"ಚಿತ್ತ-ಬಕ್ಕ ಎನ್ನುವ ಇವರ ಲೇಖನಗಳ ಸಂಗ್ರಹದ (51 ಬಿಡಿ ಲೇಖನಗಳು) ಬಹಳಷ್ಟು ಲೇಖನಗಳನ್ನು ಪತ್ರಿಕೆಗಳಲ್ಲಿ ಮೊದಲೇ ಓದಿದ್ದೆನಾದರೂ, ಈ ಕೃತಿ ಪರಿಚಯದ ಜವಾಬ್ದಾರಿ ಕೊಟ್ಟಾಗ, ಸಾಕಷ್ಟು ಕೂಲಂಕಷವಾಗಿ ಮತ್ತೊಮ್ಮೆ ಓದಬೇಕಾಯಿತು. ಇವರ ಇಲ್ಲಿನ ಎಲ್ಲಾ ಲೇಖನಗಳು ಅತ್ಯಂತ ಸರಳವಾಗಿ ಅಕ್ಕ ಪಕ್ಕ ಕೂತು ಮಾತನಾಡುವಂತೆ ಓದಿಸಿಕೊಂಡು ಹೋಗುತ್ತವೆ," ಎನ್ನುತ್ತಾರೆ ಧಾರಿಣಿ ಮಾಯಾ. ಅವರು ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ-ಬಕ್ಕ’ ಕೃತಿ ಕುರಿತು ಬರೆದ ಅನಿಸಿಕೆ.
ಪ್ರಬಂಧ, ಕಥೆ, ಹಾಸ್ಯಬರಹದಲ್ಲಿ ಎತ್ತಿದ ಕೈ ಆಗಿರುವ ನಳಿನಿಯವರ ‘ಚಿತ್ತ-ಬಕ್ಕ’ ಗಂಭೀರ ವಿಷಯವಸ್ತುವನ್ನೊಳಗೊಂಡ ಮೊದಲ ಲೇಖನಗಳ ಸಂಗ್ರಹ ಎಂದೇ ಹೇಳಬಹುದು.
ಇವರ ‘ಚಿತ್ತ-ಬಕ್ಕ’ ಕೃತಿಯ ಲೋಕಾರ್ಪಣೆಯ ಸಮಯದಲ್ಲಿ ಪುಸ್ತಕ ಪರಿಚಯ ಮಾಡಿಕೊಡಿರೆಂದು ಕೇಳಿದಾಗ ಮೊದಲಿಗೆ ನನಗೆ ಆಶ್ಚರ್ಯವಾಯಿತು. ಅದನ್ನು ಅವರಲ್ಲಿ ಪ್ರಶ್ನಿಸಿದಾಗ, ಇದಕ್ಕೆ ನಾನೇಕೆ ಸೂಕ್ತ ಎಂಬ ವಿವರ ಕೊಟ್ಟಾಗ ಅವರು ನನ್ನ ಮೇಲಿಟ್ಟಿದ್ದ ಭರವಸೆ, ಅಕ್ಕರೆಗೆ ತುಂಬಾ ಥ್ಯಾಂಕ್ಯೂ.
ಈ ಕೃತಿಕಾರರ ಜೊತೆ ಇದರ ಮುನ್ನುಡಿ, ಬೆನ್ನುಡಿ ಹಾಗೂ ಇದೀಗ ಕೃತಿ ಪರಿಚಯ ಮಾಡಿಕೊಡುತ್ತಿರುವ ನಾನು, ಎಲ್ಲರೂ ಮಹಿಳಾಮಣಿಗಳೇ ಆಗಿರುವುದರಿಂದ "ಹೆಣ್ಮಕ್ಕಳೇ strongu ಗುರೂ... " ಎನ್ನಬಹುದಲ್ಲವೇ..
ಚಿತ್ತ-ಬಕ್ಕ ಎನ್ನುವ ಇವರ ಲೇಖನಗಳ ಸಂಗ್ರಹದ (51 ಬಿಡಿ ಲೇಖನಗಳು) ಬಹಳಷ್ಟು ಲೇಖನಗಳನ್ನು ಪತ್ರಿಕೆಗಳಲ್ಲಿ ಮೊದಲೇ ಓದಿದ್ದೆನಾದರೂ, ಈ ಕೃತಿ ಪರಿಚಯದ ಜವಾಬ್ದಾರಿ ಕೊಟ್ಟಾಗ, ಸಾಕಷ್ಟು ಕೂಲಂಕಷವಾಗಿ ಮತ್ತೊಮ್ಮೆ ಓದಬೇಕಾಯಿತು. ಇವರ ಇಲ್ಲಿನ ಎಲ್ಲಾ ಲೇಖನಗಳು ಅತ್ಯಂತ ಸರಳವಾಗಿ ಅಕ್ಕ ಪಕ್ಕ ಕೂತು ಮಾತನಾಡುವಂತೆ ಓದಿಸಿಕೊಂಡು ಹೋಗುತ್ತವೆ.
*** *** ***
ಚಿತ್ತ-ಬಕ್ಕ ಕೃತಿಯಲ್ಲಿ ಲೇಖಕಿ, ಕೌಟುಂಬಿಕ ಹಾಗೂ ಸಾಮಾಜಿಕ ಓರೆಕೋರೆಗಳಿಗೆ ಕನ್ನಡಿ ಹಿಡಿದಿದ್ದಾರೆ. ಸಮಾಜದ ಆರೋಗ್ಯದ ಕುರಿತು- ಶೌಚ, ಟ್ರಾಫಿಕ್ --// ಮೊಬೈಲ್ ಗೀಳು, ದತ್ತು ವಿಚಾರ, ಟಿ.ವಿ ಮಾಧ್ಯಮದ ಅತಿರೇಕದ ಅಬ್ಬರ, ಬಾಲಕಾರ್ಮಿಕ, ಪರಿಸರ ವಿನಾಶದ ಬಗ್ಗೆ ಲೇಖಕಿ ಕಾಳಜಿ ವ್ಯಕ್ತಪಡಿಸಿದ್ದಾರೆ.
ಇನ್ನು, ಕೌಟುಂಬಿಕ ವಿಷಯವಸ್ತು ಈ ಪುಸ್ತಕದ highlight ಎಂದರೆ ತಪ್ಪಾಗಲಾರದು. ಕೌಟುಂಬಿಕ ಎಂದಾಗ ಅದರ ಕೇಂದ್ರಬಿಂದು ಹೆಣ್ಣು. ಹಾಗಾಗಿ ಆಕೆಯ ಸುತ್ತಲೇ ವಿಷಯಗಳನ್ನು ಹೆಣೆದಿದ್ದಾರೆ. ಅವೆಲ್ಲಾ ಬಹುತೇಕ ಮನೆಗಳಲ್ಲಿ ಇಂದಿಗೂ ನಡೆಯುವಂತದ್ದು.
ಈ 21ನೇ ಶತಮಾನದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಟ್ಟಿದ್ದು ತನ್ನದೇ ಅಸ್ತಿತ್ವ, ಅಸ್ಮಿತೆಯನ್ನು ರೂಪಿಸಿಕೊಂಡಿದ್ದಾಳೆ. ಹಾಗಿದ್ದಾಗ್ಯೂ ಮತ್ತೊಂದು ಕಡೆ ಹೆಣ್ಣಿನ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಅಂತಹ ಒಂದು ಮಗ್ಗುಲನ್ನು ನಳಿನಿಯವರು ಓದುಗರಿಗೆ ತೆರೆದಿಟ್ಟಿದ್ದಾರೆ. ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ಎಳೆ ಎಳೆಯಾಗಿ ಹರವಿದ್ದಾರೆ.
ಅವಳ ನೋವು, ಒಂಟಿತನ, ಜಿಜ್ಞಾಸೆ, ಭಯ, ಅವಮಾನ, ಅವಳ ಆಪ್ತರಿಂದಲೇ ಅನುಭವಿಸುವ ಮಾನಸಿಕ ಯಾತನೆಗಳನ್ನು ವಾಸ್ತವ ಘಟನೆಗಳ ಸಮೇತ ಹೇಳುತ್ತಾ ಹೋಗುತ್ತಾರೆ. ಪುರುಷನ ದಬ್ಬಾಳಿಕೆಯನ್ನು ಹೆಣ್ಣು ಮೌನವಾಗಿಯೇ ಸಹಿಸಿಕೊಳ್ಳುವಳು. ನಿಜ ಹೇಳಬೇಕೆಂದರೆ ಹೆಣ್ಣಿನ ಮೇಲೆ ದಬ್ಬಾಳಿಕೆ/ಶೋಷಣೆ ಮಾಡುವ ಪುರುಷ ತನ್ನಲ್ಲಿರುವ ದೌರ್ಬಲ್ಯವನ್ನು ಮುಚ್ಚಿಡಲು ಹೀಗೆ ಮಾಡುತ್ತಾನೆ. ಇದೆಲ್ಲಾ ನೋಡುತ್ತಿದ್ದರೆ ಹೀಗೂ ಉಂಟೇ..?? ಒಂದು ಹೆಣ್ಣಿನ ಬದುಕಿನಲ್ಲಿ ಹೀಗೆಲ್ಲಾ ಇರಲು ಸಾಧ್ಯವೇ..?? ಎಂದು ಅಚ್ಚರಿಯಾಗುತ್ತದೆ.
ಈ ಪುಸ್ತಕ ನನಗೆ ಬಹುಬೇಗ ಯಾಕೆ ಕನೆಕ್ಟ್ ಆಯಿತೆಂದರೆ, ನನ್ನ “ಮೌನದ ಚಿಪ್ಪಿನೊಳಗೆ” ಕೃತಿಯಲ್ಲಿನ ಬಹುತೇಕ ತದ್ರೂಪವನ್ನು ಇಲ್ಲೂ ನೋಡುವಂತಾಯಿತು. ಇವರ ಇಲ್ಲಿನ ವಿಷಯದಲ್ಲಿ ತಾವು ಕಣ್ಣಾರೆ ಕಂಡ ವಿಷಯಗಳನ್ನು ಮುನ್ನೆಲೆಗೆ ತಂದು ಸಾಮಾಜಿಕವಾಗಿ ಪ್ರಶ್ನಿಸಿದ್ದಾರೆ.
ಪುರುಷ ಹಾಗೂ ಮಹಿಳೆ ಸರಿಸಮಾನರು ಅಂತ ನಾವು ಎಷ್ಟೇ ಬೊಬ್ಬಿಟ್ಟರೂ ಕೂಡ ಇಂದಿಗೂ ನಮ್ಮದು “ಪುರುಷಪ್ರಧಾನ ಸಮಾಜವೇ..” ಅದು ಹೆಣ್ಣಿನ ಮನೆಯಲ್ಲೇ ಗೊತ್ತಾಗುತ್ತದೆ. ಸ್ವಾತಂತ್ರ್ಯಹರಣ, ಮೂದಲಿಕೆ, ಅವಹೇಳನ, ತಾತ್ಸಾರ ಅವಳಿಗೆ ಕಟ್ಟಿಟ್ಟ ಬುತ್ತಿ. ಇಲ್ಲಿ ಗಂಡಿನ ‘ಅಹಂ’ ಮೆರೆಯುತ್ತಿರುತ್ತದೆ.
ದೌರ್ಜನ್ಯ/ಶೋಷಣೆ ಎಂಬುದು ಹೊಡೆತ-ಬಡಿತ ಎಂಬುದೇ ಆಗಿರಬೇಕೆಂದಿಲ್ಲ. ಮತ್ತೊಂದು ಕ್ರೌರ್ಯ ಎಂದರೆ ಅದು ಭಾವನಾತ್ಮಕ ದೌರ್ಜನ್ಯ/ ಭಾವನಾತ್ಮಕ ನಿಂದನೆ/ ಭಾವನಾತ್ಮಕ ಕೊಲೆ ಆಗಿರುತ್ತದೆ. ಇದನ್ನೆಲ್ಲಾ ಸಾಬೀತುಪಡಿಸುವ ಅನೇಕ ಬದುಕಿನ ನೈಜ ಘಟನೆಗಳನ್ನು ಹೇಳುತ್ತಾ ಹೋಗುತ್ತಾರೆ.
