"ಟಿಪ್ಪುವನ್ನು ಸೆರೆಹಿಡಿದು ಅವನೊಬ್ಬನನ್ನು ಸೆರೆಯಲ್ಲಿಡುವುದರಿಂದಲೇ ಬ್ರಿಟಿಷರ ಸ್ಥಾನ ದಕ್ಷಿಣದಲ್ಲಿ ಭದ್ರವಾಗಿರಲು ಸಾಧ್ಯವಿರಲ್ಲಿಲ್ಲ. ಆದ್ದರಿಂದ ಆ ಹುಲಿಯ ಉಗುರು ಕಿತ್ತು ಅದನ್ನು ಪಳಗಿಸಿದ್ದು ಸಾಲದೆ, ಆ ಹುಲಿಗೆ ಬೆಂಬಲಕೊಟ್ಟ ಈ ನಾಡಿನ ಜನರನ್ನೂ ವಿಭಜಿಸಿ ಆಳುವ ಕುಯಕ್ತಿ ಮಾಡಿ ಬಳ್ಳಾರಿಯನ್ನೂ ಅದರ ನೆರೆಯ ಕನ್ನಡ ನಾಡನ್ನೂ ದಿಕ್ಕು ದಿಕ್ಕುಗಳಿಗೆ ಹರಿದು ಹಂಚಿ ಹಾಕಿದರು” ಎಂಬ ಅವರ ಮಾತಿನಲ್ಲಿ ಸಾಕಷ್ಟು ಅರ್ಥವಿದೆ ಎನಿಸುತ್ತದೆ ಎಂದು ಲೇಖಕ ಮೃತ್ಯುಂಜಯ ರುಮಾಲೆ ಮತ್ತು ಲೇಖಕ ವೀರಶೆಟ್ಟಿ ಬಿ. ಗಾರಂಪಳ್ಳಿ ಅವರ ಸಂಪಾದಕತ್ವದ " ಬಳ್ಳಾರಿ ವಿಲೀನ : ಮಹತ್ವದ ದಾಖಲೆಗಳು" ಪುಸ್ತಕದ ಪೀಠಿಕೆ ನಿಮ್ಮ ಓದಿಗಾಗಿ...
ಕ್ರಿ.ಪೂ. 3ನೇ ಶತಮಾನದಲ್ಲಿ ಬಳ್ಳಾರಿ ಜಿಲ್ಲೆಯನ್ನು ಶಾತವಾಹನರು, ಆನಂತರ ನಳರು ಆಳ್ವಿಕೆ ಮಾಡಿದ್ದರೆಂದು ಹೇಳಲಾಗುತ್ತದೆ. ಕ್ರಿ.ಶ. 3ನೇ ಶತಮಾನದ ನಂತರ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಚೋಳರು, ಕಲಚೂರಿಗಳು, ಹೊಯ್ಸಳರು, ಯಾದವರು ಹೀಗೆ ಮುಂತಾದ ವಂಶಗಳಿಗೆ ಸೇರಿದ ಕನ್ನಡದ ಅರಸರು ಈ ಪ್ರದೇಶವನ್ನು ಆಳ್ವಿಕೆ ಮಾಡಿದ್ದರು. ಈ ಜಿಲ್ಲೆಯ ಅದವಾನಿ, ಹರಪನಹಳ್ಳಿ, ಉಚ್ಚಂಗಿದುರ್ಗ ಮತ್ತು ಕಂಪ್ಲಿಗಳು ಹಿಂದಿನ ಕಾಲದಲ್ಲಿ ರಾಜಕೀಯ ಕೇಂದ್ರಗಳಾಗಿದ್ದ ಬಗ್ಗೆ ನಮಗೆ ಸಾಕಷ್ಟು ಮಾಹಿತಿಗಳು ಲಭಿಸುತ್ತವೆ. ಬಳ್ಳಾರಿಗೆ ಈ ಮೊದಲು 'ಬಳ್ಳಾರೆ' ಎಂಬ ಹೆಸರಿತ್ತಂತೆ. ೧೨ನೇ ಶತಮಾನದಲ್ಲಿ ಅದು 'ಬಳ್ಳಾರಿ' ಆಯಿತೆಂದು ಹೇಳಲಾಗುತ್ತದೆ. ಸುಮಾರು 1000 ವರ್ಷಗಳಿಂದಲೂ ಬಳ್ಳಾರಿಯೂ ಶುದ್ಧ ಕನ್ನಡದ ಹೆಸರಿನಿಂದ ಉಳಿದುಕೊಂಡು ಬಂದಿದೆ ಎನ್ನಲಾಗುತ್ತದೆ. ರಾಚಮಲ್ಲ, ಭೀಮರಸ, ಅಜ್ಜರಸ ಮೊದಲಾದ ಸಿಂಧ ವಂಶದ ಅರಸರಿಗೆ ಇದು ರಾಜಧಾನಿಯಾಗಿತ್ತೆಂದು ಶ್ರೀ ಪಾಂಡುರಂಗರಾಯರು ಅಭಿಪ್ರಾಯಪಡುತ್ತಾರೆ. ಬಳ್ಳಾರಿ ಪ್ರದೇಶದ ಹೊಸಪೇಟೆ ತಾಲೂಕಿನ ಹಂಪೆಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯೊಂದಿಗೆ ಸುವರ್ಣಕಾಲ ಕಂಡ ಇದು, ವಿಜಯನಗರ ಸಾಮ್ರಾಜ್ಯದ ಪತನದೊಂದಿಗೆ ರಾಜಕೀಯ ಗೊಂದಲಕ್ಕೆ ಒಳಪಟ್ಟಿತ್ತು. ವಿಜಯನಗರದ ನಂತರ ಹೈದ್ರಾಬಾದಿನ ನಿಜಾಂರು ಮತ್ತು ಮರಾಠರು ಕೆಲವು ದಿಗಳವರೆಗೆ ಇದನ್ನು ಆಳಿದ್ದರು. ವಿಜಯನಗರದ ಅರಸರು ಅಲಂಕರಿಸಿದ್ದ ಸಿಂಹಾಸನಕ್ಕೆ 'ಕರ್ನಾಟಕ ರತ್ನ ಸಿಂಹಾಸನ' ಎಂದೇ ಕರೆಯಲಾಗಿದೆ. ಅವರ 'ಅರಮನೆ-ಗುರುಮನೆ-ಆಡಳಿತ ಮನೆ'ಯ ಮಾತು ಕನ್ನಡವಾಗಿತ್ತು. ಬಳ್ಳಾರಿ ಪ್ರದೇಶದಲ್ಲಿರುವ ಹಂಪೆಯು ಪುರಾತನ ಕಾಲದ ಪುಣ್ಯಕ್ಷೇತ್ರ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ, ಅಂಜನೀಪುತ್ರ ಹನುಮಂತನನ್ನು ಕಂಡಿದ್ದು, ವಾಲಿಯನ್ನು ಸಂಹರಿಸಿದ್ದು ಇಲ್ಲಿಯೇ ಎಂಬ ನಂಬಿಕೆಗಳಿವೆ. ತ್ರೇತಾಯುಗದಲ್ಲಿ ಮಹಾರಾಷ್ಟ್ರದ ಪಂಚವಟಿ (ಇಂದಿನ ನಾಸಿಕ್)ಯಲ್ಲಿ ತನ್ನ ಧರ್ಮಪತ್ನಿಯನ್ನು ಕಳೆದುಕೊಂಡ ರಾಮ ಮತ್ತು ಅವನ ಸಹೋದರ ಲಕ್ಷ್ಮಣರನ್ನು ಸತ್ಕರಿಸಿದವರು ಈ ಪ್ರದೇಶದ ಕಿಷ್ಠಿ೦ದೆಯ ಜನರು, ಕರ್ನಾಟಕದ ಪ್ರಪ್ರಥಮ ರಾಜಧಾನಿ ಎನಿಸಿಕೊಂಡ ಆನೆಗೊಂದಿಯ ಅರಸ ಸುಗ್ರೀವ ಮತ್ತು ಅವನ ಮಂತ್ರಿಯಾಗಿದ್ದ ಹನುಮಂತ.
