‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ಸಣ್ಣ ಸಣ್ಣ ಸಂಗತಿಗಳೇ ಬದುಕಿನ ದೊಡ್ಡ ಸತ್ಯಗಳನ್ನು ಪ್ರಕಟಿಸುವ ವಾಹಕಗಳಾಗಿರುವುದನ್ನು ಸಂಕಲನದ ಉದ್ದಕ್ಕೂ ಕಾಣಬಹುದಾಗಿದೆ", ಎನ್ನುತ್ತಾರೆ ಪ್ರೊ.ಟಿ. ಯಲ್ಲಪ್ಪ. ಅವರು ವೆಂಕಟೇಶ ಪಿ ಮರಕಂದಿನ್ನಿ ಅವರ "ಪಡಸಾಲಿ" ಕೃತಿಗೆ ಬರೆದ ಮುನ್ನುಡಿ.
ವೆಂಕಟೇಶ ಪಿ ಮರಕಂದಿನ್ನಿಯವರ ಈ ಚೊಚ್ಚಲ ಕವಿತಾ ಸಂಕಲನ ಓದಿ ನನಗೆ ಒಮ್ಮೆಗೆ ಬೆರಗು ಸಂತೋಷಗಳೆರಡೂ ಆಗಿವೆ. ಇಲ್ಲಿನ ಯಾವ ಕವಿತೆಯೂ ಮೊದಲ ಸಂಕಲನದ ಕವಿಯ ಕವಿತೆಗಳ ‘ಅನುಭವ ದ್ರವ್ಯದ’ ಕೊರತೆಯಿಂದ ಮುಕ್ತವಾಗಿರುವುದು. ಆಶ್ಚರ್ಯ ಯಾಕೆಂದರೆ ಮೊದಲ ಸಂಕಲನದಲ್ಲೇ ಜೀವನಾನುಭವದ ಪಕ್ವತೆ ಮತ್ತು ಕಾವ್ಯಾಭಿವ್ಯಕ್ತಿಯ ಕಲಾತ್ಮಕತೆಗಳಿಂದ ಸಂತಸವಾಗಿದೆ.
ಇಲ್ಲಿನ ಕವಿತೆಗಳು ವ್ಯಷ್ಠಿ ಮತ್ತು ಸಮಷ್ಠಿಗಳನ್ನು ಸಮನಾಗಿ ಒಳಗೊಳ್ಳುವ ಮತ್ತು ಇವೆರಡರ ನಡುವಿನ ಒಂದು ಆರೋಗ್ಯಕರವಾದ ಸಮದೂರದಲ್ಲಿ ನಿಂತು ತನ್ನ ಒಳಗನ್ನು ತನ್ನ ಸುತ್ತಣ ಹೊರಗಿನೊಂದಿಗೆ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ಎಚ್ಚರವನ್ನು ಸಾಧಿಸಿವೆ. ಈ ಕವಿ ತನ್ನ ವ್ಯಕ್ತಿತೆಯನ್ನು ಸಮಾಜಕ್ಕೆ ಕಾಣಿಸುವ ಸಂದರ್ಭದಲ್ಲಿ ಸ್ವಾಮರುಕ,ಸ್ವಾನುಕಂಪದ ಗೀಳಿಗೆ ಒಳಗಾಗದಂತೆ ಮತ್ತು ತನ್ನ ಹಾಗೂ ತನ್ನ ಸಮುದಾಯದ ಸ್ಥಿತಿಗತಿಗಳಿಗೆ ಸಮಾಜವನ್ನು ಕಾರಣಮಾಡಿ ನಿಲ್ಲಿಸುವ ಸಂಧರ್ಭದಲ್ಲಿಯೂ ಸಮಾಜವನ್ನೇ ಪರಿಪೂರ್ಣವಾಗಿ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿ, ತನ್ನ ಸ್ವಪ್ರತಿಷ್ಠೆಯನ್ನೇ ಮೆರೆಸಿಬಿಡಬಹುದಾದ ಅತಿರೇಕಕ್ಕೆ ಆಸ್ಪದ ನೀಡದ ಎಚ್ಚರಿಕೆ ಮತ್ತು ವಿವೇಚನೆ ಮತ್ತು ವಿವೇಕಗಳನ್ನೂ ತಮ್ಮ ಈ ಮೊದಲ ಸಂಕಲನದಲ್ಲೇ ಸಾಬೀತುಮಾಡಿರುವುದು ನನ್ನ ಸಂತೋಷಕ್ಕಿರುವ ಮತ್ತಿಷ್ಟು ಕಾರಣಗಳಾಗಿವೆ.
