ದಂಡಿ- ಕಾಡು ಹೊದ್ಧವರ,ಕಡಲು ಕುಡಿದವರ ಕಥೆ


ದಂಡಿ ಕಾದಂಬರಿ ಐದು ಅಂಕಣದಲ್ಲಿ ಭಾರತದ ಸ್ವಾತಂತ್ರ್ಯದ ಚಾರಿತ್ರಿಕ ಸಂಕಥನವನು ತೆರೆದು ತೋರುವುದು. ಅಹಂಕಾರ ಮತ್ತು ಸಂಪತ್ತಿನ ಮೋಹ ಹೆಚ್ಚಾಗಿ ಬ್ರಿಟಿಷರು ಉಪ್ಪಿನ ಮೇಲೆಯೂ ತೆರಿಗೆಯನ್ನು ವಿಧಿಸಿದಾಗ ಮಹಾತ್ಮ ಗಾಂಧೀಜಿಯವರು ಕಾಲನಡಿಗೆಯ ಮೂಲಕ ಸಮುದ್ರದ ಕಡೆಗೆ ನಡೆದು ಉಪ್ಪು ತಯ್ಯಾರಿಸುವುದು ನಮ್ಮ ಹಕ್ಕು ಎಂದು ದೊಡ್ಡ ಪ್ರಮಾಣದಲ್ಲಿ ಕೈಗೊಂಡ ಜಾತಾ ಭಾರತೀಯರಲ್ಲಿ ಬಹು ದೊಡ್ಡ ಸಂಚಲನವನ್ನುಂಟು ಮಾಡಿದೆ. ನೂರಾರು ಜನ ಗಾಂಧೀಜಿಯವರ ಪ್ರಭಾವಲಯಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಣಾಭಾವದಿಂದ ತೊಡಗಿಸಿಕೊಂಡವರ ಕಥೆಯಾದ ಈ ಕಾದಂಬರಿ ಓದಗನಿಗೆ ದಿವ್ಯ ನೋಟವನು ಸ್ಪುರಿಸಿ ಚಾರಿತ್ರಿಕ ಪ್ರಜ್ಞೆಯನು ಎಚ್ಚರಗೊಳಿಸುವ ಹಾಗೆ ರೂಪಗೊಂಡಿದೆ ಎಂದಿದ್ದಾರೆ ಮನು ಪತ್ತಾರ ಕಲಕೇರಿ. ಅವರು ರಾಜಶೇಖರ ಮಠಪತಿ ಅವರ ‘ದಂಡಿ’ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಕೃತಿ: ದಂಡಿ
ಲೇಖಕರು: ರಾಜಶೇಖರ ಮಠಪತಿ
ಬೆಲೆ: 135
ಪುಟಗಳು: 160
ಮುದ್ರಣ: 2020
ಯಾಜಿ ಪ್ರಕಾಶನ, ಭೂಮಿ, ಎಂ.ಪಿ. ಪ್ರಕಾಶ ನಗರ, ನಹರ ಕಾಲೊನಿ, ಹೊಸಪೇಟೆ. ಬಳ್ಳಾರಿ ಜಿಲ್ಲೆ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ರಾಗಂ ಎಂದೆ ಖ್ಯಾತರಾದ ರಾಜಶೇಖರ ಮಠಪತಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ ಕಥೆ, ಕಾದಂಬರಿ, ನಾಟಕ, ಅನುವಾದ, ವಿಮರ್ಶೆ, ಅಂಕಣ ಬರಹ, ಹಾಗೂ ವ್ಯಕ್ತಿ ಚಿತ್ರಣ ಗಳಲ್ಲಿ ವಿಭಿನ್ನ ನಡೆಯನು ದಾಖಲಿಸಿದ ಚಿಂತನಶೀಲ ಲೇಖಕರು ಹಾಗೂ ಯಾವತ್ತೂ ಸಾಹಿತ್ಯವನು ಧ್ಯಾನಿಸುವ ದ್ಯಾನಾಸಕ್ತರು. ಅನೂಹ್ಯವಾದ ಪ್ರೀತಿಯಲಿ ಕಾವ್ಯವನು ಹೊಸೆಯುವ ಮತ್ತು ಎದೆಗೆ ತಾಜಾತನದಲ್ಲಿ ಮುಟ್ಟಿಸಿ ವಿನೂತನ ವಿಚಾರಗಳ ಗುಚ್ಚವನು ಮಾಸದ ಹಾಗೆ ಉಳಿಸಿ ಬಿಡುವ ಕವಿ. ಕಾವ್ಯದ ಕಡುಮೋಹಿ ಎಂದೆ ಹೆಸರಾದ ರಾಗಂ ಕಾವ್ಯ ದರ್ಶನದ ಲಾಲಿತ್ಯವನು ತಮ್ಮ ಇತರೆ ಬರಹಗಳಲ್ಲಿಯೂ ಉಳಿಸಿ ಬೆಳೆಸಿಕೊಂಡು ಬಂದ ಲೇಖಕ ಹಾಗೂ ಸಂವಾದಕ್ಕೆ, ಚರ್ಚೆಗೆ ತೆರೆದುಕೊಳ್ಳುತ್ತಾ ಹೊಸತಾದ ಮಾರ್ಗಕ್ಕೆ ಸಿದ್ದವಾಗಿರು ಗುಣವನು ಆಜನ್ಮದಿಂದಲೆ ಪಡೆದುಕೊಂಡು ಬಂದಿರುವ ಅಪರೂಪದ ಚಿಂತನಶೀಲರು.

ಭೀಮೆಯ ದಡದ ನೆಲದ ಸತ್ವವನು, ಹಲಸಂಗಿ ಗೆಳೆಯರ ಬಳಗದ ಸಾಹಿತ್ಯದ ಗಮವನು, ಕಿಟ್ಸ್ ಕವಿಯ ಜೀವ ಕಾರುಣ್ಯವನು, ವಿಜಯಪುರದ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕತೆಯ ಅನುಭೂತಿಯನು, ಕವಿ ರವೀಂದ್ರನಾಥ ಟ್ಯಾಗೋರ ಅವರ ವಿಶ್ವ ಸಂದೇಶವನು, ಗಾಂಧಿಜೀ ಅವರ ಸತ್ಯದ ಪ್ರೇಮವನು, ತಂದೆಯ ಸಂಸ್ಕಾರವನು ತಮ್ಮ ಇಡೀ ಬರಹದೊಳಗೆ ಬಿಡಿಸಿತೋರದಷ್ಟು ಹುರಿ ಹೊಡೆದುಕೊಂಡು ಜೋಳಿಗೆಯಲಿ ಜ್ವಾಪಾನ ಮಾಡಿಕೊಂಡು ಬರುತ್ತಿರುವ ಚಲನಶೀಲ ಬರಹಾರರು ಅಲ್ಲದೆ ಓದುಗರ ಎದೆಗೆ ಚಿಂತನೆಯ ಬೀಜಗಳನು ಹದವಾಗಿ ಬಿತ್ತುವ ಜಾಣ್ಮೆಯನು ಹೊಂದಿರುವ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ರಾಗಂ ಕನ್ನಡದ ಪ್ರಿಯ ಲೇಖಕರಲ್ಲಿ ಒಬ್ಬರಾಗಿದ್ದು ಯಾವತ್ತೂ ಪ್ರೇಮದ ಬೆಳಕನು ಹಚ್ಚಿಟ್ಟ ಹಣತೆಯಂತೆ ಕಾಣುತ್ತಾರೆ.

ರಾಗಂ ತಮ್ಮ ಬದುಕಿನಲ್ಲಿ ಕಾವ್ಯವನು ಹಚ್ಚಿಕೊಂಡ ಮತ್ತು ಮೈಗೆ ಮೆತ್ತಿಕೊಂಡ ಸಂತನಂತೆ ಕಾಣುವ ಈ ಪ್ರೇಮ ಕವಿ ಕಥೆ, ಕಾದಂಬರಿ,ನಾಟಕ, ಅನುವಾದ ಹಾಗೂ ವಿಮರ್ಶೆಯಲ್ಲಿ ಬಹುಸ್ತರದ ಕುಸುರಿತನ ಕೈಗೊಂಡ ಶಿಲ್ಪಿಯಾಗಿ ಕ್ರಮಿಸಿದ ಹಾದಿ ವಿಶಾಲವಾದದ್ದು. ಕನ್ನಡ,ಇಂಗ್ಲಿಷ್ ಎರಡೂ ಭಾಷೆಯಲ್ಲಿ ರಾಗಂ ಅವರು ಬರೆದ ಕೃತಿಗಳ ಸಂಖ್ಯೆ ಎಪ್ಪತನ್ನು ಮೀರಿವೆ. ಅರ್ಪಣೆ ಇಂದ ಸಾಹಿತ್ಯದ ಯಾನ ಕೈಗೊಂಡ ರಾಗಂ ಅವರು ಬೆತ್ತಲೆಗೆ ಬೆರಗಾಗಬಾರದು, ಶಬ್ದಸೂತಕದಿಂದ ನಿಶಾಗಾನ, ಜಗತ್ಪ್ರಸಿದ್ಧ ಭಾಷಣಗಳು, ಗಾಂಧಿ: ಅಂತಿಮ ದಿನಗಳು, ಗಾಂಧಿ ; ಮುಗಿಯದ ಅಧ್ಯಾಯ, ಇರುವಷ್ಟುಕಾಲ...ಇರುವಷ್ಟೇಕಾಲ ! .ಹೆಣ್ಣು ಹೇಳಿದ ಅರ್ದ ಸತ್ಯ, ಕಾವ್ಯಕ್ಕೆ ಉರುಲು, ಜಾಡಮಾಲಿಯ ಜೀವ ಕೇಳುವುದಿಲ್ಲ, ಬದುಕ ಬಾರದೆ ಬದುಕು, ಬದುಕ ಬದಲಿಸುವ ಮಾತುಗಳು, ಜಗದ್ವಂದ್ಯ ಭಾರತಂ ಮತ್ತು ದಂಡಿ ಇವು ಅವರ ಅತ್ಯಂತ ಮಹತ್ವದ ಕೃತಿಗಳು ಈ ಎಲ್ಲ ಕೃತಿಗಳು ಸಮ ಪ್ರಜ್ಞೆಯ ಓದುಗ ವಲಯವನು ಹಟ್ಟು ಹಾಕಿವೆ. ತಾಯ್ತನದ ಮಮಕಾರದ ಸ್ಪರ್ಶ ಹಾಗೂ ದರ್ಶನ ರೀತಿಯ ಅವರ ಭಾಷಣಗಳು ಕೂಡಾ ಬದುಕ ಬದಲಿಸುವ ಹಾಗೆಯೇ ಇವೆ ಮತ್ತು ಒಂದು ಎಚ್ಚರದ ಸ್ಥಿತಿಯನು ಜಾಗೃತವಾಗಿಯೇ ಇಡುತ್ತವೆ ಹೀಗಾಗಿ ರಾಗಂ ಅವರ ಮಾತು ಮತ್ತು ಬರಹಗಳು ಮೌಲ್ವಿಕವಾಗಿ ಚಲನಶೀಲ ಗತಿಯನು ಪಡೆದುಕೊಂಡಿವೆ.

ಕಾವ್ಯ, ಕಥೆ, ನಾಟಕ ಮತ್ತು ಅನುವಾದಗಳ ದಾರಿಯನು ಸುಗಮಗೊಳಿಸಿಕೊಂಡ ರಾಗಂ ಕಾದಂಬರಿಯ ಮಹಾಮಾರ್ಗದಲ್ಲಿಯೂ ತಮ್ಮ ಅಳಿಯದ ಹೆಜ್ಜೆಗಳನ್ನು ಮೂಡಿಸಿದ್ದಾರೆ. ದೇಶ ಭಕ್ತಿ ಮತ್ತು ದೇಶ ಪ್ರೇಮ ಅನ್ನುವುದು ಫ್ಯಾಶನ್ ಆಗಿ ವೇದಿಕೆಯ ಮೇಲೆ ಅರಚಾಡುವವರ ಸ್ವತಾಗಿದೆ ಅನ್ನುವ ಭಾವ ಮೂಡಿದೆ ಅನ್ನುವ ಈ ಸಂದರ್ಭಲ್ಲಿ ಭಾರತೀಯರ ಅಭಿಮಾನ ಮತ್ತು ಹೆಮ್ಮೆಯ ಸಂಕೇತವಾದ ತ್ರಿವರ್ಣಧ್ವಜದ ಕುರಿತಾಗಿ ' ಜಗದ್ವಂದ್ಯ ಭಾರತಂ ' ಕಾದಂಬರಿ ರಚಿಸಿ ಸ್ವಾತಂತ್ರ್ಯದ ದಿನಮಾನಗಳ ಘಟನೆಗಳನ್ನು ಮರುಕಟ್ಟಿಕೊಟ್ಟರು ಸದ್ಯ 'ಡಂಡಿ' ಕಾದಂಬರಿಯ ಮೂಲಕ ಕರ್ನಾಟಕದ ಕಾರವಾರದ ಪ್ರದೇಶ ಅಂಕೋಲಾ ಭಾಗದ ಜನ ಸಾಮಾನ್ಯರು ಹಾಗೂ ಬೆಟ್ಟ ಗುಡ್ಡ ಗಳಲ್ಲಿ ವಾಸಿಸುವ ಸಾಮಾನ್ಯರು ಅಂದು ಮಹಾತ್ಮ ಗಾಂಧೀಜಿಯವರು ಕರೆ ನೀಡಿದ 'ಉಪ್ಪಿನ ಸತ್ಯಾಗ್ರಹದ' ಪ್ರಭಾವದ ಪರಿಣಾಮವಾಗಿ ಜಾತಿ ಭೇದ ,ಸ್ತ್ರೀ ಪುರುಷರ ಅನ್ನುವ ತೊಡರುಗಳನ್ನು ಬದಿಗೊತ್ತಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸಮೂಹದ ಕಥನವನು ಕಟ್ಟಿಕೊಡುವ ಮೂಲಕ ಐತಿಹಾಸಿಕ ಘಟನೆಗಳ ಕುರಿತಾಗಿ ಮತ್ತೆ ಮೆಲುಕು ಹಾಕುವಂತೆ ಮಾಡಿ ಬರಹಗಾರರ ಜವಾಬ್ದಾರಿಯನು ನಿಭಾಯಿಸಿದ್ದಾರೆ

'ಡಂಡಿ ' ರಾಗಂ ಅವರ ಎರಡನೆಯ ಕಾದಂಬರಿ
ಬ್ರಿಟಿಷರ ನೀತಿ ಸಂಹಿತೆಯು ಸಾಮಾನ್ಯರ ಬದುಕನ್ನು ಚಿದ್ರ ಮಾಡಿ ಸಂಪತ್ತನ್ನು ಕ್ರೋಢೀಕರಿಸುವ ಮೂಲ ಉದ್ದೇಶ ಹೊಂದಿದ್ದು ಇದರಿಂದಾಗಿ ಜನ ಸಾಮಾನ್ಯರು ಹಾಗೂ ಮಧ್ಯಮ ವರ್ಗದ ಜನರಿಗೆ ಆಘಾತವಾಗಿದ್ದು ಇದನ್ನು ಜನ ಹೇಗೆ ಎದುರಿಸಿದರು ಹಾಗೂ ದೇಶ ವ್ಯಾಪಿ ಸ್ವಾತಂತ್ರ್ಯದ ಸೇನಾನಿಗಳು ಕರೆ ನೀಡಿದ್ದ ಚಳುವಳಿಗಳಿಗೆ , ಅಸಹಕಾರಕ್ಕೆ ಅಂಕೋಲದ ಸುತ್ತಮುತ್ತಲಿನ ಜನ ಹೇಗೆ ಮುಖಾಮುಖಿ ಆದರು ಇದರಿಂದಾದ ಪರಿಣಾಮಗಳೇನು ಅನ್ನುವ ಕಲಿಗಳ ಕಥನವನು ಹಾಗೂ ಹಿಂಸೆ ಅಹಿಂಸೆಯ ದಾರಿಗಳಲ್ಲಿ ಯಾವ ದಾರಿ ಮನುಷ್ಯನನ್ನು ಮಹಾ ಮಾನವರನ್ನಾಗಿ ಮಾಡುವುದು ಅನ್ನುವ ಸೂಕ್ಷ್ಮವಾದ ಚರ್ಚೆಯನು ಕೂಡಾ ರಾಗಂ ಪ್ರೇಮಮಯವಾಗಿ ಇಲ್ಲಿ ದಾಖಲು ಮಾಡಿರುವರು. ಕನ್ನಡದಲ್ಲಿ ಸ್ವಾತಂತ್ರ್ಯ ಪೂರ್ವದ ಘಟನಗಳನ್ನು ಮೆಲಕು ಹಾಕುವ ಕಥೆ ಕಾದಂಬರಿಗಳು ನವೋದಯದ ಕಾಲದಿಂದಲೂ ರೂಪುಗೊಳ್ಳುತ್ತಾ ಬರುತ್ತಿರುವುನ್ನು ನೋಡುತ್ತಾ ಬರುತ್ತಿದ್ದೇವೆ.ಕನ್ನಡದಲ್ಲಿ .ತೀರಾ ಇತ್ತೀಚಿಗೆ ಸ್ವಾತಂತ್ರ್ಯ ಪೂರ್ವದ ವಿಷಯವನ್ನಿಟ್ಟು ಕೊಂಡು ರಚನೆಯಾದ ಲತಾ ಗುತ್ತಿ ಅವರ - ಕರಿ ನೆರಳು ,ಶ್ರೀನಿವಾಸ ವೈದ್ಯ ಅವರ - ಹಳ್ಳ ಬಂತು ಹಳ್ಳ, ರಾಘವೇಂದ್ರ ಪಾಟೀಲ ಅವರ - ಗೈರ ಸಮಜೂತಿ ಹಾಗೂ ಶಂಕರ ಬೈಚಬಾಳ ಅವರ - ಭಾರತ ಸಿಂಹಾಸನ ರಶ್ಮಿ - ಕಾದಂಬರಿಗಳು ಸ್ವಾತಂತ್ರ್ಯ ಪೂರ್ವದ ವಿಷಯದ ಕುರಿತಾಗಿ ಮಾತನಾಡಿ ಸಮುದಾಯದ ಸಂಕಟಗಳನ್ನು ಹೊರಚೆಲ್ಲತ್ತವೆ. ಆದರೆ ರಾಗಂ ಅವರ ಡಂಡಿ ಸಮುದಾಯದ ಸಂಕಟಗಳ ಜೊತೆ ಜೊತೆಗೆ ನೆಲದ ಒಡೆತನ, ಉಪ್ಪಿನ ಹಕ್ಕಿಗಾಗಿ ಹಾಗೂ ಅಹಿಂಸೆಯ ಪ್ರತಿಪಾದನೆ ಕುರಿತಾಗಿ ಮತ್ತು ವ್ಯಕ್ತಿ ಮತ್ತು ವ್ಯವಸ್ಥೆಯನು ಪರಿವರ್ತಿಸುವ ನಿಟ್ಟಿನಲ್ಲಿ ರೂಪಗೊಂಡು ವಿಶೇಷವಾಗಿ ಗಮನಸೆಳೆಯುತ್ತದೆ.

ದಂಡಿ ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿಜೀ ಅವರ ಮುಂದಾಳತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಿಂದ ಪ್ರಭಾವಿತರಾದ ಕರಾವಳಿ ಅಂಕೋಲಾದ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಹಾಗೂ ಸಮದ್ರ ತೀರಕ್ಕೆ ಹೋಗಿ ಉಪ್ಪಿನ ಕರ ನಿರಾಕರಣೆ ಮಾಡಿ ಉಪ್ಪು ನಮ್ಮ ಸಂಪತ್ತು ನಮ್ಮ ನಿತ್ಯ ಜೀವಕ್ಕೆ ಬೇಕಾಗುವ ಚೈತನ್ಯ. ಹೀಗಾಗಿ ನಾವೆಲ್ಲಾ ಉಪ್ಪಿನ ಕರ ಕೊಡಲಾರೆವು ಅನ್ನುವ ನಿರ್ಣಯಕ್ಕೆ ಬದ್ಧರಾಗಿ ತಮ್ಮನ್ನೆ ಚಳುವಳಿಗೆ ಅರ್ಪಿಸಿಕೊಂಡವರ ಜನಸಮೂದಾಯದ ಕಥೆಯಾಗಿ ಹೊರಹೊಮ್ಮಿ ಹಿಂಸೆ ಅಹಿಂಸೆಯ ಹಾಗೂ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಗುಡ್ಡಗಾಡಿನ ಸಮುದಾಯದ ಜನ ಸಂಘಟಿತರಾಗಿ ನೆಲ ಜಲದ ಕುರಿತಾಗಿ ಹೋರಾಟವನು ಕಟ್ಟಿದ ಬಗೆ ಇಲ್ಲಿ ಬಹುಸ್ತರದ ನೆಲೆಯಲಿ ಅನಾವರಣವಾಗಿದೆ. ಇದರೊಟ್ಟಿಗೆ ಇಂದಿನ ಮುಂದಿನ ದಿನಮಾನಗಳಿಗೆ ಗಾಂಧಿಜೀ ಪ್ರತಿಪಾದಿಸಿದ ಸತ್ಯ,ನ್ಯಾಯ, ನೀತಿಯ ಮೌಲ್ಯಗಳ ಅನುಷ್ಠಾನದ ಕುರಿತಾಗಿಯೂ ರಾಗಂ ತಮ್ಮದೆ ನೆಲೆಯಲ್ಲಿ ಮಾಡಿದ್ದಾರೆ. ಅಂಕೋಲಾದ ಪರಿಸರ,ಬೆಟ್ಟ ಗುಡ್ಡ ಅಲ್ಲಿ ವಾಸಿಸುವ ಹಾಲಕ್ಕಿಗಳು ಅವರ ಸಂಸ್ಕೃತಿ ಸಂಪ್ರದಾಯ ಕುರಿತಾಗಿ ಮಾತನಾಡುತ್ತಲೆ ಆ ನೆಲದ ಮಲ್ಲಿಗೆಯ ಪರಿಮಳವನು ಮೊಗದು ಕೊಡುತ್ತಾ ಜೀವ ದ್ರವ್ಯದ ಸೊಗಡು ಹೆಚ್ಚಿಸುವ ಉಪ್ಪು, ಕಾನನ ಸಂಪತ್ತಿನ ಸೌರೋಷ್ಟ ಸವಿಯನು ಚೆಲ್ಲಿದ್ದಾರೆ.

ದಂಡಿ ಕಾದಂಬರಿ ಐದು ಅಂಕಣದಲ್ಲಿ ಭಾರತದ ಸ್ವಾತಂತ್ರ್ಯದ ಚಾರಿತ್ರಿಕ ಸಂಕಥನವನು ತೆರೆದು ತೋರುವುದು. ಅಹಂಕಾರ ಮತ್ತು ಸಂಪತ್ತಿನ ಮೋಹ ಹೆಚ್ಚಾಗಿ ಬ್ರಿಟಿಷರು ಉಪ್ಪಿನ ಮೇಲೆಯೂ ತೆರಿಗೆಯನ್ನು ವಿಧಿಸಿದಾಗ ಮಹಾತ್ಮ ಗಾಂಧೀಜಿಯವರು ಕಾಲನಡಿಗೆಯ ಮೂಲಕ ಸಮುದ್ರದ ಕಡೆಗೆ ನಡೆದು ಉಪ್ಪು ತಯ್ಯಾರಿಸುವುದು ನಮ್ಮ ಹಕ್ಕು ಎಂದು ದೊಡ್ಡ ಪ್ರಮಾಣದಲ್ಲಿ ಕೈಗೊಂಡ ಜಾತಾ ಭಾರತೀಯರಲ್ಲಿ ಬಹು ದೊಡ್ಡ ಸಂಚಲನವನ್ನುಂಟು ಮಾಡಿದ ಇತಿಹಾಸ ಅಂಕೋಲದ ಶಾನಭಾಗರ ರುಕ್ಮಿಣಿ,ಪಟೇಲ ಸುಬ್ರಾಯ ನಾಯಕ, ಜಯರಾಮಾಚಾರ್ಯರು, ಕೃಷ್ಣಾಬಾಯಿ ಪಂಜೀಕರರು, ಬೀರಣ್ಣ ನಾಯಕ, ರಾಮಾನಾಯಕ, ನಾಗೇಶ ಹೆಗಡೆ, ನಾರಾಯಣ ನಾಯಕ, ಹಾಲಕ್ಕಿಯ ದೇವೇಂದ್ರಪ್ಪ, ಚೌಡಾನಾಯ್ಕರು ಹೀಗೆ ನೂರಾರು ಜನ ಗಾಂಧೀಜಿಯವರ ಪ್ರಭಾವಲಯಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಣಾಭಾವದಿಂದ ತೊಡಗಿಸಿಕೊಂಡವರ ಕಥೆಯಾದ ಈ ಕಾದಂಬರಿ ಓದಗನಿಗೆ ದಿವ್ಯ ನೋಟವನು ಸ್ಪುರಿಸಿ ಚಾರಿತ್ರಿಕ ಪ್ರಜ್ಞೆಯನು ಎಚ್ಚರಗೊಳಿಸುವ ಹಾಗೆ ರೂಪಗೊಂಡಿದೆ ಈ ಮೂಲಕ ರಾಗಂ ಪರಂಪರೆಯೊಂದಿಗೆ ಅನುಸಂಧಾನ ಗೈಯುವ ಕಾರ್ಯ ಮಾಡಿದ್ದಾರೆ.

ಸೂರ್ವೆಯ ನತ್ಲಳ ಮಗ ಶಂಕರ, 'ಡಂಡಿ' ಎಂದು ಮರುನಾಮಕರಣಗೊಂಡವನು. ಬ್ರಿಟಿಷರ ಪೋಲಿಸಾದ ದುರಹಂಕಾರಿ ಲತೀಫ್ ಖಾನ್ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಡಂಡಿ ಯ ತಂದೆ ತಾಯಿಗಳಿಗೆ ಇನ್ನಿಲದ ಚಿತ್ರಹಿಂಸೆ ನೀಡಿದ ಕಾರಣ ಡಂಡಿ ತಂದೆ ತಾಯಿಯನ್ನು ಕಳೆದುಕೊಂಡು ಅನಾತನಾಗುತ್ತಾನೆ. ತಾನು ಹುಟ್ಟಿದ ನೆಲದ ಆಪ್ತತೆಯಿಂದ ದೂರವಾಗವ ಸಂಕಟವನು ಅನುಭವಿಸಿದ ಡಂಡಿಯ ಎದೆಯಲ್ಲಿ ಕೌರ್ಯ ಮನೆ ಮಾಡಿಕೊಂಡಿದ್ದು ಅಧು ರಕ್ತದ ಸ್ನಾನಕ್ಕೆ ಕಾಯುತ್ತಿರುವಂತಿದೆ. ಸೇಡು ಪ್ರತೀಕಾರದಲ್ಲಿಯೇ ಬಾಲ್ಯದ ದಿನಗಳನ್ನು ಕಳೆದ ಡಂಡಿ ಯವ್ವನದ ದಿನಗಳ ಆರಂಭದಲ್ಲಿಯೇ ತಂದೆಯ ಸಾವಿಗೆ ಕಾರಣನಾದ ಹಾಗೂ ಸತ್ಯಾಗ್ರಹಿಗಳಿಗೆ ಕಂಟಕನಾದ ಲತೀಫ್ ಖಾನ್ ನನ್ನು ಹರಿತವಾದ ಆಯುಧದಿಂದ ಐತಿಹಾಸಿಕ ಸ್ಮಾರಕವಾದ ಮಾಸ್ತಿ ಕಟ್ಟೆಯ ಹತ್ತಿರ ಅವನ ಮುಂಡದಿಂದ ರುಂಡವನು ಬೇರ್ಪಡಿಸುವ ಮೂಲಕ ಕೌರ್ಯವನ್ನು ಮೆರೆದು ಆ ರುಂಡವನು ನದಿಗೆ ಅರ್ಪಿಸಿದ ಆವಾಗ್ಗೆ ಚಳುವಳಿಗಾರರಿಗೆ ಆತ್ಮಸ್ಥೈರ್ಯ ತುಂಬುವ ಕೇಂದ್ರವಾದ ಗುಂಡಬಾಳದ ವಸಂತ ಶಾನಭಾಗರ ಮನೆ ಸೇರುತ್ತಾನೆ. ಅಲ್ಲಿ ವಸಂತ ಶಾನಭಾಗರ ತಾಯಿ ರುಕ್ಮಿಣಿಯವರಿಗೆ ಲತೀಫ್ ಖಾನನ್ನು ಕೊಲೆ ಮಾಡಿದ ಸಂಗತಿಯನು ದಂಡಿ ಹೇಳದಾಗ ರುಕ್ಮಿಣಿಯಮ್ಮನವರು ನಾವು ಗಾಂಧಿ ಪರಿಣಿತ ಸ್ವಾತಂತ್ರ್ಯ ಪ್ರೇಮಿಗಳು ಚಳುವಳಿ ಮತ್ತು ಸತ್ಯಾಗ್ರಹದಲ್ಲಿ ಹಿಂಸೆ ಸುಳಿಯದು ಇದು ನಮ್ಮ ದಾರಿಯಲ್ಲ ಅನ್ನುವ ಮಾತನ್ನು ಹೇಳಿ ದಂಡಿಯ ತಾಯಿ ನತ್ಲ ತುಳಿದ ದಾರಿಯ ಹೆಜ್ಝೆಗಳನ್ನು ನೆನಪಿಸುತ್ತಾರೆ ಹಾಗೂ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಉಪ್ಪು ಬಾಯಿಯಲ್ಲಿ ಹಾಕಿ ಬೆಳೆದ ಕೂಸು ನೀನು, ನೆತ್ತರದ ದಾರಿಗೆ ಉತ್ತರ ಇಲ್ಲ ಅದು ಮತ್ತೆ ನೆತ್ತರದ ಕಡೆಗೆ ಎಳೆದು ಬದಕನ್ನು ಅನಾಥಗೊಳಿಸುತ್ತದೆ ಅನ್ನುವ ಮಾತುಗಳು ದಂಡಿಗೆ ಅನ್ವಯಿಸಿ ಹೇಳಿದರು ಕೂಡಾ ಸದ್ಯದ ಹಲವು ಸಮಸ್ಯೆಗಳಿಗೆ ಉತ್ತರ ಇದ್ದಂತಿವೆ.

ಕಾದಂಬರಿಯ ಕೇಂದ್ರ ಪಾತ್ರಗಳಾದ ದಂಡಿ ಮತ್ತು ರುಕ್ಮಿಣಿ ಅವರ ಹಿಂಸೆ ಮತ್ತು ಅಹಿಂಸೆ,ಚಳುವಳಿ, ಸತ್ಯಾಗ್ರಹದ ಕುರಿತಾದ ಚರ್ಚೆ ಸ್ವಾತಂತ್ರ್ಯ ಪೂರ್ವದ ಹೋರಾಟಗಳ ಗಂಭೀರತೆಯನು ಹಾಗೂ ಸ್ವಾತಂತ್ರ್ಯ ಕ್ಕಾಗಿ ನಡೆದ ತ್ಯಾಗ ಬಲಿದಾನ ಗಳ ಕಥೆಯನು ಮರುಸ್ಥಾಪಿಸಿ ಬಿಡುವವು. ಸ್ವಾತಂತ್ರ್ಯದ ಚಳುವಳಿಯಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಭಾಗವಹಿಸಿ ಅದರ ತೀವ್ರತೆಯನು ಹೆಚ್ಚಿಸಿದ ಅಂಕೋಲೆಯ ಸುತ್ತಲಿನ ಗ್ರಾಮಗಳ ಹಿಚಕಡದ ಲಕ್ಷೀ, ಸೂರ್ವೆಯ ಇಂಕು, ಜಮಗೋಡದ ಸಾತಮ್ಮ, ಸೂರ್ವೆಯ ತಿಪ್ಪು, ಕಣಗಿಲದ ಬೊಮ್ಮ, ವಾಸ್ರೆ ಚಂದ್ರಿ, ಬಾಸಗೋಡದ ಹನುಮು ಹಾಗೂ ಹಲಸರದೇವಿ ಯರ ತ್ಯಾಗಗಳು ಇತಿಹಾಸದಲ್ಲಿ ದಾಖಲಾಗದೆ ಹೋಗಿವೆ ಇವರೆಲ್ಲಾ ತಮ್ಮ ಉಸಿರನೆ ಒತ್ತೆಯಿಟ್ಟು ದೇಶಕ್ಕಾಗಿ ಅರ್ಪಿಸಿಕೊಂಡವರು. ರಾಗಂ ಅವರು ಇಲ್ಲಿ ಇವರೆಲ್ಲರ ಯಶೋಗಾಥೆಯನು ಇತಿಹಾಸವಾಗಿಸಿದ್ದಾರೆ. ಇಲ್ಲಿ ಬರುವ ತಿಪ್ಪಕ್ಕ ಪೋಲಿಸ್ ಸ್ಟೇಷನ್ ಗೆ ಹೋಗಿ ಅವಾಜ್ ಹಾಕಿದ ರೀತಿ ಹಾಗೂ ಕಣಗಿಲದ ಬೊಮ್ಮಕ್ಕ ಬ್ರಿಟಿಷ ಗವರ್ನರ್ ಗೆ ಗೋ ಬ್ಯಾಕ್ ಹೇಳಿದ ಆ ಕೂಗುಗಳು ಕುರಿತಾಗಿ ಓದಿದಾಗ ರೋಮಾಂಚನವಾಗುವುದು.

ಪ್ರತಿಕಾರದ ಬೆಂಕಿಯನು ತುಂಬಿಕೊಂಡ ದಂಡಿಯ ಮನಸ್ಸನ್ನು ಹಾಗೂ ಕಾರವಾರದ ಸೀಮೆಯಲ್ಲಿ ಸ್ವಾತಂತ್ರ್ಯ ಚಳುವಳಿಗಾಗಿ ಶಾಂತಿಯುತವಾಗಿ ತೊಡಗಿಕೊಂಡವರ ಕಥೆಗಳನು ಹೇಳುವ ಮೂಲಕ ರುಕ್ಮಿಣಿಯಮ್ಮ ಮುಂದೆ ನಡೆಯಬೇಕಾದ ಚಳುವಳಿಗಳಿಗೆ ದಂಡಿಯನ್ನೆ ನಾಯಕನನ್ನಾಗಿ ಮಾಡುವ ತರಬೇತಿಯನ್ನೆ ತಮ್ಮ ಮಾತಗಳಲ್ಲಿ ನೀಡಿ ಅವನನ್ನು ಸಾತ್ವಿಕ ಪಥದತ್ತ ತರುವ ಸನ್ನಿವೇಶಗಳು ತುಂಬಾ ಅರ್ಥಪೂರ್ಣವಾಗಿ ಹೆಣೆಯಲಾಗಿದೆ. ಕಾಡ ಸಂಪತ್ತನ್ನು ಕಾಯ್ದು ಅದನ್ನು ಉಳಿಸಿ ಬೆಳೆಸುವ ಸಲುವಾಗಿಯೆ ಕಾಡಿನಲ್ಲಿ ಸೇರಿರುವ ಹಾಲಕ್ಕಿಗಳ ದೇಶ ಪ್ರೇಮ ಅವರ ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯ, ಜೀವನ ವಿಧಾನ, ಉದಾತ್ತ ವಿಚಾರಗಳು, ಮಾನವೀಯತೆಗಾಗಿ ತುಡಿಯುವ ಅವರ ಹಂಬಲ ಕಾದಂಬರಿಗೆ ಸಮೂದಾಯಿಕ ನೆಲೆಯನು ಒದಗಿಸಿದೆ. ದಂಡಿಯ ಬಾಲ್ಯ ಕಾಲದ ಗೆಳತಿ ವಸುಧೆಯ ಜೀವನ ಅವಳ ತಂದೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಾಣವನೆ ಬಲಿ ನೀಡಿದ ಸಂದರ್ಭ, ಅವಳ ತಾಯಿ ಈ ಎಲ್ಲ ದುರ್ಘಟನೆಗಳಿಂದಾಗಿ ಧಾರವಾಡದ ಹುಚ್ಚಾಸ್ಪತ್ರೆ ಸೇರಿದ್ದು ಈ ಕಾರಣಕ್ಕಾಗಿ ವಸುಧೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ದೇಶ ಸೇವೆಗೆ ಸಮರ್ಪಣಾಭಾವದಿಂದ ತೊಡಗಿಸಿಕೊಂಡಿದ್ದು ಕಾದಂಬರಿಗೆ ಭಾವ ಸ್ಪರ್ಶವನು ನೀಡಿ ಓದಗರನ್ನು ಭಾವುಕವಾಗಿ ಅಪ್ಪಿಕೊಳ್ಳುವಂತೆ ಮಾಡುವುದು. ದಂಡಿಯ ಎದೆಯೊಳಗೆ ವಸುಧೆಯ ಮೇಲಿನ ಪ್ರೀತಿ ಹೂವಂತೆ ಅರಳುವ ರೀತಿಯು ಕೂಡಾ ಸಿನಿಮಾದ ಹಾಗೆ ಕಣ್ಮುಂದೆ ಕಟ್ಟಿ ಬಿಡುವದು.

ದಂಡಿ ಕಾದಂಬರಿ ಏಕ ವ್ಯಕ್ತಿಯ ಕಥೆಯಾಗದೆ ಬಹುಸ್ತರದ ನೆಲೆಯ ಕಥೆಯಾಗಿ ವಿಸ್ತಾರವಾಗುತ್ತಾ ಹಲವು ಆಲೋಚನೆಯ ದಾರಿಯನು ಬಿಡಿಸಿ ತೋರುವದು. ಈ ಕಾದಂಬರಿಯಲ್ಲಿ ಬರುವ ಮಾಸ್ತಿಕಟ್ಟೆಯ ದಾರಿಯು ಸೇರಿದಂತೆ ಕಾಡಿನ ಹಲವು ದಾರಿಗಳು ಇಲ್ಲಿ ದಾಖಲಾಗಿವೆ ಈ ಕಾಡಿನ ದಾರಿಗಳು ಭೌತಿಕವಾಗಿ ನಿರ್ಮೋಹಿಯಾಗಿ ಕಾಣಬಹುದು ಆದರೆ ರಾಗಂ ಅವರ ಆಪ್ತವಾದ ಬರಹ ಸೃಷ್ಟಿಸುವ ಸನ್ನಿವೇಶಗಳು ಅವುಗಳಿಗೆ ಮೋಹದ ಲೇಪನ ಬಳಿದು ಜೀವ ಮತ್ತು ಜೀವನದ ಮರ್ಮವನು ಅರಹುವಂತೆ ಮಾಡಿದೆ ದಂಡಿ ತುಳಿದು ನಡೆಯುವ ನೆಲ ಬರಿ ನೆಲದ ದಾರಿಯಾಗದೆ ಬಹುಶಃ ವನು ನಿರ್ದೇಶಿಸುವ ಮಾರ್ಗವಾಗಿಯೇ ಹೊರಹೊಮ್ಮಿದೆ ಹಾಗೂ ಜೀವ ಸಂಬಂದಗಳನು ಬೆಸೆಯುವ ವಾಹಕವಾಗಿಯೂ ಕಂಡುಬರುತ್ತದೆ.

ಉಪ್ಪಿನ ಸತ್ಯಾಗ್ರಹ, ಚಲೆಜಾವ ಚಳುವಳಿ, ಕರ ನಿರಾಕರಣೆ, ಅರಣ್ಯ ಉಳಿಸಿ ಸತ್ಯಾಗ್ರಹ ಹೀಗೆ ಹಲವು ಚಳುವಳಿಗಳು ಜನರನ್ನು ಜಾಗೃತಗೊಳಿಸಿದ ಬಗೆಯನು ಆ ನೆಲದ ಕಥೆಯನು ಮರುಚಿಂತನೆಗೆ ಒಡ್ಡಿಕೊಂಡಿವೆ. ಕಾದಂಬರಿ ಕಾಡ ನೆಲದಲ್ಲಿ ಬಳ್ಳಿಯಂತೆ ಹಬ್ಬಿಕೊಳ್ಳುವ ಬಗೆ ಆಸಕ್ತಿದಾಯಕವಾಗಿದೆ ಆ ಮೂಲಕ ಮನುಷ್ಯ ಸಂಭಂದಗಳ ಮತ್ತು ದೇಶ ಪ್ರೇಮದ ಕುರಿತಾಗಿ ಕನವರಿಸುತ್ತದೆ. ಇಂದು ದೇಶ ಪ್ರೇಮದ ಚಹರೆ ಬಲವುಳ್ಳವರ ಕೈ ದಂಡವಾಗಿ ಬದಲಾಯಿಸಿಕೊಂಡು ಗಂಟಲದ ಜೋರು ಜೋರಾದ ಕೂಗಿಗೆ ನೇ ದೇಶ ಪ್ರೇಮವೆಂದು ಕರೆದು ಇದನ್ನೆ ಅನುಸರಿಸುವಂತೆ ಜಾರಿ ಆಗುತ್ತಿರುವ ಗುಪ್ತ ಅಜಂಡಾಗಳು ಕಾನೂನು ಎಂದೆ ಬಿಂಬಿಸುವ ಕಾಲದಲ್ಲಿ ನಾವಿದ್ದೇವೆ ಇಂತಹ ಸಂದರ್ಭದಲ್ಲಿ ರಾಗಂ ದಂಡಿ ಯ ಮೂಲಕ ನಿಜದ ದೇಶ ಪ್ರೇಮವನು, ತ್ಯಾಗ ಬಲಿದಾನಗಳನು, ಸ್ವಾತಂತ್ರ ಹೋರಾಟಗಾರರು ಅನುಭವಿಸಿದ ಕಡು ಕಷ್ಟವನು ನಮ್ಮ ಮುಂದೆ ಇಟ್ಟಿದ್ದಾರೆ ಹೀಗಾಗಿ ಈ ದಂಡಿ ಭೂತ ವರ್ತಮಾನ ಹಾಗೂ ಭವಿಷ್ಯವನು ಒಟ್ಟಿಗೆ ಧ್ಯಾನಿಸುತ್ತದೆ.

ಸ್ವಾತಂತ್ರ್ಯ ಸಂಗ್ರಾಮದ ಐತಿಹ್ಯವನು ಕಾಫಿಟ್ಟುಕೊಂಡು ಅಲ್ಲಿನ ಘಟನೆಗಳನ್ನು ಕಾದಂಬರಿಯ ಚೌಕಟ್ಟಿನಲ್ಲಿ ಎರಕ ಹೊಯ್ಯುವುದು ತುಸು ಕಷ್ಟದ ಕೆಲಸ ಅಲ್ಲದೆ ಇಡಿ ಕಥೆ ಲಯ ತಪ್ಪದ ಹಾಗೆ ಕಾಯ್ದುಕೊಂಡು ಬರುವುದು ಸೃಜನಶೀಲ ಲೇಖಕರಿಂದ ಮಾತ್ರ ಸಾಧ್ಯ ಆ ಸಾಧ್ಯತೆಯು ಇಲ್ಲಿ ಸಫಲಗೊಂಡಿದ್ದು. ದಂಡಿಯ ಕಥೆಯೊಂದಿಗೆ ಹತ್ತು ಹಲವಾರು ಉಪಕಥೆಗಳು ಉತ್ಸಹದಿಂದ ನಳನಳಿಸುತ್ತವೆ. ಬದುಕಿನ ಅನುಭವದ ಕಥನದಂತೆ ರೂಪಿಸಿದ ರಾಗಂ ಮಾಗಿದ ಲೇಖಕರಂತೆ ಕಾಣುತ್ತಾರೆ. ಅನುಭವಗಳು ಮಾಗಿದಂತೆ ಪರಪಂರೆಯೊಂದಿಗೆ ಬೆಸೆದುಕೊಳ್ಳುವುದು ನಿಜವಾದ ಲೇಖಕರ ಗುಣ ಸ್ವಭಾವ ಹಾಗೂ ಅಮೂರ್ತದ ನೆಲೆಯಲಿ ಕಾಡಿದ ವಸ್ತು ವಿಷಯಕ್ಕೆ ಮೂರ್ತ ರೂಪಕೊಡಲು ಚಿಂತನಶೀಲ ಬರಹಗಾರು ಮಾತ್ರ ಯಾವತ್ತೂ ಹಂಬಲಿಸುತ್ತಿರುತ್ತಾನೆ ಅಲ್ಲದೆ ತನ್ನ ಭಾವ ಪ್ರಪಂಚದಲ್ಲಿನ ನೆನಪುಗಳನು ಯತಾವತ್ತಾಗಿ ಎತ್ತಿ ಇಡದೆ ಅವುಗಳಿಗೆ ಭಾವ ಸ್ಪರ್ಶ ನೀಡಿ ಸಾರ್ವಕಾಲಿಕಗೊಳಿಸುವ ಜಾಣ್ಮೆ ಹೊಂದಿದಾಗ ಮಾತ್ರ ಲೇಖಕನಾದವನು ಓದಗನ ಎದೆಯೊಳಗೆ ಇಳಿಯಲು ಸಾಧ್ಯವಾಗುವುದು ಇದನ್ನು ದಂಡಿ ಕಾದಂಬರಿಯ ಮೂಲಕ ರಾಗಂ ಸಾಧಿಸಿ ತೋರಿದಂತಿದೆ.

ಭಾರತ ಸ್ವಾತಂತ್ರ್ಯದ ಚಾರಿತ್ರಿಕ ಇತಿಹಾಸ ಹಲವು ಆಯಾಮಗಳಲ್ಲಿ ವಿಸ್ತೃತವಾಗಿದ್ದು ಇದಕ್ಕಾಗಿ ಬಲಿಯಾದ ಜೀವಿಗಳ ನೆತ್ತರಕದ ಲೆಕ್ಕ ಕೊಡಲು ಸಾಧ್ಯವಿಲ್ಲ ಆದರೆ ಅದರಿಂದ ಕಲಿಯುವುದು ಮತ್ತು ಬದುಕಿಗೆ ಪಾಠವಾಗಿಸಿಕೊಳ್ಳುವ ಜರೂರು ಯಾವ ಕಾಲಕ್ಕೂ ಇದ್ದೆ ಇರುವುದು ಆ ಕಾರಣವಾಗಿಯೆ ಚಿಂತನಶೀಲ ಲೇಖಕರು ಇಂತಹ ವಸ್ತುವನ್ನಿಟ್ಟು ಕೊಂಡು ಕಥೆ ಕಾದಂಬರಿ ರಚಿಸುವ ಹುಕಿಗೆ ಬೀಳುವುದು ಇಲ್ಲಿ ಓದುಗನೆ ದಂಡಿ ಆಗಿ ಸತ್ಯದ ಪರ ನಿಲ್ಲವ ಹಾಗೆ ಮಾಡುವ ಗುಣ ಈ ಕಾದಂಬರಿ ಹೊಂದಿದೆ .

ಕನ್ನಡ ಕಾದಂಬರಿಯ ಸೀಮೆಯನು ತಮ್ಮ ಬರಹದ ಮೂಲಕ ಹಿಗ್ಗಿಸಿದ ರಾಗಂ ಅವರ ಬರಹದ ಶೈಲಿ ಭೀಮೆಯಂತೆ ತಣ್ಣಗೆ ಹರಿಯುವುದು, ವೈಭವ ರೋಚಕತೆಯಿಂದ ಮಕ್ತಿ ಪಡೆದ ದಂಡಿ ಓದಿದಂತೆ ತೆರೆದುಕೊಳ್ಳುತ್ತಲೆ ಸಾಗುವುದು ಇದು ಮೋಹದ ಗಾಳಿಯ ಸ್ಪರ್ಶದಿಂದ ದೂರ ನಿಂತು ಚಿಂತನೆಯ ಆಲೋಚನೆಗೆ ದೂಡಿ ನಮ್ಮನ್ನೆ ನಾವು ನೋಡಿಕೊಳ್ಳುವ ಹಾಗೆ ಚಿತ್ರಿತವಾಗಿದ್ದ ಕಾರಣ ಎಲ್ಲ ಕಾಲಕ್ಕೂ ಪ್ರಸ್ತುತವಾಗುವುದು

......ನೆತ್ತರು ಎಂದೂ ನೆಮ್ಮದಿ ನೀಡುವುದಿಲ್ಲ, ನೆನಪುಗಳು ಮಲಗುವುದಿಲ್ಲ ವಿಚಿತ್ರವೆಂದರೆ ಅವು ಸಾಯುವುದೂ ಇಲ್ಲ, ಮನುಷ್ಯ ಒಮ್ಮೆ ಪಾತಕ ಮಾಡಿದರೆ ಮುಗೀತು. ಮತ್ತೆ ಕಲೆ, ಹೂ- ಹೆಣ್ಣಿನ ಜೀವನದ ದಾರಿಗೆ ಬರೋದು ಬಹಳ ಕಷ್ಟ, ಹಿಂಸೆ ನಮ್ಮೊಳಗಿನ ಮನುಷ್ಯತ್ವ ಅನ್ನೊ ಮೌಲ್ಯದ ಪತನದ ದಾರಿ, ಜೀವನದ ನಮ್ಮ ಸಂಕಷ್ಟಕ್ಕೆ ಜೀವವನ್ನು ಬಲಿ ತಗೆದುಕೊಳ್ಳುವುದು ಬಲಿ ಕೊಡುವುದು ಎರಡೂ ತಪ್ಪೆ, ದೇವರಿಲ್ಲದೆ ಬದುಕಬಹುದು ಆದರೆ ಉಪ್ಪು ಇಲ್ಲದೆ ಬದಕಲಾಗದು, ಹಾಡು ಬಿಟ್ಟು ಹಾಲಕ್ಕಿಗಳು ಬದುಕೋದುಂಟಾ, ಈ ಕಾಡಿನಲ್ಲಿ ಕಷ್ಟಕ್ಕೂ ಹಾಡು ಹರಿತಿವೆ ಆದರೆ ನೆತ್ತರು ಹರಿಯುವುದಿಲ್ಲ, ವಯಸ್ಸಿಗೆ ಆಯುಷ್ಯದ ಪ್ರಜ್ಞೆಯೂ ಬೇಕು, ಒಂದು ಗಾಯವಾಗಿದ್ದರೆ ಮಾಹಿಸುವ ಯಾವುದಾದರೂ ದಾರಿ ಸಿಕ್ಕಿತು ಆದರೆ ಗಾಯವೆ ಮೈ ಆದರೆ ಮಾಡುವುದೇನು ಔಷಧಿ ಎಲ್ಲಿ ಹಚ್ಚುವುದು? ......ದಂಡಿ ಕಾದಂಬರಿಯಲ್ಲಿ ಇಂತಹ ಚತೋಹಾರಿಯಾದ ವಾಕ್ಯಗಳು ದಂಡಿ ದಂಡಿಯಾಗಿ ಸಿಗುವವು ಹಾಗೂ ಓದುವ ಚೈತನ್ಯವನು ಹೆಚ್ಚಿಸುವವು ಇಂತಹ ಸಾಲುಗಳೊಂದಿಗೆ ಸೇರಿ ಹೋದಂತಿರುವ ರಾಗಂ ಸತ್ಯ, ನ್ಯಾಯ, ನೀತಿ, ಧರ್ಮ, ಅಹಿಂಸೆಯ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿರುವ ದಿನಮಾನದಲ್ಲಿ ಅವುಗಳಿಗೆ ಮತ್ತೇ ಅರ್ಥ ಲೇಪಿಸುವ ಕೆಲಸ ದಂಡಿಯ ಮೂಲಕ ಮಾಡಿದ್ದಾರೆ ಇದಕ್ಕೆ ಹಲಸರ ದೇವಿಯ ಪಾತ್ರವೆ ಸಾಕ್ಷಿಯಾಗಿದೆ.

ಕಾಡು ಹೊದ್ದವರ ಕಡಲು ಕುಡಿದವರ ಕಥೆಯಾದ ದಂಡಿ ವರ್ತಮಾನದ ದಂದುಗವನು ತೆರೆದು ತೊರುವುದು ಈ ಮೂಲಕ ಮನುಷ್ಯರು ಅನುಸರಿಬೇಕಾದ ದಾರಿಯು ಇಲ್ಲಿ ತೆರೆದುಕೊಂಡು ನಿಂತಿದೆ. ಇಂದಿನ ಯುವ ಪೀಳಿಗೆಯವರು ಸ್ವಾತಂತ್ರ್ಯ ಸಂಗ್ರಾಮದ ಕಥನವನು ಕಲ್ಪಿತ ಕಥನದಂತೆ ಭಾವಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ದಂಡಿ ಹೊಸತಾದ ಆಶೆಯವನು ಹುಟ್ಟು ಹಾಕುವ ಹಾಗಿದೆ ದೇಶ ಪ್ರೇಮದ ನಿಜವಾದ ದೀಪ್ತಿಯನು ನಮ್ಮ ಮುಂದೆ ಹಿಡಿದು ಓದುವ ಒಲವನು ಸೃಷ್ಟಿಸುವ ಗುಣ ಹೊಂದಿದೆ.

ಕನ್ನಡ ಕಾದಂಬರಿ ಲೋಕದಲ್ಲಿ ದಂಡಿ ಮೂಡಿಸಿದ ಹೆಜ್ಜೆಗಳಿಗೆ ಸಾವಿಲ್ಲ , ದೇಶ ಪ್ರೇಮದ ಹೆಸರಿನಲ್ಲಿ ಇಂದು ನಡೆಸುತ್ತಿರುವ ಪೋಲೀಸಗಿರಿಯ ಲಕ್ಕಾಚಾರಕ್ಕೆ ದಂಡಿಯ ಮೂಲಕ ಉತ್ತರ ಕಂಡುಕೊಳ್ಳಬಹುದಾಗಿದೆ. ಕಾದಂಬರಿಗೆ ರುಕ್ಮಿಣಿ ಅವರ ಮಾತುಗಳು ತೋರಣದಂತಿವೆ ಶಂಕರ ದಂಡಿಯಾಗಿ ಚಳುವಳಿಯ ನಾಯಕನಾಗುವ ಕಥೆಯನು ಕೇವಲ ನೂರ ಮೂವತ್ತೈದು ಪುಟಗಳಲ್ಲಿ ಕಟ್ಟಿ ಕೊಟ್ಟ ರಾಗಂ ಸಂವಾದಕ್ಕೆ ತೆರೆದುಕೊಳ್ಳುವ ಲೇಖಕರಾಗಿದ್ದಾರೆ. ಕನ್ನಡ ಕಾದಂಬರಿಗಳು ಸಿನಿಮಾದ ಚೌಕಟ್ಟಿಗೆ ಒಗ್ಗುತ್ತಿಲ್ಲ ಅನ್ನುವ ಕೊರಗನ್ನು ರಾಗಂ ನಿಗಿಸಿದ್ದು ದಂಡಿ ಓದುವ ಮತ್ತು ನೋಡುವ ಎರಡೂ ಬಗೆಯಲ್ಲಿಯೂ ಮುನ್ನಡೆ ಸಾಧಿಸಿದೆ.

ಕನ್ನಡದ ಓದಗರಿಗೆ ವಿಭಿನ್ನ ಬಗೆಯ ಬರಹವನ್ನು ನೀಡುತ್ತಿರುವ ರಾಜಶೇಖರ ಮಠಪತಿ (ರಾಗಂ ) ಅವರಿಂದ ಕಾದಂಬರಿಯ ಮೂಲಕವೇ ಮನುಷ್ಯ ಪ್ರೀತಿಯನು ಶಾಶ್ವತಗೊಳಿಸುವ, ಸಮೂದಾಯದ ಹಲವು ಸಂಕಟಗಳಿಗೆ, ಸಮಸ್ಯೆಗಳಿಗೆ ಪರಿಹಾರವಾಗುವ ರೀತಿಯ ಇನ್ನೂ ಹೆಚ್ಚು ಕೃತಿಗಳು ರಚಿತವಾಗಲಿ.

ಮನು ಪತ್ತಾರ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ರಾಜಶೇಖರ ಮಠಪರಿ(ರಾಗಂ) ಅವರ ಪರಿಚಯ ಇಲ್ಲಿದೆ..

‘ದಂಡಿ’ ಕೃತಿಯ ಇನ್ನಷ್ಟು ಮಾಹಿತಿ ಇಲ್ಲಿದೆ..

 

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...