ವಿಜಯನಗರದ ಗತಕಾಲದ ಗುರುತಗಳೊಂದಿಗೆ ಬೆಸೆದುಕೊಂಡಿರುವ ಈ ಪ್ರದೇಶ ಋಷ್ಯಮೂಕ, ಅಂಜನಾ, ಮಾಲ್ಯವಂತ, ಮಾತುಂಗ ಪರ್ವತಗಳಿಂದಾಗಿಯೂ ಪ್ರಸಿದ್ದಿಯನ್ನು ಪಡೆದಿದೆ. ವಾಲಿಯ ದಿಬ್ಬ, ಶಬರಿಯ ಗುಹೆ, ಪಂಪಾಸರೋವರ ಇತ್ಯಾದಿ ಕ್ಷೇತ್ರಗಳಿಂದಲೂ ಈ ಪ್ರದೇಶ ಕನ್ನಡ ಮನಸ್ಸುಗಳೊಂದಿಗೆ ಬೆಸೆದುಕೊಂಡಿದೆ. ಹಾಗಾಗಿ 'ಬಳ್ಳಾರಿ' ಎಂಬುದೇ ಕನ್ನಡಿಗರಿಗೆ ಅತ್ಯಂತ ಪ್ರಿಯವಾದ ಶಬ್ದವಾಗಿತ್ತು ಎನ್ನುತ್ತಾರೆ ಮೈಸೂರು ಸರ್ಕಾರದಲ್ಲಿ ಅಧಿಕಾರಿಗಳಾಗಿದ್ದ ಶ್ರೀ ಡಿ.ಆರ್.ರಾಮಯ್ಯನವರು. ಅಂದಾಜು ೧೪ನೇ ಶತಮಾನದವರೆಗೂ ಕನ್ನಡ ಪ್ರದೇಶಗಳೊಂದಿಗೆ ಜೊತೆಯಾಗಿದ್ದ ಬಳ್ಳಾರಿ ಆನಂತರದ ರಾಜಕೀಯ ಪಲ್ಲಟಗಳಿಂದಾಗಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಲ್ಪಟ್ಟಿತು. ಮೈಸೂರು ಅರಸರ ಕಾಲಕ್ಕೆ ೧೮ನೆಯ ಶತಮಾನದ ಕೊನೆಯ ಭಾಗದಲ್ಲಿ ಅವರ ಸೇನಾಧಿಕಾರಿಯಾಗಿದ್ದ ಹೈದರಾಲಿಯು ಈ ಪ್ರದೇಶದ ಮೇಲೆ ದಾಳಿ ಮಾಡಿ ರಾಯದುರ್ಗ ಮತ್ತು ಹರಪನಹಳ್ಳಿಗಳ ಪಾಳೆಯಗಾರರನ್ನು ಸದೆಬಡೆದು, ಇದನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿದ್ದ. 1775ರಲ್ಲಿ ಹೈದರಾಲಿ ಹಾಗೂ ಬಸಾಲತ್‌ಜಂಗನಿಗೂ ಯುದ್ಧ ನಡೆದು ಹೈದರಾಲಿ ಬಳ್ಳಾರಿಯನ್ನು ಗೆದ್ದುಕೊಂಡಿದ್ದನು. ಮುಂದೆ ಅವನ ಮಗ 1786ರಲ್ಲಿ ಆದವಾನಿಯ ಮೇಲೆ ದಾಳಿ ಮಾಡಿ ಅದನ್ನು ಗೆದ್ದುಕೊಂಡ. 1792ರಲ್ಲಿ ಬ್ರಿಟಿಷರು ಟಿಪ್ಪುವನ್ನು ಸೋಲಿಸುವವರೆಗೂ ಅವು ಮೈಸೂರಿನ ಭಾಗವಾಗಿದ್ದವು. ಆಗ ಸಂಡೂರನ್ನು ಮರಾಠರಿಗೂ ಬಳ್ಳಾರಿಯ ಒಂದು ಭಾಗವನ್ನು ನಿಜಾಂರಿಗೂ ಹಂಚಲಾಯಿತು. ಒಂದು ಪ್ರದೇಶವನ್ನು ಹೀಗೆ ಛಿದ್ರಗೊಳಿಸುವ ಬ್ರಿಟಿಷರ ಮನಸ್ಥಿತಿಗೆ ಒಂದು ಚಾರಿತ್ರಿಕ ಹಿನ್ನಲೆಯನ್ನು ಕೋ.ಚೆನ್ನಬಸಪ್ಪನವರು ಗುರುತಿಸುತ್ತಾರೆ. “ಬಳ್ಳಾರಿ ಜಿಲ್ಲೆ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಭಾರತೀಯ ಸಂಸ್ಕೃತಿ, ಸ್ವಾತಂತ್ರ್ಯ ಹಾಗೂ ಧರ್ಮರಕ್ಷಣೆಗಾಗಿ ಪ್ರಮುಖ ಪಾತ್ರವನ್ನು ವಹಿಸಿದೆ.
