1977-79ರ ನಡುವೆ ನಾನು ಮದ್ರಾಸಿನಲ್ಲಿದ್ದಾಗ ಅಂಥ ಹಲವು ಮಾಹಿತಿಗಳನ್ನು ಬೀದಿಯಲ್ಲಿ ಕಂಡಿದ್ದೆ. ಇವುಗಳೆಲ್ಲವನ್ನೂ ಸರಿ ಮಾಡುವ ಶಕ್ತಿ ನನಗೆ ಇರಲಿಲ್ಲ. ತಿರುವಳ್ಳಿಕೇನಿಯ ಬೀದಿಯಲ್ಲಿ ಬಿದ್ದಿದ್ದ ಕೆಲವು ಮುಖ್ಯ ಪುಸ್ತಕಗಳನ್ನು ಎಷ್ಟು ಸಾಧ್ಯವೋ ಅಷ್ಟು ಖರೀದಿಸಿದ್ದೆ ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ. ಅವರು ತಮ್ಮ ‘ಕನ್ನಡ ಕೈಫಿಯತ್ತುಗಳು’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ...
2020ರ ದಶಂಬರ ತಿಂಗಳ 23ರಂದು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ‘ಕೈಫಿಯತ್ತುಗಳಲ್ಲಿ ಕನ್ನಡ ಮತ್ತು ‘ಕರ್ನಾಟಕದ ಪರಿಕಲ್ಪನೆ’ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ನನ್ನನ್ನು ಕೇಳಿಕೊಂಡಿತ್ತು. ನಾನದಕ್ಕೆ ತಕ್ಷಣ ಒಪ್ಪಿಕೊಂಡು ಉಪನ್ಯಾಸವನ್ನೂ ನೀಡಿದ್ದೆ. ಅದಕ್ಕೆ ಮುಖ್ಯ ಕಾರಣವೆಂದರೆ ಮೊದಲಿನಿಂದಲೂ ಈ ಕೈಫಿಯತ್ತುಗಳ ಮೇಲೆ ನನಗಿದ್ದ ಅದಮ್ಯ ಮೋಹ.
1979ರಷ್ಟು ಹಿಂದೆ ನಾನು ಮದ್ರಾಸು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮದರಾಸು ಪ್ರಾಚ್ಯ ಹಸ್ತಪ್ರತಿ ಭಂಡಾರದಲ್ಲಿ ಅನೇಕ ದಿನಗಳನ್ನು ಕಳೆದಿದ್ದೆ. ಅಲ್ಲಿ ಕುಳಿತಿದ್ದ ತಮಿಳು ಮತ್ತು ತೆಲುಗಿನ ಸಾಂಪ್ರದಾಯಕ ವಿದ್ವಾಂಸರ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದೆ. ವಸಾಹತು ಆಡಳಿತ ಕಾಲದಲ್ಲಿ ಕರ್ನಾಟಕದ ಹಲವು ಪ್ರಾಂತ್ಯಗಳು ಮದರಾಸು ಪ್ರೆಸಿಡೆನ್ಸಿಗೆ ಸೇರಿತ್ತಾದ್ದರಿಂದ ಪ್ರಾಚ್ಯ ಹಸ್ತಪ್ರತಿ ಭಂಡಾರಕ್ಕೆ ಕನ್ನಡದ ಬಹಳ ಅಮೂಲ್ಯ ದಾಖಲೆಗಳು ಮತ್ತು ಹಸ್ತಪ್ರತಿಗಳು ಸೇರ್ಪಡೆಯಾಗಿದ್ದುವು. ಆದರೆ ಭಾಷಾವಾರು ಪ್ರಾಂತ್ಯಗಳ ರಚನೆಯಾದ ಮೇಲೆ ಅಲ್ಲಿದ್ದ ಕನ್ನಡ ಮಾಹಿತಿಗಳನ್ನು ಯಾರೂ ಕೇಳುವವರಿಲ್ಲವಾಯಿತು. ಜೊತೆಗೆ, ಮದ್ರಾಸು ಪ್ರೆಸಿಡೆನ್ಸಿ ಕಾಲೇಜು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ಕ್ವೀನ್ ಮೇರೀಸ್ ಕಾಲೇಜು ಮೊದಲಾದೆಡೆಗಳಲ್ಲಿದ್ದ ಗ್ರಂಥಾಲಯದ ಕನ್ನಡ ಪುಸ್ತಕಗಳು ಇದ್ದಕ್ಕಿದ್ದಂತೆ ಅನಾಥವಾದುವು. ಕಾಲ ಕಳೆದಂತೆ ಬಹಳ ಪುಸ್ತಕಗಳು ಮತ್ತು ದಾಖಲೆಗಳು ಬೀದಿಗೆ ಬಿದ್ದುವು.
