ಇಲ್ಲಿ 1985 ರಿಂದ 2024ರವೆರೆಗೆ ಬರೆದ ವಿವಿಧ ವಿನ್ಯಾಸದ ಕವಿತೆಗಳಿವೆ


“ಇವು ನಿಮ್ಮ ಮುಗ್ಧ, ಕುತೂಹಲದ, ತುಂಟತನದ, ಲವಲವಿಕೆಯ ಭಾವಕ್ಕೆ ಓದಿ, ಹಾಡಿ ನಲಿಯುವ ನಿಮ್ಮ ಭಾವನೆಯಲ್ಲಿ ನಾನೂ ಭಾಗಿಯಾಗಿ ಆನಂದಿಸುತ್ತಿರುತ್ತೇನೆ,” ಎನ್ನುತ್ತಾರೆ ಚಂದ್ರಗೌಡ ಕುಲಕರ್ಣಿ ಅವರು ತಮ್ಮ “ಚಿಲಿಪಿಲಿ ಶ್ರೀಗಂಧ” ಪುಸ್ತಕದ ಕುರಿತು ಬರೆದ ಕವಿ ಮಾತು.

ಪುಟಾಣಿಗಳೆ,

'ಚಿಲಿಪಿಲಿ ಶ್ರೀಗಂಧ' ಈವರೆಗೆ ನಾನು ನಿಮಗಾಗಿ ಬರೆದ ಕವಿತೆಗಳ ಸಂಕಲನ. ಇಲ್ಲಿ 'ಬೆಣ್ಣೆಹಳ್ಳ', 'ಸೊಂಯ್ ಸೊಂಯ್ ಸೊಳ್ಳೆ'. 'ಟೂ ಟೂ ಬಿಟೀನಿ', 'ಹಾರೋಣ ಬಾ ಹಾಡೋಣ ಬಾ', 'ಯಾರಿಗೂ ಇದನ ಹೇಳಬಾರದು', 'ಉದ್ದನೆ ಬಾಲ ಇದ್ರೆ' ಕೃತಿಗಳಲ್ಲಿಯ ಕವಿತೆಗಳ ಜೊತೆಗೆ ಅಪ್ರಕಟಿತ 'ಇಸ್ರೋ ಮಾಡಿದ ತಪ್ಪು', 'ಕನ್ನಡ ಅಕ್ಷರ ಮೇರು' ಮತ್ತು 'ಚಿಲಿಪಿಲಿ ಶ್ರೀಗಂಧ' ಹೊಸ ಸಂಕಲನಗಳ ಕವಿತೆಗಳೂ ಸೇರಿವೆ. ಮುನ್ನೂರು ಕವಿತೆಗಳನ್ನು ದಿನಕ್ಕೊಂದರಂತೆ ಓದಿ ತಣಿಯಬಹುದು. ಹಾಡಿ ನಲಿಯಬಹುದು. ಲಿಂ. ಶ್ರೀಮಂತ ಅವಟಿ ಅವರ ಸ್ವರ ಸಂಯೋಜನೆಯಲ್ಲಿ (೩೦ ಕವಿತೆಗಳು) ಮೂಡಿಬಂದ ಧ್ವನಿ ಯಡಕದ(ಸಿ.ಡಿ.) ಹಾಡುಗಳನ್ನು ಕೇಳಿ ಸವಿಯಬಹುದು. ಈ ಧ್ವನಿಯಡಕದ ಕೆಲವು ಹಾಡುಗಳು ವೀಡಿಯೋ ರೂಪದಲ್ಲಿಯೂ ದೊರೆಯುತ್ತವೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಕಾರ್ಕಳದ ಸೃಜನಶೀಲ ಶಿಕ್ಷಕಿಯಾದ ಶ್ರೀಮತಿ ವಂದನಾ ರೈ ಅವರು 'ಯಾರಿಗೂ ಇದನ ಹೇಳಬಾರದು' ಹಾಡಿಗೆ ನಡೆಚಿತ್ರ ಸಂಯೋಜಿಸಿ 'ಯೂಟ್ಯೂಬ್'ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿಗೆ ೮ ಲಕ್ಷ ಜನ ಮೆಚ್ಚುಗೆ ಸೂಚಿಸಿದ್ದಾರೆ. ಅದೇ ರೀತಿ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ 'ಚಿಲಿಪಿಲಿ ಶ್ರೀಗಂಧ' ಹಾಡಿಗೂ ನಡೆಚಿತ್ರ(ವೀಡಿಯೋ) ಸಂಯೋಜಿಸಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡನ್ನು ೬ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. 'ಚೆಲುವಿನ ಚೈತ್ರ', 'ಬಾರಿಸು ಕನ್ನಡ ಡಿಂಡಿಮ', 'ಬೆಕ್ಕಿಗೆ ನೆಗಡಿ ಬಂದಿತ್ತು' ಮುಂತಾದ ಹಾಡುಗಳನ್ನು ವೀಡಿಯೋ ರೂಪಕ್ಕೆ ಅಳವಡಿಸಿದ್ದಾರೆ. 2 ಲಕ್ಷಕ್ಕಿಂತಲೂ ಹೆಚ್ಚು ಮೆಚ್ಚುಗೆ ಗಳಿಸಿವೆ ಈ ಹಾಡುಗಳು.

