"ಇದು ಜೋಗಿಯವರ ನೂರನೆಯ ಪುಸ್ತಕ. ನೂರನೆಯ ಪುಸ್ತಕ ಬರೆಯುತ್ತಿರುವ ಹೊಸ್ತಿಲಲ್ಲೂ ಅವರು ತಮ್ಮೊಳಗಿನ ಆ ಹುಡುಗನನ್ನು ಜೀವಂತವಾಗಿಟ್ಟುಕೊಂಡಿರುವುದು, ಬರೆದು ಬರೆದೇ ಬದುಕಿನ ಒಳಚಾಚುಗಳನ್ನು ವಿಸ್ತರಿಸಿಕೊಳ್ಳ ಹೊರಟಿರುವ ಆ ಬಾಲಕನ ಅದೃಷ್ಟ. ತೀವ್ರವಾಗಿ ಬರೆಯುವುದೇ ತೀವ್ರವಾಗಿ ಬದುಕಲು ಇರುವ ಏಕೈಕ ದಾರಿ ಎಂಬುದ ಕಾಣುತ್ತಿರುವ ಪರಿ," ಎನ್ನುತ್ತಾರೆ ಕಾವ್ಯ ಕಡಮೆ. ಅವರು ಜೋಗಿ ಅವರ 100ನೇಯ ‘ಇಳಂಗೋವನ್’ ಕೃತಿಗೆ ಬರೆದ ಮುನ್ನುಡಿ.
ಇಲ್ಲಿ ಒಬ್ಬ ಹುಡುಗನಿದ್ದಾನೆ. ಎಂಟೋ-ಹತ್ತೋ ವರ್ಷದವನು. ದಿನವೆಲ್ಲ ಕಾಡು ಸುತ್ತಿ, ಒದ್ದೆ ಮಣ್ಣಿನಲ್ಲಿ ತನ್ನ ಹೆಜ್ಜೆ ಗುರುತುಗಳ ಒಣಗಲು ಬಿಟ್ಟು ಬಂದವನು. ಕೊಳವೊಂದರ ರೆಂಜೆ ಹೂವುಗಳಾವೃತ ತೀರದಲಿ ಕುಳಿತಿದ್ದನೀತ ಸಂಜೆಯಿಡೀ. ಧುಮುಕಲೇ ಅಂತ ಯೋಚಿಸುತ್ತಿದ್ದ. ಈಗ ಈ ರಾತ್ರಿ, ಹೀಗೆ ದೀಪ ದಿಟ್ಟಿಸುತ್ತ ಕೂತಿದ್ದಾನೆ. ಸೀಮೆ ಎಣ್ಣೆಯ ದೀಪವಲ್ಲ ಇದು, ಹರಳೆಣ್ಣೆಯ ದೀಪ. ಕುಡಿ ದೀಪದಲ್ಲೇ ಇದ್ದರೂ ಬೆಳಗುತ್ತಿದೆ ಇವನ ಕಣ್ಗಳಲ್ಲಿ. “ನೋಡುತ್ತ ದೀಪ ಬೇರೆ ನೀನು ಬೇರೆ ಅನ್ನಿಸಬಾರದು. ದೀಪವೂ ನೀನೂ ಒಂದೇ ಆಗಿಬಿಡಬೇಕು”-ಅನುರಣಿಸುತ್ತಿದೆ ಅಣ್ಣನ ದನಿ ಕರಣಗಳಲ್ಲಿ.
ಈಗ ಒಂದು ಪ್ರಶ್ನೆ. ಜ್ವಾಜ್ಜಲ್ಯಮಾನವಾಗಿ ಬೆಳಗುತ್ತಿರುವ ದೀಪ ಮತ್ತು ಈ ಹುಡುಗನ ನಡುವೆ ನಿಂತಿರುವುದೇನು? ಗಾಜೋ, ಕನ್ನಡಿಯೋ? ಗಾಜಾಗಿದ್ದರೆ ಅವನು ಕಾಣಹೊರಟಿರುವ ಸತ್ಯದ ಹರಹು ಬೇರೆ. ಕನ್ನಡಿಯಾಗಿದ್ದರೆ? ಅರಸುವಿಕೆಯೇ ಸ್ಥಾಯಿಭಾವವಾದ ಅವನ ಬದುಕಿನ ದರ್ಶನ ದಿಕ್ಕೇ ಬದಲಾದೀತು.