1977-79ರ ನಡುವೆ ನಾನು ಮದ್ರಾಸಿನಲ್ಲಿದ್ದಾಗ ಅಂಥ ಹಲವು ಮಾಹಿತಿಗಳನ್ನು ಬೀದಿಯಲ್ಲಿ ಕಂಡಿದ್ದೆ. ಇವುಗಳೆಲ್ಲವನ್ನೂ ಸರಿ ಮಾಡುವ ಶಕ್ತಿ ನನಗೆ ಇರಲಿಲ್ಲ. ತಿರುವಳ್ಳಿಕೇನಿಯ ಬೀದಿಯಲ್ಲಿ ಬಿದ್ದಿದ್ದ ಕೆಲವು ಮುಖ್ಯ ಪುಸ್ತಕಗಳನ್ನು ಎಷ್ಟು ಸಾಧ್ಯವೋ ಅಷ್ಟು ಖರೀದಿಸಿದ್ದೆ. ತರಗತಿಗಳು ಮುಗಿದ ಆನಂತರ ಮತ್ತು ವಾರಾಂತ್ಯಗಳಲ್ಲಿ ಪ್ರಾಚ್ಯ ವಸ್ತು ಭಂಡಾರಕ್ಕೆ ಹೋಗಿ, ಅಲ್ಲಿದ್ದ ಅನೇಕ ಕನ್ನಡದ ಪುಸ್ತಕಗಳ ಧೂಳು ಒರೆಸಿದ್ದೆ. ಹಸ್ತಪ್ರತಿಗಳನ್ನು ಪರಿಶೀಲಿಸಿ ಅವುಗಳ ತಾತ್ಕಾಲಿಕೆ ಸೂಚಿಕೆಯನ್ನೂ ಸಿದ್ಧಪಡಿಸಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದ ಅತ್ಯದ್ಭುತ ಸಂಗ್ರಹವೆಂದರೆ ಲೆಫ್ಟಿನೆಂಟ್ ಕರ್ನಲ್ ಮೆಕೆಂಜಿ ಸಂಗ್ರಹಿಸಿದ ಸಾವಿರಾರು ಕೈಫಿಯತ್ತುಗಳು. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿದ್ದ ಅವುಗಳಲ್ಲಿ ತಮಿಳು, ತೆಲುಗಿನ ಕೈಫಿಯತ್ತುಗಳು ಸಾಕಷ್ಟು ಸುರಕ್ಷಿತವಾಗಿದ್ದುವು. ಆದರೆ ಕನ್ನಡ ಕೈಫಿಯತ್ತುಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಕುರಿತು ನಾನು ಆಗ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರೂ ನನ್ನ ಗುರುಗಳೂ ಆಗಿದ್ದ ಪ್ರೊ. ಕುಶಾಲಪ್ಪ ಗೌಡರಿಗೆ ತಿಳಿಸಿದಾಗ, ಅವರು ಮೆಕೆಂಜಿ ಕೈಫಿಯತ್ತುಗಳ ಬಗ್ಗೆ ಪರಿಚಯಾತ್ಮಕವಾದ ಸಂಪ್ರಬಂಧವೊಂದನ್ನು ಸಿದ್ಧಪಡಿಸಲು ಸೂಚಿಸಿದರು ಮತ್ತು ತಾವೇ ಅದಕ್ಕೆ ಮಾರ್ಗದರ್ಶನ ಮಾಡಿದರು. ಆ ಸಂದರ್ಭದಲ್ಲಿ ಅಲ್ಲಿ ಸಂಗ್ರಹಿಸಿಡಲಾದ ಮೆಕೆಂಜಿ ಕೈಫಿಯತ್ತುಗಳನ್ನೂ ಅವಕ್ಕೆ ಸಂಬಂಧಿಸಿದಂತೆ ನಡೆದ ಕೆಲಸಗಳನ್ನೂ ಪರಿಶೀಲಿಸುವ ಅವಕಾಶ ಪ್ರಾಪ್ತವಾಯಿತು. ಈ ಸಂಪ್ರಬಂಧವು ಮುಂದೆ 1985ಲ್ಲಿ ‘ ಮೆಕೆಂಜಿ ಕೈಫಿಯತ್ತುಗಳು’ ಎಂಬ ಹೆಸರಿನಲ್ಲಿಯೇ ಪ್ರಕಟವಾಯಿತು. ಈ ಪುಸ್ತಕವು ಪ್ರೊ. ಎಂ ಎಂ. ಕಲಬುರ್ಗಿ ಡಾ. ಚಿದಾನಂದಮೂರ್ತಿ, ಪ್ರೊ. ಹಾ. ಮಾ. ನಾಯಕ ಮೊದಲಾದ ಹಿರಿಯ ವಿದ್ವಾಂಸರ ಗಮನ ಸೆಳೆಯಿತು. 1983ರಲ್ಲಿ ಪ್ರೊ. ಕುಶಾಲಪ್ಪ ಗೌಡ ಮತ್ತು ಡಾ. ಚಿನ್ನಪ್ಪ ಗೌಡರು ಜೊತೆಯಾಗಿ ಮೆಕೆಂಜಿ ಸಂಗ್ರಹದಲ್ಲಿನ ದಕ್ಷಿಣ ಕನ್ನಡಕ್ಕೆ ಸೇರಿದ ಕೈಫಿಯತ್ತುಗಳನ್ನು ಆಯ್ದು ವಿಸ್ತಾರವಾದ ಪೀಠಿಕೆಯೊಂದಿಗೆ ಪ್ರಕಟಿಸಿದರು. ಈ ಪುಸ್ತಕದಲ್ಲಿರುವ ಕೈಫಿಯತ್ತುಗಳು ತನ್ನ ಭಾಷೆ, ವಸ್ತು ಮತ್ತು ವಿಷಯ ಮಂಡನಾ ಕ್ರಮಗಳಿಂದ ಸಂಶೋಧಕರಿಗೆ ಪ್ರಿಯವಾಯಿತು. ಆದರೆ, ಕಾರಣಾಂತರಗಳಿಂದ ಮುಂದೆ ಯಾರೂ ಕೈಫಿಯತ್ತುಗಳ ಕುರಿತು ಆಸಕ್ತಿ ತೋರಿಸಲಿಲ್ಲ. ಮದ್ರಾಸಿನವರೆಗೆ ಹೋಗಿ ಅವುಗಳನ್ನು ಪರಾಮರ್ಶಿಸುವುದು ಸಂಶೋಧಕರಿಗೆ ಕಷ್ಟವಾಯಿತೋ ಏನೋ? ಅಥವಾ ಶಾಸನಗಳ ಅಧ್ಯಯನದಷ್ಟು ಕೈಫಿಯತ್ತುಗಳ ಅಧ್ಯಯನವು ಅವರಿಗೆ ಮಹತ್ವದ್ದಾಗಿ ಕಂಡಿರಲಿಕ್ಕಿಲ್ಲ.
