ಕನ್ನಡದ ನಮ್ಮ ಹಾಡು-ಪಾಡುಗಳು


ಚಿಕ್ಕಂದಿನಲ್ಲಿ ನಮಗೆ ತುಂಬಾ ಕಷ್ಟಕೊಟ್ಟ ಹೆಸರೆಂದರೆ ಕಯ್ಯಾರ ಕಿಞ್ಞಣ್ಣ ರೈಗಳದ್ದು. ಕಯ್ಯಾರ ಮತ್ತು ರೈ ಎಂಬ ಪದಗಳನ್ನೇನೋ ಸರಿಯಾಗಿ ಹೇಳುತ್ತಿದ್ದೆವು. ಕಿಞ್ಞಣ್ಣ ಎಂಬುದರ ಮಧ್ಯದ ಅನುನಾಸಿಕ ಮಾತ್ರ ಉಚ್ಚರಿಸಲು ಸಾಧ್ಯವಾಗದೆ ಕಿಣ್ಣಣ್ಣ ಎಂದೇ ಹೇಳುತ್ತಿದ್ದೆವು. ಞ್ಞ ಆದೋಡನೆ ಣಕಾರದ ಸಾಂಗತ್ಯವಿತ್ತದ್ದರಿಂದ ಎರಡರ ವ್ಯತ್ಯಾಸ ತಿಳಿಯದೆ ಒಂದೇ ಎಂಬಂತೆ ಉಚ್ಚರಿಸುತ್ತಿದ್ದೆವು ಎನ್ನುತ್ತಾರೆ ಲೇಖಕ ಎಚ್. ಎಸ್. ಸತ್ಯನಾರಾಯಣ. ಅವರ "ಕನ್ನಡದ ನಮ್ಮ ಹಾಡು-ಪಾಡುಗಳು" ಬರೆಹ ನಿಮ್ಮ ಓದಿಗಾಗಿ..

ಕನ್ನಡ ಭಾಷೆ ಮತ್ತು ಕನ್ನಡದ ಕವಿಗಳೆಲ್ಲ ನಮ್ಮ ಮನದೊಳಗೆ ನೆಲೆ ನಿಂತಿದ್ದು ಪಠ್ಯಗಳಲ್ಲಿನ ಪದ್ಯಗಳ ಮೂಲಕವೆ. ಚಿಕ್ಕಂದಿನಲ್ಲಿ  ಕವಿಗಳ ಹೆಸರು ನೆನಪಾಗದಿದ್ದರೂ ಪದ್ಯಗಳು ನೆನಪಿರುತ್ತಿದ್ದವು. ಬಾಯಿಪಾಠ ಮಾಡುತ್ತಿದ್ದೆವಾಗಿ ಅವು ಮರೆಯುತ್ತಿರಲಿಲ್ಲ. ಆಗಿನ ಬಾಯಿಪಾಠದ ಭರಾಟೆ ಹೇಗಿತ್ತೆಂದರೆ, ದಶಕಗಳು ಕಳೆದಿದ್ದರೂ ಈಗಲೂ ಅವು ಸಾಲು ಸಾಲು ನೆನಪಿಗೆ ಬರುತ್ತವೆ. ಸ್ಮೃತಿಪಟಲದೊಳಗೆ ಅಡಗಿದ್ದವುಗಳು ಧುತ್ತೆಂದು ಬಾಯಿಗೆ ಬರುವ ಅನುಭವ ನನ್ನೊಬ್ಬನದೇನಲ್ಲ. ಕನ್ನಡವೆಂದರೆ ನಮಗೆಲ್ಲ ನೆನಪಿಗೆ ಬರುವುದು ಪದ್ಯಗಳೆ. ಅವುಗಳ ಪ್ರಾಸ, ಶಬ್ದ, ಲಯ, ಛಂದಗಳ ಸೊಗಸೇ ಸೊಗಸು. ಎಳೆಯರ ಮನದೊಳಗೆ ಕನ್ನಡಾಭಿಮಾನ ಮೊಳೆಯುವಲ್ಲಿ ಪದ್ಯಗಳ ಪಾತ್ರ ಹಿರಿದೆಂಬ ಮಾತನ್ನು ಬಹುಶಃ ಯಾರೂ ನಿರಾಕರಿಸಲಾರರು.

ಪ್ರತಿ ಶನಿವಾರ ತಪ್ಪದೆ ಕನ್ನಡ ಪದ್ಯವನ್ನು ಕಂಠಪಾಠ ಮಾಡಿ ಒಪ್ಪಿಸಬೇಕಿತ್ತು. ನನಗಂತೂ ಇದು ಖುಷಿ ಕೊಡುತ್ತಿತ್ತು. ಪ್ರಾಥಮಿಕ ತರಗತಿಗಳಲ್ಲಿರುವಾಗ ನಾನು ಶನಿವಾರಕ್ಕಾಗಿ ಕಾದು ಕೂತಿರುತ್ತಿದ್ದೆ. ಕಂಠಪಾಠವೆಂದರೆ ಯಾಂತ್ರಿಕವಾಗಿ ಕಲಿತಿದ್ದನ್ನು ಒಪ್ಪಿಸುವುದಲ್ಲ. ರಾಗವಾಗಿ ಹಾಡಿ ತೋರಿಸಬೇಕಿತ್ತು. ನಮ್ಮ ಕ್ಲಾಸಿನಲ್ಲಿ ಹೀಗೆ ಹಾಡುತ್ತಿದ್ದವರು ಒಬ್ಬರೋ ಇಬ್ಬರೋ ಇರುತ್ತಿದ್ದೆವಾಗಿ ನಾವೇ ಹಾಳೂರಿಗೆ ಉಳಿದ ಗೌಡರಾಗುತ್ತಿದ್ದೆವು. ಹಾಡೆಂದರೆ ನನಗೆ ಚಿಕ್ಕಂದಿನಿಂದಲೂ ಬಲು ಪ್ರೀತಿ. ಹಾಗಾಗಿ ಚೆನ್ನಾಗಿ ಹಾಡಿ ಶಹಬಾಸ್ ಗಿರಿ ಪಡೆಯುತ್ತಿದ್ದೆ. ಪಂಜೆ ಮಂಗೇಶರಾಯರು, ಕುವೆಂಪು, ಬೇಂದ್ರೆ, ರಾಜರತ್ನಂ ಅವರುಗಳ ಹಾಡುಗಳ ಜೊತೆಗೆ ಜಾನಪದ ತ್ರಿಪದಿಗಳು ನೆರವಿಗೆ ಬರುತ್ತಿದ್ದವು.

