ವಿಶ್ವಾಸ ಮತ್ತು ಪ್ರಮಾಣಿಕತೆಯನ್ನು ಜೀವಾಳವಾಗಿಸಿಕೊಂಡಿರುವ ‘ಗಂಗಪಾಣಿ'


"ಇದು ಕೇವಲ ಮನುಷ್ಯರ ಕತೆಯಲ್ಲ; ನೆಲದ ಕತೆ. ಒಂದು ಆವರಣದಲ್ಲಿನ ಯಾವುದಾದರೊಂದು ಸಂಬಂಧದ ಎಳೆಯನ್ನು ಜಗ್ಗಿದರೆ ಇಡೀ ಲೋಕವೇ ಜುಂ ಅನ್ನುತ್ತದೆ. ಅದನ್ನು ಕಾಣದ, ಕೇಳಿಸಿಕೊಳ್ಳದವನು ಕತೆಗಾರನೂ ಆಗಲಾರ ಅದರ ಕೇಳುಗನೂ ಆಗಲಾರ. ಲೋಕವೇ ಹಾಗೆ ಅನೇಕಗಳಿಂದ ಅನೇಕಗಳಾಗುವುದೇ ಅದರ ನಡೆ ಮತ್ತು ನಿಲುವು," ಎನ್ನುತ್ತಾರೆ ಎಸ್. ನಟರಾಜ ಬೂದಾಳು. ಅವರು ಎಸ್. ಗಂಗಾಧರಯ್ಯ ಅವರ ‘ಗಂಗಪಾಣಿ’ ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡದ ಕಥನ ಪ್ರಜ್ಞೆ ಈ ನೆಲದ ನಿಜದ ಕಡೆಗೆ ಮಗ್ಗುಲು ಬದಲಿಸುತ್ತಿದೆ. ಈವರೆಗೆ ಪ್ರವೇಶಕ್ಕಾಗಿ ಕಾದು ಹೊರಗೇ ನಿಂತಿದ್ದ ಬದುಕು ಈಗ ಪ್ರವೇಶ ಪಡೆಯುತ್ತಿದೆ. ಹೊಸ ಪೀಳಿಗೆಯವರ ಜೊತೆಗೆ ಹಿರಿಯ ಪೀಳಿಗೆಯವರೂ ಬಲೇ ಅಕ್ಕರಾಸ್ತೆಯಿಂದ ಮಾತಾಡುತ್ತ ಕತೆ ಹೇಳುತ್ತಿದ್ದಾರೆ. ಕನ್ನಡದ ಕತೆಗಾರಿಕೆಯ ಅಸಲಿ ವ್ಯಾಕರಣ ಅನಾವರಣವಾಗುತ್ತಿರುವುದಕ್ಕೆ ಸಮಾಧಾನವಾಗುತ್ತಿದೆ. ವರ್ತಮಾನದ ಬಿಕ್ಕಟ್ಟು ತುದಿ ಮುಟ್ಟಿದಾಗಲೇ ಇಂತಹ ಹೊಸ ನಡೆ ಶುರುವಾಗುವುದು. ಇದೆಲ್ಲ ಪೀಠಿಕೆ ಬೇಕು ಅನ್ನಿಸಿದ್ದು ಎಸ್ ಗಂಗಾಧರಯ್ಯನವರ ಇತ್ತೀಚಿನ ಗಂಗಪಾಣಿ ಕಾದಂಬರಿ ಓದಿದ ಮೇಲೆ,

