ಪತ್ರಕರ್ತ, ಲೇಖಕ ವೈಎನ್‍ಕೆ ಅವರು 1926ರ ಮೇ 17ರಂದು ಜನಿಸಿದರು. 1949ರಲ್ಲಿ ಪ್ರಜಾವಾಣಿಗೆ ಉಪಸಂಪಾದಕರಾಗಿ ಸೇರಿದ ವೈಎನ್‍ಕೆ ದೇಶಬಂಧು ಹಾಗೂ ಛಾಯಾ ಪತ್ರಿಕೆಗಳಲ್ಲಿಯೂ ದುಡಿದಿದ್ದರು. 1967ರಲ್ಲಿ ಥಾಮ್ಸನ್ ವಿದ್ಯಾರ್ಥಿವೇತನ ಪಡೆದು ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದು, ಪತ್ರಿಕೋದ್ಯಮ ಕುರಿತಾಗಿ ಕೃತಿಗಳನ್ನು ರಚಿಸಿದ್ದಾರೆ. ರಷ್ಯಾ, ಕೆನಡಾ, ಅಮೇರಿಕಾ ಹಾಗೂ ಯುರೋಪ ದೇಶಗಳಿಗೆ ಆ ದಿನಗಳಲ್ಲೇ ಪ್ರವಾಸಕ್ಕೆ ತೆರಳಿದ್ದ ವೈಎನ್‍ಕೆ ಹೈಡ್ ಪಾರ್ಕ್ ಅನ್ನುವ ಪ್ರವಾಸ ಕಥನವನ್ನು ರಚಿಸಿದ್ದಾರೆ. ಅಲ್ಲದೇ, ಇವರ ಇದು ಸುದ್ದಿ ಇದು ಸುದ್ದಿ ಅಂಕಣ ಸಂಕಲನ ಪತ್ರಿಕೋದ್ಯಮಕ್ಕೆ ಕೈಪಿಡಿಯಾಗಿದೆ. ಸಾಹಿತ್ಯಕ್ಷೇತ್ರ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ವೈಎನ್‍ಕೆ ಅವರು 1999 ಅಕ್ಟೋಬರ್ 15ರಂದು ನ್ಯೂಯಾರ್ಕ್ ನಿಂದ ಬೆಂಗಳೂರಿಗೆ ವಾಯುಮಾರ್ಗದಲ್ಲಿ ಹಿಂದಿರುಗವಾಗ ಹೃದಯಾಘಾತದಿಂದ ನಿಧನರಾದರು.