ಆಫ್ರಿಕಾ ಬಹುಸಂಸ್ಕೃತಿಗಳ ಒಂದು ವಿಶಾಲ ಖಂಡ: ನಟರಾಜ್ ಹುಳಿಯಾರ್


“ಜಗತ್ತಿಗೆ ಅತ್ಯಂತ ಪ್ರಾಚೀನ ನಾಗರಿಕತೆಯನ್ನು ಕೊಟ್ಟ ಈಜಿಪ್ಟ್ ನಾಗರಿಕತೆ ಆಫ್ರಿಕಾದ ಕೊಡುಗೆ ಎಂಬುದನ್ನು ಮತ್ತೆ ಮತ್ತೆ ಈ ಲೋಕಕ್ಕೆ ನೆನಪಿಸಬೇಕಾಗಿ ಬಂದಿದೆ” ಎನ್ನುತ್ತಾರೆ ನಟರಾಜ್ ಹುಳಿಯಾರ್. ಅವರು ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ‘ಆ ಲಯ ಈ ಲಯ’ ನಾಟಕ ಕೃತಿ ಕುರಿತು ಬರೆದ ಅನಿಸಿಕೆ ಇಲ್ಲಿದೆ.

ಕೃತಿಯ ಹೆಸರು: ಆ ಲಯ ಈ ಲಯ
ಮೂಲ ಕೃತಿಯ ಲೇಖಕ: ಲೂಯಿ ನಕೋಸಿ
ಕನ್ನಡಕ್ಕೆ: ನಟರಾಜ್ ಹೊನ್ನವಳ್ಳಿ

ಆಫ್ರಿಕಾ ಎನ್ನುವುದು ಹಲವು ದೇಶಗಳು ಹಾಗೂ ಬಹುಸಂಸ್ಕೃತಿಗಳ ಒಂದು ವಿಶಾಲ ಖಂಡ. ಹಾಗೆಯೇ ಆಫ್ರಿಕಾ ಎನ್ನುವುದು ಜಗತ್ತಿನಾದ್ಯಂತ ಹಲವು ಅರ್ಥಗಳನ್ನು ಸೂಚಿಸುವ ಒಂದು ರೂಪಕ ಕೂಡ. ನಾವೀಗ ಆಫ್ರಿಕಾ ಖಂಡ ಎಂದು ಕರೆಯುವ ಭೌಗೋಳಿಕ ಪ್ರದೇಶದಲ್ಲಿ ಪೂರ್ವ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಸೆಂಟ್ರಲ್ ಆಫ್ರಿಕಾ, ಉತ್ತರ ಆಫ್ರಿಕಾ ಹಾಗೂ ದಕ್ಷಿಣ ಆಫ್ರಿಕಾಗಳಿವೆ. 1500ರ ಹೊತ್ತಿಗೆ ಆಫ್ರಿಕಾದ ಕಡಲ ತೀರಗಳು ಯೂರೋಪಿಯನ್ನರಿಗೆ ಪರಿಚಿತವಾಗತೊಡಗಿದವು. ಕಾರಣ, ಆ ಕಡಲ ತೀರಗಳಲ್ಲಿ ಆಫ್ರಿಕಾದ ದೇಶೀಯರನ್ನು ಮಾರಾಟ ಮಾಡುವ, ಕೊಳ್ಳುವ ಅಮಾನುಷ ವ್ಯಾಪಾರಿ ಚಟುವಟಿಕೆಗಳು ನಡೆಯಲಾರಂಭಿಸಿದವು. ಆ ಮಾರಾಟಗಳ ಏಜೆಂಟರುಗಳಾಗಿ ದುರಾಸೆಯ ಆಫ್ರಿಕನ್ನರೂ ಸೇರಿಕೊಂಡಿದ್ದರು. ಆದರೆ ಈ ವ್ಯಾಪಾರದಲ್ಲಿ ಭಾಗಿಯಾಗಿದ್ದ ಯೂರೋಪಿಯನ್ನರಿಗೆ ಹಾಗೂ ಅರಬ್ಬರಿಗೆ ಆಫ್ರಿಕಾದ ಭೂ ಪ್ರದೇಶಗಳು ಹೆಚ್ಚಿಗೆ ಪರಿಚಯವಿರಲಿಲ್ಲ. ಆದ್ದರಿಂದಲೋ ಏನೋ, ತಮಗೆ ಪರಿಚಯವಿರದ, ತಾವು ಕಾಣದ ಆಫ್ರಿಕಾ ಖಂಡವನ್ನು 'ಡಾರ್ಕ್ ಕಾಂಟಿನೆಂಟ್' ಎಂದು ಯೂರೋಪಿನ ಚರಿತ್ರೆಯ ಪುಸ್ತಕಗಳು ಒಂದು ಕಾಲಕ್ಕೆ ಬಣ್ಣಿಸಿದವು. ಈ ಬಣ್ಣನೆಯಲ್ಲಿ 'ಡಾರ್ಕ್' ಎಂಬ ಪದಕ್ಕೆ ಕತ್ತಲು, ಕಗ್ಗತ್ತಲು ಎಂಬ ಅರ್ಥವಿರುವಂತೆ, ಯೂರೋಪಿಯನ್ನರಿಗೆ ತಿಳಿಯದ, ಅಪರಿಚಿತವಾದ (ಅನ್‌ನೋನ್) ಎಂಬ ಅರ್ಥವೂ ಇತ್ತು. ಈ ಪದಗುಚ್ಛವನ್ನು ಇಂಡಿಯಾದ ಪಠ್ಯಪುಸ್ತಕಗಳು 'ಕಗ್ಗತ್ತಲ' ಖಂಡ ಎಂಬ ಒಂದೇ ಅರ್ಥದಲ್ಲಿ ಅನುವಾದಿಸಿಕೊಂಡಿದ್ದರಿಂದಲೋ ಏನೋ ಆಫ್ರಿಕಾ ಎಂದರೆ ಕತ್ತಲ ಪ್ರದೇಶ ಎಂಬ ಸೀಮಿತ ಅರ್ಥವೇ ನಮ್ಮ ಸಂದರ್ಭದಲ್ಲಿ ಹೆಚ್ಚು ಪ್ರಚಲಿತವಾಗಿ ಉಳಿಯಿತು. ಈ ಅಂಶ ಒಂದು ಸಂಸ್ಕೃತಿಯ ಬಣ್ಣನೆಗಳನ್ನು ಇನ್ನೊಂದು ಸಂಸ್ಕೃತಿ ಅನುವಾದಿಸಿಕೊಳ್ಳುವುದರಲ್ಲಿ ಇರುವ ಸಮಸ್ಯೆಯನ್ನು ಮಾತ್ರ ಹೇಳುತ್ತಿಲ್ಲ; ಅದರ ಜೊತೆಗೆ ಆಫ್ರಿಕಾವನ್ನು ನಮ್ಮ ನಾಡುಗಳೂ ಸೇರಿದಂತೆ ಜಗತ್ತಿನ ಉಳಿದ ಭೂಭಾಗಗಳು ಕೂಡ ತೀರಾ ಸೀಮಿತ ಅರ್ಥದಲ್ಲಿ ಹಾಗೂ ಅಪೂರ್ಣವಾಗಿ ಗ್ರಹಿಸಿದ್ದವೆಂಬುದನ್ನು ಹೇಳುತ್ತದೆ. ಇವತ್ತಿಗೂ ಇಂಡಿಯಾದ ಶಾಲಾಕಾಲೇಜು ಪಠ್ಯಗಳಲ್ಲಿ ಜಗತ್ತಿನ ಚರಿತ್ರೆಯನ್ನು ಬೋಧಿಸುವಾಗ ಯೂರೋಪಿಯನ್ ಚರಿತ್ರೆಯನ್ನು ಹೆಚ್ಚು ಬೋಧಿಸಲಾಗುತ್ತದೆಯೇ ಹೊರತು ಅಲ್ಲಿ ಆಫ್ರಿಕಾದ ಚರಿತ್ರೆಯ ಬಗೆಗಿನ ಗಮನ ತೀರಾ ಕಡಿಮೆ.