ಇದು ಕೇವಲ ಮನುಷ್ಯರ ಕತೆಯಲ್ಲ; ನೆಲದ ಕತೆ. ಒಂದು ಆವರಣದಲ್ಲಿನ ಯಾವುದಾದರೊಂದು ಸಂಬಂಧದ ಎಳೆಯನ್ನು ಜಗ್ಗಿದರೆ ಇಡೀ ಲೋಕವೇ ಜುಂ ಅನ್ನುತ್ತದೆ. ಅದನ್ನು ಕಾಣದ, ಕೇಳಿಸಿಕೊಳ್ಳದವನು ಕತೆಗಾರನೂ ಆಗಲಾರ ಅದರ ಕೇಳುಗನೂ ಆಗಲಾರ. ಲೋಕವೇ ಹಾಗೆ ಅನೇಕಗಳಿಂದ ಅನೇಕಗಳಾಗುವುದೇ ಅದರ ನಡೆ ಮತ್ತು ನಿಲುವು. ಆದರೂ ಅದೇಕೋ ಕನ್ನಡದ ಬರಹ ಮತ್ತು ಬದುಕಿನಲ್ಲಿ ಏಕದ್ದೇ ಯಜಮಾನಿಕೆ ದೀರ್ಘಕಾಲ ನಡೆದು ಬಂತು. ಈಗಲೂ ಅದರದ್ದೇ ರಾಜಕಾರಣ. ಇಂತಹ ನಡೆಯನ್ನು ಸರಿದಿಕ್ಕಿಗೆ ತರುವ ಅದೆಷ್ಟೋ ಪ್ರಯತ್ನಗಳು ಚರಿತ್ರೆಯಲ್ಲಿ ಮಾತ್ರವಲ್ಲ; ವರ್ತಮಾನದಲ್ಲೂ ನಿರಂತರ ನಡೆದೇ ಇವೆ. ಈ ಕಾದಂಬರಿ ಅಂತಹ ಒಂದು ಹೊಸ ಕೈಮರವನ್ನು ಆಯಕಟ್ಟಿನ ಜಾಗದಲ್ಲಿ ನೆಡುತ್ತಿದೆ.

ಹರಿವ ನದಿಗೆ ಮೈಯೆಲ್ಲಾ ಕಾಲು ಎಂದು ನಂಬಿಕೊಂಡು ಬದುಕುವುದು ಸರಳ ಸಂಗತಿ ಅಲ್ಲ. ತಾನು ಮತ್ತು ಇದರನ್ನು ಒಂದಾಗಿಸಿಕೊಂಡು ನಡೆವ ಪಯಣ ಸಾಮಾನ್ಯವಲ್ಲ. ಅಂತಹ ನಡೆಯ ಮಾದರಿಗಳನ್ನು ಒಟ್ಟುಮಾಡಿದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಎಂಬ ಪೋಣಿಸಿದ ಸರವೊಂದಕ್ಕೆ ಸೇರ್ಪಡೆಯಾಗಬೇಕಾದ ನೂರಾರು ಜೀವಗಳು ನಮ್ಮ ನಡುವೆ ಈಗಲೂ ಇವೆ. ಒಂದು ಬಳುಸಾಲು ನೆಲಕ್ಕೆ ಆಜನ್ಮ ವೈರ ಸಾಧಿಸುವ ವಾಸ್ತವದ ಎದುರಿಗೆ ಭಾವೆಯಂತಹ ಸಂತನೊಬ್ಬ ಎದುರಾದಾಗ ಇದ್ದ ನಾಲ್ಕೆಕರೆ ಹೊಲದಲ್ಲಿ ಎರಡೆಕರೆ ದಾನ ಕೊಟ್ಟ ಚರಿತ್ರೆಯೂ ಇದೆ. ಇದ್ದ ಒಂದೇ ಮೂಗುತಿಯನ್ನೂ ಗಾಂಧಿಯ ಜೋಳಿಗೆಗೆ ಇಳಿಬಿಟ್ಟು ಧನ್ಯನಾದ ತಾಯಿಯೂ ಸಾಮಾನ್ಯಳಲ್ಲ. ಇಂತಹ ಅದೆಷ್ಟೋ ನಡೆಗಳನ್ನು ದಾಟಿ ಬಂದಿರುವ ಈ 'ಒಂದು ದಿನದ' ಕಥನಕ್ಕೆ ಅನಂತ ಹಿಂದಣ ಮತ್ತು ಅನಂತ ಮುಂದಣ ಮೂರೂ ಸೇರಿ ಮುಪ್ಪುರಿಗೊಂಡಂತಿರುವ ಗಂಗಪಾಣಿ ಕಾದಂಬರಿ ಗದಿಗೆಪ್ಪನ ಜೀವನ ಪಯಣವನ್ನು ಅತ್ಯಂತ ಆಪ್ತ ಮಾತುಗಳಲ್ಲಿ ಹೇಳುತ್ತದೆ.

