"ಜಗದ ಕವಿ ಶ್ರೀ ವಾಲ್ಮೀಕಿ" ಪ್ರಕಾಶ್ ಕೆ. ನಾಡಿಗ್ ಅವರು ಮಕ್ಕಳಿಗಾಗಿ ಬರೆದಿರುವ ಕೃತಿ. ಈ ಕೃತಿಗೆ ಡಾ.ಎಸ್.ಪಿ ಪದ್ಮಪ್ರಸಾದ್ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ 'ಪ್ರಕಾಶ್ ಕೆ ನಾಡಿಗ್‌ರ "ಜಗದ ಕವಿ ಶ್ರೀ ವಾಲ್ಮೀಕಿ" ಕೃತಿ ಎಳೆಯರಿಗೆ ಕವಿಕುಲಗುರು ವಾಲ್ಮೀಕಿಯನ್ನು, ಅವನ ಮಹತ್ಕಾವ್ಯ, ಜಗತ್ಕಾವ್ಯವಾದ ಶ್ರೀಮದ್‌ರಾಮಾಯಣವನ್ನೂ ಸ್ಪೂರ್ತಿಯುತ ಉದ್ದೇಶದಿಂದ ರಚಿತವಾಗಿರುವ ಕೃತಿ. ಸಂಶೋಧನೆ ಅಥವಾ ವಿಮರ್ಶೆ ಇಲ್ಲಿಯ ಉದ್ದೇಶವಲ್ಲ. ರಾಮಾಯಣದಿಂದ ನಾವು ಏನು ಪಾಠ ಕಲಿಯಬಹುದು, ಆ ಕಾವ್ಯದ ಸಂದೇಶವೇನು, ರಾಮ, ಸೀತೆ, ಲಕ್ಷ್ಮಣ ಇವರೆಲ್ಲಾ ಯಾಕೆ ಆದರ್ಶವಾಗುತ್ತಾರೆ ಎಂಬುದನ್ನು ವಿವರಿಸುವ ಉದ್ದೇಶದ ಕೃತಿ ಇದು ಎಂದಿದ್ದಾರೆ. ಜೊತೆಗೆ ತನ್ನ ಉದ್ದೇಶದಲ್ಲಿ ಈ ಲೇಖಕರು ಯಶಸ್ವಿಯಾಗಿದ್ದಾರೆ. ರಾಮಾಯಣ ಮಹಾಭಾರತಗಳನ್ನು ಕುರಿತು ತುಂಬಾ ವಿಮರ್ಶೆಗಳು ಬಂದಿವೆ: ಸಂಶೋಧನೆಗಳು ನಡೆದಿವೆ. ರಾಮಾಯಣದಲ್ಲಿ ಭಿನ್ನ ಪರಂಪರೆಗಳಿವೆ. ಅವೆಲ್ಲಕ್ಕೂ ಜನಪದವೇ ಮೂಲ. ಆದರೆ ಯಾವುದೇ ರಾಮಾಯಣವಿರಲಿ- ಅಲ್ಲಿ ರಾಮನನ್ನು ಆದರ್ಶ ವ್ಯಕ್ತಿಯಾಗಿ, ಅನುಕರಣೀಯ ವ್ಯಕ್ತಿತ್ವ ಉಳ್ಳವನಾಗಿ ಚಿತ್ರಿತವಾಗಿದ್ಧಾನೆ. ಆದ್ದರಿಂದಲೇ ರಾಮಾಯಣ ಪಾರಾಯಣ ಯೋಗ್ಯ, ಅಭ್ಯಾಸ ಯೋಗ್ಯ. ವಾಲ್ಮೀಕಿ ರಾಮಾಯಣದಲ್ಲಿರುವ ಕಾವ್ಯಮಯತೆ ಮತ್ತು ವಿಸ್ತಾರ ಅನ್ಯ ರಾಮಾಯಣಗಳಲ್ಲಿ ಇಲ್ಲ. ಆದ್ದರಿಂದಲೇ ವಾಲ್ಮೀಕಿ ರಾಮಾಯಣ ತುಂಬ ಜನಪ್ರಿಯವಾಗಿರುವುದು. ವಾಲ್ಮೀಕಿಯಿಂದ ರಾಮಾಯಣ ಉಳಿದೆದೆ. ಹಾಗೆಯೇ ರಾಮಾಯಣದಿಂದಾಗಿ ವಾಲ್ಮೀಕಿಯೂ ಉಳಿದಿದ್ದಾನೆ. ಅದು ಹೇಗೆ ಎಂಬುದನ್ನು ಕಿರಿಯರಿಗೆ ಅರ್ಥವಾಗುವಂತೆ ಇಲ್ಲಿ ಲೇಖಕರು ನಿರೂಪಿಸಿದ್ದಾರೆ. ತಮ್ಮ ಈ ಬರೆಹವನ್ನು ಲೇಖಕರು