ಬಯಲಾಟ ಕ್ರೈಸ್ತ ಸ್ಪಂದನೆ

Author : ಎಫ್.ಎಂ.ನಂದಗಾವ್

Pages 308

₹ 310.00




Year of Publication: 2022
Published by: ದೀಪಕ್ ಪ್ರಕಾಶನ
Address: ವಿನೋಬನಗರ, ಶಿವಮೊಗ್ಗ
Phone: 9449552802

Synopsys

`ಬಯಲಾಟ ಕ್ರೈಸ್ತ ಸ್ಪಂದನೆ’ ಎಫ್.ಎಂ. ನಂದಗಾವ್ ಅವರ ಸಾಂಸ್ಕೃತಿಕ ವಿಚಾರಗಳ ಸಂಕಲನವಾಗಿದೆ. ಈ ಕೃತಿಯು ಭಿನ್ನ ಸಮುದಾಯಗಳ ಸಾಂಸ್ಕೃತಿಕ ನೆಲೆಗಳ ಅಧ್ಯಯನ ಒಂದು ಸಾಹಸ ಕೆಲಸವೆಂದು ತಿಳಿಸುತ್ತದೆ. ಆದರೆ, ನಮ್ಮ ಅರಿವನ್ನು ನಿಕಷಗೊಳಿಸಲು, ವಿಸ್ತರಿಸಿಕೊಳ್ಳಲು ಮುಂದಾಗಬೇಕು ಎನ್ನುವುದನ್ನು ಹೇಳುತ್ತದೆ. ನಂದಗಾವ್‌ ಅವರು ಈ ಕೃತಿಯಲ್ಲಿ ಕ್ರೈಸ್ತ ರಂಗ ಚಟುವಟಿಕೆಗಳ ಬಗ್ಗೆ ಒಂದಷ್ಟು ಮಾಹಿತಿಯನ್ನಂತೂ ಕ್ರೋಢೀಕರಿಸಿ ಕೊಡುವ ಮೂಲಕ ಮುಂದಿನ ಇತಿಹಾಸಕಾರರಿಗೆ ಅನುಕೂಲ ಮಾಡಿದ್ದಾರೆ. ಇದರಲ್ಲಿ ಅವರೇ ವಿವಿಧ ಸಂದರ್ಭಕ್ಕೆ ಬರೆದ ಬರೆಹಗಳ ಜೊತೆಗೆ ವಿಷಯ ಪೂರ್ಣಕ್ಕೆಂಬಂತೆ ಡಾ. ಪಿ.ಕೆ.ರಾಜಶೇಖರ, ಡಾ. ಕೆ.ಆರ್. ದುರ್ಗಾದಾಸ್ ಮೊದಲಾದವರು ಇತರೆಡೆ ಬರೆದ ಬರಹಗಳಿವೆ. 'ಮುನ್ನುಡಿ'ಯಂತಹ ಬರೆಹಗಳನ್ನೂ ಇಲ್ಲಿ ಸಂಕಲಿಸಲಾಗಿದೆ. “ಬಯಲಾಟ ಕ್ರೈಸ್ತ ಸ್ಪಂದನೆ” ಕೃತಿಯಲ್ಲಿ 12 ಬರೆಹಗಳನ್ನು ಎರಡು ಭಾಗಗಳಲ್ಲಿ ಅಳವಡಿಸಿದೆ. ಕನ್ನಡ ಕ್ರೈಸ್ತರ ಬಯಲಾಟವಲ್ಲದೆ, ಕೇರಳ ಕ್ರೈಸ್ತರ “ಚವಿಟ್ಟು ನಾಟಕಂ', ಗೋವಾದವರ 'ತಿಯಾತ್' ಹಾಗೂ 'ಜಾಗರ' ಆಟಗಳ ಬಗೆಗೂ ಇಲ್ಲಿ ಪರಿಚಯಗಳಿವೆ. ಇದರಲ್ಲಿ ನಮ್ಮಂತಹ ಸಾಹಿತ್ಯಾಭ್ಯಾಸಿಗಳ ಕುತೂಹಲ ಕೆರಳಿಸುವ ಕೆಲವು ಸಂಗತಿಗಳಿವೆ; ಮನುಷ್ಯ ನಿಂತ ನೆಲದಲ್ಲಿ ತನ್ನ ಬೇರುಗಳನ್ನು ಭದ್ರಗೊಳಿಸಿಕೊಳ್ಳುವ ತುರ್ತು, ಮತ್ತು ಉಳಿವಿನ ಅಗತ್ಯಕ್ಕೆ ತಕ್ಕಂತೆ ಹೇಗೆ ಸಾಂಸ್ಕೃತಿಕ ಕೊಳುಕೊಡೆಗಳನ್ನು ಮಾಡಿಕೊಳ್ಳಲು ಹೊಸ ದಾರಿಗಳನ್ನು ಇ) ಕಂಡುಕೊಳ್ಳುತ್ತಾನೆ ಎಂಬಂತಹ ಪ್ರಶ್ನೆಗಳಿಗೆ ಇಲ್ಲಿ ನಿದರ್ಶನಗಳು ಲಭ್ಯವಾಗುತ್ತವೆ. ಈ ವಿದೇಶದ ಕ್ರೈಸ್ತ ಮೂಲ-ಬೈಬಲ್‌ನ-ಕತೆ, ಪಾತ್ರಗಳನ್ನು ಇಲ್ಲಿ ನಮ್ಮ ಬಯಲಾಟದ ಸಾಂಪ್ರದಾಯಕ ಯುದ್ಧದ ಕತೆಯಂತೆ ರೂಪಾಂತರಿಸಿಕೊಳ್ಳಲಾಗಿ, 'ದಾವೂದ- ಕಿಮ್ಮಿರ ಯುದ್ಧ'ವೆಂಬ ಬಯಲಾಟವಾಗಿದೆ; ಕನ್ನಡಿಗರಲ್ಲಿ ಜನಪರಿಚಿತವಾದ ಪುರಾಣ ಮೂಲದ 'ಚಂದ್ರಹಾಸನ ಕತೆಯನ್ನು ಕ್ರೈಸ್ತ ಕಥಾನಕದ ಈ 'ಅಲ್ಲೋನ್ಸ್'ನೊಂದಿಗೆ ಸಮೀಕರಿಸಿ 'ಅಲ್ಲೋನ್ಸ್' ನಾಟಕ ಸೃಷ್ಟಿಸಲಾಗಿದೆ. 'ಗುಣಸುಂದರಿ' ನಾಟಕವೂ ಹೀಗೆಯೇ, ಕನ್ನಡ ರಂಗಭೂಮಿಯಲ್ಲಿ ಮೊದಲ ದಾಖಲೆ ಎನ್ನಬಹುದಾದ ಏಸುವಿನ ಬದುಕನ್ನು ಚಿತ್ರಿಸುವ 'ಹಾರೋಬೆಲೆಯ ಮಹಿಮೆ' ಮಹಾನಾಟಕದ ಪರಿಚಯವೂ ಇಲ್ಲಿದೆ. ವಿಶೇಷವಾಗಿ, ಹಿಂದೂ ಸಂಪ್ರದಾಯಸ್ತರೊಬ್ಬರು ಬಹು ಹಿಂದೆಯೇ 'ಕ್ರಿಸ್ತ ಮಹಾತ್ಮ'ಯನ್ನು ಕರಾವಳಿ ಯಕ್ಷಗಾನ ಶೈಲಿಯಲ್ಲಿ ಬರೆದು ಪ್ರದರ್ಶನ ಮಾಡಿದ್ದರೆ, ದೊಡ್ಡಬಳ್ಳಾಪುರದ ಹಣಬೆ ಮೂಲದ ಶಿಕ್ಷಕ ಸುಬ್ಬರಾಯಪ್ಪ ಎಂಬುವವರು ಅದು ಹೇಗೋ ತಾವೂ ಆಕರ್ಷಿತರಾಗಿ 'ಏಸುಸ್ವಾಮಿ ಕಥೆ' ರಚಿಸಿ, ಮೂಡಲಪಾಯ ಬಯಲಾಟವಾಗಿಸಿ ಪ್ರದರ್ಶಿಸಿದ್ದಾರೆ. ಅಂದರೆ, ಉತ್ತರ ಕರ್ನಾಟಕದ 'ದೊಡ್ಡಾಟ', ಹಳೇ ಮೈಸೂರಿನ-ಘಟ್ಟದ ಮೇಲಿನ 'ಮೂಡಲಪಾಯ' ಹಾಗೂ ಘಟ್ಟದ ಕೆಳಗಿನ 'ಪಡುವಲಪಾಯ' ಹೀಗೆ, ನಾಡಿನ ಪ್ರಮುಖ ಮೂರೂ ಪ್ರಧಾನ ಯಕ್ಷಗಾನ ಬಯಲಾಟ ರೂಪಗಳಲ್ಲಿ ಕ್ರೈಸ್ತರ ಕಥಾನಕಗಳು ಪ್ರದರ್ಶನವಾಗಿವೆ.

About the Author

ಎಫ್.ಎಂ.ನಂದಗಾವ್

ಬರಹಗಾರ, ಅನುವಾದಕ ಎಫ್.ಎಂ.ನಂದಗಾವ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್ ಇಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಕೃತಿಗಳ ಅನುವಾದ ಮಾಡುವ ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ಖ್ಯಾತ ಕ್ರಿಸ್ಮನ್ ಕಥೆಗಳು, ಮೂರು ಸತ್ಯಗಳು, ಇಬ್ಬರು ವೃದ್ಧರ ತೀರ್ಥಯಾತ್ರೆ,  ಮೂರು ಕ್ರಿಸ್ಮಸ್ ದೈವಗಳು, ಬದುಕಲು ಏನು ಬೇಕುThe Little Flower of India ಹಾಗೂ Lead Kindly Light ಮುಂತಾದವು  ...

READ MORE

Related Books