ಕರ್ನಾಟಕದ ಪ್ರಸಿದ್ಧ ನವಕರ್ನಾಟಕ ಪ್ರಕಾಶನದವರು ನನ್ನ ನಾಲ್ಕು ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ. 'ಒಗಟು ಬಿಡಿಸೋ ಜಾಣ', 'ಟಿಂ ಟಿಂ ಚುಟುಕು', 'ಟೂ ಟೂ ಬಿಟೀನಿ' ಮತ್ತು 'ಬಿಡಿಸಿ ನೋಡು ಒಗಟು', 'ಒಗಟು ಬಿಡಿಸೋಣ ಜಾಣ' ಕೃತಿ ಈಗ ಹತ್ತನೇ ಮುದ್ರಣ ಕಂಡಿದೆ. 'ಟಿಂ ಟಿಂ ಚುಟುಕು' ಎರಡನೇ ಮುದ್ರಣ ಕಂಡಿದೆ. 'ಬಿಡಿಸಿ ನೋಡು ಒಗಟು' ಇದೇ ವರ್ಷ(೨೦೨೪) ಪ್ರಕಟವಾಗಿದೆ.

ನನ್ನ ಕೃತಿಗಳಿಗೆ ಪ್ರಸಿದ್ಧ ಸಾಹಿತಿಗಳಾದ ಎನ್ನೆ ಕುಲಕರ್ಣಿ, ಪ್ರೊ. ಬಿ.ಆರ್. ಪೋಲಿಸ ಪಾಟೀಲ, ಡಾ. ಆನಂದ ಪಾಟೀಲ, ಡಾ. ನಿಂಗು ಸೊಲಗಿ, ಶಂಕರ ಹಲಗತ್ತಿ ಅವರು ಮುನ್ನುಡಿ-ಬೆನ್ನುಡಿಯನ್ನು ಬರೆದು ಹಾರೈಸಿದ್ದಾರೆ.

ನನ್ನ ಒಂದು ಕವಿತೆ ಮಹಾರಾಷ್ಟ್ರ ಸರಕಾರದ ಪಠ್ಯದಲ್ಲಿ (೨ನೆಯ ವರ್ಗ) ಸೇರ್ಪಡೆಯಾಗಿದೆ. ಕರ್ನಾಟಕ ಸರಕಾರದ (7ನೆಯ ವರ್ಗ) ತೃತೀಯ ಭಾಷೆ ಕನ್ನಡ ಪಠ್ಯದಲ್ಲಿ, ವಯಸ್ಕರ ಶಿಕ್ಷಣ 'ನಾಡು-ನುಡಿ' ಪಠ್ಯದಲ್ಲಿ ಹಾಗೂ ಕರ್ನಾಟಕ ಸರಕಾರದ ಕಲಿಕಾ ಬಲವರ್ಧನೆ ೭ನೆಯ ತರಗತಿ ಪಠ್ಯದಲ್ಲಿಯೂ ಸೇರ್ಪಡೆಯಾಗಿದೆ. ಧಾರವಾಡದ 'ಧ್ವನಿ' ಸಂಸ್ಥೆಯವರು ಕೆಲವು ಕವಿತೆಗಳನ್ನು ಕಲಿಕಾ ಸಾಮಾಗ್ರಿಯಲ್ಲಿ ಸೇರಿಸಿಕೊಂಡಿದ್ದಾರೆ.

