ಕಥೆಗಳಲ್ಲಿ ಪ್ರೀತಿಯ ಆಕರ್ಷಣೆಯಿಂದ ಬದುಕನ್ನು ನರಕ ಮಾಡಿಕೊಳ್ಳುವವರಿಗೆ‌ ಸಂದೇಶವಿದೆ


"ಕೊಡಗಿನ ಸೊಬಗನ್ನು ಅಲ್ಲಿನ ಕೆಲವು ಸ್ಥಳಗಳ ವಿವರಣೆಯನ್ನು, ಜನರು ಜೀವನ ಶೈಲಿಯನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಕೊಡಗಿನ ರಸ್ತೆಗಳು, ಅಲ್ಲಿನ ವಾತಾವರಣ, ಹವಾಮಾನದ ಪರಿಚಯವನ್ನು ಕಥೆಗಳ ಮಧ್ಯೆ ಕಾಣಬಹುದು," ಎನ್ನುತ್ತಾರೆ ಆಶ್ರಿತ ಕಿರಣ್. ಅವರು ಹೇಮಂತ್ ಪಾರೇರಾ ಅವರ ‘ಒಲವಿನ ಸವಾರಿ’ ಕೃತಿ ಕುರಿತು ಬರೆದ ವಿಮರ್ಶೆ.

ಪುಸ್ತಕದ ಹೆಸರು : ಒಲವಿನ ಸವಾರಿ
ಲೇಖಕರು : ಹೇಮಂತ್ ಪಾರೇರಾ
ಪ್ರಕಾಶಕರು : ವಿಭ ಪ್ರಕಾಶನ ಮೈಸೂರು
ಪುಟಗಳ ಸಂಖ್ಯೆ : 168
ಪುಸ್ತಕದ ಬೆಲೆ : 200/-

ಬದುಕಿನಲ್ಲಿ ಕೆಲವು ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸುವುದು ತುಂಬಾ ಮುಖ್ಯವಾಗಿರುತ್ತದೆ. ಆ ಗಳಿಗೆ ಅಥವಾ ಆ ಕ್ಷಣದಲ್ಲಿ ಅನ್ನಿಸಿದ್ದನ್ನು ಯೋಚಿಸದೇ ಮಾಡಿದರೆ ಅದರಿಂದ ಉಂಟಾಗುವ ಪರಿಣಾಮ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಜೀವನದ ಪ್ರತಿಯೊಂದು ಕ್ಷಣ, ಪ್ರತಿ ಗಳಿಗೆ ಹೆಜ್ಜೆ ಇಡುವ ಮುನ್ನ ಯೋಚಿಸಿ ಮುನ್ನೆಡೆಯುವುದು ತುಂಬಾ ಮುಖ್ಯ.

ಮುಂದಾಗಬಹುದಾದ ಪರಿಣಾಮವನ್ನು ಅತಿಯಾಗಿ ಯೋಚಿಸುವುದು ತರವಲ್ಲ. ಹಾಗಂತ ಯೋಚಿಸದೇ ಆ ಗಳಿಗೆಯಲ್ಲಿ ಮೈಮೆರೆತು ತೆಗೆದುಕೊಂಡ ನಿರ್ಧಾರದಿಂದ ಉಂಟಾಗುವ ಪರಿಸ್ಥಿತಿ, ಎದುರಿಸಬೇಕಾದ ಪರಿಣಾಮ ಜೀವನದ ನೆಮ್ಮದಿಯನ್ನು ಹೇಗೆಲ್ಲಾ ಕೆಡಿಸುತ್ತದೆ ಎನ್ನುವುದನ್ನು " ಒಲವಿನ ಸವಾರಿ "ಯಲ್ಲಿನ ಕಥೆಗಳು ತಿಳಿಸುತ್ತವೆ.

ಇದೊಂದು ಕಥಾ ಸಂಕಲನ. ಇಲ್ಲಿ ಒಟ್ಟು ಆರು ಕಥೆಗಳಿವೆ. ಆರು ಕಥೆಗಳಲ್ಲಿ ಎರಡು ಕಥೆಗಳು ಹದಿಹರೆಯದಲ್ಲಿ ಹುಟ್ಟಿದ ಆಕರ್ಷಣೆಯ ಬಗ್ಗೆ ಅದರಿಂದ ಅನುಭವಿಸುವ ತೊಂದರೆಗಳ ಬಗ್ಗೆ ತಿಳಿಸಿದರೆ ಉಳಿದ ನಾಲ್ಕು ಕಥೆಗಳಲ್ಲಿ ಪ್ರೀತಿ ನಂಬಿಕೆ ಹಾಗು ವಿಧಿಯ ಆಟದಿಂದ ಅನುಭವಿಸುವ ನೋವನ್ನು ಕಾಣಬಹುದು.

ಕೊಡಗಿನ ಸೊಬಗನ್ನು ಅಲ್ಲಿನ ಕೆಲವು ಸ್ಥಳಗಳ ವಿವರಣೆಯನ್ನು, ಜನರು ಜೀವನ ಶೈಲಿಯನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಕೊಡಗಿನ ರಸ್ತೆಗಳು, ಅಲ್ಲಿನ ವಾತಾವರಣ, ಹವಾಮಾನದ ಪರಿಚಯವನ್ನು ಕಥೆಗಳ ಮಧ್ಯೆ ಕಾಣಬಹುದು.

ಕಥೆಗಳು ಸರಳವಾಗಿ ನಿರುಪಣೆಗೊಂಡಿದ್ದು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲವು ಸನ್ನಿವೇಶಗಳು ತೀರಾ ವರ್ಣಿಸಲಾಗಿದೆ ಎನಿಸುತ್ತದೆ. ಆದರೆ ಕಥಾವಸ್ತುವಿಗೆ ಕಥೆಯ ಆಳಕ್ಕೆ ಇಳಿಯಲು ಅದು ಒಂದು ರೀತಿಯಲ್ಲಿ ಪೂರಕವಾಗಿದೆ.

ಆರೂ ಕಥೆಗಳಲ್ಲಿ "ಒಲವು" ಮೂಲ ಕಥಾವಸ್ತು ಆಗಿದೆ. ಓದುವ ಸಮಯದಲ್ಲಿ ಆಕರ್ಷಣೆಗೆ ಒಳಗಾಗಿ ಮಾಡುವ ತಪ್ಪಿನಿಂದ ಅವಮಾನವನ್ನು ಅನುಭವಿಸಿ ಅದರಿಂದಾಚೆ ಹೊರಬರಲು ಹೋರಾಟ ಮಾಡುವ ಜೋಡಿಗಳ ಕಥೆಯೇ "ಒಲವಿನ ಆಸರೆ ". ಮೋಹಿತ್ ಹಾಗು ಪಾವನ ನಡುವಿನ ಪ್ರೀತಿ ಫೋಲೀಸ್ ಸ್ಟೇಷನ್ ಮೆಟ್ಟಿಲ್ಲೇರಿದ ಮೇಲೆ ಏನಾಯಿತು? ಇಬ್ಬರೂ ಒಂದಾದರೇ ? ಮಾಡಿದ ತಪ್ಪಿಗೆ ಹೇಗೆ ಪಶ್ಚಾತ್ತಾಪ ಪಟ್ಟರು ? ಕಾಲೇಜಿನಲ್ಲಿ ಸ್ನೇಹಿತರಾಗಿದ್ದವರು ಪ್ರೇಮಿಗಳಾಗಿ ಬದಲಾಗಲು ಸ್ನೇಹಿತರ ಮಾತುಗಳು ಹೇಗೆ ಕಾರಣವಾಯಿತು ಎನ್ನುವುದೇ ಇಲ್ಲಿನ ಕಥೆ.

ಹರೆಯದಲ್ಲಿ ಮೂಡುವ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ ಎನ್ನುವುದನ್ನು ತಿಳಿಸುವ ಪ್ರಯತ್ನ ಈ ಕಥೆಯಲ್ಲಿ ಕಾಣಬಹುದು.

ಒಂದು ಹಾಡಿಯಲ್ಲಿ ಜೀವನ ನೆಡೆಸುವವರ ಬಗ್ಗೆ ತಿಳಿಸುತ್ತಾ ಸಣ್ಣಪ್ಪನ ಜೀವನ ಶೈಲಿ ಹಾಗು ಕಲ್ಯಾಣಿಯ ಬದುಕಿನ ಸುತ್ತ ಸುತ್ತು ಸುತ್ತುವ ಕಥೆಯೇ "ಕಾಡಿನ ಕಪ್ಪು ಸುಂದರಿ". ಕಲ್ಯಾಣಿ ಕುಡಿತದ ಚಟವಿರುವ ಸಣ್ಣಪ್ಪನನ್ನು ಮದುವೆಯಾದ ದಿನವೇ ಅವನಿಂದ ಹೊಡೆತ ತಿನ್ನುವ ಪರಿಸ್ಥಿತಿ ನೆನೆದಾಗ ಅವಳ ಬಗ್ಗೆ ಕನಿಕರ ಮೂಡುತ್ತದೆ. ಅವಳು ತೆಗೆದುಕೊಂಡ ಆತುರದ ನಿರ್ಧಾರದಿಂದ ಹೇಗೆ ತೊಂದರೆಗೊಳಗಾಗಿ ಅದರಿಂದಾಚೆ ಬರುತ್ತಾಳಾ ಎನ್ನುವುದಕ್ಕೆ ಬಹಳಾ ಬೇಗ ಉತ್ತರ ಸಿಗುತ್ತದೆ.