‘ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು’ ಎಂದು ಅಂತರಂಗದ ಕರೆಗೆ ಸದಾ ಒಂದು ಕಿವಿಯನ್ನು ತೆರೆದಿಡುವ ಈ ಕವಿ ಎದೆಯ ಒಳನುಡಿಗೆ ಕಿವಿಗೊಡುತ್ತಲೇ ಬಹಿರಂಗದ ಜೊತೆ ಅನುಸಂಧಾನ ಮಾಡಿಕೊಂಡು ಮುನ್ನೆಡೆವ ಪದಜಾಳಿಗೆ ಕವಿತೆ ಎಂದು ನಂಬಿದವ. ‘ಬದುಕೆಂಬ ಮನೆಗೆ ಪ್ರೀತಿಯೇ ಪಡಸಾಲೆ’ ಆಗಬೇಕೆಂಬ ನಂಬಿಕೆಯ ಮನೆಯೊಳಗಣ ಬಚ್ಚಲು ಈ ಕವಿಗೆ ‘ಮಹಾನ್ ಯೋಗಿ’ ಯಾಗಿ ಕಾಣುತ್ತದೆ. ಮಾಳಿಗೆಯ ಮೇಲೆ ಮಲಗಿದ ಬುದ್ಧನು ಸರಿಸಿದ ಗಬಾಕಲಿಯೆ ಬೆಳಕಿಂಡಿ, ಪ್ರೇಮವು ದೇವರಮನೆಯಾದರೆ ಇವರೆಲ್ಲರೂ ಸೇರಿ ಉಣ್ಣುವ ಉಡುವ ಸ್ಥಳವೇ ಪಡಸಾಲೆ! ಯಾಗಿ ಕಂಡಿದೆ... ‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ಸಣ್ಣ ಸಣ್ಣ ಸಂಗತಿಗಳೇ ಬದುಕಿನ ದೊಡ್ಡ ಸತ್ಯಗಳನ್ನು ಪ್ರಕಟಿಸುವ ವಾಹಕಗಳಾಗಿರುವುದನ್ನು ಸಂಕಲನದ ಉದ್ದಕ್ಕೂ ಕಾಣಬಹುದಾಗಿದೆ.
ಗುಡಿಸಲ ಹಾಡಿನಲ್ಲಿ ಮಳೆನೀರು ಜರಿ,ಚೇಳು, ಕುಂಬಾರ ಹುಳುಗಳ ಉಪಟಳದಲ್ಲಿ ತನ್ನ ಕನಸುಗಳನ್ನೂ ಹೊರಚೆಲ್ಲುವ ಬಾಲೆಯ ಹಾಗೂ ಇಲ್ಲಿಯ ಮಕ್ಕಳ ಮುಖದ ಮೇಲೆ ಆಟ ಆಡುತ್ತಿರುವ ಸೂರ್ಯ ಚಂದ್ರರ ನೆರಳಲ್ಲಿ ಹಗಲು ರಾತ್ರಿಗಳನ್ನು ಕಾಣಿಸುವ ಈ ಕವಿ ಇದೆ ಗುಡಿಸಲ ಸೂರಿನ ಟಿನ್ನಿಗೆ ಮೆತ್ತಿದ ಕಪ್ಪು ಮಸಿಯೆ ಕಣ್ಣ ಕಾಡಿಗೆಯಾಗಿ ಈ ನಾಡಿಗೆ ಬೇಕಾದ ನಾನಾ ಬಣ್ಣಗಳು ಹುಟ್ಟುವ ತವರುಮನೆಯಾಗಿ ಆ ಗುಡಿಸಲನ್ನು ಕಾಣುವ ಅದನ್ನು ಹಾಗೆ ಕಾಣಿಸುವಲ್ಲಿ ಇರುವ ಸಾಮಾಜಿಕ ಕಟುವಾಸ್ತವಕ್ಕೆ ಕನ್ನಡಿ ಹಿಡಿಯುವ ಮೆಚೂರಿಟಿ ಖುಷಿ ಕೊಡುವ ಸಂಗತಿ ನನಗೆ.
