ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'


’ಬದುಕಿನ ಬುತ್ತಿ’ ಸರಣಿಯಲ್ಲಿ ಕನ್ನಡ ಪುಸ್ತಕಲೋಕದ ಚಿರಕೃತಿಗಳ ಬಗೆಗಿನ ತಮ್ಮ ಓದು-ಅಭಿಪ್ರಾಯಗಳನ್ನು ದಾಖಲಿಸುವ ವಿಮರ್ಶಕ-ಲೇಖಕ ಶ್ರೀಧರ ಹೆಗಡೆ ಭದ್ರನ್‌ ಅವರು ಎ.ಆರ್‌. ಕೃಷ್ಣಶಾಸ್ತ್ರಿಗಳ ವಚನಭಾರತದ ಬಗ್ಗೆ ಬರೆದಿದ್ದಾರೆ.

ನಮ್ಮ ದೇಶದ ಪ್ರಾಚೀನ ಸಾಹಿತ್ಯಗಳಲ್ಲಿ ಮಹಾಕಾವ್ಯವೆಂದೋ ಇತಿಹಾಸವೆಂದೋ ಪ್ರಸಿದ್ಧವಾಗಿರುವ ಮಹಾಭಾರತವನ್ನು ದೇಶಭಾಷೆಗಳಲ್ಲಿ ಪುನಾರಚಿಸಿಕೊಳ್ಳುವ ಒಂದು ಪರಂಪರೆ ಅತ್ಯಂತ ಸಮೃದ್ಧವಾಗಿ ಬೆಳೆದು ಬಂದಿದೆ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯಂ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಪರಮದೇವ ಕವಿಯ ತುರಂಗ ಭಾರತ, ಸುಕುಮಾರಭಾರತಿಯ ಚಾಯಣ ಭಾರತ, ಸೂತ ಭಾರತ ಹೀಗೆ ಹಳೆಗನ್ನಡ ಹಾಗೂ ನಡುಗನ್ನಡ ಸಂದರ್ಭದಲ್ಲಿ ಕಾವ್ಯರೂಪದಲ್ಲಿ ಹಲವಾರು ಕೃತಿಗಳು ರಚನೆಯಾಗಿವೆ. ಪ್ರತಿಯೊಂದು ಕಾವ್ಯವೂ ತನ್ನ ಸತ್ವಾತಿಶಯದಿಂದ ಅನನ್ಯವಾಗಿದೆ. ಹೊಸಗನ್ನಡ ಗದ್ಯ ಸಂದರ್ಭದಲ್ಲಿ ಇಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮತ್ತು ಅತ್ಯಂತ ಜನಪ್ರಿಯತೆಯನ್ನು ಜನಪ್ರೀತಿಯನ್ನು ಪಡೆದುಕೊಂಡಿರುವ ಮತ್ತು ಚಿರಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು; ಎ. ಆರ್. ಕೃಷ್ಣಶಾಸ್ತ್ರಿಯವರ ವಚನ ಭಾರತ.
ಕನ್ನಡದಲ್ಲಿ ಬರೆಯಬೇಕೆನ್ನುವವರು ಶಾಸ್ತ್ರಿಯವರ ವಚನ ಭಾರತವನ್ನು ಒಂದೆರಡಲ್ಲ ಹತ್ತಾರು ಬಾರಿ ಓದಿ ಬರವಣಿಗೆ ಶೈಲಿ ವಿಷಯಗಳಲ್ಲಿ ಶುದ್ಧಿ ಸಾಧಿಸಿ ಮುಂದುವರಿಯಬೇಕು- ಎಂಬುದು ಡಿ. ವಿ. ಜಿ.ಯವರ ಶಿಫಾರಸು.

ವಚನ ಭಾರತ ಮೊದಲ ಮುದ್ರಣವಾಗಿ ಪ್ರಕಟವಾದದ್ದು 1950೦ರಲ್ಲಿ. ಮುಂದೆ 1953, 1958, 1966, 1971, 1981, 1989, 1993, 1997 ಹೀಗೆ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದೆ. 2017ರಲ್ಲಿ ಹದಿನಾಲ್ಕನೆಯ ಮುದ್ರಣವನ್ನು ಕೃತಿ ಕಂಡಿದೆ. ಮೊದಲಿನೆರಡು ಮುದ್ರಣಗಳನ್ನು ಲೇಖಕ ಕೃಷ್ಣಶಾಸ್ತ್ರಿಯವರೇ ಪ್ರಕಟಿಸಿದ್ದ್ದಾರೆ; ಶಾರದಾ ಮಂದಿರ, ಗೀತಾ ಬುಕ್ ಹೌಸ್ ಹಾಗೂ ನವಕರ್ನಾಟಕ ಪ್ರಕಾಶನಗಳು ವಚನ ಭಾರತವನ್ನು ಓದುಗರಿಗೆ ಸದಾ ಲಭ್ಯವಾಗಿರಿಸಿದ್ದಾರೆ. ಇತ್ತೀಚೆಗೆ ವಚನ ಭಾರತವನ್ನು ಗೂಗಲ್ ಬುಕ್ಸ್‌ನಲ್ಲಿ ಉಚಿತವಾಗಿ ಓದಲು ಮತ್ತು ಅದರ ಪಿಡಿಎಫ಼್ ಪ್ರತಿಯನ್ನು ಪಡೆಯಲೂ ಅಂತರ್ಜಾಲ ತಾಣಗಳಲ್ಲಿ ಅವಕಾಶವಿದೆ. ಕೃಷ್ಣಶಾಸ್ತ್ರಿಯವರ ಕುಟುಂಬಸ್ಥರು ಅವರ ಎಲ್ಲ ಪುಸ್ತಕಗಳನ್ನೂ ಮುಕ್ತವಾಗಿ ಇ-ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.