ಈ ನಡುವೆ ಪ್ರೊ. ಎಂ ಎಂ ಕಲಬುರ್ಗಿಯವರು 1980ರಷ್ಟು ಹಿಂದೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅನುದಾನದಿಂದ ‘ ಸಮಗ್ರ ಕೈಫಿಯತ್ತುಗಳ ಸಂಗ್ರಹ, ಸಂಸ್ಕರಣ ಯೋಜನೆ’ ಯನ್ನು ಕೈಗೆತ್ತಿಕೊಂಡರು. ಅವರು ತನ್ನ ಸಂಶೋಧನಾ ಸಹಾಯಕರ ಜೊತೆಗೆ ಮದ್ರಾಸ್ ಪ್ರಾಚ್ಯ ವಸ್ತು ಭಂಡಾರದಲ್ಲಿದ್ದ ಸುಮಾರು 134 ಕೈಫಿಯತ್ತುಗಳನ್ನು ಪ್ರತಿಮಾಡಿಸಿ, ಕರ್ನಾಟಕ ಕ್ಕೆ ತಂದರು. ಇದು ಮತ್ತೆ ಸುಮಾರು 10 ವರ್ಷಗಳ ಕಾಲ ಹಾಗೆಯೇ ಬಿದ್ದಿತ್ತು. 1993ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರೊ. ಚಿ.ಶ್ರೀನಿವಾಸ ರಾಜು ಅವರು ಮೊದಲು, ಆನಂತರ ನಾನೂ ಸ್ವಲ್ಪ ಕಾಲ ಪ್ರಸಾರಾಂಗದ ನಿರ್ದೇಶಕನಾಗಿದ್ದಾಗ ಕಲಬುರ್ಗಿಯವರು ಸಂಗ್ರಹಿಸಿದ ಕೈಫಿಯತ್ತುಗಳ ಒಂದು ಸಂಪುಟವನ್ನು ಹೊರ ತರುವ ಪ್ರಸ್ತಾವವನ್ನು ಆಗ ಸಿಂಡಿಕೇಟ್ ಸದಸ್ಯರಾಗಿದ್ದ ಹಿರಿಯ ಕವಿ ಶ್ರೀ ಚನ್ನವೀರ ಕಣವಿಯವರು ಮುಂದಿಟ್ಟರು. ಕುಲಪತಿಗಳಾಗಿದ್ದ ಪ್ರೊ. ಚಂದ್ರಶೇಖರ ಕಂಬಾರರು ಅದಕ್ಕೆ ಕೂಡಲೇ ಒಪ್ಪಿಗೆ ನೀಡಿದರು. ಕೈಫಿಯತ್ತುಗಳ ಜೊತೆ ಸಾಕಷ್ಟು ಒಡನಾಡಿದ್ದ ನಾನು ಹೊಸಪೇಟೆ- ಧಾರವಾಡಗಳ ನಡುವೆ ಹಲವು ಬಾರಿ ಓಡಾಡಬೇಕಾಯಿತು. 1994ರಲ್ಲಿ ಅದು ‘ಕರ್ನಾಟಕದ ಕೈಫಿಯತ್ತುಗಳು’ ಹೆಸರಲ್ಲಿ ಪ್ರಸಾರಾಂಗದಿಂದ ಪ್ರಕಟವಾಯಿತು. ಈ ಬೃಹತ್ ಸಂಪುಟದಲ್ಲಿರುವ ಕೆಲವು ಮಾಹಿತಿಗಳನ್ನು ಸಂಶೋಧಕರು ಬಳಸಿಕೊಂಡಿರುವುದು ಹೌದಾದರೂ ಕೈಫಿಯತ್ತುಗಳನ್ನೇ ಗಮನದಲ್ಲಿರಿಸಿಕೊಂಡು ಸ್ವತಂತ್ರ ಅಧ್ಯಯನ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಈ ಕಿರು ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಪ್ರೊ. ಕಲಬುರ್ಗಿಯವರಿಂದ ‘ಪಾಚೀನ ಕರ್ನಾಟಕದ ಆಕರ ಸಾಮಾಗ್ರಿಗೆ ಸಂಬಂಧಪಟ್ಟ ಒಂದು ಹೊಸ ಚಿನ್ನದ ಗಣಿ’ ಎಂದು ಹೊಗಳಿಸಿಕೊಂಡಿರುವ ಕೈಫಿಯತ್ತುಗಳ ಕಡೆಗೆ ಸಂಶೋಧಕರ ಗಮನ ಸೆಳೆಯುವುದು ಈ ಪುಸ್ತಕದ ಪ್ರಧಾನ ಉದ್ದೇಶವಾಗಿದೆ. ಪ್ರಸ್ತುತ ಪುಸ್ತಕದಲ್ಲಿ ಉಲ್ಲೇಖಿಸಲಾದ ಕೈಫಿಯತ್ತುಗಳ ಭಾಗಗಳನ್ನು ಕಲಬುರ್ಗಿಯವರ ಪುಸ್ತಕದಿಂದಲೇ ಆಯ್ದುಕೊಳ್ಳಲಾಗಿದೆ.