ಕನ್ನಡ ಕಾವ್ಯ ಲೋಕದಲ್ಲಿ ಅನೇಕ ಕವಿಗಳು ತಮ್ಮ ಅಪ್ಪ ಅಮ್ಮಂದಿರನ್ನು ಚಿತ್ರಿಸಿದರೆ ಪಿ.ಲಂಕೇಶ್,ಎಲ್ ಹನುಮಂತಯ್ಯ ನನ್ನನ್ನೂ ಒಳಗೊಂಡಂತೆ. ನನಗೆ ಈ ಕವಿ ಬರೆದಿರುವ ಹೊಲಿಗೆಯ ಕಾಯಕದಲ್ಲಿ ನಿರತರಾದ ತನ್ನ ಅವ್ವನ ಬಗೆಗಿನ ಕವಿತೆಯೂ ಅಂತಹ ಅಪರೂಪದ ಅಮ್ಮನ ಬಗೆಗಿನ ಕವಿತೆಗಳಲ್ಲಿ ಒಂದೆಂದು ಅನ್ನಿಸುತ್ತದೆ
ಹೊಲಿಗೆ ಮೇಲೊಂದು ಹೊಲಿಗೆ ಹಾಕಿ
ದೀರ್ಘ ಬಾಳಿಕೆ ಬರುವ ಬಟ್ಟೆಗಳಿಗೆ ಜೀವ ನೀಡುವ ಅವ್ವ
ಸೌದೆಯನ್ನು ಹಿಂದೆ ಎಳೆದು
ಹೊಲೆಯ ಉರಿ ಕಮ್ಮಿ ಮಾಡಿದಂತೆ
ನಮ್ಮ ದುಃಖಗಳನ್ನೆಲ್ಲ ಹಿಂದೆ ಎಳೆದು
ತಲೆ ಸವರಿ ಕನಸುಗಳಿಗೆ ಉಮ್ಮ ನೀಡುತ್ತಾಳೆ!
ತನ್ನ ಮಕ್ಕಳ ದುಃಖಗಳ ತಲೆ ಸವರಿ, ಕನಸುಗಳಿಗೆ ಮುತ್ತನಿಡುವ ಈ ತಾಯಿ ತನ್ನ ನೋಯುವ ಕಾಲಿನಿಂದ ಹೊಲಿಗೆ ಯಂತ್ರವ ತುಳಿದು, ರಾಜಕುಮಾರಿಯ ರವಿಕೆಯಿಂದ ಹಿಡಿದು ಊರಿನ ಬಡಹೆಣ್ಣು ಮಕ್ಕಳ ಲಂಗ ಚೂಡಿದಾರಗಳನ್ನು, ಅಮೀನಾ ಬೇಗಮ್, ಅಂತೋಣಿಯ ಹೆಂಡತಿ, ಕಮಲಮ್ಮನವರೆಗೆ ತಯಾರಿಸಿ ಸರ್ವಧರ್ಮ ಸಮನ್ವಯ ಸಾಕಾರ ಮೂರ್ತಿಯಾಗಿ ಕಾಣುವ ತನ್ನವ್ವನ ಬಗ್ಗೆ ಈ ಕವಿಗಿರುವ ಕೃತಕೃತ್ಯತೆಯ ಭಾವ ಅದೆಷ್ಟು ವಿನಮ್ರ ಅನ್ಯಾದೃಶ್ಯವಾಗಿದೆ ಯೆಂದರೆ
ಆಕೆಯ ಪಾದದಡಿಯಲ್ಲಿ ನನ್ನ ಬಾಳ
ಭರವಸೆಗಳನ್ನೆಲ್ಲಾ ಇಟ್ಟು ಜೀವಿಸುತ್ತಿರುವೆ
ನಾನೇನಾದರೂ ಅವಳ ಪಾದಕ್ಕಿಂತ ಚೂರೇಚೂರು
ಎತ್ತರ ಬೆಳೆದೆನೆಂದರೆ ಸಾಕು
ಅಲ್ಲಿಗೆ ನನ್ನ ಜನ್ಮ ಸಾರ್ಥಕವಾದಂತೆ!