ಇದು ಜೋಗಿಯವರ ನೂರನೆಯ ಪುಸ್ತಕ. ನೂರನೆಯ ಪುಸ್ತಕ ಬರೆಯುತ್ತಿರುವ ಹೊಸ್ತಿಲಲ್ಲೂ ಅವರು ತಮ್ಮೊಳಗಿನ ಆ ಹುಡುಗನನ್ನು ಜೀವಂತವಾಗಿಟ್ಟುಕೊಂಡಿರುವುದು, ಬರೆದು ಬರೆದೇ ಬದುಕಿನ ಒಳಚಾಚುಗಳನ್ನು ವಿಸ್ತರಿಸಿಕೊಳ್ಳ ಹೊರಟಿರುವ ಆ ಬಾಲಕನ ಅದೃಷ್ಟ. ತೀವ್ರವಾಗಿ ಬರೆಯುವುದೇ ತೀವ್ರವಾಗಿ ಬದುಕಲು ಇರುವ ಏಕೈಕ ದಾರಿ ಎಂಬುದ ಕಾಣುತ್ತಿರುವ ಪರಿ.
ನಾನು ಹೈಸ್ಕೂಲು ಓದುತ್ತಿದ್ದ ಸಮಯದಲ್ಲಿ, ‘ಜಾನಕಿ ಕಾಲಂ’ ಬರುತ್ತಿದೆ ಎಂಬ ಒಂದೇ ಕಾರಣಕ್ಕೆ ಪತ್ರಿಕೆ ಕೊಳ್ಳುತ್ತಿದ್ದ ಸಾವಿರಾರು ಮನೆಗಳಲ್ಲಿ ನಮ್ಮ ಕುಟುಂಬವೂ ಒಂದಾಗಿತ್ತು. ಕಾಲಂ ನಿಲ್ಲುತ್ತಿದ್ದ ಹಾಗೆ ನಮ್ಮ ಮನೆಗೆ ಪತ್ರಿಕೆ ಬರುವುದೂ ನಿಂತು ಹೋಯಿತು. ಕನ್ನಡ ಸಾಹಿತ್ಯವನ್ನು ಎಂಡ್-ಟು-ಎಂಡ್ ಓದಿಕೊಂಡ ಅಕ್ಷರ ವ್ಯಾಮೋಹಿಯೊಬ್ಬರು ತಮ್ಮದೇ ಆದ genre-bending ಶೈಲಿಯಲ್ಲಿ ಕೃತಿ ಮತ್ತು ಕೃತಿಕಾರರ ಕುರಿತು ವಿಶಿಷ್ಟ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲಲ್ಲಿ ವಿಶ್ವ ಸಾಹಿತ್ಯಕ್ಕಿಟ್ಟ ಕಿಟಕಿಗಳು, ಓದುಗರು ಮನಸ್ಸು ಮಾಡಿದರೆ ಇಣುಕುವಂತಿರುತ್ತಿದ್ದವು. ಆ ಬರಹಗಳಲ್ಲಿ, “ನಾನು ಹೇಳುತ್ತಿದ್ದೇನೆ, ನೀವು ಕೇಳಬೇಕು” ಎಂಬ ಶೈಲಿಗೆ ವ್ಯತಿರಿಕ್ತವಾಗಿ, “ಎಲ್ಲರೂ ಸೇರಿ ಕಂಡುಕೊಳ್ಳೋಣ” ಎಂದು ಧ್ವನಿಸುವ ಧಾಟಿ ಇದ್ದುದು ಅಂಕಣದ ಜನಪ್ರಿಯತೆಗೆ ಕಾರಣವಿದ್ದಿರಬಹುದೇನೋ. ಜಾನಕಿ ಕಾಲಂ ಪ್ರಕಟವಾಗುತ್ತಿದ್ದ ಕಾಲದಲ್ಲಿ ಅದನ್ನು ಬರೆಯುತ್ತಿರುವವರು ಯಾರು ಎಂಬುದೂ ನಮಗ್ಯಾರಿಗೂ ತಿಳಿದಿರಲಿಲ್ಲ. ಆದರೂ ಸ್ನೇಹಿತರ ವಲಯಗಳಲ್ಲಿ ಆ ವಾರದ ಬರಹದ ಕುರಿತು ಆಸಕ್ತಿಕರವಾದ ಮನೆ-ಮನೆ ಚರ್ಚೆಗಳಾಗುತ್ತಿದ್ದವು.