ಮಧ್ಯಯುಗದಲ್ಲಿ ಉತ್ತರದಿಂದ ದಾಳಿ ಮಾಡಿದ ಮೊಘಲರೂ, ಮುಸ್ಲಿಮರೂ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ರಾಜಕೀಯ ಸ್ವಾತಂತ್ರ್ಯಗಳನ್ನು ಅಪಹರಣ ಮಾಡಿ ದಕ್ಷಿಣಕ್ಕೆ ನುಗ್ಗಿ ಬಂದಾಗ ಅವರ ಖಡ್ಗಕ್ಕೆ ಖಡ್ಗವಾಗಿ ಅಡ್ಡ ನಿಂತು ಇದೇ ದಕ್ಷಿಣ ಭಾರತವನ್ನು ಪಾರತಂತ್ರ್ಯದಿಂದ ಉಳಿಸಿದವರು ತುಂಗಭದ್ರೆಯ ತಪ್ಪಲಿನ ಕನ್ನಡ ಶೂರರು. ವಿಜಯನಗರ ಸಾಮ್ರಾಜ್ಯ ಪತನವಾಗಿ ಬಳ್ಳಾರಿ ಜಿಲ್ಲೆ ಟಿಪ್ಪು ಸುಲ್ತಾನನ ಆಳಿಕೆಗೆ ಬಂದ ಮೇಲೂ ಬ್ರಿಟಿಷರ ವಿರುದ್ಧ ಪ್ರಥಮ ಬಂಡಾಯವನ್ನೆಬ್ಬಿಸಿ ಸ್ವಾತಂತ್ರ್ಯದ ಧ್ವಜವನ್ನೆತ್ತಿದ ಜನ ಈ ನಾಡಿನವರು. ಟಿಪ್ಪುವಿನ ಸಹಾಯಕ್ಕೆ ನಿಂತ ಪಾಳೆಯಗಾರರು ಯಾವಗಲೂ ಪರಕೀಯ ದಾಳಿಗೆ ವಿರುದ್ಧವಾಗಿ ಹೋರಾಡಿದವರೇ ಆಗಿದ್ದಾರೆ. ಹಾಗೆಂದು ಇಲ್ಲಿಯ ಇತಿಹಾಸ ಹೇಳುತ್ತದೆ. 1799ರಲ್ಲಿ ನಮ್ಮ ದುರ್ದೈವಕ್ಕೆ, ಭಾರತದ ದುರ್ದೈವಕ್ಕೆ ಟಿಪ್ಪುವಿನ ಸೋಲಾಯಿತು. ಟಿಪ್ಪುವನ್ನು ಸೆರೆಹಿಡಿದು ಅವನೊಬ್ಬನನ್ನು ಸೆರೆಯಲ್ಲಿಡುವುದರಿಂದಲೇ ಬ್ರಿಟಿಷರ ಸ್ಥಾನ ದಕ್ಷಿಣದಲ್ಲಿ ಭದ್ರವಾಗಿರಲು ಸಾಧ್ಯವಿರಲ್ಲಿಲ್ಲ. ಆದ್ದರಿಂದ ಆ ಹುಲಿಯ ಉಗುರು ಕಿತ್ತು ಅದನ್ನು ಪಳಗಿಸಿದ್ದು ಸಾಲದೆ, ಆ ಹುಲಿಗೆ ಬೆಂಬಲಕೊಟ್ಟ ಈ ನಾಡಿನ ಜನರನ್ನೂ ವಿಭಜಿಸಿ ಆಳುವ ಕುಯಕ್ತಿ ಮಾಡಿ ಬಳ್ಳಾರಿಯನ್ನೂ ಅದರ ನೆರೆಯ ಕನ್ನಡ ನಾಡನ್ನೂ ದಿಕ್ಕು ದಿಕ್ಕುಗಳಿಗೆ ಹರಿದು ಹಂಚಿ ಹಾಕಿದರು” ಎಂಬ ಅವರ ಮಾತಿನಲ್ಲಿ ಸಾಕಷ್ಟು ಅರ್ಥವಿದೆ ಎನಿಸುತ್ತದೆ.
ವಿಜಯನಗರದ ಕೀರ್ತಿಯಲ್ಲಿ ಬಳ್ಳಾರಿ ಜಿಲ್ಲೆಯ ನೆಲ, ತುಂಗಭದ್ರೆಯ ಜಲ ಹಾಗೂ ಹಂಪೆಯ ವೀರೂಪಾಕ್ಷನ ಸನ್ನಿಧಾನಕ್ಕೆ ಮಹತ್ವದ ಸ್ಥಾನವಿದೆ. ಹಾಗಾಗಿ ಬಳ್ಳಾರಿ ಜಿಲ್ಲೆಗೂ ಕನ್ನಡದ ಇತರೆ ಜಿಲ್ಲೆಯ ಜನಗಳಿಗೂ ಅದು ಕೇವಲ ಭಾಷೆ, ಸಂಸ್ಕೃತಿ, ರಕ್ತಸಂಬಂಧದ ಪ್ರಶ್ನೆಯಷ್ಟೇ-ಸಂಬಂಧವಷ್ಟೇ ಆಗಿರದೆ 'ಸ್ವಭಾವ ಬಾಂಧವ್ಯ' (Natural affinity)ವಾಗಿತ್ತು ಎನ್ನಲಾಗುತ್ತದೆ. ಮನುಷ್ಯರ ಸ್ವಭಾವ ಒಂದೇ ಆಗಿರುವ ಸಂದರ್ಭಗಳಲ್ಲಿ ಅವರನ್ನು ಬಹುದಿನಗಳವರೆಗೆ ಭಿನ್ನ-ಭಿನ್ನ ಆಡಳಿತ ವಲಯಗಳಲ್ಲಿಡುವುದು ಸಾಧ್ಯವಾಗದ ಮಾತು. ಜೊತೆಗೆ ಅದು ಅವೈಜ್ಞಾನಿಕ ಕ್ರಮವೂ ಎನಿಸುತ್ತದೆ. ೧೯೫೩ರಲ್ಲಿ ಆಡಳಿತದ ದೃಷ್ಟಿಯಿಂದ, ಕಾನೂನಾತ್ಮಕವಾಗಿ ಕೇಂದ್ರ ಸರ್ಕಾರದವರು ಬಳ್ಳಾರಿಯೂ ಸೇರಿದಂತೆ ಕನ್ನಡದ ೭ ತಾಲೂಕುಗಳನ್ನು ಮದ್ರಾಸ್ ಪ್ರಾಂತ್ಯದಿಂದ ಮೈಸೂರು ಅಂದರೆ ಕನ್ನಡ ನಾಡಿಗೆ ವಿಲೀನಗೊಳ್ಳುವ ನಿಟ್ಟಿನಲ್ಲಿ ನ್ಯಾಯಮೂರ್ತಿ ವಾಂಚೂರವರ ಸಲಹೆ, ಮಿಶ್ರಾ ಅವರ ತೀರ್ಪು, ಅಂದಿನ ಪ್ರಧಾನಿಗಳಾಗಿದ್ದ ನೆಹರೂ ಅವರ ಒಪ್ಪಿಗೆ, ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್ ಅವರ ಇಷ್ಟ ಈ ಎಲ್ಲವೂ ಕೆಲಸ ಮಾಡಿದ್ದವು; ಜೊತೆಗೆ ಬಳ್ಳಾರಿಯ ಜನರ ಹೋರಾಟ ಇದರಲ್ಲಿ ಬಹಳ ಪ್ರಮುಖವಾಗಿತ್ತು. ಇವರೆಲ್ಲರ ಪ್ರಯತ್ನದ ಫಲವಾಗಿ ನಮ್ಮಿಂದ ಬಹುದಿನಗಳವರೆಗೆ ದೂರ ಉಳಿದಿದ್ದ ೩೮೨೧ ಚದರ ಮೇಲು ಭೂಭಾಗ, 7,73,712ರಷ್ಟು ಕನ್ನಡಿಗರು ಈ ನಾಡಲ್ಲಿ ಒಂದಾದರು. ಹೀಗೆ ಒಂದಾಗುವಿಕೆಯಲ್ಲಿ ಬಳ್ಳಾರಿಯ ಜನ ಹೇಗೆ ಸಂತೋಷಪಟ್ಟರೋ ಹಾಗೆ ಮೈಸೂರಿನ ಕನ್ನಡಿಗರು ಅಷ್ಟೇ ಸಂಭ್ರಮಿಸಿದರು. ಅದೊಂದು ರೀತಿಯಲ್ಲಿ 'ಉಭಯ ಕುಶಲ ಸಾಂಪ್ರತಿ' ಎಂಬರ್ಥದಲ್ಲಾದ ವಿಲೀನವಾಗಿತ್ತು. 1799ನೇ ಇಸ್ವಿಯಲ್ಲಿ ನಡೆದ 4ನೇ ಆಂಗ್ಲೋ- ಮೈಸೂರು ಯುದ್ದ ರಾಜಕೀಯವಾಗಿ ಕೇವಲ ಟಿಪ್ಪು ಹಾಗೂ ಬ್ರಿಟೀಷರಿಗಷ್ಟೇ ನಿರ್ಣಾಯಕವೆನಿಸಿರಲಿಲ್ಲ. ಅದರ ಕರಾಳ ಮುಖಗಳ ಹೊಡೆತ ಸಾಂಸ್ಕೃತಿಕವಾಗಿಯೂ, ಭಾಷಿಕವಾಗಿಯೂ ಕನ್ನಡದ ಜನರು ಅನುಭವಿಸುವಂತಾಯಿತು; ಬಹುಕಾಲದವರೆಗೆ. 1799ರಲ್ಲಾದ ಟಿಪ್ಪುವಿನ ಸೋಲು ಬಳ್ಳಾರಿ ಪ್ರದೇಶದ ಮೇಲೆ ಬ್ರಿಟಿಷರ ಹಿಡಿತ ಬಿಗಿಗೊಳಿಸಿತು. ಅದನ್ನವರು ಹೈದ್ರಾಬಾದಿನ ನಿಜಾಂರಿಗೆ ಕೊಡುಗೆಯಾಗಿ ನೀಡಿ, ಕಾರಣಾಂತರಗಳಿಂದ ಮತ್ತೆ ಮರಳಿ ತಮ್ಮ ಕೈಸೇರುವಂತೆ ಮಾಡಿಕೊಂಡು, ಆಡಳಿತ ದೃಷ್ಟಿಯಿಂದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿದ್ದರು. ಈಗ 1953ರಲ್ಲಿ ಅದು ಮತ್ತೆ ತನ್ನ ಮೂಲ ತಾಯ್ಯಾಡಿನೊಂದಿಗೆ ಒಂದಾದ ಸಂಭ್ರಮ ಇದಾಗಿತ್ತು.
150 ವರ್ಷಗಳ ಕಾಲ ಬಳ್ಳಾರಿಯ ಸುಖವೇ ತಮ್ಮ ಸುಖ, ಬಳ್ಳಾರಿಯ ದುಃಖವೇ ನಮ್ಮ ದುಃಖವೆಂಬಂತೆ ನಮ್ಮವರು ಬೆಸದುಕೊಂಡ ಬಾಂಧವ್ಯವೂ ಕೂಡ ಇದಕ್ಕೆ ಕಾರಣವಾಗಿತ್ತು. ಕಾಲಚಕ್ರ ತಿರುಗಿ ಈಗ ಮತ್ತೆ ಮೊದಲ ಬಿಂದುವಿಗೆ ಬಂದು ನಿಂತಿದೆ. ಈ ಪ್ರಕ್ರಿಯೆಯನ್ನು ಅಂದಿನ ದೊಡ್ಡಬಳ್ಳಾಪುರದ ಅಮಲ್ದಾರರಾಗಿದ್ದ ಶ್ರೀ ಓ.ವಿ.ರಾಮಯ್ಯನವರು 'ಮೈಸೂರಿಗೆ ಬಳ್ಳಾರಿಯ ಸೇರ್ಪಡೆಯಿಂದ, ಮೈಸೂರು ಸಂಸ್ಥಾನ, 'ಕರ್ನಾಟಕ-ಆಂಧ್ರ-ದ್ರಾವಿಡ ಸಂಸ್ಕೃತಿಗಳ ತ್ರೀವೇಣಿ ಸಂಗಮ'ವಾಗಲಿದೆ ಎನ್ನುತ್ತಾರೆ. ಗ್ರಾಮಾಭ್ಯುದಯ ಮತ್ತು ಸಹಕಾರ ಸಂಚಿಕೆ ಸಂಪಾದಕರಾಗಿದ್ದ ಶ್ರೀ ಕೆ.ಸಿ.ಚೌಡಪ್ಪರೆಡ್ಡಿಯವರು 'ಮೈಸೂರಿನವರಿಗೆ, ಇದುವರೆಗೂ ಮದ್ರಾಸ್ ಪ್ರಾಂತ್ಯದಲ್ಲಿದ್ದ ಬಳ್ಳಾರಿ ಜಿಲ್ಲೆಯ ನಾಡು ಹೊಸದಾದರೂ ನುಡಿ ಹೊಸದಲ್ಲ; ನಡೆ ಹೊಸದಲ್ಲ; ಮೇಲಾಗಿ ಜನರೂ ಹೊಸಬರಲ್ಲ. ಬಹಳ ಹಳೆಯ ಬಂಧುತ್ವವಿದೆ' ಎಂದು ಬರೆಯುತ್ತಾರೆ. ಕ್ರಿ.ಶ.1790ರಲ್ಲಿ ವಿಜಯನಗರದ ಸಿಂಹಾಸನವು ಶ್ರೀರಂಗರಾಯರಿಂದ ಮೈಸೂರಿನ ರಾಜ ಒಡೆಯರಿಗೆ ಹಸ್ತಾಂತರವಾಗಿತ್ತು. ಈಗ ಅದೇ ಪ್ರದೇಶದ ಆಡಳಿತದಲ್ಲಿ ಈ ಹಿಂದೆ ವಿಜಯನಗರದ ಭಾಗವಾಗಿದ್ದ ಬಹುಮುಖ್ಯ ಪ್ರದೇಶವೊಂದು ಮತ್ತೇ ವಿಲೀನವಾಗುತ್ತಿರುವುದು ಯೋಗಾಯೋಗಾ ಎನಿಸುತ್ತದೆ.