ತನ್ನವ್ವ ಜೋಳದ ತೆನೆ ಕೊಯ್ದು ರೊಟ್ಟಿ ಮುದ್ದೆ ಕಟ್ಟಿದಾಗೆಲ್ಲ ಹಸಿದ ತನ್ನ ಸುತ್ತಣ ಜಗತ್ತು ಒಂದು ಗಳಿಗೆ ತೇಗಿದಂತೆ ಕಾಣುತ್ತದೆ, ತನ್ನವ್ವ ಕಚ್ಚೆ ಕಟ್ಟಿ ಭತ್ತದ ಮಡಿಯಲ್ಲಿ ನಿಂತಾಗ ಶಿವ ಗೌರಿಯಂತೆಯೂ ಆಕೆ ನಾಟಿ ಮಾಡಲು ಕೈಗೆತ್ತಿಕೊಂಡ ಪೈರು - ಹಸಿರು ತ್ರಿಶೂಲವಾಗಿ ಕಾಣುತ್ತದೆ. ದುಡಿವವರ ಕೂಳಿಗಿಲ್ಲದ ಆ ಪಯಿರುಗಳು ಹಸಿದವರ ಪಾಲಿನ ತ್ರಿಶೂಲವಾಗಿ ಕಾಣುವ ಪರಿ ಅರ್ಥಪೂರ್ಣವಾದ ರೂಪಕವಾಗಿದೆ.
ತ್ಯಾಗಮಯಿಯಾದ ಅಪ್ಪನ ಬಗೆಗಿನ ಮನಕಲಕುವ ಕವಿತೆ ಕುರುಮಟಿಗೆ (ಅಪ್ಪನ ಹೆಗಲು) ತನ್ನ ಬದುಕಿನ ಅನೇಕ ಬವಣೆ ಬೇನೆಗಳ ಭಾರ ಹೊತ್ತ ತನ್ನಪ್ಪನ ಹೆಗಲು ಈ ಕವಿಯ ಪಾಲಿಗೆ ಜಗದೆಲ್ಲ ಎತ್ತರದ ಪರ್ವತ ಶಿಖರಗಳ ಮೇರುಶೃಂಗಕ್ಕಿಂತ ಎತ್ತರವಾದ ಭವ್ಯ ಸಿಂಹಾಸನ. ತನ್ನಪ್ಪ
ಬಿಸಿಲ ಬುಗ್ಗೆಗೆ ಮಯ್ಯ ಪೋಟಿಕೊಟ್ಟು
ಬೆವರ ಬೋಗುಣಿಯಲ್ಲಿ
ಶ್ರಮದ ಪಾನಕ ತಯಾರಿಸಿದಾತ
ನೀನೇ ಹೇಳು ತೀರಿಸುವಂತಹದೇನು ನಿನ್ನ ರಿಣ?
ಬಾಗಿ ಇಡುವೆನೊಂದು ಹೂವ ಕವಿತೆ
ನಿನ್ನ ಮುಂದೆ ಇದು ಪೇಟೆಯ ಹೆಣ,ಬಹಳಾ ತೃಣ!