ಹುಡುಗಾಟ-ಹುಡುಕಾಟ ತಂಡದ ಮುಖಾಂತರ ಹಲವಾರು ಕವಿತೆಗಳು ನೂರಕ್ಕೂ ಹೆಚ್ಚು ಶಾಲೆ-ತರಗತಿಗಳಲ್ಲಿ ವಾಚಿಸಲ್ಪಟ್ಟಿವೆ. ಮಕ್ಕಳಿಗೆ ಖುಷಿ ನೀಡಿವೆ. 'ಹುಡುಗಾಟ-ಹುಡುಕಾಟ' ಹೆಸರಿನ ಕಿರುಹೊತ್ತಿಗೆ (೧೫ ಕವಿತೆಗಳು)ಯ ಐದು ಸಾವಿರ ಪ್ರತಿಗಳು ಪ್ರೀತಿಯಿಂದ ಓದುವ ಮಕ್ಕಳ ಕೈಸೇರಿವೆ. ಶಿಕ್ಷಕರು, ಪಾಲಕರು ಕೊಂಡುಕೊಂಡು (ಬೆಲೆ ಕೇವಲ ೨ ರೂಪಾಯಿ) ಮಕ್ಕಳ ಕೈಗೆ ತಲುಪಿಸುವಲ್ಲಿ ನೆರವಾಗಿದ್ದಾರೆ. ಓದುವ ಸಂಸ್ಕೃತಿಯನ್ನು ಸಂಚಲನಗೊಳಿಸಿದ್ದಾರೆ.

ತಾಳಿಕೋಟೆಯ ಶ್ರೀ ಖಾಸ್ಸತೇಶ್ವರ, ವಿದ್ಯಾಭಾರತಿ, ಸಂಗಮೇಶ್ವರ, ಘನಮಠೇಶ್ವರ, ಸರಕಾರಿ ಪ್ರೌಢಶಾಲೆಗಳಲ್ಲಿ, ಸಮೀಪದ ಮಿಣಜಿಗಿ, ಮೂಕಿಹಾಳ, ಮಡಿಕೇಶ್ವರ, ಇಂಗಳಗೇರಿ, ಅಸ್ಕಿ, ಪೀರಾಪೂರ ಸರಕಾರಿ ಪ್ರೌಢಶಾಲೆಗಳಲ್ಲಿ, ಹಿರೂರು, ಕೊಡಗಾನೂರ, ಕೊಣ್ಣೂರು, ತುಂಬಗಿ, ಸಾಸನೂರ ಅನುದಾನಿತ ಪ್ರೌಢ ಶಾಲೆಗಳಲ್ಲಿ, ಹಗರಟಗಿ, ಕೊಡೇಕಲ್ಲ, ಬಸವನ ಬಾಗೇವಾಡಿಯ ಸರಕಾರಿ ಪ್ರೌಢಶಾಲೆ, ಅಕ್ಕನಾಗಮ್ಮ ಬಾಲಕಿಯರ ಪ್ರೌಢಶಾಲೆಗಳಲ್ಲಿ, ಧಾರವಾಡದ ಬಾಲಬಳಗ ಶಾಲೆ, ಕರ್ನಾಟಕ ಬಾಲಕಿಯರ ಪ್ರೌಢಶಾಲೆ, ಬ್ಯಾಹಟ್ಟಿಯ ಪ್ರೌಢಶಾಲೆ, ಸೋಮಾಪುರದ ಪ್ರೌಢಶಾಲೆ, ಕುರ್ಲಗೇರಿ ಸರಕಾರಿ ಪ್ರೌಢಶಾಲೆ, ಕಡದಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಬೆಳಗಾವಿ ಜಿಲ್ಲೆಯ ಶೇಡಬಾಳದ ಕೃಷ್ಣಾ ಪ್ರೌಢಶಾಲೆ, ಬೆಂಗಳೂರಿನ ರಾಜಾಜಿನಗರ ಬಸವೇಶ್ವರ ಬಾಲಕರ, ಬಸವೇಶ್ವರ ಬಾಲಕಿಯರ, ಮತ್ತು ಬಸವೇಶ್ವರ ಪ್ರೌಢಶಾಲೆ ಮಹಾಲಕ್ಷ್ಮೀಪುರ, ಸರ್ವಜ್ಞ ಪ್ರೌಢಶಾಲೆ ವಿಜಯನಗರ, ಸರಕಾರಿ ಪ್ರೌಢಶಾಲೆ ಹೆಬ್ಬಾಳ, ಸರಕಾರಿ ಪ್ರೌಢಶಾಲೆ ಕಾಡಗೋಡಿ, ನಾಗಶೆಟ್ಟಿಹಳ್ಳಿ, ಸರ್ಜಾಪುರ, ಹಾಗೂ ಸಿದ್ಧಲಿಂಗೇಶ್ವರ ಪ್ರೌಢಶಾಲೆ, ಜ್ಞಾನಜ್ಯೋತಿ ಪ್ರೌಢಶಾಲೆ, ಆಚಾರ ಪಾಠಶಾಲಾ ಪ್ರೌಢಶಾಲೆ, ಪಾಂಚಜನ್ಯ ಬಾಲಕಿಯರ ಪ್ರೌಢಶಾಲೆ, ಅಂಬೇಡ್ಕ‌ರ್ ಪ್ರೌಢಶಾಲೆಗಳಲ್ಲಿ ಅಲ್ಲದೇ ಅಜೀಂ ಪ್ರೇಮಜಿ ನಡೆಸಿದ ಶಿಕ್ಷಕ ತರಬೇತಿ ಶಿಬಿರ, ಇಳಕಲ್ಲ, ಅಮೀನಗಡ, ಕಕ್ಕೇರಾ, ನಾರಾಯಣಪುರ, ಕೆಂಭಾವಿ, ಚಾಮನಾಳ, ಕಲಬುರಗಿ, ಅಫಜಲಪುರ ಮುಂತಾದ ಊರುಗಳಲ್ಲಿ ಈ ಸಂಕಲನದ ಕವಿತೆಗಳನ್ನು ಭಾವಪೂರ್ಣವಾಗಿ ವಾಚನ ಮಾಡಿರುವೆ. ಶಿಕ್ಷಕರು ಮತ್ತು ಮಕ್ಕಳು ತಾವೂ ವಾಚನ ಮಾಡಿ ಸಂತಸಪಟ್ಟಿರುವರು