ಜಗತ್ತಿಗೆ ಅತ್ಯಂತ ಪ್ರಾಚೀನ ನಾಗರಿಕತೆಯನ್ನು ಕೊಟ್ಟ ಈಜಿಪ್ಟ್ ನಾಗರಿಕತೆ ಆಫ್ರಿಕಾದ ಕೊಡುಗೆ ಎಂಬುದನ್ನು ಮತ್ತೆ ಮತ್ತೆ ಈ ಲೋಕಕ್ಕೆ ನೆನಪಿಸಬೇಕಾಗಿ ಬಂದಿದೆ. ತಮ್ಮದೇ ಆದ ಆಡಳಿತ ಪದ್ಧತಿ, ಜೀವನ ಕ್ರಮ, ಕೃಷಿ ಪದ್ಧತಿಗಳನ್ನು ಹೊಂದಿ ಸ್ವಾಯತ್ತವಾಗಿದ್ದ ಆಫ್ರಿಕನ್ ಸಮಾಜಗಳು ಹಾಗೂ ಅಲ್ಲಿನ ಜನಜೀವನ 16ನೆಯ ಶತಮಾನದ ಆರಂಭವಾಗುವ ಹೊತ್ತಿಗೆ ಹೊಸ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಅದಕ್ಕೆ ಕಾರಣ ಆಫ್ರಿಕಾದ ಕಡಲ ತೀರಗಳಲ್ಲಿ 1500ರಿಂದ ಆರಂಭವಾದ ಆಫ್ರಿಕಾದ ದೇಶೀಯರನ್ನು ಗುಲಾಮರನ್ನಾಗಿ ಮಾರಾಟ ಮಾಡಲಾರಂಬಿಸಿದ ಭಯಾನಕ ಮಾರುಕಟ್ಟೆ, ಈ ಮಾರಾಟ ಮುಂದಿನ ನಾಲ್ಕು ಶತಮಾನಗಳವರೆಗೂ ಮುಂದುವರಿದು ಆಫ್ರಿಕದ ದೇಶೀಯರು 'ಕರಿಯರು' ಎನ್ನಿಸಿಕೊಂಡು ಜಗತ್ತಿನ ಹಲವು ಭೂಭಾಗಗಳಲ್ಲಿ ಹರಿದು ಹಂಚಿ ಹೋದರು. ಆಫ್ರಿಕಾದ ಅತ್ಯಂತ ಶಕ್ತ ಮಾನವ ಸಂಪನ್ಮೂಲದ ಕಳವು- ಹರಾಜು- ಮಾರಾಟ- ಕೊಳ್ಳುವಿಕೆಯ ಕೌಲ್ಯಗಳು ನಡೆಯುತ್ತಿದ್ದಾಗಲೇ ಆಫ್ರಿಕಾದ ಉಳಿದ ಸಂಪನ್ಮೂಲಗಳ ಕಡೆಗೂ ಯೂರೋಪಿನ ಕಣ್ಣು ಬಿತ್ತು. ಆಫ್ರಿಕಾದ ಖನಿಜಗಳು ಹಾಗೂ ಪಾಮ್ ಎಣ್ಣೆಗಳ ಮಾರಾಟವನ್ನೂ ಯೂರೋಪು ಆರಂಭಿಸಿತು. ಆ ಕಾಲಘಟ್ಟದ ಮತ್ತೊಂದು ಜಾಗತಿಕ ಬೆಳವಣಿಗೆಯನ್ನೂ ಇಲ್ಲಿ ಹೇಳಬೇಕು.
ಯೂರೋಪಿನಲ್ಲಿ 1700ರಿಂದೀಚೆಗೆ 'ಎನ್‌ಲೈಟನ್‌ಮೆಂಟ್ ಯುಗವೆಂದು ಕರೆಯಲಾಗುವ 'ದ ಏಜ್ ಆಫ್ ರೀಸನ್' (ವಿವೇಚನೆಯ ಯುಗ) ಕೂಡ ಶುರುವಾಗಿತ್ತು. ದಿಟ್ಟ ಚಿಂತಕರು ರಾಜಪ್ರಭುತ್ವವನ್ನು ಪ್ರಶ್ನಿಸುವ, ರಾಜರು ಜನರನ್ನು ಆಳಲು ನಿರ್ಮಿಸಿಕೊಂಡಿದ್ದ ದೈವೀಕವಚದ ಹಕ್ಕನ್ನು ಪ್ರಶ್ನಿಸುವ ಯುಗವೂ ಆರಂಭವಾಗಿತ್ತು. ವಿಪರ್ಯಾಸವೆಂದರೆ ಆಫ್ರಿಕಾದಿಂದ ಕದ್ದು ತಂದ ಗುಲಾಮರ ಮಾರಾಟವೂ ಅದೇ ಯುಗದಲ್ಲಿ ಯೂರೋಪಿನಿಂದಲೇ ನಡೆಯುತ್ತಿತ್ತು.

ಹದಿನೆಂಟನೆಯ ಶತಮಾನದ ಸರಿಸುಮಾರಿಗೆ ಆಫ್ರಿಕಾ ಖಂಡದೆಡೆಗೆ ಕ್ರಿಶ್ಚಿಯನ್ ಧರ್ಮ ಪ್ರಸಾರದ ಪಯಣಗಳೂ ಆರಂಭವಾದವು. ಧರ್ಮ ಪ್ರಸಾರಕರು ತಮ್ಮ ದೇಶಗಳನ್ನು ಬಿಟ್ಟು ಆಫ್ರಿಕಾ ಖಂಡದತ್ತ ಹೊರಟರು. ಅಂಥವರಲ್ಲಿ ನೈಲ್ ನದಿಯ ಮೂಲ ಹುಡುಕಿಕೊಂಡು ಹೋಗಿ ಹಲವು ವರ್ಷ ಕಾಣೆಯಾಗಿ, ನಂತರ ಪತ್ತೆಯಾದ ಸ್ಕಾಟ್‌ಲೆಂಡ್‌ನ ಮಿಷನರಿ ಲಿವಿಂಗ್ ಸ್ಟೋನ್ ಕೂಡ ಒಬ್ಬ. ಈತ 'ಡಾರ್ಕ್ ಕಾಂಟಿನೆಂಟ್'ನ ಆಳಗಲಗಳನ್ನು ಅಳೆಯಲು ಹೊರಟ ಸಾಹಸಿಗಳಲ್ಲಿ ಒಬ್ಬ.
ಇಂಥ ಸಾಹಸಗಳ ನಡುವೆ ವಸಾಹತುಗಳ ಲಾಭದ ವಾಸನೆ ಹಿಡಿದಿದ್ದ ವಲಯವೂ ಯೂರೋಪಿನಲ್ಲಿತ್ತು. ಅಷ್ಟೊತ್ತಿಗಾಗಲೇ ಇಂಡಿಯಾ, ನಾರ್ತ್ ಅಮೆರಿಕಾಗಳಿಂದ ಲೂಟಿ ಹೊಡೆದು ತಂದ ಬಿಟ್ಟಿ ಸಂಪತ್ತಿನ ರುಚಿ ಹತ್ತಿದ್ದ ಯೂರೋಪಿನ ಹಲವು ದೇಶಗಳು ಹೊಸ ವಸಾಹತುಗಳನ್ನು ಹುಡುಕತೊಡಗಿದ್ದವು. 1880ರ ದಶಕದಿಂದೀಚೆಗೆ ಆಫ್ರಿಕಾದ ನಾಡುಗಳ ಮೇಲೆ ಹಿಡಿತ ಸಾಧಿಸಲು ಯೂರೋಪಿಯನ್ ದೇಶಗಳ ನಡುವೆ ಭೀಕರ ಕದನ ಶುರುವಾಯಿತು. ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ 'ಸ್ಯಾಂಬಲ್ ಫಾರ್ ಆಫ್ರಿಕಾ' ಎಂಬ ಘಟ್ಟ ಇದು. 1920ರ ಹೊತ್ತಿಗೆ ಬೆಲ್ಜಿಯಂ, ಫ್ರಾನ್ಸ್, ಇಟಲಿ, ಜರ್ಮನಿ, ಗ್ರೇಟ್ ಬ್ರಿಟನ್ ಸ್ಪೇನ್ ಹಾಗೂ ಪೋರ್ಚುಗಲ್ ದೇಶಗಳು ಆಫ್ರಿಕಾದ ಬಹುತೇಕ ಭಾಗಗಳನ್ನು ಆಕ್ರಮಿಸಿಕೊಂಡು, ಅವುಗಳನ್ನು ತಮ್ಮತಮ್ಮಲ್ಲೇ ಹಂಚಿಕೊಂಡು ವಸಾಹತುಗಳನ್ನಾಗಿಸಿಕೊಂಡರು. ಇಥಿಯೋಪಿಯಾ ಹಾಗೂ ಲೈಬೀರಿಯಾ ದೇಶಗಳು ಮಾತ್ರ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದವು.

ಇಪ್ಪತ್ತನೆಯ ಶತಮಾನದಲ್ಲಿ ಆಫ್ರಿಕಾದ ಹಲವು ದೇಶಗಳಲ್ಲಿ ಸ್ವಾತಂತ್ರ್ಯದ ಬಯಕೆ ಅಂಕುರಿಸಿತು. ಅಲ್ಲಿ ಗೆರಿಲ್ಲಾ ಹೋರಾಟವೂ ಸೇರಿದಂತೆ ಬಗೆ ಬಗೆಯ ರಾಷ್ಟ್ರೀಯ ಚಳುವಳಿಗಳು ನಡೆದವು. ಆಫ್ರಿಕಾದ ನಾಡುಗಳು ಒಂದೊಂದಾಗ ಸ್ವತಂತ್ರವಾಗತೊಡಗಿದವು. ತಮ್ಮ ಸರ್ಕಾರಗಳನ್ನು ರಚಿಸಿಕೊಂಡವು. ಆದರೆ ಅವು ಸ್ವತಂತ್ರಗೊಂಡ ಕೆಲವೇ ದಶಕಗಳಲ್ಲಿ ಜಾಗತೀಕರಣ, ನವ ಮಾರುಕಟ್ಟೆಗಳ ಹೆಸರಿನಲ್ಲಿ ನವವಸಾಹತೀಕರಣ ಆರಂಭವಾಯಿತು. ಅದರ ಜೊತೆಗೇ, ದೇಶೀ ಸರ್ಕಾರಗಳ ಸರ್ವಾಧಿಕಾರ ಹಾಗೂ ಭ್ರಷ್ಟಾಚಾರಗಳ ಘಟ್ಟವೂ ಆರಂಭವಾಯಿತು. ಪ್ರಜಾಪ್ರಭುತ್ವ ಎಂಬುದು ಪ್ರಹಸನವಾಗತೊಡಗಿತು.

ಆಫ್ರಿಕಾದ ಖನಿಜ ಸಂಪತ್ತಿನ ಲೂಟಿಯಲ್ಲಿ ದೇಶೀ ಸರ್ಕಾರಗಳು, ಆಫ್ರಿಕಾದ ಆಳುವ ವರ್ಗಗಳು ಹಾಗೂ ವಿದೇಶಿ ಸರ್ಕಾರಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ದೊಡ್ಡ ಮಟ್ಟದಲ್ಲಿ ಪಾಲ್ಗೊಂಡಿವೆ. ಇವೆಲ್ಲದರ ನಡುವೆ ಆಧುನಿಕವಾಗುವ, ನವ ನಾಡು ಕಟ್ಟುವ, ಸಾಮಾಜಿಕ ನ್ಯಾಯ ಸ್ಥಾಪನೆ ಮಾಡುವ ಹಂಬಲಗಳೂ ತಮ್ಮ ಪ್ರಯತ್ನಗಳನ್ನು ತಾವು ಮಾಡುತ್ತಲೇ ಇವೆ. ಕಳೆದ ನೂರು ವರ್ಷಗಳ ಆಧುನಿಕ ಆಫ್ರಿಕನ್ ಸಾಹಿತ್ಯ ಈ ಎಲ್ಲ ವಿದ್ಯಮಾನಗಳ ದಾಖಲೆ, ವಿಶ್ಲೇಷಣೆ, ಹಲಬಗೆಯ ಪ್ರತಿರೋಧ, ಜನಜಾಗೃತಿ ಈ ಎಲ್ಲದರ ಕನ್ನಡಿಯಾಗಿ ರೂಪುಗೊಂಡಿದೆ. ದೇಶೀ ಸಮಾಜದ ಘನತೆ, ದೌರ್ಬಲ್ಯ, ಶಕ್ತಿ, ಸಾಧ್ಯತೆಗಳ ಚಿತ್ರಣದ ಜೊತೆಜೊತೆಗೇ ಈ ಸಮಾಜಗಳು ಹಿಡಿಯಬೇಕಾದ ದಿಕ್ಕನ್ನೂ ಸೂಚಿಸುತ್ತಾ ಬಂದಿದೆ.

- ನಟರಾಜ್ ಹುಳಿಯಾರ್

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...