ಪುಸ್ತಕದ ಝಲಕ್--
1. ಗೃಹಿಣಿಯರ ಸಂಕಷ್ಟ ಒಂದಾದರೆ, ಆರ್ಥಿಕವಾಗಿ ಸ್ವಾವಲಂಬಿಗಳು ಎಂದು ಹೇಳುವ ವರ್ಕಿಂಗ್ ಹೆಣ್ಣುಮಕ್ಕಳ ಹಣೆಪಾಡು ಕೂಡ ಶೋಚನೀಯ. ದುಡಿಯುವ ಮಹಿಳೆ ಒಳ್ಳೆಯ ಸ್ಥಾನದಲ್ಲಿದ್ದು ತನ್ನ ಅಸ್ಮಿತೆಯನ್ನು ರೂಪಿಸಿಕೊಂಡಿದ್ದಾಳೆ ಎಂದು ಹೆಮ್ಮೆ ಪಡುವುದು ಒಂದು ಕಡೆಯಾದರೆ, ಅನೇಕ ಸಂಸಾರಗಳಲ್ಲಿ ಆಕೆ ತನ್ನ ಸಂಬಳವನ್ನೆಲ್ಲಾ ಗಂಡನಿಗೊಪ್ಪಿಸಿ ಚಿಲ್ಲರೆ ಹಣಕ್ಕೂ ಆತನ ಬಳಿಯೇ ಕೈಯೊಡ್ಡಬೇಕಾದ ಪರಿಸ್ಥಿತಿ ನಿಜಕ್ಕೂ ಶೋಚನೀಯ.
2. ಹಾಗೆಯೇ ತಾಯಿ ತನ್ನ ಮಕ್ಕಳಿಗೆ ಚಿಕ್ಕಂದಿನಿಂದಲೇ ತಿದ್ದಬೇಕು, ಜವಾಬ್ದಾರಿ ಕೊಡಬೇಕು.
3. ಹೆಣ್ಣು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತ್ಯಾಗಮಯಿ ಎಂಬ ಹಣೆಪಟ್ಟಿ ಹೊರುತ್ತ ತಾನೇ ನೆಲಕಚ್ಚುವಳು.
4. ಗಂಡು/ಹೆಣ್ಣು ಎಂಬ ತಾರತಮ್ಯ ಇಂದಿಗೂ ಕಾಣಬಹುದು. ಹೆಣ್ಣು ಅಬಲೆ ಎಂದು ಹೇಳುತ್ತಲೇ ಪುರುಷ ಅಹಂಕಾರ ಮೆರೆಯುತ್ತದೆ.
5. ಮಕ್ಕಳಿಗೆ ಯಾವ ಒತ್ತಡ ಹೇರದೆ ಸಹಜವಾಗಿ ಬೆಳೆಯಲು ಬಿಡಿ.
6. ಹೆಣ್ಣಿಗೆ ME TIME ಬೇಕು. ಅವಳಿಗೆ ಮಾಡುವುದನ್ನು ‘ಸಹಾಯ’ ಎನ್ನದೆ, ಅದು ‘ತಮ್ಮದೂ ಜವಾಬ್ದಾರಿ’ ಎಂದು ಮನೆಮಂದಿ ಮನಗಾಣಬೇಕು.
7. ಸಾಮಾನ್ಯವಾಗಿ ಅತ್ತೆ-ಸೊಸೆ, ಅತ್ತಿಗೆ-ನಾದಿನಿಯರ ವಿಕೋಪಗಳು ತಾರಕಕ್ಕೇರುತ್ತವೆ. ನಾದಿನಿಯರು ತೌರಿಗೆ ಬಂದಾಗ ಅತ್ತಿಗೆಯೊಡನೆ ಹೇಗಿರಬೇಕು ಎಂದು ಬಹಳ ಚೆನ್ನಾಗಿ ಹೇಳಿದ್ದಾರೆ. ‘ನಾದಿನಿ ಎಂದರೆ ನಾನಿದ್ದೀನಿ’
8. ಲಾಕ್ ಡೌನ್ ನಲ್ಲಿ ಕಲಿತದ್ದು, ಮಾನವೀಯತೆಯಿಂದ ಮೆರೆದದ್ದು.