ಈ ಸಂಕಲನದ ಮತ್ತೊಂದು ಸುಂದರ ಕವಿತೆ ಎಂದರೆ ‘ಸೀನಿರಳ್ಳದ ಒರತೆ ’: ಸಿಹಿನೀರಿನ ಹಳ್ಳದ ಬಳಿ ಸೃಷ್ಟಿಯಾಗಿರುವ ಬಿಸಿಲ ನಾಡಿನ ಜನರ ಜೀವಂತಿಕೆ, ಅಲ್ಲಿ ಹುಚ್ಚು ಹಿಡಿಸುವ ಸಂಜೆಹೊನಲು, ಕತ್ತು ತಿರುಗಿಸಿದಲೆಲ್ಲಾ ಕುಕಿಲಿಡುವ ಗಿಡುಗ,ಗೌಜುಗ, ಸುಂದರ ಶಿಸ್ತಿನ ನೀರವ ಗಲಾಟೆ(ಎರಡು ಪರಸ್ಪರ ವಿರುದ್ಧಾರ್ಥಕ ಪದಗಳನ್ನು ಮುಖಾಮುಖಿಯಾಗಿಸುವುದರ ಮೂಲಕವೇ ಅರ್ಥದ ಮೊಗ್ಗೆಯೊಡೆಸುವ ಜಾಣ್ಮೆ) ಜಾಲಿ ಮರಗಳ ಹಿಂದೆಯೂ ಇಣುಕಿ ನೋಡುತ್ತಿರುವ ಸೂರ್ಯನ ಒರತೆಗಣ್ಣಿನಲ್ಲಿ ಮೂಡುತ್ತಿರುವ ಚಂದ್ರಹಾಸ ಕವಿಗಿರುವ ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಂತಿದೆ ಈ ಕವಿತೆ
ಇವರ ‘ಒಂದು ಸ್ತಬ್ಧಚಿತ್ರ’ ಎಂಬ ಕವಿತೆಯಲ್ಲಿ ಬರುವ ಚಿತ್ರಗಳು ಅವು ಕೇವಲ ಸ್ತಬ್ಧಚಿತ್ರಗಳಲ್ಲ ಏಕಕಾಲಕ್ಕೆ ಒಳಗನ್ನೂ ಹೊರಗನ್ನೂ ಚಲನಶೀಲವಾಗಿಸುವ ಜಂಗಮ ಚಿತ್ರಗಳು
ಉದಾ:
(1) ದಾರಿಯಂತೆ ಕಾಣುವ ಒಂದು ಹಳೆಯ ನದಿಗೆ
ಬೆತ್ತಲೆ ಮೀಯುತ್ತಿದ್ದನೊಬ್ಬ ಹುಚ್ಚು ಹುಡುಗ
(2) ತೊಟ್ಟು ನೀರೂ ಕುಡಿಯದೆ ಮಣ್ಣು ತಿಂದರೂ
ಎಂದಿನಂತೆ ಬರುವ ಸಹಜ ತೇಗು
(3) ಭೇಟಿಯಾದಾಗಲೆಲ್ಲ ಪ್ರೀತಿಯಿಂದ
ಮಾತಾಡಿಸುವ ಬಿಸಿಲ ಮಗಳು
ಮರುಮಾತಿಲ್ಲದೆ ನೀಡಿ ಹೋಗಿದ್ದಾಳೆ
ಸಾವಿರಾರು ಎಕರೆಯ ಸ್ವಂತ ಸವಳು
ಕವಿಯ ಮೊದಲ ಸಂಕಲನದ ಕವಿತೆಗಳು ಬಾಲ ಭಾಷೆ ಅವನ ತೊದಲು ನುಡಿ ತಪ್ಪು ಹೆಜ್ಜೆ ಎಲ್ಲವನ್ನು ಹಿರಿಯರಾದವರು ಪೋಷಿಸಬೇಕು ಮುಂದೆ ಅವೇ ದೊಡ್ಡ ದೊಡ್ಡ ಕಾವ್ಯವಾಗಬಹುದು ಎಂಬ ಸವಿನಯ ವಿನಮ್ರತೆ ಮತ್ತು ಭರವಸೆಗಳೆರಡೂ ಈ ಕವಿಗಿದೆ (ಮಗು ಮಲ್ಲಿಗೆ) ಹಿಂದೆ ಮುಂದೆ ಇಲ್ಲದವನನ್ನು