ಬಳ್ಳಾರಿ ಜಿಲ್ಲೆಗೆ ಸೇರಿದ ಸಿರಗುಪ್ಪ, ಹೊಸಪೇಟೆ, ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ, ಕೂಡಲಗಿ ಮತ್ತು ಬಳ್ಳಾರಿ ತಾಲ್ಲೂಕುಗಳು ಹಾಗೂ ಅವುಗಳಡಿ ಬರುವ ನೂರಾರು ಕನ್ನಡ ಪ್ರದೇಶಗಳು ಅಂದಾಜು 150 ವರ್ಷಗಳ ಕಾಲ ಅನ್ಯಭಾಷಿಕ ಅಂದರೆ ತೆಲುಗು ಮತ್ತು ಬ್ರಿಟಿಷ್ ಆಡಳಿತ ಪ್ರದೇಶಕ್ಕೆ ಒಳಪಟ್ಟಿದ್ದವು. ಅಷ್ಟು ವರ್ಷಗಳ ಕಾಲ ಕನ್ನಡಿಗರು ಅನ್ಯಭಾಷಿಕ ವಲಯದಲ್ಲಿದ್ದರೂ ನಡೆ-ನುಡಿ ಮತ್ತು ಸಂಸ್ಕೃತಿಯಲ್ಲಿ ಕನ್ನಡ ನಾಡಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಹಾಗೂ ಇಂದಿನ ಬಳ್ಳಾರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಹೋರಾಟಗಳ ಫಲವಾಗಿ ಮುಂದೆ ಅವು ಕನ್ನಡ ನಾಡಿನಲ್ಲಿ ಒಂದಾದವು. ಬಳ್ಳಾರಿ ಜಿಲ್ಲೆ ಕರ್ನಾಟಕದ ಭಾಗವಾಗಲು ನಡೆದ ಹೋರಾಟಗಳು ಕನ್ನಡ ನಾಡಿನ ಏಕೀಕರಣ ಚಳುವಳಿಯಲ್ಲಿ ಮಹತ್ವದ ಘಟ್ಟವೆನಿಸಿವೆ. ಆ ಹೋರಾಟದ ಫಲವೆಂಬಂತೆ ಆದವಾನಿ, ಆಲೂರು ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಹೊರತುಪಡಿಸಿ ಉಳಿದ 7 ತಾಲ್ಲೂಕುಗಳು ಮೈಸೂರು ಸಂಸ್ಥಾನಕ್ಕೆ ಸೇರಲ್ಪಟ್ಟವು. 1953ರಲ್ಲಿ ಬಳ್ಳಾರಿ ತಾಲ್ಲೂಕು ಸೇರಿದಂತೆ, ಒಟ್ಟು 7 ಕನ್ನಡ ತಾಲ್ಲೂಕುಗಳು ಕರ್ನಾಟಕದ ಭಾಗವಾಗಿ ಮೈಸೂರು ಸಂಸ್ಥಾನಕ್ಕೆ ಸೇರಿದ ಚರಿತ್ರೆಯನ್ನು ದಾಖಲಿಸುವ ಜರೂರಿಗೆ ಈ ಪುಸ್ತಕ ಸಂಪಾದನೆ ಉತ್ತರವೆನಿಸುತ್ತದೆ. ಬಳ್ಳಾರಿ ಜಿಲ್ಲೆಗೆ ಸೇರಿದ ಸಿರುಗುಪ್ಪ, ಹೊಸಪೇಟೆ, ಸಂಡೂರು, ಹೂವಿನ ಹಡಗಲಿ, ಹರಪನಹಳ್ಳಿ, ಕೂಡಲಗಿ ಮತ್ತು ಬಳ್ಳಾರಿ ತಾಲ್ಲೂಕುಗಳು ಮೈಸೂರು ಸಂಸ್ಥಾನಕ್ಕೆ ವಿಲೀನವಾಗುವ ಸುಸಮಯವನ್ನು ಈ ನಾಡು ಒಂದು ಹಬ್ಬದಂತೆ ಸಂಭ್ರಮಿಸಿತು.
