ದಾರಿಯಲ್ಲಿ 'ಸಾವು' ಸಿಕ್ಕರೆ ಒಂದು ಕಾಫಿ ಕುಡಿಸುವಾ..: ಸದಾಶಿವ್ ಸೊರಟೂರು


ಸಾವಿನ ವಿಶ್ವಕೋಶದಂತೆ ಭಾಸವಾಗುವ ಗರುಡಪುರಾಣದ ಬಗ್ಗೆ ಕೇಳಿದ್ದೆ. ಆದರೆ ಅದನ್ನು ಸುಲಭವಾಗಿ ಓದಲು ಸಾಧ್ಯವಾದದ್ದು ಇಲ್ಲಿ. ಎರಡನೇ ಭಾಗದಲ್ಲಿ ಗರುಡಪುರಾಣದ ಪುಟಗಳಿಂದ ತಂದ ಸಾವಿನ ಮಾತುಗಳಿವೆ. ಅವು ಗರುಡಪುರಾಣದಲ್ಲಿ ಬರುವ ಸಾಲುಗಳೊ ಅಥವಾ ಅವರ ಕಾದಂಬರಿಯಲ್ಲಿ ಬರುವ ವಿವರಣೆಯೊ ಅನ್ನುವಂತೆ ವಿಷಯ ಕಥನಾತ್ಮಕವಾಗಿ ಬಂದಿದೆ ಎನ್ನುತ್ತಾರೆ ಲೇಖಕ ಸದಾಶಿವ್ ಸೊರಟೂರು. ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಸಾವು ಕೃತಿಯ ಬಗ್ಗೆ ಅವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

'ಸಾವು' ಬಿಡುಗಡೆಗೊಂಡ ಮರುದಿನವೇ ಅಂಚೆಯವನು ಬಂದು ಕೈಗೆ ಒಂದು ಪುಸ್ತಕ ಇಟ್ಟು ಹೋದ. ಆದರೆ ನಾನೇನು ಸಾವನ್ನು ಬುಕ್ ಮಾಡಿರಲಿಲ್ಲ. ಪುಸ್ತಕದ ಕವರೊಂದು ಕೈಯಲ್ಲಿತ್ತು. ಕುತೂಹಲದಿಂದ ಅದರ ಕವರ್ ತೆರೆದೆ. ಕಡುಕಪ್ಪನೆ ಸಾವು ಕೈಯಲ್ಲಿದೆ. ಆಶ್ಚರ್ಯದ ಮೇಲೆ ಆಶ್ಚರ್ಯ. ‌ಹೇಳದೆ ಕೇಳದೆ ಸಾವು ನಮ್ಮ ಮನೆಗೆ ಬಂದಿತ್ತು. ನನ್ನ ರೂಮಿನಲ್ಲಿ ಸಾಲಾಗಿ ಜೋಡಿಸಿಟ್ಟಿರುವ ಜೋಗಿಯವರ ಅಷ್ಟೂ ಪುಸ್ತಕಗಳನ್ನು ಗಮನಿಸಿದ್ದ ನನ್ನ ಗೆಳೆಯರೊಬ್ಬರು ತುರ್ತಾಗಿ ಸಾವು ಕಳುಹಿಸಿಕೊಟ್ಟಿದ್ದರು. 'ಸಾವು ಕಳಿಸಿಕೊಟ್ಟ ನಿಮ್ಮ ಕೈಗಳಿಗೆ ಬದುಕಿನ ಬಣ್ಣ ಅಂಟಿಕೊಳ್ಳಲಿ ಎಂದು ಅವರಿಗೆ ಒಂದು ಮಸೇಜ್ ಮೂಲಕ ಹಾರೈಸಿ' ಸಾವಿನ ಪುಟಗಳನ್ನು ತೆರೆದೆ.

