ಕಲ್ಪನೆಯ ಕವಿತೆಯಲ್ಲ ಬಿದಲೋಟಿಯ ಕಾವ್ಯ


ಕವಿ ಬಿದಲೋಟಿ ರಂಗನಾಥ್ ಕಾವ್ಯದ ಶಕ್ತಿ ಚಿಂತನಾರ್ಹವಾಗಿದೆ. ದಲಿತ ಸಂವೇದನೆಯಾಗಿ, ಒಡಲಾಳದ ನೋವಿನ ಸಂಗತಿಯೇ ರೂಪಕವಾಗಿ ಕಾವ್ಯವಾಗಿ ಮೈದೇಳೆದು ನಿಂತಿದೆ ಎನ್ನುತ್ತಾರೆ ಲೇಖಕ ನಾರಾಯಣಸ್ವಾಮಿ .ವಿ. ಕವಿ ಬಿದಲೋಟಿ ರಂಗನಾಥ್ ಅವರ ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಕೃತಿಯ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿಯ ಹೆಸರು: ದೇವರಿಲ್ಲದ ಸಾಕ್ಷಿಗೆ ರುಜುಹಾಕಿ
ಲೇಖಕರು: ಬಿದಲೋಟಿ ರಂಗನಾಥ್
ಪ್ರಕಾಶಕರು: ತಳಮಳ ಪ್ರಕಾಶನ
ಬೆಲೆ : ನೂರು ರೂಪಾಯಿಗಳು

ಗುಡಿಸಿಲಿನೊಳಗೆ ಹುಟ್ಟುವುದು ಕವಿತೆ..
ಜೋಪಡಿಯು ಜನ್ಮ ನೀಡುವುದು ಜ್ಞಾನಿ ವಿಜ್ಞಾನಿಗೆ, ಜಾತಿ ಮತದ ತಾರತಮ್ಯದ ದ್ವೇಷಕ್ಕೆ, ಗುಡಿಸಲು ಸುಟ್ಟು ಭಸ್ಮವಾದಾಗ, ಬೂದಿಯೊಳಗಿಂದ ಮೊಳಕೆಯೊಡೆದ ಬೀಜ ಹೂವಾಗಿ ಅರಳಬಹುದು, ಬೂದಿಯೊಳಗಿನ ಕಿಡಿ ಜ್ವಾಲೆಯಾಗಿ ರಗಳಿ ಕ್ರಾಂತಿಯನ್ನೆ ಎಬ್ಬಿಸಬಹುದು..

ಭಾರತದಲ್ಲೆ ಅಲ್ಲ, ಇಡೀ ಜಗತ್ತಿದಲ್ಲಿ ಬಡತನದಲ್ಲಿ ನೊಂದು, ಬೆಂದು, ಅವಮಾನಿಸಿಕೊಂಡು ಸಾಧಿಸಲೇಬೇಕೆಂಬ ಛಲದಿಂದ ಮೇಲ್ಮಟ್ಟಕ್ಕೇರಿದ, ಲೇಖನಿಯೆಂಬ ಖಡ್ಗವನ್ನು ಹಿಡಿದು, ಅದರಿಂದಲೇ ದೇಶದ ಆಡಳಿತವನ್ನು ಬದಲಾಯಿಸಿದ ಬಹಳಷ್ಟು ಲೇಖಕರು, ದಾರ್ಶನಿಕರು ಕವಿಗಳು ನಮ್ಮ ಮುಂದೆ ಇದ್ದಾರೆ.

ಕನ್ನಡ ಸಾಹಿತ್ಯಲೋಕವೂ ಕೂಡ ಇದಕ್ಕಾಗಿ ಅಪವಾದವಾಗಿಲ್ಲ. ಗುಡಿಸಿಲಿನೊಳಗೆ ಹುಟ್ಟಿ ಬರಹವನ್ನೆ ಬದುಕಾಗಿಸಿಕೊಂಡು, ಗಟ್ಟಿ ಕಾವ್ಯವನ್ನು ಬರೆದು ಇಂದಿಗೂ ಕೂಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ತಮ್ಮ ಹೆಸರನ್ನು ಉಳಿಸಿ ಹೋಗಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಬಂಡಾಯ ಕಾವ್ಯ ಪ್ರಾರಂಭವಾಗಿದ್ದೆ ಎಂಭತ್ತರ ದಶಕದಲ್ಲಿ. ಓದು ಬರಹ ಕಾಣದೆ ಬಲಿಷ್ಠ ಜಾತಿಗಳ ಹಿಡಿತಕ್ಕೆ ಸಿಕ್ಕಿ ನಲುಗಿ ಹೋಗಿ, ಅಜ್ಞಾನದಿಂದ ಹೊರಬರಲಾರದೆ, ಮೂಢನಂಬಿಕೆಗಳನ್ನು ಮೈಗೂಡಿಸಿಕೊಂಡು, ಕುಡಿತಕ್ಕೆ ದಾಸರಾಗಿ, ಆಸ್ತಿವಂತರ ಅಡಿಯಾಳಾಗಿ, ತಮ್ಮ ಜೀವವನ್ನೆ ಉಳ್ಳವರ ಬದುಕಿಗಾಗಿ ಧಾರೆ ಎರೆದಂತಹ, ನೊಂದು ಹೋದವರ ಒಡಲಿನೊಳಗೆ ಹುಟ್ಟಿದ ಹತ್ತಾರು ಜೀವಗಳು ಅಕ್ಷರವೆಂಬ ವಿದ್ಯೆಯನ್ನು ಕಲಿತು, ಎದೆಯೊಳಗೆ ಹೋರಾಟದ ಕಿಚ್ಚನ್ನು ಹಚ್ಚಿಸಿಕೊಂಡು ಗಟ್ಟಿಯಾದ ಧ್ವನಿಗಳಾಗಿ, ಕ್ರಾಂತಿ ಪದಗಳಾಗಿ ಮೊಳಗಿದವು. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವಂತಹ ಕಾವ್ಯವನ್ನು ಬರೆಯುವ ಬಹಳಷ್ಟು ಕವಿಗಳು ಲೇಖಕರು ನಮ್ಮ ಕನ್ನಡ ಸಾಹಿತ್ಯಲೋಕದಲ್ಲಿ ಇದ್ದಾರೆ.