9. ಹೆಂಡತಿಯ ತಾಯಿ ಸತ್ತರೂ ಅವಳನ್ನು ಕಳಿಸದಂತೆ ತಮ್ಮ ಕ್ರೌರ್ಯದಿಂದ ಮೆರೆಯುವ ಪುರುಷರೂ ಇದ್ದಾರೆ.
10. ಪುರುಷ ತನಗೆ ಯಾವಾಗ, ಎಲ್ಲಿಗೆ ಬೇಕಾದರೂ ನಿಂತ ಕಾಲಲ್ಲೇ ಹೊರಟುಬಿಡಬಹುದು. ಆದರೆ ಹೆಂಗಸರು ಮನೆಯಲ್ಲಿ ಕೆಲಸದವರು, ಹಾಲಿನವರು, ಪೇಪರ್ ಹಾಕುವವನಿಗೆ instructions ಕೊಟ್ಟು, ಗ್ಯಾಸ್ ಆಫ್ ಆಗಿದೆಯಾ, ಕಿಟಕಿ ಹಾಕಿದೆಯಾ, lights off ಆಗಿದೆಯಾ.. ಮನೆಬೀಗ ಸರಿಯಾಗಿ ಇಟ್ಟುಕೊಂಡಿದ್ದೀನಾ ... ಹೀಗೆ long list ಹೋಗ್ತಾನೇ ಇರುತ್ತೆ. ಇವನ್ನೆಲ್ಲಾ ನಿಗಾ ಮಾಡಿ ಹೊರಟು ಪುನಃ ಮನೆಗೆ ಬಂದಾಗ ರಾಶಿ ಕೆಲಸ ಕಾಯುತ್ತಿರುತ್ತೆ.
11. ಕೆಲವರಿಗೆ ಬಾಯಿಚಪಲವೋ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸಿಕೊಳ್ಳುವ ಚಪಲವೋ ಏನೋ.. ಇನ್ನೊಬ್ಬರಿಗೆ free advice ಕೊಡೋದರಲ್ಲಿ ಎತ್ತಿದ ಕೈ. ಬೇರೆಯವರ ವಿಷಯಕ್ಕೆ ಅನಾವಶ್ಯಕವಾಗಿ ಮೂಗು ತೂರಿಸಬಾರದು ‘ಸ್ವಲ್ಪ ಬಾಯಿ ಹೊಲಿದುಕೊಂಡಿರಿ’ ಎಂದು ಸಣ್ಣದಾಗಿ ಗದರುತ್ತಲೇ ಆವಾಜ್ ಹಾಕಿದ್ದಾರೆ.
12. ಈಗೆಲ್ಲಾ ಸಾಕಷ್ಟು ಅತ್ತೆಯಂದಿರು ಬದಲಾಗಿರುವುದನ್ನು ನೋಡಬಹುದು. ಅವರೇ ಮನೆಗೆ ಬರುವ ಸೊಸೆಯಂದಿರಿಗೆ adjust ಆಗಲು ಸಿದ್ಧರಿದ್ದಾರೆ. ವಿಪರ್ಯಾಸ ಎಂದರೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಇಂದಿನ ಸೊಸೆಯಂದಿರೇ ಅಗೌರವದಿಂದ, ದುರಹಂಕಾರದಿಂದ ನಡೆದುಕೊಳ್ಳುತ್ತಾರೆ.
13. ಅಪ್ಪ ಅನ್ನುವವ ಅನನ್ಯ
14. ಇನ್ನು T.V. adv ಗಳಲ್ಲೂ ಕೂಡ ‘ಹೆಣ್ಣು ಎಂದರೆ ಬರೀ ಮನೆಗೆಲಸಕ್ಕೆ’ ಅನ್ನುವ ಸಂದೇಶ ಸಾರುವಂತಿದೆ. ಹೆಂಡತಿ ಗಂಡನ shirt ತಿಕ್ಕಿತೀಡುವುದು, ಪಾತ್ರೆ ತೊಳೆಯುವುದು..
ಈ ಕೊನೆಯ point ಬಗ್ಗೆ ಕೊಂಚ update ಹೇಳಬೇಕೆಂದರೆ, ಇಂದಿನ ಯುವಪೀಳಿಗೆಗಳಲ್ಲಿ ಕೊಂಚ ಬದಲಾವಣೆಯನ್ನು ಕಾಣಬಹುದು. ಇಬ್ಬರೂ ವರ್ಕಿಂಗ್ ಇರುವುದರಿಂದ ಹೆಚ್ಚಿನ ಅನ್ಯೋನತೆ ಕಾಣಬಹುದು. ಅದನ್ನು T.V ad ಗಳಲ್ಲಿ ನೋಡಬಹುದು. ಗಂಡನೇ ಹೆಂಡತಿಗೆ ಟೀ ಮಾಡಿಕೊಡುವುದು/ ಪಾತ್ರೆ ತೊಳೆಯುವುದು, ಮಕ್ಕಳೊಡನೆ ಸೇರಿ washing machine ಗೆ ಬಟ್ಟೆ ಹಾಕುವುದು--ಹೆಂಡತಿಯ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಸಂತೃಪ್ತಿ ಪಡಿಸುವನು.
ಹೆಣ್ಣುಮಕ್ಕಳ ಬದುಕಿನಲ್ಲಿ ನಡೆಯುವ ಕಹಿ ಘಟನೆಗಳ ಉದಾಹರಣೆಗಳನ್ನು ಕೊಡುತ್ತ, ಹೆಣ್ಣು ಯಾಕೆ ಹೀಗೆ ಸಂಕಟಪಡಬೇಕು ಎಂಬ ಪ್ರಶ್ನೆ ಹಾಕುತ್ತಲೇ, ಅವಳು ಅದನ್ನು ನಿವಾರಿಸಿಕೊಳ್ಳಲು ಪರ್ಯಾಯ ಮಾರ್ಗವನ್ನೂ ಕೆಲವೊಂದು ಕಡೆ ಸೂಚಿಸಿದ್ದಾರೆ. ಮತ್ತೆ ಕೆಲವನ್ನು ಓದುಗರಿಗೇ ಉತ್ತರ ಹುಡುಕಿಕೊಳ್ಳಲು ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಈಕೆಯ ಕುಟುಂಬದ ಸದಸ್ಯರು, ಗಂಡ- ಮಕ್ಕಳು ಇವಳೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಹೇಳಿದ್ದಾರೆ.
ಅಷ್ಟೇ ಅಲ್ಲದೆ, ಹೆಂಡತಿಯರನ್ನು ಅರ್ಥ ಮಾಡಿಕೊಳ್ಳದ ಗಂಡಂದಿರು, ಮಕ್ಕಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲೇ, "ನಿಮ್ಮಾಕೆಯನ್ನು ನೋಯಿಸದಿರಿ, ಸ್ವಲ್ಪ ಅರ್ಥ ಮಾಡಿಕೊಳ್ಳಿರಿ.. ಪ್ಲೀಸ್ " ಎಂದು ಕಳಕಳಿ ತೋರಿದ್ದಾರೆ.
ಹೀಗೆ ಅದೆಷ್ಟೋ ಹೆಣ್ಣುಮಕ್ಕಳ ನೋವಿನ ಆರ್ತನಾದ ಕತ್ತಲೆಯ ಗರ್ಭದಲ್ಲೇ ಕರಗಿಹೋಗುತ್ತಿವೆ. ಒಟ್ಟಿನಲ್ಲಿ ಬದುಕಿನ ಲೆಕ್ಕವನ್ನು ಸವಿಸ್ತಾರವಾಗಿ ಓದುಗರಿಗೆ ಹರವಿದ್ದಾರೆ.
* * *
ಹೆಣ್ಮಕ್ಳೆಲ್ಲಾ ಸೇರ್ಕೊಂಡು ಇದೇನಪ್ಪಾ ಹೀಗೆ ಬರೀ ಗಂಡಸರನ್ನ ಹಿಗ್ಗಾ ಮುಗ್ಗಾ ಝಡಾಯಿಸುತ್ತಿದ್ದಾರೆ ಅಂದುಕೋಬೇಡಿ. ಹಾಗೆಯೇ ಲೇಖಕಿಯೂ, ಅವರ ಕೃತಿ ಪರಿಚಯ ಮಾಡುತ್ತಿರು ನನ್ನನ್ನೂ ಪುರುಷ ದ್ವೇಷಿಗಳು ಅಂತ ಹಣೆಪಟ್ಟಿ ಕಟ್ಟಬೇಡಿ. ಕೌಟುಂಬಿಕ ಪುಸ್ತಕದಲ್ಲಿ ‘ಕಾಣದ ವಾಸ್ತವವನ್ನು ಬಿಚ್ಚಿಡುವ ಕೆಲಸ ಮಾಡುತ್ತಿರುವುದಷ್ಟೇ.’
ಈ ಎಲ್ಲವೂ ಸಾರ್ವತ್ರಿಕವಾದುದಲ್ಲ. ಆದರೆ ನಮಗೆ ಕಂಡೂ ಕೇಳರಿಯದ ಇಂಥ ಅದೇಷ್ಟೋ ಸಂಸಾರಗಳು ನಮ್ಮ ನಿಮ್ಮ ಮಧ್ಯೆಯೇ ನಲುಗಿಹೋಗುತ್ತಿವೆ. ಅಂತಹವನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಲಾಗಿದೆ. ಈ ಕೃತಿಯಲ್ಲಿ ಕುಟುಂಬದ ಪ್ರತಿಯೊಬ್ಬರ ಸಕಾರಾತ್ಮಕ, ನಕಾರಾತ್ಮಕ ಗುಣಗಳನ್ನೂ ಹೇಳುತ್ತಲೇ ಒಟ್ಟಾರೆ ಕೌಟುಂಬಿಕ ವಿಷಯ ಪ್ರಸ್ತಾವಿಸುತ್ತಲೇ ಸಾಮಾಜಿಕವಾಗಿಯೂ ಪ್ರಶ್ನೆ ಮಾಡುತ್ತದೆ. ಮನೆಮನೆಗಳಲ್ಲಿ, ನಮ್ಮ ಸುತ್ತಮುತ್ತಲೇ ನಡೆಯುವಂಥ ವಿಷಯಗಳನ್ನು ನಾವು ಕಾಣಬಹುದು.
ಸದಾ ಹಾಸ್ಯದ ರಸಪಾಕ ಉಣಿಸುವ ನಳಿನಿಯವರ ಲೇಖನಿ ಇಲ್ಲಿನ ಈ ಗಂಭೀರ ಬರಹದಲ್ಲಿ ಅಲ್ಲಲ್ಲಿ ತೂರಿರುವ casual ಸ್ವರೂಪವನ್ನು ನಿರ್ಭಂದಿಸಬಹುದಿತ್ತು ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
ಸಾರಸ್ವತ ಲೋಕದಲ್ಲಿ ಲೇಖಕಿ ನಳಿನಿ ಟಿ. ಭೀಮಪ್ಪ ಅವರ ಹೆಜ್ಜೆ ಮತ್ತಷ್ಟು ಗಟ್ಟಿಗೊಂಡು ಜಯಭೇರಿ ಬಾರಿಸುತ್ತಿರಲಿ ಎಂದು ಶುಭ ಹಾರೈಸುವೆ.
-ಧಾರಿಣಿ ಮಾಯಾ
ಪುಸ್ತಕ: ಚಿತ್ತ-ಬಕ್ಕ
ಪ್ರ: ನ್ಯೂ ವೇವ್ ಬುಕ್ಸ್
ಪುಟ: 152 +
ಬೆಲೆ: 180/-
"ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ...
“ಕಾದಂಬರಿಯ ಈ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮಹತ್ವದ ಸುದ್ದಿ, ಪ್ರಭಾವ ವಲಯ-ಎಂಬುದು ಇದರ ಅರ್ಥವೆಂಬುದು ಕಾದಂಬರಿ...
“ನಾನು ಪದವಿ ವ್ಯಾಸಾಂಗದ ಅಂತಿಮ ವರ್ಷದ. ಕೊನೆಯ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯರ ಪ್ರತಿನ...
©2025 Book Brahma Private Limited.