ಕೃಷ್ಣಶಾಸ್ತ್ರಿಯವರು ವಚನ ಭಾರತವನ್ನು ಬರೆಯುವಾಗ ಕನ್ನಡದಲ್ಲಿ ಗದ್ಯರೂಪದಲ್ಲಿ ಅನೇಕ ಮಹಾಭಾರತಗಳು ಲಭ್ಯವಿದ್ದವು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕೃಷ್ಣರಾಜ ವಾಣೀ ವಿಲಾಸವೆಂಬ ಮಹಾಭಾರತದ ಕನ್ನಡ ಟೀಕು- ಎಂಬ ಸಂಸ್ಕೃತ ಮಹಾಭಾರತದ ಅಕ್ಷರಶಃ ಕನ್ನಡ ಅನುವಾದ ಸುಮಾರು 1742ರಲ್ಲಿ ಪ್ರಕಟವಾಗಿತ್ತು. ಇದಾದ ನಂತರ 1932-33ರಲ್ಲಿ ದೇವಶಿಖಾಮಣಿ ಅಳಸಿಂಗರಾಚಾರ್ಯರು ಶ್ರೀ ಮಹಾಭಾರತವು-ಕರ್ನಾಟಕ ವಚನವು ಎಂದು ಮಹಾಭಾರತದ ಆಮೂಲಾಗ್ರ ಅನುವಾದವನ್ನು ಮಾಡಿದರು. ಇವೆರಡೂ ಗಾತ್ರದಲ್ಲಿ ಬೃಹತ್ ಆಗುರುವ ಹಲವಾರು ಸಂಪುಟ ರೂಪದ ಅನುವಾದಗಳು. ಇವುಗಳನ್ನು ಬಿಟ್ಟರೆ; ಕಾವ್ಯಕಳಾನಿಧಿ ಬುಕ್ ಡಿಪೋ ಪ್ರಕಟಿಸಿದ್ದ ವಚನ ಭಾರತ ಕಥಾ ಸಂಗ್ರಹವು, ಗಳಗನಾಥರ ಸಚಿತ್ರ ಮಹಾಭಾರತಾಮೃತ, ಲಕ್ಷ್ಮಣ ಬಾಬಣಿ ಪೈ ಅವರ ಶ್ರೀ ಮಹಾಭಾರತ ಸಂಹಿತೆಯು, ವೆಂಕಣ್ಣ ಭಟ್ಟರು ಅನುವಾದಿಸಿದ್ದ ಆನಿಬೆಸೆಂಟರ ಮಹಾಭಾರತ ಸಂಗ್ರಹ ಇವೆಲ್ಲವೂ ತುಂಬಾ ಸಂಕ್ಷಿಪ್ತವಾದ ನಿರೂಪಣೆಗಳಾಗಿದ್ದವು. ಒಟ್ಟಾರೆ ವಚನ ಭಾರತದ ಪೂರ್ವಕಾಲೀನ ಗದ್ಯರೂಪದ ಕನ್ನಡ ಭಾರತಗಳು ಒಂದೋ ಅತಿದೀರ್ಘ ಅಥವಾ ಅತಿ ಸಂಕ್ಷಿಪ್ತ- ಈ ಎರಡು ಕೊರತೆಗಳ ಮಧ್ಯೆ ನಲುಗುತ್ತಿದ್ದವು.

ಇಂತಹ ಸಂದರ್ಭದಲ್ಲಿ ಕೃಷ್ಣಶಾಸ್ತ್ರಿಗಳಿಗೆ ಅನಿಸಿತಂತೆ; ಉಪಕಥೆ, ನೀತಿ, ಧರ್ಮ ಎಲ್ಲವನ್ನೂ ಒಳಗೊಂಡು ಸರಳವಾದ ಇಂದಿನ ಗದ್ಯದಲ್ಲಿ ಬರೆದ, ಒಂದು ಸಂಪುಟದಲ್ಲಿರುವ, ಜನಸಾಮಾನ್ಯಕ್ಕೆ ನಿಲುಕುವಂಥ ಒಂದು ಕನ್ನಡ ಭಾರತ ಬೇಕಾಗಿತ್ತು. ಈ ಅಭಿಪ್ರಾಯ ನಾನು ವಿದ್ಯಾರ್ಥಿಯಾಗಿದ್ದಗಲೇ ಇತ್ತು. ಉಪಾಧ್ಯಾಯನಾಗಿದ್ದಾಗ ಅದರ ಅವಶ್ಯಕತೆ ಆಗಾಗ ತೋರುತ್ತಲೇ ಇತ್ತು. ಆದರಿಂದ ಸ್ಪಷ್ಟವಾದ ಸೂಚನೆ ಬಂದ ಕೂಡಲೇ ಅದನ್ನು ಮನಸಾರ ಕೈಕೊಂಡೆ ಎಂದಿದ್ದಾರೆ. ಈ ಸೂಚನೆ ಬಂದಿದ್ದು ವಯಸ್ಕರ ಶಿಕ್ಷಣ ಸಮಿತಿಯಿಂದ. ಕಾರಣಾಂತರದಿಂದ ಅದು ಸಮಿತಿಯಿಂದ ಪ್ರಕಟವಾಗಲಿಲ್ಲ. ಆದರೆ ಪುಸ್ತಕದ ರಚನೆಯ ಧ್ಯೇಯ ಉದ್ದೇಶಗಳು ಕೃಷ್ಣಶಾಸ್ತ್ರಿಯವರ ಎದುರು ಸ್ಪಷ್ಟವಾಗಿದ್ದವು. ಯಾರಿಗಾಗಿ ಈ ಬರವಣಿಗೆ ಎಂಬುದು ಖಚಿತವಾಗಿತ್ತು. ಬರವಣಿಗೆಯ ಉದ್ದಕ್ಕೂ ಅದನ್ನು ಪರಿಶೀಲಿಸಿಕೊಂಡೇ ಅವರು ಮುಂದುವರಿಯುತ್ತಿದ್ದರು. ತಮ್ಮ ಪ್ರಯೋಗದ ಬಗ್ಗೆ ಕೃಷ್ಣಶಾಸ್ತ್ರಿಯವರು ಹೀಗೆ ಹೇಳಿದ್ದಾರೆ;