ಇತ್ತೀಚೆಗೆ ಕಾವ್ಯದ ಹೊನಲಾಗಿ, ಸಮಕಾಲೀನ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಪ್ರಬುದ್ಧ ಬರಹಗಾರರು ಕಾವ್ಯ ರಚನಕಾರರಾಗಿ ಬೆಳಕಿಗೆ ಬಂದಿರುವುದು, ಬರುತ್ತಿರುವುದು ಹೆಮ್ಮೆಯ ವಿಷಯ ಕೂಡ. ಇವರೆಲ್ಲರ ಮಧ್ಯ ಭರವಸೆಯ ಕವಿಯಾಗಿ ರೂಪಗೊಳ್ಳುತ್ತಿರುವ ನಮ್ಮರೆಲ್ಲಾ ಒಡನಾಡಿ ಕವಿಗಳೂ ವಕೀಲರೂ ಆದ ಬಿದಲೋಟಿ ರಂಗನಾಥ್ ರವರು ಮೊದಲ ಸಾಲಿನಲ್ಲಿ ನಿಲ್ಲುವಂತವರು.

ಅವರ ಕಾವ್ಯದ ಶಕ್ತಿ ಚಿಂತನಾರ್ಹವಾಗಿದೆ. ದಲಿತ ಸಂವೇದನೆಯಾಗಿ, ಒಡಲಾಳದ ನೋವಿನ ಸಂಗತಿಯೇ ರೂಪಕವಾಗಿ ಕಾವ್ಯವಾಗಿ ಮೈದೇಳೆದು ನಿಂತಿದೆ.
ಬಿದಲೋಟಿ ರಂಗನಾಥ್ ರವರ ಕೃತಿಯನ್ನು ನಾನು ವಿಮರ್ಶೆ ಮಾಡಲು ಸಾಧ್ಯವಿಲ್ಲ. ಅಂತಹ ಜ್ಞಾನ ಕೂಡ ನನ್ನೊಳಗೆ ಇಲ್ಲ ಅನಿಸುತ್ತದೆ ಆದರೂ ಕೂಡ ಅವರು ನನಗೆ ಪ್ರೀತಿಯಿಂದ ಕೊಟ್ಟಂತಹ ಅವರ ನಾಲ್ಕನೇ ಕೃತಿಯಾದ ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಕೃತಿಯ ಪರಿಚಯವನ್ನು ಮಾಡುತ್ತಿರುವೆ ಅಷ್ಟೇ.

ಬಿದಲೋಟಿ ರಂಗನಾಥ್ ರವರು ರವರ ಒಂದು ಸಣ್ಣ ಪರಿಚಯವನ್ನು ನೋಡೋಣ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದ ರಂಗನಾಥ್ ರವರು ಕಾನೂನು ಪದವೀಧರರು ಕೂಡ. ಮಧುಗಿರಿಯಲ್ಲಿ ವಾಸವಾಗಿದ್ದುಕೊಂಡು, ಕಾನೂನು ವೃತ್ತಿಯೊಂದಿಗೆ ಸಾಹಿತ್ಯವನ್ನ ಪ್ರವೃತ್ತಿಯನ್ನಾಗಿಸಿಕೊಂಡು ಬಹಳಷ್ಟು ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ತನ್ನ ಹೆಸರನ್ನು ಅಜರಾಮರಗೊಳಿಸಿದ್ದಾರೆ. ಈಗಾಗಲೇ ಬಿದಲೋಟಿ ರಂಗನಾಥ್ ರವರು ಮೂರು ಮಹತ್ವದ ಸಂಕಲನಗಳನ್ನು ಹೊರತಂದಿದ್ದಾರೆ. ಮಣ್ಣಿಗೆ ಬಿದ್ದ ಹೂಗಳು, ಬದುಕು ಸೂಜಿ ಮತ್ತು ನೂಲು' ಉರಿವ ಕರುಳ ದೀಪ, ಇವರ ನಾಲ್ಕನೆಯ ಕೃತಿಯೇ ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ...

