ಹಳ್ಳಿಯ ಸಾಂಸ್ಕೃತಿಕ ಅವಸಾನದ ವಿಷಾದ ಚಿತ್ರಣಗಳನ್ನು ಇಲ್ಲಿನ ಕತೆಗಳು ಕಟ್ಟಿಕೊಡುತ್ತವೆ


"ಕಥಾ ನಿರೂಪಣೆ ಅತ್ಯಂತ ವಾಸ್ತವದ ನೆಲೆಯಲ್ಲಿ ಓದುಗನೂ ಕೂಡ ಕಥೆಯ ಭಾಗವಾಗುವಂತೆ ಕಥೆಗಾರ ಕರೆದುಕೊಂಡು ಹೋಗುತ್ತಾರೆ. ಕಾಡಿನ ಸೂಕ್ಷ್ಮ ವಿವರಗಳಾದ ಮರಗಳು, ಕೀಟಗಳು, ಕಾಡು ಪ್ರಾಣಿಗಳು ಸಕಲ ಜೀವ ವೈವಿಧ್ಯಗಳ ವರ್ಣನೆ ನಮ್ಮ ಕಣ್ಣ ಮುಂದೆ ನಿಂತಂತೆ ವರ್ಣಿಸಲಾಗಿದೆ," ಎನ್ನುತ್ತಾರೆ ಉದಯ ಕುಮಾರ್ ಹಬ್ಬು. ಅವರು ಸ್ವಾಮಿ ಪೊನ್ನಾಚಿ ಅವರ ‘ದಾರಿ ತಪ್ಪಿಸುವ ಗಿಡ’ ಕೃತಿ ಕುರಿತು ಬರೆದ ವಿಮರ್ಶೆ.

ಪೊನ್ನಾಚಿ ಇದು ಮಲೆಯ ಮಹದೇಶ್ವರ ದಟ್ಟ ಅರಣ್ಯ ಪ್ರದೇಶದ ಒಂದು ಪುಟ್ಟ ಹಳ್ಳಿ. ಚಾಮರಾಜನಗರ ಜಿಲ್ಲೆಯಲ್ಲಿದೆ. ಇದು ತಮಿಳುನಾಡು ಗಡಿಯಲ್ಲಿರುವ ಒಂದು ಕಾಡಳ್ಳಿ. ಮಲೆಯ ಮಹದೇಶ್ವರ ಬೆಟ್ಟವೆ ಕಾಡುಗಳ್ಳ ವೀರಪ್ಪನ್ ನ ಕಾರ್ಯಕ್ಷೇತ್ರ. ಇಲ್ಲಿ ಸೋಲಿಗರು ಎಂಬ ತೀರ ಹಿಂದುಳಿದ ಜನಾಂಗವಿದೆ. ದಟ್ಟ ಕಾಡು. ಕಾಡು ಹಂದಿ, ಸೀಳು ನಾಯಿಗಳು, ಹುಲಿ ಚಿರತೆಗಳು ಇರುವ ಕಾಡು. ಆನೆಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಆನೆಗಳ ಬೇಟೆಯೆ ವೀರಪ್ಪನ್ ನ ಮುಖ್ಯ ದಂಧೆಯಾಗಿತ್ತು. ಸೋಲಿಗರು ಮತ್ತು ಪೊನ್ನಾಚಿ ಹಳ್ಳಿಯವರೆ ವೀರಪ್ಪನ್ ಗ್ಯಾಂಗಿಗೆ ಅನ್ನ-ಆಹಾರಗಳನ್ನು ಒದಗಿಸುವವರು. ವೀರಪ್ಪನ್ ಇವನು ಅನೂಚಾನವಾಗಿ ಆನೆ ಬೇಟೆಯಾಡಲು ಈ ಸೋಲಿಗರ ಸಹಾಯ ಅಪಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ವಾಮಿ ಪೊನ್ನಾಚಿ ಯವರು ತಮ್ಮ ಅನುಭಗಳನ್ನು ಕಲಾತ್ಮಕ ಕಥೆಗಳನ್ನಾಗಿ ಹೆಣೆದಿದ್ದಾರೆ‌. ದಟ್ಟ ಕಾಡಿನ ಅನುಭವ, ಅಮವಾಸ್ಯೆಯ ಕತ್ತಲಲ್ಲೂ ಹುಣ್ಣಿಮೆಯ ಬೆಳದಿಂಗಳಿನಲ್ಲೂ ಕಾಡು ಕಂಡು ಬರುವ ಬಗೆಯನ್ನು ತುಂಬ ಚಿತ್ರವತ್ತಾಗಿ ವರ್ಣಿಸಿದ ಕಥೆಗಾರರು ಆನೆ ಮುಳ್ಳಂದಿ ಕಾಡು ಹಂದಿಗಳ ಮನೋವ್ಯಾಪಾರವನ್ನೂ ಸೊಗಸಾಗಿ ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ ‌

ಈ ಪರಿಸರದಲ್ಲಿ ವಾಸಿಸುತ್ತ ಮನುಷ್ಯರ ಚಿತ್ರಗಳು ಅವರ ಮನೋಲೋಕಗಳನ್ನು, ಅವರ ಸಾಹಸ ಪ್ರವೃತ್ತಿ, ಸೇಡು ಪ್ರತೀಕಾರ, ಮೇಲ್ವರ್ಗದ ಜಾತಿಗಳ ಶ್ರೇಷ್ಠತೆಯ ವ್ಯಸನ, ಕೀಳು ಜಾತಿ ಎಂದು ದಲಿತರನ್ನು ತುಚ್ಛವಾಗಿ ಕಾಣುವುದು, ದಲಿತರು ಕಲಿತರೆ ಹೊಟ್ಟೆ ಉರಿ ಪಡುವುದು, ಹೆಣ್ಣು ತನ್ನ ಸಂಸಾರವನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಇವೆಲ್ಲ ಮನುಷ್ಯ ಲೋಕದ ನೈಜಚಿತ್ರಣಗಳೇ ಆಗಿವೆ‌.

ಕಥಾ ನಿರೂಪಣೆ ಅತ್ಯಂತ ವಾಸ್ತವದ ನೆಲೆಯಲ್ಲಿ ಓದುಗನೂ ಕೂಡ ಕಥೆಯ ಭಾಗವಾಗುವಂತೆ ಕಥೆಗಾರ ಕರೆದುಕೊಂಡು ಹೋಗುತ್ತಾರೆ. ಕಾಡಿನ ಸೂಕ್ಷ್ಮ ವಿವರಗಳಾದ ಮರಗಳು, ಕೀಟಗಳು, ಕಾಡು ಪ್ರಾಣಿಗಳು ಸಕಲ ಜೀವ ವೈವಿಧ್ಯಗಳ ವರ್ಣನೆ ನಮ್ಮ ಕಣ್ಣ ಮುಂದೆ ನಿಂತಂತೆ ವರ್ಣಿಸಲಾಗಿದೆ.

ಕಥೆಗಾರ ಪ್ರತಿ ಕಥೆಗೂ ಕಂಡೂ ಕಾಣದಂತೆ ಒಂದು ಚೌಕಟ್ಟು ಹಾಕಿಕೊಂಡು ಯಾವುದೊ ಒಂದಲ್ಲಾ ಒಂದು ಸಂದೇಶ ಕಥೆಗಳಲ್ಲಿ ಅಡಗಿದ್ದುದನ್ನು ನಾವು ಕಾಣುತ್ತೇವೆ. ಎಲ್ಲ ಕಥೆಗಳೂ ಕತೆಗಾರನ ಅನುಭವದ ಮೂಸೆಯಲ್ಲೆ ಎರಕ‌ ಹೊಯ್ದ ಕಲಾಕೃತಿಗಳು. ಪೊನ್ನಾಚಿಯ ಬುಡಕಟ್ಟು ಜನಾಂಗದವರ ಬದುಕು, ನಂಬಿಕೆಗೞು, ಮೂಢ ನಂಬಿಕೆಗಳು, ಸುಲಭವಾಗಿ ಸಿಗುವ ಹಣಕ್ಕಾಗಿ ಕೃಷಿಯುತ್ಪನ್ನ ಫಲವತ್ತಾದ ಗದ್ದೆಯನ್ನು ಲಾಭಬಡುಕ ಬಂಡವಾಳು ಶಾಹಿಗಳಿಗೆ ಮಾರಿ, ಹಣವೆಲ್ಲಾ ಖರ್ಚು ಮಾಡಿ ಅದೆ ಬಂಡವಾೞುದಾರನ ಕ್ವಾರಿಗೆ ದಿನಗೂಲಿ ಕೆಲಸಕ್ಕೆ ಹೋಗುವ ಒಂದು ಹಳ್ಳಿಯ ಸಾಂಸ್ಕೃತಿಕ ಅವಸಾನದ ಬದುಕಿನ ಹೂಬೆ ಹೂಬೆ ವಿಷಾದ ಚಿತ್ರಣಗಳನ್ನು ಇಲ್ಲಿನ ಕಥೆಗಳು ಓದುಗರಿಗೆ ಕಟ್ಟಿಕೊಡುತ್ತವೆ.

ಒಟ್ಟೂ ಹತ್ತು ಕಥೆಗಳಿವೆ. ಪೊನ್ನಾಚಿಯ ದಟ್ಟ ಕಾಡಿನ ಅನುಭವಚಿತ್ರಣ ನಮಗೆ ಹೊಸತು. ಅಲ್ಲಿನ ಮನುಷ್ಯರ ಚಿತ್ರ ವಿಶಿಷ್ಟವಾಗಿದ್ದಂತೆ ಕಂಡು ಬಂದರೂ ಎಲ್ಲ ಮನುಷ್ಯರ ಕತೆಗಳಂತೆ ಇವೆ‌. ಒಟ್ಟೂ ಹತ್ತು ಕಥೆಗಳಿವೆ. ಒಂದು ಇನ್ನೊಂದಕ್ಕಿಂತ ಕಥಾ ವಸ್ತುವಿನಲ್ಲಿ ನಿರೂಪಣೆಯಲ್ಲಿ ಕಥಾ ತಂತ್ರದಲ್ಲಿ ವಿಭಿನ್ನವಾದ್ದರಿಂದ ಓದುಗರನ್ನು ಆಕರ್ಷಿಸುತ್ತದೆ ಮತ್ತು ಚಿಂತನೆಗೀಡು ಮಾಡಿ ಹಲವು ದಿನ ಕಾಡುತ್ತವೆ‌.

ಮೊದಲ ಕಥೆ
ಗೋಣಿಮರದ ಕೊಂಬೆ ಇದರಲ್ಲಿ ಮ್ಯಾಜಿಕ್ ರಿಯಾಲಿಸಂ ತಂತ್ರವನ್ನು ಬಳಸಲಾಗಿದೆ‌. ಕಥಾನಿರೂಪಕ ಊರಿಗೆ ಹೊರಟವನು ಸುಹೇಲ್ ಎಂಬ ಗೆಳೆಯ ಧಾರ್ಮಿಕ ಸಂಘಟನೆಯ ಮಾರಕ ದಾಳಿಗೊಳಗಾಗಿ ಸತ್ತು ಹೋಗಿರುತ್ತಾನೆ. ಅವನ ಗೆಳೆಯ ನಿರೂಪಕ ರಾಘು ಗೆಳೆಯನನ್ನು ರಕ್ಷಿಸಲು ಹೋಗಿ ಅವನ ಕುತ್ತಿಗೆಯನ್ನೂ ಕಡಿರುತ್ತಾರೆ. ಹೀಗೆ ಸತ್ತ ಪಿಶಾಚಿಯಾದ ರಘು ಗೋಣಿ ಮರದ ಕೊಂಬೆಗಳಿಗೆ ತೂಗಾಡುವ ದೆವ್ವವಾಗಿರುತ್ತಾನೆ. ಕಥಾ ನಿರೂಪಕ ಬೆಂಗಳೂರಿನಿಂದ ಬಸ್ಸಿಗೆ ಬಂದು ಪೊನ್ನಾಚಿಗೆ ಹೋಗುವ ಬಸ್ಸಿಗೆ ಬಂದಿತ್ತಾನೆ. ಬಸ್ಸು ರಾತ್ರಿ ಎಂಟು ಗಂಟೆಗೆ ಅವನು ತಲುಪಿದ ಊರಿನಿಂದ ಪೊನ್ನಾಚಿಗೆ ಹೊರಡುತ್ತದೆ. ಆದರೆ ಅವನು ತಲುಪಿದಾಗ ಮಧ್ಯರಾತ್ರಿ. ಪೊನ್ನಚಿಗೆ ಆ ಬಸ್ ನಿಲ್ದಾಣದಿಂದ 14 ಕಿಲೋಮೀಟರ್ ದಟ್ಟ ಕಾಡಿನ ಮಧ್ಯೆ ನಡೆಯಬೇಕು. ಆಗ ಬಸ್ಸೇನೋ ಬಂತು. ಬಸ್ಸಿನಿಂದ ಆ ರಾತ್ರಿ ಮಹಿಳೆಯೊಬ್ಬಳು ಇಳಿಯುತ್ತಾಳೆ‌. ಅವಳು ತನ್ನ ಕ್ಷಣದ ಕತೆ ಹೇಳುತ್ತಾಳೆ. ಆ ಅಪರಾತ್ರಿಯಲ್ಲಿ 14 ಕಿ ಮಿ ದೂರ ಇರುವ ಪೊನ್ನಾಚಿಗೆ ನಡೆದುಕೊಂಡು ಹೋಗುವ ಧೈರ್ಯ ವಹಿಸುತ್ತಾಳೆ ಎಂದರೆ ಅವಳೂ ಸತ್ತಿದ್ದಾಳೆ. ಈ ಕಥೆಯಲ್ಲಿ ಕೋಮು ದ್ವೇಷದ ಹಿಂಸೆ ಮತ್ತು ಕೊಲೆಗಳ ಕುರಿತ ಉಲ್ಲೇಖವಿದೆ.

ಎರಡನೆಯ ಕತೆ ಹದಿನಾರು ಕಂಬದ ಮನೆ‌ ಇದು ಜೀತಕ್ಕಿದ್ದ ವ್ಯಕ್ತಿಯ ಮಗ ಎಂ ಎಲ್ ಎ. ಆಗಿ ಚುನಾಯಿತನಾದಾಗ ಬಾಲ್ಯದಲ್ಲಿ ಅವನನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಗೌಡರು ಅವನನ್ನು ತಮ್ಮ ಮನೆಗೆ ಆಹ್ವಾನವೀಯುತ್ತಾರೆ‌. ಅವನ ಹೆಸರು ಕರಿಯಪ್ಪ. ಬಾಲಕನಾಗಿದ್ದಾಗ ಅವನಿಗೆ ಗೌಡರ ಮನೆಯ ಕಂಬಗಳನ್ನು ಮುಟ್ಟಬೇಕು, ಗೌಡರು ಕುಳಿತ ಕುರ್ಚಿಯನ್ನು ಸ್ಪರ್ಷಿಸಬೇಕು. ಎಂದೆನಿಸುತ್ತಿತ್ತು. ಈಗ ಅವನಿಗೆ ಆ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಬರುತ್ತಿವೆ. ಗೌಡರ ಮಗ ಕರಿಯಪ್ಪನ‌ ಸಹಪಾಠಿಯಾಗಿದ್ದು ಅವನನ್ನು ತನ್ನ ಜೊತೆಗೆ ಊಟಕ್ಕಿಕ್ಕಬೇಕೆಂದು ಅವನನ್ನು ಆಟಕ್ಕೆ ಹಟ್ಟಿ ಒಳಗೆ ಸೇರಿಸಬೇಕೆಂದು ಪರಮೇಶಿ ಹಟ ಹಿಡಿದಾಗ ಅವನ ತಾಯಿ ಪಾರ್ವತಮ್ಮ," ಅವರು ಕೀಳು ಜಾತಿಯವರು. ಮನೆಗೆ ಸೇರಿಸ್ಕಬಾರ್ದು ಎಂದು ತಿಳಿ ಹೇಳಿದ್ದಳು.

ಈಗ ಎಂ ಎಲ್ ಏ ಆದ್ದರಿಂದ ಕರಿಯಪ್ಪನಿಗೆ ಗೌಡರ ಮನೆಯೊಳಗೆ ಹೋಗಿ ಪರಮೇಶಿ ಎದುರು ಇನ್ನೊಂದು ಕುರ್ಚಿಯ ಮೇಲೆ ವಿರಾಜಮಾನಾಗುವ ಕಾಲ. ದಲಿತನ ಒಳತೋಟಿಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಂಡಿದೆ‌. ಗೌರಿ ಈ ಕಥೆ ಹಳ್ಳಿಯಲ್ಲಿ ಶನಿದೇವರ ಅರ್ಚಕ ಜನರನ್ನು ಮೌಢ್ಯದಲ್ಲಿ ಮುಳುಗಿಸಿ ಅವರಿಂದ ಹಣ ಪೀಕಿಸಿ ವಂಚಿಸುವ ವ್ಯಕ್ತಿಯ ಕಪಟ ಗೊತ್ತಾಗುವುದೆ ಈ ಕತೆಯ ಧ್ವನಿಯಾಗಿದೆ‌. ದಾರಿ ತಪ್ಪಿಸುವ ಗಿಡ ಈ ಕತೆಯಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಭೀಭತ್ಸ ವರ್ಣನೆ ಓದುಗರನ್ನು ಮೋಹ ಗೊಳಿಸುತ್ತದೆ‌. ಕಾಡಿನಲ್ಲಿ ದಾರಿ ತಪ್ಪಿಸುವ ಗಿಡ ಅಂತ ಇರುತ್ತೆ. ಅದರ ಎಲೆಗಳನ್ನು ‌ತಿಂದರೆ ತಿಂದವನ ದಾರಿ ತಪ್ಪಿ ಎಲ್ಲೇಲ್ಲೋ ಹೋಗುತ್ತಾನಂತೆ. ನಮ್ಮೂರಿನಲ್ಲೂ ದಾಟುಬಳ್ಳಿ ಅಂತ ಇದೆ ಎಂದು ಹೇಳಿದ್ದು ಕೇಳಿದ್ದೇನೆ. ಅದನ್ನು ದಾಟಿದರೆ ಮನುಷ್ಯ ದಿಕ್ಕು ತಪ್ಪುತ್ತಾನಂತೆ‌.