ನೂರನೆಯ ಪುಸ್ತಕಕ್ಕೆ ವಿಷಯವಾಗಿ ಅಧ್ಯಾತ್ಮವೇ ಏಕೆ ಲೇಖಕರನ್ನು ಅರಸಿ ಬಂದಿತು ಎಂಬುದಕ್ಕೆ ಅವರ ಈ ಮೊದಲಿನ ಕೃತಿಗಳಲ್ಲಿ ಉತ್ತರವಿದೆ. ನಾಟಕವನ್ನೇ ಬದುಕಿಗೆ ಒಂದು ರೂಪಕವನ್ನಾಗಿ ಕಾಣಿಸಿದ ಅಶ್ವತ್ಥಾಮನ್; ‘ನಿರಾಕರಣವೇ ಬಾಳಿನ ಬೆಳಕು’ ಎಂದು ನಂಬಿಕೊಳ್ಳುತ್ತ ತನ್ನ ಪ್ರೇಯಸಿ ಲೀಲಾವತಿಗೆ ಉದ್ದುದ್ದ ಪತ್ರ ಬರೆಯುವ ‘ಎಲ್’ ಕಾದಂಬರಿಯ ಲಕ್ಷ್ಮಣ ನೀಲಂಗಿ; ಜಿಪ್ಸಿ ಕೆಫೆಯಲ್ಲಿ ಮೌನವಾಗಿ ಕೂಡುವ ‘ಹಸ್ತಿನಾವತಿ’ಯ ಸಹದೇವ ಉಪಾಧ್ಯಾಯ; “ಎಲ್ಲರ ಮನಸ್ಸಲ್ಲೂ ನಿರಾಕಾರವಾಗಿರೋದು ಏನೋ ಇರುತ್ತೆ” ಎನ್ನುತ್ತ ಬೆಕ್ಕಿನ ನಿಶ್ಚಲತೆಯನ್ನು ಮೈಗೂಡಿಸಿಕೊಂಡ ಪುಚ್ಚೆಯ ಪುರು... ತೀರದ ದಿಕ್ಕಿಗೇ ಮತ್ತೆ ಮತ್ತೆ ಅಲೆಗಳು ಮೊರೆಯುವ ಹಾಗೆ ಇವರ ಚಿತ್ತಭಿತ್ತಿಯಲ್ಲಿ ಸೃಷ್ಟಿಯಾದ ಪಾತ್ರಗಳೆಲ್ಲ ಅಲೌಕಿಕತೆಯನ್ನು ತಾಕಲು ಇನ್ನಿಲ್ಲದಂತೆ ಪ್ರಯತ್ನಿಸಿವೆ.
ಒಂದು ಪುಟ್ಟ ಮಗುವೂ ಉತ್ತರಿಸಬಹುದಾದಷ್ಟು ಸುಲಭವಾದ, ಇನ್ನೇನು ಸಾವಿನ ಅಂಚಿನಲ್ಲಿರುವ ವೃದ್ಧೆಯೂ ಉತ್ತರಿಸಲು ತಡವರಿಸುವ, “ನಾನು ಯಾರು?” ಎಂಬ ಪ್ರಶ್ನೆ ಈ ಕೃತಿಯ ಹೃದಯಭಾಗವಾಗಿದೆ. “ನೀನು ಏನು ಅನ್ನೋದನ್ನ ನೀನು ಹೇಳಬಾರದು. ನನಗೆ ಗೊತ್ತಾಗಬೇಕು. ನಮ್ಮ ಮಾತು ನಮ್ಮ ಬಗ್ಗೆ ಹೇಳುವಷ್ಟು ಸುಳ್ಳನ್ನು ಮತ್ಯಾರೂ ಹೇಳಲ್ಲ” ಎಂದು ತಣ್ಣಗೆ ನುಡಿವ ಇಳಂಗೋವನ್ ನಮಗೆ ಕಾಣಿಸ ಹೊರಟಿರುವ ಲೋಕ, ಮಾತಿಗೆ ಮೀರಿದ ಲೋಕ. ಈ ಹೊಸ ಕಾಲದಲ್ಲಿ ಯಶಸ್ಸು ಪಡೆಯಲು ಮಾತುಗಾರಿಕೆಯೇ ಬಹುದೊಡ್ಡ ಬಂಡವಾಳ ಅಂತ ಪ್ಲೇ-ಸ್ಕೂಲಿಗೆ ಹೋಗುವ ಮಗುವನ್ನೂ ಅಖಾಡವೊಂದಕ್ಕೆ ತಯಾರಿ ಮಾಡುವ ತರಾತುರಿಯಲ್ಲಿ ನಾವಿರುವಾಗ ಅನುಭವಗಳ ನಿಬಿಡತೆಯನ್ನು ಶಬ್ದಗಳಲ್ಲಿ ಹಿಡಿಯಲು ಸಾಧ್ಯವೇ ಇಲ್ಲ ಎಂಬಂತೆ ಕಾದ ಕಬ್ಬಿಣವನ್ನು ತಣ್ಣೀರಿನಲ್ಲಿ ಅದ್ದುತ್ತಲೇ ತಾದಾತ್ಮ್ಯ ಸಾಧಿಸುತ್ತಿದ್ದಾನೆ ಇಳಂಗೋವನ್, ಏಕಾಂತದಲ್ಲಿ ಅರಸುವುದು ಬೇಕಾದಷ್ಟಿದೆ ಎಂಬ ದರ್ಶನವನ್ನು ಮಾತಿಲ್ಲದೇ ಕಾಣಿಸುತ್ತಿದ್ದಾನೆ. ಯಾವುದನ್ನೂ ಅಖೈರಾಗಿ ಹೇಳಲು ಸಾಧ್ಯವಾಗದ ಧಾಟಿಯಲ್ಲಿಯೇ ಬದುಕಿನ ಕುರಿತ ಅವನ ದೃಢನಿಷ್ಠೆ ಪ್ರಮಾಣಗೊಳ್ಳುವುದು. ಸ್ವಘೋಷಿತ ‘ಗುರು’ವಿನಿಂದ ಅವನು ಬೇರೆಯಾಗಿ ನಿಲ್ಲುವನು.