ಇವರಿಗೆ ಹಲವಾರು ಪ್ರಶಸ್ತಿಗಳನ್ನು ಕೂಡ ಹಲವಾರು ಸಂಘ ಸಂಸ್ಥೆಗಳು ನೀಡಿ ಗೌರವಿಸುವೆ. ಸಂಕ್ರಮಣ ಪುರಸ್ಕಾರ ಶಾಲಿನಿ ಪುರಸ್ಕಾರ ಮತ್ತು ಹಲವಾರು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಬಹಳಷ್ಟು ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆಯನ್ನು ಕೂಡ ವಹಿಸಿಕೊಂಡ ಯಶಸ್ವಿಯಾಗಿ ನಿವ೯ಹಿಸಿದ್ದಾರೆ. ಎರಡು ಸಾವಿರದ ಇಪ್ಪತ್ತರೇಡರ ಸಾಲಿನ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದಂತಹ ಈ ಕೃತಿಯೇ ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ.

ಬಿದಲೋಟಿ ರಂಗನಾಥ್ ರವರು ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ತನ್ನನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಅಗಾಧವಾದ ಓದು, ಅನುಭವಿಸಿದ ನೋವು, ತಾನು ಕಂಡ ಜಾತಿ ಮತ ಧರ್ಮದ ತೊಳಲಾಟ, ತನ್ನವರು ಅನುಭವಿಸಿದ ನಿಕೃಷ್ಟವಾದ ಬದುಕು, ಸಮಾಜ ತನ್ನ ಜನಾಂಗದವರನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಈ ಎಲ್ಲ ಸಂಗತಿಗಳನ್ನು ಕೂಡ ಬಿದಲೋಟಿ ಯವರು ತಮ್ಮ ಕವಿತೆಗಳಲ್ಲಿ ಸಶಕ್ತವಾದ ಸಾಲುಗಳಿಂದ ಕಾವ್ಯರಚನೆಯನ್ನು ಮಾಡಿ ಯಶಸ್ವಿಯಾಗಿದ್ದಾರೆ.

ಒಂದು ಕವಿತೆ ಬರೆಯುವವರಿಗೆ ಮಾತ್ರ ಅದು ಕವಿಯ ಹಕ್ಕು, ಮತ್ತು ಅದರ ಹಿಡಿತ. ಕವಿತೆ ಹೊರಬಂದಾಗ ಅದು ಓದುಗನ ಸೊತ್ತು. ಅವನು ತನ್ನ ಜ್ಞಾನಕ್ಕನುಗುಣವಾಗಿ, ಆ ಕವಿತೆಯನ್ನು ಜೀರ್ಣಿಸಿಕೊಳ್ಳಬಲ್ಲ, ಪರಿಚಯ ಮಾಡಬಲ್ಲ, ವಿಮರ್ಶೆ ವಿಮರ್ಶೆ ಮಾಡಬಲ್ಲ ಕೂಡ. ಆದರೆ ಬಿದಲೋಟಿ ರಂಗನಾಥ್ ರವರ ಈ ಕೃತಿಯಲ್ಲಿನ ಕವಿತೆಗಳನ್ನ ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯ. ಅವರ ಕವಿತೆಗಳಲ್ಲಿ ಪದಲಾಲಿತ್ಯವಿದೆ, ನೋವಿದೆ, ಆಕ್ರಂದನವಿದೆ, ಅನುಕಂಪವಿದೆ, ರೋಷವಿದೆ, ಸಮಾಜವನ್ನು ಪ್ರತಿಭಟಿಸುವ ಶಕ್ತಿಯು ಅವರ ಸಾಲುಗಳಿಗೆ ಇದೆ. ಎಲ್ಲಕ್ಕಿಂತ ಮೊದಲಾಗಿ ಸಮಾಜಕ್ಕಾಗಿ ಒಂದು ಸಂದೇಶವನ್ನು ನೀಡುವ ಆಶಯವಿದೆ.

ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಂತಹ ಹಿರಿಯ ಕವಿಗಳಾದ ಲಲಿತಾ ಬಸವಯ್ಯ ಬೆಂಗಳೂರು ಇವರು ಹೇಳುತ್ತಾರೆ, ಮಗು ಪಾದಗಳನ್ನು ಕಣ್ಣಿಗೊತ್ತಿಕೊಳ್ಳುವ ಕವಿ ಬಿದಲೋಟಿ ರಂಗನಾಥ್ ಬಿದಲೋಟಿ ರಂಗನಾಥ್ ರವರ ಎರಡು ಗಾಂಧೀ ಕವಿತೆಗಳನು ಓದುತ್ತಾ ಉದ್ದಕ್ಕೂ ನಾನು ನಡೆಸಿದ ಇಂಥ ವ್ಯರ್ಥಲಾಪಗಳು ನೆನಪಾಗಿ ದಿನಗಟ್ಟಲೆ ನಿಷ್ಕ್ರಿಯತೆ ಆವರಿಸಿದ್ದು ನಿಜ, ಮುಂದೆಯೂ ಈ ಎರಡೂ ಕವನಗಳನ್ನು ಮರೆಯುವುದು ನನಗೆ ಕಷ್ಟ..

ಈ ಕೃತಿಗೆ ಬೆನ್ನುಡಿಯನ್ನು ಬರೆದಂತಹ ನಾಡಿನ ಹಿರಿಯ ಗಜಲ್ ಕಾರರ ಮೆಹಬೂಬಿ ಶೇಕ್ ಮೇಡಂನವರು ಹೇಳುತ್ತಾರೆ, -ಇಲ್ಲಿಯ ಕವಿತೆಗಳ ಶಿಲ್ಪ ಕವಿಯ ಅನುಭವ, ಆತ್ಮೀಯತೆ ಮತ್ತು ಪರಕೀಯತೆಗಳ ಸಂಘರ್ಷದಿಂದ ನಿರ್ಮಲ ನಿರ್ಬಂಧಿಸಲ್ಪಟ್ಟಿರುವುದರಿಂದ ಹೃದಯಕ್ಕೆ ಆಪ್ತವಾಗುತ್ತವೆ. ಇಲ್ಲಿಯ ಕವಿತೆಗಳು ಯಾಂತ್ರಿಕ ಲಯ ಮತ್ತಿತರ ಜಾಳು ಜಾಳಾದ ರೂಪಕಗಳಿಂದ ಬಂಧಿಸಲ್ಪಟ್ಟಿಲ್ಲ, ಭಾವ ಅಭಿವ್ಯಕ್ತಿಯ ಸುತ್ತ ಗಿರಕಿ ಹೊಡೆಯೋದಿಲ್ಲ, ಅನುಭವ ವ್ಯಾಪಕವಾಗಿರುವ ಪ್ರತಿಮೆಗಳಿಂದ ಸಂಕಲನ ಕಳೆಗಟ್ಟಿದೆ. ಅಂತಃಕರಣದ ಶಕ್ತಿ ಧಾರೆ ಎರೆದು ತನ್ನದೇ ರೂಪಕಗಳ ಅನನ್ಯ ಶೈಲಿಯಲ್ಲಿ ಬರೆಯುವುದನ್ನು ರೂಪಿಸಿಕೊಂಡಿದ್ದಾರೆ ಬಿದಲೋಟಿ ರಂಗನಾಥ್ ರವರು.

ಈ ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಈ ಕವನ ಸಂಕಲನದಲ್ಲಿ ಸುಮಾರು ನಲವತ್ತು ಕವಿತೆಗಳಿವೆ. ಪ್ರತಿಯೊಂದು ಕವಿತೆಯು ಸಣ್ಣದಾದ ಪ್ರತಿಭಟನೆಯ ಅಸ್ತ್ರವಾಗಿ ಪದಗಳನ್ನು ಹೊರಹಾಕಿ ಸಮಾಜಕ್ಕೊಂದು ಸಂದೇಶವನ್ನು ನೀಡುವ ರೀತಿಯಲ್ಲಿ, ತಮ್ಮ ಮನದೊಳಗಿನ ಆ ವೇದನೆಯನ್ನು ಕವಿಗಳು ಹೊರ ಹಾಕಿದ್ದಾರೆ.

ಈ ಕವನ ಸಂಕಲನದ ಹೆಸರನ್ನು ಸೂಚಿಸುವ ಕವಿತೆಯ ಶೀರ್ಷಿಕಯೂ ಕೂಡ ಈ ಸಂಕಲನದಲ್ಲಿದೆ. ಈ ಕವಿತೆಯ ಶೀರ್ಷಿಕೆ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಆ ಕವಿತೆಯ ರೂಪಕವೊಂದನ್ನು ನೋಡೋಣ.

ನೀವು ಮುಟ್ಟಿಸಿಕೊಳ್ಳಲಿಲ್ಲವೆಂದು
ನನಗೆ ಬೇಸರವಿರಲಿಲ್ಲ
ಮುಂದೆ ನೀವೆ ತಬ್ಬಿಕೊಳ್ಳುತ್ತಿರ
ಎಂಬುದರ ಅರಿವಿತ್ತು ನನಗೆ

ಇದೊಂದು ಅದ್ಭುತ ರೂಪಕವೇ ಈ ಕವನ ಸಂಕಲನದಲ್ಲಿ ನಮ್ಮೆಲ್ಲರ ಗಮನ ಸೆಳೆಯುತ್ತದೆ. ಇದೊಂದು ದಲಿತ ಸಂವೇದನೆಯಿಂದ ರೂಪಗೊಂಡ ಕವಿತೆಯಾಗಿದ್ದು, ಅನಾದಿಕಾಲದಿಂದ ಅಸ್ಪೃಶ್ಯರೆಂದು ಕರೆಸಿಕೊಂಡ ಒಂದು ಸಮುದಾಯ, ಮುಂದೊಂದು ದಿನ ತಾನೂ ಕೂಡ ವಿದ್ಯೆ, ಜ್ಞಾನ ಪಡೆದು, ಅವುಗಳಿಂದಲೇ ನಿನ್ನ ಸರಿಸಮನಾಗಿ ಬೆಳೆದು ತಿರಸ್ಕರಿಸಿದ ನನ್ನನ್ನು ಮುಟ್ಟಿಸಿಕೊಳ್ಳಲು ಕೂಡ ಹಿಂದೆ ಸರಿಯುತ್ತಿದ್ದ ಈ ಸಮಾಜವು, ಜಾತಿಯೆಂಬ ಅಂಧಕಾರವನ್ನು ತುಂಬಿದ ಮನಸ್ಸುಗಳು ಎಲ್ಲಾ ಸೇರಿ ನನ್ನ ತಬ್ಬಿಕೊಳ್ಳುವ ದಿನ ಬರುತ್ತದೆ ಎಂಬ ಅರಿವು ಇದೆ ನನಗಿತ್ತು ಎಂದು ಕವಿಯು ಹೇಳುತ್ತಾರೆ.

