯುನಿಟಿಯೇ ಎಂಬ ಆಲೋಚನೆ ಓದುಗರಿಗೆ ಒಮ್ಮೆ ಮಿಂಚಿ ಮರೆಯಾಗದಿರದು. ಮಲೆಬಸವನ ಮೂಲಕ ತೆರೆದುಕೊಳ್ಳುವ ಹದಿನಾರನೆಯ ಶತಮಾನದ ಕತೆ ಓದುಗನನ್ನು ಆವರಿಸಿಕೊಳ್ಳುತ್ತದೆ. ಹೊಟ್ಟೆಭೋರನ ಮಗನಾದ ಹುಲಿಮಾಚ, ಹುಲಿಮಾಚನ ಮಗ ಕೆಡುಗಲಿ ಕೆಂಪ, ನಂಜ (ಮಲೆಬಸವ)ರ ಇತಿಹಾಸವು ರೋಚಕವಾಗಿದೆ. ಇಲ್ಲಿ ಹುಲಿಮಾಚ ಮತ್ತು ಕೆಂಪ ವೀರರು, ಯುದ್ಧೋನ್ಮಾದಿಗಳು. ಮಲೆಬಸವ ಯುದ್ಧದ ನಿರರ್ಥಕತೆಯನ್ನು ಬಲ್ಲವ. ಲಡಾಯಿಯಿಂದ ತನ್ನ ಮುಂದಿನ ತಲೆಮಾರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಕೊನೆಯಲ್ಲಿ ಗೇಟೆಡ್ ಕಮ್ಯುನಿಟಿಯ ಮುಖ್ಯದ್ವಾರ ಉಳಿಯುತ್ತದೆಯೇ? ಅಲ್ಲಿದ್ದವರ ಗತಿಯೇನು. ಜಡಕನದುರ್ಗ ಎಂಬ ಆಯಕಟ್ಟಿನ ಪ್ರದೇಶ ಯಾರ ಪಾಲಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾದಂಬರಿಯನ್ನು ಓದಿಯೇ ಉತ್ತರವನ್ನು ಪಡೆಯಬೇಕು. ಇಲ್ಲಿ ತುಮಕೂರು ಮತ್ತು ಹಳೆಯ ಬೆಂಗಳೂರಿನ ಪರಿಸರದ ಅಪರೂಪದ ಭಾಷಾ ಸೊಗಡಿರುವುದು ವಿಶೇಷ. ಒಳ್ಳೆಯ ಆಶಯ ಮತ್ತು ಅಧ್ಯಯನಗಳಿಂದ ರಚಿತವಾದ, ಡಾ. ಶ್ರೀಧರರ ಈ ಮಹತ್ವಾಕಾಂಕ್ಷೆಯ ಕೃತಿಯು ಬಹುತೇಕ ಯಶಸ್ವಿಯಾಗಿದೆಯೆಂದೇ ಹೇಳಬಹುದು. ಈ ಕಾದಂಬರಿಯನ್ನು ಗೋಮಿನಿ ಪ್ರಕಾಶನ ಅಚ್ಚುಕಟ್ಟಾಗಿ ಪ್ರಕಟಿಸಿದೆ, ಮುದ್ರಣ, ಮುಖಪುಟ ವಿನ್ಯಾಸ ಮತ್ತು ಬಳಸಿದ ಕಾಗದ ಉತ್ಕೃಷ್ಟ ಗುಣಮಟ್ಟದ್ದಾಗಿವೆ. ಹಾಗಾಗಿ ಅವರಿಗೂ ಅಭಿನಂದನೆಗಳು ಸಲ್ಲುತ್ತವೆ.
**
ಕೆ.ಬಿ. ಶ್ರೀಧರ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
‘ಬನಗಿರಿ’ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಅಜಿತ್ ಹರೀಶಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.