ಲೇಖನಗಳು ಆತ್ಮಾವಲೋಕನ ಮತ್ತು ದೃಷ್ಟಿಕೋನಗಳನ್ನು ಪ್ರಶ್ನಿಸುತ್ತವೆ: ಶಿಶಿರ್ ಹೆಗಡೆ


"ಅಂಕಣ ಬರೆಯುವ ಪ್ರಕ್ರಿಯೆಯೇ ಒಂದು ಗಮ್ಮತ್ತು. ಕೆಲವೊಮ್ಮೆ ಇದು ಆತ್ಮಾವಲೋಕನಕ್ಕೆ ಕಾರಣವಾದರೆ ಇನ್ನು ಕೆಲವೊಮ್ಮೆ ನನ್ನ ದೃಷ್ಟಿಕೋನಗಳು ಇಲ್ಲಿ ಪ್ರಶ್ನೆಗೊಳಗಾಗುತ್ತವೆ. ವಿಚಾರಗಳನ್ನು ಬರೆದು ಒಪ್ಪಿಸುವುದಕ್ಕಿಂತ ಮೊದಲು ಅದೆಲ್ಲವನ್ನು ನನ್ನದೇ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವುದೂ ಈ ಪ್ರಕ್ರಿಯೆಯ ಭಾಗ" ಎನ್ನುತ್ತಾರೆ ಲೇಖಕ ಶಿಶಿರ್ ಹೆಗಡೆ . ಅವರ ‘ಶಿಶಿರ ಕಾಲ’ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

ಪ್ರತೀ ವಾರ ಬರೆಯುವುದು, ಅದಕ್ಕೆ ಬೇಕಾದ ತಯಾರಿಗಳು ಇವೆಲ್ಲ ನನ್ನಿಂದ ಇಷ್ಟು ನಿರಂತರ ನಡೆಯುತ್ತದೆಯೆಂದು ಎಂದೂ ಅಂದುಕೊಂಡಿರಲಿಲ್ಲ. ಈಗ ಮೂರು ವರ್ಷಕ್ಕಿಂತ ಜಾಸ್ತಿಯೇ ಆಯಿತು. ವಾರಕ್ಕೊಮ್ಮೆ ಬರೆಯಲು ಕೂರುವುದು ಅಭ್ಯಾಸವಾಗಿದೆ. ಶಿಶಿರಕಾಲ ಅಂಕಣ ಆರಂಭವಾದಾಗಿನಿಂದ ಒಂದು ವಾರವೂ ತಪ್ಪಿಸಿದ್ದಿಲ್ಲ. ಆನಾರೋಗ್ಯ, ವೈಯಕ್ತಿಕ ಕಾರಣಗಳು, ವೃತ್ತಿ, ಓಡಾಟ, ಕೌಟುಂಬಿಕ ಅವಶ್ಯಕತೆಗಳು ಅದೆಷ್ಟೋ ಬಾರಿ ಬರೆಯುವ ಒತ್ತಡವನ್ನು ಹೆಚ್ಚಿಸಿದ್ದಿದೆ. ಆದರೆ ಪ್ರತೀ ವಾರ ಓದುಗರ ನಿರೀಕ್ಷೆ ಅದೆಲ್ಲವನ್ನು ಮೀರುವುದಕ್ಕೆ ಶಕ್ತಿಯಾಗಿದೆ. ಇದೆಲ್ಲದರಿಂದ ನನ್ನಲ್ಲಿ ಒಂದಿಷ್ಟು ಓದಿನ ಶಿಸ್ತು ಬಂದಿದೆ. ಓದು ಅನಿವಾರ್ಯತೆಯಾದ ಬಗ್ಗೆ ನನಗೆ ಖುಷಿಯಿದೆ. ಜೊತೆಗೆ ಬರವಣಿಗೆ ನನಗೊಂದು ಗುರುತನ್ನು ತಂದು ಕೊಟ್ಟಿದೆ. ನನಗೆ ಅದೆಲ್ಲದರ ಬಗ್ಗೆ ಸಾರ್ಥಕ್ಯವಿದೆ.

ಲೇಖನಗಳನ್ನು ಓದಲಿಕ್ಕೆ ಮಾತ್ರವಲ್ಲ, ಬರೆಯಲಿಕ್ಕೂ ವಿಶ್ವವಾಣಿ ಅತ್ಯುತ್ತಮ ವೇದಿಕೆಯಾಗುವ ಪತ್ರಿಕೆ. ವಿಶ್ವೇಶ್ವರ ಭಟ್ಟರ ಪತ್ರಿಕೆಯಲ್ಲಿ ಅಂಕಣಕಾರನಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇಲ್ಲಿ ವಿಷಯದ ಆಯ್ಕೆ, ವಿವರಣೆ, ಶೈಲಿ, ವೈಚಾರಿಕ ಒಲವು ಇವೆಲ್ಲದಕ್ಕೆ ಸಂಪೂರ್ಣ ಸ್ವಾತಂತ್ರ್ಯ. ಇಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟ ವಿಶ್ವೇಶ್ವರ ಭಟ್ಟರಿಗೆ ಧನ್ಯವಾದ ಹೇಳದಿದ್ದರೆ ಹೇಗೆ? ಭಟ್ಟರು ಇಡುವ ನಂಬಿಕೆ ಅಂಕಣಕಾರನೊಳಗೆ ಜವಾಬ್ದಾರಿಯ ಜೊತೆ ಅಸಂಖ್ಯ ಸಾಧ್ಯತೆಗಳನ್ನು ತೆರೆದಿಡುತ್ತದೆ.

