“ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ 'ಅನಂತ್ ಕುಣಿಗಲ್' ರವರ 'ಅಪ್ಪನ ಅಟೋಗ್ರಾಪ್ ' ಪುಸ್ತಕ ಆ ಸಾಲಿಗೆ ಸೇರುತ್ತದೆ. 'ಕಂಡ್ಹಾಂಗ ಬದುಕು' ಎನ್ನುವ ಟ್ಯಾಗ್ ಲೈನ್ ಓದುಗರ ಗಮನ ಸೆಳೆಯುತ್ತೆ. ಮುಖಪುಟ ವಿನ್ಯಾಸವೇ ಅರ್ಧ ಕತೆ ಹೇಳುತ್ತದೆ,” ಎನ್ನುತ್ತಾರೆ ವತ್ಸಲಾ ಮಾನಸ ಚೆಂಬು. ಅವರು ಅನಂತ್ ಕುಣಿಗಲ್ ಅವರ ‘ಅಪ್ಪನ ಆಟೋಗ್ರಾಪ್’ ಕೃತಿ ಕುರಿತು ಬರೆದ ಅನಿಸಿಕೆ.
ಪುಸ್ತಕದ ಹೆಸರು : ಅಪ್ಪನ ಆಟೋಗ್ರಾಪ್
ಲೇಖಕರ ಹೆಸರು : ಅನಂತ್ ಕುಣಿಗಲ್
ಪುಸ್ತಕದ ಪ್ರಕಾರ : ಸುಲಲಿತ ಪ್ರಬಂಧಗಳು
ಪ್ರಕಾಶನದ ಹೆಸರು : ಅವ್ವಾ ಪುಸ್ತಕಾಲಯ
ನನ್ನಂತಹ ಓದುಗರಿಗೆ ಸಾಹಿತ್ಯವನ್ನು ಓದುವುದಕ್ಕೆ ದೊಡ್ಡ ಪಾರ್ಮುಲಾಗಳೇನು ಬೇಕಾಗಿಲ್ಲ. ನನ್ನ ಸುತ್ತಮುತ್ತ ನಡೆಯುವ ವಿಚಾರವನ್ನು ಸರಳವಾದ ಭಾಷೆಯಲ್ಲಿ, ಸರಾಗವಾಗಿ ಓದಿಸಿಕೊಂಡು ಹೋಗುವಂತಿದ್ದರೆ ಸಾಕು. ಅದೊಂದು ರೀತಿಯ ಸಮಾಧಾನವನ್ನು ನೀಡುತ್ತದೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ 'ಅನಂತ್ ಕುಣಿಗಲ್' ರವರ 'ಅಪ್ಪನ ಆಟೋಗ್ರಾಪ್ ' ಪುಸ್ತಕ ಆ ಸಾಲಿಗೆ ಸೇರುತ್ತದೆ. 'ಕಂಡ್ಹಾಂಗ ಬದುಕು' ಎನ್ನುವ ಟ್ಯಾಗ್ ಲೈನ್ ಓದುಗರ ಗಮನ ಸೆಳೆಯುತ್ತೆ. ಮುಖಪುಟ ವಿನ್ಯಾಸವೇ ಅರ್ಧ ಕತೆ ಹೇಳುತ್ತದೆ.
ನೂರ ಅರುವತ್ತು ಪುಟಗಳ ಈ ಪುಟ್ಟ ಪುಸ್ತಕವನ್ನು ಒಂದು ಪ್ರಯಾಣದಲ್ಲಿ ಒಂದೇ ಗುಟುಕಿಗೆ ಆಪ್ತವಾಗಿ ಓದಿ ಮುಗಿಸಬಹುದು. ಓದುತ್ತಾ ನಾವು ಪಾತ್ರವಾಗಬಹುದು. ಹೌದಲ್ವ, ಸಾಕಷ್ಟು ಸಂದರ್ಭಗಳಲ್ಲಿ ನಮ್ಮೆಲ್ಲರ ಬದುಕಿನ ಸಂದರ್ಭಗಳು ಒಂದೇ ತೆರನಾಗಿರುತ್ತೆ. ಕೆಲವರು ಹೇಳಿಕೊಳ್ಳುತ್ತಾರೆ, ಇನ್ನೂ ಕೆಲವರು ಬರೆದು ದಾಖಲಿಸುತ್ತಾರೆ, ಬಹಳಷ್ಟು ಜನ ಮನದಲ್ಲಿ ಹುದುಗಿಟ್ಟುಕೊಂಡಿರುತ್ತಾರೆ. ಇಂತಹ ಪುಸ್ತಕಗಳನ್ಬು ಓದುವಾಗ ಹುದುಗಿಟ್ಟ ನೆನಪುಗಳು ಗರಿಬಿಚ್ಚಿಕೊಳ್ಳುತ್ತವೆ. ಆಗಲೇ ನಾವು ಲೇಖಕನ ಜೊತೆ ರಿಲೇಟ್ ಆಗೋದು. ಆ ಕಾರಣಕ್ಕಾಗಿಯೇ ಈ ಪುಸ್ತಕವನ್ನು ಓದಬೇಕು.
ಒಟ್ಟು ಇಪ್ಪತ್ತೇಳು ಸುಲಲಿತ ಪ್ರಬಂಧಗಳಿರುವ ಈ ಪುಸ್ತಕವನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ಅವರ ಭಾಷೆಯಲ್ಲೇ ಹೇಳುವುದಾದರೆ, 'ಮೂರು ದಾರಿ ಇಪ್ಪತ್ತೇಳು ಹೆಜ್ಜೆಗಳು'. ಲೇಖಕರ ನಿರೂಪಣಾ ಶೈಲಿಯೇ ಓದನ್ನು ಹಿತವಾಗಿಸುತ್ತದೆ. ಓದಿದ ನಂತರ ಒಂದು ದೀರ್ಘ ಮೌನವನ್ನೆಳೆದುಕೊಂಡು, ಲೇಖಕರ ಸ್ಥಾನದಲ್ಲಿ ನಿಂತುಕೊಂಡು ನಿಮ್ಮನ್ನು ನೀವು ಕಲ್ಪಿಸಿಕೊಳ್ಳುತ್ತಿರಿ. ಅನುಭವಿಸುತ್ತಿರಿ. ಏಕೆಂದರೆ ಇಲ್ಲಿ ಅವರು ಹೇಳುವ ಕಥೆಗಳು ಅವರೇ ಹೇಳುವ ಹಾಗೆ ಅವರದೊಬ್ಬರದೇ ಅಲ್ಲ, 'ಮಧ್ಯಮ ವರ್ಗದ ಎಲ್ಲರ ಕಥೆ! ಸ್ವಲ್ಪ ಚೇಂಜ್ ಇರ್ತದೆ. ಮಿಕ್ಕಿದ್ ನೋವು, ಸಂಕಟ, ಖುಷಿ, ಭಂಡತನ ಎಲ್ಲ ಸೇಮ್ ಟು ಸೇಮ್..'
ಮೊದಲ ಭಾಗ 'ನಾನು ಮತ್ತು ನಾನು' ಅಲ್ಲಿ ತನ್ನ ಬಾಲ್ಯ, ಹಳ್ಳಿ, ವಿದ್ಯಾಭ್ಯಾಸವನ್ನು ಲೇಖಕರು ದಾಖಲಿಸುವಾಗ ಆಸೆಗಳೇ ಇಲ್ಲದ, ಬೆವರಿಗೂ, ಕಣ್ಣೀರಿಗೂ ವ್ಯತ್ಯಾಸವೇ ಗೊತ್ತಿಲ್ಲದ ಅವ್ವನ ತ್ಯಾಗ, ಪ್ರೀತಿಯ ಬಗ್ಗೆ ಹೇಳುವಾಗ, ನಮ್ಮಮ್ಮನೂ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಲೇಖಕರಿಗೆ ಅವರ ಅವ್ವಾನಿಗೂ, ಸೈನಿಕನಿಗೂ ಯಾವುದೇ ವ್ಯತ್ಯಾಸ ಕಾಣುವುದೇ ಇಲ್ಲ. ಅವ್ವಾನಿಗೆ ಅಮ್ಮಂದಿರ ದಿನದ ವಿಶೇಷ ಗೊತ್ತಿಲ್ಲದಿರಬಹುದು, ಆದರೆ ಮಕ್ಕಳ ದಿನದ ವಿಶೇಷ ಚೆನ್ನಾಗಿಯೇ ಗೊತ್ತಿರುತ್ತೆ ಎನ್ನುವಾಗಲೆಲ್ಲ ತೋರ್ಪಡಿಸಲಾಗದ ಅಮ್ಮನೆಡಗಿನ ಅವ್ಯಕ್ತ ಪ್ರೀತಿಯೊಂದು ಗಟ್ಟಿಯಾಗಿ ಎದೆಯಲ್ಲಿ ಝೇಂಕರಿಸುತ್ತೆ. ಇಂತಹ ಮುಗ್ಧ ಅಮ್ಮ ಒಂದು ಕಡೆಯಾದರೆ, ಇನ್ನೊಂದು ಕಡೆ ಅಪ್ಪ ಬದುಕಿರುವಾಗ ಆತನ ಕುಡಿತದ ಚಟದಿಂದಾಗಿ ಆತನ ಮೇಲೆ ಅಸಹನೆಯನ್ನು ಹೊಂದಿದ ಲೇಖಕರು, ಅಪ್ಪನ ಸಾವಿನಲ್ಲಿ ಆತನ ಅಸ್ತಿತ್ವವನ್ನು ಕಾಣುವ ಪ್ರಯತ್ನ ಮಾಡುತ್ತಾರೆ. 'ಹೀಗೆ ಬದುಕಬೇಕೆಂದು ಹೇಳಿಕೊಡದ ಅಪ್ಪ, ಹೇಗೆ ಬದುಕಬೇಕೆಂದು ದೂರದಿಂದಲೇ ನಿಂತು ಹೇಳಿಕೊಟ್ಟಿದ್ದ ಆದ್ದರಿಂದ ಆತ ನನ್ನ ಸೆಲೆಬ್ರಿಟಿ' ಎನ್ನುತ್ತಾ, ನೆಗೆಟಿವಿಟಿಯಲ್ಲೊಂದು ಪಾಸಿಟಿವಿಟಿ ಹುಡುಕುವ ಲೇಖಕರು ಮಾದರಿಯಾಗುತ್ತಾರೆ.
ಇದರೊಂದಿಗೆ ನಾನ್ಯಾರೆಂಬ ಹುಡುಕಾಟದ( ನಂಗಂತೂ ಇದು ತುಂಬಾ ಕಾಂಪ್ಲಿಕೇಟೆಡ್ ವಿಷಯ) ಬಗ್ಗೆ ಲೇಖಕರು ಮಾತನಾಡುತ್ತಾ, 'ಕಳೆದುಕೊಂಡಿದ್ದರಷ್ಟೇ ಹುಡುಕಾಟ. ನಾವೇನಾದರೂ ಸಂಪಾದಿಸಿದರಷ್ಟೇ ಕಳೆದುಕೊಳ್ಳುವುದು. ಸಂಪಾದಿಸುವುದಕ್ಕೂ ಮನುಷ್ಯರ ಮಧ್ಯೆ ಹೊಂದಾಣಿಕೆ ಬೇಕು. ಮನುಷ್ಯರಾದ ಮೇಲೆಯೇ ಹೀಗೆ ಪಡೆದು, ಕಳೆದು, ಮತ್ತೆ ಹುಡುಕುವ ಸೋಜಿಗವೇ 'ನಾನು'. ಹೌದು, ನಾನು ಕೂಡ ಆಗಾಗ ಮನುಷ್ಯನಾಗುತ್ತಿದ್ದೇನೆ'. ಆಹಾ! ಎಂತಹ ಅದ್ಭುತ ಪಿಲಾಸಪಿ..
ಎರಡನೇ ಅಧ್ಯಾಯ, 'ನಾನು ಮತ್ತು ನೀವು' ನಲ್ಲಿ 'ಸರ್ವಜನಾಂಗದ ಶಾಂತಿಯ ತೋಟ' ಲೇಖನದಲ್ಲಿ, 'ಮೈದಾನದಲ್ಲಿ ಆಡುವಾಗ ಮಾತ್ರ ಎಲ್ಲಾ ನಮ್ಮವರು.. ಆಟ ಮುಗಿದ ನಂತರ ಯಾಕೆ ಎಲ್ಲ ಬೇರೆ, ಬೇರೆಯವರು? ನಮಗಿರುವ ವೈಯುಕ್ತಿಕ ನಿಲುವುಗಳಂತೆಯೇ ಅವರಿಗೂ ಇರುತ್ತವೆ ಎನ್ನುವ ಕನಿಷ್ಠ ಯೋಚನೆಗಳೇಕೆ ನಮ್ಮಲ್ಲಿ ಸುಳಿಯುವುದಿಲ್ಲ?. ಬೇರೆ ಬೇರೆ ಮನೆಯಲ್ಲಿ ಬೆಳೆದ ನಮ್ಮೆಲ್ಲರ ಸಮಸ್ಯೆಗಳು ಒಂದೇ ಆಗಿರುವುದಿಲ್ಲ. ಇದು ಊರು, ಜಿಲ್ಲೆ, ರಾಜ್ಯ, ದೇಶಗಳಿಗೂ ಅನ್ವಯಿಸುತ್ತದೆ ಎಂಬ ಸತ್ಯ ಯಾಕೆ ಯಾರಿಗೂ ಅರ್ಥವಾಗುವುದಿಲ್ಲ?' ಎಂಬ ವೈಚಾರಿಕ ಪ್ರಶ್ನೆಗಳು ಓದಿನ ನಂತರವೂ ಬಹುವಾಗಿ ಕಾಡುತ್ತವೆ. ಈ ಅಧ್ಯಾಯದಲ್ಲಿ, ಬದುಕಲ್ಲಿ ಕಂಡುಕೊಂಡ ಸಾಕಷ್ಟು ಸತ್ಯಗಳು ಜೀವನದ ಸಿದ್ಧಾಂತಗಳಾಗಿ ಓದುಗರಿಗೆ ಪಾಠ ಹೇಳುವುದರ ಜತೆಗೆ ಸ್ಫೂರ್ತಿಯನ್ನು ತುಂಬುತ್ತವೆ.