ಇಳಂಗೋವನ್ ಸಿನಿಕನಲ್ಲ ಎಂಬುದು ಓದುಗಳಾಗಿ ನನಗೆ ಬಹುಮುಖ್ಯ ಸಂಗತಿಯಾಗಿ ಕಂಡಿತು. ಯಾವ ಪ್ರಶ್ನೆಗೂ ಅವನು ಉಡಾಫೆಯ ಉತ್ತರ ಕೊಡಲಾರ. ಅಲೌಕಿಕದ ಸುಪ್ತ ಸುರಂಗಮಾರ್ಗವಾಗಿ ನಡೆಯುತ್ತ, ಅನೂಹ್ಯ ಸಂಗತಿಗಳನ್ನೆಲ್ಲ ನಿತ್ರಾಣ ಶಬ್ದಗಳಲ್ಲಿ ಪಟ್ಟಿ ಮಾಡಬೇಕಾದ ಅನಿವಾರ್ಯತೆಯಿದ್ದರೂ ಅವನು ಎದೆಗುಂದಲಾರ. ಇರುವುದೇ ಇದೊಂದು ಹಾದಿ ಎಂಬುದನ್ನರಿತ ಅವನ ತಾಳ್ಮೆ ದೊಡ್ಡದು.
ಸ್ಪಿನೋಜಾ, ಶಾಪನ್‌ಹಾವರ್, ನೀಶೆ, ಅಲ್ಲಮ, ಅಕ್ಕ, ಯೂಜಿ, ಜೆಕೆ, ಓಶೋ ಎನ್ನದೇ ಭಾರತೀಯ, ಪಾಶ್ಚಾತ್ಯ ವಿದ್ವಾಂಸರೆಲ್ಲ ಇಳಂಗೋವನ್‌ನ ಲೋಕದೃಷ್ಟಿಗೆ ತಮ್ಮ ಕಾಣ್ಕೆ ಕೊಟ್ಟಿದ್ದಾರೆ. ಅವನ ಜತೆ ಹರಟಿದ್ದಾರೆ, ವಾದ ಮಾಡಿದ್ದಾರೆ. ಇವನು ಆ ಯಾವ ವಾದಗಳ ಭಾರವೂ ತನ್ನ ಬೆನ್ನ ಮೇಲಿಲ್ಲ ಎಂಬಂತೆ ನಡೆಯುತ್ತಿದ್ದಾನೆ. ಸಿರಿಸಂಪಿಗೆಯ ರಾಜಕುಮಾರನಂತೆ ಸೀಳಿಕೊಂಡರೂ ಇವನ ಮೊಗದಲ್ಲಿ ತಪ್ತತೆಯಿಲ್ಲ. ಕಲೆಯ ಮೂಲಕ ಮನುಷ್ಯ ಕಂಡುಕೊಳ್ಳಬಯಸುವ ಆಧ್ಯಾತ್ಮಿಕ ಸತ್ಯ ಹುಟ್ಟು-ಸಾವು ಎಂಬ ಕ್ಷುಲ್ಲಕ ಜಿಜ್ಞಾಸೆಯಿಂದ ಮುಕ್ತವಾದಂಥದು ಎಂಬುದನು ನುಡಿಯದೆಯೇ ಕಾಣಿಸುತ್ತಾನೆ ಇವನು.