ಮೂರು ಭಾಗವಾಗಿ ವಿಂಗಡಿಸಿಕೊಂಡು ರೂಪಿಸಿದ್ದಾರೆ. ಮೊದಲು-ವಾಲ್ಮೀಕಿ ಬದುಕಿನ ಕಥೆ ಹೇಳಿದ್ದಾರೆ. ಸಾಮಾನ್ಯ ಬೇಟೇಗಾರನಾಗಿದ್ದವನು ದರೋಡೆಕೋರನಾಗಿ ಮಹರ್ಷಿಯಾಗಿ ಬದಲಾದದ್ದು ಮೊದಲ ಭಾಗ. ಈ ಮಹರ್ಷಿಯಿಂದ ರಾಮಾಯಣ ರಚಿತವಾದದ್ದನ್ನು ತಿಳಿಸುತ್ತಾ ಅದರ ಕಥೆಯನ್ನು ಹೇಳಿರುವುದು ಎರಡನೆಯ ಭಾಗ. ಮೂರನೆಯ ಭಾಗದಲ್ಲಿ ರಾಮಾಯಣದ ಕೆಲವು ಪಾತ್ರಗಳು ಹೇಗೆ ಆದರ್ಶ ಎಂದು ವಿವರಿಸಿ ಮನದಟ್ಟಾಗುವಂತೆ ಬರೆದಿದ್ದಾರೆ. ಕೊನೆಯಲ್ಲಿ ವಾಲ್ಮೀಕಿ ಇಂದೂ ಹೇಗೆ ಪೂಜಿಸಲ್ಪಡುತ್ತಿದ್ದಾನೆ ಎಂಬುದನ್ನು ವಿವರಿಸಿದ್ದಾರೆ. ಇಲ್ಲಿನ ಸರಳವಾದ ಭಾಷೆ, ಮನಮುಟ್ಟುವಂತಹ ನಿರೂಪಣೆ, ರಾಮಾಯಣದ ಕಥೆಯನ್ನು ಕೆಲವೇ ಪುಟಗಳಲ್ಲಿ ಸಂಗ್ರಹಿಸಿರುವ ಕೌಶಲ-ಇವೆಲ್ಲಾ ಈ ಕೃತಿಯನ್ನು ಮೆಚ್ಚುವಂತೆ ಮಾಡುತ್ತವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಮೂಲಕ ನಮ್ಮ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ, ವಾಲ್ಮೀಕಿ ರಾಮಾಯಣ ಪ್ರತಿಪಾದಿಸುವ ಜೀವನ ಮೌಲ್ಯಗಳಿಂದಲೇ ಅದು ಸಾವಿರಾರು ವರ್ಷಗಳಾದರೂ ನಮ್ಮಲ್ಲೇ ಉಳಿದು ಬೆಳೆದಿದೆ. ರಾಮನಲ್ಲಿರುವ ಪ್ರೀತಿ, ಕರುಣೆ, ಭ್ರಾತೃತ್ವ, ಸಹನೆ ಇವು ಎಲ್ಲರೂ ಅನುಕರಿಸುವ ಗುಣಗಳಾಗಿದೆ. ಹಾಗಾಗಿಯೇ ಶ್ರೀರಾಮನ ಆದರ್ಶಗಳು ಉದಾತ್ತವಾಗಿದೆ. ಭಾರತೀಯ ಸಂಸ್ಕೃತಿಯ ಮಹಾಕಾವ್ಯ ರಾಮಾಯಣದ ಒಂದು ಪಾತ್ರವಾದ ಶ್ರೀರಾಮನನ್ನು ಎಷ್ಟು ವೈಭವೀಕರಿಸುತ್ತೇವೋ, ಆ ಪಾತ್ರವನ್ನು ನಮ್ಮ ಕಣ್ಣಮುಂದೆ ಕಟ್ಟಿಕೊಟ್ಟ ವಾಲ್ಮೀಕಿಯವರನ್ನು ಕಡೆಗಣಿಸಬಾರದು ಎಂಬುದೇ ನನ್ನ ಅಪೇಕ್ಷೆ. ಶ್ರೀರಾಮನಿಗೆ ನೀಡಿರುವ ಆದ್ಯತೆಯನ್ನು ವಾಲ್ಮೀಕಿಗೂ ನೀಡಬೇಕು. ಹಾಗಾಗಿಯೇ ಈ ಪುಸ್ತಕವನ್ನು ಬರೆಯಲು ಮುನ್ನಡಿ ಇಟ್ಟಿದ್ದೇನೆ. .......