ಹೋಟ್ಲಲ್ಲಿ
ಕಾಫಿಹೀರಿ ತೊಳೆದ ಲೋಟ
ಗರಿ ಸಂಧಿಗೆ ಸಿಕ್ಕಾಕುವಾಗಲು
ನೋವು ಗೂಡ ಕಟ್ಟಲಿಲ್ಲ
ಮುಂದೆ ನೀವೆ
ನಾನೆ ಕುಡಿದ ಕಾಫಿ ಲೋಟ
ತೊಳೆಯುವಿರೆಂದು ಗೊತ್ತಿತ್ತು ನನಗೆ

ಈ ಭಾರತ ದೇಶದಲ್ಲಿ ಜಾತಿಯ ಸ್ತರಗಳು ನಿರ್ಮಾಣವಾಗಿ ಅನಾದಿಕಾಲದಿಂದ ಮನುಧರ್ಮಶಾಸ್ತ್ರವನ್ನು ಪಾಲನೆ ಮಾಡುಕೊಂಡು ಬರುತ್ತಿರುತ್ತಿದ್ದರಿಂದ, ಅತ್ಯಂತ ಕೀಳು ಜಾತಿಯವರೆಂದು ಕರೆಸಿಕೊಂಡ ಪಂಚಮರು ಮುಟ್ಟಿಸಿಕೊಳ್ಳದವರಾಗಿ ಬದುಕುತ್ತಾ, ತನ್ನ ನೆರಳನ್ನು ಕೂಡ ಇತರರಿಗೆ ಸೋಕದಂತೆ ಜೀವನ ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನುಷ್ಯರೆಂದು ಕರೆಯಿಸಿಕೊಂಡ ಯಾವುದೇ ಬೇರೆ ಬೇರೆ ಜಾತಿಯ ಜನರ ಮನೆಗಳಿಗೆ ಅಸ್ಪೃಶ್ಯನೆಂದು ಕರೆಸಿಕೊಂಡವರಿಗೆ ಪ್ರವೇಶ ನೀಡುತ್ತಿರಲಿಲ್ಲ. ಇಂತಹ ಹೀನಾಯ ಸ್ಥಿತಿಯ ನೈಜ ಜೀವನದ ಅನುಭವವನ್ನು ಇಲ್ಲಿ ಕವಿ ವರ್ಣಿಸುತ್ತಾ ಹೋಗುತ್ತಾರೆ.

ಹಿಂದಿನ ಕಾಲದಲ್ಲಿ ಹೋಟೆಲ್ನೊಳಗೆ ಅಸ್ಪೃಶ್ಯ ಜಾತಿಯವರಿಗೆ ಪ್ರತ್ಯೇಕವಾದ ಲೋಟ ತಟ್ಟೆ ಇಡುತ್ತಿದ್ದರು. ಇಂದಿಗೂ ಕೂಡ ಆ ಪದ್ಧತಿ ಜೀವಂತವಾಗಿ ಇದೆ ಬಹಳಷ್ಟು ಕಡೆ, ತೆಂಗಿನ ಗರಿಗಳಲ್ಲಿ ನಿಮಿ೯ಸಿದ ಗುಡಿಸಿಲಿನ ಹೋಟೆಲ್ನಲ್ಲಿ ಅವರು ಕಾಫಿ ಕುಡಿದು ಹೋದ ಲೋಟವನ್ನ, ಆ ಗುಡಿಸಿಲಿನ ಗರಿಗಳಿಗೆ ಸಿಕ್ಕಿಸಿ ಇಡುತ್ತಿದ್ದರು. ಇಂತಹ ದಾರುಣ್ಯವಾದ ವ್ಯವಸ್ಥೆಯನ್ನ ಕಂಡ ಕವಿಗಳು ಈ ಮೇಲಿನ ಸಾಲುಗಳನ್ನು ಬರೆಯುತ್ತಾರೆ. ಈ ದೇಶದಲ್ಲಿ ಹುಟ್ಟಿ ಶೋಷಣೆಯ ಮುಡುವಿನಲ್ಲಿ ನೊಂದು ಬೆಂದು ಜ್ಞಾನಿಯಾಗಿ ಈ ದೇಶಕ್ಕೊಂದು ಸಂವಿಧಾನವನ್ನು ರಚಿಸಿ ಕೊಟ್ಟಂತಹ ಅಂಬೇಡ್ಕರ್ ಅವರು ಎಲ್ಲರೂ ಸಮಾನರೆಂದು ಬರೆದು ಘೋಷಣೆ ಮಾಡಿದಾಗ ಅದು ಕಾಯ೯ರೂಪಕ್ಕೆ ಬಂದ ದಿನ ನಾನೇ ಕುಡಿದ ಕಾಫಿಯ ಲೋಟವನ್ನು ನೀವು ತೊಳೆಯುತ್ತೀರಿ ಎಂದು ಅರಿವಿತ್ತು ನನಗೆ ಎಂದು ಕವಿಯು ಹೇಳುತ್ತಾರೆ ಅಂತ ನನ್ನ ವೈಯಕ್ತಿಕ ಭಾವನೆ.