ನಾವೆಲ್ಲ ಇಂದು ‘Time is money’ ಎಂಬ ತತ್ವವನ್ನು ಆವಾಹಿಸಿಕೊಂಡು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ, ಚೂರೇ ಚೂರು ಒಳಕ್ಕಿಳಿಯಲೂ ಬಿಳಿಚಿಕೊಂಡವರಂತೆ ಸಂಕಟದಿಂದ ಒದ್ದಾಡುತ್ತಿರುವಾಗ, “ಸಂತೋಷ ಒಳಗೆ ಇರುತ್ತದೆ; ಸಂಕಟ ಹೊರಗಿನಿಂದ ಬರುತ್ತದೆ” ಎಂಬ ಒಂದೇ ಮಾತಿನಿಂದ ಎಲ್ಲ ಭ್ರಮೆಗಳನ್ನೂ ನಿವಾಳಿಸಿ ಹಾಕಬಲ್ಲ. ವಿಜ್ಞಾನದಲ್ಲಿ ಘಟಿಸುವ ಚೈನ್-ರಿಯಾಕ್ಷನ್ ರೀತಿಯ ಸರಪಳಿಯೊಂದು ಅಧ್ಯಾತ್ಮದಲ್ಲೂ ಇದೆಯೇ ಎಂಬ ಪ್ರಶ್ನೆಗೆ ತಲೆ ಕೊಡವಿದ್ದಾನೆ.
ಉತ್ತರಿಸು ಅಂತ ಒತ್ತಾಯ ಪಡಿಸಬೇಡಿ ಯಾರೂ. ರಮಣರು ಯೂಜಿಯನ್ನು ಕೇಳಿದಂತೆಯೇ ಕೇಳಿಯಾನು ಈತನೂ. “ನಾನೇನೋ ಉತ್ತರಿಸುತ್ತೇನೆ. ಆ ಉತ್ತರವ ಧಾರಿಸಿಕೊಳ್ಳಲು ನಿನಗೆ ಸಾಧ್ಯವೇ?”
*
ನಾವೆಲ್ಲ ನಮ್ಮದೇ ಹಾದಿಯಲ್ಲಿ ಆಧ್ಯಾತ್ಮಿಕ ಪಯಣದಲ್ಲಿರುವವರು. ಇಳಂಗೋವನ್ ಹೇಳುವಂತೆ, “ಅಧ್ಯಾತ್ಮ ಎಲ್ಲವನ್ನೂ ಮೀರಬಲ್ಲದು, ದೇವರನ್ನೂ ಕೂಡ.” ಕಲ್ಪಿಸಿಕೊಂಡಷ್ಟೂ ಬ್ರಹ್ಮಾಂಡದ ವಿಸ್ತಾರ ಹೆಚ್ಚು ಎನ್ನುವ ಹಾಗೆ; ‘ಅದು’ ಎಂಬುದಿಲ್ಲ ಎಂಬ ತತ್ವವೂ ‘ಅದರ’ ಅಸ್ತಿತ್ವವನ್ನು ಒಪ್ಪಿಕೊಂಡ ಪಾತಳಿಯ ಮೇಲೆ ನಿಂತಿದೆ ಎನ್ನುವ ಹಾಗೆ; ಸಮುದ್ರದಲ್ಲೇ ಈಜಾಡಿಕೊಂಡು- ಉಸಿರಾಡಿಕೊಂಡು ಇರುವ ಮೀನು ಬದುಕಿನಲ್ಲಿ ಒಮ್ಮೆಯಾದರೂ ಸಮುದ್ರ ಕಾಣಬೇಕು ಎಂದು ಹಂಬಲ ಪಡುವ ಹಾಗೆ ಅಲೌಕಿಕವು ಲೌಕಿಕವನ್ನು ನಿತ್ಯ ಪೊರೆಯುತ್ತಿದೆ. ಕಲೆಯೆಂಬುದು ಈ ‘ಅರಸುವ’ ಕ್ರಿಯೆಯಲ್ಲಿ ಒದಗಿ ಬರುವ ಒಂದು ಸಲಕರಣೆ. ಮೌನವೂ ಮತ್ತೊಂದು ಸಲಕರಣೆ. ಅಂತಃಕರಣ ಇನ್ನೊಂದು.
ಬದುಕಿನ ಸತ್ಯಗಳನ್ನು ತಪಸ್ಸಿನಿಂದ ಕಂಡುಕೊಳ್ಳುತ್ತೇನೆ ಎಂದು ಹೊರಟವರ ದಾರಿ ಅವರಿಗಿರಲಿ. ಆದರೆ ಅವೇ ಸತ್ಯಗಳನ್ನು ಅನುಭವದ ಮೂಸೆಯಲ್ಲಿ ಪುಟಕ್ಕಿಟ್ಟು ಕಂಡುಕೊಳ್ಳುತ್ತೇನೆ ಎಂದು ಹೊರಟವರಿಗೆ ಗೆಳೆಯನಾಗಬಲ್ಲವನು ಈ ಇಳಂಗೋವನ್. ಮಾತಿಲ್ಲದೇ ಕುಳಿತು ದರ್ಶನ ಕರುಣಿಸುವ ಒಡನಾಡಿ. ನನಗೆಲ್ಲ ತಿಳಿದಿದೆ ಅಂದುಕೊಳ್ಳುವುದಕ್ಕಿಂತ, ನನಗೇನೂ ತಿಳಿದಿಲ್ಲ; ಪ್ರಪಂಚದ ಮತ್ತು ಬದುಕಿನ ಕುರಿತಾಗಿನ ಸಣ್ಣಾತಿಸಣ್ಣ ಸಂಗತಿಗಳೂ ನನಗೆ ಬಗೆಹರಿಯೋದಿಲ್ಲ ಅಂತ ಒಪ್ಪಿಕೊಳ್ಳುವುದು ಅರಿವಿನ ದಾರಿಯ ಮೊದಲ ಹೆಜ್ಜೆಯೇ ಆಗಿದೆ ಎಂಬುದನ್ನು ಗಾಳಿ ದಿಟ್ಟಿಸುತ್ತ ಕುಳಿತ ಅವನ ನೋಟವೇ ಹೇಳುತ್ತಿದೆ.