ಹಿಂದೆ ಮುಂದೆ ನೋಡುವಂತೆ ಮಾಡುವ, ಎಚ್ಚರದ ಕನಸಿಗೆ ಹುಚ್ಚುನಾಯಿ ಕಚ್ಚಲಿ, ಕಣ್ಣು ಮುಚ್ಚುವುದನೇ ನಿದ್ರೆ ಎಂದು ನಂಬಿಸುವ ಇಂತಹ ಎಚ್ಚರದ ಕನಸುಗಳಿಗೆ ನನ್ನ ಧಿಕ್ಕಾರವಿರಲಿ ಎನ್ನುವ ಈ ಕವಿ ಸದಾ ಕನಸು ಮತ್ತು ಎಚ್ಚರ, ಸುಪ್ತ ಮತ್ತು ಜಾಗೃತಗಳ ನಡುವಿನ ಅಂತರ ಮತ್ತು ಆಂತರ್ಯದ ಬಗ್ಗೆ ಮತ್ತೆ ಮತ್ತೆ ಚಿಂತಿಸುತ್ತಾನೆ
ಈ ಕವಿಗೆ ಕವಿತೆ ಒಂದು ಉದ್ಯೋಗವಲ್ಲ - ವ್ಯಸನವೂ ಅಲ್ಲ ಅದೊಂದು ಗಜ್ಜುಗ, ಅದೊಂದು ಪದಗೋಲಿ. ಈ ಗಜ್ಜುಗ ಹುಡಿಮಣ್ಣ ಬಿಸಿಲಿನ ಪ್ರತಿಕೂಲದಲ್ಲಿ ಹುಟ್ಟುವ ಸುಪ್ತಕವಿತೆ, ಹಾಗೆಯೇ ಈ ಗಜ್ಜುಗ ಮುತ್ತಿನಂತಹ ಗುಪ್ತ ಕವಿತೆ ಈ ಜಗತ್ತನ್ನು ಅದೆಷ್ಟು ದೆವ್ವದಂತಹ ಬಂಡೆಕಲ್ಲುಗಳು ಕಾಡುತ್ತಿರುವಾಗ ಪ್ರೀತಿಯ ಬಂಡೆಯನ್ನೇ ಆಯ್ದುಕೊಳ್ಳೋಣ ಎನ್ನುವ ಈ ಕವಿಗೆ -
ಖಾಲಿಯೇ ಇದೆ ಕಕ್ಕುಲಾತಿಯ ಬಂಡೆ
ಅನಾಯಾಸವಾಗಿ ತಿಕ್ಕಬೇಕಿದೆ ಗಜ್ಜುಗ
ಇನ್ನು ಮುಂದೆ ಜಗದ ಮಕ್ಕಳಲಿ
ಪ್ರೀತಿ ಚುರ್ರೆನಿಸುವುದೊಂದೆ ಆಗಲಿ
ನಮ್ಮ ಉಜ್ಜುಗ!
ಎಂಬ ಸದಾಶಯವನ್ನು ತನ್ನ ಮುಂದಿರಿಸಿಕೊಂಡು ಈ ಕವಿಯ ಕಾವ್ಯಯಾನ ಪ್ರಾರಂಭವಾಗಿರುವುದು ಅತ್ಯಂತ ಆಶಾದಾಯಕವಾದ ಸಂಗತಿಯಾಗಿದೆ. ದ್ವೇಷ, ಅಸೂಯೆ, ಮತೀಯತೆ, ಕೋಮುವಾದಗಳಿಂದ ತತ್ತರಿಸುತ್ತಿರುವ ಈಗಿನ ಜಗತ್ತಿಗೆ ಬೇಕಾಗಿರುವುದು ಪರಿಶುದ್ಧ ಮಾನವಪ್ರೇಮ ಅದನ್ನು ಬಿತ್ತೋಣ, ಪ್ರೇಮದ ಫಸಲು ಬೆಳೆದು ಜಗಕ್ಕೆ ಉಣಿಸೋಣ ಎಂಬ ಮಹಾದಾಸೆ ಈ ಕವಿಯದು
ಪ್ರೇಮ
ತುಂಟರುದುರಿಸಿ
ಖಾಲಿಯಾದ ಗಿಡದಲಿ
ತಂಟೆಗೋಗದೆಯೇ ಸಿಕ್ಕ
ಗಿಣಿ ಕಚ್ಚಿದ ಬಾರೆಹಣ್ಣು
ಸುಖದ ನೂರು ದಾರಿಗಳನು ಅರಸಿ
ಅಲೆಯುತಿರೆ ಒಮ್ಮೆಗೆ ತೆರೆದ
ಅಂತರ್ಯದ ಒಳಗಣ್ಣು (ತಂಗುಧಾಮ ಕವಿತೆ)
ಸಾಮಾಜಿಕ ಕಳಕಳಿಯು ಒಂದು ಆಶಯವಾಗಿ ಇವರ ಕವಿತೆಗಳ ಆಂತರ್ಯದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇರುವುದು ಇವರ ಬಗ್ಗೆ, ಈ ಕವಿಯ ಬಗ್ಗೆ ಅಭಿಮಾನ ಪಡುವ ಸಂಗತಿಗಳಲ್ಲಿ ಒಂದು
ಯಾರು ಯಾರೇ ಸುರಿದರು ಬಾಯಿ ತೆರೆವ
ಯಾವ ಲೋಟವನು ಅದ್ದಿದರು ಸದ್ದುಮಾಡದ
ಯಾವ ಬಾವಿಯಲಿ ಬಿದ್ದರು ನೀರನಷ್ಟೇ ತುಂಬಿಕೊಡುವ
ಎಲ್ಲರ ಮನೆ ತುಂಬುವ ತುಂಬಿದ ಕೊಡುವನು
ತುಂಬಿ ತುಳುಕಿದರೂ ಅಳುಕದಾ
ಪ್ರೇಮದಾ ಕೊಡವನು ಕೊಡಿಸು ತಂದೆ ಕೊಡಿಸು!
(ಕೊಡ ಕೊಡಿಸು ತಂದೆ ಕವಿತೆ)
ಈ ಕವಿಗೆ ಸಮಾಜದ ಬಗೆಗಿರುವ ಅಂತಃಕರಣವೂ ಅಪರೂಪವಾದದ್ದು
ಯಾವ ಗೋಡೆ ಮುಲಾಮುಗಳ
ಹಂಗಿಲ್ಲದೆ ಮಾಯ್ದು ಹೋಗಲಿ ಕರುಳ ಗಾಯ
ಜಗದ ಮಕ್ಕಳ ಒಲವ ಎದೆಗಾನಿಸಿಕೊಳ್ಳಲು
ಹೃದಯಕಾಗದಿರಲಿ ಎಂದೂ ಪ್ರಾಯ!
ಈ ಚಿಗುರು ಮನಸಿನ ಚಿಗುರು ಕವಿಯ ತಹತಹ ಕೂಡಾ ವಿನೂತನ. ಈ ಕವಿತೆಗಿರುವ ಶಕ್ತಿಯ ಬಗ್ಗೆ ಈ ಕವಿಗೆ ಇನ್ನಿಲ್ಲದ ಭರವಸೆ, ಬೀದಿ ಹೆಣಗಳನ್ನು ಒಂದೇ ಕುಣಿಗೆ ತರುವ ಭವಿಷ್ಯತ್ತಿನ ಸಾಮೂಹಿಕ ಶವಪೆಟ್ಟಿಗೆಗೆ ಮೊಳೆ ಹೊಡೆಯಲೂ ಕೂಡ ಕವಿತೆಗೆ ಶಕ್ತಿ ಇದೆಯೆಂಬ ನಂಬಿಕೆ ಕವಿತೆಯ ಬಗ್ಗೆ ಕವಿಗಿರುವ ನಂಬಿಕೆ.
ಈ ಮೊದಲ ಸಂಕಲನದಲ್ಲಿಯೇ ತನ್ನದೇ ಆದ ಕಾವ್ಯದ ಬಗೆಗಿನ ಮೀಮಾಂಸೆಯನ್ನು ಕಟ್ಟಿಕೊಂಡಿರುವುದು ಈತ -
ಬರೆಯುತ್ತೇನೆ ನಾನು ಕವಿತೆ ಬರೆಯುತ್ತೇನೆ
ಬಿದ್ದವರ ನೋವಲ್ಲಿ ಪಾಲು ಬಯಸುವ
ಇದ್ದವರು ಆರಲ್ಲಿ ಧಯೆಯ ಶಾಲು ಉಡಿಸುವ
ಆಂತರ್ಯದ ಆವರಣವ ಶುಚಿಗೊಳಿಸಲು
ಔದಾರ್ಯದ ತೋರಣವ ಮನೆಗೆ ಹಾಕಲು
ಬರೆಯುತ್ತೇನೆ ನಾನು ಜಗದ ಕವಿತೆ!