ಹಾಡನ್ನು ಹೇಳಿ ಮೆಚ್ಚಿದಷ್ಟೇ ಬಂತು, ಕವಿಗಳ ಹೆಸರು ಮಾತ್ರ ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಹೈಸ್ಕೂಲಿಗೆ ಬಂದಾಗಲೂ ದ.ರಾ. ಬೇಂದ್ರೆ ಎಂಬುದನ್ನು 'ದಾರಾ ಬೇಂದ್ರೆ' ಎಂದು ಹೇಳಿ ಬೈಸಿಕೊಳ್ಳುತ್ತಿದ್ದೆ.  
ವಿ. ಸೀ.ಯವರ  'ಕಾದಿರುವಳು ಶಬರಿ' ಎಳವೆಯಲ್ಲಿ ನಮಗಿದ್ದ ಅತ್ಯಂತ ಸೊಗಸಾಗಿದ್ದ ಪದ್ಯ. ಅದನ್ನು ಹಾಡಲು ಕಷ್ಟವಾಗಿತ್ತಾದ್ದರಿಂದ ಅರ್ಧ ಹಾಡು, ಅರ್ಧ ಗದ್ಯದಲ್ಲಿ ಲಯಬದ್ಧವಾಗಿ ಹಾಡುವುದನ್ನು ನಮ್ಮ ಮೇಷ್ಟ್ರು ಹೇಳಿಕೊಟ್ಟಿದ್ದರು. ಅದನ್ನು ಹೇಳಿ ಜಯಿಸಿಕೊಂಡೆನಾದರೂ ಕೊನೆಯಲ್ಲಿ 'ಈ ಪದ್ಯವನ್ನು ಬರೆದವರು' ಎಂದು ಹೇಳಿ ಕವಿಯ ಹೆಸರನ್ನು ಹೇಳುವುದು ಕಡ್ಡಾಯವಾಗಿತ್ತು. ಹಾಗೆ ಕಾದಿರುವಳು ಶಬರಿ ಪದ್ಯ ಬರೆದ ಕವಿಯ ಹೆಸರು ವಿ. ಸೀತಾರಾಮಯ್ಯ ಎಂದು ಹೇಳುವ ಬದಲು ನಾನು 'ವಿ.ಸಿ. ತಾರಮಯ್ಯ' ಎಂದೇ ಹೇಳುತ್ತಿದ್ದೆ. 'ವಿ.ಸಿ.' ಎಂಬುದು ಅವರ ಇನ್ಷಿಯಲ್, ತಾರಮಯ್ಯ ಎಂಬುದು ಅವರ ಹೆಸರು ಎಂಬುದು ನನ್ನ ತಿಳುವಳಿಕೆ. ಮೇಷ್ಟ್ರು ಮೊದ ಮೊದಲು ವಿ.ಸಿ.ತಾರಮಯ್ಯ ಎಂಬುದನ್ನು ಕೇಳಿ ನಗುತ್ತಿದ್ದರಾದರೂ ಕೊನೆ ಕೊನೆಗೆ ಸಿಟ್ಟುಮಾಡಿಕೊಂಡು ಒದೆ ಕೊಡತೊಡಗಿದರು. ಒದೆಯ ಪರಿಣಾಮದಿಂದಾಗಿ ಆಗ ದ.ರಾ. ಬೇಂದ್ರೆ, ವಿ. ಸೀತಾರಾಮಯ್ಯ ಎಂಬ ಹೆಸರುಗಳನ್ನು ಸರಿಯಾಗಿ ಉಚ್ಚರಿಸಲು ಕಲಿತದ್ದನ್ನು ಮರೆಯುವುದುಂಟೆ? 

ಚಿಕ್ಕಂದಿನಲ್ಲಿ ನಮಗೆ ತುಂಬಾ ಕಷ್ಟಕೊಟ್ಟ ಹೆಸರೆಂದರೆ ಕಯ್ಯಾರ ಕಿಞ್ಞಣ್ಣ ರೈಗಳದ್ದು. ಕಯ್ಯಾರ ಮತ್ತು ರೈ ಎಂಬ ಪದಗಳನ್ನೇನೋ ಸರಿಯಾಗಿ ಹೇಳುತ್ತಿದ್ದೆವು. ಕಿಞ್ಞಣ್ಣ ಎಂಬುದರ ಮಧ್ಯದ ಅನುನಾಸಿಕ ಮಾತ್ರ ಉಚ್ಚರಿಸಲು ಸಾಧ್ಯವಾಗದೆ ಕಿಣ್ಣಣ್ಣ ಎಂದೇ ಹೇಳುತ್ತಿದ್ದೆವು. ಞ್ಞ ಆದೋಡನೆ ಣಕಾರದ ಸಾಂಗತ್ಯವಿತ್ತದ್ದರಿಂದ ಎರಡರ ವ್ಯತ್ಯಾಸ ತಿಳಿಯದೆ ಒಂದೇ ಎಂಬಂತೆ ಉಚ್ಚರಿಸುತ್ತಿದ್ದೆವು. ನಮ್ಮ ನಾರಾಯಣ ಮೇಷ್ಟ್ರು ನಮ್ಮ ಬಾಯಿಹತ್ತಿರ ಕಿವಿಯಿಟ್ಟು ಕೇಳಿಸಿಕೊಂಡು, ತಪ್ಪಾಗಿ ಹೇಳಿದರೆ ಬೆತ್ತದಿಂದ ಕುಂಡೆಗೆ ಬಾರಿಸುತ್ತಿದ್ದರು. 'ಬೆಂಕಿ ಬಿದ್ದಿದೆ ಮನೆಗೆ' ಎಂಬ ರೈಗಳ ಪದ್ಯದ ಕನ್ನಡಾಭಿಮಾನದ ಎಚ್ಚರಿಕೆಯ ಘಂಟೆ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿ ಏಟು ತಿನ್ನುವುದರಲ್ಲಿ ಕ್ಷೀಣವಾಗಿ ಬಿಡುತ್ತಿತ್ತೆಂಬುದು ಆಗಿನ ನಮ್ಮ ಅನುಭವ. ಈಗಲೂ ಕಯ್ಯಾರರ ಹೆಸರನ್ನು ತುಂಬ ಜನ ತಪ್ಪಾಗಿಯೇ ಉಚ್ಚರಿಸುತ್ತಾರೆ. ಇದಕ್ಕೆ ಡಿ.ಎನ್. ಶಂಕರಭಟ್ಟರ ವಾದವನ್ನು ಉದಾಹರಿಸಿ ಸಮರ್ಥಿಸಿಕೊಳ್ಳುವುದು ನಮಗೀಗ ರೂಢಿಯಾಗಿದೆ. 