**
ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಪುನಾರಚನೆಯಲ್ಲಿ ಕೈಫಿಯತ್ತುಗಳ ಪಾತ್ರ ತುಂಬ ದೊಡ್ಡದು. ಕನ್ನಡ ದಾಖಲು ಸಾಹಿತ್ಯದ ಮಹತ್ವದ ಪ್ರಕಾರಗಳಲ್ಲಿ ಒಂದಾದ ಇವುಗಳ ಕುರಿತು ಇತ್ತೀಚಿನ ದಶಕಗಳಲ್ಲಿ ವಿವಿಧ ಆಯಾಮಗಳಿಂದ ಅಧ್ಯಯನ ನಡೆಯುತ್ತಿರುವುದು ಸ್ವಾಗತಾರ್ಹವಾದುದು. ಇವುಗಳ ಸಾಲಿಗೆ 'ಕನ್ನಡ ಕೈಫಿಯತ್ತುಗಳು' ಎಂಬ ಈ ಕೃಷಿ ಸೇರುತ್ತದೆ. ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತಕರು ಹಾಗೂ ಹಿರಿಯ ಜಾನಪದ ತಜ್ಞರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೊಸ ದೃಷ್ಟಿಕೋನದಿಂದ ಕೈಫಿಯತ್ತುಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ವಿಜಯನಗರೋತ್ತರ ಕಾಲದ ರಾಜಕೀಯ, ಆಡಳಿತ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಜನಜೀವನ ಇತ್ಯಾದಿ ಸಂಗತಿಗಳನ್ನು ಹೈಫಿಯತ್ತುಗಳು ಪ್ರಚುರಪಡಿಸುತ್ತವೆ. ವಿಶೇಷವಾಗಿ ಇಲ್ಲಿ ಉಕ್ತಗೊಂಡಿರುವ ಗ್ರಾಮನಾಮಗಳು: ಸ್ಥಳನಾಮಗಳು, ವ್ಯಕ್ತಿನಾಮಗಳ ಕುರಿತು ಅಧ್ಯಯನ ಮಾಡುವವರಿಗೆ ಇದೊಂದು ಅತ್ಯುತ್ತಮ ಆಕರಗ್ರಂಥವಾಗುತ್ತದೆ. ಇಂಥ ಆಕರ ಸಾಮಗ್ರಿಗಳನ್ನು ರಚನೆ ಮಾಡಿಕೊಟ್ಟವನು ವಿದೇಶಿ ವಿದ್ವಾಂಸನಾದ ಕರ್ನಲ್ ಮೆಕಂಜಿ, “ಕೈಫಿಯತ್ತು ಅಂದರೆ ಮಂದ, ಮಂಜಿ ಅಂದರೆ ಕೈಫಿಯತ್ತು" ಎನ್ನುವಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಎರಡೂ ಪದಗಳು ಪ್ರಸಿದ್ಧಿಯನ್ನು ಹೊಂದಿವೆ. ಅಂಥ ಕೈಫಿಯತ್ತುಗಳ ಸ್ವರೂಪ, ಸಂಗ್ರಹ-ಸಂರಕ್ಷಣೆ, ವರ್ಗೀಕರಣ, ಮಹತ್ವ, ಭಾಷೆ ಹೀಗೆ ಅನೇಕ ವಿಷಯಗಳನ್ನು ಸೂಕ್ಷ್ಮನೆಲೆಯಲ್ಲಿ ಅಧ್ಯಯನಕ್ಕೊಳಪಡಿಸಿದ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತದೆ ಎಂದು ಸ.ಚಿ ರಮೇಶ ಅವರು ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
“ಹೆಚ್ಚು ಕಡಿಮೆ ವರ್ಷಪೂರ್ತಿ ಒಂದಲ್ಲ ಒಂದು ಕಡೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅದರ ವಿಚ...
“ಒಟ್ಟಿನಲ್ಲಿ ಈ 'ಯಯಾತಿ' ಕಾದಂಬರಿ ಒಂದು ಪ್ರಾಚೀನ ಪರಂಪರೆಯನ್ನು ಮುರಿದು ಕಟ್ಟಿದ ವಿನೂತನ ಕೃತಿಯಾಗಿದೆ...
"ಮೊದಮೊದಲು ಏನಾದರೂ ಸಾಧಿಸಬೇಕಾದರೆ ಕಷ್ಟವಾಗುತ್ತದೆ. ಮನಸ್ಸು ಮೂಡನ್ನು ಸಹ ಹಾಳು ಮಾಡುತ್ತದೆ. ನಿಧಾನವಾಗಿ ಕೇಂದ್ರ...
©2025 Book Brahma Private Limited.