(ನನ್ನದೆಂತ ಕವಿತೆ: ಕವಿತೆ)
ತನ್ನ ಮುಂದಿನ ಕಾವ್ಯಯಾನದ ಬಗೆಗೆ ಈತನಿಗಿರುವ ಸ್ಪಷ್ಟ ನಿಲುವುಗಳಿಗೆ ನಿಲುವುಗನ್ನಡಿಯಂತಿದೆ ಈ ಕವಿ ಇಲ್ಲಿನ ಹಲವು ಕವಿತೆಗಳಿಗೆ ಬಳಸಿರುವ ತಮ್ಮ ಪ್ರಾದೇಶಿಕ ಭಾಷೆಯ ಸೊಗಡು,ಸೊಬಗುಗಳು ಬೇಂದ್ರೆಯವರನ್ನು ನೆನಪು ಮಾಡಿಸುತ್ತವೆ. ಈ ದಿಸೆಯಲ್ಲಿ ಇವರ ‘ಕಾಲಕುದುರಿ’ ಕವಿತೆ ಒಂದು ಉತ್ತಮ ನಿದರ್ಶನ.
ಇಲ್ಲಿನ ಕವಿತೆಗಳು ತಮ್ಮ ಪ್ರಾದೇಶಿಕ ಭಾಷಾ ಸೊಗಡಿನಿಂದ, ತನ್ನದೇ ಆದ ಕಾವ್ಯ ಜಿಜ್ಞಾಸೆ ಹಾಗು ಅಂತರಂಗ ಬಹಿರಂಗಗಳ ಜೊತೆ ಕವಿ ನಡೆಸುವ ಅನುಸಂಧಾನದಿಂದ ಸಾಮಾಜಿಕ ಕಳಕಳಿಯ ಬದ್ಧತೆಯಿಂದ, ಹೊಸ ಬಗೆಯ ಪದ ಸ್ಪರ್ಶದಿಂದ, ಅಪರೂಪವಾದ ರೂಪಕ ಮತ್ತು ಪ್ರತಿಮೆಗಳ ಬಳಕೆಯಿಂದ, ಕನ್ನಡ ನಾಡಿನ ಬಗೆಗಿನ ವಿಶೇಷ ಕಳಕಳಿಯಿಂದ - ಭೂತ ಮತ್ತು ವರ್ತಮಾನಗಳ ನಡುವಿನ ತಾಕಲಾಟದಿಂದ, ಸಮಕಾಲೀನ ಸಂದರ್ಭಕ್ಕೆ ಸಾಕ್ಷಿಯಾಗುವ ಇಲ್ಲಿನ ಕವಿತೆಗಳು ಮತ್ತು ಕವಿಗೆ ಶುಭವಾಗಲಿ ಎನ್ನುವುದಕ್ಕಿಂತ ಕನ್ನಡ ಕಾವ್ಯ ಜಗತ್ತಿಗೆ ಒಬ್ಬ ಭರವಸೆಯ ಕಾವ್ಯಶಕ್ತಿಯುಳ್ಳ ಕವಿಯೊಬ್ಬನ ಕೃತಿಯೊಂದು ಆಗಮಿಸುತ್ತಿದೆ ಈ ಕಾವ್ಯಕೃತಿ ಹಾಗೂ ಕವಿ ಇಬ್ಬರ ಭವಿತವ್ಯವೂ ಉಜ್ವಲವಾಗಿರಲೆಂದು ಹಾರೈಸುವೆ.
- ಪ್ರೊ.ಟಿ. ಯಲ್ಲಪ್ಪ
ಕವಿಗಳು ಹಾಗೂ ಕನ್ನಡ ಪ್ರಾಧ್ಯಾಪಕರು
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...
©2024 Book Brahma Private Limited.