ವಾಲ್ಮೀಕಿಯನ್ನು ಸಮಗ್ರವಾಗಿ ಮತ್ತು ಸರಳವಾಗಿ ಪರಿಚಯಿಸುತ್ತಲೇ, ರಾಮಾಯಣದ ತಿರುಳನ್ನು ಸಾದ್ಯಂತವಾಗಿ ಉಣಬಡಿಸಿರುವ ಲೇಖಕರ ಶ್ರಮ ಮೆಚ್ಚುವಂಥದು. ಮಕ್ಕಳು ಇದನ್ನು ಓದಿದರೆ ರಾಮಾಯಣದ ಒಳ-ಹೊರಗೆಲ್ಲವೂ ಅರಿವಿಗೆ ದಕ್ಕುತ್ತದೆ. - ಶ್ರೀ ಬಸವರಾಜ ಸಾದರ, ಹಿರಿಯ ಸಾಹಿತಿಗಳು
ಶ್ರೀ ವಾಲ್ಮೀಕಿಯ ಜೀವನ ಕಥೆ, , ರಾಮಾಯಣದ ರಚನೆ ಹಾಗೂ ಅದರ್ಶ ಪ್ರಾತ್ರಗಳ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಕೃತಿಯು ಕೂತುಹಲದಿಂದ ಓದಿಸಿಕೊಂಡು ಹೋಗುತ್ತದೆ. ಇಂಥಹ ಅಮೂಲ್ಯ ಕೃತಿಗಳು ಓದುವ ಹವ್ಯಾಸ ಬೆಳೆಸುವುದರಲ್ಲಿ ಸಂದೇಹವಿಲ್ಲ.-- ಶ್ರೀ ವೀರೇಂದ್ರ ಹೆಗ್ಗಡೆ, ಶ್ರೀಧರ್ಮಸ್ಥಳ
"ಜಗದ ಕವಿ ಶ್ರೀವಾಲ್ಮೀಕಿ" ಕೃತಿಯನ್ನು ಸರಳ ಸುಂದರ ರೀತಿಯಲ್ಲಿ ಮಕ್ಕಳಿಗೆ ಅರ್ಥವಾಗುವಂತೆ ಸ್ಪೂರ್ತಿದಾಯಕವಾಗಿ ರಚಿಸಿದ್ದು ಎಲ್ಲ ವರ್ಗದ ಓದುಗರನ್ನು ಓದಿಸಿಕೊಂಡು ಹೋಗುತ್ತದೆಯಲ್ಲದೇ ಓದುಗರ ಮನಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಭಾರತ ಹಾಗೂ ಪಾಕಿಸ್ಥಾನದಲ್ಲಿರುವ ವಾಲ್ಮೀಕಿ ಮಹರ್ಷಿಗಳ ಪುರಾತನ ಮಂದಿರಗಳ ಬಗ್ಗೆ ಬೆಳಕು ಚೆಲ್ಲಿರುವುದು ಹಾಗೂ ವಾಲ್ಮೀಕಿ ರಾಮಾಯಣದ ಪಾತ್ರಗಳ ಮೌಲ್ಯಗಳನ್ನು ತಮ್ಮ ಕೃತಿಯಲ್ಲಿ ಎತ್ತಿ ಹಿಡಿದಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ----ಶ್ರೀಮತಿ ಕಮಲಾ ಬಡ್ಡಿಹಳ್ಳಿ. ಕವಿಯತ್ರಿ ತುಮಕೂರು
©2024 Book Brahma Private Limited.