ನಾಲ್ಕು ಕವೆಗಳ ಮೇಲೆ ಬಿದಿರು ಗಳ ಜೋಡಿಸಿ ಮಾಡಿದ ಅಟ್ಟಣಿಗೆಯ ಮೇಲೆ ಅಂಗಾತ ಮಲಗಿ ನಕ್ಷತ್ರಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದವನು ಊರಿನಿಂದ ಹದಿನೈದು ಮೈಲು ದೂರದರಲ್ಲಿರುವ ‌ಕಾಡಿನ ದೊಡ್ಡಿ ಅದು. ರೇಷನ್ ತರಲು ಮಾರನನ್ನು ಕಳಿಸಿದ್ದ. ಸಂಜೆ ತಿರುಗಿ ಬರಬೇಕಾದ ಮಾರನು ತಡ ರಾತ್ರಿಯಾದರೂ ಬಂದಿರಲಿಲ್ಲ. ಊರಲ್ಲೇ ಉಳಿದುಕೊಂಡಿರಬೇಕು. ಇಲ್ಲವೆ ದಾರಿಯಲ್ಲಿ ಆ ಗಿಡದ ಎಲೆ ಮೂಸಿ ದಾರಿ ತಪ್ಪಿಸಿಕೊಂಡಿರಬೇಕು. ಎಂದು ಶಿವಪ್ಪ ಯೋಚಿಸುತ್ತಾನೆ‌. ಕಾಡಿನಲ್ಲಿದ್ದ ದನದ ದೊಡ್ಡಿಗೆ ಕಿರುಬ ಬಂದು ಹಸುವನ್ನು ಕಚ್ಚಿಕೊಂಡು ಹೋಗುವುದು ಮಾಮೂಲು‌ "ವೀರಪ್ಪನ್ ಗ್ಯಾಂಗ್ ಬಂದರೆ ಹೇಗಾದರೂ ಒಂದು ನಾಡ ಬಂದೂಕು ಇಸಗೊಂಡು ಕದ್ದೂ ಮುಚ್ಚಿ ಫಾರೆಸ್ಟಿನವರಿಗೆ ಗೊತ್ತಿಲ್ಲದಂತೆ ಇಟ್ಟುಕೊಳ್ಳಬೇಕೆಂದು ತೀರ್ಮಾನಿಸಿದ್ದ. ಕಾಡುಗಳಲ್ಲಿ ಅಲೆಯುವ ವೀರಪ್ಪನ್ ಗುಂಪಿಗೆ ಇಂತಹ ದೊಡ್ಡಿಗಳೆ ಆಗಾಗ್ಗೆ ರಾಗಿ ಹಿಟ್ಟು, ಹಾಲು ಮೊಸರುಗಳ ಮೂಲವಾಗಿದ್ದು, ಬಂದು ಹೋಗುವುದು ಸಾಮಾನ್ಯವಾಗಿತ್ತು." ಪುಟ ಸಂಖ್ಯೆ,26

ಇಡೀ ಕತೆ ರಾತ್ರಿಯಿಡಿ ಶಿವಪ್ಪ ದೊಡ್ಡಿಯಲ್ಲಿ ದಟ್ಟ ಕಾಡಿನಲ್ಲಿ ಮಾರನಿಗಾಗಿ ಕಾಯುತ್ತ ಅಂತೂ ಅಪರಾತ್ರಿ ಮಾರ ಬಂದಾಗ ತಾನು ದಾರಿ ತಪ್ಪಿಸುವ ಗಿಡದ ಎಲೆಗಳನ್ನು ‌ತಿಂದ ಪರಿಣಾಮ ದಾರಿ ತಪ್ಪಿ ಎಲ್ಲೇಲ್ಲೋ ತಿರುಗಾಡಿ ದೊಡ್ಡಿಗೆ ಬಂದು ತಲುಪಿದ್ದರ ಬಗ್ಗೆ ಹೇಳುತ್ತಿದ್ದ. ಕತೆಯಲ್ಲಿ ಕಾಡಾನೆಯೊಂದು ಬಂದು ಶಿವಪ್ಪನ‌ ಅಟ್ಟಣಿಗೆಯನ್ನೆ ಪುಡಿ ಮಾಡಬಹುದೆಂಬ ಭಯದಿಂದ ಅವನು ಒಂಟಿ ಆನೆಯನ್ನು ಓಡಿಸಿದ ಬಗೆಯನ್ನು ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ. ರಾತ್ರಿ ಆನೆ ಬಂದಾಗ ಕೂಗುವ ಹಕ್ಕಿ, ಹೀಗೆ ರಾತ್ರಿ ಕಾಡಿನ ಅನುಭವವನ್ನೂ ಚಿತ್ರವತ್ತಾಗಿ ಕೊಡಲಾಗಿದೆ.

ಇಟ್ಟರೆ ಸಗಣಿಯಾದೆ
ಈ ಕತೆ ಜಾತಿಯಲ್ಲಿ ದೊಡ್ಡವರು ಗೋ ಎಂದರೆ ದೇವರು. ಅದನ್ನು ಕೊಂದು ತಿನ್ನಬಾರದು ಎಂಬ ಫತ್ವಾವನ್ನು ಧರ್ಮದ ಪಾಪ ಪುಣ್ಯದ ಹೆಸರಿನಲ್ಲಿ ಹೇರಿರುತ್ತಾರೆ. ಗೌಡರ ಸತ್ತ ದನವನ್ನು ಬಾಡು ಬೇಯಿಸಿ ತಿನ್ನುವವರಿಗೆ ಈ ಬೋಧನೆ ಮಾಡಿದರೆ ನ್ಯಾಯವೆ? ಇಲ್ಲಿ ವಿದ್ಯಾರ್ಥಿಯೊಬ್ಬನ‌ ಗುರು ಗೋವಿನ‌‌ ಮಹಿಮೆಯನ್ನು ಹೇಳಿದಾಗ ಇನ್ನು ದನದ ಮಾಂಸ ತಿನ್ನಬಾರದು ಎಂಬ ನಿಶ್ಚಯಕ್ಕೆ ಬರುತ್ತಾನೆ. ಆದರೆ ಗೌಡರ ಮನೆ ದನ ಸತ್ತಾಗ ಎಲ್ಲ ದಲಿತರೂ ಮಾಂಸದ ಪಾಲಿಗೆ ಹೋಗಿರುತ್ತಾರೆ. ಅವರಲ್ಲಿ ಈ ವಿದ್ಯಾರ್ಥಿಯ ತಾಯಿಯೂ ಒಬ್ಬಳು.
ಮನೆಯಲ್ಲಿ ಬಾಡು ಮಾಡಿದಾಗ ಹುಡುಗ ಅಮ್ಮನ ಒತ್ತಾಯಕ್ಕೆ ತಿನ್ನುತ್ತಾನೆ‌.
ಇದೊಂದು ವಿಡಂಬನಾತ್ಮಕ ಕತೆ

ಕರಿ ಕಲ್ಲು
ಈ ಕತೆ ಬಂಡವಳಶಾಹಿಗಳು ಹಳ್ಳಿಯ ಸಂಪತ್ತನ್ನು ದೋಚಿ ಅವರ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿ ಹಣದ ಆಮಿಷ ತೋರಿಸಿ ಮರುಳು ಮಾಡಿ ಶೋಷಣೆ ಮಾಡುವ ವಿಷಯವುಳ್ಳ ಕತೆ‌. "ಕರಿ ಕಲ್ಲಿಗಾಗಿ ಜಮೀನು ಖರೀದಿಸುವ ವಿಷಯದಲ್ಲಿ ಕರುಣಾಕರನ್ ತಡ ಮಾಡದೆ ಎಷ್ಟು ಬೇಕಾದರೂ ದುಡ್ಡು ಕೊಡುವ ವಿಷಯ ಸಿದ್ದಪ್ಪನಿಗೆ ಚೆನ್ನಾಗಿಯೇ ಗೊತ್ತಿತ್ತು. ತಡ ಮಾಡಿದರೆ ಮತ್ತೊಬ್ಬ ಕ್ವಾರಿ ಓನರ್ ವ್ಯವಹಾರ ಮುಗಿಸಿರ್ತಾನೆ‌" ಪುಟ ಸಂಖ್ಯೆ 47

ಈ ಮೊದಲ ಸಾಲಿನಲ್ಲಿ ಬಂಡವಳ ಹಾಕುವ ಕರುಣಾಕರನ್, ಏಜೆಂಟ್ ಸಿದ್ದಪ್ಪ ಮತ್ತು ಫಲವತ್ತಾದ ಈ ವರೆಗೆ ಅವರನ್ನು ಅನ್ನ ಹಾಕಿ ಸಲುಹಿದ ಗದ್ದೆಯನ್ನು ಮಾರಿ ಬರಿ‌ ಗೈಯಾಗುವ ರೈತರು‌. ಶಿವಪ್ಪನಿಗೆ ಜಮೀನನ್ನು ಖರೀದಿಸಲು ಕರುಣಾಕರನ್ ಐದು ಲಕ್ಷ ಅಡ್ವಾನ್ಸ್ ಕೊಟ್ಟು ಹೋದಾಗ ಶಿವಪ್ಪನ ಅಪ್ಪ ವೀರಪ್ಪಜ್ಜ ಹೇಳ್ತಾನೆ."ಲೇ ನನ್ ಮಗ್ನೆ, ನಾನೂ ನಿಮ್ಮವ್ವ ಎದೆ ಮುರ್ದು ಕಾಡ್ ಕತ್ತರಿಸಿ ಮಾಡ್ಕಂಡ್ ಜಮೀನು ಕಣ್ಲಾ ಅದು. ಐವತ್ತೊರ್ಸದಿಂದ ನಮ್ ಹೊಟ್ಟೆ ತುಂಬ್ಸಿ ನಿಮ್ಗೆಲ್ಲಾ ಒಂದು ದಾರಿ‌ ಮಾಡಿದ್ದು ಅದೇ ಜಮೀನು ಕಣ್ಲಾ. ಮಾರ್ತೀನಿ ಅಂತ ಬಂದ್ಬಿಟ್ಟ. ಹೋಗೋಗ್ ಕ್ಯಾಮೆ ನೋಡು" ಎಂದು ಬಯ್ದು ಕಳಿಸಿದರೂ ಮಗ ಶಿವಪ್ಪ ಜಮೀನನ್ನು ಮಾರಿ ಆ ಹಣದಲ್ಲೆ ಮಗಳ ಮದ್ವೇನಾ ವಿಜ್ರಂಭಣೆಯಿಂದ ಮಾಡಿ ಬರಿಗೈಯಾಗ್ತಾನೆ. ಶಿವಪ್ಪನ‌ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತದೆ‌. ಜಾಗತೀಕರಣದ ದುರಂತ ಇದು‌.

ನಾಮ್ದರೆ ಜೇನು
ಈ ಕತೆ ಪೊನ್ನಚಿಯ ಹಲವು ಜನರಿಗೆ ಜೇನು ಕೊಯ್ಯುವ ವೃತ್ತಿ ಚೆನ್ನಾಗಿ ಗೊತ್ತು. ಆ ವೃತ್ತಿಯ ಸಕಲ ವಿವರಗಳೂ ಈ ಕತೆಯಲ್ಲಿ ಸಮೂಲಾಗ್ರವಾಗಿ ವರ್ಣಿಸಲಾಗಿದೆ‌. ಜೇನು ಕೊಯ್ಯುವುದರಲ್ಲಿ ಸೋಲಿಗರು ಹೆಸರುವಾಸಿಗಳು. ಈ ಜೇನು ಕೊಯ್ಯಲು ಶಂಕ್ರಣ್ಣ ಮಲ್ಲೇಶ ಹೆದರುಪುಕ್ಕಲ ನಾಗ ಮೂವರೂ ನಾಮ್ದರೆ ಬಂಡೆಗಲ್ಲಿನಲ್ಲಿ ಜೇನು ಕೊಯ್ಯಲು ಹೊರಡುತ್ತಾರೆ‌. ಶಂಕ್ರಣ್ಣ ಜೇನು ಕೊಯ್ಯಲು ಬಂಡೆ ಮೇಲೆ ಹತ್ತಿದಾಗ ಮಲ್ಲೇಶ ಶಂಕ್ರಣ್ಣನ್ನು ಏಣಿ ತಪ್ಪಿಸಿ ಬೀಳಿಸಿ ಸಾಯಿಸಬೇಕೆಂದು ಯೋಚಿಸುತ್ತಾನೆ. ಯಾಕೆಂದರೆ ‌ಶಂಕ್ರಣ್ಣ ಮಲ್ಲೇಶನ ವಿಧವೆ ತಂಗಿಗೆ ಪ್ರೀತಿಯಾಟ ಆಡಿ ಅವಳನ್ನು ಬಸಿರು ಮಾಡಿದ್ದ. ಅವಳು ಮರ್ಯಾದೆಗೆ ಹೆದರಿ ನೇಣು ಹಾಕಿಕೊಂಡು ಸತ್ತಿದ್ದಳು.‌ಆದರೆ ಮಲ್ಲೇಶ ಸಾಯಿಸುವ ನಿರ್ಧಾರವನ್ನು ಬಿಡುತ್ತಾನೆ. ಆದರೆ ಮಲ್ಲೇಶನೆ ಬಂಡೆಯಿಂದ ಕೆಳಗೆ ಬಿದ್ದು ಅಪ್ಪಳಿಸಿ ತಲೆ ಒಡೆದು ಸಾಯುತ್ತಾನೆ.

ನಿಂಬೆ ಮತ್ತು ದೂಳುತನದ ಪಾಕೆಟ್ಟು
ಇದು ಮಂತ್ರವಾದಿಗಳ ವಂಚನೆಗಳನ್ನು ವಿಡಂಬನೆ ಮಾಡುವ ಕತೆ‌. ಸಿದ್ದವ್ವ ಮತ್ತು ತಂಬೂರಿ ಮಾದ ಈ ಕತೆಯು ನಪುಂಸಕ ಗಂಡನನ್ನು ಕಟ್ಟಿಕೊಂಡು ಬೇರೆ ಯಾರಿಂದಲು ಇಬ್ಬರು ಮಕ್ಕಳನ್ನು ಹಡೆದು ಸಂಸಾರವನ್ನು ತೂಗಿಸಿಕೊಂಡು ಹೋಗುವ ಸಿದ್ದವ್ವ ಅವಳ ಮನೆಗೆ ಬರುವ ತಂಬೂರಿ ಮಾದ. ಅವಳ ಮೊದಲ ಮಗ‌ ಅಪ್ಪನಂತೆ ಬೇಜವಾಬ್ದಾರಿ. ಅವನಿಗೆ ಹೆಣ್ಣು ತಂದು ಸಂಸಾರಕ್ಕೆ ಕಟ್ಟುವ ಅವಳ ಪ್ರಯತ್ನ ವಿಫಲವಾಗುತ್ತದೆ. ಒತ್ತಾಯದಿಂದ ಮಗನಿಗೆ ಮದುವೆ ಮಾಡುತ್ತಾಳೆ. ಸೊಸೆ ಹಿರಿಯ ಮಗನ ಗೆಳೆಯನೊಟ್ಟಿಗೆ ಸಂಬಂಧ ಬೆಳೆಸಿಕೊಂಡು ಮಗುವನ್ನು ಹೆರುತ್ತಾಳೆ ಮತ್ತು ಪ್ರಿಯಕರನೊಟ್ಟಿಗೆ ಓಡಿ ಹೋಗುತ್ತಾಳೆ. ಮಗ ಶಿವಪ್ಪ ಮನೆ ಬಿಟ್ಟು ಹೋಗುತ್ತಾನೆ..ಮಗನನ್ನು ಕಳೆದುಕೊಂಡ ತಾಯಿ ಶಾಶ್ವತವಾಗಿ ಕೊರಗುತ್ತಾಳೆ. ತನ್ನ ಸೊಸೆ ತನ್ನ ಹಾಗೆ ಬದುಕಬಹುದಿತ್ತು ಎಂದು ತಂಬೂರಿ ಮಾದನಿಗೆ ಹೇಳುತ್ತಾಳೆ. ದೇವರ ಕನಸು ಇದು ದಲಿತ ಕಲಿತ ನೌಕರನು ದೇವರಲ್ಲಿ ನಂಬಿಕೆ ಇಲ್ಲದವನು. ಆದರೆ ಅವನ ಕನಸಿನಲ್ಲಿ ಮಲೆಯ ಮಹಾದೇವನು ಬಂದು ತನ್ನ ದೇವಸ್ಥಾನ ಕಟ್ಟಿಸು ಎಂದು ಸತತ ಮೂರು ದಿನ ಬರುತ್ತಾನೆ. ಊರ‌ ಗೌಡರು ದೇವಸ್ಥಾನ ಕಟ್ಟಿಸಲು ಮನಸ್ಸು ಮಾಡಿದರೂ ಊರಿನ ಮೇಲ್ಬರ್ಗದ ಜನರು ಮಾರಿಗುಡಿಯ ಅರ್ಚಕ ದಲಿತನೊಬ್ಬ ದೇವಸ್ಥಾನ ಕಟ್ಟಿಸುವುದಕ್ಕೆ ಅನುಮತಿ ಕೊಡುವುದಿಲ್ಲ‌‌.‌ ದೇವಸ್ಥಾನ ಕಟ್ಟಿಸಲು ಜಮೀನು ಕೊಡುತ್ತೇನೆಂದ ‌ಗೌಡರೂ ಊರ ಜನರ ಮಾತು ಕೇಳಿ ತೆಪ್ಪಗಾಗುತ್ತಾರೆ‌.

ಆದರೆ ಮೂರ್ತಿ ದಲಿತ ನೌಕರ ಪಕ್ಕದ ಊರಿನ ಗೌಡರಿಗೆ ಮನವರಿಕೆ ಮಾಡಿ ಜಮೀನು ಪಡೆದುಕೊಂಡು ಸಾಲ ಮಾಡಿ ದೇವಸ್ಥಾನ ಕಟ್ಟಿಸುತ್ತಾನೆ‌‌. ಮಹಾದೇವನ ಮೂರ್ತಿ ಅರ್ಚಕರ ಸಹಾಯದಿಂದ ಪ್ರತಿಷ್ಠಾಪನೆಗೊಳ್ಳುತ್ತದೆ‌. ನಂತರ ದೇವರ ಪೂಜೆ ಮಾಡುವವರು ಯಾರು ಎಂಬ ಪ್ರಶ್ನೆ ಬಂದಾಗ ಮೂರ್ತಿಯೆ ಮಾಡಲಿ ಎಂದು ಒಬ್ಬ ಹೇಳುತ್ತಾನೆ. ಅದಕ್ಕೆ ಮಾರಿಗುಡಿಯ ಅರ್ಚಕ ವಿರೋಧಿಸುತ್ತಾನೆ‌ ಆಗ ಮೂರ್ತಿ ಅಭಿಮಾನಿಗಳು ಮತ್ತು ಮಾರಿಗುಡಿ ಅರ್ಚಕರ ಅಭಿಮಾನಿಗಳ ನಡುವೆ ಹೊಯ್ ಕೈ ಪ್ರಾರಂಭವಾಗಿ ಅದು ಪೋಲಿಸ್ ಠಾಣೆ ತಲುಪಿ ಪೋಲಿಸರು ದೇವಸ್ಥಾನಕ್ಕೆ ಬೀಗ ಹಾಕಿಬಿಡುತ್ತಾರೆ. ಒಳಗೆ ಕುಳಿತ ಮಹಾದೇವ ನಗುತ್ತಿದ್ದ‌ ಈ ಸಾಲಿನಿಂದ ಕತೆ ಕೊನೆಗೊಳ್ಳುತ್ತದೆ‌. ಕಥೆಗಳು ಕೆಲವು ಈ ಹಿಂದೆ ನಡೆದ ಬರೆದ ಕಥೆಗಳೆಂದೆ ಅನಿಸಿದರೂ ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ. ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌ಓದಗರಿಗೆ ಹೊಸ ಅನುಭವ ನೀಡುತ್ತದೆ.

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...