ಕೊನೆಯ ಅಧ್ಯಾಯ ' ನಾನು, ನೀವು ಮತ್ತು ಪುಸ್ತಕ' ದಲ್ಲಿ ಲೇಖಕರು ತಮ್ಮ ಪುಸ್ತಕದೊಡಗಿನ ನಂಟು ಬೆಳೆದ ರೀತಿಯನ್ನು, ಪುಸ್ತಕ ಪ್ರಕಟನೆಯ ಹೆರಿಗೆ ನೋವನ್ನು ವಿವರಿಸುತ್ತಾ, ಪ್ರಕಟನೆ, ಮಾರ್ಕೆಟಿಂಗ್, ಪ್ರಮೋಷನ್, ಮಾರಾಟಕ್ಕೆ ತಾನು ಅನುಸರಿಸಿ ಗೆದ್ದ ಮಾದರಿಯೂ ಎಷ್ಟೋ ಹೊಸ ಬರಹಗಾರರಿಗೆ ದಾರಿದೀಪ. ತಾನು ಬೆಳೆಯುವುದನ್ನಷ್ಟೇ ನೋಡಿಕೊಳ್ಳುವ ಸ್ವಾರ್ಥಿಗಳಿರುವ ಈ ಸಮಾಜದಲ್ಲಿ ಅನಂತ್ ಕುಣಿಗಲ್ ಎಂಬ ಯುವಕನ ಹೃದಯ ವಿಶಾಲತೆಗೆ ಕೈ ಮುಗಿಯಬೇಕು. 'ಅವ್ವ ಪುಸ್ತಕಾಲಯ'ವೆಂಬ ಪ್ರಕಾಶನ ಸಂಸ್ಥೆ ಹಾಗೂ 'ಅಪರಿಚಿತ ಓದುಗ'ರೆಂಬ ಕನ್ನಡ ಓದುಗರ ಗುಂಪನ್ನು ಕಟ್ಟಿ ಕನ್ನಡಕ್ಕಾಗಿ ತೆರೆ ಮರೆಯಲ್ಲಿ ಕೆಲಸ ಮಾಡುವ ಇಂತಹ ಯುವಕರ ಕೆಲಸಕ್ಕೆ, ಅವರೇ ಹೇಳುವಂತೆ, ಹೊಕ್ಕಳಿನಿಂದ ಅಂದರೆ ಅಂತಃಕರಣದಿಂದ ಥ್ಯಾಂಕ್ಸ್ ಹೇಳದಿದ್ದರೆ ನಮಗೆ ಬೆಲೆಯಿರುವುದಿಲ್ಲ. ಒಟ್ಟಲ್ಲಿ ಈ ಪುಸ್ತಕ, ಲೇಖಕರ ಒಂದಷ್ಟು ಭಾವುಕ, ಸ್ಫೂರ್ತಿದಾಯಕ ಬರಹಗಳ ಮಿನಿ ಅಟೋಬಯೋಗ್ರಪಿ. ಒಂದು ಚಂದದ ಪುಸ್ತಕ ಓದಿದ ಸವಿಭಾವ ನನ್ನದು. ಅಂತಹ ಓದು ನಿಮ್ಮೆಲ್ಲರದಾಗಲಿ.
ವತ್ಸಲಾ ಮಾನಸ ಚೆಂಬು
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.