ಆಮೇಲಾಮೇಲೆ 'ಕಯ್ಯಾರ'ರ ಹೆಸರನ್ನು ಮತ್ತೊಂದು ರೀತಿಯಲ್ಲಿ ಬಳಸುವುದು ಅಭ್ಯಾಸವಾಗಿ ಹೋಯ್ತು. 'ಕಯ್ಯಾರ' ಎಂಬುದನ್ನು 'ಕಯ್ಯಾರೆ' ಎಂದು ಪರಿವರ್ತಿಸಿಕೊಂಡು ಸ್ವಯಂಕೃತಾಪರಾಧ ಮಾಡಿದವರನ್ನು ಗೇಲಿ ಮಾಡಲು 'ಇವನೊಬ್ಬ ಕಯ್ಯಾರೆ ಕಿಞ್ಞಣ್ಣ ರೈ' ಎನ್ನುತ್ತಿದ್ದೆವು. ಸಾಹಿತ್ಯದ ಅಲ್ಪಸ್ವಲ್ಪ ಪರಿಚಯವಿದ್ದವರಿಗೆ ಇದು ಕನ್ನಡದ ಕವಿಯೊಬ್ಬರ ಹೆಸರೆಂದು ತಿಳಿದು ತುಟಿಯಲ್ಲಿ ನಗೆ ಅರಳುತ್ತಿತ್ತು. ಗೊತ್ತಿಲ್ಲದವರಿಗೆ ವಿಚಿತ್ರವಾಗಿ ಕಂಡು 'ಹಾಗೆಂದರೆ?' ಎಂದು ಮರು ಪ್ರಶ್ನೆ ಹಾಕುತ್ತಿದ್ದರು. ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದ ಹೊಸದರಲ್ಲಿ ನಾನು ಕಯ್ಯಾರರನ್ನು ಭೇಟಿ ಮಾಡಿದಾಗ ಮಾತಿನ ಮಧ್ಯೆ ಚಿಕ್ಕಂದಿನಲ್ಲಿ ನಮಗಾಗುತ್ತಿದ್ದ ಅವರ ಹೆಸರಿನ ತೊಡಕಿನ ಬಗ್ಗೆ ಹೇಳಿದ್ದೆ. ಎಪ್ಪತ್ತೊಂಬತ್ತು ವರ್ಷದ ಆ ಹಿರಿಯ ಜೀವ ತುಟಿಯರಳಿಸಿ ನಕ್ಕಿದ್ದು ಈಗ ನಡೆದಂತಿದೆ. ತುಳು ಮನೆಮಾತಿನ ಅವರು ಆ ಹೆಸರಿನ ಅರ್ಥ ವಿವರಿಸಿದ್ದು, ಆಟೋಗ್ರಾಫಿನಲ್ಲಿ 'ಕಾಸರಗೋಡು ಕನ್ನಡ ನಾಡಿನದು' ಎಂದು ಬರೆದು ಸಹಿ ಹಾಕಿದ್ದೆಲ್ಲ ನನ್ನ ಬದುಕಿನ ಅವಿಸ್ಮರಣೀಯ ಘಟನೆಗಳು. ಕೆಲವು ವರ್ಷಗಳ ಹಿಂದೆ ಬೋಳುವಾರು ಮಹಮದ್ ಕುಂಞ್ಞ ಅವರ ಮನೆಯಲ್ಲಿ ಮಾತಿನ ಮಧ್ಯೆ 'ಸರ್ ನಿಮ್ಮ ಹೆಸರಿನ ಕೊನೆಯ ಭಾಗವನ್ನು ಕುಂಯ್ಯಿ ಎಂದೇ ಕರೆಯುತ್ತಾರಲ್ಲ' ಎಂದಾಗ ಅವರು 'ನಿಮಗೆಲ್ಲ ಕಯ್ಯಾರರ ಹೆಸರನ್ನೂ ಸರಿಯಾಗಿ ಹೇಳಲು ಬರುವುದಿಲ್ಲ, ಹಾಗೆಯೇ ನನ್ನ ಹೆಸರನ್ನೂ ಹೇಳಲು ಬರುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು. 'ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ಕೊಟ್ಟ ಲೇಖಕರ ಹೆಸರು ಹೇಳಲೂ ಬಾರದ ಇವರೆಂತಹ ಕನ್ನಡಿಗರು?' ಎಂಬುದಷ್ಟೇ ಅವರ ತಕರಾರು. ಈಗಲೂ ನಾವು ಅವರ ಕಥೆಗಳ ಬಗ್ಗೆ ಮಾತಾಡುವಾಗ  'ಬೋಳುವಾರು ಅವರು' ಎಂದಷ್ಟೇ ಹೇಳಿ ಪಾರಾಗುವ ಜಾಣತನ ಕಲಿತಿದ್ದೇವೆ. ಮೇಡಂ ಎಷ್ಟುಸಲ ಹೇಳಿಕೊಟ್ಟರೂ ಕಡೆಂಗೋಡ್ಲು ಶಂಕರಭಟ್ಟರ ಹೆಸರು ನಮ್ಮ ಬಾಯಲ್ಲಿ 'ಕಡ್ಲೆಗೋಂಡ್ಲು' ಎಂದೇ ಉಚ್ಚಾರವಾಗುತ್ತಿದ್ದುದು!

 ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿ ಅಲ್ಲ ಕುಪ್ಪಳಿ ಎಂದು ತಿದ್ದಿದ ಮೇಷ್ಟ್ರನ್ನು ಈಗಲೂ ಕುಪ್ಪಳ್ಳಿ ಎಂದೇ ಉಚ್ಚರಿಸುವವರನ್ನು ಕಂಡಾಗಲೆಲ್ಲ ಸ್ಮರಿಸುವೆ. ಹಳ್ಳಿ ಎಂಬುದು ಚಿರಪರಿಚಿತ ಶಬ್ದವಾಗಿರುವುದರಿಂದ ಕುಪ್ಪಳಿಯನ್ನು ಕುಪ್ಪಳ್ಳಿ ಎಂದೇ ಕರೆಯುವುದು ಕೆಲವರಿಗೆ ಅಭ್ಯಾಸವಾಗಿದೆ. ಕನ್ನಡದ ಘನತೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದ ಕುವೆಂಪು, ಬೇಂದ್ರೆ, ಕಾರಂತ ಮಾಸ್ತಿಯವರಂತಹ ಹಿರಿಯ ಲೇಖಕರ ಊರನ್ನೂ ಸರಿಯಾಗಿ ಹೇಳಲು ಬರದಿದ್ದರೆ ಅದೆಂತಹ ಕನ್ನಡಾಭಿಮಾನವಪ್ಪ ನಮ್ಮದು! ಈಗಲೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಮಕ್ಕಳಿಗಾಗಿ ಸಿದ್ಧಪಡಿಸಿರುವ 'ಕಿರಿಯರ ವಿಶ್ವಕೋಶ'ದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಯು.ಆರ್. ಅನಂತಮೂರ್ತಿಯವರ ಹುಟ್ಟೂರು 'ಮೇಳಿಗೆ' ಎಂದಿರುವ ಬದಲು 'ಮೇಲಿಗೆ' ಎಂದೇ ಇದೆ! ಆಕರ ಗ್ರಂಥಗಳ ಕಥೆಯೇ ಹೀಗಿರುವಾಗ ಸಾಮಾನ್ಯರ ತಪ್ಪು ಉಚ್ಚರಣೆಗಳ ಬಗ್ಗೆ ಕೇಳುವುದೇ ಬೇಡ.

ಮತ್ತೆ ಹಾಡಿಗೆ ಮರಳುವುದಾದರೆ, ಶನಿವಾರ ಕನ್ನಡ ಕಂಠಪಾಠ ಕಡ್ಡಾಯವಾಗಿರುತ್ತಿತ್ತೆಂದೆನಲ್ಲವೆ? ಕೃಷ್ಣಮೂರ್ತಿ ಎಂಬ ನನ್ನ ಸಹಪಾಠಿಯೊಬ್ಬನಿಗೆ ರಾಗವಾಗಿ ಹಾಡಿ ಕನ್ನಡ ಮೇಷ್ಟ್ರಿಂದ ಮೆಚ್ಚುಗೆ ಗಳಿಸಬೇಕೆಂಬ ಆಸೆ.  ತರಗತಿಯ ಎಲ್ಲರೂ ಹಾಡುತ್ತಿರಲಿಲ್ಲ, ಹಾಗಾಗಿ ಪ್ರತಿ ವಾರ ಒಬ್ಬರಿಗೋ ಇಬ್ಬರಿಗೋ ಹಾಡುವ ಅವಕಾಶ ಒದಗುತ್ತಿತ್ತು.ಹಾಗಾಗಿ ಮೇಷ್ಟ್ರು ಅವನಿಗೆ ಸಮಯವಾಗಿತ್ತಾದ್ದರಿಂದ ಮುಂದಿನ ವಾರ ಹಾಡೂವಂತೆ ಬಿಡು ಎಂದಿದ್ದರು. ಆ ದಿನ ಬಂದಾಗ 'ತಾಯಿ ರಥವನೇರಿದಳು' ಪದ್ಯ ಬಾಯಿಪಾಠಕ್ಕೆ ನಿಗದಿಯಾಗಿತ್ತು. ಲಯಬದ್ಧವಲ್ಲದ ಆ ಕವಿತೆಯನ್ನು ಅವನು ಕಷ್ಟಪಟ್ಟು ಹಾಡಲು ಶುರು ಮಾಡಿದ ತಕ್ಷಣ ಇಡೀ ತರಗತಿ ಗೊಳ್ಳೆಂದು ನಕ್ಕಿತು. ಮೇಷ್ಟ್ರು ಕೂಡ  ಹೋಗಲಿ ಸಾಕು ಬಿಡಪ್ಪ ಎಂದರು. ವಾಸ್ತವವಾಗಿ ಆತ ನಮ್ಮ ಮೇಷ್ಟ್ರಿಗಿಂತ ಚೆನ್ನಾಗಿ ಪದ್ಯ ಹೇಳಿದನೆಂಬುದನ್ನು ನೆನೆಯಬೇಕು. ಎಷ್ಟೋ ಸಲ ಪಾಠ ಹೇಳುವ ಮೇಷ್ಟ್ರು ತುಂಬ ಕೆಟ್ಟದಾಗಿ ಪದ್ಯ ಓದುತ್ತಿದ್ದುದುಂಟು. "ಏನಿದು ಧೂಳಿ...ಓಹೋ ಗಾಳಿ" ಎಂಬ ಪದ್ಯವನ್ನು ಸುಶಿಲಮ್ಮ ಟೀಚರ್ ಗಂಟಲು ಹರಿದುಕೊಂಡು ಕೂಗುತ್ತಿದ್ದುದು ನಮಗೆ ವಿಚಿತ್ರವಾಗಿ ಕಾಣುತ್ರಿತ್ತು. ಗಾಳಿ ಬಂದಿದ್ದರಿಂದ ಧೂಳು ಬಂದಿದೆಯೆಂಬ ಸಣ್ಣ ಸಂಗತಿಯನ್ನೂ ಆಕೆ ಏನೋ ಆಗಬಾರದ್ದು ಆಗಿಹೋದಂತೆ ಭಯಂಕರವಾಗಿ ಕಿರುಚಿಕೊಂಡು ಹೇಳುತ್ತಿದ್ದುದು ಈಗ ನೆನೆದರೆ ನಗು ತರಿಸುತ್ತದೆ.  ನವೀನ ಎಂಬ ನನ್ನ ಸಹಪಾಠಿಯೊಬ್ಬ "ಬಾವಿಲಿ ಚಂದ್ರನ ಬಿಂಬವ ಕಂಡು, ಅಯ್ಯೋ ಚಂದ್ರನು ಬಿದ್ದಿಹನೆಂದು" ಎಂಬ ಸಾಲನ್ನು ಹೇಳುವಾಗ 'ಅಯ್ಯೋ' ಎಂಬುದಕ್ಕೆ ಕಳವಳ ಬೆರೆತ ದುಃಖಧ್ವನಿಯನ್ನು ಬಳಸುತ್ತಿದುದು ಕೂಡ ಇಲ್ಲಿ ನೆನಪಾಗುತ್ತಿದೆ. ಅವನದೇ ಯಾವುದೋ ಒಂದು ವಸ್ತು ಬಾವಿಗೆ ಬಿದ್ದಿದೆಯೇನೋ ಎಂಬಂತೆ ಮರುಕದ ದನಿಯಲ್ಲಿ ಆತ ಪದ್ಯ ಹೇಳುತ್ತಿದ್ದ.