ನಾಡಿನ ಹಲವು ಕನ್ನಡ ಮನಸ್ಸುಗಳು ಈ ವಿಷಯವಾಗಿ ವಿವಿಧ ವೇದಿಕೆಗಳಲ್ಲಿ, ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಅವುಗಳಲ್ಲಿ 'ಪೌರವಾಣಿ' ಪತ್ರಿಕಾ ಸಂಪಾದಕರು ಪ್ರಕಟಿಸಿದ ವಿಶೇಷ ಕೈಪಿಡಿ ಮಹತ್ವದ್ದು. ಅದಕ್ಕೆ ಅಂದಿನ ಮೈಸೂರಿನ ಮಹಾರಾಜರಾದಿಯಾಗಿ ವಿವಿಧ ಗಣ್ಯಮಾನ್ಯರು ಶುಭ ಸಂದೇಶಗಳನ್ನು ನೀಡಿ ಹರ್ಷಿಸಿದ್ದರು. ಜೊತೆಗೆ 'ಮೈಸೂರು ವಾರ್ತಾ ಸಂಗ್ರಹ' ಹಾಗೂ 'ಗ್ರಾಮಾಭ್ಯುದಯ ಮತ್ತು ಸಹಕಾರ' ಎಂಬ ವಿಶೇಷ ಸಂಚಿಕೆಗಳು ಕೂಡ ಪ್ರಕಟಗೊಂಡಿದ್ದವು. ಅವುಗಳಿಗೆ ಗಡಿನಾಡ ಹೋರಾಟಗಾರ್ತಿ ಆಗಿದ್ದ ಜಯದೇವಿ ತಾಯಿ ಲಿಗಾಡೆ, ಶ್ರೀ ಯಶವಂತರಾವ್ ಹಿಂದೂರಾವ್ ಘೋರಡೆಯವರು, ಹರ್ಡೇಕರ್ ಮಂಜಪ್ಪನವರಾದಿಯಾಗಿ ನಾಡಿನ ಗಣ್ಯಮಾನ್ಯರು ತಮ್ಮ ಸಂದೇಶಗಳನ್ನು ಕಳಿಸಿದ್ದರು.
ಈ ಸಂದರ್ಭವನ್ನುದ್ದೇಶಿಸಿ ಶ್ರೀ ಜಯಚಾಮರಾಜ ಒಡೆಯರ್ ಅವರು “ಬಳ್ಳಾರಿ ಮತ್ತು ಮೈಸೂರು ಪ್ರದೇಶಗಳು ಸುಮಾರು ಒಂದು ನೂರ ಐವತ್ತು ವರ್ಷಗಳ ಹಿಂದಿನವರೆವಿಗೂ ಒಂದೇ ಆಡಳಿತದಲ್ಲಿದ್ದು, ಆನಂತರ ರಾಜಕೀಯ ಕಾರಣಗಳಿಂದ ಬೇರ್ಪಟ್ಟ ವಿಷಯ ಸರ್ವರಿಗೂ ತಿಳಿದ ಅಂಶವೇ ಆಗಿದೆ. ಎಷ್ಟೇ ಬೇರ್ಪಟ್ಟರೂ ಭಾತೃವರ್ಗಕ್ಕೆ ಸೇರಿದ ಈ ಪ್ರದೇಶಗಳು ತಮ್ಮ ನಡೆ-ನುಡಿಗಳಲ್ಲೂ, ಸಾಂಸ್ಕೃತಿಕ ಮತ್ತು ಇತರ ಸಂಪರ್ಕಗಳಲ್ಲೂ ಏಕೀಭಾವವನ್ನೇ ಪಡೆದು ಅವಿಚ್ಛಿನ್ನವಾಗಿ ಬೆಳೆದುಕೊಂಡು ಬಂದಿವೆ. ಈ ಏಕೀಭಾವವನ್ನು ಪೂರ್ತಿಗೊಳಿಸಲು ಈಗ ಆಗಲಿರುವ ವಿಲೀನೀಕರಣವು ಮತ್ತಷ್ಟು ಸಹಾಯಕವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ” ಎಂದು ನುಡಿದಿದ್ದು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿ ಎನಿಸಿದೆ. ಮೈಸೂರು ಸರ್ಕಾರ ತಮ್ಮ ಆಗಿನ ಜವಾಬ್ದಾರಿಯೊಂದಿಗೆ, ಸುಮಾರು ನಾಲ್ಕು ಸಾವಿರ ಚದರ ಮೈಲಿಗಳೊಳಗೊಂಡ ಬಳ್ಳಾರಿ ಪ್ರದೇಶದಲ್ಲಿರುವ ಏಳುವರೆ ಲಕ್ಷಕ್ಕೂ ಮೇಲ್ಪಟ್ಟ ಪ್ರಜೆಗಳ ಸೌಖ್ಯಾಭಿವೃದ್ಧಿಗಳ ವಿಷಯದಲ್ಲಿ ಹೊಸ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು ಅಖಂಡ ಕರ್ನಾಟಕದ ರಚನೆಗೆ ಅಡಿಪಾಯ ಹಾಕಿದಂತಾಗಿತ್ತು. ಇದು ಕೇವಲ 150 ವರ್ಷಗಳ ಹಿಂದೆ ನಮ್ಮಿಂದ ಹೊರಹೋಗಿದ್ದ ಕನ್ನಡ ಪ್ರದೇಶಗಳ ವಿಲೀನಾತಿ ಅಷ್ಟೇ ಆಗಿರದೆ, ಮುಂಬರುವ ಕರ್ನಾಟಕದ ಏಕೀಕರಣದ ಕನಸಿಗೆ ನೀರೆರೆದ ದೀವಿಗೆಯೂ, ಏಕೀಕರಣದ ಹೋರಾಟಗರರಿಗೆ ಸಂಜೀವಿನಿ ಆಗಿಯೂ ಪರಿಣಮಿಸಿತು. ಹಾಗಾಗಿಯೇ ಕೆಲವರು ಇದನ್ನು 'ಕರ್ನಾಟಕ ಪ್ರಾಂತ್ಯದ ರಚನೆಗೆ ಇದು ಗಣಪತಿ ಪೂಜೆಯಂತಿತ್ತು' ಎಂದಿದ್ದು, ಈ ವಿಷಯದಲ್ಲಿ ನಮ್ಮವರು ತಮ್ಮ ಕರ್ತವ್ಯವನ್ನು ಆತ್ಯಾಸಕ್ತಿಯಿಂದಲೂ, ದಕ್ಷತೆಯಿಂದಲೂ ನಿರ್ವಹಿಸುವುದರಲ್ಲಿ ಯಾವ ಸಂಶಯವೂ ಇರದೂ ಎಂಬ ಜನರ ನಂಬಿಕೆಯನ್ನು ಉಳಿಸಿಕೊಂಡ ಕೀರ್ತಿ ಅಂದಿನ ಕನ್ನಡ ಮನಸ್ಸುಗಳಿಗೆ ಸಲ್ಲುತ್ತದೆ. ಜೊತೆಗೆ ಬಳ್ಳಾರಿ ಜಿಲ್ಲೆಯ ಈ ತಾಲೂಕುಗಳು ಖನಿಜ ಸಂಪತ್ತುಗಳಿಂದ ತುಂಬಿ ತುಳುಕುತ್ತಿವೆ. ಅವುಗಳನ್ನು ಮರಳಿ ಪಡೆಯುವುದು ಕೇವಲ ಭಾಷಿಕ-ಸಾಂಸ್ಕೃತಿಕ ವಲಯಗಳಿಗಷ್ಟೇ ಇಂಬು ನೀಡದೆ, ಆರ್ಥಿಕವಾಗಿಯೂ ಅವು ನಮಗೆ ಶಕ್ತಿ ತುಂಬಬಲ್ಲವಾಗಿದ್ದವು. ಸಂಡೂರು ಕಬ್ಬಿಣದ ಕಣಜವಾಗಿತ್ತು. ಅಲ್ಲದೆ ಇಲ್ಲಿ ಮ್ಯಾಂಗನೀಸ್ ಯಥೇಚ್ಛವಾಗಿ ದೊರೆಯುವ ಲೋಹವಾಗಿದೆ. ದಕ್ಷಿಣ ಭಾರತದ ಪೆರಿಯಾರ್, ನಿಜಾಂಸಾಗರ, ಕೃಷ್ಣರಾಜಸಾಗರ, ಮೆಟ್ಟೂರು ಜಲಾಶಯಗಳಿಗಿಂತಲೂ ತುಂಗಭದ್ರಾ ಜಲಾಶಯ ದೊಡ್ಡದು. ಹಾಗಾಗಿ ಮೈಸೂರಿಗೆ ಬಳ್ಳಾರಿಯ ಸೇರ್ಪಡೆ ವಾಸ್ತವವಾಗಿ ದೂರಗಾಮಿ ಲಾಭಗಳನ್ನು ತರುವಂತಿತ್ತು. ಹಾಗಾಗಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮೊದಲಾದ ಎಲ್ಲ ದೃಷ್ಟಿಗಳಿಂದಲೂ ಕನ್ನಡ ರಾಜ್ಯವಾದ ಮೈಸೂರಿಗೆ ಬಳ್ಳಾರಿಯ ಪ್ರದೇಶಗಳು ಸೇರುವಂತಾಗಿದ್ದು ನ್ಯಾಯೋಚಿತ ಕ್ರಮ ಎನಿಸಿಕೊಂಡಿದೆ. ಆದರೆ ಅದವಾನಿ, ಆಲೂರು ಮತ್ತು ರಾಯದುರ್ಗಗಳು ನಮ್ಮ ಕೈತಪ್ಪಿದ್ದು ಕನ್ನಡಿಗರಿಗೆ ಒಂದಿಷ್ಟು ನಿರಾಸೆಗಳನ್ನು ಉಂಟು ಮಾಡಿತ್ತು.
ಈ ಸಂಭ್ರಮದಲ್ಲಿ ಮೈಸೂರಿನ ಮಹಾರಾಜರಲ್ಲದೆ, ಅಂದಿನ ಮುಖ್ಯ ಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು, ಅಂದಿನ ಮೈಸೂರು ಪ್ರದೇಶ ಕಾಂಗ್ರೆಸ್ ಕಮೀಟಿಯ ಅಧ್ಯಕ್ಷರಾದ ಶ್ರೀ ಎಚ್.ಕೆ. ವೀರಣ್ಣಗೌಡರು, ಅಂದಿನ ಕೆಪಿಸಿಸಿ ಅಧ್ಯಕ್ಷರಾದ ಎಸ್.ನಿಜಲಿಂಗಪ್ಪನವರು, ಅಂದಿನ ಕೇಂದ್ರ ವಾಣಿಜ್ಯ ಮಂತ್ರಿಗಳಾದ ಶ್ರೀ ಡಿ.ಪಿ.ಕರ್ಮಾಕರ ರವರು, ಕೇಂದ್ರದ ಆಹಾರ ಮತ್ತು ಕೃಷಿ ಉಪಮಂತ್ರಿಗಳಾದ ಶ್ರೀ ಎಮ್.ವಿ.ಕೃಷ್ಣಪ್ಪ ಮೊದಲಾದವರು ವಿವಿಧ ಸಂದರ್ಭಗಳಲ್ಲಿ ಈ ವಿಲೀನ ಪ್ರಕ್ರಿಯೆ ಕುರಿತು ಮಾತನಾಡಿದ್ದಾರೆ. ಅವು ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಹತ್ವವುಳ್ಳ ಮಾತುಗಳಾಗಿವೆ. ಕನ್ನಡ ನಾಡು ಅಥವಾ ಕನ್ನಡಿಗರು ಏಕೀಕರಣಗೊಂಡ ಬಗೆಯ ಹೋರಾಟದ ಕಥನಗಳಲ್ಲಿ ಬಳ್ಳಾರಿಯೂ ಸೇರಿದಂತೆ ೭ ತಾಲ್ಲೂಕುಗಳು, ಕರ್ನಾಟಕ್ಕೆ ಮರಳಿ ಬಂದಿದ್ದು ಪ್ರಮುಖ ಅಧ್ಯಾಯ ಎನಿಸಿಕೊಂಡಿದೆ. ಹಾಗಾಗಿ ಈ ಪ್ರತಿಕ್ರಿಯೆಗಳನ್ನು, ಬಳ್ಳಾರಿ ಜಿಲ್ಲೆಯ ೭ ತಾಲ್ಲೂಕುಗಳು ಸುಮಾರು 150 ವರ್ಷಗಳ ಕಾಲ ಅನ್ಯಭಾಷಿಕ ವಲಯದಲ್ಲಿದ್ದು ಅನುಭವಿಸಿದ ಯಾತನೆಗೆ ಮುಲಾಂ ಆಗಿ ನೋಡಬೇಕಿದೆ. ಜೊತೆಗೆ ಕರ್ನಾಟಕದ ಪ್ರಾಂತ್ಯಗಳ ಒಗ್ಗೂಡುವಿಕೆಯ ಹೋರಾಟಗಳ ಅಧ್ಯಯನದಲ್ಲಿ ಈ ಪ್ರತಿಕ್ರಿಯೆಗಳು ಹಾಗೂ ಬರೆದ ಬರಹಗಳು ಸಂಶೋಧನೆಗೆ ಪ್ರಾಥಮಿಕ ಆಕರಗಳಾಗಿ ಉಳಿದುಕೊಳ್ಳುತ್ತವೆ. ಹಾಗಾಗಿ ವಿವಿಧಡೆ ಹಂಚಿಹೋಗಿರುವ ಇಂತಹ ಚಾರಿತ್ರಿಕ-ಸಾಂಸ್ಕೃತಿಕ ಅಂಶಗಳನ್ನೊಳಗೊಂಡ ಲೇಖನಗಳನ್ನು, ಸಂದೇಶಗಳನ್ನು ಹಾಗೂ ಹೋರಾಟದ ಮನವಿಗಳನ್ನು ಅದಕ್ಕೆ ಸ್ಪಂದಿಸಿದ ಸರ್ಕಾರಗಳ ನಿರ್ಧಾರಗಳನ್ನು ಜನಮಾನಸದಿಂದ ಮರೆಯಾಗುವ ಮುನ್ನ ಅವುಗಳನ್ನು ಒಂದೆಡೆಗೆ ತರುವ ಅನಿವಾರ್ಯತೆ ಇದೆ ಅನಿಸುತ್ತದೆ. ಆ ಮೂಲಕ ಅವುಗಳನ್ನು ಸುಲಭವಾಗಿ ಅಧ್ಯಯನಕಾರರಿಗೆ ಹಾಗೂ ಸಂಶೋಧಕರಿಗೆ ಒದಗಿಸುವ ಜರೂರು ಈ ಪುಸ್ತಕ ಬಳ್ಳಾರಿ ವಿಲೀನ : ಮಹತ್ವದ ದಾಖಲೆಗಳು 30ಸಂಪಾದನೆಯ ಹಿಂದಿನ ಮೂಲ ಉದ್ದೇಶವೆನಿಸಿದೆ.