ಅಂಕಣ ಬರೆಯುವ ಪ್ರಕ್ರಿಯೆಯೇ ಒಂದು ಗಮ್ಮತ್ತು. ಕೆಲವೊಮ್ಮೆ ಇದು ಆತ್ಮಾವಲೋಕನಕ್ಕೆ ಕಾರಣವಾದರೆ ಇನ್ನು ಕೆಲವೊಮ್ಮೆ ನನ್ನ ದೃಷ್ಟಿಕೋನಗಳು ಇಲ್ಲಿ ಪ್ರಶ್ನೆಗೊಳಗಾಗುತ್ತವೆ. ವಿಚಾರಗಳನ್ನು ಬರೆದು ಒಪ್ಪಿಸುವುದಕ್ಕಿಂತ ಮೊದಲು ಅದೆಲ್ಲವನ್ನು ನನ್ನದೇ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವುದೂ ಈ ಪ್ರಕ್ರಿಯೆಯ ಭಾಗ. ಲೇಖನವೆಂದರೆ ವರದಿಯಲ್ಲ. ಓದಿನಾಚೆಯ ಜಿಜ್ಞಾಸೆ ಓದುಗರದ್ದು. ಲೇಖನಗಳು ಹೊಸ ದೃಷ್ಟಿಕೋನವನ್ನು ಓದುಗರಲ್ಲಿ ಹುಟ್ಟುಹಾಕಿದರೆ, ಬರಹಗಾರ ಹೇಳದೇ ಬಿಟ್ಟದ್ದನ್ನು ಓದುಗ ಗುರುತಿಸಿದರೆ, ಗ್ರಹಿಸಿದರೆ ಅದು ಲೇಖಕನ ಜಯ. ನಾನು ಇಲ್ಲಿ ನಿರೂಪಕ ಮಾತ್ರ.

ಓದುಗರ ಅಭಿಪ್ರಾಯ ಬರಹಗಾರನನ್ನು ಸರಿದಾರಿಯಲ್ಲಿ ಇಟ್ಟು ಬೆಳೆಸುತ್ತದೆ. ನನ್ನ ಈ ಅಕ್ಷರ ಪ್ರಯಾಣದಲ್ಲಿ ಓದುಗರ ಪಾತ್ರ ದೊಡ್ಡದು. ಇಮೇಲ್, ಸೋಷಿಯಲ್ ಮೀಡಿಯಾ, ವಾಟ್ಸ್ ಅಪ್, ಫೋನ್ ಕರೆ ಮೊದಲಾದವುಗಳ ಮೂಲಕ ನನ್ನನ್ನು ಹೊಗಳುತ್ತ, ತಿದ್ದುತ್ತ, ದಾರಿ ತಪ್ಪದಂತೆ ನೋಡಿಕೊಳ್ಳುವ ಮಹಾಲಕ್ಷ್ಮೀ ಟಿ. ವಿ., ಸುರೇಶ್ ಭಟ್, ಸುವರ್ಣ ಹೆಗಡೆ, ಸುರೇಂದ್ರ ಪಾಟೀಲ್, ಸುಪ್ರೀತಾ ಬೆಳವಾಡಿ, ನಾರಾಯಣ ಯಾಜಿ ಮತ್ತು ಅನೇಕ ಓದುಗ ಬಂಧುಗಳಿಗೆ ನಾನು ಯಾವತ್ತೂ ಆಭಾರಿ. ಈ ಸಮಯದಲ್ಲಿ ಶಿಶಿರ ಕಾಲ ಅಂಕಣ ಬರಹಗಳನ್ನು ಆಸ್ಥೆಯಿಂದ ಸಂಪಾದಿಸಿ ಪ್ರಕಟಿಸುವ ವಿಶ್ವವಾಣಿಯ ರಾಧಾಕೃಷ್ಣ ಭಡ್ತಿ, ರಂಜಿತ್ ಅಶ್ವಥ್ ಅವರನ್ನು ನಾನು ನೆನೆಯಲೇ ಬೇಕು. ನನ್ನ ಈ ಮೊದಲ ಪುಸ್ತಕವನ್ನು ಚಂದವಾಗಿ ರೂಪಿಸಿದ ವಿಶ್ವವಾಣಿ ಪುಸ್ತಕ, ಶ್ರೀಯುತ ಪ್ರಕಾಶ್ ಕಗ್ಗೆರೆ ಮತ್ತು ತಂಡದವರಿಗೆ ನನ್ನ ಅನಂತ ಧನ್ಯವಾದವನ್ನು ಅರ್ಪಿಸುತ್ತೇನೆ.

ಓರುಗರಾದ ನಿಮ್ಮೆಲ್ಲರ ಪ್ರೀತಿ, ಮಾರ್ಗದರ್ಶನ ಯಾವತ್ತೂ ಹೀಗೆಯೇ ನನ್ನ ಶಕ್ತಿಯಾಗಿರಲಿ.

MORE FEATURES

ಸಾಹಿತ್ಯಾಸಕ್ತರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧವಾಗಿದೆ ‘ಬೆಂಗಳೂರು ಲಿಟ್ ಫೆಸ್ಟ್’

04-12-2024 ಬೆಂಗಳೂರು

ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...

ಕೆಂಡದಗಿರಿಯ ಮೇಲೆ ಅರಗಿನ ಕಂಬ..

04-12-2024 ಬೆಂಗಳೂರು

"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...

ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ

04-12-2024 ಬೆಂಗಳೂರು

“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...