ಸಾವಿನ ಓದಿನ ಜರ್ನಿ ಮೋಹಕ. ನನ್ನ ಸಾವಿನ ತಯಾರಿಗೆ ನಾನೇ ಮಾಡಿಕೊಳ್ಳಬೇಕಾದ ಟಿಪ್ಪಣಿಗಳಂತೆ ಅಲ್ಲಲ್ಲಿ ಬರುವ ಚೆಂದದ ಸಾಲುಗಳನ್ನು ಬರೆದಿಟ್ಟುಕೊಂಡೆ. ಎರಡೂ ದಿನ ಸತತ ಸಾವಿನ ಸಖ್ಯದ ಪುಟಗಳನ್ನು ಮುಗಿಸಿ, ಸಾವಿನ ಕೊನೆಯಪುಟವೊಂದನ್ನು ಮಾತ್ರ ಉಳಿಸಿ, ಪುಸ್ತಕವನ್ನು ಎತ್ತಿಟ್ಟೆ. ಸಾವು ಮುಗಿಯಬಾರದು. ಮುಗಿದರೆ ಮತ್ತೇನು ಓದಲಿ ಎಂಬ ಪ್ರಶ್ನೆಯೊ? ಜೋಗಿಯವರ ಎಲ್ಲಾ ಪುಸ್ತಕ ಓದಿ ಆಗಿದೆ.. ಇನ್ನೊಂದು ಪುಸ್ತಕಕ್ಕೆ ಇನ್ನೆಷ್ಟು ದಿನ ಕಾಯಬೇಕೊ ಎನ್ನುವ ಆಸೆಬುರುಕತಕ್ಕೊ ಇನ್ನೂ ಒಂದು ಪುಟ ಉಳಿಸಿದ್ದೇನೆ. ಜೋಗಿಯವರನ್ನು ಇನ್ನೂ ಓದಲು ಇದೆ.. ಸಾವಿನ ಬಗ್ಗೆಯೂ ಇನ್ನೂ ಓದಿವುದಿದೆ ಎಂಬ ಭಾವ ನನ್ನನ್ನು ಆಗಾಗ ಕಾಡಲಿ ಎಂಬ ನೆವ.

ಶಿವಮೊಗ್ಗದ ಡಯಾನ ಬುಕ್ ಗ್ಯಾಲರಿಗೆ ಹೋಗಿದ್ದೆ. ಅಲ್ಲಿ ಸಾವು ಸಂಭ್ರಮದಲ್ಲಿ ಖರ್ಚಾಗುತ್ತಿದೆ. ಅಲ್ಲಿ ಕೇಳಿಸಿಕೊಂಡ ಒಂದು ಮಾತನ್ನು ಜೋಗಿಯವರಿಗೆ ತಲುಪಿಸುವ ಒಂದು ಕಾರಣಕ್ಕೆ ಇದನೆಲ್ಲಾ ಬರೆಯುತ್ತಿದ್ದೇನೆ. ಈ ಮೊದಲು ಜೋಗಿಯವರ ಬಹುತೇಕ ಎಲ್ಲಾ ಪುಸ್ತಕಗಳನ್ನು ಓದಿದ ಮೇಲೆ ಅದರ ಗುಂಗಲ್ಲೆ ಬಹುದಿನ ಕಳೆದು ಬಿಡುತ್ತಿದ್ದೆ. ಅವರ ಪುಸ್ತಕ ಓದಿದ ಮೇಲೆ ವಾರಗಟ್ಟಲೆ ನಾನೇನು ಓದುವುದಿಲ್ಲ. ಬೇರೆ ಏನನ್ನು ಓದಲು ಮನಸಾಗುವುದಿಲ್ಲ. ಪುಟ್ಟ ಮಗುವೊಂದು ಜೇಬಿನಲ್ಲಿ ತಿನಿಸು ಇಟ್ಟುಕೊಂಡು ಆಗಾಗ ಚೂರೇ ಚೂರು ಮುರಿದು ಮುರಿದು ಬಾಯಿಗೆ ಹಾಕಿಕೊಳ್ಳುವಂತೆ ಓದಿದ್ದನ್ನು ಹಲವು ದಿನ ಅನುಭವಿಸುತ್ತಾ ಕಳೆದುಬಿಡುತ್ತೇನೆ. ಅದರ ಬಗ್ಗೆ ಬರೆಯಲು ಆಸೆ ಆದರೂ ಬರೆಯಲು ಆಗುತ್ತಿರಲಿಲ್ಲ. ಏನಾದ್ರೂ ತಪ್ಪಾದರೆ ಎಂಬ ಭಯವೊಂದು ಸದಾ ಕಾಡುತ್ತಿತ್ತು.