ಅತ್ತಿಂದಿತ್ತ ಗಾಳಿಯಾಡಿದರೂ ನಲುಗುವಷ್ಟು ಮೃದುವಾದ ಗಂಧವಿರುವ ಸೌಗಂಧಿಕಾ ಪುಷ್ಟ ತರಲು ಅಬುಜವದನೆಯಾದ ದ್ರೌಪದಿ ಅರಿಭಯಂಕರನಾದ ಭೀಮನ ಮೊರೆಹೋಗುವಂತೆ ಕಾಠಿಣ್ಯವೇ ನಯದ ಇನ್ನೊಂದು ಟಿಸಿಲಾಗಬಲ್ಲದು. ಎ ಕೆ ಆರ್ ಒಂದು ಪದ್ಯದಲ್ಲಿ ಹೇಳುವ ಹಾಗೆ, “ಕಣ್ಣೆದುರಿಗೆ ಪ್ರತ್ಯಕ್ಷವಾದದ್ದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು ಸ್ವಾಮೀ- ಅದೃಷ್ಟ ಬೇಕು.”
ಉದ್ಯಾನವನದ ಜೋಕಾಲಿಯಲ್ಲಿ ಕುಳಿತ ಮಗು ತನ್ನನ್ನು ತೂಗುತ್ತಿರುವ ತಂದೆಗೆ, “ಹೈಯರ್... ಹೈಯರ್... ಇನ್ನೂ ಮೇಲೆ” ಎಂದು ಹೇಳುತ್ತದೆ. ಮಗುವಿನ ಸಂಭ್ರಮ, ಕೇಕೆ ಹೆಚ್ಚಿದಷ್ಟೂ ತಂದೆಯ ಹುರುಪು ಜಾಸ್ತಿ. ಮೇಲೆ... ಮೇಲೆ... ಮೇಲೆ... ತೂಗುತ್ತ ಯಾವುದೋ ಒಂದು ಮಾಯೆಯಂಥ ಕ್ಷಣದಲ್ಲಿ ಜೋಕಾಲಿ ಆಕಾಶಕ್ಕೆರಗಿ ಪೂರ್ಣವಾದುದೊಂದು ಸುತ್ತು ಹೊಡೆದು ನಿಂತು ತೂಗುತ್ತಿರುವ ತಂದೆಯ ಬೆನ್ನಿನ ಬಳಿಯೇ ಬಂದುಬಿಟ್ಟಿದೆ. ತನ್ನ ಅರಿವು ಮೀರಿ ತಕ್ಷಣ ತಂದೆ ಪಕ್ಕಕ್ಕೆ ಸರಿದಿದ್ದಾನೆ. ಮಗುವೂ ಭಯದಲ್ಲಿ ಜೋಕಾಲಿಯ ಸರಳಿನ ಕೈಬಿಟ್ಟಿಲ್ಲ. ಜೋಕಾಲಿ ನಿಲ್ಲಿಸಿ ತಂದೆಯೂ, ಮಗುವೂ “ಏನಾಯ್ತು? ಏನಾಯ್ತು?” ಅಂತ ಕೇಳಿಕೊಳ್ಳುತ್ತಾರೆ. ಇಬ್ಬರ ಕಣ್ಣು-ಮೂಗು-ಕಿವಿ-ಕೈಕಾಲುಗಳು-ಜೀವ ಎಲ್ಲ ಸರಿಯಾಗಿದೆಯೇ ಅಂತ ಪರೀಕ್ಷಿಸಿಕೊಳ್ಳುತ್ತಾರೆ. ಏನಾಯ್ತು? ಇಬ್ಬರಿಗೂ ಗೊತ್ತಿಲ್ಲ. ಇಬ್ಬರೂ ಭಾವೋದ್ವೇಗದಲ್ಲಿ ನಡುಗುತ್ತಿದ್ದಾರೆ. ಮತ್ತೆಷ್ಟೇ ಪ್ರಯತ್ನಿಸಿದರೂ ಈ ಅನುಭವ ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಅದು ತಾನಾಗಿಯೇ ‘ಆಗ’ಬೇಕು. ಅದಕ್ಕೆ ಅದೃಷ್ಟ ಬೇಕು.
ಈ ಪುಸ್ತಕದ ಕಡೆಯ ಅಧ್ಯಾಯದಲ್ಲಿ ಜೋಗಿಯವರು ಪಾಶ್ಚಾತ್ಯ ತತ್ವಜ್ಞಾನಿಗಳ ಸಾಲಿನಲ್ಲಿ ಮಹಿಳೆಯರ ಗೈರುಹಾಜರಿಯ ಬಗ್ಗೆ ಸೂಕ್ತ ಪ್ರಶ್ನೆಯನ್ನೆತ್ತಿದ್ದಾರೆ. ಅವರೇ ಗುರುತಿಸಿದ ಹಾಗೆ ಭಾರತದಲ್ಲೇ ಅಲೌಕಿಕತೆಯ ಬಗ್ಗೆ ಆಸಕ್ತಿಯುಳ್ಳ ಮಹಿಳೆಯರು ವಚನಕಾರ್ತಿಯರ, ಶರಣೆಯರ, ಜನಪದ ಕಲಾವಿದೆಯರ ರೂಪದಲ್ಲಿ ಕಾಣಸಿಗುತ್ತಾರೆ. ಗೆದ್ದ ರಾಜರ ಚರಿತ್ರೆಯನ್ನು ಮಾತ್ರ ಬರೆಯುವ ಪರಿಪಾಠವಿರುವ ರೀತಿ, ಪ್ರಪಂಚದ ಅರ್ಧದಷ್ಟು ಜನರ ದನಿಯನ್ನು ವ್ಯವಸ್ಥಿತವಾಗಿ ಒಂದು ಅಧ್ಯಯನ ಶಿಸ್ತಿನಿಂದ ಹೊರಗಿರಿಸಿದ್ದೇ ಈ ಅಸ್ವಾಭಾವಿಕ ಪರಿಣಾಮಕ್ಕೆ ಕಾರಣವಿರಬಹುದೇನೋ.
ಹೊಸ ಓದು ಮತ್ತು ಹೊಸ ಬರೆವಣಿಗೆಯ ಒಳ ಹೊಕ್ಕುವ ಮೊದಲು ನಮ್ಮ ಒಳಗು ಒಂದು ಚಣ ಕಂಪಿಸಬೇಕಂತೆ. ಇನ್ನೂ ಯಾರೂ ಹೆಜ್ಜೆಯಿರಿಸದ ಅಜ್ಞಾತ ಅರಣ್ಯದ ಹೊಸ್ತಿಲಲ್ಲಿ ಅರೆಕ್ಷಣ ನಿಂತಂತೆಯೇ ಅದು. ನಮ್ಮ ರಾಜಕಾರಣಿಗಳು ಮಾಡಿದ ಹಾಗೆ ಹೆಲಿಕಾಪ್ಟರ್‌ನಲ್ಲಿ ಕೂತು ಎತ್ತರದಿಂದ ಕ್ಷೇತ್ರ ಪರೀಕ್ಷೆ ನಡೆಸೋದಲ್ಲ. ಹೆಜ್ಜೆಯಿರಿಸಿದರೆ ಪಾದಕ್ಕೆ ನೆಲದ ಹಸಿ ತಾಕಬೇಕು. ಎಲ್ಲಿಯೂ ಕಾಣಿಸಿಕೊಳ್ಳದ ಹಳದಿ ಟಿಟ್ಟಿಬ ಹಕ್ಕಿಯ ಕೂಗು ನಮಗೇ ಕೇಳಿಸೀತು ಎಂಬ ನಂಬಿಕೆ ಎದೆಯಲ್ಲಿರಬೇಕು. ಓಶೋ ‘ಲಿವ್ ಡೇಂಜರಸ್ಲೀ’ ಅಂದಿದ್ದು ಇದಕ್ಕೇ ಇರಬಹುದೇ? ವಾಪಸ್ ಬರಲು ದಾರಿಯಿದೆಯೇ ಇಲ್ಲವೇ ಅಂತ ಯೋಚಿಸುತ್ತ ಕುಳಿತರೆ ಕಾಣಲು ಹೊರಟ ಲೋಕ ಕಾಣಿಸೀತೇ?
