ಹೇಳಾಕ ಹೋದವನ ಕತಿ: ಕುಮಾರ ಮಬ್ರುಮಕರ


-"ಜಗದೀಶ ಓದುಗೆಳೆಯರ ಬಳಗದವರು ಆಯೋಜಿಸಿದ್ದ ರಾಜಕುಮಾರ ಕುಲಕರ್ಣಿಯವರು ಬರೆದಿದ್ದ ಇಜ್ಜೋಡು ಮತ್ತು ಪಾತ್ರಗಳ ಕಥೆಗಳ ಕುರಿತು ಓದಿ ಅಭಿಪ್ರಾಯ ಹಂಚಿಕೊಳ್ಳುವ ಸಾಹಿತ್ಯದ ಒಂದು ಕಾರ್ಯಗಾರಕ್ಕ ಹಾಜರಾಗು ಅಂತ ಬುಲಾವ್ ನೀಡಿ ವಾಟ್ಸಪ್ ಗೆ ಕತಿ ಹಾಕಿದ್ದ...," ಎನ್ನುತ್ತಾರೆ ಕುಮಾರ ಮಬ್ರುಮಕರ. ಅವರು ಸಾಹಿತ್ಯದ ಕಾರ್ಯಗಾರದ ಕುರಿತು ಬರೆದಿರುವ ಅನಿಸಿಕೆ.

ತೀರಾ ಇನ್ನೊಬ್ಬರಿಗೆ ತೋರ್ಸಾಕಂತಿರು ವಾಟ್ಸಾಪ್ ಸ್ಟೇಟಸ್ ನೊಳಗ ನಾನ ಬರದ ಇಡತ್ತಿದ್ದ ಹನಿಗವನಗಳನ್ನು ಬಾಳ ದಿನದ ಮ್ಯಾಲೆ ಕಣ್ಣ ತಗದ ನೋಡಿ ಇವನು ಏನ ಬರಿತಾನಪ ಅಂತನಿಸಿ ಗೆಳೆಯ ಜಗದೀಶ ಓದುಗೆಳೆಯರ ಬಳಗದವರು ಆಯೋಜಿಸಿದ್ದ ರಾಜಕುಮಾರ ಕುಲಕರ್ಣಿಯವರು ಬರೆದಿದ್ದ ಇಜ್ಜೋಡು ಮತ್ತು ಪಾತ್ರಗಳ ಕಥೆಗಳ ಕುರಿತು ಓದಿ ಅಭಿಪ್ರಾಯ ಹಂಚಿಕೊಳ್ಳುವ ಸಾಹಿತ್ಯದ ಒಂದು ಕಾರ್ಯಗಾರಕ್ಕ ಹಾಜರಾಗು ಅಂತ ಬುಲಾವ್ ನೀಡಿ ವಾಟ್ಸಪ್ ಗೆ ಕತಿ ಹಾಕಿದ್ದ....

ಬ್ಯಾರೆ ಬ್ಯಾರೆ ಗದ್ದಲದೊಳಗ ಮರತ ಕುಂತಿದ್ದ ನನಗ, ಆ ಕಾರ್ಯಗಾರ ಇವತ್ತ ಐತಿ ಅನ್ನೂದು ಅಂದ ಮುಂಜಾನೇ ಗೊತ್ತಾಗಿತ್ತು ಅಷ್ಟೊತ್ತಿಗೆ ಬಾಳ ಹೊತ್ತಾಗಿತ್ತು. ಕಡಿಕ ಅವಸರದಾಗ ಇಜ್ಜೋಡು ಒಂದ ಅಂದ್ರ ಒಂದ ಕಥೆ ಓದ್ಕೊಂಡು ತಿಳಿದಿದ್ದ ಬರಬರ ಬರಕೊಂಡು ಅಲ್ಲಿಹೋಗಿ ಏನು ಹೇಳೂದು? ಹ್ಯಾಂಗ ಹೇಳುದಂತ ಪಾತರಗಿತ್ತಿ ಹಿಡಿಯಾಕಂತ ಬೆನ್ನಬಿದ್ದ ಹುಡುಗ ಜಗತ್ತ ಮರತಂಗ ಅದರದ ಗುಂಗನ್ಯಾಗ ಮನಿಯಿಂದ ಹೊಂಟ ನಾನು, ಐದಾರ ನಿಮಿಷದೊಳಗ ಅವರ ಹೇಳಿದ ಜಾಗ ತಲುಪಿದ್ಯಾ.

ಹೋಗಿ ಅಚ್ಚಿಕಡೆವೊಮ್ಮೆ ಇಚ್ಚಿಕಡೆವೊಮ್ಮೆ ನೋಡಿದ್ಯಾ ನನಗ ಬರಾಕ ಹೇಳಿದ್ದ ದೋಸ್ತ ಜಗದೀಶನ ಯಾವ ಸುಳಿವು ಕಾಣಲಿಲ್ಲ, ನಾನ ಮುಂದುವರೆದ ಬಳಗದ ಗೆಳೆಯರೊಬ್ಬರಿಗೆ ಹಿಂಗ ರಿ ಸರ್ ನಾನು ಜಗದೀಶ್ ನ ಫ್ರೆಂಡ್ ಅನ್ನೋದ್ರಾಗ ಬರ್ರಿ ಬರ್ರಿ ಅಂದ ಅವರ ಬಾಯಿಸ್ವರನಾ ಹಿಂಬಾಲಿಸಿ ತಡ ಮಾಡಲಾರದ ಒಳಗೊಳಗ ಒಂದೀಟ ಹಿಂದಮುಂದ ಅನಿಸಿದರೂ ಗುಂಪುನ್ಯಾಗ ಗೋವಿಂದ ಅಂತ ಗುಂಡಕ ಕುಂತ ವೇದಿಕಿಯೊಳಗ ಎಲ್ಲಾರ ಮುಖವೊಮ್ಮೆ ನೋಡಿ ಕುಂತ ಉಸಿರ ಬಿಡಬೇಕು ಅನ್ನೂದ್ರಾಗ ಉಸಲ ಮತ್ತ ಗಟ್ಟಿ ಹಿಡ್ಕೊಬೇಕಾತು ಯಾಕಂದ್ರ ಅಲ್ಲಿದ್ದವರೆಲ್ಲ ಅಗದಿ ಆತ್ಮೀಯ ಅಪರಿಚಿತರೇ...

ಈ ಕಡೆ ನನಗ ಕರೆಕ್ಟ್ ಟೈಮಿಗೆ ಬಾ ಅಂತ ಹೇಳಿ ತಾಸ ಆದ್ರೂ ಪ್ರತ್ಯಕ್ಷನಾಗದ ದೋಸ್ತ ನಾನು ಸಣ್ಣವಿದ್ದಾಗ ತುಂಬಿದ ಸಂತಿಯೊಳಗ ಗೊತ್ತು ಪರಿಚಯ ಇಲ್ಲದ ಅಂಗಡಿಯೊಳಗ ಕುಂದ್ರಿಸಿ ಜಲ್ದಿ ಬರ್ತೀನಿ ಅಂತ ಗಪ್ ಆಗ್ತಿದ್ದ ನಮ್ಮಪ್ಪನಂಗ ಅನಸಾಕತ್ತಿದ್ದ. ಇದರ ನಡಬರಕ ನನ್ನ ಎದಿ ರೇಡಿಯೋ ಇದ್ರ ಕಂದುಬಣ್ಣ, ಕೋಲುಮುಖ, ಎತ್ತರಮೈಕಟ್ಟು ತುಟಿಮರಿಯೊಳಗ ನಕ್ಕೋತಬರು ಛೇಹರಾಪಟಿ ಇರೋವಾ ಒಳಗ ಬಂದನೇನು ನೋಡ ಅಂತ ಕಾಣಲಾರದ ಅವನ ವಿವರವನ್ನ ಕಣ್ಣಿಗೆ ಹೇಳಾಕತ್ತಿತ್ತು.

ಈ ಕಡೆ ಪ್ರಾರ್ಥನೆಯೊಂದಿಗೆ ಸಭೆ ಚಾಲು ಆತು, ಅಷ್ಟ್ರೊಳಗ ಬಳಗದ ಇನ್ನೊಬ್ಬ ಗೆಳೆಯ ಏರುದನಿಯೊಳಗ ಎಲ್ಲಾರೂ ಸಂಕ್ಷಿಪ್ತ ನಿಮ್ಮ ನಿಮ್ಮ ಐದೇಶಿ ನೀವ ಹೇಳ್ರಿ ಅಂತ ಸ್ವ ಪರಿಚಯ ಚಾಲೂ ಮಾಡೇ ಬಿಟ್ರು. ಅಲ್ಲಿದ್ದವರೆಲ್ಲ ಒಬ್ಬರಾದ ಮೇಲೆ ಒಬ್ಬರಂಗ ತಮಗಿರುವ ಹೆಸರಿನ ಜೊತಿ ತಾವು ಮಾಡಿದ ಹೆಸರು, ತಾವು ಮಾಡು ಉದ್ಯೋಗ, ಜೊತಿಗೆ ತಾವು ಮಾಡುವ ಕೆಲಸ ಹಂಗ ತಮ್ಮ ತಮ್ಮ ಸಾಹಿತಿಕ ವಜನಾ ಹೇಳಿದ್ದು ಕೇಳಿ ಬರೆ ನಾಲ್ಕೈದ ಕವನ ಬರದ ನನ್ನು ನಾನ ಓದಿ ಅಲ್ಲಿ ಕುಂತ ನಾನೇನು ಹೇಳಲಿ ಅಮಾಯಕನಯ್ಯ ಅನ್ನುವಷ್ಟ ನನಗ ನಾನ ವಜ್ಜೆಯಾಗಿ ಕುಂತಿದ್ದು ಖರೆಯಿತ್ತು.

ಸಾಲ್ಯಾಗ ಮುಂದಿನ ಬೆಂಚಿಗೆ ಕುಂದ್ರು ನಾಕಮಂದಿ ಶಾನೆ ಹುಡುಗುರು ಮಾಸ್ತರ ಕೇಳಿದ್ದ ಹೇಳುದ್ರಾಗ ಹಿಂದಕುಂತ ಹುಡುಗರು ತಮ್ಮ ಪಾಳೆ ಬರುದ್ರಾಗ ಯಾವುದರ ಒಂದ ಸರಳ ಇದ್ದಿದ್ದ ಕ್ಯಾಚ್ ಮಾಡಿ ಸರ್ ಮುಂದ ಹೇಳಿ ಮ್ಯಾಚ್ ಮಾಡುವಂಗ
ನನ್ನ ಪಾಳೆ ಬಂದಾಗ ಅಗದಿ ಸರಳ ಹೆಸರು, ಮಾಡು ಕೆಲಸದ ಬಗ್ಗೆ ಅಷ್ಟ ಹೇಳಿ ನನ್ನದು ಮುಗೀತು ಇನ್ನ ನಿಮ್ದಹೇಳ್ರಿ ಅನ್ನುವಂಗ ಮಗ್ಗಲ ಕುಂತವರ ಮಾರಿನೋಡಿ ಮುಂದಿನವರ ಪರಿಚಯ ಕೇಳ್ಕೋತ ಸುಮ್ನೆ ಕುಂತ್ಯಾ.

ಪರಿಚಯ ಮುಗೀತು ಅನ್ನೂದ್ರಾಗ ಅದರ ಹಿಂದ ಕಥೆಗಳ ಕುರಿತು ಮಾತು ಚಾಲೂ ಆದ ಮ್ಯಾಲ ನನಗ ಗೊತ್ತಾತು ಮೊದಲ ಕತಿ ಇಜ್ಜೋಡಿನೊಳಗ ಬದರಿನಾಥರು ಉರ್ಲ ಹಾಕೊಂಡು ಕತಿ ಪರ್ಲ್ ಹರ್ಕೊಂಡಿಲ್ಲ, ಈ ಕಥೆ ಮುಂದಿನ ಪಾತ್ರಗಳ ಕಥೆಗೆ ತಳಕ ಹಾಕ್ಕೊಂಡೈತಿ ಅಂತ. ಅಲ್ಲಿ ಎರಡು ಕಥೆ ಓದಿ ಬಂದವರ ಮಾತು ಕೇಳಿ ಇನ್ನೊಂದು ಕಥೆ ಓದಿ ಬರಲಾರದ ನನ್ನ ತಪ್ಪನ್ನ ನಾನ ಕ್ಷಮಾ ಮಾಡಕೊಂಡು ಓದಕೊಂಡು, ಬರ್ಕೊಂಡು ಹೋಗಿದ್ದ ಎಲ್ಲಾನು ಹೇಳಾಕ ಆಗದಿದ್ದರೂ ತಿಳಿದಿದ್ದು, ಬರದಿದ್ದು ಹೊಳದಿದ್ದು ಹೇಳಿ ಹಗುರಾಗಿ ಬ್ಯಾರೆದವರ ದೃಷ್ಟಿ ಒಳಗಿನ ಕತಿ ಕುರಿತ ಎಲ್ಲರ ಮಾತು, ಲೇಖಕರ ಮಾತು, ಸಂವಾದ ಮುಗಿಯತನಕ ತೀರಾ ಅಮಾಯಕ ಕೇಳುಗನಾಗಿ ಬದುಕಿನ ತೀರ ಹೊಚ್ಚ ಹೊಸ ಅನುಭವಕ್ಕ ನನ್ನನ್ನು ನಾನು ತೆರಕೊಂಡು ಕಾರ್ಯಗಾರ ಮುಗಿಸಿ ಬರಬೇಕಾದ್ರ ಹೊಸ ಗೆಳೆಯರೆಲ್ಲರಿಗೂ ಕೈ ಜೊತಿಗೆ ಮನಸ್ಸು ಬೆರೆಸಿ, ಬಾಳದಿನ ಆದಮ್ಯಾಲ ನನಗ ನನ್ನನ್ನ ಜೋಡ ಮಾಡಿದ ಓದು ಗೆಳೆಯರ ಬಳಗಕ್ಕ ಧನ್ಯವಾದ ಹೇಳಿ, ಎಲ್ಲರ ಜೊತೆಗೆ ಒಂದು ಕಪ್ ಹಿರುದ್ರಾಗ ನಾನೇ ಖುದ್ದು ಓಡಾಡಿ ಜೋಡ ಮಾಡಕೊಂಡ ಜನಮದ ಜೋಡನಿಂದ ಫೋನ್....ಎಲ್ಲೆದಿರಿ ಮನಿ ಖಬರರ ಐತಿಲ್ಲೊ ಬರ್ರಿ ಊಟಕ್ಕ ಲಗೂನ ಅಂತ ಆ ಕಡೆಯಿಂದ ಒಂದ ಒಂದು ಮಾತು.. ತಾಟ ಹಚ್ಚುದ್ರಾಗ ಮನೆಯೊಳಗಿದ್ಯಾ ಜೋಡಿಲೆ ಉಣ್ಣಾಕ.....

ಕುಮಾರ ಮಬ್ರುಮಕರ

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...