ನಮ್ಮ ನಡುವೆ ಮಾತಿನಾಚೆಯ ತತ್ವವನ್ನು ಒಳಗಿನ ಪ್ರಜ್ಞೆಗೆ ನೇರ ಮುಟ್ಟಿಸುವ ಅನೇಕ ಆವರಣಗಳಿವೆ. ಜಾತಿ, ಅನ್ಯ, ಮುಟ್ಟು, ಇತ್ಯಾದಿ ಪೊಳ್ಳು ಅಸಮಾನತೆಗಳನ್ನು ದೂರ ಇಟ್ಟು ತಣ್ಣಗೆ ಬದುಕುವ ಜೀವಗಳೂ ಇವೆ. ಅದನ್ನೆಲ್ಲ ನಾಲ್ಕು ಜನಕ್ಕೆ ತೋರಿಸಿ ಒಪ್ಪಿಸಬೇಕೆಂದೇನೂ ಇಲ್ಲ. ಇಡೀ ದೇಶವೇ ಬೆಳಗಾದರೆ ಒಂದು ರಂಗಭೂಮಿಯಾಗಿ ಎಲ್ಲ ಅಭಿನಯದಲ್ಲಿ ತೊಡಗುವುದನ್ನು ಕಂಡರೆ ಹೇಸಿಗೆ ಬರುತ್ತದೆ. ಇದು ಇವತ್ತೂ ಇದೆ ಹಿಂದೆಯೂ ಇತ್ತು. ನಡು ನಡುವೆ ಸುಮ್ಮನೆ ಬದುಕುವವರಿಗೆ ತಾವೂ ಇದೆ; ನೆಮ್ಮದಿಯೂ ಇದೆ. ಎಲ್ಲ ನಾವು ಕಟ್ಟಿಕೊಳ್ಳುವ ಸಂಬಂಧದ ಜಗತ್ತು. ಅಂತಹ ಸಂಬಂಧದ ಜಗತ್ತಿನೊಳಗೆ ಒಂದು ಸುತ್ತು ಹಾಕಿಸಿಕೊಂಡು ಬರುವ ಕಾದಂಬರಿಯ ಶಕ್ತಿಯೆಂದರೆ ಕಥನ ಪ್ರಕ್ರಿಯೆಯ ಬಗೆಗೆ ಕಾದಂಬರಿಕಾರರಿಗೆ ಇರುವ ವಿಶ್ವಾಸ ಮತ್ತು ಪ್ರಾಮಾಣಿಕ ಶ್ರದ್ಧೆ. ಕಾದಂಬರಿಯ ಓದಿಗೆ ಇದೇ ಪ್ರವೇಶವಾಗಬೇಕೆಂದೇನೂ ಇಲ್ಲ. ಇದೊಂದು ಹರಿವ

ನದಿಯಾಗಿರುವುದರಿಂದ ಯಾರ ಹಂಗೂ ಇಲ್ಲ.

ಮೊನ್ನೆ ಹಿರೇಕಲ್ಲು ಸಿದ್ಧರಬೆಟ್ಟಕ್ಕೆ ಚಾರಣವೆಂಬ ನೆಪದಲ್ಲಿ ಹೋಗಿದ್ದೆವು. ಈ ಕಾದಂಬರಿಯ ನಡುರಂಗಕ್ಕೆ ಹೋದಂತೆ ಅನ್ನಿಸಿತು. ಹೀಗೆ ಕಾದಂಬರಿಯೊಂದು ಜೀವಂತವಾಗಿ ಜೊತೆಗಾರನಾಗುವುದು ಅಸಾಧಾರಣ ಅನುಭವ. ಗೆಳೆಯ ಗಂಗಾಧರಯ್ಯನಿಗೆ ಪ್ರೀತಿಯ ಅಭಿನಂದನೆಗಳು.

 

MORE FEATURES

ನಿತ್ಯ ಬದುಕಿನ ವ್ಯವಹಾರದೊಂದಿಗಿನ ಕೌಟುಂಬಿಕ ಚಿತ್ರಣವನ್ನು ಇಲ್ಲಿ ಕಾಣಬಹುದು

18-05-2025 ಬೆಂಗಳೂರು

"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...

ಸಾಂಪ್ರದಾಯಿಕ ಕುಟುಂಬದ ಕಟ್ಟುಪಾಡುಗಳ ನಡುವೆ ತನ್ನದೇ ಬಂಡಾಯ ಹೂಡುವ ಹೆಣ್ಣಿನ ಕತೆಯಿದು

18-05-2025 ಬೆಂಗಳೂರು

"'ಎಲ್ಲೆಗಳ ದಾಟಿದವಳು' ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ...

ಚೆನ್ನಿಗನ ಪಾತ್ರವು ಭೈರಪ್ಪನವರ ‌ತಂದೆಯನ್ನು ಹೋಲುತ್ತದೆ‌

17-05-2025 ಬೆಂಗಳೂರು

“ಈ ಕಾದಂಬರಿ ನಿಮ್ಮನ್ನು ನಾಗಾಲೋಟ‌ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ...