`ನಾನು ಬರೆಯುವ ಅಥವಾ ನಾವೆಲ್ಲಾ ಬರೆಯುವ ಕತೆಗಳು ನನ್ನ, ನಮ್ಮ ಅವ್ವನ ಕತೆಗಳೇ; ಎಂಬ ಅಲೀಸ್ ವಾಕರ್ ಮಾತು ಅವಳೇ ಹೇಳುವಂತೆ ನನಗೂ ಅರ್ಥವಾಗಿದ್ದು ಕೊಂಚ ತಡವಾಗಿಯೇ. ಇದರ ಜೊತೆಗೆ ಇವು ಜಗತ್ತಿನ ಎಲ್ಲ ಹೆಣ್ಣುಮಕ್ಕಳ ಕತೆಗಳು ಎನಿಸಿದ್ದರಿಂದಲೇ ಈ ಪುಸ್ತಕವನ್ನು ಅನುವಾದಿಸಬೇಕೆನ್ನಿಸಿತು. ಈ ಪುಸ್ತಕಕ್ಕೆ ಇನ್ನೂ ಹಲವಾರು ಆಯಾಮಗಳಿದ್ದರೂ, ವೈವಿಧ್ಯಮಯ ವಿಷಯಗಳಿದ್ದರೂ ಅದು ಪ್ರಧಾನವಾಗಿ ಬದುಕನ್ನು ಹಸನಾಗಿಸಲು ಹೆಣ್ಣುಮಕ್ಕಳು ನಡೆಸಿದ ಹೋರಾಟದ ಕತೆಗಳನ್ನೇ ಹೇಳುತ್ತದೆ ಎನ್ನುತ್ತಾರೆ ಲೇಖಕಿ, ಅನುವಾದಕಿ ಎಂ. ಆರ್. ಕಮಲ. ಅವರು ತಮ್ಮ ಅನುವಾದಿತ ಕೃತಿ ಕೆನ್ನೀಲಿಯಲ್ಲಿ ಬರೆದ ಲೇಖಕಿಯ ಮಾತು ನಿಮ್ಮ ಓದಿಗಾಗಿ..
ಅಮ್ಮಂದಿರ ತೋಟದ ಹೂಗಳು
ಇಪ್ಪತ್ತು ವರ್ಷಗಳ ಹಿಂದೆ ಆಫ್ರಿಕನ್-ಅಮೇರಿಕನ್ ಹೆಣ್ಣುಮಕ್ಕಳ ಆತ್ಮಕಥೆಗಳನ್ನು ಅನುವಾದ ಮಾಡಬೇಕೆಂದು ಪುಸ್ತಕಗಳನ್ನು ಹುಡುಕುತ್ತಿದ್ದಾಗ, ಹೆಚ್ಚಿನ ವಿಚಾರಗಳನ್ನು ತಿಳಿಯಬೇಕೆಂಬ ಅಭಿಲಾಷೆಯಿಂದ ಅಮೇರಿಕಾದ ವಿಶ್ವವಿದ್ಯಾನಿಲಯವೊಂದರ `ಕಪ್ಪು ಮಹಿಳಾ ಅಧ್ಯಯನ ಕೇಂದ್ರಕ್ಕೆ ಪತ್ರ ಬರೆದಿದ್ದೆ. ತಕ್ಷಣವೇ ಅವರು ಅನುವಾದ ಮಾಡಬಹುದಾದ ಪುಸ್ತಕಗಳ ಪಟ್ಟಿಯೊಂದನ್ನು ಕೊಟ್ಟಿದ್ದಲ್ಲದೆ ಸಾವಿರಾರು ರೂಪಾಯಿಗಳ ಮೌಲ್ಯದ ಪುಸ್ತಕಗಳನ್ನು ಅನುವಾದಿಸಲು ಉಚಿತವಾಗಿ ಕಳಿಸಿದ್ದರು. ತಮ್ಮ ದನಿ ಎಲ್ಲ ಕಡೆ ಕೇಳಬೇಕೆಂಬುದೇ ಅವರ ಉದ್ದೇಶವಾಗಿತ್ತು. ಆ ಪಟ್ಟಿಯಲ್ಲಿ ಆಲೀಸ್ ವಾಕರ್ ಅವರ `ಇನ್ ಸರ್ಚ್ ಆಫ್ ಅವರ್ ಮದರ್ಸ್ ಗಾರ್ಡನ್’ ಕೂಡ ಇತ್ತು ಎಂಬ ನೆನಪು. ಆದರೆ ಕಳಿಸಿಕೊಟ್ಟ ಪುಸ್ತಕಗಳನ್ನೆಲ್ಲ ಅನುವಾದ ಮಾಡಲಾಗಲಿಲ್ಲ. ಉದ್ಯೋಗ, ಸಂಸಾರ, ಮಕ್ಕಳು ಇತ್ಯಾದಿಗಳಲ್ಲಿ ಕಳೆದುಹೋಗಿ ಅತ್ತ ಕಣ್ಣು ಹರಿಸಲಿಲ್ಲ.
ನಿವೃತ್ತಳಾದ ಮೇಲೆ ಮತ್ತೆ ಆಲೀಸ್ ವಾಕರ್ ಅವರ ಪುಸ್ತಕವನ್ನು ಕೈಗೆತ್ತಿಕೊಂಡೆ. `ತಾಯಂದಿರ ತೋಟಗಳನ್ನು ಅರಸುತ್ತ’ ಎಂಬ ಅಧ್ಯಾಯವನ್ನು ಓದುವಾಗ ಅಲೀಸ್ ನಮ್ಮದೇ ಜೀವನವನ್ನು ಬರೆಯುತ್ತಿದ್ದಾರೆ ಅನ್ನಿಸಿತು. ಎಷ್ಟೋ ಪ್ರಸಂಗಗಳಲ್ಲಿ ಸಾಮ್ಯತೆ ಕಂಡಿತು.
ನನ್ನ ತಾಯಿ ಹುಟ್ಟಿದ ಸಂದರ್ಭದಲ್ಲಿ ಅತ್ಯಂತ ಪ್ರತಿಭಾವಂತಳಾಗಿದ್ದ ನನ್ನ ಅಜ್ಜಿಗೆ ಬಾಣಂತಿ ಸನ್ನಿಯಾಗಿ ಸರಿಯಾಗಿ ಚಿಕಿತ್ಸೆ ಮಾಡಿಸದೇ, ಮೌಢ್ಯಕ್ಕೆ ಮೊರೆಹೋಗಿ ಸಾಯುವವರೆಗೂ ಮಾನಸಿಕ ಅಸ್ವಸ್ಥಳಾಗಿಯೇ ಉಳಿದಿದ್ದಳು. ಅಮ್ಮ ಈ ವಿಷಯವನ್ನು ಬಹಳ ನೋವಿನಿಂದ ಹೇಳುತ್ತಿದ್ದಳು. ಕಾರಣಗಳು ಬೇರೆಯಾದರೂ ಅಂತಹದೇ ಪ್ರಸಂಗವೊಂದು ಈ ಪುಸ್ತಕದಲ್ಲಿ ಬರುತ್ತದೆ.
ಹಾಗೆ ನೋಡಿದರೆ ನನ್ನ ತಾಯಿಯದು ಚಿತ್ರ ಕಲಾವಿದರ ಮನೆತನ. ಅವಳ ಸೋದರ ಮಾವ ಟಿ.ಜಿ. ಕೃಷ್ಣಮೂರ್ತಿಯವರು ಕಲಾವಿದರಾಗಿದ್ದು, ಪಠ್ಯ ಪುಸ್ತಕಗಳಿಗೆ ವಿಶೇಷವಾಗಿ ಚಿತ್ರಗಳನ್ನು ಬರೆಯುತ್ತಿದ್ದರು. ಅಮ್ಮ ಕೂಡ ಅದ್ಭುತ ಕಸೂತಿ ಕಲಾವಿದೆಯಾಗಿದ್ದಳೆನ್ನುವುದಕ್ಕೆ ನಾಲ್ಕೈದು ಸಾಕ್ಷಿಗಳನ್ನು ಉಳಿಸಿಹೋಗಿದ್ದಾಳೆ. ಆದರೆ ಈ ಹೆಣ್ಣುಮಕ್ಕಳೆಲ್ಲ ತಮ್ಮ ಸೃಜನ ಶಕ್ತಿಯನ್ನು ಅಡಗಿಸಿಕೊಂಡು `ಹೇಸರಗತ್ತೆಗಳಂತೆ; ದುಡಿದು ಈ ಬದುಕಿನಿಂದ ತೆರಳಿದರು, ಕೆಲವರು ಹುಚ್ಚರಾದರು. ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅವರಿಗೆ ಅವಕಾಶವೇ ದೊರೆಯಲಿಲ್ಲ. ನಾನು ಎಂಟು ವರ್ಷದವಳಾಗಿದ್ದಾಗ ಮತ್ತೊಬ್ಬ ಅಜ್ಜಿ (ತಂದೆಯ ತಾಯಿ) ತೀರಿಕೊಂಡರು. ಕಣ್ಣು ಕಳೆದುಕೊಂಡು ಹತ್ತಾರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದ ಅಜ್ಜಿ ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಕೇಳಿದ ನೆನಪಿದೆ. ನನ್ನ ತಾಯಿಯಂತೂ ಹನ್ನೊಂದು ಮಕ್ಕಳನ್ನು ಹೆತ್ತು, ಶ್ರಮಕ್ಕೆ ಜೀವನವನ್ನು ತೆತ್ತುಕೊಂಡು, ತನ್ನೊಳಗಿನ ಹಾಡು, ಹಸೆ, ಕಸೂತಿಯನ್ನು ಮರೆಯುತ್ತ ಹೋದಳು. ಮುತ್ತಜ್ಜಿ, ಅಜ್ಜಿ, ಅಮ್ಮಂದಿರು ಬಿತ್ತಿದ ಬೀಜ ಈಗ ನಮ್ಮೆದೆಯಲ್ಲಿ ಹೇಗೋ ಚಿಗುರಿ, ಒಂದಿಷ್ಟು ಹಸಿರು, ಹೂವು ಕಾಣುತ್ತಿದೆ. ನನ್ನ `ಕಸೂತಿಯಾದ ನೆನಪು’ ಪುಸ್ತಕದಲ್ಲಿ ಇಂತಹ ಅನೇಕ ವಿಷಯಗಳನ್ನು ದಾಖಲಿಸಿದ್ದೇನೆ. ನಾನು ಹೀಗೆ ಅಜ್ಜಿ ಮುತ್ತಜ್ಜಿಯರ ಬದುಕನ್ನು ಹುಡುಕಿಕೊಂಡು ನನ್ನನ್ನು ಕಂಡುಕೊಳ್ಳುತ್ತಿದ್ದ ಸಮಯದಲ್ಲೇ ಆಲೀಸ್ ವಾಕರ್ ಅವರ ಪುಸ್ತಕವನ್ನು ಓದಿದ್ದು ಕಾಕತಾಳೀಯವೇ ಸರಿ!
`ನಾನು ಬರೆಯುವ ಅಥವಾ ನಾವೆಲ್ಲಾ ಬರೆಯುವ ಕತೆಗಳು ನನ್ನ, ನಮ್ಮ ಅವ್ವನ ಕತೆಗಳೇ; ಎಂಬ ಅಲೀಸ್ ವಾಕರ್ ಮಾತು ಅವಳೇ ಹೇಳುವಂತೆ ನನಗೂ ಅರ್ಥವಾಗಿದ್ದು ಕೊಂಚ ತಡವಾಗಿಯೇ. ಇದರ ಜೊತೆಗೆ ಇವು ಜಗತ್ತಿನ ಎಲ್ಲ ಹೆಣ್ಣುಮಕ್ಕಳ ಕತೆಗಳು ಎನಿಸಿದ್ದರಿಂದಲೇ ಈ ಪುಸ್ತಕವನ್ನು ಅನುವಾದಿಸಬೇಕೆನ್ನಿಸಿತು. ಈ ಪುಸ್ತಕಕ್ಕೆ ಇನ್ನೂ ಹಲವಾರು ಆಯಾಮಗಳಿದ್ದರೂ, ವೈವಿಧ್ಯಮಯ ವಿಷಯಗಳಿದ್ದರೂ ಅದು ಪ್ರಧಾನವಾಗಿ ಬದುಕನ್ನು ಹಸನಾಗಿಸಲು ಹೆಣ್ಣುಮಕ್ಕಳು ನಡೆಸಿದ ಹೋರಾಟದ ಕತೆಗಳನ್ನೇ ಹೇಳುತ್ತದೆ. ಹೆಚ್ಚು ಕಮ್ಮಿ ಐನೂರು ಪುಟಗಳಿರುವ ಪುಸ್ತಕದ ಕೆಲವು ಭಾಗಗಳನ್ನು ಮಾತ್ರ ಅನುವಾದಿಸಿದ್ದೇನೆ. ಮುಂದೆಂದಾದರೂ ಉಳಿದದ್ದನ್ನು ಅನುವಾದಿಸಬಹುದೇನೋ!
ಯಾರೂ ಗುರುತಿಸದ, ಗಮನಿಸದ ಕಾಲದಲ್ಲಿ ತಮ್ಮೆಲ್ಲ ಮಿತಿಗಳಲ್ಲಿಯೂ ಸೃಜನಶೀಲತೆಯನ್ನು ಹೇಗೋ ಕಾಪಿಟ್ಟುಕೊಂಡು ದಾಟಿಸಲು ಯತ್ನಿಸಿದ ಮುತ್ತಜ್ಜಿ, ಅಜ್ಜಿ, ಅಮ್ಮಂದಿರಿಗೆ ಈ ಅನುವಾದವನ್ನು ಅರ್ಪಿಸಿದ್ದೇನೆ. ಅವರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಲು ನೆರವಾದ ಅಣ್ಣ ಡಾ. ಎಂ. ಆರ್. ವಿಜಯಶಂಕರ ಮತ್ತು ತಮ್ಮ ರಾಮನ್ ಸುಬ್ಬರಾವ್ ಅವರಿಗೆ ಕೃತಜ್ಞತೆಗಳು.
- ಎಂ. ಆರ್. ಕಮಲ
ಎಂ.ಆರ್. ಕಮಲಾ ಅವರ ಲೇಖಕ ಪರಿಚಯ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.