ಚಂದ್ರಕಾಂತ ಪೋಕಳೆ
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸಮಾಡುತ್ತಿದ್ದಾರೆ. ಅನುವಾದಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಅನುವಾದ ಯಜ್ಞದಲ್ಲಿ ತಮ್ಮ ಹವಿಸ್ಸನ್ನೂ ಧಾರೆಎರೆದು ಮರಾಠಿ ಸಾಹಿತ್ಯದಿಂದ ಬಹುಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು.
More About Author