ನಿಮ್ಮ ದೇವರ ಗುಡಿಗಳಿಗೆ ಬಿಟ್ಟುಕೊಳ್ಳಲಿಲ್ಲವೆಂದು ಮಂಕಾಗಲಿಲ್ಲ. ಏಕೆಂದರೆ
ಮುಂದೆ ದೇವರಿಲ್ಲದ ಸಾಕ್ಷಿಗೆ
ರುಜು ಹಾಕುತ್ತೇನೆಂಬ ಸಣ್ಣ ಅರಿವಿತ್ತು ನನಗೆ

ಮುಗ್ಧ ಜನರಿಗೆ ಕಲ್ಲುಗಳ ಮೂರ್ತಿಗಳನ್ನು ತೋರಿಸಿ ದೇವರೆಂದು ನಂಬಿಸಿ, ಅವರನ್ನ ಮೂಡನಂಬಿಕೆಗಳಿಗೆ ಬಲಿಯಾಗಿಸಿ ಅವರನ್ನು ಮುಖ೯ರನ್ನಾಸಿಕೊಂಡು, ದೇವರನ್ನು ನಂಬಿದರೆ ಪೂಜಿಸಿದರೆ ನಿಮಗೆ ಒಳ್ಳೆಯದಾಗುತ್ತದೆಂದು ನಟಿಸುತ್ತಿರುವ ನೀವು, ಕಲ್ಲುಗಳನ್ನು ದೇವರೆಂದು ಕರೆಯುವ ದೇವರ ಗುಡಿಗಳಿಗೆ ನಮ್ಮನ್ನು ಬಿಟ್ಟುಕೊಳ್ಳಲಿಲ್ಲ. ಆ ಸನ್ನಿವೇಶಗಳಿಂದ ನನ್ನ ಮನಸ್ಸು ಮಂಕಾಗಲಿಲ್ಲ, ಏಕೆಂದರೆ ನೀನು ನಿರ್ಮಿಸಿದಂತಹ ಗುಡಿಯೊಳಗೆ ದೇವರಿಲ್ಲ, ಅದನ್ನ ನಾನು ನಿರೂಪಿಸಬಲ್ಲೆ ನೀವು ಕಟ್ಟಿಕೊಂಡಿರುವ ಗುಡಿಯೊಳಗೆ ದೇವರು ಇಲ್ಲ ಅಂತ, ನಾನು ಸಾಕ್ಷಿಯಾಗಿ ನಾನು ರುಜು ಹಾಕುತ್ತೇನೆ ಅರಿವಿದೆ ನನಗೆ. ಎಂಬುದನ್ನ ಮಾರ್ಮಿಕವಾಗಿ ಬಿದಲೋಟಿ ರಂಗನಾಥ್ ಅವರು ಕವಿತೆಯನ್ನ ಕಟ್ಟಿ ಸಮಾಜಕ್ಕೊಂದು ಸಂದೇಶ ಕೊಡಲು ಹೊರಟಿದ್ದಾರೆ.

ಇವರ ಮತ್ತೊಂದು ಕವಿತೆ
ನಿನ್ನ ಹೆಗಲ ಮೇಲೆ ಕೂತ ಹಕ್ಕಿ
ಈ ಕವಿತೆಯು ಗಾಂಧೀಜಿಯವರ ಅಂದಿನ ಮನಸ್ಥಿತಿಯ ಬಗ್ಗೆ ಬರೆದಂತಹ ಒಂದು ಕವಿತೆಯಾಗಿದೆ.
ಈಗ ದೇಶದಲ್ಲಿ ಬಿಸಿಲು ಗಾಳಿಗೂ ಬಣ್ಣಗಳ ಲೇಪಿಸುತ್ತಿದ್ದಾರೆ ಮನುಷ್ಯನೊಳಗೆ ಕನಸುಗಳು ಕಮರಿ ಹೋಗುತಿವೆ ಬದುಕಿನಲ್ಲಿ ಹೆಜ್ಜೆಗಳನ್ನು ಇಡಲು ಮನಸ್ಸು ಕೂಡ ತಳಮಳಗೊಳ್ಳುತ್ತಿದೆ. ಈ ನಿನ್ನ ಕನಸಿನ ದೇಶ ಹಲವು ಮತೀಯವಾದಿಗಳ ಕೈಗೆ ಸಿಕ್ಕಿ ನಲುಗುತ್ತಿದೆ.