ನಾನು ಗ್ರಂಥವನ್ನು ಬರೆಯುತ್ತಿದ್ದಾಗ ಅಂದಂದು ಬರೆದುದನ್ನು ಅಂದಂದೇ ನನ್ನ ಮಗಳು ಸೌ. ಶಾಂತಾ ಮತ್ತು ನನ್ನ ಮೊಮ್ಮಗಳು ಸೌ. ಲೀಲಾ ಇಬ್ಬರೂ ತುಂಬ ಕುತೂಹಲದಿಂದಲೂ, ವಿಶ್ವಾಸದಿಂದಲೂ ಓದುತ್ತಿದ್ದರು. ಅವರು ಓದುತ್ತಿದ್ದಾಗ ಅವ್ರನ್ನು ನಾನು ಎಲ್ಲಿಯಾದರೂ ಬೇಸರವಾಯಿತೇ ಎಲ್ಲಿಯಾದರೂ ಅರ್ಥವಾಗಲಿಲ್ಲವೇ? ಎಂದು ಕೇಳುತ್ತಿದ್ದೆ. ಅದಕ್ಕೆ ಇಲ್ಲವೆಂದು ಉತ್ತರ ಬರುತ್ತಿತ್ತು. ನಿತ್ಯವೂ ಅದೇ ಪ್ರಶ್ನೆ ಅದೇ ಉತ್ತರ. ಅದು, ನಾನು ತಂದೆ- ತಾತ ಎಂಬ ಪಕ್ಷಪಾತದಿಂದ ಹೇಳಿದ ಉತ್ತರವಲ್ಲವೆಂದು ಭಾವಿಸಿದ್ದೇನೆ. ಅವರಲ್ಲಿ ಒಬ್ಬಳು ಹೈಸ್ಕೂಲು ವಿದ್ಯಾರ್ಥಿನಿ, ಇನ್ನೊಬ್ಬಳು ಕಾಲೇಜಿನ ವಿದ್ಯಾರ್ಥಿನಿ. ಆ ಮಟ್ಟದ ವಿದ್ಯಾಬುದ್ಧಿಗಳ ಜನರು ತಿಳಿಯುವಂತೆ ಸರಳವಾಗಿ, ಸಂಕೋಚ ಪಟ್ಟುಕೊಳ್ಳದಂತೆ ಗಂಭೀರವಾಗಿ, ಸಂಸ್ಕಾರ ಪಡೆಯುವಂತೆ ಶುದ್ಧವಾಗಿ, ಸಂತೋಷ ಪಡುವಂತೆ ರಸವತ್ತಾಗಿ ಬರೆಯಬೇಕೆಂಬುದೇ ನನ್ನ ಮುಖ್ಯ ಉದ್ದೇಶ. ಇದು ಈಡೇರಿದೆ ಎಂಬುದಕ್ಕೆ ಕಳೆದ ಎಪ್ಪತ್ತು ವರ್ಷಗಳಿಂದ ನಮ್ಮ ಜನ ಇದನ್ನು ಓದುತ್ತ ಬಂದಿರುವುದೇ ಸಾಕ್ಷಿ. ಮಾತಿನ ಹೃದಯಬಲ್ಲ ಕವಿ ನರಸಿಂಹಸ್ವಾಮಿಯವರು ತಮ್ಮ ವಚನ ಭಾರತ ಕವಿತೆಯ ಕೊನೆಯಲ್ಲಿ ಹೇಳುತ್ತಾರೆ;
ನನಗೆ ಒಂದೇ ಪ್ರಶ್ನೆ: ಶಾಸ್ತ್ರಿಗಳು ಕವಿಗಳೆ?
ಹುತ್ತವನು ಕೆದಕಿ ಹಾವಿನ ಹೆಡೆಯ ಹಿಡಿದಂತೆ
ಉತ್ತರದ ಹಾದಿ.
ದೇವರನು ಬೆಳಗಿ ತೊಳೆವಂತೆ ಕನ್ನಡ ನುಡಿಯ
ನಾನೂರು ಪುಟದ ನವರತ್ನ ಸೀಮೆಗಳಲ್ಲಿ
ಭಾರತದ ಕಥೆಯನರಳಿಸಿದ ಬೆರಳಿಗೆ ಬಂದ
ಧನ್ಯತೆಗೆ ಮಾತ್ರ ಕೈಮುಗಿಯುವುದೇ ಉತ್ತರ.
ಗೆದ್ದವರು ಪಾಂಡವರು ಕೌರವರು ಎನಲಾರೆ,
ಗೆದ್ದವರು ಇಲ್ಲಿ ಶಾಸ್ತ್ರಿಗಳು.
ವಚನ ಭಾರತದ ಓದಿನ ಸೆಳವಿಗೆ ಸಿಕ್ಕ ಯಾರೂ ಇದನ್ನು ಅಲ್ಲಗಳೆಯಲಾರರು.

ಮೂಲ ಮಹಾಭಾರತ ಸಂಸ್ಕೃತದಲ್ಲಿದೆಯಾದರೂ ಅದರ ಹಲವಾರು ಪಾಠಗಳು ಲಭ್ಯವಿವೆ. ಇಂತಹ ಗೊಂದಲ ನಿವಾರಣೆಗಾಗಿ ಭಂಡಾರ್‌ಕರ್ ಓರಿಯಂಟಲ್ ಸಂಶೋಧನ ಸಂಸ್ಥೆಯು ವಿ. ಎಸ್. ಸುಂಠಣಕರ್ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಪ್ರಮಾಣ ಪಠ್ಯವನ್ನು ಸಿದ್ಧ ಪಡಿಸಿತು. ಭೀಷ್ಮ ಪರ್ವದವರೆಗೆ ಕೃಷ್ಣಶಾಸ್ತ್ರಿಯವರು ಈ ಪಾಠವನ್ನು ಅನುಸರಿಸಿದ್ದಾರೆ. ಮುಂದಿನ ಪರ್ವಗಳಿಗೆ ಔತ್ತರೇಯ ಪಾಠವಾದ ಕ್ಷೇಮೇಂದ್ರನ ಭಾರತ ಕಥಾ ಮಂಜರಿ ಮತ್ತು ಕುಂಭಕೋಣಂನಲ್ಲಿ ಮುದ್ರಿತವಾದ ಭಾರತವನ್ನು ಆಧರಿಸಿದ್ದಾರೆ.

ಹೀಗೆ ಹಲವಾರು ವರ್ಷ ಕೃಷ್ಣಶಾಸ್ತ್ರಿಯವರು ಮಹಾಭಾರತದ ಬಗ್ಗೆ ಚಿಂತನೆ ಮಾಡಿ ಆಳವಾದ ಅಧ್ಯಯನ ಮಾಡಿದ್ದಾರೆ. ಮೂಲವನ್ನು ಆಧಾರವಾಗಿಟ್ಟುಕೊಂಡೇ ಈ ಮಹಾಭಾರತವನ್ನು ಬರೆಯಬೇಕೆಂಬುದು ಅವರ ಸಂಕಲ್ಪವಾಗಿತ್ತು. 'ವ್ಯಾಸರ ಮಹಾಭಾರತದ ಎಲ್ಲ ಪರ್ವಗಳನ್ನೂ ಈ ಸಂಗ್ರಹ ಒಳಗೊಂಡಿರಬೇಕು. ಸುಮಾರು ಐನೂರು ಪುಟಗಳಲ್ಲಿ ಮಹಾಭಾರತದ ಸಾರಾಂಶವೆಲ್ಲ ಇರಬೇಕು; ಅದು ಹರುಕುಮುರುಕು ಜೋಡಿಸಿದಂತಾಗದೇ ಹೊಂದಿಕೊಂಡಿರಬೇಕು; ಸಪ್ರಮಾಣವಿರಬೇಕು'; ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯುವುದಕ್ಕೆ ಮೊದಲು ಮಾಡಿದೆ ಎಂದು ವಚನ ಭಾರತದ ರಚನೆಯ ಸ್ವರೂಪವನ್ನು ಕೃಷ್ಣಶಾಸ್ತ್ರಿಯವರು ಸ್ಪಷ್ಟಪಡಿಸಿಕೊಂಡಿದ್ದರು. ಇಲ್ಲಿ ಒಂದು ಕೃತಿಯ ರಚನೆಯ ಹಿಂದಿರುವ ಬದ್ಧತೆಯ ದರ್ಶನವಾಗುತ್ತದೆ.
ಸರಳವಾದ, ಸಹಜವಾದ ಗದ್ಯದಲ್ಲಿ ನಿರೂಪಿತವಾಗಿರುವ ವಚನ ಭಾರತ ಮೂಲಕ್ಕೆ ಪೂರ್ತಿಯಾಗಿ ನಿಷ್ಠವಾಗಿದೆ. ಉಳಿದ ನಿರೂಪಕರಂತೆ ಮಧ್ಯದಲ್ಲಿ ಲೇಖಕ ತನ್ನ ಅಭಿಪ್ರಾಯವನ್ನು ಹೇರುವುದಿಲ್ಲ. ಇದು ಕೃಷ್ಣಶಾಸ್ತ್ರಿಯವರು ತೆಗೆದುಕೊಂಡ ದೀಕ್ಷೆಯೂ ಆಗಿತ್ತು; 'ಇದರಲ್ಲಿ ನನ್ನ ಸ್ವಂತ ಭಾವ ಒಂದೂ ಇಲ್ಲ. ನನ್ನ ಬುದ್ಧಿಯಿಂದ ಎಲ್ಲಾದರೂ ಉತ್ತಮಗೊಳಿಸಹೋದರೆ ಅದು ಕಾಮನ ಬಿಲ್ಲಿಗೆ ಬಣ್ಣ ಬಳಿದಂತೆ ಅಥವಾ ಚಿತ್ರ ಪಟದ ಬೊಂಬೆಗೆ ಬಟ್ಟೆ ಹೊಲಿದಂತೆ ಆದೀತೆಂದು ಹೆದರಿ ಮೂಲವನ್ನೇ ಅವಲಂಬಿಸಿಕೊಂಡು ಹೋಗಿದ್ದೇನೆ. ಸ್ವಾರಸ್ಯವಿದ್ದ ಕಡೆ ಒಂದು ಮಾತನ್ನೂ ತೆಗೆದಿಲ್ಲ. ಇನ್ನು ಕೆಲವು ಕಡೆ ದೊಡ್ಡ ದೊಡ್ಡ ಪ್ರಕರಣಗಳನ್ನು ಬಿಟ್ಟಿದ್ದೇನೆ. ಒಂದು ಕಡೆಯೂ ಪುನರುಕ್ತಿಯಿಲ್ಲ. ನನ್ನ ಉದ್ದೇಶ ಕಬ್ಬಿನ ಜಲ್ಲೆಯಲ್ಲಿ ಬೇರು ಗರಿ ಗಿಣ್ಣುಗಳನ್ನು ಕತ್ತರಿಸಿ ಹಾಕಿ, ಸಿಪ್ಪೆ ಹೆರೆದು, ಸಿಗುರು ಕಳೆದು, ಹೋಳು ಮಾಡಿ ಬಟ್ಟಲಲ್ಲಿ ತುಂಬಿಕೊಡುವಂಥದು. ಕಿತ್ತಲೆಯ ಸಿಪ್ಪೆ ಸುಲಿದು, ತೊಳೆ ಬಿಡಿಸಿ, ನಾರು, ಬೀಜ ತೆಗೆದುಹಾಕಿ ಕುಸುಮವನ್ನು ಅಡಕವಾದ ಬೆಳ್ಳಿಯ ತಟ್ಟೆಯಲ್ಲಿ ಜೋಡಿಸಿಡುವಂಥದು ಇವೆಲ್ಲಾ ಮಾತುಗಳೂ ಕೃಷ್ಣಶಾಸ್ತ್ರಿಯವರು ವಚನ ಭಾರತದ ಸೃಷ್ಟಿಗೆ ಮಾಡಿಕೊಂಡಿದ್ದ ಪೂರ್ವ ಸಿದ್ಧತೆಗಳನ್ನು ಸುಂದರವಾಗಿ ವರ್ಣಿಸಿವೆ. ಮತ್ತು ಈ ಎಲ್ಲ ಉದ್ದೇಶಗಳೂ ಕೃತಿಯಲ್ಲಿ ಅಚ್ಚುಕಟ್ಟಾಗಿ ನೆರವೇರಿವೆ.'
ವಚನ ಭಾರತದ ಇನ್ನೊಂದು ಬಹಳ ಮುಖ್ಯವಾದ ಅಂಗವೆಂದರೆ; 91
ಪುಟಗಳ ಸುದೀರ್ಘ ಪೀಠಿಕೆ. ಇದರಲ್ಲಿ ಮಹಾಭಾರತದ ಹುಟ್ಟು, ಕಾಲ, ಕರ್ತೃ, ಮಹಾಭಾರತದ ಕಾವ್ಯಗುಣ, ಅದರಲ್ಲಿ ಧರ್ಮ, ನೀತಿ ಅಲ್ಲದೇ ಯಜ್ಞ, ದೇವತಾಪೂಜೆ, ಸನ್ಯಾಸ, ದಾನ, ತಪಸ್ಸು, ಅಹಿಂಸೆ, ಕರ್ಮ, ಕಷ್ಟ-ಸುಖದ ಸಮಸ್ಯೆ, ಇಂದಿನ ಪ್ರಪಂಚ, ಮಹಾಭಾರತದ ಸಂದೇಶ ಮತ್ತು ವಚನ ಭಾರತದಲ್ಲಿ ಸಾಹಿತ್ಯ ದೃಷ್ಟಿ ಮುಂತಾದ ಶೀರ್ಷಿಕೆಗಳಡಿಯಲ್ಲಿ ಮಹಾಭಾರತದ ಆಮೂಲಾಗ್ರ ವಿಶ್ಲೇಷಣೆ ಕೈಗೊಂಡಿದ್ದಾರೆ. ಪೀಠಿಕೆಯ ಕುರಿತು ಟಿ. ವಿ. ವೆಂಕಟಾಚಲಶಾಸ್ತ್ರಿಯವರು; ಮಹಾಭಾರತದಂಥ ಗ್ರಂಥಕ್ಕೆ ಅಂಥದ್ದೊಂದು ವಿದ್ವತ್ಪೂರ್ಣ ಪೀಠಿಕೆ ಇರಬೇಕೆಂದು ವೃಥಾ ಕಠಿಣಗೊಳಿಸಿ ಹೊರೆ ಮಾಡಿಲ್ಲ ಎಂದು ಮೆಚ್ಚಿಕೊಂಡಿದ್ದಾರೆ. ಮಹಾಭಾರತದ ಕಥೆಯನ್ನು ನಿರೂಪಿಸುವಾಗ ಕೃಷ್ಣಶಾಸ್ತ್ರಿಗಳ ವಿವೇಚನೆ, ತೀರ್ಮಾನಗಳು ಮರೆಯಲ್ಲಿ ನಿಂತು ಕೆಲಸ ಮಾಡಿದ್ದರೆ, ಪೀಠಿಕಾ ಭಾಗದಲ್ಲಿ ಅವು ಪ್ರತ್ಯಕ್ಷ ನೋಡಲು ಸಿಗುತ್ತವೆ-ಎಂಬುದು ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಅಭಿಪ್ರಾಯ. ಇದಕ್ಕೆ ಕೆಲವು ಜ್ವಲಂತ ನಿದಶನಗಳನ್ನು ನೋಡಬಹುದು; ವ್ಯಾಸರಿಂದ ಮಕ್ಕಳನ್ನು ಪಡೆಯಲು ಅಂಬಿಕೆ, ಅಂಬಾಲಿಕೆಯರನ್ನು ಒತ್ತಾಯಿಸಿದಾಗ; ಆ ಹೆಣ್ಣು ಮಕ್ಕಳು ಎಷ್ಟು ನೊಂದುಕೊಂಡರೋ ಎನ್ನುತ್ತಾರೆ. ಕುಂತಿಯ ವಿಷಯವನ್ನು ಪ್ರಸ್ತಾಪಿಸಿ; ಅವಳು ಅನುಭವಿಸಿದ ಕಷ್ಟ ಪರಂಪರೆಗೆ ಮರುಗುತ್ತಾರೆ. ಹಾಗೆಯೇ ಮಾದ್ರಿಯಾಗಲೀ ಗಾಂಧಾರಿಯಾಗಲೀ ರಾಜ ಮನೆತನದಲ್ಲೇ ಜನಿಸಿದ್ದರೂ ಅವರಿಗೆ ಯಾವ ರೀತಿಯ ಸುಖ ಸಂತೋಷಗಳೂ ಸಿಗಲಿಲ್ಲ. ಇವರೆಲ್ಲ ಮಾಡಿದ ಅಪರಾಧವೇನು? ಎಂದು ಮನನೊಂದು ಪ್ರಶ್ನಿಸಿದ್ದಾರೆ. ವಚನ ಭಾರತದ ನಿರೂಪಣೆಯಲ್ಲಿ ಕೇಳಲಾಗದ ಹಲವು ಪ್ರಶ್ನೆಗಳನ್ನು ಕೃಷ್ಣಶಾಸ್ತ್ರಿಯವರು ಇಲ್ಲಿ ಕೇಳಿಕೊಳ್ಳುತ್ತಾರೆ.
ಪೀಠಿಕೆಯಲ್ಲಿ ಬರೆದಿರುವ ಇಂದಿನ ಪ್ರಪಂಚಕ್ಕೆ ಮಹಾಭಾರತದ ಸಂದೇಶ ಎಂಬ ಭಾಗದಲ್ಲಿ ಬಂದಿರುವ ಮಹಾಭಾರತದ ಪ್ರಸ್ತುತತೆಯ ಚರ್ಚೆ ಸಾರ್ವಕಾಲಿಕವಾದುದು. ಪರಂಪರೆ ಮತ್ತು ಸದ್ಯತನದ ಕುರಿತಾದ ಗಾಢವಾದ ಕಾಳಜಿಯುಳ್ಳ ಸೃಜನಶೀಲ ಮನಸ್ಸೊಂದರ ಸಂಚಾರ ಇಲ್ಲಿ ಕಾಣಸಿಗುತ್ತದೆ. ಚಂಡಿಯ ಕಥೆಯನ್ನು ಪ್ರಸ್ತಾಪಿಸುತ್ತಾ; ಗೃಹಸ್ಥಾಶ್ರಮ, ಸಂಸಾರದ ಸ್ವಾರಸ್ಯವನ್ನು ಕುರಿತ ಹಲವು ಮೂಲಭೂತ ವಿಷಯಗಳನ್ನು ಕೃಷ್ಣಶಾಸ್ತ್ರಿಯವರು ಚರ್ಚಿಸಿದ್ದಾರೆ. ಸ್ನೇಹವಿಲ್ಲದ ಸಂಸಾರ ಎಂಥ ಸಂಸಾರ? ಅದು ಮರಳು ಕಾಡು, ಇಲ್ಲದಿದ್ದರೆ ಕುರುಕ್ಷೇತ್ರ; ಸಂಸಾರದಲ್ಲಿ ಪ್ರೀತಿಯಿದ್ದರೆ ಕ್ಷಮೆ, ತ್ಯಾಗ ಇವೆರಡೂ ತಾವೇ ಬರುತ್ತವೆ. ನಿಜವಾದ ಪ್ರೀತಿಗೆ ಇವೇ ಹೆಗ್ಗುರುತು- ಎಂಬಂತಹ ಸೂತ್ರಪ್ರಾಯ ನುಡಿಗಳ ಅರ್ಥ ಸಾಧ್ಯತೆ ಅಪಾರವಾದುದು.

ಯುದ್ಧವಾದರೆ ಸರ್ವನಾಶ; ಗೆದ್ದವನೂ ಸೋತಂತೆಯೇ; ಯುದ್ಧದ ಪರಿಣಾಮದಿಂದ ಚೇತರಿಸಿಕೊಳ್ಳಬೇಕಾದರೆ ಗೆದ್ದವನೂ ಸೋತವನಷ್ಟೇ ಕಷ್ಟಪಡಬೇಕಾದೀತು- ಎಂಬ ಕೃಷ್ಣಶಾಸ್ತ್ರಿಯವರ ಮಾತು ಯುದ್ಧೋತ್ಸಾಹದಿಂದ ಕುದಿಯುತ್ತಿರುವ ಸಮಕಾಲೀನ ಸಂದರ್ಭಕ್ಕೊಂದು ಎಚ್ಚರಿಕೆಯ ಧ್ವನಿಯಾಗಿದೆ.

ಮೂಲದಂತೆ ಒಟ್ಟೂ ಹದಿನೆಂಟು ಪರ್ವಗಳ ನಿರೂಪಣೆ ವಚನ ಭಾರತದ್ದು. ಆದಿಪರ್ವ ಮೊದಲಾಗಿ ಸ್ವರ್ಗಾರೋಹಣ ಪರ್ವದವರೆಗೆ ಇದರ ವ್ಯಾಪ್ತಿ. ಕಥೆಯನ್ನು ಹೇಳುವ ರೀತಿಯಲ್ಲಿಯೂ ಕೃಷ್ಣಶಾಸ್ತ್ರಿಗಳು ತುಂಬಾ ಆತ್ಮೀಯವಾದ ಮಾತುಗಾರಿಕೆಯನ್ನು ಸಾಧಿಸಿದ್ದಾರೆ. ಜೊತೆಗೆ ವಿಶಿಷ್ಟವಾದ ಆರ್ದ್ರತೆಯೂ ತುಂಬಿಕೊಂಡಿದೆ. ಮಾರ್ಕಂಡೇಯ ಮುನಿಯೊಂದಿಗೆ ಯುಧಿಷ್ಠಿರನು ತನ್ನ ನೋವನ್ನು ಹೀಗೆ ಹಂಚಿಕೊಳ್ಳುತ್ತಾನೆ; ಮಹರ್ಷೀ ನನಗಾಗಲೀ ನನ್ನ ತಮ್ಮಂದಿರಿಗಾಗಲೀ ಚಿಂತಿಸುತ್ತಿಲ್ಲ. ರಾಜ್ಯ ಹೋಯಿತಲ್ಲಾ ಎಂದೂ ನನಗೆ ವ್ಯಥೆಯಿಲ್ಲ. ಈ ದ್ರೌಪದಿಯನ್ನು ನೋಡಿದರೆ ಸಂಕಟವಾಗುತ್ತದೆ; ಜೂಜಿನಲ್ಲಿ ದುರಾತ್ಮರಿಂದ ಸಂಕಷ್ಟಕ್ಕೆ ಸಿಲುಕಿದಾಗ ನಮ್ಮನ್ನು ಪಾರು ಮಾಡಿದವಳು ಅವಳು. ದ್ರೌಪದಿಯಂಥ ಪತಿವ್ರತೆಯೂ ಸಚ್ಚರಿತ್ರಳೂ ಆದ ಹೆಂಗಸು ಹೀಗೆ ಕಷ್ಟಕ್ಕೆ ಸಿಕ್ಕಿದ್ದನ್ನು ಹಿಂದೆ ಎಂದಾದರೂ ಕಂಡದ್ದು ಅಥವಾ ಕೇಳಿದ್ದು ಉಂಟೇ ಎಂದು ಪ್ರಶ್ನಿಸುತ್ತಾನೆ. ಹೆಂಡತಿಗಾಗಿ ಹೀಗೆ ಮಿಡಿಯುವ ಮಾತುಗಳು ಯಾವುದೋ ಕಾಲದ ಕಥೆಯೆನಿಸದೇ ನಮ್ಮ ಕಾಲದ ಕಥನವೇ ಎನಿಸುತ್ತದೆ. ಮತ್ತು ಮನೆಯಂಗಳದ ಮಲ್ಲಿಗೆಯಂತೆ ಆಪ್ತವಾಗುತ್ತದೆ. ಸಂಗ್ರಹಶೀಲತೆ, ಕಥನ ನಿರ್ವಹಣ, ವಿಚಾರ ಸಂಗ್ರಹಣ -ಕನ್ನಡಕ್ಕೆ ಅವರು ವಚನ ವ್ಯಾಸರು ಎಂದು ಜಿ. ವೆಂಕಟಸುಬ್ಬಯ್ಯನವರು ಕೃಷ್ಣಶಾಸ್ತ್ರಿಗಳನ್ನು ವರ್ಣಿಸಿದ್ದಾರೆ.

ಕೃಷ್ಣಶಾಸ್ತ್ರಿಗಳು ವಚನ ಭಾರತ ನಿರೂಪಣೆಗೆ ಬಳಸಿರುವ ಭಾಷೆ-ಶೈಲಿಗಳೂ ತುಂಬಾ ಸುಭಗವಾದಂಥವು. ಸಣ್ಣ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರ ಓದಿಗೂ ಸುಲಭವಾಗಿ ದಕ್ಕುವಂಥದ್ದು. ಉದ್ಧಾಮ ಸಂಸ್ಕೃತ ಪಂಡಿತರಾಗಿದ್ದರೂ ಸಂಸ್ಕೃತ ಭೂಯಿಷ್ಠವಾದ ಶೈಲಿಯನ್ನು ಅವರು ಎಲ್ಲಿಯೂ ಬಳಸಿದಂತಿಲ್ಲ ಎಂದು ಎಂ. ಮರಿಯಪ್ಪ ಭಟ್ಟರು ಕೃಷ್ಣಶಾಸ್ತ್ರಿಯವರ ಶೈಲಿಯ ಕುರಿತು ಹೇಳಿದರೆ; ಕೆ. ಕೃಷ್ಣಮೂರ್ತಿಯವರು; ಅಚ್ಚಕನ್ನಡದ ಜೀವನಾಡಿಯನ್ನು ಬಲ್ಲವರಾಗಿದ್ದರು ಎಂದು ಮೆಚ್ಚಿಕೊಂಡಿದ್ದಾರೆ.
ಎ. ಆರ್. ಕೃಷ್ಣಶಾಸ್ತ್ರಿಯವರು ವಚನ ಭಾರತವನ್ನು ಕೇವಲ ಆರೇ ತಿಂಗಳಲ್ಲಿ ಬರೆದು ಪೂರೈಸಿದರು. ಒಂದು ತಪಸ್ಸಿನಂತೆ ಬಹಳ ಶ್ರದ್ಧೆಯಿಂದ ಅವರು ಈ ಕಾರ್ಯ ಮಾಡಿದ್ದಾರೆ. ಹೀಗೆ ಕೃತಿ ರಚನೆ ಒಂದು ತೂಕವಾದರೆ; ಅದರ ಸಂಭ್ರಮವನ್ನು ಹಂಚಿಕೊಳ್ಳುವುದಿದೆಯಲ್ಲ; ಅದನ್ನೊಂದು ಸಾಂಸ್ಕೃತಿಕ ಮಾದರಿಯೆಂದೇ ಪರಿಗಣಿಸಬೇಕು. ಪ್ರತಿಯೊಂದು ಪರ್ವ ಮುಗಿದ ಮೇಲೂ ಹಸ್ತಪ್ರತಿಯ ಮೇಲೆ ಸರಸ್ವತಿಯ ವಿಗ್ರಹವನ್ನಿಟ್ಟು, ಹೂಗಳಿಂದ ಪೂಜಿಸಿ ಸಿಹಿ ಪ್ರಸಾದ ವಿತರಣೆ ಮಾಡುತ್ತಿದ್ದರಂತೆ. ತಮ್ಮ ಅರುವತ್ತನೆಯ ಹುಟ್ಟು ಹಬ್ಬದ ದಿನ 1
950ರಲ್ಲಿ ವಚನ ಭಾರತವನ್ನು ಬರೆದು ಪೂರೈಸಿ, ಪ್ರಕಟಿಸಿ ತಮ್ಮ ಮಿತ್ರರನ್ನೂ ಬಂಧುಗಳನ್ನೂ ಊಟಕ್ಕೆ ಆಹ್ವಾನಿಸಿ ಅವರಿಗೆಲ್ಲ ಪುಸ್ತಕದ ಪ್ರತಿಯನ್ನು ನೀಡಿ ಸಂತಸಪಟ್ಟರಂತೆ. ಪುಸ್ತಕವನ್ನು ಓದಿದ ನಂತರ ಜನರ ಪ್ರತಿಕ್ರಿಯೆಯೂ ಅಪರೂಪದ್ದಾಗಿತ್ತು. ಕೃಷ್ಣಶಾಸ್ತ್ರ್ರಿಯವರ ಮಗಳು ಕೆ. ಶಾಂತಾ ಒಂದೆಡೆ ಹೇಳಿದ್ದಾರೆ; ವಚನ ಭಾರತ ಓದಿ ಮಂಗಳ ಮಾಡಿದಾಗ ತಮ್ಮ ಇಷ್ಟಾರ್ಥಗಳು ನೆರವೇರಿದವೆಂದು ಅವರಿಗೆ ಹೂವು, ಹಣ್ಣು, ಸಿಹಿತಿಂಡಿಗಳನ್ನು ತಂದುಕೊಟ್ಟು ಅವರ ಆಶೀರ್ವಾದ ಪಡೆದವರೆಷ್ಟೋ ಜನ. ಇದು ಲೇಖಕನೊಬ್ಬನಿಗೆ ದೊರೆಯಬಹುದಾದ ಅತಿ ದೊಡ್ಡ ಗೌರವ ಎನ್ನಬಹುದು.
ವಚನ ಭಾರತ ಪ್ರಕಟವಾದ ನಂತರ ಕನ್ನಡದಲ್ಲಿ ಗದ್ಯರೂಪದಲ್ಲಿ ಅನೇಕ ಭಾರತ ಕೃತಿಗಳು ಬಂದವು. ತ. ಸು. ಶಾಮರಾಯರ ಕಥಾ ಭಾರತ, ಕುಮಾರವ್ಯಾಸ ಭಾರತದ ಗದ್ಯಾನುವಾದಗಳು (ಎಲ್.ಗುಂಡಪ್ಪ, ಎನ್ಕೆ, ಅ. ರಾ. ಮಿತ್ರ, ಎಲ್.ಆರ್. ಭಟ್ಟ ಇತ್ಯಾದಿ), ಜೊತೆಗೆ ಹಲವಾರು ಜನಪ್ರಿಯ ಭಾರತಗಳು ಪ್ರಕಟವಾಗಿವೆ. ಇತ್ತೀಚೆಗೆ ಎಲ್. ಎಸ್. ಶೇಷಗಿರಿರಾಯರ ಇಂಗ್ಲಿಷ್ ಕೃತಿಶ್ರೇಣಿಯ ಜಿ. ಎನ್. ರಂಗನಾಥರಾಯರ ಕನ್ನಡ ಅನುವಾದ ಪ್ರಕಟವಾಗಿದೆ. ಹೀಗೆ ಎಷ್ಟೇ ಭಾರತಗಳು ಬಂದರೂ ಎ. ಆರ್. ಕೃಷ್ಣಶಾಸ್ತ್ರಿಯವರ ವಚನ ಭಾರತದ ಪ್ರಭೆ ಮಸಳುವುದಿಲ್ಲ, ಮಂಕಾಗುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

ಇಂದಿಗೂ ವಚನ ಭಾರತದ ಓದು ಒಂದು ಆಹ್ಲಾದಕಾರೀ ಅನುಭವವಾಗಬಲ್ಲುದು. ಸುಸಂಸ್ಕೃತ ಮನಸ್ಸೊಂದರೊಡನೆ ಒಡನಾಡಿದ ಸಂವೇದನೆಯನ್ನು ಕೃತಿ ನೀಡುತ್ತದೆ. ವಚನ ಭಾರತವೊಂದು ಸವಿಯೂಟ, ರಸದೂಟ; ಕನ್ನಡ ನಾಡಿನ ಎಷ್ಟು ಜನ ಇದನ್ನು ಒಂದೇ ದಿನದಲ್ಲಿ ಓದಿ ಪೂರೈಸಿದ್ದಾರೋ! ಎಂಬ ಜಿ. ವೆಂಕಟಸುಬ್ಬಯ್ಯನವರ ಉದ್ಗಾರಕ್ಕೆ ನಾವೂ ಧ್ವನಿ ಸೇರಿಸಬಹುದು.

ಈ ಅಂಕಣದ ಹಿಂದಿನ ಬರೆಹ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

 

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...