ಫಿಲಾಸಫಿಯ ಕುರಿತ ಯಾವ ಪುಸ್ತಕ ಓದಲು ತೆಗೆದರೂ ಇಂಥ ಭಯ ಆವರಿಸೋದು ಸಹಜ. ಈ ಓದು ನಮ್ಮನ್ನು ಅನಾಮತ್ತಾಗಿ ಎತ್ತಿ ಬೀಸಿ ಎಸೆದುಬಿಟ್ಟರೆ ನಂತರ ಆ ಸತ್ಯಗಳ ಜೊತೆಗೆ ಬದುಕಲು ಸಾಧ್ಯವೇ ಎಂಬ ಹಿಂಜರಿಕೆ ಈ ಭಯಕ್ಕೆ ಕಾರಣವಿದ್ದೀತೇ? ಪ್ರದರ್ಶನವೇ ಬದುಕಿನ ಮೂಲಮಂತ್ರವಾದ ಈ ಹೊಸ ಕಾಲದಲ್ಲಿ, ಯೂಜಿ ಹೇಳಿದ ಹಾಗೆ, “ಮೊದಲು ನಮ್ಮಲ್ಲಿ ಉತ್ತರ ಹುಟ್ಟುತ್ತದೆ. ಆಮೇಲೆ ಪ್ರಶ್ನೆ ಹುಟ್ಟುತ್ತದೆ. ನಮಗೆ ಉತ್ತರ ಗೊತ್ತಿಲ್ಲದ ಅಲೌಕಿಕ ಪ್ರಶ್ನೆಗಳೇ ಇಲ್ಲ.”
ಇಂಥ ಸಂದಿಗ್ಧದಲ್ಲಿಯೂ ಇಳಂಗೋವನ್, ಈ ದಟ್ಟ ಅರಣ್ಯದ ನಟ್ಟ ನಡುವಿರುವ ಸಿಹಿನೀರ ಕೊಳದತ್ತ ಕೈ ಚಾಚಿ ತೋರಿದ್ದಾನೆ. ಅವನು ತೋರಿದತ್ತ ಹೆಜ್ಜೆ ಹಾಕುತ್ತಿರುವ ಗುಂಪಿನಲ್ಲಿ ಓದುಗರ ಜೊತೆಗೆ ಈ ಕೃತಿಯ ಲೇಖಕರೂ ಇದ್ದಾರೆ. ಅಲ್ಲೊಂದು ಕೊಳವಿದೆಯೇ? ಇದ್ದರೂ ಒಳಗೆ ಸಿಹಿ ನೀರ ಒರತೆ ಇನ್ನೂ ಇದೆಯೇ ಎಂಬೆಲ್ಲ ಪ್ರಶ್ನೆಗಳನ್ನು ಯಾರೂ ಯಾರನ್ನೂ ಕೇಳಿಕೊಳ್ಳುವಂತಿಲ್ಲ. ಬೇಂದ್ರೆಯವರು ಕಾಣಿಸಿದ ಹಾಗೆ, “ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು.”
ಮತ್ತೇಕೆ ತಡ? ಇಲ್ಲಿ ಕಾಣಿ. ಮೊದಲಿನಿಂದ ಶುರು ಮಾಡೋಣ ಎಲ್ಲ. ಕಗ್ಗತ್ತಲ ಈ ಕಾಡಿನಲ್ಲಿ ದೀಪ ದಿಟ್ಟಿಸುತ್ತ ಕುಳಿತ ಈ ಹುಡುಗನೆಡೆಗೆ ಹರಿಯಲಿ ನಮ್ಮ ದೃಷ್ಟಿ. ಈಗ ಹುಡುಗ ದೀಪ ದಿಟ್ಟಿಸುತ್ತಿದ್ದಾನೆ. ದೀಪವೂ ಅವನನ್ನು ದಿಟ್ಟಿಸುತ್ತಿದೆ. ನಮ್ಮ ಕಣ್ಣ ಮುಂದೆ ದೀಪವೂ ಇದೆ, ಹುಡುಗನೂ ಇದ್ದಾನೆ.
ಈಗ ಹೇಳಿ. ಹುಡುಗನನ್ನೂ, ದೀಪವನ್ನೂ ಒಳಗೊಂಡ ಈ ದೃಶ್ಯವನ್ನು ಕಾಣುತ್ತಿರುವ ನಮ್ಮ ಮುಂದಿರುವುದು ಗಾಜೋ, ಕನ್ನಡಿಯೋ? ಗಾಜಾಗಿದ್ದರೆ ನಾವು ನೋಡುತ್ತಿರುವುದು ಶಬ್ದಸಹಿತ ನಿಶ್ಶಬ್ದದ ಒಂದು ದೃಶ್ಯವಷ್ಟೇ. ಕನ್ನಡಿಯಾಗಿದ್ದರೆ ಮಾತ್ರ, ಅಲ್ಲಿ ಇಳಂಗೋವನ್ ಇದ್ದಾನೆ!
- ಕಾವ್ಯಾ ಕಡಮೆ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.