ಬಳ್ಳಾರಿ ಜಿಲ್ಲೆಯ 7 ತಾಲ್ಲೂಕೂಗಳು ಮೈಸೂರು ಸಂಸ್ಥಾನಕ್ಕೆ ಸೇರಲ್ಪಟ್ಟ ಸಂದರ್ಭದಲ್ಲಿ ಸುಮಾರು 90ಕ್ಕೂ ಹೆಚ್ಚು ಲೇಖನಗಳು ಇದೇ ವಿಷಯದ ಮೇಲೆ ಪ್ರಕಟಗೊಂಡವು. ಆದರೆ ಅಧ್ಯಯನಕಾರರಿಗೆ ಸುಲಭವಾಗಿ ಅವುಗಳ ಲಭ್ಯತೆ ಇರುವುದಿಲ್ಲ. ಜೊತೆಗೆ ಅಂದಿನ 'ದಿ ಬಳ್ಳಾರಿ ಡಿಸ್ಟ್ರಿಕ್ಷ ಆಕ್ಸನ್ ಕಮಿಟಿ' ಬಳ್ಳಾರಿಯು ಅಂದಿನ ಪ್ರಧಾನಮಂತ್ರಿಗಳಿಗೆ ಹಾಗೂ ಬಳ್ಳಾರಿ ತಾಲ್ಲೂಕು ವಿಚಾರಣಾ ಕಮಿಷನ ಆಗಿದ್ದ ಜಸ್ಟಿಸ್ ಶ್ರೀ ಎಲ್.ಎಸ್.ಮಿಶ್ರಾ ಅವರಿಗೆ ಸಲ್ಲಿಸಿದ ಮನವಿಗಳು, ರಾಜ್ಯ ಪತ್ರಾಗಾರ ಇಲಾಖೆಯಲ್ಲಿರುವ ಆ ಕಾಲದ ಪತ್ರಿಕೆಗಳಾದ ರೈತ ಪತ್ರಿಕೆ, ವಿಜಯ ಪತ್ರಿಕೆ ಹಾಗೂ ಇತರೆ ದಾಖಲೆಗಳು ಈ ಕುರಿತು ಮೌಲಿಕ ವಿವರಣೆಗಳನ್ನು ಹೊಂದಿವೆ. ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಲವು ವರದಿಗಳಲ್ಲೂ ಇದು ಪ್ರಸ್ತಾಪವಾದ ವಿಷಯವಾಗಿದೆ. ಬಳ್ಳಾರಿ ಜಿಲ್ಲಾ ಕರ್ನಾಟಕ ಏಕೀಕರಣ ಸಂಘದ ಹೋರಾಟಗಳು, ಕರ್ನಾಟಕ ಮತ್ತು ಆಂಧ್ರ ಬಾರ್ಡರ್ ಡಿಸ್ಪೂಟ್ಸ್ ರಿಪೋರ್ಟ್ನ ಹಾಗೂ ಇತರೆ ದಾಖಲೆಗಳನ್ನು ಬಳಸಿಕೊಂಡು ಈ ಕುರಿತು ಅಧ್ಯಯನ ಮಾಡಬೇಕಾದ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಅವುಗಳೆಲ್ಲವನ್ನು ಒಂದೆಡೆ ಸಂಗ್ರಹಿಸಿ ಸಂಪಾದಿಸುವ ಕೆಲಸವನ್ನು ಮಾಡಲಾಗಿದೆ. ಆ ನಿಟ್ಟಿನಲ್ಲಿ ಈ ಪುಸ್ತಕಕ್ಕೆ ಕರ್ನಾಟಕದ ಏಕೀಕರಣ ಚಳುವಳಿಯ ಹೋರಾಟ ಕಥನಗಳಲ್ಲಿ ಒಂದು ಮೌಲ್ಯವಿದ್ದು, ಅದನ್ನು ಈ ಮೂಲಕ ಓದುಗರಿಗೆ ಒಪ್ಪಿಸುತ್ತಿದ್ದೇವೆ.
ಸದರಿ ಪುಸ್ತಕವನ್ನು ಸಿದ್ಧಪಡಿಸುವಲ್ಲಿ ಮಾರ್ಗದರ್ಶನಗೈದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರೂ ಆದ ವಿ.ಸುನೀಲ್ ಕುಮಾರ್ ಸರ್ ಅವರ ಸಹಕಾರ ಇದಕ್ಕೆ ಬಹುಮುಖ್ಯ ಪ್ರೇರಣೆ ಎನಿಸಿಕೊಂಡಿದೆ.
- ಸಂಪಾದಕರು
“ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ನನ್ನ ಈ ಪುಟ್ಟ ಕೃತಿ ದಾರಾಶಿಖೋನನ್ನು ಕುರಿತು ಕನ್ನಡದಲ್ಲಿ ಬಂದ ಮೊದಲ...
"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...
“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...
©2025 Book Brahma Private Limited.