ಸಾವು ಖರೀದಿಸುತ್ತಿದ್ದ ಒಬ್ಬ ಓದುಗರು ' ಈ ಸಾವು ಅನ್ನುವ ಹೆಸರು ನೋಡಿದ್ರೆ ಸಣ್ಣ ಭಯ. ಆ ಹೆಸರಿನ ಬುಕ್ ಓದಲು ಬಹುಶಃ ಒಂದು ಧೈರ್ಯ ಬೇಕು. ಆದರೆ ಅದು ಜೋಗಿಯವರು ಬರೆದದ್ದು ಅನ್ನುವ ಕಾರಣಕ್ಕೆ ಕಣ್ಮುಚ್ಚಿ ಕೊಂಡುಕೊಳ್ಳಬಹುದು. ಅವರು ಸಾವನ್ನು ಮುಂದೆ ಇಟ್ಟುಕೊಂಡು ಹೆದರಿಸಿರುವುದಿಲ್ಲ. ಬಹುಶಃ ಸಾವನ್ನು ನಮಗೆ ಗೆಳೆಯನಂತೆ ಪರಿಚಯ ಮಾಡಿಕೊಟ್ಟಿರುತ್ತಾರೆ' ಎನ್ನುವ ಅರ್ಥದ ಮಾತುಗಳನ್ನು ಅವರು ಆಡಿದ್ದರು. ಗುಟ್ಟಾಗಿ ನನ್ನ ಕಿವಿ ಆಲಿಸುತ್ತಿತ್ತು. ಸಾವು ಗೆದ್ದಿತ್ತು.

'ಸಾವು' ಪುಸ್ತಕವನ್ನು ವಿಮರ್ಶಿಸುತ್ತಾ ಹೋಗಲು ನನ್ನಿಂದ ಸಾಧ್ಯವಿಲ್ಲ. ಅದನ್ನು ತಣ್ಣಗೆ ಕೂತು ಮತ್ತೆ ಮತ್ತೆ ಸುಖಿಸುವುದು ನನಗೆ ಸೇರುವ ಪ್ರೀತಿ.‌ ಇಡೀ ಪುಸ್ತಕ ಆಪ್ತವಾಗಿದೆ. ಭಯ ಹುಟ್ಟಿಸುವ, ಅಮಂಗಳ ಅನ್ನುವ, ಯಾರಾದರೂ ಸಾಯುವ ಸುದ್ದಿ ಹೇಳಿದರೆ ಸಾಕು ಬಿಡ್ತು ಬಿಡ್ತು ಅನ್ನುವವರಿಗೂ ಸಾವು ಇಷ್ಟವಾಗುವ ಹಾಗೆ ಸಾವು ಮೋಹಕವಾಗಿದೆ. ಅನುಮಾನವೇ ಇಲ್ಲ ಇದು ಎಲ್ಲರ ಇಷ್ಟದ ಸಾವು ಪುಸ್ತಕ ಏಳು ದಾರಿಯಲ್ಲಿ ಕವಲೊಡೆದಿದೆ. ಅವು ಯಾವುವು ಅಂತ ನೀವು ಪುಸ್ತಕ ನೋಡಿಯೆ ತಿಳಿಯಬೇಕು. ಸಾವನ್ನು ಎಲ್ಲಾ ಕಡೆಯಿಂದ ಸ್ಪರ್ಶಿಸಲಾಗಿದೆ. ಅವರನ್ನು ಇನ್ನಿಲ್ಲದಂತೆ ಕಾಡಿದ ಒಂದು ಸಾವು ಅವರಿಂದ ಈ ಪುಸ್ತಕ ಬರೆಸಿದೆ. ಈ ಚೆಂದದ ಪುಸ್ತಕಕ್ಕಾಗಿ ಅವರನ್ನು ಕಾಡಿದ ಆ ಸಾವಿಗೆ ನಾವು ಒಂದು ಥ್ಯಾಂಕ್ಸ್ ಹೇಳಬೇಕೆ? ಗೊತ್ತಿಲ್ಲ.

ಜನ್ಮಕೊಟ್ಟ ಅಮ್ಮನೇ ಸಾವನ್ನು ಕೊಡುತ್ತಾಳೆ ಅನ್ನುವ ಒಂದು ಸಾಲನ್ನು ಎಲ್ಲೊ ಓದಿದ್ದೆ. ಅಮ್ಮ ಹೇಗೆ ಸಾವು ಕೊಡಲು ಸಾಧ್ಯ ಅಂತ ಯೋಚಿಸಿದ್ದೆ. ಅಮ್ಮ ಜನ್ಮವನ್ನೆ ಕೊಡದಿದ್ದರೆ ನಾನು ಸಾಯುವ ಪ್ರಮೇಯವೇ ಬರುತ್ತಿರಲಿಲ್ಲ‌ ಅಲ್ಲವೆ ಅನ್ನುವುದು ನನಗೆ ಎಷ್ಟೊ ದಿನಕ್ಕೆ ಅರ್ಥವಾಗಿತ್ತು. ಜನ್ಮದ ಜೊತೆ ಜೊತೆಯಲ್ಲಿ ಸಾವಿನ ದಿನವನ್ನು ಅಮ್ಮ ತನ್ನ ಗರ್ಭದಲ್ಲೆ ತನಗೆ ಗೊತ್ತಿಲ್ಲದೆ ಮಗುವಿನ ಹಣೆಯ ಮೇಲೆ ಬರೆಯುತ್ತಾಳೆ. ದೇವರು ಆಕೆಗೆ ಗೊತ್ತಿಲ್ಲದೆ ಅವಳಿಂದ ಬರೆಸುತ್ತಾನೆ. ಆ ಸಾಲು ನಮ್ಮೊಳಗೆ ಇರುತ್ತದೆ. ನಾವು ಬೆಳೆಯುತ್ತ ನಮ್ಮೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಭಯವಾಗಿ ಆವರಿಸುತ್ತದೆ. ನಾವು ಅದರಿಂದ ಪಾರಾಗಲು ಹವಣಿಸಿದ್ದಷ್ಟೂ ಅದು ಗಾಢವಾಗುತ್ತಾ ಹೋಗುತ್ತದೆ. ನಾವು ಬದುಕುತ್ತಿರುವ ಬದುಕು ಸಾವಿಗೆ ಮಾಡಿಕೊಳ್ಳುತ್ತಿರುವ ತಯಾರಿ. ನಾವು ಸಾವಿನ ಭಯದಲ್ಲೇ ತಯಾರಾಗುತ್ತೇವೆ. ನಾವಿಕ ಹುಟ್ಟು ಸಿದ್ದಪಡಿಸಿಕೊಂಡು ನಮಗಾಗಿ ಕಾಯುವಂತೆ ಸಾವು ನಮಗಾಗಿ ಕಾಯುತ್ತದೆ. ನಮ್ಮ ದಾರಿ ಮುಗಿದ ಮೇಲೆ ನಮ್ಮನ್ನು ಕೂರಿಸಿಕೊಂಡು ಹೊರಟು ಬಿಡುತ್ತದೆ. ಆರಂಭದ ಅವರ 'ನೆನಪಿನ ಪುಟಗಳಿಂದ...' ಅನ್ನುವ ಭಾಗವನ್ನು ಓದಿದಾಗ ಅನಿಸಿದ್ದು ಇಷ್ಟು.

ಸಾವಿನ ವಿಶ್ವಕೋಶದಂತೆ ಭಾಸವಾಗುವ ಗರುಡಪುರಾಣದ ಬಗ್ಗೆ ಕೇಳಿದ್ದೆ. ಆದರೆ ಅದನ್ನು ಸುಲಭವಾಗಿ ಓದಲು ಸಾಧ್ಯವಾದದ್ದು ಇಲ್ಲಿ. ಎರಡನೇ ಭಾಗದಲ್ಲಿ ಗರುಡಪುರಾಣದ ಪುಟಗಳಿಂದ ತಂದ ಸಾವಿನ ಮಾತುಗಳಿವೆ. ಅವು ಗರುಡಪುರಾಣದಲ್ಲಿ ಬರುವ ಸಾಲುಗಳೊ ಅಥವಾ ಅವರ ಕಾದಂಬರಿಯಲ್ಲಿ ಬರುವ ವಿವರಣೆಯೊ ಅನ್ನುವಂತೆ ವಿಷಯ ಕಥನಾತ್ಮಕವಾಗಿ ಬಂದಿದೆ. ಮನುಷ್ಯ ಆಟಟೋಪಗಳನ್ನು ನಿಯಂತ್ರಿಸಲು ಗರುಡ ಪುರಾಣವು 'ಸಾವ'ನ್ನು ಮುಂದಿಟ್ಟು ಹೇಗೆ ಹೆದರಿಸುತ್ತದೆ ಎಂಬುದು ಸೊಗಸಾಗಿ ಬಂದಿದೆ. ಸಾವು ಎಂದರೇನು? ನರಕದ ಕಲ್ಪನೆ ಏನು? ಅಸಲಿಗೆ ಸ್ವರ್ಗ ಇದೆಯಾ? ಇರುವುದಾದರೆ ಎಲ್ಲಿದೆ? ನರಕಗಳು ಎಷ್ಟು? ಅವುಗಳೇಕೆ ನರಕಗಳು ಎನ್ನಲಾಗುತ್ತದೆ? ಆತ್ಮ, ಕರ್ಮಸಿದ್ದಾಂತ, ಪ್ರಾಣ ಬರುವುದು ಅಂದರೇನು? ಹೋಗುವುದು ಎಂದರೇನು? ಪುರ್ನಜನ್ಮ, ಸಾವಿನ ಹಾದಿ, ಸಾವಿನ ಸುಳಿವು ಇಂತಹ ವಿಚಾರಗಳ ಬಗ್ಗೆ ಚರ್ಚೆ ಇದೆ.

ಪುರಾಣದಲ್ಲಿ ಬರುವ ಸಾವಿನ ಕಥೆಗಳನ್ನು ನೀವು ಓದಿರಬಹುದು. ಆದರೆ ಇಲ್ಲಿ ಪುರಾಣದಿಂದಲೇ ಆಯ್ದ ಹಲವು ಕಥೆಗಳನ್ನು ನೀವು ಜೋಗಿಯವರ ಶೈಲಿಯಲ್ಲಿ ಓದಬಹುದು. ಆ ಎಲ್ಲಾ ಕಥೆಗಳನ್ನು ಅವರು ಅಲ್ಲಲ್ಲಿ ಬದುಕಿಗೆ ಹೊಂದಿಸುತ್ತಾ ಹೋಗುವ ಪರಿಗಾದರೂ ನೀವು ಈ ಪುಸ್ತಕ ಇಣುಕಬೇಕು.

ಸಾಹಿತ್ಯದ ಪುಟಗಳಿಂದನೂ ಸಾವನ್ನು ಕರೆತಂದಿದ್ದಾರೆ. ಕವಿಗಳು, ದಾರ್ಶನಿಕರು, ತತ್ವಜ್ಞಾನಿಗಳು ಸಾವನ್ನು ಒಂದು ರೂಪಕವಾಗಿ ಬಳಸಿರುವ ಅನೇಕ ಉದಾಹರಣೆಗಳು, ನಿದರ್ಶನಗಳು, ಕಥೆಗಳು ಇಲ್ಲಿವೆ. ನಮ್ಮಲ್ಲಿನ ಮತ್ತು ನಮ್ಮ ದೇಶದ ಆಚೆಯಲ್ಲೂ ಸಾವಿನ ಬಗ್ಗೆ ಆದ ಚರ್ಚೆಗಳು, ಬರೆದ ಸಾಹಿತ್ಯದ ತುಣುಕುಗಳನ್ನು ನೀಡಿದ್ದಾರೆ. ಸಾವಿನ ಕುರಿತು ಬರೆಯಲಾದ ಪುಟ್ಟ ಪುಟ್ಟ ಪದ್ಯಗಳನ್ನು ಅವರೇ ಅನುವಾದಿಸಿದ್ದಾರೆ..

ಅನುವಾದವೂ ಸಾವಿನ ಸಾಲುಗಳನ್ನು ಆಪ್ತವಾಗಿಸಿದೆ..

ಬಂದ ಹಾಗೆಯೇ
ಮರುಳುತ್ತದೆ
ಬೇಸಿಗೆಯ ಹುಳ..

ಉದುರುತ್ತಿರುವ ಎಲೆ
ಕೆಳಗಿನ ಕೊಂಬೆಗಳಲ್ಲಿ
ಒಂಚೂರು ಶರತ್ಕಾಲವ ಉಳಿಸಿಹೋಗಿದೆ..

ಸಾವನ್ನು ವ್ಯಾಖ್ಯಾನಿಸುವ ಜಪಾನ್ ಮತ್ತು ಚೀನಿ ಕವಿಗಳ ಸಾಲುಗಳು ಅವರ ಕೈಯಲ್ಲಿ ಪುಟ್ಟ ಕವಿತೆಗಳಾಗಿ ಸಾವನ್ನು ಆತ್ಮೀಯವಾಗಿಸುತ್ತವೆ.

ಕೊನೆಯಲ್ಲಿ ಬರುವ 'ಅಂತರಂಗದ ಪುಟಗಳಿಂದ ' ಮತ್ತು 'ಹಳೆಯ ಪುಟಗಳಿಂದ' ಎಂಬ ಎರಡು ಭಾಗಗಳು ಭಾವಾತ್ಮಕವಾಗಿವೆ. ಲೇಖಕರ ಕೆಲವು ಅನುಭವಗಳು ಹೃದ್ಯವಾಗಿವೆ. ಸಾವು ನಾವು ಯಮನಿಗೆ ಕೊಟ್ಟ ಭಾಷೆ, ಬದುಕಿನ ಕತೆಗೆ ಸಾವಿನ ಮುನ್ನುಡಿ, ಮರಣದ ಹೊಸಿಲಿಗೆ ಹಚ್ಚಿದ ಹಣತೆ.. ಇವು ನಿಮ್ಮನ್ನು ಎಂದೂ ಕೂಡ ಕಾಡುತ್ತವೆ.

ಸಾವನ್ನು ಖರೀದಿಸಿ ಇಬ್ಬರು ಗೆಳೆಯರ ಕೈಗಿಟ್ಟು ನಿಮಗೆ ಒಳ್ಳೆಯ ಸಾವು ಬರಲಿ ಎಂದು ಹಾರೈಸಿದೆ. ಅವರು ಅಷ್ಟೆ ಆತ್ಮೀಯವಾಗಿ 'ಸಾವು' ಅನ್ನು ನಗುತ್ತಾ ಸ್ವಾಗತಿಸಿದರು. ಜೋಗಿಯವರು ಪುಸ್ತಕದ ಆರಂಭದಲ್ಲಿ 'ನನಗೆ ಒಳ್ಳೆಯ ಸಾವು ಬರಲಿ' ಎಂದು ಹಾರೈಸಿ ಎಂದು ಹೇಳಿದ್ದಾರೆ. ಬರೀ ಒಳ್ಳೆಯ ಸಾವಲ್ಲ ಅದು ಸುಖವಾದ ಸಾವೂ ಕೂಡ ಆಗಲಿ. ಮತ್ತು ಓದಿದ ನನಗೂ ಒಂದು ಒಳ್ಳೆಯ ಸಾವು ಸಿಗಲಿ..

- ಸದಾಶಿವ್ ಸೊರಟೂರು.

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...