ನೀನಾದರೂ ಮಾಡಿದ್ದಾದರೂ ಏನು?
ಜಾತಿಯ ಬೇರು ಕೀಳದೆ
ಕೊಂಬೆಗಳ ಮಾತ್ರ ಸವರಿ ಹೋದೆ

ನೀನು ಸೇರಿದ್ದರೆ ಭೀಮನ ಜೊತೆ
ಜಾತಿ ಮುಕ್ತ ಭಾರತ ಮಾಡಬಹುದಿತ್ತೇನೋ
ನಿನ್ನ ಹೆಗಲ ಮೇಲೆ ಕೂತ ಹಕ್ಕಿ
ನಿನ್ನ ಮಾತೇ ಕೇಳಲಿಲ್ಲ

ಗಾಂಧೀಯವರೇ ನೀನು ನನ್ನ ದೇಶದ ಪಿತಾಮಹನೆಂದು ಕರೆಸಿಕೊಂಡಿದ್ದೆ ಅಷ್ಟೇ, ಭಾರತ ದೇಶದಲ್ಲಿ ಜಾತೀಯತೆ ಮತ್ತು ಮತ ಧರ್ಮ ಅಧರ್ಮ ತಾಂಡವಾಡುತ್ತಿದೆ, ಜಾತಿ ಪದ್ದತಿಯನ್ನು ಹೋಗಲಾಡಿಸಲು ನೀನಾದರೂ ಏನು ಮಾಡಿದೆ. ಜಾತಿಯ ಮರದ ಬೇರನ್ನು ಬುಡಸಮೇತವಾಗಿ ಕಿತ್ತು ಹಾಕಲು ಪ್ರಯತ್ನ ಪಡಲಿಲ್ಲ, ಜಾತಿಯ ಪದವನ್ನು ಕಿತ್ತು ಹಾಕುವ ಪ್ರಯತ್ನವೂ ಮಾಡಲೇ ಇಲ್ಲ, ಹೆಮ್ಮರವಾಗಿ ಬೆಳೆದು ನಿಂತಿದ್ದ ಜಾತಿಯ ಮರದ ಕೊಂಬೆಗಳನ್ನು ಮಾತ್ರ ಸವರಿ ಹೋದೆ, ನೀನು ಅಂಬೇಡ್ಕರ್ ಮಾತು ಕೇಳಿದ್ದರೆ. ಈ ದೇಶವನ್ನು ಜಾತಿ ಮುಕ್ತ ಭಾರತ ದೇಶವನ್ನಾಗಿ ಮಾಡಬಹುದಿತ್ತೇನೋ? ಆದರೆ ನಿನ್ನ ಹೆಗಲ ಮೇಲೆ ಕೂತಿದ್ದ ಆ ಜಾತಿಯ ಹಕ್ಕಿ ನಿನ್ನ ಮಾತನ್ನು ಕೇಳಲಿಲ್ಲ. ಈ ದೇಶ ಮತ ಧರ್ಮದ ದ್ವೇಷದ ದಳ್ಳುರಿಯಲ್ಲಿ ನಲುಗಿ ಹೋಗುತ್ತಿದೆ ಎಂದು ಬಹಳಷ್ಟು ಸೊಗಸಾಗಿ ಕವಿತೆಯನ್ನ ಕಟ್ಟಿದ್ದಾರೆ ಬಿದಲೋಟಿ ರಂಗನಾಥ್ ಅವರು.

ಮತ್ತೊಂದು ಕವಿತೆ ವೈಚಾರಿಕತೆಯ ಕಗ್ಗೊಲೆ
ಕನ್ನಡ ನಾಡು ಕಂಡ ದಿಟ್ಟ ಮಹಿಳೆ, ಬಡವರ ದೀನದಲಿತರ ಪರವಾಗಿ ದನಿ ಎತ್ತಿ ಹೋರಾಡಿದ, ವೈಚಾರಿಕತೆಯನ್ನೇ ಮೈಗೂಡಿಸಿಕೊಂಡು ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ರವರ ಸಾವಿನ ಬಗ್ಗೆ ಒಂದು ಕವಿತೆಯನ್ನೂ ಬರೆಯುತ್ತಾರೆ

ಕೆಲವು ಮತೀಯ ಶಕ್ತಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ರವರ ಬಗ್ಗೆ ಈ ಕವನದಲ್ಲಿ

ಆದರೂ
ಅಕ್ಕ
ನೀ ನೀನಿರಬೇಕಿತ್ತು
ಸೂರ್ಯನ ಕಿರಣಗಳ ಉಗಳ ಬೇಕಿತ್ತು
ಮೌಡ್ಯದ ಕತ್ತಲು ನಲುಗಬೇಕಿತ್ತು

ವೈಚಾರಿಕತೆಗೆ ಬೆಳಕಾಗಿದ್ದ ಗೌರಿಯೆಂಬ ದೀಪ ನಂದಿ ಹೋಯಿತು, ಕತ್ತಲೆಯ ಕೈ ಛಳಕದಲ್ಲಿ ಸತ್ಯದ ಉಸಿರಿನ ಮೇಲೆ ಬಂದೂಕಿನ ನಳಿಕೆ ಸವಾರಿ ಮಾಡುತ್ತಾ ವೈಚಾರಿಕತೆನ್ನು ಕಗ್ಗೊಲೆ ಮಾಡಿದರು, ಹೆಣ್ಣಲ್ಲ ನೀನು ಗಂಡೆಂಬ ಭಯ ನೀಚರ ಮನದಲ್ಲಿ ಆವರಿಸಿತ್ತು. ಪಾಪಿಗಳ ಲೋಕದಲ್ಲಿ ನಿನ್ನಂತವರ ಅಭಿವ್ಯಕ್ತಿ ಮಣ್ಣಾಯಿತು. ನಿನ್ನದು ಸೋಲಿನ ಸಾವಲ್ಲ , ನೀನು ಬೆಳೆಸಿದ ಗಿಣಿ ಆನಾಥವಾಗಿಲ್ಲ. ನಿನ್ನದು ಸಾವಲ್ಲ, ನನ್ನಂಥವರ ಮರುಹುಟ್ಟು ಎಂದು ಕವಿಗಳು ತನ್ನ ಕವಿತೆಯನ್ನು ಪ್ರತಿಭಟನೆಯ ರೂಪಕವಾಗಿ ಇಲ್ಲಿ ಬರೆದಿದ್ದಾರೆ.