ನಮ್ಮ ತರಗತಿಯಲ್ಲಿ ಸಿದ್ದೇಶ ಎಂಬ ಸಹಪಾಠಿಯೊಬ್ಬನಿದ್ದ. ಕನ್ನಡ ಮೇಡಂ 'ಗೋವಿನ ಹಾಡು' ಪದ್ಯವನ್ನು ಚಿಕ್ಕ ರೂಪಕದಂತೆ ಪರಿವರ್ತಿಸಲು ನಮ್ಮನ್ನೆಲ್ಲಾ ಬೋರ್ಡ್ ಹತ್ತಿರ ಕರೆದು ಒಬ್ಬರಿಗೆ ಪುಣ್ಯಕೋಟಿಯೆಂಬ ಹಸುವಿನ ಪಾತ್ರ, ಮತ್ತೊಬ್ಬನಿಗೆ ಕರುವಿನ ಪಾತ್ರ ನೀಡಿದ್ದರು. ಸಿದ್ದೇಶನಿಗೆ ಅರ್ಭುತನೆಂಬ ವ್ಯಾಘ್ರನ ಪಾತ್ರ. ಅವನನ್ನು ಟೇಬಲ್ ಮೇಲೆ ನಿಲ್ಲಿಸಿದ್ದರು. ಕೊನೆಯಲ್ಲಿ "ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು" ಎಂದು ಹೇಳುತ್ತಾ ಮೇಜಿನ ಮೇಲಿಂದ ಕೆಳಗೆ ಹಾರಲು ಮೇಡಂ ಹೇಳಿದ್ದರು. ಉತ್ಸಾಹದಿಂದ ಸಿದ್ದೇಶ ಸ್ವಲ್ಪ ಜೋರಾಗಿ ನೆಗೆದು ಕೆಳಗೆ ಬಿದ್ದ. ಬಿದ್ದವನಯ ಮೇಲೇಳೆದೆ ಜೋರಾಗಿ ಅಳತೊಡಗಿದ.  ಪಾಪ ಅವನ ಎಳೆಯ ಕಾಲಿನ ಮೂಳೆ ಮುರಿದು, ಕಾಲು ಊದಿಕೊಂಡಿತ್ತು. ಸುದ್ದಿ ತಿಳಿದು ಮನೆಯಿಂದ ಓಡಿ ಬಂದ ಸಿದ್ಧೇಶನ ಅಜ್ಜಿ ಮೇಡಂ ಜನ್ಮ ಜಾಲಾಡಿಬಿಟ್ಟಳು. ಹೆಡ್ ಮೇಡಂ ಕೂಡ ಕನ್ನಡ ಟೀಚರ್ಗೆ ಉಗಿದು ಉಪ್ಪು ಹಾಕಿದರು.  ಹದಿನೈದು ದಿನ ಕಳೆದ ಮೇಲೆ ಬ್ಯಾಂಡೇಜ್ ಕಟ್ಟಿಸಿಕೊಂಡು ಕುಂಟುತ್ತಾ ಶಾಲೆಗೆ ಬಂದ ಸಿದ್ಧೇಶನನ್ನು ನೋಡಿ ನಾವೆಲ್ಲ "ಕುಂಟು ಹುಲಿ" ಬಂತು ಅಂತ ರೇಗಿಸಿದೆವು. ಎಷ್ಟೋ ವರ್ಷಗಳವರೆಗೂ ನಮ್ಮ ಜಗತ್ತಿನೊಳಗೆ ಅದೇ ಅವನ ಖಾಯಂ ಹೆಸರಾಗಿತ್ತು.