ಈ ಸಂಕಲನದಲ್ಲಿಯ ಕವಿತೆಗಳನ್ನು ಸಭೆ-ಸಮಾರಂಭಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ದೂರದರ್ಶನದ ಬೆಳಗು ಕಾರ್ಯಕ್ರಮದಲ್ಲಿ ವಾಚನ ಮಾಡಿ ಕಾವ್ಯ ಸೌರಭವನ್ನು ಉಣಬಡಿಸಿರುವೆ. ಅಲೆಜಾಲದ ಅನೇಕ ಗೋಷ್ಠಿ, ಉಪನ್ಯಾಸದ ಕಾರ್ಯಕ್ರಮಗಳಲ್ಲೂ ವಾಚಿಸಿರುವೆ.

ಇಲ್ಲಿ ೧೯೮೫ ರಿಂದ ೨೦೨೪ರವೆರೆಗೆ ಬರೆದ ವಿವಿಧ ವಿನ್ಯಾಸದ ಕವಿತೆಗಳಿವೆ. ಇವು ನಿಮ್ಮ ಮುಗ್ಧ, ಕುತೂಹಲದ, ತುಂಟತನದ, ಲವಲವಿಕೆಯ ಭಾವಕ್ಕೆ ಓದಿ, ಹಾಡಿ ನಲಿಯುವ ನಿಮ್ಮ ಭಾವನೆಯಲ್ಲಿ ನಾನೂ ಭಾಗಿಯಾಗಿ ಆನಂದಿಸುತ್ತಿರುತ್ತೇನೆ.

ಮತ್ತೇಕೆ ತಡ, ಒಂದೊಂದೇ ಪುಟ ತೆರೆದು... ಓದಿ ವಾಚನ ಮಾಡಿ ಸಂತಸಪಡಿರಿ.

- ಚಂದ್ರಗೌಡ ಕುಲಕರ್ಣಿ

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...