"ಚಿಗುರಿದ ಆಸರೆ" ಯಲ್ಲಿ ಕಾಲು ಕಳೆದುಕೊಂಡ ಮಗಳ ಬಗ್ಗೆ ಚಿಂತಿಸಿ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಶ್ರೀಮಂತನೊಬ್ಬನನ್ನು ಕಾಪಾಡಿದ ಕಿರಣ ತೆಗೆದುಕೊಳ್ಳುವ ನಿರ್ಧಾರ ಹೇಗೆ ಆಸೆಯಾಗುತ್ತದೆ ಎನ್ನುವುದು ತಿಳಿಸಿದರೆ ಆಸರೆ ಆಗಬಲ್ಲವನಾಗಿದ್ದವನ್ನು ಭಾವನೆಗಳನ್ನು ಅರಿಯುವಲ್ಲಿ ಸೋತು ಪಶ್ಚಾತಾಪ ಪಡುವ ಕಥೆ "ಸಿರಿ".

"ಸಿರಿ" ಕಥೆಯಲ್ಲಿ ನಾಯಕಿಯ ಕುಟುಂಬ ಕರೋನಾ ಮಹಾಮಾರಿಗೆ ಬಲಿಯಾಗಿ ಅನಾಥೆಯಾಗುತ್ತಾಳೆ. ಅವಳು ಕಂಡ ಕನಸುಗಳು ನನಸಾಗದೆ ಕೊರಗುವ ಅವಳ ಬದುಕಿಗೆ ಬಾಲ್ಯದ ಗೆಳೆಯನಾದ ವಸಂತ ಸಹಾಯ ಮಾಡುತ್ತಾನೋ ಇಲ್ಲವೋ ಎನ್ನುವುದು ಕಥೆ. ಇಲ್ಲಿ ಎರಡು ಕುಟುಂಬಗಳ ಗೆಳೆತನ, ಆಚಾರ ವಿಚಾರ ಕೊಡಗಿನ ಜೀವನವನ್ನು ಚೆನ್ನಾಗಿ ಮುಂದಿಟ್ಟಿದ್ದಾರೆ.

ನಂಬಿಕೆ ಹಾಗು ಮೋಸದ ಬಗ್ಗೆ ಚೆಂದದ ಕಥೆಯೊಂದನ್ನು "ದೇವರ ಕಲ್ಲು" ಕಥೆಯಲ್ಲಿ ನೋಡಬಹುದು. ಹಾಲು ಮಾರುವ ಮಲ್ಲೇಶನ ಎದೆಯಲ್ಲಿ ಚಿಗುರೊಡೆವ ಪ್ರೀತಿ ಅವನಿಗೆ ಸಿಗುತ್ತದೋ ಇಲ್ಲವೋ ಎನ್ನುವುದನ್ನು ಕುತೂಹಲದಿಂದ ಓದಿಸಿಕೊಂಡು ಹೋಗುವ ಕಥೆ " ಅಟ್ಲಾಸ್ ಹುಡುಗ".

ಆರು ಕಥೆಗಳಲ್ಲಿರುವ ವಿಷಯವೊಂದೇ ಅನ್ನಿಸಿದರು ಪ್ರಸ್ತುತ ಪಡಿಸಿರುವ ರೀತಿ ವಿಭಿನ್ನವಾಗಿದೆ. ಒಂದೆರೆಡು ಕಡೆ ಕಥೆಯಲ್ಲಿ ಬರುವ ಪಾತ್ರದ ಹೆಸರಿನಲ್ಲಿ ಸ್ವಲ್ಪ ಗೊಂದಲವಿದೆ. ಅದು ಕಥೆಯಲ್ಲಿ ಮುಳುಗಿ ಹೋಗಿದ್ದಾಗ ಸ್ವಲ್ಪ ಯೋಚಿಸುವಂತೆ ಮಾಡುತ್ತದೆ.

ಇಲ್ಲಿನ ಕಥೆಗಳಲ್ಲಿ ಪ್ರೀತಿಯ ಆಕರ್ಷಣೆಯಿಂದ ಬದುಕನ್ನು ನರಕ ಮಾಡಿಕೊಳ್ಳುವವರಿಗೆ‌ ಸಂದೇಶವಿದೆ. ನಂಬಿಕೆದ್ರೋಹ ಮಾಡಿದ ಪರಿಣಾಮದಿಂದ ಎದುರಿಸುವ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಇದೆ. ಕಥೆಯಲ್ಲಿ ಕೊಡಗಿನ ಚಿತ್ರಣವನ್ನು ತುಂಬಾ ಸೋಗಸಾಗಿ ಕಟ್ಟಿಕೊಟ್ಟಿದ್ದಾರೆ. ಪಾತ್ರ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಕೊಡಗಿನಲ್ಲಿ ಸಂಚರಿಸಿದ ಅನುಭವವನ್ನು ನೀಡುತ್ತದೆ.

- ಆಶ್ರಿತ ಕಿರಣ್

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...