ಮನೆಯಲ್ಲಿ ಮಾತ್ರ ನಮ್ಮ ಅಮ್ಮ ಅಜ್ಜಿಯರಿಗೆ 'ಗೋವಿನ ಹಾಡು' ತುಂಬಾ ಪ್ರಿಯವಾದ ರಚನೆಯಾಗಿತ್ತು. ಅವರು ತಮ್ಮ ಕೆಲಸ ಮಾಡಿಕೊಂಡಿರುವಾಗ ಆ ಪದ್ಯ ಓದಲು ನನಗೆ ಹೇಳುತ್ತಿದ್ದರು. ಸ್ವಲ್ಪ ದೀರ್ಘವೇ ಆಗಿದ್ದ ಆ ಪದ್ಯ ಓದಲು ನನಗೆ ರೇಜಿಗೆ. ಆದರೂ ಅವರ ಒತ್ತಾಯಕ್ಕೆ ಗಟ್ಟಿಯಾಗಿ ಓದುತ್ತಿದ್ದೆ. ಪದ್ಯ ಮುಗಿಸುವಷ್ಟರಲ್ಲಿ ಅಮ್ಮ ಅಳಲು ಶುರು ಮಾಡುತ್ತಿದ್ದರು. ಪುಣ್ಯಕೋಟಿಯೆಂಬ ಹಸುವಿನ ಸತ್ಯಸಂಧತೆ ಮತ್ತು "ಯಾರ ಮೊಲೆಯನು ಕುಡಿಯಲಮ್ಮ? ಯಾರ ಬಳಿಯಲಿ ಮಲಗಲಮ್ಮ? ಯಾರು ನನಗೆ ಹಿತವರು?"  ಎಂಬ  ಕರುವಿನ ಅಮಾಯಕ ಪ್ರಶ್ನೆಗಳು ಅಮ್ಮನಿಗೆ ಕಣ್ಣೀರು ತರಿಸುತ್ತಿದ್ದವು. ಅನಕ್ಷರಸ್ಥೆಯಾಗಿದ್ದ ಅಮ್ಮ ನಮ್ಮ ಪಠ್ಯದ ಪದ್ಯಗಳಿಗೆ ಸ್ಪಂದಿಸುತ್ತಿದ್ದ ರೀತಿ ಕಂಡು ಈಗಲೂ ನನಗೆ ಸೋಜಿಗ! ಒಮ್ಮೆ ಯಾವುದೋ ಕಾರಣಕ್ಕೆ ನಾಲ್ಕು ಮಕ್ಕಳ ಮೇಲೂ ಸಿಟ್ಟಯ ಮಾಡಿಕೊಂಡು ಊಟ ಮಾಡದೆ ಮಲಗಲು ಹಾಸಿಗೆ ಹಾಸಿಕೊಳ್ಳುತ್ತಿದ್ದರು. ನಮ್ಮ ದೊಡ್ಡಕ್ಕ ಅಮ್ಮನನ್ನು ಊಟಕ್ಕೆ ಕರೆದರೆ "ನಿಮಗೆ ಬೇಕಿದ್ರೆ ಹಾಕಂಡ್ ತಿನ್ನಿ, ನನ್ನ ಸುದ್ದಿಗೆ ಬರಬೇಡಿ" ಅಂತ ಬೈಯ್ದು ಕಳಿಸಿದರೆ‌ ಅವರ ಸಿಟ್ಟಿಗೆ ಕಾರಣ ಈಗ ನೆನಪಾಗುತ್ತಿಲ್ಲ. ಆದರೆ ಮನೆಯಲ್ಲಿ ಬಿಗಿಯಾದ ವಾತಾವರಣ ನೆಲೆಸಿತು. ನಮ್ಮ ಜಲಜಕ್ಕನಿಗೆ ಅದೇನ್ನೆನ್ನಿಸಿತೋ,  ಆಕೆ ತನ್ನ ಪಠ್ಯದಲ್ಲಿದ್ದ ಬಿಎಂಶ್ರೀಯವರ ಪದ್ಯ ತೆಗೆದು 'ಏಕಮ್ಮಾ ನಿನ್ನ ಮಕ್ಕಳ ಮೇಲೆ ಇನಿಸೊಂದು ಮುನಿಸು?" ಎಂದು ಗಟ್ಟಿಯಾಗಿ ಓದಿ, ಪರಿಣಾಮ ಬೀರಿತೇ ಎಂದು ನೋಡಲು ಅಮ್ಮನತ್ತ ಹಣುಕಿದಳು. ಗುರಿ ತಪ್ಪಿರಲಿಲ್ಲ, ನಮ್ಮ ಅಮ್ಮನ ಮುಖದಲ್ಲಿ ಮುನಿಸು ಮಾಯವಾಗಿ, ಜೋರಾದ ನಗು ಕಾಲಿಟ್ಟಿತ್ತು. ತಡೆದುಕೊಳ್ಳಲಾಗದೆ ಅವರು ನಕ್ಕುದ್ದೇ ತಡ ಮನೆಯಲ್ಲಿ ನಗು ಹಾಲು ಉಕ್ಕಿದಂತೆ ಉಕ್ಕಿತು. ಎಲ್ಲರೂ ನಗುನಗುತ್ತಲೇ ಊಟಕ್ಕೆ ಕುಳಿತೆವು. ಪಠ್ಯದಲ್ಲಿದ್ದ ಪದ್ಯವೊಂದರ ಸಾಲು ನಮ್ಮ ಮನೆಯ ಬಿಗುವಿನ ವಾತಾವರಣವನ್ನು ಹಗುರಾಗಿಸಿದ್ದು ನಮ್ಮ ಪಾಲಿಗೆ ದೊಡ್ಡ ಸಂಗತಿಯಲ್ಲವೆ?

ಕಂಠಪಾಠ ಮಾಡುವುದರಲ್ಲಿ ನಿಸ್ಸೀಮರಾದರೂ ಪದ್ಯದ ಅರ್ಥ ಮಾತ್ರ ಗೊತ್ತಿರುತ್ತಿರಲಿಲ್ಲ. ಅರ್ಥ ಗೊತ್ತಿಲ್ಲದಿದ್ದರೂ ಕಲಿತು, ಒಪ್ಪಿಸುವುದು ಒಂದು ಬಗೆಯ ಖುಷಿಕೊಡುತ್ತಿತ್ತು. ಪ್ರಾಥಮಿಕ ತರಗತಿಗಳಲ್ಲಿ ಕಲಿತ 'ತಿರುಕನ ಕನಸು' ಹೈಸ್ಕೂಲಿನಲ್ಲಿ ಕಲಿತ ಕವಿರಾಜ ಮಾರ್ಗದ ಕನ್ನಡ ನಾಡು ಮತ್ರು ಜನರ ತನ್ನ ಕುರಿತ ಪದ್ಯಗಳು ಈಗಲೂ ನೆನಪಿಗೆ ಬರುತ್ತವೆ. ಕಾವೇರಿಯಿಂದಮಾ ಗೋಧಾವರಿಯವರೆಗೆ ಎಂಬ ವಿಸ್ತೀರ್ಣ ವರ್ಣನೆ ಕೇಳಿ ಭೂಪಟದಲ್ಲಿ ಎರಡೂ ನದಿಗಳ ಭೌಗೋಳಿಕ ವಿಸ್ತೀರ್ಣವನ್ನು ಹುಡುಕುತ್ತಿದ್ದೆವು. "ಗೊಟ್ಟಿಯ, ಗೇಯದ ಅಲಂಪಿನಿಂಪುಗಳ್ಗಾಗರಮಾದ ಮಾನಸರೇ ಮಾನಸರ್" ಎಂದು ಕಲಿತ ಸಾಲಿನಲ್ಕಿ ಗೋಷ್ಠಿ ಎಂಬುದರ ತದ್ಭವ ರೂಪ ಗೊಟ್ಟಿ ಎಂಬುದು ಮರೆಯಾಗಿ ಮಲೆನಾಡಿನ ರೊಟ್ಟಿ ಎಂಬುದೇ ಕಣ್ಣೆದರು ಮೂಡುತ್ತಿತ್ತು. ಪಿಯುಸಿ ತರಗತಿಗೆ ಬಂದಾಗ ಪಂಪ ಮರಿದುಂಬಿಯಾಗಿ, ಮೇಣ್ ಕೋಗಿಲೆಯಾಗಿ ಪುನಃ ಈ ನಾಡಿನಲ್ಲಿ ಹುಟ್ಟ ಬಯಸಿದ್ದನ್ನು ನಾವೆಲ್ಲಾ ಯಾಕೆ ಮನುಷ್ಯ ಜನ್ಮ ಮತ್ತೆ ಬೇಡವಾಯ್ತೆ? ಒಂದೇ ಜನ್ಮಕ್ಕೆ ಸಾಕು ಸಾಕಾಗಿ ಮನುಷ್ಯನಾಗಿ ಹುಟ್ಟುವ ಬದಲು ದುಂಬಿ, ಕೋಗಿಲೆಯಾಗಿ ಹುಟ್ಟಲು ಬಯಸಿರಬಹುದೆ? ಅಂತೆಲ್ಲಾ ತರಲೆ ತರಲೆಯಾಗಿ ಕೇಳಿಕೊಂಡು ನಗುತ್ತಿದ್ದುದು ನೆನಪಾಗುತ್ತಿದೆ. 

ಹಳೆಗನ್ನಡ ಪದ್ಯಗಳನ್ನು ಬಾಯಿಪಾಠ ಮಾಡುತ್ತಿದ್ದುದ್ದರ ಮತ್ತೊಂದು ಉಪಯೋಗವನ್ನಿಲ್ಲಿ ಹೇಳಿಬಿಡಬಹುದು. 'ಅಲಂಪು' ಎಂಬ ಪದವೊಂದು 'ಅಲಂಪಿನಿಂಪುಗಳ್ಗಾರಮಾದ ಮಾನಸರ್' ಎಂಬ ಸಾಲಿನಲ್ಲಿ ಬರುತ್ತದಲ್ಲ, ನಿಘಂಟಿನಲ್ಲಿ ಅದಕ್ಕೆ 'ಸ್ನೇಹ-ಪ್ರೀತಿ' ಎಂಬ ಅರ್ಥಗಳನ್ನು ಓದಿದ ನೆನಪು. ಬೇರೆ ಅರ್ಥಗಳೂ ಇದ್ದೀತು. ಆದರೆ ಕನ್ನಡಿಗರು ಸ್ನೇಹ ಪ್ರೀತಿಗೆ ಹೆಸರಾದವರೆಂಬುದನ್ನು ನಮ್ಮ ಆದಿಕವಿಯೋ ಅಥವಾ ಕವಿರಾಜಮಾರ್ಗಕಾರನೋ ತನ್ನ ಕಾವ್ಯದಲ್ಲಿ ಉಲ್ಲೇಖಿಸಿರುವುದು ನಮ್ಮ ಸಂಸ್ಕೃತಿಯ ಬಹುದೊಡ್ಡ ಅಸ್ಮಿತೆಯಾಗಿ ನನಗೆ ಕಂಡಿದೆ. ಅವನ ಮತ್ತು ಇತರ ಅನೇಕ ಈ ಬಗೆಯ ಮಾತುಗಳನ್ನು ಕನ್ನಡಾಭಿಮಾನ ಕುರಿತ ಉಪನ್ಯಾಸಗಳಲ್ಲಿ ಪದೇ ಪದೇ ಉಲ್ಲೇಖಿಸುವ ನಾನು ನಮ್ಮ ಮನೆಗೂ 'ಅಲಂಪು' ಎಂದೇ ಹೆಸರಿಟ್ಟಿರುವೆ. ಮನೆಗೆ ಬಂದವರೆಲ್ಲಾ ಅಲಂಪು ಎಂದರೇನು? ಎಂಬ ಪ್ರಶ್ನೆಯನ್ನು ಎಸೆದೇ ಎಸೆಯುತ್ತಾರೆ. ಅವರಿಗೆಲ್ಲಾ ಮತ್ತೆ ಹಳೆಗನ್ನಡದ ಪದ್ಯವನ್ನು ವಿವರಿಸಿ ಹೇಳುವುದು ಮತ್ತು ಅಲಂಪು ಹೆಸರಿಟ್ಟ ಬಗ್ಗೆ ಹೆಮ್ಮೆಯಿಂದ ಬೀಗುವುದು ನನ್ನ ಕೆಲಸ. ಕೆಲವರು ಆಲಂಪು ಎಂದು ಉಚ್ಚರಿಸಿದಾಗ ಪಿಚ್ಚೆನಿಸುತ್ತದೆ. ಮತ್ತೆ ಕೆಲವರು ನನ್ನ ಹಳೆಗನ್ನಡ ವಿವರವನ್ನೆಲ್ಲಾ ಕೇಳಿಸಿಕೊಂಡು, "ಬೇರೆ ಯಾವ್ದೂ ಹೆಸರು ಸಿಗಲಿಲ್ವಾ?" ಎಂದು ಕೇಳಿ ವ್ಯಂಗ್ಯವಾಗಿ ನಕ್ಕಾಗ ಅವರ ಕನ್ನಡದ ಬಗೆಗಿನ ನಿರಭಿಮಾನದ ಬಗ್ಗೆ ರೇಗುವುದರ ಜೊತೆಗೆ ಸಾವಿರಾರು ವರ್ಷಗಳ ಹಿಂದಿನ ಪದವೊಂದನ್ನು ಚಾಲ್ತಿಗೆ ತಂದಿಟ್ಟುಕೊಂಡಿರುವ ಬಗ್ಗೆ ಸ್ವಲ್ಪವಾದರೂ ಸಂತೋಷ ಬೇಡವೇ ಎಂದು ಕನಿಕರವೂ ಮೂಡುತ್ತದೆ. ಇರಲಿ ಬಿಡಿ ಇಂಥ ಟೀಕೆಗಳಿಗೆ ಬೆಲೆಕೊಟ್ಟು ನಮ್ಮ ಅಭಿಮಾನವನ್ನೇಕೆ ಪಕ್ಕಕ್ಕೆ ಸರಿಸಬೇಕು? ಮಾಲೂರಿನ ನನ್ನ ವಿದ್ಯಾರ್ಥಿಗಳು ಆರಂಭಿಸಿರುವ ಪುಸ್ತಕ ಪ್ರಕಾಶನಕ್ಕೆ 'ಅಲಂಪು' ಎಂದೇ ನಾಮಕರಣ ಮಾಡಿದ್ದಾರೆ. ಹಿರಿಯ ಕಥೆಗಾರ್ತಿ ಎಂ.ಎಸ್. ವೇದಾ ಅವರು ಮೂಸೂರಿನ ತಮ್ಮ ಮನೆಗೂ ಇದೇ ಹೆಸರನ್ನಿಟ್ಟಿರುವುದು ನನಗೆ ಖುಷಿಯ ವಿಚಾರ. ಚಿಕ್ಕಮಗಳೂರಿನ ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿನಲ್ಲೂ 'ಅಲಂಪು' ಎಂಬ ಸ್ಟಿಕರ್ ಕಂಡು ನಾನೊಬ್ಬನೇ ಪುಳಕಗೊಂಡೆ.

ಪದ್ಯಗಳನ್ನು ಬಾಯಿಪಾಠ ಮಾಡುವುದರಿಂದ ತರಗತಿಗಳೊಳಗಿನ ತಾತ್ಕಾಲಿಕ ಉಪಯುಕ್ತತೆಯನ್ನೂ ಮೀರಿದ ಲಾಭವಾಗುತ್ತದೆಂಬುದು ಸುಳ್ಳಲ್ಲ. ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಬರೆದು ಅಂಕಗಳಿಸುವ ಲಾಭಕ್ಕಷ್ಟೇ ಉಳಿದೆಲ್ಲ ವಿಷಯಗಳೂ ಸೀಮಿತವಾದರೆ, ಕನ್ನಡದ ಪದ್ಯಗಳು ಮಾತ್ರ ಕನ್ನಡ ಕಾವ್ಯ ಪರಂಪರೆಯನ್ನು ತುಸುವಾದರೂ ಸ್ಮರಿಸಲು ನೆರವಾಗುತ್ತವೆಂಬುದನ್ನು ಒಪ್ಪುವಿರಾ? ನಿಮಗೀಗ ರಾಜರತ್ನಂ, ಹೊಯ್ಸಳ, ಮುಪ್ಪಿನ ಷಡಕ್ಷರಿ, ರತ್ನಾಕರ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಮುದ್ದಣರ ಸಾಕುಗಖು ನೆನಪಿಗೆ ಬರುತ್ತಿರಬೇಕಲ್ಲವೆ? ಹಾಗೆಯೇ ಮುದ್ದಣನನ್ನು ಮುದ್ದಣ್ಣ ಎಂದಿದ್ದು? ನೇಮಿಚಂದ್ರ ಅಂದರೆ ಗಂಡೋ ಹೆಣ್ಣೋ ಎಂದು ಅನುಮಾನಿಸಿದ್ದು? "ಲಿಂಗಮೊಂಬತ್ತು ತೆರಂ" ಎಂಬ ಶಬ್ದಮಣಿದರ್ಪಣಕಾರನ ಮಾತನ್ನು ಓದಿದಾಗ "ಎರಡು ತೆರನಿದ್ದೇ
 ಇಷ್ಟೊಂದು ಫಜೀತಿ! 
ಒಂಬತ್ತು ತೆರನಿದ್ದಿದ್ದರಿನ್ನೇನು 
ಗತಿ?" 
ಎಂದು ಸಿ.ಪಿ.ಕೆ.ಯವರು ಬರೆದಿರುವುದನ್ನು ನೆನೆದು ನಗಾಡಿದ್ದು?

-ಡಾ. ಎಚ್. ಎಸ್. ಸತ್ಯನಾರಾಯಣ
ಎಚ್.ಎಸ್. ಸತ್ಯನಾರಾಯಣ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಬದುಕಿನಲ್ಲಿ ನಾವೇನಾಗಬಲ್ಲೆವೂ ಅದಾಗಬೇಕು

03-01-2025 ಬೆಂಗಳೂರು

“ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು,” ಎ...

ಕತೆಗಳೆಲ್ಲವೂ ಬದುಕಿನ ಹೆಜ್ಜೆಯಲ್ಲಿ ಹುಟ್ಟಿದ ಜೀವತಂತುಗಳು

03-01-2025 ಬೆಂಗಳೂರು

“ಇಲ್ಲಿನ ಎಲ್ಲಾ ಕತೆಗಳಲ್ಲೂ ಕತೆಗಾರನಿಗೆ ಅರಿವಿದ್ದೋ, ಇಲ್ಲದೆಯೋ ಪ್ರಾದೇಶಿಕ ಪ್ರಜ್ಞೆ ಸ್ಥಾಯಿಭಾವವಾದರೆ, ಮನುಷ್...

ಈ ಪುಸ್ತಕ ಇರುವುದು ಒಂದೇ ಸಂಗತಿಯ ಸುತ್ತ

03-01-2025 ಬೆಂಗಳೂರು

“ಈ ಪುಸ್ತಕದ ಬಹುಪಾಲು ವಿಚಾರಗಳು ಗ್ರಂಥಋಣದಲ್ಲಿ ಸೂಚಿಸಿರುವ ಪುಸ್ತಕಗಳು ಮಾತ್ರವಲ್ಲದೆ ಇನ್ನೂ ಅನೇಕ ಪುಸ್ತಕಗಳಿಂ...