ಈ ಕವನಸಂಕಲನದ ಎಲ್ಲಾ ಕವಿತೆಗಳನ್ನು ವಿವರಿಸುತ್ತಾ ಹೋದರೆ, ಓದುಗನಿಗೆ ಓದುವ ಆಸಕ್ತಿ ಕಡಿಮೆಯಾಗಬಹುದು ಕವನಸಂಕಲನದ ಪ್ರತಿಯೊಂದು ಕವಿತೆಯೂ ಕೂಡ ಸಣ್ಣನೆಯ ಪ್ರತಿಭಟನೆಯ ಕುರುಹು ಆಗಿ ನಮಗೆ ಗೋಚರವಾಗುತ್ತದೆ. ಸಾಕಷ್ಟು ನೋವು ಅವಮಾನ, ಬಡತನ ಕೀಳಿರಿಮೆ ಮೆಟ್ಟಿ ನಿಂತು, ಸಮಕಾಲೀನ ಬರಹದ ಶಕ್ತಿಯನ್ನು ತುಂಬುವ ಸಾಲುಗಳಾಗಿ, ಓದುಗರ ಎದೆಯೊಳಗೆ ಹೊಸತೊಂದು ಭಾವನ ಲೋಕವೊಂದನ್ನು ಸೃಷ್ಟಿಸಿ, ಸಮಾಜದ ಸಂಕೋಲೆಗಳ ಕಳಚುವ ಪ್ರಯತ್ನದಲ್ಲಿ ಸಾಗಿ ತಮ್ಮ ಕವಿತೆಗಳ ಭಾವನೆಗಳಿಗೆ ಜೀವ ತುಂಬಿ ಬೆಳಕು ನೀಡಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಅದರಲ್ಲೂ ಇತ್ತೀಚೆಗಿನ ಸಮಕಾಲೀನ ಸಾಹಿತ್ಯದಲ್ಲಿ ಬಹಳಷ್ಟು ಮುಂಚೂಣಿಯಲ್ಲಿ ನಿಲ್ಲಬಹುದಾದಂತಹ ಕೆಲವೇ ಕವಿಗಳ ಸಾಲಿನ ಪಟ್ಟಿಯಲ್ಲಿ ಗಟ್ಟಿಯಾದ ಸಾಹಿತ್ಯ, ಪ್ರಬುದ್ಧ ಕಾವ್ಯಧಾರೆಯನು ಹರಿಸುತ್ತಿರುವ, ಬರೆಯುತ್ತಿರುವ ಬಿದಲೋಟಿ ರಂಗನಾಥ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳು ಇನ್ನಷ್ಟು ಬಂಡಾಯ ಕಾವ್ಯ, ನೊಂದ ದಮನೀತರ ಕೊರಳನಲಿ ಧ್ವನಿಯಾಗಿ, ಬೆಂದವರ ಎದೆಯಲಿ ಕೆಂಡವನು ಹೊರ ಉಗುಳುವ ಸಾಲುಗಳು ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ.

-ನಾರಾಯಣಸ್ವಾಮಿ .ವಿ

ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಕೃತಿ ಪರಿಚಯ...
ಬಿದಲೋಟಿ ರಂಗನಾಥ್ ಅವರ ಲೇಖಕ ಪರಿಚಯ...

MORE FEATURES

ಲೇಖಕಿಯ ನೈಜ ಬದುಕಿನ ಬಾಲ್ಯದ ಅನಾವರಣವಿಲ್ಲಿದೆ

03-12-2024 ಬೆಂಗಳೂರು

"ಎಳವೆಯಲ್ಲಿಯೇ ತಂದೆಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡು ತಾಯಿ, ತಮ್ಮನ ಜೊತೆ ತಾಯಿಯ ತಾಯಿಯ ಅಂದರೆ ಅಜ್ಜಿಮನೆ-ಸಂ...

ಇಲ್ಲಿನ ಬಹುತೇಕ ಪುಟ್ಟ ಕಥೆಗಳು ಯಾವುದೋ ಸಂಗತಿಯೇನೋ ಎಂಬಷ್ಟು ಸಹಜವಾಗಿವೆ

03-12-2024 ಬೆಂಗಳೂರು

"ಲೇಖಕಿ ಅಶ್ವಿನಿ ಸುನಿಲ್ ಅವರು ವಾರದ ಹಿಂದೆ ತಮ್ಮ ಈ ಹೊಸ ಕೃತಿಯ ಬಗ್ಗೆ ಪುಸ್ತಕ ಅವಲೋಕನ ಬಳಗದಲ್ಲಿ ಪೋಸ್ಟ್ ಹಾಕಿ...

ಶರಣರು ಮೊದಲು ನಡೆದರು ನಂತರ ನುಡಿದರು

03-12-2024 ಬೆಂಗಳೂರು

“ಬೆಳೆವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸ...