"ದೇವಸ್ಥಾನದ ಒಳಗೆ ಈವರೆಗೂ ಹೋಗಿಲ್ಲ, ಹೋಗಬೇಕೆಂದು ಅನ್ನಿಸಿಯೂ ಇಲ್ಲ. ನಮ್ಮ ಸೇವೆ ಎಲ್ಲಿಯಾದರೇನು, ಡೋಲು ಬಡಿದರಾಯ್ತಲ್ವ..." ಎಂಬ ಸಾಲುಗಳು ನಿಜಕ್ಕೂ ಅದೆಷ್ಟು ಮಾರ್ಮಿಕವಾದದ್ದು, ಬೇಜಾರೇ ಹಿಡಿಸುತ್ತದೆ, ಎನ್ನುತ್ತಾರೆ ಎ.ಬಿ ಪಚ್ಚು. ಅವರು ಮಂಜುನಾಥ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಕೃತಿ ಕುರಿತು ಬರೆದಿರುವ ವಿಮರ್ಶೆ.
ಗುಲಾಬಿಯಂತಹ ತಾಯಂದಿರು ಸಾಮಾನ್ಯವಾಗಿ ಎಲ್ಲಾ ಕಡೆಯೂ ಇದ್ದೇ ಇರುತ್ತಾರೆ. ಹೆಚ್ಚಾಗಿ ಜನರು ಅಂತವಳಿಗೆ ಹುಚ್ಚಿ ಎಂದೇ ಕೂಗುತ್ತಾರೆ. ಅವಳು ಕೂಡ ತಲೆ ಕೆರೆದುಕೊಂಡೇ ಈ ಭವ್ಯ ಸಮಾಜದೆದುರು ತಿರುಗುತ್ತಿರುತ್ತಾಳೆ. ನಮಗೆ ಅವಳ ಕತೆ ಗೊತ್ತಿಲ್ಲ, ಏಕೆಂದರೆ ನಾವು ಕೇಳುವುದಿಲ್ಲ, ಅವಳೂ ಹೇಳುವುದಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಹೇಳಲಾಗದ ಕತೆಗಳೇ ಅವಳಲ್ಲಿ ಪದೇ ಪದೇ ಹುಟ್ಟುತ್ತಿದ್ದಾರೆ ಅಂತಹದ್ದನು ಒಬ್ಬಳು ತಾಯಿಯಾದವಳು, ಒಬ್ಬಳು ಹೆಣ್ಣಾದವಳು ಈ ಸಮಾಜಕ್ಕೆ ಹೇಳುವುದಾದರು ಹೇಗೆ? ಅಂದ ಹಾಗೆ ಒಬ್ಬಳು ತಾಯಿ ತನ್ನ ಹೆಣ್ಣುಮಕ್ಕಳ ಕುರಿತಾಗಿ ಯಾರಲ್ಲೂ ಹೇಳಿಕೊಳ್ಳಲಾಗದ ಕತೆಗಳು ಅಂತ ಇದ್ದರೆ ಅದು ನಿಜಕ್ಕೂ ಏನಿರಬಹುದು? ಅದನ್ನಿಲ್ಲಿ ಕಾಮತರು ತಮ್ಮೂರಿನ ಇಂದಿರಾ ನಗರದ ಗುಲಾಬಿಯ ಕತೆಯ ಮೂಲಕ ಹೇಳುತ್ತಾರೆ.
ಈಗಿನ ಹುಡುಗಿಯರು ಕುಡಿಯುತ್ತಾರೆ, ಹೊಗೆಯೂ ಬಿಡುತ್ತಾರೆ. ಒಬ್ಬೊಬ್ಬರ ಆಸಕ್ತಿ ಒಂದೊಂದು ತರಹ. ಹಕ್ಕಿ ಪುಕ್ಕ ಆಸೆಯಿಂದ ಹೆಕ್ಕುವುದೂ ಒಂದು ಹವ್ಯಾಸ, ನದಿ ಕಡಲಿನ ನುಣುಪು ಕಲ್ಲುಗಳನ್ನು ಒಂದೊಂದಾಗಿ ಆಸ್ಥೆಯಿಂದ ಆರಿಸುವುದೂ ಒಂದು ಹವ್ಯಾಸ. ಹಾಗೆಯೇ ಈ ಮೆಲ್ಲಮೆಲ್ಲಗೆ ತೇಲುತ್ತಾ ಸಾಗುವ ಮೋಡಗಳನ್ನು ವೀಕ್ಷಿಸುವುದೂ ಕೂಡ ಒಂದು ಹವ್ಯಾಸವಂತೆ. ಎಲ್ಲರಿಗೂ ಅದೆಷ್ಟು ಆಕಾಶ ನಮಗಿಲ್ಲ, ಅದರೊಳಗೆ ದಿನಾ ದಿನಾ ಅದೆಷ್ಟು ಚಿತ್ರ ವಿಚಿತ್ರ ಮೋಡಗಳು. ಒಂದೂ ಹವ್ಯಾಸವೇ ಇಲ್ಲವೆಂದಾದರೆ ಇದೊಂದು ಹವ್ಯಾಸ ಅದೆಷ್ಟು ಚಂದದ್ದು, ಅಲಾ. ಸುಮ್ಮನೆ ನೋಡುತ್ತಾ ಉಳಿಯುವುದು. ಮೋಡಗಳೂ ಬಹಳಷ್ಟು ಹೇಳಬಲ್ಲವು; ನಾವು ಓದಬೇಕು.
ಕೇದಾರನಾಥ ದರ್ಶನದೊಂದಿಗೆ ಅದೊಂದು ಜೀವ ಅಲ್ಲೇ ಜೀವ ಬಿಟ್ಟಿತು. ಯಾರೂ ಅಳಲಿಲ್ಲ. ಬಹುಶಃ ಸತ್ತವರೂ ಕೂಡ ಭಾಗ್ಯವೆಂದು ಅಂದುಕೊಂಡಿರಬೇಕು.
ತರಗತಿಯಲ್ಲಿ ಅಧ್ಯಾಪಕರು ಬಳಸಿ ಬಿಸಾಡಿದ ತುಂಡು ಚಾಕ್ ಪೀಸ್ ಗಳನ್ನು ಜತನದಿಂದ ಹೆಕ್ಕಿ ತಂದು ಗುಡಿಸಲಿನ ಮಕ್ಕಳಿಗೆ ಓದು ಬರಹ ಕಲಿಸಿದ ಪ್ರೇಮ ಈ ಜಗತ್ತಿಗೆನೇ ಮಾದರಿ ಹೆಣ್ಣು. ಇಂತವರೇ ಈ ಸಮಾಜದಲ್ಲಿ ಹುಲುಸಾಗಿ ಬೆಳೆಯಬೇಕು.
ಕೊರಗ ಸಮುದಾಯದ ಡೋಲಿಗೊಂದು ಮಾಧುರ್ಯ ಇದೆ. ಆದರೂ ಅವರು ದೇವಳದ ಒಳಕ್ಕೆ ಬರಲಾರರು. ಅದೆಷ್ಟೇ ಒತ್ತಾಯ ಮಾಡಿದರೂ ಅವರುಗಳ ಹಲವಾರು ಹಿರಿಯ ಜೀವಗಳು ಇಂದಿಗೂ ಒಳಬರಲು ಬಹಳಷ್ಟು ಹಿಂದೇಟು ಹಾಕಿದವರೇ ಹೆಚ್ಚು. ಹಿರಿಯರಾದ ಗುರುವ, ಕೊರಗ ಅವರು ಹೇಳುವ "ದೇವಸ್ಥಾನದ ಒಳಗೆ ಈವರೆಗೂ ಹೋಗಿಲ್ಲ, ಹೋಗಬೇಕೆಂದು ಅನ್ನಿಸಿಯೂ ಇಲ್ಲ. ನಮ್ಮ ಸೇವೆ ಎಲ್ಲಿಯಾದರೇನು, ಡೋಲು ಬಡಿದರಾಯ್ತಲ್ವ..." ಎಂಬ ಸಾಲುಗಳು ನಿಜಕ್ಕೂ ಅದೆಷ್ಟು ಮಾರ್ಮಿಕವಾದದ್ದು, ಬೇಜಾರೇ ಹಿಡಿಸುತ್ತದೆ. ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ, ಮೇಳುಕೀಳು ಈಗ ಹಿಂದಿನಂತೆ ಇಲ್ಲ ನಿಜ, ಆದರೆ ಅದನ್ನು ಜಾತಿಯ ಕಾರಣಗಳಿಗಾಗಿ ಅನುಭವಿಸಿದ ಹಿರಿಯ ಜೀವಗಳಿಗೆ ಈಗಲೂ ದೇವರೆಂದರೆ ಬರೀ ಕಾಯಕವೇ ಕೈಲಾಸ ಅಷ್ಟೇ. ಬಹಳಷ್ಟು ಸಲ ಅನ್ನಿಸುತ್ತದೆ ಅವರಿಗೆನೇ ದೇವರು ಎಲ್ಲೆಡೆಯೂ, ಯಾವಾಗಲೂ ಇರುವುದು , ಒಳ ಹೊಕ್ಕು ಕೈ ಮುಗಿಯುವ ಬಹಳಷ್ಟು ಜನರಿಗೆ ಮಾತ್ರ.. ದೇವರು ಬರೀ ಗುಡಿಯಲ್ಲಷ್ಟೇ ಇರುವುದು!
ಕೆಲವೊಮ್ಮೆ ಸುಡುವಾಗ ಶವದ ಮೇಲಿನ ಚಿನ್ನ ತೆಗೆಯುವುದಿಲ್ಲ. ಅದು ಬೆಂಕಿಯಲ್ಲಿ ಕರಗಿ ಎಲುಬಿನೊಂದಿಗೆ ಬೂದಿಯೊಂದಿಗೆ ಬೆರೆತಿರುತ್ತದೆ,ಈ ಚಿನ್ನದ ಹಿಕ್ಕೆಗಳು ಅಸ್ತಿ ವಿಸರ್ಜನೆ ಮಾಡುವ ನದಿಗಳಲ್ಲಿ ಸೇರಿಕೊಳ್ಳುತ್ತವೆ. ಅದಕ್ಕಾಗಿ ಹುಡುಕುವವರೂ ಇದ್ದಾರೆ. ಹೀಗೆ ಕೆಲವರ ಅಂತ್ಯ ನದಿಪಾತ್ರದ ಜನರ ಜೀವನ ಆರಂಭಕ್ಕೆ ಕಾರಣವಾಗುತ್ತದೆ. ಅಂತಹ ಬಡ ಜನರಿಗೆ ಚಿನ್ನ ಸಿಕ್ಕಿದರೇನೇ, ಹೆಕ್ಕಿದರೇನೆ ಚಿನ್ನದಂತಹ ಸಂಸಾರ.
ಮರಕುಟುಕ ಅಂತ ಒಂದು ಹಕ್ಕಿ ಹೆಸರಿನ ಊರಿದೆ. ಅಲ್ಲೊಬ್ಬ ಭಟ್ಟರ ಮಗ ಬೆಂಗಳೂರು ಬಿಟ್ಟು ಊರಿಗೆ ಬಂದಿದ್ದಾನೆ. ಹುಡುಗಿಯರಿಗೆ ಈಗೀಗ ನಗರದ ಹುಡುಗರು ಬೇಕು. ಭಟ್ಟರ ಮಗನಿಗೆ ಈಗ ಮದುವೆ ಆಗಿರಬಹುದೋ ಏನೋ ಗೊತ್ತಿಲ್ಲ, ಹಳ್ಳಿ ಪ್ರೀತಿ ಮೂಡದಿದ್ದರೆ ಈ ಜಗತ್ತಿನಲ್ಲಿ ಬಹಳಷ್ಟು ಹುಡುಗರಿಗೆ ಮದುವೆಯೇ ಕಷ್ಟ.
ತಂಪು ಬೀಜದ ಶರಬತ್ತಿನ ಕತೆಯಲ್ಲೊಂದು ಅಜ್ಜಿ ಬರುತ್ತಾರೆ, ಅಲ್ಲೇ ಒಂದು ಬೆಂಚಿನಲ್ಲಿ ಕೂತಿರುತ್ತಾರೆ, ಓದುವಾಗ ಅವರೇ ಸದ್ಯದ ವಯೋವೃದ್ಧರ ನಿಜವಾದ ಪ್ರತಿನಿಧಿ ಅನ್ನಿಸಿತು . ಹಿರಿಯ ಜೀವಗಳಿಗೆ ಅವರ ಇಳಿಸಂಜೆಗಳಲ್ಲಿ ಏನೋ ಬೇಕು. ಮಗನೋ, ಮಗಳೋ, ಮೊಮ್ಮಗನೋ, ಮೊಮ್ಮಗಳೋ, ಒಟ್ಟಿನಲ್ಲಿ ಯಾವುದೋ ಒಂದು ಹೆಗಲು.. ಹೀಗೆ ಏನೋ ಒಂದು ಬೇಕು. ನಮಗೆಲ್ಲಾ ಅದು ಬೇಗ ಗೊತ್ತಾಗಬೇಕು. ನಾವೂ ಒಂದಲ್ಲ ಒಂದು ದಿನ ಅಜ್ಜ ಅಜ್ಜಿಯರೇ.
ಕಾಶಿ ಬೀದಿಯ ಕತೆಗಳು ಯಾವತ್ತೂ ಸುಡುವ ಚಿತೆಯಿಂದ ಮೈ ಕಾಯಿಸಿಕೊಂಡಂತಹ ಅನುಭವ ಕರುಣಿಸುವಂತವುಗಳು. ಮೈ ಮನ ಬೆಚ್ಚಗೆನೋ ಆಗುತ್ತದೆ, ಆದರೆ ನಮಗೆ ಆದದ್ದು ಏನದು? ನೆಮ್ಮದಿಯೋ, ಸತ್ಯವೋ, ವೈರಾಗ್ಯವೋ, ಗೊತ್ತಿಲ್ಲ! ಜೀವನದಲ್ಲಿ ಒಮ್ಮೆ ಆದರೂ ವಿಶ್ವನಾಥನ ಕಾಶಿಗೆ ಹೋಗಬೇಕು, ವಾರಣಾಸಿಯ 84 ಘಾಟ್ ಗಳಲ್ಲಿ ಒಂದಿಷ್ಟನ್ನು ಅವಶ್ಯವಾಗಿ ಸುತ್ತಬೇಕು, ಬಹಳಷ್ಟು ಸತ್ಯ ದರ್ಶನವಾಗಬೇಕು, ಪುಣ್ಯಾತ್ಮ ಆ ರಾಜಾ ಹರಿಶ್ಚಂದ್ರನನ್ನು ಅಲ್ಲಿಂದಲೇ ನೆನೆಯಬೇಕು, ಸ್ಮರಿಸಬೇಕು, ಅಲ್ಲೇ ಯಾವುದಾದರೊಂದು ದುಖಾನಿನಲ್ಲಿ ಮಣ್ಣಿನ ಲೋಟದಲ್ಲಿ ಬಿಸಿ ಚಾಯ್, ಲಸ್ಸಿ, ಖೋವಾ.. ಸಾಧ್ಯ ಆದರೆ ಜಿಲೇಬಿಯನ್ನೂ ಮೆಲ್ಲ ಬೇಕು ಎಂದೆಲ್ಲಾ ಅನ್ನಿಸುವಂತೆ ಮಾಡಿ ಬಿಡುತ್ತದೆ ಈ ಬರಹ ಹಾಗೂ ಕಾಮತರು ಕಂಡ ರುದ್ರ ರಮಣೀಯ ಕಾಶಿ.
ನಾನು ಸಂನ್ಯಾಸಿಯಾಗಲು ಹೊರಟಿದ್ದೆ... ಎಂದು ಹೇಳುವ ಕಾಮತರು ಸಂನ್ಯಾಸಿಯಾಗದೇ ಇದ್ದದ್ದು ಒಳ್ಳೆಯದೆಂದು ಅವರ ಜೀವನಪ್ರೀತಿ, ಕಲೆ, ಸಂಸ್ಕೃತಿ, ಆಹಾರ, ಆಚಾರ ವಿಚಾರ, ಕೃಷಿ, ಜಾತ್ರೆ, ಬರವಣಿಗೆ, ಪ್ರವಾಸ... ಇನ್ನೂ ಹಲವಾರು ವಿಷಯಗಳ ಆಸಕ್ತಿ ಬಲ್ಲ ಯಾರಿಗೆ ಆಗಲಿ ಒಮ್ಮೆ ಅನ್ನಿಸದೇ ಇರದು.
ಅಂದ ಹಾಗೆ ಈ ಪುಸ್ತಕಕ್ಕೆ ಮುನ್ನುಡಿಯೂ ಇಲ್ಲ, ಬೆನ್ನುಡಿಯೂ ಇಲ್ಲ. ಸಣ್ಣ ಪುಸ್ತಕ, ಸರಳ ವಿಷಯ, ಸೊಗಸಾದ ಶೈಲಿ ಹಾಗಾಗಿ ಇಲ್ಲಿ ಓದಿಗೆ ವೇಗ ಹೆಚ್ಚು. ಕೆಲವೊಂದು ಬರಹಗಳು ನಿಜಕ್ಕೂ ಎದೆಗೆ ತಾಕಿತು, ಕೆಲವೊಂದು ಮಾತ್ರ ಎಲ್ಲಿಗೂ ತಟ್ಟದೆ ಮೆಲ್ಲಗೆ ಗಾಳಿಯಲ್ಲಿ ಹಾರಿತು. ನನ್ನಲ್ಲಿ ಉಳಿದದ್ದು ನನ್ನದೇ ಆಯಿತು. ಸುಖವಾಗಿ ಓದಬಹುದು.
- ಮಂಜುನಾಥ ಕಾಮತ್
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.